ಅಂಕಣಗಳು

Subscribe


 

`ಭರತನಾಟ್ಯ’ದ ದಿಗ್ದರ್ಶನ

Posted On: Sunday, February 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

‘ಒಬ್ಬ ಲೇಖಕ ಅಥವಾ ಸಾಹಿತಿಯ ಕೈ ಮತ್ತೊಬ್ಬರ, ಇನ್ನೊಬ್ಬ ಲೇಖಕ-ಸಾಹಿತಿಯ ಜೇಬಿನಲ್ಲಿರುತ್ತದೆ’- ಸಾಹಿತ್ಯ ಜಗತ್ತಿನ ಸಾರ್ವಕಾಲಿಕ  ವ್ಯಂಗ್ಯ!  ಕನ್ನಡದಲ್ಲಿ ಉಪಲಬ್ದವಿರುವ ಅದೆಷ್ಟೋ ಭರತನಾಟ್ಯ ಸಂಬಂಧಿತ ಪುಸ್ತಕಗಳು ಈ ಮಾತಿಗೆ ಹೊರತಲ್ಲ. ಹಾಗಾಗಿ ಭರತನಾಟ್ಯ ಸಂಬಂಧಿತ ಹಲವು ಪುಸ್ತಕಗಳಲ್ಲಿ ಕಣ್ಣಾಡಿಸಿದರೂ ಸಂಶೋಧನೆಯಿಲ್ಲದ ಒಂದೇ ಬಗೆಯ ವರ್ಣನೆ, ಮಾಹಿತಿ ಸರ್ವೇ ಸಾಮಾನ್ಯ.
ಆದರೆ ೧೯೮೧ ರಲ್ಲಿ ಹೊರಬಂದ ಒಂದು ಕನ್ನಡ ಗ್ರಂಥ ಇಂದಿಗೂ ಇವೆಲ್ಲವುಗಳಿಗಿಂತಲೂ ಭಿನ್ನವೆನಿಸಿ ಸಾಕಷ್ಟು ಓದುಗರಿಗೆ ಚಿಂತನಪ್ರದವಾದ ಮಾಹಿತಿಗಳನ್ನು ನೀಡುತ್ತಾ, ಹಲವು ಪ್ರಬಂಧಗಳಿಗೆ, ಪಠ್ಯಪುಸ್ತಕಗಳಿಗೆ, ಲೇಖನಗಳಿಗೆ ಆಕರವಾಗಿ ದಶಕಗಳಿಂದಲೂ ಮನ್ನಣೆಗೆ ಪಾತ್ರವಾಗಿದೆ. ನೃತ್ಯದ ಕುರಿತಂತೆ ಬರೆದ ಪುಸ್ತಕಗಳ ಪೈಕಿ ಸಂಶೋಧನಾ ರುಚಿಯ ಸಾಂಗತ್ಯ ಹೆಚ್ಚಿರುವುದು ಈ ಪುಸ್ತಕದಲ್ಲೇ ಎಂದರೆ ತಪ್ಪೇನಿಲ್ಲ. ಹಾಗಾಗಿ ಈ ಪುಸ್ತಕವೊಂದು ಸಮೃದ್ಧ ಜೇಬು!
ಅದುವೇ ನೃತ್ಯ ವಿದ್ವಾಂಸ ವಿ. ಎಸ್. ಕೌಶಿಕ್ ಅವರು ಬರೆದ ಭರತನಾಟ್ಯ ದಿಗ್ದರ್ಶನ. ಹೆಸರೇ ತಿಳಿಸುವಂತೆ ಭರತನಾಟ್ಯದ ದಶ ದಿಕ್ಕುಗಳ ದರ್ಶನವೂ ಇಲ್ಲಿ ಲಭ್ಯ. ಬೆಂಗಳೂರಿನ ಸನಾತನ ಕಲಾಕ್ಷೇತ್ರದಿಂದ ಪ್ರಕಾಶಿತಗೊಂಡ ಪುಸ್ತಕವಿದು. ಅನ್ಯ ನಾಟ್ಯಗ್ರಂಥಗಳಲ್ಲಿ ಮೇಲುನೋಟಕ್ಕೆ ಕಾಣಸಿಗದ ಸಾಕಷ್ಟು ತಾಂತ್ರಿಕ ವಿಷಯಗಳು ಇಲ್ಲಿ ದರ್ಶಿತವಾಗುವುದೇ ಈ ಪುಸ್ತಕದ ಹೆಮ್ಮೆ. ಉದಾ : ರಂಗಮಂದಿರ, ನರ್ತನ ಯೋಜನೆ, ಬೆಳಕಿನ ಪ್ರಸರಣ ಮತ್ತು ಒಂದಷ್ಟು ನೃತ್ಯಕಲೆಯ ಕುರಿತಂತೆ ವರ್ತಮಾನದ  ಮತ್ತು ಭವಿಷ್ಯತ್ತಿನ ಹಲವು ಸವಾಲು, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವಿದ್ವತ್‌ಪೂರ್ಣ ಪ್ರಬಂಧಗಳು.
ಭೂಮಿಕೆ, ನರ್ತನದ ಅವಸ್ಥಾತ್ರಯ, ನೃತ್ತ, ನೃತ್ಯ, ನಾಟ್ಯ, ಅಭಿನಯ, ಮುದ್ರೆಗಳು, ಪ್ರಚಲಿತ ನೃತ್ಯ ಪ್ರಕಾರಗಳು, ಭರತನಾಟ್ಯದ ಆನುಪೂರ್ವಿ, ಭರತನಾಟ್ಯದ ಕಾರ್ಯಕ್ರಮ ಯೋಜನೆ, ನಾಟ್ಯ-ಯೋಗ ಸಮನ್ವಯ, ಅಲರಿಪು, ಜತಿಸ್ವರ, ಶಬ್ದ, ವರ್ಣ, ಲಾಸ್ಯಾಭಿನಯ ಸಾಹಿತ್ಯ, ಪಲ್ಲವಿ, ಲಘುನೃತ್ಯಗಳು, ತಿಲ್ಲಾನ, ರಂಗಮಂದಿರದ ವರ್ಣ ಸಂಯೋಜನೆ, ಉಪಸಂಹಾರ ಎಂಬ ೨೦ ಅಧ್ಯಾಯಗಳು ಸಂಶೋಧನಾರೂಪದ ಮಾಹಿತಿ, ಲೇಖನಗಳು ಶ್ಲೋಕ, ಸಂದರ್ಭ, ಆಕರಗಳೊಂದಿಗೆ ಇಲ್ಲಿವೆ.
 ನಾಟ್ಯದ ವಿವಿಧ ಅಂಶಗಳನ್ನು ಮತ್ತು ಅದರೊಂದಿಗೆ ವೇದ, ಯೋಗ, ಉಪನಿಷತ್ತು, ವ್ಯಾಕರಣ, ಕೋಶ, ಸೂತ್ರ, ತಂತ್ರ, ಸಂಹಿತೆ, ಶಿಲ್ಪ, ಪುರಾಣ, ಭಾಗವತ, ಭಗವದ್ಗೀತೆ, ಸಹಸ್ರನಾಮ, ಸಂಗೀತ ಕೃತಿ, ಜನಪದ, ಸಾಹಿತ್ಯ, ನಾಟಕ, ಚರಿತ್ರೆಗಳ ಸಂಬಂಧವನ್ನು ಪೂರಕವಾದ ಸುಂದರ ಚಿತ್ರಗಳ ಸಹಿತ ವಿವರವಾಗಿ ಅವಲೋಕಿಸಲಾಗಿದೆ. ಹಾಗಾಗಿ ನೃತ್ಯಾಭ್ಯಾಸಿಗಳಿಗೆ, ಆಸಕ್ತರಿಗೆ ಓದಲು ಮಾರ್ಗ ದರ್ಶಿಸಲೇಬೇಕಾದ ಸುಂದರ ಸಮನ್ವಯ ಪೂರ್ಣ ಗ್ರಂಥ.

Leave a Reply

*

code