About us- Board of Trust

ಕರ್ನಾಟಕದಿಂದ ಐ‌ಎಸ್‌ಎಸ್‌ಎನ್ ಸಂಖ್ಯೆಯನ್ನು ಪಡೆದು ಕ್ರಮವತ್ತಾಗಿ ಪ್ರಕಟವಾದ  ಪ್ರದರ್ಶಕ ಕಲೆಗಳ ಕುರಿತಾದ ಏಕೈಕ ಸಂಶೋಧನ ನಿಯತಕಾಲಿಕೆಯಾಗಿ ಮತ್ತು ಪ್ರದರ್ಶಕ ಕಲೆಗಳ ಗುಣಮಟ್ಟದ ಬರೆವಣಿಗೆ- ಸಂಶೋಧನೆ- ಕಲಾಪ್ರದರ್ಶನ ಮತ್ತು ಪುಸ್ತಕಗಳ ಪ್ರಕಾಶನವಾಗಿ ಗುರುತಿಸಲ್ಪಟ್ಟಿರುವುದು ನೂಪುರ ಭ್ರಮರಿ ಎಂಬುದು ನಮ್ಮಯ ಹೆಮ್ಮೆ. ಜೊತೆಗೆ ಭಾರತೀಯ ಶಿಕ್ಷಣ ಸಚಿವಾಲಯದ ಮಾನ್ಯತೆ  ಪಡೆದಿರುವ ಇಂಡಿಯನ್ ನಾಲೆಡ್ಜ್ ಸಿಸ್ಟಮ್ , (Indian Knowledge System- an innovative self under the Ministry of Education at AICTE, Government of India.) ಇವರಿಂದ ೨೦೨೦-೨೧ನೇ ಸಾಲಿನಲ್ಲಿ ಆಯ್ಕೆಯಾಗಿ ಮಾನ್ಯತೆ ಪಡೆದಿರುವ ದೇಶದ ೧೩ ಪ್ರಮುಖ ಸಂಶೋಧನ ಸಂಸ್ಥೆಗಳಲ್ಲಿ ನೂಪುರ ಭ್ರಮರಿಯೂ ಒಂದಾಗಿದೆ.

ನೂಪುರ ಭ್ರಮರಿಯ ಪ್ರಥಮ ಸಂಚಿಕೆ ಅನಾವರಣಗೊಂಡದ್ದು ಮಡಿಕೇರಿಯಲ್ಲಿ ೨೦೦೬ರಲ್ಲಿ ಶಿವರಾತ್ರಿಯಂದು. ಶಕ್ತಿ ದೈನಿಕದ ಸಹ ಸಂಪಾದಕ ಶ್ರೀಯುತ ಬಿ. ಜಿ. ಅನಂತಶಯನ, ಆಯುರ್ವೇದ ವೈದ್ಯ, ಸಾಹಿತಿ ನಡಿಬೈಲು ಉದಯಶಂಕರ ಅವರು ಪತ್ರಿಕೆಯನ್ನು ಮೊದಲು ತೆರೆದಿಟ್ಟವರು.

ವಾರ್ಷಿಕ ಸಂಭ್ರಮ ನೆರವೇರಿದ್ದು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ೨೦೦೭ರಲ್ಲಿ. ಯಕ್ಷಗಾನ ಕಲಾವಿದ ಸರ್ಪಂಗಳ ಈಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು ವೆಬ್‌ಸೈಟಿಗೆ ಚಾಲನೆಯನ್ನಿತ್ತರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಭಾಸ್ಕರ ಹೆಗಡೆ ವಾರ್ಷಿಕ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿದರೆ, ಲೇಖಕಿ ಮನೋರಮಾ ಬಿ.ಎನ್ ಅವರು ಬರೆದ ಇತಿಹಾಸ ಪುಸ್ತಕ ಶ್ರೀ ಓಂಕಾರೇಶ್ವರ ದೇವಾಲಯದ ಇತಿಹಾಸದ ಪರಿಷ್ಕೃತ ಎರಡನೇ ಆವೃತ್ತಿಯನ್ನು ಭಾರತೀಯ ವಿದ್ಯಾಭವನದ ಮಡಿಕೇರಿ ಶಾಖೆಯ ಉಪಾಧ್ಯಕ್ಷ ಕೆ. ಎಸ್. ದೇವಯ್ಯ ಅನಾವರಣಗೊಳಿಸಿದರು.

ದ್ವಿತೀಯ ವಾರ್ಷಿಕ ಸಂಭ್ರಮಕ್ಕೆ ಸಾಕ್ಷಿಯಾದವರು ಭರತ ನೃತ್ಯ ಸಭಾ ಮತ್ತು ಸನಾತನ ನಾಟ್ಯಾಲಯ ಇವರ ಸಹಭಾಗಿತ್ವದಲ್ಲಿ ನಡೆದ ಮಂತಪ ಪ್ರಭಾಕರ ಉಪಾಧ್ಯಾಯ ಅವರ ಏಕವ್ಯಕ್ತಿ ಯಕ್ಷಗಾನ ಸರಣಿಯ ಕಾರ್ಯಕ್ರಮ. ನೂಪುರ ಭ್ರಮರಿಯ ವರ್ಣಮಯ ವಾರ್ಷಿಕ ವಿಶೆಷ ಸಂಚಿಕೆಯು ಖ್ಯಾತ ಯಕ್ಷಗಾನ ವಿಮರ್ಶಕ, ಕಲಾವಿದ ಡಾ. ಪ್ರಭಾಕರ ಜೋಷಿ ಅವರು ಅನಾವರಣಗೊಳಿಸಿದರೆ, ವೇದಿಕೆಯಲ್ಲಿ ಆಸೀನರಾಗಿದ್ದ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್, ಹಿರಿಯ ಭರತನಾಟ್ಯ ಗುರು ಮುರಳೀಧರ ರಾವ್, ಸನಾತನ ನಾಟ್ಯಾಲಯದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಶಾರದಾಮಣಿ ಶೇಖರ್ ಪತ್ರಿಕೆಯನ್ನು ಅಭಿನಂದಿಸಿದರು.

ಮೂರನೇ ವಾರ್ಷಿಕ ಸಂಭ್ರಮವು ಮಡಿಕೇರಿಯಲ್ಲಿ ಸರಳವಾಗಿ ನೆರವೇರಿತಾದರೂ, ಅದಕ್ಕೆ ಪೂರ್ವಭಾವಿಯಾಗಿ ಮುದ್ರಾರ್ಣವದ ಅನಾವರಣದ ಸಡಗರದ ಕಾರ್ಯಕ್ರಮ ವರುಷದಿಂದ ವರುಷಕ್ಕೇರುತ್ತಿರುವ ಮೆಟ್ಟಿಲಿಗೆ ಸಾಕ್ಷಿ ಹೇಳಿತು.

೪ನೇ ವಾರ್ಷಿಕ ಸಂಭ್ರಮವು ದಿನಾಂಕ ೧೩ ಫೆಬ್ರವರಿ ೨೦೧೧ ರಂದು ‘ನಯನ ಸಭಾಂಗಣ’ , ಕನ್ನಡ ಭವನ, ಜೆ.ಸಿ ರಸ್ತೆ , ಬೆಂಗಳೂರಿನಲ್ಲಿ ನೆರವೇರಿತು. ಪ್ರಧಾನ ಅತಿಥಿಗಳಾಗಿ ಪ್ರಧಾನ್ ಗುರುದತ್, ಅಧ್ಯಕ್ಷರು, ಕರ್ನಾಟಕ ಅನುವಾದ ಅಕಾಡೆಮಿ; ಡಾ. ಶಂಕರ್, ಮನಶಾಸ್ತ್ರಜ್ಞರು ಮತ್ತು ಅಷ್ಟಾವಧಾನಿಗಳು; ಡಾ||ಜಿ.ಬಿ. ಹರೀಶ್, ವಿಮರ್ಶಕರು ಹಾಗೂ ಪ್ರಾಧ್ಯಾಪಕರು, ತುಮಕೂರು ವಿ.ವಿ; ಮುರಳೀಧರ್ ರಾವ್, ಹಿರಿಯ ನಾಟ್ಯಾಚಾರ್ಯ, ಮಂಗಳೂರು; ಹಾಗೂ ಧಾರವಾಢದ ಯಕ್ಷಗಾನ ಸಾಹಿತಿ ಮತ್ತು ಕವಿಗಳಾದ ದಿವಾಕರ ಹೆಗಡೆ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಮನೋರಮಾ ಬಿ. ಎನ್ ಅವರ ‘ನೃತ್ಯ ಮಾರ್ಗ ಮುಕುರ’ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆ ಮತ್ತು ನೃತ್ಯಬಂಧಗಳ ದಾಖಲೆಯುಳ್ಳ ಅಧ್ಯಯನ ಕೃತಿ ಅನಾವರಣಗೊಂಡಿತು.

ವಿಮರ್ಶಕರನ್ನು ಗುರುತಿಸಿ, ಗೌರವಿಸುವ ದೃಷ್ಟಿಯಿಂದ ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸ್ತಿಯನ್ನು ಮೊದಲಬಾರಿಗೆ ನೂಪುರ ಭ್ರಮರಿ ಆರಂಭಿಸಿದ್ದು ಈ ಪ್ರಶಸ್ತಿಗೆ ಮೊದಲು ಭಾಜನರಾದವರು. ಶ್ರೀಮತಿ ಪ್ರಿಯಾ ರಾಮನ್.

ಗುರು ಮುರಳೀಧರ ರಾವ್ ಮತ್ತು ದಿವಾಕರ ಹೆಗಡೆಯವರನ್ನು ಈ ಸಂದರ್ಭ ಅಭಿವಂದಿಸಲಾಯಿತು. ಶ್ರೀಮತಿ ಐಶ್ವರ್ಯಾ ನಿತ್ಯಾನಂದ ಅವರಿಂದ ಡಿ.ವಿ.ಜಿ. ಅಂತಃಪುರ ಗೀತೆಗಳ ಕುರಿತ ಭರತನಾಟ್ಯ ಕಾರ್ಯಕ್ರಮವೂ ಈ ಸಂದರ್ಭ ಜರುಗಿತು.

೫ನೇ ವರ್ಷ- ಕರ್ನಾಟಕದಲ್ಲೇ ಮೊತ್ತ ಮೊದಲ ಬಾರಿಗೆ ನೂಪುರ ಭ್ರಮರಿ ಪ್ರತಿಷ್ಠಾನವು ಸಂಘಟಿಸಿದ  ನೃತ್ಯ ಸಂಶೋಧನಾ ವಿಚಾರಸಂಕಿರಣವು ಸಂಶೋಧನಾ ಸಂಗ್ರಹಸೂಚಿ, ಪುಸ್ತಕ-ಪತ್ರಿಕಾ ಸೂಚಿಯನೊಳಗೊಂಡ ಹಲವು ಬಗೆಯ ಲೇಖನ, ವಿಮರ್ಶಾ ಮಾರ್ಗದರ್ಶಿಯ ವಿಶೇಷ ಸಂಕಲನವು ಅನಾವರಣಗೊಂಡಿತು. ನಾಲ್ಕು ಸಂಶೋಧನಾ ಪ್ರಬಂಧವಾಚನ, ೩ ವಿಶೇಷ ಉಪನ್ಯಾಸ, ವಿದ್ವಾಂಸರೊಂದಿಗೆ ಸಂವಾದ, ಪ್ರತಿಭಾ ಸಾಮಗರಿಗೆ ವಿಮರ್ಶಾ ಪ್ರಶಸ್ತಿ, ಶತಾವಧಾನಿ ಡಾ.ಆರ್.ಗಣೇಶ್, ಎಚ್.ಎಸ್.ಗೋಪಾಲರಾವ್, ಪ್ರೊ.ಶೇಷ ಶಾಸ್ತ್ರಿ,ಖ್ಯಾತ ನೃತ್ಯಕಲಾವಿದ ಶ್ರೀಧರ್, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ರಂತರಿಂದ, ಸಂಶೋಧಕರಿಂದ ಆಶೀರ್ವಾದದೊಂದಿಗಿನ ಬೆಂಬಲ-ಉಪಸ್ಥಿತಿ, ಚಿಂತನ-ಮಂಥನ, ಸಂಶೋಧನಾಧಾರಿತ ನೃತ್ಯ ಕಾರ್ಯಕ್ರಮ, ನೃತ್ಯ ಸಂಶೋಧಕರ ಒಕ್ಕೂಟವೆಂಬ ಸಂಶೋಧನೆ-ನೃತ್ಯದ ತಂತುಗಳನ್ನು ಬೆಸೆಯುವ ಕೆಲಸ..

ಕಲೆಯ ವಿವಿಧ ನೆಲೆಗಳನ್ನು ವಸ್ತುನಿಷ್ಠವಾಗಿ ಗುರುತಿಸಿ ಪ್ರಕಟಿಸುವ ಕೆಲಸವನ್ನು ಇವರ ಮುಂದಾಳತ್ವದ ನೂಪುರ ಭ್ರಮರಿ ಪತ್ರಿಕೆ ಮಾಡುತ್ತಿದ್ದು ಅವುಗಳ ಸಾಲಿಗೆ ಕರ್ನಾಟಕದಲ್ಲೇ ಮೊತ್ತ ಮೊದಲನೆಯದಾಗಿ ಯಕ್ಷಗಾನದ ಸ್ತ್ರೀವೇಷ ಕಲಾವಿದರ ಸಂದರ್ಶನ ನಡೆಸಿ ಆ ಮೂಲಕ ಸ್ತ್ರೀವೇಷದ ಮಜಲುಗಳನ್ನು ದಾಖಲಿಸಿದ್ದು; ಕಾಲಾನುಕೂಲ ನೃತ್ಯಚಿಂತನೆಯ ಹಲವು ಆಯಾಮಗಳುಳ್ಳ ಲೇಖನ-ಅಂಕಣ-ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು; ಯಕ್ಷಗಾನ ಮತ್ತು ಹಲವು ನೃತ್ಯಗಳ ಕುರಿತಂತೆ ಕರ್ನಾಟಕದಲ್ಲಿ ಕಲೆಗೆ ಸಂಬಂಧಿಸಿದಂತೆ ನಡೆದ/ ನಡೆಯುತ್ತಿರುವ ಸಂಶೋಧನೆಗಳ ದಾಖಲಾತಿ – ಹೀಗೆ ಅನೇಕ ಪ್ರಯತ್ನಗಳು ಸೇರ್ಪಡೆಯಾಗುತ್ತವೆ. ನೃತ್ಯ ಸಂಶೋಧನಾ ವಿಭಾಗ ಎಂಬ ಸಂಶೋಧನೆಗೆ ಮೀಸಲಾದ ವಿಭಾಗವನ್ನೂ ಆರಂಭಿಸಿ ಅನೇಕ ಸಂಶೋಧನ ವಿಚಾರಸಂಕಿರಣಗಳನ್ನು, ಕಾರ್ಯಾಗಾರಗಳನ್ನು ಆಯೋಜಿಸಿದ್ದಾರೆ.

ಆರನೇ ವರುಷ : ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿಯ ಪ್ರಧಾನ ಆಶ್ರಯ ಮತ್ತು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಅಖಿಲ ಭಾರತೀಯ ನೃತ್ಯ ಸಂಶೋಧನ ಸಮ್ಮೇಳನವು ಜರುಗಿತು. ಈ ಸಂದರ್ಭದಲ್ಲಿ  ನೃತ್ಯ ಸಂಶೋಧನ ನಿಯತಕಾಲಿಕೆ ‘ನೂಪುರಾಗಮ’ದ ಅನಾವರಣ, ಕರ್ನಾಟಕದ ನೃತ್ಯ ಕಲಾವಿದರ ವಿಶೇಷ ಸಂಶೋಧನ ಸಮೀಕ್ಷೆಯನ್ನೊಳಗೊಂಡ ನೂಪುರ ಭ್ರಮರಿ ವಿಶೇಷ ಸಂಚಿಕೆ ಮತ್ತು ವೆಬ್ಸೈಟಿನ ಪರಿಷ್ಕೃತ ಆವೃತ್ತಿ ಲೋಕಾರ್ಪಣೆಯೂ ಜರುಗಿತು.ಸಮಾರಂಭವನ್ನು  ವಿಧಾನ ಪರಿಷತ್ ಸದಸ್ಯರಾದ ಪಿ.ವಿ. ಕೃಷ್ಣ ಭಟ್ ಉದ್ಘಾಟಿಸಿದರೆ, ಸಮ್ಮೇಳನ ಸಭಾಧ್ಯಕ್ಷತೆಯನ್ನು ಹಿರಿಯ ಶಾಸನ/ಇತಿಹಾಸ ತಜ್ಞ ಡಾ. ಎಚ್. ಎಸ್. ಗೋಪಾಲ ರಾವ್ ವಹಿಸಿದ್ದರು. ಸಭಾಧ್ಯಕ್ಷತೆಯನ್ನು ಹೆಸರಾಂತ ಕನ್ನಡ ವಿದ್ವಾಂಸರು, ಸಂಶೋಧಕರಾದ ಪ್ರೊ. ಟಿ.ವಿ ವೆಂಕಟಾಚಲ ಶಾಸ್ತ್ರಿ ಅವರು ವಹಿಸಿ ಕರ್ನಾಟಕದ ಕಲಾವಿಶೇಷಗಳ ಕುರಿತು ಮಾತನಾಡಿ ಸಂಶೋಧನೆಯ ಅಗತ್ಯವನ್ನು ಸ್ಪಷ್ಟಪಡಿಸಿದರು. ಈ ಸಂದರ್ಭ ಹಿರಿಯ ನೃತ್ಯ ಕಲಾವಿದೆ ಲೀಲಾ ರಾಮನಾಥನ್ ಅವರಿಗೆ ನೂಪುರ ಕಲಾ ಕಲಹಂಸವೆಂಬ ಬಿರುದನ್ನಿತ್ತು ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಲಹಾಸಮಿತಿ ಅಧ್ಯಕ್ಷರಾದ ಶತಾವಧಾನಿ ಡಾ. ಆರ್. ಗಣೇಶ್ ಅವರು ಸಮ್ಮೇಳನಕ್ಕೆ ನೀಡಿದ ಆಡಿಯೋ ಸಂದೇಶವನ್ನು ಬಿತ್ತರಿಸಲಾಯಿತು. ಹೆಸರಾಂತ ಸಂಶೋಧಕ ಸೂರ್ಯನಾಥ ಕಾಮತ್ ಅವರ ಸಂದೇಶವನ್ನು ತಿಳಿಸಲಾಯಿತು.

ತದನಂತರ ಭಾರತದ ಹಲವು ಪ್ರದೇಶಗಳಿಂದ ಆಗಮಿಸಿದ್ದ ಸಂಶೋಧಕರು ೧೩ ಸಂಶೋಧನ ಪ್ರಬಂಧಗಳನ್ನು ಮಂಡಿಸಿದರು. ತಜ್ಞನೋಟಕರಾಗಿ ಆಗಮಿಸಿದ್ದ ಹಿರಿಯ ನೃತ್ಯ ಕಲಾವಿದರಾದ ಬಿ.ಕೆ.ವಸಂತಲಕ್ಷ್ಮಿ, ಭಾನುಮತಿ ಮತ್ತು ಮಾಲಿನಿ ರವಿಶಂಕರ್ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಅನಂತ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಗೋವಿಂದ ಎಂ.ಕಾರಜೋಳ, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಭಾಗವಹಿಸಿದ್ದರು. ಈ ಸಂದರ್ಭ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆಪ್ರಶಸ್ತಿಯನ್ನು ವಿಮರ್ಶಾ ವಾಙ್ಮಯಿ ಬಿರುದಿನೊಂದಿಗೆ ಪ್ರದಾನ ಮಾಡಲಾಯಿತು. ಜೊತೆಗೆ ರಾಜ್ಯಮಟ್ಟದ ನೃತ್ಯ ರಸಪ್ರಶ್ನೆ ಮತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾಧ್ಯಕ್ಷತೆಯನ್ನು ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎಚ್.ಎನ್.ಸುರೇಶ್ ವಹಿಸಿದ್ದರು. ನಂತರ ಸಂಶೋಧನಾಧರಿತವಾದ ನಾಟ್ಯಶಾಸ್ತ್ರ ಚಿತ್ರ ಪೂರ್ವರಂಗ ಮತ್ತು ನವರಸಕೃಷ್ಣ ನೃತ್ಯಪ್ರಸ್ತುತಿಗಳು ಡಾ. ಶೋಭಾ ಶಶಿಕುಮಾರ್ ಅವರ ನಿರ್ದೇಶದನ್ವಯ ನಡೆದವು.

ಏಳನೇ ವರುಷ ತುಂಬಿದ ಸಂದರ್ಭದಲ್ಲಿ ‘ನಾಟ್ಯಚಿಂತನ’ ಎಂಬ ವಿಶಿಷ್ಟ ಕಾರ್ಯಕ್ರಮವು ಕರಾವಳಿಯ ಪಾಲಿಗೆ ವಿನೂತನವಾಗಿ ಏಪ್ರಿಲ್ ೨೦, ೨೦೧೪ರಿಂದ ಒಂದುವಾರಗಳ ಕಾಲ ಮೂಡಿಬಂದಿತು. ಪುತ್ತೂರಿನ ಮುಳಿಯ ಸಭಾಂಗಣದಲ್ಲಿ ನಡೆದ “ನಾಟ್ಯ-ಚಿಂತನ” ಎಂಬ ಕಾರ್ಯಾಗಾರವನ್ನು ಪುತ್ತೂರು ಜೇಸಿರೆಟ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಉದ್ಘಾಟಿಸಿದ್ದರು. ಇದೇ ಸಂದರ್ಭ ನೂಪುರ ಭ್ರಮರಿಯ ವಾರ್ಷಿಕ ವಿಶೇಷಾಂಕ-ಸಂಶೋಧನ ಸಂಚಿಕೆಯನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.

ಬೆಂಗಳೂರಿನ ಕಲಾವಿದೆ  ಡಾ.ಶೋಭಾ ಶಶಿಕುಮಾರ್ ಅವರ ನೇತೃತ್ವದಲ್ಲಿ ಉಪನ್ಯಾಸ ಕಾರ್ಯಾಗಾರ ಮತ್ತು ವಿಶೇಷವಾದ ಭರತನೃತ್ಯ ಕಾರ್ಯಕ್ರಮವು ಉದ್ಘಾಟನಾದಿನದಂದು ಜರುಗಿತ್ತು. ಕಾರ್ಯಾಗಾರದಲ್ಲಿ ದಿನಕ್ಕೊಂದು ನಾಟ್ಯಶಾಸ್ತ್ರದ ಕಥಾಮಾಲಿಕೆಯ ಉಪನ್ಯಾಸ, ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ, ಸಂವಾದ, ಪ್ರಶ್ನೋತ್ತರಗಳು ಮುಕ್ತವಾಗಿ ನಡೆದವು. ಕಾರ್ಯಾಗಾರದ ಸಮಾರೋಪದಂದು ಉಪಸ್ಥಿತರಿದ್ದು ‘ಅಭಿನಯ’ದ ಕುರಿತಾಗಿ ಪ್ರಾತ್ಯಕ್ಷಿಕೆ, ಉಪನ್ಯಾಸ ನೀಡಿದವರು ವಿದ್ವಾಂಸ, ರಂಗಕರ್ಮಿ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು. ಕಾರ್ಯಾಗಾರಕ್ಕೆ ಮಂಗಳೂರು, ವಿಟ್ಲ, ನೆಲ್ಯಾಡಿ, ಕೊಕ್ಕಡ, ಸುಬ್ರಹ್ಮಣ್ಯ, ಸುಳ್ಯ, ಪುತ್ತೂರಿನಿಂದ ಚಿಣ್ಣರು, ಹಿರಿಯ ನೃತ್ಯವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ಶಿಬಿರಾರ್ಥಿಗಳಿಂದ ೧೬ ವಿವಿಧ ಬಗೆಯ ನೃತ್ಯಸಂದರ್ಭಗಳು ನಿರ್ದೇಶಿತವಾಗಿದ್ದವು. ಅವುಗಳಲ್ಲಿ ಕೆಲವು ನೃತ್ಯನಿರ್ದೇಶನಗಳನ್ನು ಆಯ್ದು ಸಮಾರೋಪಸಂಜೆಯಲ್ಲಿ ಸೊಗಸಾದ ನೃತ್ಯಕಾರ್ಯಕ್ರಮವೂ ನಡೆದು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.

8ನೇ ವರುಷ : ಭರತನ ನಾಟ್ಯಶಾಸ್ತ್ರದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ (ಥಿಯರಿ+ ಪ್ರಾಕ್ಟಿಕಲ್) ಸರ್ಟಿಫಿಕೇಟ್ ಕೋರ್ಸ್ ತರಗತಿಗಳನ್ನು ಹಮ್ಮಿಕೊಂಡಿತ್ತು. ಇದು ಶಾಸ್ತ್ರೀಯ-ಜಾನಪದವೆಂಬ ಬೇಧವಿಲ್ಲದೆ ವಿವಿಧ ಕಲಾವಿಭಾಗದ ಅಭ್ಯರ್ಥಿಗಳಿಗೆ ಅಂದರೆ ಸಬ್ ಜೂನಿಯರ್ ಹಂತದಿಂದ ಜೂನಿಯರ್, ಸೀನಿಯರ್, ವಿದ್ವತ್, ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕಲಾವಿದರಿಗಾಗಿ ಇದು ಹಲವು ಹಂತಗಳಲ್ಲಿ ವಿಭಾಗೀಕರಿಸಲ್ಪಟ್ಟಿದ್ದು ನಾಟ್ಯಶಾಸ್ತ್ರದ ಸಂಪೂರ್ಣ ಅಧ್ಯಯನ, ಕರಣ/ಚಾರಿಗಳ ಕಲಿಕೆಯನ್ನು ಒಳಗೊಂಡಿದೆ. ಭರತನಾಟ್ಯವಷ್ಟೇ ಅಲ್ಲದೆ, ಯಕ್ಷಗಾನ, ಜಾನಪದ ಕ್ಷೇತ್ರಗಳ ಸಹಿತ ವಿವಿಧ ಬಗೆಯ ನೃತ್ಯ, ನಾಟ್ಯ, ಸಂಗೀತ, ವಾದ್ಯಸಂಗೀತದ ಆಸಕ್ತರು ಪರಿಶೀಲಿಸಿ ಪಡೆಯಬಹುದಾದ ಪ್ರಬುದ್ಧಮಟ್ಟದ ತರಗತಿಗಳು ಇದಾಗಿವೆ ಎಂಬುದು ಇಲ್ಲಿನ ಹೆಚ್ಚುಗಾರಿಕೆ.

ಅಂತೆಯೇ ಭರತನಾಟ್ಯದ ನಟ್ಟುವಾಂಗ (ತಾಳ ನುಡಿಸಾಣಿಕೆ) ಸರ್ಟಿಫಿಕೇಟ್ ಕೋರ್ಸ್‌. ಇದರೊಂದಿಗೆ ಪ್ರದರ್ಶನ ಕಲೆಗಳ ಸಂಶೋಧನಾಸಕ್ತರಿಗಾಗಿ ಸಂಶೋಧನಾ ತರಗತಿಗಳನ್ನೂ, ಸಂಗೀತ ರತ್ನಾಕರ-ನರ್ತನ ನಿರ್ಣಯ-ಅಭಿನಯದರ್ಪಣ ಮುಂತಾದ ವಿವಿಧ ಶಾಸ್ತ್ರಗ್ರಂಥಗಳ ಅಧ್ಯಯನ ತರಗತಿ, ಸಾಂಸ್ಕೃತಿಕ ಪತ್ರಿಕೋದ್ಯಮದೆಡೆಗೆ ತೆರಳುವವರಿಗೆ ಕಲಿಕಾ ತರಗತಿಗಳು, ಪುರಾಣಕಥಾಮಾಲಿಕೆಗಳ ಪರಿಚಯ ತರಗತಿಗಳನ್ನೂ ನಡೆಸಲಾಗುತ್ತಿದೆ. ನೃತ್ಯದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಹಂತದ ತರಬೇತಿಯಲ್ಲಿ ಮಸುಕಾಗುತ್ತಿರುವ ಶಾಸ್ತ್ರವಿಭಾಗಕ್ಕೆಂದೇ ಪ್ರತ್ಯೇಕ ಕಲಿಕಾ ತರಗತಿಯೂ ನಡೆಯುತ್ತಲಿದೆ. ಈ ತರಗತಿಗಳೆಲ್ಲವೂ ಅಭ್ಯರ್ಥಿಗಳ ಆಯ್ಕೆಯ ಮೇರೆಗೆ ಒಂದೋ ಮುಖಾಮುಖಿ ಅಥವಾ ಆನ್‌ಲೈನ್‌ನಲ್ಲಿ ಅಭ್ಯರ್ಥಿಯ ಅನುಕೂಲಕ್ಕನುಸಾರವಾಗಿ ಹಮ್ಮಿಕೊಳ್ಳುವಂತದ್ದಾಗಿದ್ದು ; ಈಗಾಗಲೇ ಕರ್ನಾಟಕ, ಹೊರರಾಜ್ಯ ಮತ್ತು ವಿದೇಶಗಳಿಂದಲೂ ಆಸಕ್ತರು ಈ ವಿಶೇಷ ಕೋರ್ಸ್‌ಗಳನ್ನು ಕಲಿಯಲು ಬರುತ್ತಿದ್ದಾರೆ. ಅಂತೆಯೇ ಕಾರ್ಯಾಗಾರಗಳನ್ನೂ ನಡೆಸುವಂತೆ ಈ ತರಗತಿಗಳನ್ನು ವಿನ್ಯಾಸ ಮಾಡಲಾಗಿರುವುದು ವಿಶೇಷ. ಸಂಶೋಧನಾ ವಿದ್ಯಾರ್ಥಿಗಳಿಂದ ಮೊದಲ್ಗೊಂಡು ಸಬ್‌ಜೂನಿಯರ್ ಹಂತದ ವರೆಗೂ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಅಭ್ಯರ್ಥಿಗಳ ವಯೋಮಾನ, ಬೌದ್ಧಿಕಮಟ್ಟ, ಮಾನಸಿಕ ಪ್ರಬುದ್ಧತೆ, ತಿಳಿವಳಿಕೆಗಳಿಗನುಗುಣವಾಗಿ ಸ್ವತಃ ಅಭ್ಯರ್ಥಿಗಳೇ ಸ್ವಯಂ ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಪಾಠ-ಪ್ರಯೋಗಗಳು ನಡೆಯುವುದು ಇಲ್ಲಿನ ಮುಖ್ಯ ಲಕ್ಷಣ. ಭಾರತೀಯ ಪರಂಪರೆಯ ಸೂಕ್ಷ್ಮಗಳನ್ನೂ, ಕಥೆಗಳನ್ನೂ ಗುರುಕುಲಸಂಪ್ರದಾಯದಂತೆ ಜೊತೆಜೊತೆಗೆ ತಿಳಿಸುತ್ತಾ ಸಂಸ್ಕಾರ ಉದ್ದೀಪನಗೊಳಿಸುವತ್ತ ಕೆಲಸ ಸಾಗುತ್ತಲಿದೆ. ಚಿಕ್ಕಮಕ್ಕಳಿಗೂ ಸ್ವಯಂ ಕೊರಿಯೋಗ್ರಫಿ ಮಾಡಿಕೊಳ್ಳುವಂತೆ ಮನೋಧರ್ಮದ ನಾಟ್ಯಶಾಸ್ತ್ರದ ಇನ್ನು ಕೆಲವೇ ಪ್ರವೇಶ ದಾಖಲಾತಿಗಳಿಗೆ ಅನುಕೂಲ ಇದರಲ್ಲಿದೆ. ನಾಟ್ಯಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಿದರೆಂದಾದರೆ ೧೦೮ ಕರಣಾಭ್ಯಾಸದ ಪ್ರಾಯೋಗಿಕ ತರಗತಿಗಳನ್ನು  ಕಲಿಸಲು ವ್ಯವಸ್ಥೆ ಮಾಡಲಾಗುತ್ತದೆ. ಅಂತಿಮವಾಗಿ ಕೆಲವು ಪರೀಕ್ಷೆಗಳನ್ನು ನಡೆಸಿ ಅವರ ಭವಿಷ್ಯಕ್ಕೆ ಉಪಯೋಗವಾಗುವಂತೆ ಅರ್ಹತಾ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.

 9ನೇ ವರ್ಷ :  ಇದಕ್ಕೆ ಮತ್ತೊಂದು ಸೇರ್ಪಡೆಯೆಂದರೆ ಇತ್ತೀಚೆಗೆ ಕರ್ನಾಟಕ-ತಮಿಳ್ನಾಡು ಆಸ್ಥಾನ ಮತ್ತು ಆಲಯ ನೃತ್ಯಪ್ರಂಪರೆಯಲ್ಲಿ ಚಾಲ್ತಿಯಲ್ಲಿದ್ದ ಹಳೆಯ ನೃತ್ಯಬಂಧಗಳ ಪುನರ್ ನವೀಕರಣ ಮತ್ತು ತರಬೇತಿ.

ಈ ಸಂಬಂಧವಾಗಿ ಮೇ ೨೫, ೨೬, ೨೦೧೫ರಂದು ಪುತ್ತೂರಿನಲ್ಲಿ ಎರಡು ದಿನಗಳ ರಾಜ್ಯಮಟ್ಟದ ‘ಶಾಸ್ತ್ರ ಪ್ರಯೋಗ ನೃತ್ಯಚಿಂತನ’ ಎಂಬ ಕಾರ್ಯಾಗಾರ. ಈ ಕಾಲಕ್ಕೆ ಮರೆಯಾಗಿರುವ ರಾಜಾಶ್ರಯ ಮತ್ತು ಆಲಯ ನೃತ್ಯಪದ್ಧತಿಗಳಲ್ಲಿ ಬೆಳೆದುಬಂದ ವಿಶೇಷವಾದ ನೃತ್ಯಬಂಧಗಳ ಬಗ್ಗೆ ಶಾಸ್ತ್ರ ಮತ್ತು ಪ್ರಯೋಗ ವಿಭಾಗಗಳೆರಡರಲ್ಲೂ ತರಬೇತಿ ನೀಡಿ ನೃತ್ಯಾಸಕ್ತರನ್ನು ಮರುಚಿಂತನೆಗೆ ಒಳಪಡಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು.

ದಶಮಾನೋತ್ಸವ  ಮತ್ತು ೧೧ನೇ ವರ್ಷ – ನೂಪುರಭ್ರಮರಿಯು ತನ್ನ ದಶಮಾನೋತ್ಸವ ಪೂರ್ಣತೆಯ ಸಂಭ್ರಮದಲ್ಲಿ ‘ಕಲಾಗೌರಿ’ಯ ಸಹಭಾಗಿತ್ವದಲ್ಲಿ  ೨೦೧೬-೧೭ರ ಮಹಾಶಿವರಾತ್ರಿಯಂದು ನೃತ್ಯಾಧ್ಯಯನದ್ವಾರಾ ಶಿವಾರಾಧನೆಯನ್ನು ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣವನ್ನು ಬಸವನಗುಡಿಯ ಕಲಾಗೌರಿ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.

ವಿಚಾರಸಂಕಿರಣದ ಶೀರ್ಷಿಕೆ- ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯಚಿಂತನವೆಂದಾಗಿದ್ದು; ಈ ಆಶಯಕ್ಕನುಗುಣವಾಗಿ ಸಂಶೋಧನ ವಿದ್ಯಾರ್ಥಿಗಳು ಪ್ರಬಂಧಗಳನ್ನು ನೃತ್ಯಸಹಿತವಾಗಿ ಮಂಡಿಸಿದರು. ಆ ಬಳಿಕ ಪ್ರಸ್ತುತ ವರ್ಷಗಳಲ್ಲಿ ನೂತನವಾಗಿ ವಿನ್ಯಾಸಗೊಳ್ಳುತ್ತಿರುವ ಪಾರಂಪರಿಕ ನೃತ್ತಬಂಧ ಅಲರಿಪ್ಪುವಿನ ನೂತನ ದೃಷ್ಟಿ ಮತ್ತು ಪ್ರಾಯೋಗಿಕ ಸವಾಲುಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ನಾಡಿನ ಅನೇಕ ಕಡೆಗಳಿಂದ ಆಗಮಿಸಿದ್ದ ನೃತ್ಯ ಅಧ್ಯಯನಕಾರರು, ವಿದ್ಯಾರ್ಥಿಗಳು ಮತು ಸಂಶೋಧಕರು ಈ ವಿಚಾರಸಂಕಿರಣದಲ್ಲಿ ಆಸಕ್ತಿಯಿಂದ ಪಾಲ್ಗೊಂಡಿದ್ದರು. ವಿಶೇಷ ಉಪನ್ಯಾಸದಲ್ಲಿ ಶ್ರೀ ಅರ್ಜುನ್ ಭಾರಧ್ವಾಜ್, ವಿದ್ವಾಂಸರು, ಗ್ರೀಕ್ ಭಾಷಾಪಂಡಿತರು ಮತ್ತು ಸಹಾಯಕ ಪ್ರಾಧ್ಯಾಪಕರು, ಅಮೃತ ವಿಶ್ವವಿದ್ಯಾನಿಲಯ ಇವರಿಂದ – ಗ್ರೀಕ್ ಮತ್ತು ಭಾರತದ ಕಲೆ ಹಾಗೂ ಅಲಂಕಾರಶಾಸ್ತ್ರದ ಬಂಧುತ್ವ, ಸಾಮ್ಯ ಹಾಗೂ ಅವೈಷಮ್ಯದ ಕುರಿತು ಮಾತನಾಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನೂಪುರ ಭ್ರಮರಿಯ ದಶವರ್ಷ ವಿಶೇಷ- ಆನ್‌ಲೈನ್ ಸಂಶೋಧನಾ ನಿಯತಕಾಲಿಕೆಯ ಸಮಗ್ರ ಆವೃತ್ತಿ ಅನಾವರಣಗೊಂಡಿತು. ಇದೇ ಸಂದರ್ಭ ಕೆ.ಎನ್ ಅನಂತರಾಮಯ್ಯ (ಹಿರಿಯ ಆಯೋಜಕರು, ಬಿಟಿ‌ಎಂ ಕಲ್ಚರಲ್ ಅಕಾಡೆಮಿ) ಇವರಿಗೆ- ‘ಕಲಾಯೋಜನಕೌಶಿಕ’ ಎಂಬ ಬಿರುದನ್ನಿತ್ತು ಹಾಗೂ ಸುಬ್ಬುಕೃಷ್ಣ (ಸಹೃದಯೀ ಪ್ರೇಕ್ಷಕ ಮತ್ತು ಬರೆಹಗಾರ, ಸಂಘಟಕರು) ಇವರಿಗೆ- ‘ಸಹೃದಯ ಸದ್ರತ್ನ’ ಎಂಬ ಬಿರುದನ್ನಿತ್ತು ಸನ್ಮಾನಿಸಲಾಯಿತು. ಸಂಜೆ ನಡೆದ ಶಿವಾರ್ಪಣಂ- ಭರತನೃತ್ಯ ಕಾರ್ಯಕ್ರಮ ಮೇಘಾ ಶ್ರೀನಿವಾಸ್ ಮತ್ತು ಸಂಗೀತಾ ಅಯ್ಯರ್  ಇವರಿಂದ ಮೂಡಿಬಂತು. ಬಾದಾಮಿಯ ಮಹಾನಟನ(ಶಿವ) ಕುರಿತು ಡಾ. ಮನೋರಮಾ ಬರೆದ ಮೊತ್ತ ಮೊದಲ ಕನ್ನಡ ನೃತ್ಯ ಸ್ತುತಿ-ಕೌತ್ವ, ಮಯೂರವಿನ್ಯಾಸದಲ್ಲಿ ಅರಳಿದ ಅಲರಿಪು ನೃತ್ತ ಪ್ರಮುಖ ನೂತನ ಬಗೆಯ ಅಧ್ಯಯನಾಧಾರಿತ ನೃತ್ಯಗಳಾಗಿ ನೆರೆದವರ ಮೆಚ್ಚುಗೆಗೆ ಪಾತ್ರವಾದವು.

೧೨-೧೩ನೇ ವರ್ಷಗಳು- ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣವನ್ನು ಬೆಂಗಳೂರಿನ ಕಲಾಗೌರೀ ಸಭಾಂಗಣದಲ್ಲಿ ಆಗಸ್ಟ್ ೧೨, ೨೦೧೮ರಂದು ಹಮ್ಮಿಕೊಂಡಿತ್ತು. ವಿಚಾರಸಂಕಿರಣ ಶೀರ್ಷಿಕೆ ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯಚಿಂತನ ಎಂಬುದಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಸಂಶೋಧನ ಪ್ರಬಂಧಗಳ ಮಂಡನೆ ನೃತ್ಯಸಹಿತವಾಗಿ ಏರ್ಪಡಿಸಲಾಗಿತ್ತು. ಇದಾದ ಬಳಿಕ ವಿಶೇಷ ಸೋದಾಹರಣ ಉಪನ್ಯಾಸ- ನಾಟ್ಯಶಾಸ್ತ್ರದ ಸಾರ್ವಕಾಲೀನತೆ- ಷೇಕ್ಸ್‌ಪಿಯರ್ ನಾಟಕಗಳಲ್ಲಿ ಅನ್ವಯದ ಕುರಿತು ಇತ್ತು.

ಇದೇ ಸಂದರ್ಭದಲ್ಲಿ ಭರತನಾಟ್ಯಬೋಧಿನಿ- ನೃತ್ಯ ಪಠ್ಯಕೃತಿಯನ್ನು ನಾಡಿನ ಹೆಸರಾಂತ ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಹೆಸರಾಂತ ಸಂಶೋಧಕರೂ, ವಿದ್ವಾಂಸರೂ ಆಗಿರುವ ಡಾ. ಶೇಷ ಶಾಸ್ತ್ರಿ, ಇತಿಹಾಸ ತಜ್ಞ ಡಾ. ಎಚ್.ಎಸ್. ಗೋಪಾಲರಾವ್ ಮತ್ತು ‘ವಿಮರ್ಶಾ ವಾಙ್ಮಯಿ’, ಹಿರಿಯ ರಂಗಕರ್ಮಿ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ ಅನಾವರಣ ಗೊಂಡಿತು. ಈ ಕೃತಿಯು ಭರತನಾಟ್ಯವನ್ನು ಕಲಿಯುವ ಪ್ರಾಥಮಿಕ ಪೂರ್ವ/ಪ್ರಾಥಮಿಕ/ಪ್ರಾಥಮಿಕ ಅನಂತರ ಹಂತದವರಿಗಾಗಿ ರಚಿಸಲಾಗಿದ್ದು; ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಪ್ರಕಟಗೊಂಡು ಕರ್ನಾಟಕದ ನೃತ್ಯಪರೀಕ್ಷೆ/ಗಂಧರ್ವ/ನಾಟ್ಯಶಾಸ್ತ್ರ/ಸ್ಪರ್ಧಾತ್ಮಕ/ಅರ್ಹತಾ ಪರೀಕ್ಷೆಗಳಿಗೂ ಉಪಯುಕ್ತವಾದುದಾಗಿದೆ. ನೂಪುರ ಭ್ರಮರಿ (ರಿ.)ಮತ್ತು ಕಲಾಗೌರಿ ಸಂಸ್ಥೆಗಳಿಂದ ಪ್ರಕಾಶನ ಮಾಡಲಾಗಿದ್ದು ಡಾ. ಮನೋರಮಾ ಅಧ್ಯಯನನಿಷ್ಠವಾಗಿ ಮೂಲ ಕನ್ನಡ ಪಠ್ಯವನ್ನು ರಚಿಸಿದರೆ; ಇಂಗ್ಲೀಷ್‌ಗೆ ಭಾಷಾನುವಾದವನ್ನು ಡಾ. ಶಾಲಿನಿ ಪಿ. ವಿಠಲ್ ಮತ್ತು ಡಾ.ದ್ವರಿತಾ ವಿಶ್ವನಾಥ ಮಾಡಿದ್ದಾರೆ.

ಇದಾದ ಬಳಿಕ ನೃತ್ಯಸಂಶೋಧನೆಗೆಂದೇ ಮೀಸಲಾದ ನೂಪುರ ಭ್ರಮರಿಯ ಆನ್ಲೈನ್ ಜರ್ನಲ್ ಪೋರ್ಟಲ್ www.noopuradancejournal.org ಅನಾವರಣಗೊಂಡಿತು. ನೂಪುರ ಭ್ರಮರಿಗೆ ಮತ್ತು ಭರತನಾಟ್ಯಬೋಧಿನಿ ಪುಸ್ತಕಕ್ಕಾಗಿ ದುಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ಸಂಪನ್ನವಾಯಿತು. ಉಡುಪಿಯ ಬರೆಹಗಾರ ಎನ್.ರಾಮ ಭಟ್, ಬೆಂಗಳೂರಿನ ಬರೆಹಗಾರ ಸಿ.ಎಸ್.ರಾಮಚಂದ್ರ ಹೆಗಡೆ ಮತ್ತು ಸುಮಂಗಲಾ ಶ್ರೀನಿವಾಸ್ ಅವರು ಸನ್ಮಾನ ಸ್ವೀಕರಿಸಿದರು. ಸನ್ಮಾನಿತರ ಪರವಾಗಿ ಎನ್ ರಾಮ ಭಟ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಇದಾದ ಬಳಿಕ ‘ಕಲಾಗೌರಿ ಸಂಧ್ಯೆ’ ನೃತ್ಯ ಕಾರ್ಯಕ್ರಮವಿತ್ತು. ಇದೇ ಸಂದರ್ಭದಲ್ಲಿ ಡಾ. ಶೋಭಾ ಶಶಿಕುಮಾರ್ ಅವರಿಗೆ ನಾಟ್ಯಭಾರತಿ ಎಂಬ ಬಿರುದನ್ನಿತ್ತು ಸನ್ಮಾನಿಸಲಾಯಿತು.

ಬೆಂಗಳೂರಿನ ಕಲಾಗೌರಿ ಸಂಸ್ಥೆಯ ಸಹಭಾಗಿತ್ವದಲ್ಲಿಯೂ ಅನೇಕ ಕಾರ್ಯಕ್ರಮಗಳು ನೂಪುರಭ್ರಮರಿಯ ನಿರ್ದೇಶನದಲ್ಲಿ ಜರುಗಿದ್ದು ಆ ಪೈಕಿ ರಾಜ್ಯಮಟ್ಟದ ವಿಚಾರಸಂಕಿರಣಗಳು, ಭರತಮನೋರಥ, ನೃತ್ಯಸಂಶೋಧನಾ ಪ್ರಸ್ತುತಿಗಳೂ, ದೂತೀಕರ್ಮ ಪ್ರಕಾಶ ಗ್ರಂಥದ  ನೃತ್ಯಸಂಶೋಧನ ಪುನರ್ ನವೀಕರಣ ಪ್ರಸ್ತುತಿಗಳು (ಏಪ್ರಿಲ್ ೧೫, ೨೦೧೯) ಗಮನಾರ್ಹವಾದವು.

ಜುಲೈ ೨೧, ೨೦೧೯ ರಂದು ಬೆಂಗಳೂರಿನ ನಿರ್ಮಿತಿ ಸಂಸ್ಥೆಯ ಸಹಪ್ರಾಯೋಜಕತ್ವದಲ್ಲಿ ನೂಪುರ ಭ್ರಮರಿಯ ಒಂದು ದಿನದ ದಕ್ಷಿಣ ಭಾರತ ವಲಯಮಟ್ಟದ ನೃತ್ಯಸಂಶೋಧನ ವಿಚಾರಸಂಕಿರಣ ಜರುಗಿತು. ಸಂಶೋಧನಾ ಪ್ರಬಂಧಗಳ ಮಂಡನೆ ಎರಡು ಭಾಗಗಳಲ್ಲಿ ಮೂಡಿ ಬಂದಿತು.  ನೃತ್ಯ ಕಲಿಸುವ ಹಾಗು ಕಲಿಯುವಲ್ಲಿ ಪ್ರಸ್ತುತ ಪರಿಸ್ಥಿತಿ ಹಾಗೂ ಈಗಿನ ಸ್ವಾಗತಾರ್ಹ ಬೆಳವಣಿಗೆಗಳ ವಿಚಾರವಾಗಿ ಕಲಾಸಕ್ತರ ನಡುವೆ ನಡೆದ ಸ್ವಾರಸ್ಯಕರವಾದ ಸಂವಾದವಿತ್ತು. ನಂತರ ಶತಾವಧಾನಿ ಡಾ।। ಆರ್ ಗಣೇಶರಿಂದ ಡಾ।। ದ್ವರಿತಾ ವಿಶ್ವನಾಥ್ ರವರ ನಾಯಿಕಾಂತರಂಗ ಪುಸ್ತಕದ ಲೋಕಾರ್ಪಣೆಯಾಯಿತು. ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಹಾಗು ಡಾ।। ವೈಜಯಂತಿ ಕಾಶಿ ಉಪಸ್ಥಿತರಿದ್ದರು. ಮುಂದೆ, ಡಾ।। ಶೋಭಾ ಶಶಿಕುಮಾರ್ ರವರು ದಿನವಿಡೀ ನಡೆದ ವಿವಿಧ ಸಂಶೋಧನಾ ಪ್ರಸ್ತುತಿಗಳ ವಿಶ್ಲೇಷಣೆ ಮಾಡಿದರು.

ಡಾ।। ಮನೋರಮಾ ಬಿ ಎನ್ ರವರು ಕರ್ನಾಟಕದ ಕೊರವಂಜಿ  ಸಾಹಿತ್ಯದ ಬಗೆಗಿನ ತಮ್ಮ ಸಂಶೋಧನಾ ಅಧ್ಯಯನವನ್ನು ಪ್ರಸ್ತುತಪಡಿಸಿದರು. ಡಾ।। ಶೋಭಾ  ಶಶಿಕುಮಾರ್ ರವರು ಸಂಶೋಧನೆಗೆ ಸಂಬಂಧಿಸಿದಂತೆ ಕನಕದಾಸ ಕೊರವಂಜಿ ನೃತ್ಯ ಪ್ರಸ್ತುತಿಯನ್ನು ನೀಡಿದರು. ಕಡೆಯಲ್ಲಿ ಅಷ್ಟಾದಶ ಪುರಾಣಗಳಲ್ಲಿ ಬರುವ ಕಥೆಗಳನ್ನು ನೃತ್ಯಕ್ಕೆ ಅಳವಡಿಸುವ ಬಗ್ಗೆ ಡಾ।। ಶೋಭಾ ಶಶಿಕುಮಾರ್ ರವರ ಉಪನ್ಯಾಸ ಹಾಗೂ  ಅದರ ಕುರಿತಂತೆ ಅವರ ಸಂಶೋಧನಾತ್ಮಕ ನೃತ್ಯಪ್ರಸ್ತುತಿ ನೆರವೇರಿತು.

’ನಾರಾಯಣ ಸ್ಮರಣ’- ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ನಾರಾಯಣ ಭಟ್ಟರು ಸ್ವರ್ಗಸ್ಥರಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಲಾಗೌರಿಯಲ್ಲಿ ಡಿಸೆಂಬರ್ ೧೪, ೨೦೧೯ರಂದು ನಡೆದ ಸಂಸ್ಮರಣ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಗೆ ಕಲಾಶಂಕರ, ದಿವಾಕರ ಹೆಗಡೆ ಅವರಿಗೆ ಯಕ್ಷದಿವಾಕರ ಮತ್ತು ಉಜಿರೆ ಅಶೋಕ ಭಟ್ಟರಿಗೆ  ಕಲಾಯೋಜನಕೌಶಿಕ ಎಂಬ ಬಿರುದುಗಳ ಸಹಿತ ಸನ್ಮಾನ ಕಾರ್ಯಕ್ರಮವೂ ಕೀರ್ತಿಶೇಷ ನಾರಾಯಣ ಭಟ್ಟರ ಅಭಿಲಾಷಾರ್ಥವಾಗಿ ಜರುಗಿತು. ಡಾ. ಶೋಭಾ ಶಶಿಕುಮಾರ್ ಮತ್ತು ಶಿಷ್ಯರ ನೃತ್ಯಪ್ರಸ್ತುತಿಯೂ ಜರುಗಿತ್ತು. ನಾರಾಯಣ ಭಟ್ಟರ ವರ್ಷಾಬ್ಧದ ಸಂದರ್ಭಕ್ಕೆ ( ೨೦೨೦ ಅಕ್ಟೋಬರ್ ೫) ಅವರ ಆತ್ಮಕಥನ ಮತ್ತು ಸಂಸ್ಮರಣಾ ಕೃತಿ – ’ನಾರಾಯಣ ದರ್ಶನ’ ವನ್ನು ದಕ್ಷಿಣಕನ್ನಡದ ಸವಣೂರು ಮತ್ತು ಮಡಿಕೇರಿಗಳಲ್ಲಿ ಅನಾವರಣಗೊಳಿಸಲಾಯಿತು.

ಕರ್ನಾಟಕ ಸರ್ಕಾರದ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನೂಪುರ ಭ್ರಮರಿ ಸಂಸ್ಥೆಯ ವತಿಯಿಂದ ನಾಟ್ಯಶಾಸ್ತ್ರ- ಯಕ್ಷಗಾನ- ಮತ್ತು ಸೋದರ ಕಲೆಗಳೊಂದಿಗೆ ಸಹಸಂಬಂಧದ ಕುರಿತು ಡಿಸೆಂಬರ್ ೧೫, ೨೦೧೯ ರಲ್ಲಿ ಬೆಂಗಳೂರಿನಲ್ಲಿ ಒಂದು ದಿನದ ಸಂಶೋಧನ ವಿಚಾರಸಂಕಿರಣವೂ ಜರುಗಿದ್ದು ; ಅನೇಕ ಖ್ಯಾತನಾಮರ ಪ್ರಸ್ತುತಿಗಳು ಜರುಗಿವೆ.  ಪ್ರೊ ಮಲ್ಲೇಪುರಂ ಜಿ ವೆಂಕಟೇಶ್, ಶತಾವಧಾನಿ ಡಾ.ರಾ. ಗಣೇಶ್, ಪ್ರೊ ಎಂ ಎ ಹೆಗಡೆ,ಡಾ.ಪ್ರಭಾಕರಜೋಷಿ,   ಉಜಿರೆ ಅಶೋಕ ಭಟ್, ಡಾ.ಪಾದೇಕಲ್ಲು ವಿಷ್ಣು ಭಟ್, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಸೂರಿಕುಮೇರು ಗೋವಿಂದ ಭಟ್, ಡಾ ಶೋಭಾ ಶಶಿಕುಮಾರ್, ಕೆರೆಮನೆ ಶಿವಾನಂದ ಹೆಗಡೆ, ದಿವಾಕರ ಹೆಗಡೆ, ಡಾ.ವೀಣಾಮೂರ್ತಿ ವಿಜಯ್, ಮಂಟಪ ಪ್ರಭಾರ ಉಪಾಧ್ಯ, ಕೃಷ್ಣಮೂರ್ತಿ ತುಂಗ, ಶಮಾಕೃಷ್ಣ ಮೊದಲಾದ ಅನೇಕ ಪ್ರಬುದ್ಧ ಕಲಾವಿದರು, ಚಿಂತಕರ ಒಗ್ಗೂಡುವಿಕೆಯಲ್ಲಿ ಈ ಕಾರ್ಯಕ್ರಮವು ಸಂಪನ್ನಗೊಂಡಿತ್ತು. ಈ ಕಾರ್ಯಕ್ರಮದ ಸಂಶೋಧನಾ ಪ್ರಸ್ತುತಿಗಳ ಸಂಕಲನ ಪುಸ್ತಿಕೆಯೂ ಯಕ್ಷಗಾನ ಅಕಾಡೆಮಿಯ ವತಿಯಿಂದ ೨೦೨೧ರಲ್ಲಿ ಪ್ರಕಟವಾಗಿದೆ.

೧೪- ೧೫ನೇ ವರ್ಷಗಳು – ಕೋವಿಡ್-೧೯ ರ ಕಾಲದಲ್ಲಿ ಅನೇಕ ಕಲಾಚಿಂತನೆಯ ಕೋರ್ಸ್ ಗಳು  ಮುನ್ನಡೆಯನ್ನು ಸಾಧಿಸಿದ್ದು; ಸುಮಾರು ನೂರಕ್ಕು ಹೆಚ್ಚು ಕಲಾವಿದರು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಅನೇಕರಿಗೆ ಈ ಕೋರ್ಸ್ ಗಳು ವರದಂತೆ ಪರಿಣಮಿಸಿದ್ದು; ಮತ್ತಷ್ಟು ಕಲಾವಿದರು ಈ ಕೋರ್ಸ್ ಗಳ ಪ್ರೇರಣೆಯಲ್ಲಿ ದೇಶಾದ್ಯಂತ ತಮ್ಮದೇ ಕೋರ್ಸ್ ಗಳನ್ನೂ ಹಮ್ಮಿಕೊಂಡಿದ್ದಾರೆ.

ಸಂಸ್ಥೆಯಿಂದ ಜರುಗುತ್ತಿರುವ ಸಂಶೋಧನಾಧರಿತ ವಾದ ಕರ್ನಾಟಕದಲ್ಲೇ ಪ್ರಪ್ರಥಮೆನಿಸುವ ಅಕಾಡೆಮಿಕ್ ಕೋರ್ಸ್ ಗಳು ಮತ್ತು ಅವುಗಳ ವಿವರಗಳು  ಕೆಳಗಿನಂತಿವೆ. 

ನಾಟ್ಯಾಲಂಕಾರ- ಭಾರತೀಯ ಅಲಂಕಾರಶಾಸ್ತ್ರದ ಕುರಿತಾಗಿ

ನಾಯಿಕಾಂತರಂಗ- ನೃತ್ಯಕ್ಕೆ ಅನುಗುಣವಾದ ನಾಯಿಕಾ-ನಾಯಕಾಭೇದಗಳ ಕುರಿತು

ನಟ್ಟುವಾಂಗ- ಭರತನಾಟ್ಯದ ತಾಳನುಡಿಸಾಣಿಕೆಯ ಕುರಿತು ಥಿಯರಿ ಮತ್ತು ಪ್ರಯೋಗ ಕೋರ್ಸ್ ಗಳು ಪ್ರತ್ಯೇಕ

ನೃತ್ಯಾನುಕೀರ್ತನ- ಕೊರಿಯೋಗ್ರಫಿ/ನೃತ್ಯಬಂಧಗಳ ಕಲಿಕೆ

ನಾಟ್ಯಶಾಸ್ತ್ರ ( ಶಾಸ್ತ್ರ ಮತ್ತು ಪ್ರಯೋಗ)- ಸಮಗ್ರ ೩೬ ಅಧ್ಯಾಯಗಳದ್ದು ಹಾಗೂ ಕರಣ ಆಂಗಿಕಾಭಿನಯದ್ದು ಮತ್ತೊಂದು ಮತ್ತು ಪೂರ್ಣ ನಾಟ್ಯಶಾಸ್ತ್ರ ದೀರ್ಘ ಅಧ್ಯಯನ

ಶಾಸ್ತ್ರರಂಗ- ದೇಶೀ ನೃತ್ಯ ಗ್ರಂಥಗಳ ಸಮನ್ವಯ ದೃಷ್ಟಿಯ ಶಾಸ್ತ್ರಾಭ್ಯಾಸ

ಆಗಮಗಳು, ಭಾರತೀಯ ತತ್ತ್ವಶಾಸ್ತ್ರ, ನೃತ್ಯಶಿಲ್ಪಗಳು, ಸಾಂಸ್ಕೃತಿಕ ಪತ್ರಿಕೋದ್ಯಮ,

ಪುರಾಣ ಮತ್ತು ಭಾರತೀಯ ಸಾಹಿತ್ಯಗ್ರಂಥಗಳು

(ಈ ಕೋರ್ಸ್ ಗಳು ಇನ್ನೂ ಬೃಹತ್ತಾಗಿ ಬೆಳೆದು ಇದೀಗ ಸಂಸ್ಥೆಯು ಒಟು ೧೧ ಬಗೆಯ ವಿವಿಧ ಕೋರ್ಸ್ ಗಳನ್ನು ನಡೆಸುತ್ತಿದೆ. ಹೆಚ್ಚಿನ ಮಾಹಿತಿಗೆ ಅಕಾಡೆಮಿಕ್ ಕೋರ್ಸ್ ವಿಭಾಗವನ್ನು ಪರಿಶೀಲಿಸಿ.)

ಇದಷ್ಟೇ ಅಲ್ಲದೆ; ವಿದ್ವತ್ಪೂರ್ಣವಾದ ಉಪನ್ಯಾಸಗಳ ಆಡಿಯೋ ಸಂಕಲನ – ’ಶ್ರವಣಸರಣಿ’ಯು ಭಾರತೀಯ ಸಾಹಿತ್ಯ-ಕಲೆ-ಸಿನೆಮಾ-ಸಂಸ್ಕೃತಿ-ಶಿಲ್ಪ-ಸಂಗೀತ-ನೃತ್ಯಗಳ ಕುರಿತಾಗಿ ೧೦ ಸಂಚಿಕೆಯಲ್ಲಿ ಯೂಟ್ಯೂಬ್ ಕಾರ್ಯಕ್ರಮವಾಗಿ ನೆರವೇರಿದೆ. ಶತಾವಧಾನಿ ಡಾ. ಆರ್. ಗಣೇಶರ ೧೩೦ಕ್ಕೂ ಹೆಚ್ಚಿನ ವಿಶಿಷ್ಟವಾದ ನೃತ್ಯರಚನೆಗಳ ಕೃತಿ ’ಅಭಿನಯಭಾರತಿ’ ಯನ್ನು ಆನ್ಲೈನ್ ನಲ್ಲಿ ಪ್ರಕಟಿಸಲಾಗಿದೆ.  ೨೦೨೧ ರ ಸಾಲಿನಲ್ಲಿ ಶೋಧ ಸರಣಿ- ಸಂಶೋಧನಾ ಪ್ರಸ್ತುತಿಗಳ ಕಾರ್ಯಕ್ರಮವನ್ನೂ ಆನ್ಲೈನ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

೧೬ನೇ ವರ್ಷ : 2022ನೇ ಸಾಲಿನಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗಭಾಗವಾದ ಐಕೆಎಸ್ ವಿಭಾಗಕ್ಕೆ ಅಳವಟ್ಟ ಸಂಶೋಧನಾ ಸಂಸ್ಥೆಯೆನಿಸಿದೆ. ಈ ಗೌರವವವ್ವು ಪಡೆದ ಭಾರತದ ಒಟ್ಟು 13 ಶಿಕ್ಷಣಸಂಸ್ಥೆಗಳಲ್ಲಿ ನೂಪುರಭ್ರಮರಿಯೂ ಒಂದಾಗಿದೆ. ಅದರ ಅಂಗಭಾಗವಾಗಿ ನೃತ್ಯಶಿಲ್ಪಯಾತ್ರೆ ಎಂಬ ದೇವಾಲಯ ಅಧ್ಯಯನ ಕಾರ್ಯಕ್ರಮವು (ಇಂಟರ್ನ್ಶಿಪ್ ಸಹಿತ) 2022 ನೇ ಸಾಲಿನ ಮುಖ್ಯ ಯೋಜನೆಯಾಗಿದೆ. ಇದರೊಂದಿಗೆ ಶಿಲ್ಪಸಂಬಂಧಿ ಪುಸ್ತಕ ಪ್ರಕಟಣೆ, ವಿಚಾರಸಂಕಿರಣ, ಅಧ್ಯಯನ ಪ್ರವಾಸ, ಲಕ್ಷಣಗ್ರಂಥಗಳ ಅಧ್ಯಯನ ಮತ್ತು ತರಬೇತಿ, ಸಂವಹನಶೀಲ ಕಾರ್ಯಕ್ರಮಗಳು, ನೃತ್ಯಪ್ರದರ್ಶನಗಳು ಮೊದಲಾದ ಇನ್ನೂ ಹಲವು ಯೋಜನೆಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಹಾಗೂ ದೇಹಲಿಯ ಐಕೆ ಎಸ್ ಡಿವಿಷನ್ ನ ಮೇಳದಲ್ಲಿ ಸಂಸ್ಥೆಯು ಭಾಗವಹಿಸಿ ಡಾ. ದ್ವರಿತಾ ವಿಶ್ವನಾಥರ ನಿರ್ದೇಶನದಲ್ಲಿ ’ಅಖಂಡಂ ಭಾರತಂ ಸ್ಮರೇತ” ಎಂಬ ನೃತ್ಯರೂಪಕವನ್ನು ಸುಮಾರು ೧೫ ಮಂದಿಯ ತಂಡವು ಪ್ರದರ್ಶಿಸಿ ಅಪಾರ ಮನ್ನಣೆ ಕೀರ್ತಿಗೆ ಪಾತ್ರವಾಗಿತ್ತು. ನೂಪುರ ಭ್ರಮರಿ ಸಂಸ್ಥೆಯ ಸ್ಟಾಲ್ ಗಳೂ ಅಲ್ಲಿ ವಿದ್ವಾಂಸರ ಗಮನ ಸೆಳೆದು ಮನ್ನಣೆ ಗಳಿಸಿತು.

೧೭ನೇ ವರ್ಷ : 2023 ಜನವರಿ 8 ರಂದು ಒಂದು ದಿನದ ವಿಚಾರಸಂಕಿರಣವನ್ನು ಕರ್ನಾಟ ಶಿಲ್ಪ ಸಿರಿ ಎಂಬ ಶೀರ್ಷಿಕೆಯಲ್ಲಿ ಬೆಂಗಳೂರಿನ ಬಸವನಗುಡಿಯ ನಾಶನಲ್ ಕಾಲೇಜಿನ ಎಚ್ ಎನ್ ಆಡಿಟೋರಿಯಂ ನಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 14ಸಂಶೋಧನಾ ಪ್ರಬಂಧಗಳು ನೃತ್ಯಶಿಲ್ಪಯಾತ್ರೆಯ ಅಧ್ಯಯನಾರ್ಥಿಗಳಿಂದ ಮಂಡನೆಗೊಂಡವು. ವಿವಿಧ ಪ್ರಾತ್ಯಕ್ಷಿಕೆ, ಶಿಲ್ಪಾಧರಿತವಾದ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನೃತ್ಯಶಿಲ್ಪಯಾತ್ರೆಯ ಅಂಗವಾಗಿ ದೇವಾಲಯ ಶಿಲ್ಪಗಳ ನಾಟ್ಯಾಯಮಾನತೆ ಮತ್ತು Shilpa Shodha Sangraha  ಎಂಬ ಶೋಧಸಂಕಲನಗಳನ್ನು ಅನಾವರಣಗೊಳಿಸಲಾಯಿತು. IKS ರಾಷ್ಟ್ರೀಯ ಸಂಯೋಜಕರಾದ ಪ್ರೊ. ಗಂಟಿ ಸೂರ್ಯನಾರಾಯಣ ಮೂರ್ತಿ ಮತ್ತು IKSಪ್ರಸಾರ ವಿಭಾಗದ ಸಂಯೋಜಕರಾದ ಡಾ. ಅನುರಾಧಾ ಚೌಧರಿ , ಅದಮ್ಯ ಚೇತನ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ತೇಜಸ್ವಿನೀ ಅನಂತಕುಮಾರ್ ಅವರು ಪಾಲ್ಗೊಂಡು ಮಾತನಾಡಿದರು. ಸಾಕ್ಷ್ಯಚಿತ್ರ ಅನಾವರಣ,  ವಿವಿಧ ಪ್ರಮಾಣಪತ್ರಗಳ ವಿತರಣೆ ಮೊದಲಾದ ಕಾರ್ಯಕ್ರಮಗಳಿಗೆ ಐನೂರಕ್ಕೂ ಮಿಕ್ಕಿದ ಸಹೃದಯರು ಸಾಕ್ಷಿಗಳಾದರು. ಮೈಸೂರು ಆಕಾಶವಾಣಿಯಿಂದ ೨೦ ಸಂಚಿಕೆಗಳ ನೃತ್ಯಶಿಲ್ಪ ಯಾತ್ರೆ ಸರಣಿ ಕೂಡಾ ಈ ಕಾರ್ಯಕ್ರಮಕ್ಕೆ ಗರಿಯನ್ನು ಕೂಡಿಸಿತು.

2023ನೇ ಸಾಲಿನಲ್ಲಿ ಶಾಸ್ತ್ರರಂಗ ಎಂಬ ಇಂಟರ್ನ್ಶಿಪ್ ತರಬೇತಿಯು ಜರುಗುತ್ತಲಿದ್ದು; ನಾಟ್ಯಶಾಸ್ತ್ರ -ಸಂಗೀತರತ್ನಾಕರವೇ ಮೊದಲಾದ ಸುಮಾರು ೩೦ ಪ್ರಾಚೀನ ಶಾಸ್ತ್ರಕೃತಿಗಳ ಅಧ್ಯಯನ ಮತ್ತು ತರಬೇತಿ ಇದಾಗಿರುತ್ತದೆ. ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಹಿತ ಅನೇಕ ವಿದ್ವಾಂಸರ ವಿಶೇಷ ಸಂದರ್ಶನ, ಶಾಸ್ತ್ರರಂಗ ವಿಶೇಷ ಯುಟ್ಯೂ ಬ್ ಸರಣಿಗಳ ಕಾರ್ಯಕ್ರಮದ ಚಾಲನೆ, G20 summitಗಳಲ್ಲಿ ಸಂಘಟಿಸಲ್ಪಟ್ಟಿದ್ದ IKS Division  stall  ಗಳಲ್ಲಿ ನೂಪುರ ಭ್ರಮರಿಯ ಅಧ್ಯಯನಾರ್ಥಿಗಳ ವಿಶೇಷ ಪೋಸ್ಟರ್ ಗಳ ಪ್ರದರ್ಶನ, ಹಾಗೂ G20 summit ಗೆಂದೇ ಭಾರತ ಶಿಕ್ಷಣ ಸಚಿವಾಲಯದಿಂದ ತಯಾರಿಸಲಾಗಿದ್ದ  ಭಾರತೀಯ ಸಂಸ್ಕೃತಿ ಗುರುಕುಲ ಪರಂಪರೆಗಳ ಕುರಿತ ವಿಶೇಷ ಡಾಕ್ಯುಮೆಂಟರಿಗಾಗಿ ಹೊಯ್ಸಳೇಶ್ವರ ಹಳೇಬೀಡು ದೇವಾಲಯದಲ್ಲಿ ಸಂಸ್ಥೆಯ ಸಹಸಂಶೋಧಕಿ ಡಾ. ದ್ವರಿತಾ ವಿಶ್ವನಾಥರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ನರ್ತನ  ಮತ್ತುಮತ್ತು ಸಂಪಾದಕಿ ಡಾ. ಮನೋರಮಾ ಅವರ ವಿಶೇಷ ಸಂದರ್ಶನಗಳ ಪ್ರಸಾರ- ಮೊದಲಾದವು ಮುಖ್ಯವಾದ ಕಾರ್ಯಕ್ರಮಗಳಾಗಿದ್ದವು.

೧೮ನೇ ವರ್ಷ : ೨೦೨೪ ರಲ್ಲಿ ನಟುವಾಂಗ, ನಾಟ್ಯಶಾಸ್ತ್ರ ಕರಣ ಲಕ್ಷಣ ಮೊದಲಾದ ಕೋರ್ಸ್ಗಳು ನಡೆಯುತ್ತಿವೆ. ತಾಲಾಂತರಂಗ  ನರ್ಮ ನಟುವಾಂಗ ಪುಸ್ತಕ, ದೆಹಲಿಯಲ್ಲಿ  ಶಿಕ್ಷಣ ಸಚಿವಾಲಯದ NEP ೪ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ  ಶೋಧ ವಿಜಯ ಸಂಶೋಧನ ಲೇಖನಗಳ ಇ ಬುಕ್ ನ ಅನಾವರಣದ  ಮೈಲಿಗಲ್ಲುಗಳೇ ಇವೆ.  ಜೊತೆಗೆ ಜನವರಿ, ೯, ೨೦೨೪ರಂದು ವಿಜಯನಗರ ಕರ್ನಾಟ ಸಾಮ್ರಾಜ್ಯದ ಗಂಗಾದೇವಿಯ ಮಧುರಾ ವಿಜಯ ಕಾವ್ಯವನ್ನು ಮೊದಲ ಬಾರಿಗೆ ಯಕ್ಷಗಾನದಲ್ಲಿ ಪ್ರಸಂಗವಾಗಿಸಿ ಬೆಂಗಳೂರಿನ ಯುವಪಥ ಸಭಾಂಗಣದಲ್ಲಿ  ಪ್ರದರ್ಶಿಸಿದ ಕೀರ್ತಿಯೂ ಇದೆ. ಈ ಕಾರ್ಯಕ್ರಮದಲ್ಲಿ ಐ ಜಿ ಎನ್ ಸಿ ಎ ಯ ಬೆಂಗಳೂರು ವಲಯದ ಅಧ್ಯಕ್ಷರಾದ  ಶ್ರೀ  ಡಿ. ಮಹೇಂದ್ರ, ನಾಟ್ಯಾಚಾರ್ಯೆ ವೀಣಾಕಾರಂತ್, ಪ್ರಸಿದ್ಧ ಲೇಖಿಕೆ ಹಾಗೂ ವಿಭು ಅಕಾಡೆಮಿಯ ಮುಖ್ಯಸ್ಥೆ ಡಾ. ಆರತಿ ವಿ ಬಿ ಮತ್ತು ಕರ್ನಾಟಕ ಆರ್ ಎಸ್ಸೆಸ್ ನ ಪ್ರಾಂತೀಯ ವಿಭಾಗದ ಮುಖ್ಯಸ್ಥರಾದ ರಾಜೇಶ್ ಪದ್ಮಾರ್ ಅವರು ಮುಖ್ಯ ಅಭ್ಯಾಗತರಾಗಿ ಆಗಮಿಸಿ ಭಾಗವಹಿಸಿದ್ದರು. ಚಾಣಕ್ಯ ವಿಶ್ವವಿದ್ಯಾನಿಲಯ-IKS Division- ISEC ಮೊದಲಾದ ಸಂಸ್ಥೆಗಳ ಸಂಯೋಜನೆಗಳಲ್ಲಿ ೨೦೨೩-೨೪ ರ ಸಾಲಿನಲ್ಲಿ ವಿಶೇಷ ಶೋಧ ಪ್ರಬಂಧಗಳ ಮಂಡನೆಗಳು, ಶಾಸ್ತ್ರರಂಗ ಸರಣಿಗಳ  ಮೂಲಕ ಸುಮಾರು ೧೮೦ ಕ್ಕೂ ಹೆಚ್ಚಿನ  ಭಾರತೀಯ ಕಲಾ ಗ್ರಂಥಗಳ ಕುರಿತ  ೬೭ ಸಂಚಿಕೆಗಳ ನಿರಂತರ ಪ್ರಸಾರ, ಶಿಲ್ಪಗಳಿಂದ ಪ್ರೇರಣೆ ಪಡೆದ ಸೀರೆಯ ಉದ್ಯಮದ ಕುರಿತಾದ ಸಂಚಿಕೆಗಳು ಎಲ್ಲವೂ ಮುಖ್ಯವಾದ ಬೆಳವಣಿಗೆಗಳು.

ಈವರೆಗೆ ನೂಪುರ ಭ್ರಮರಿಯಿಂದ ಪ್ರಕಟಿಸಲ್ಪಟ್ಟ ಕೃತಿಗಳು

೧. ನೃತ್ಯಮಾರ್ಗಮುಕುರ  (ಕನ್ನಡ – ಭರತನಾಟ್ಯದ ಕಛೇರಿ ಮತ್ತು ಕಲಿಕೆಯ ಪದ್ಧತಿಗಳ ವಿಸ್ತೃತ ಸಂಶೋಧನೆ)

೨. ನೂಪುರಾಗಮ (ಕನ್ನಡ- ಇಂಗ್ಲೀಷ್- ನೃತ್ಯ ಸಂಶೋಧನ ಸಂಚಿಕೆ)

೩. ಭರತ ನಾಟ್ಯಬೋಧಿನಿ (ಕನ್ನಡ- ಸುಧಾರಿತ ನೃತ್ಯ ಪಠ್ಯ )

೪. ನಾಯಿಕಾಂತರಂಗ ( ಇಂಗ್ಲೀಷ್- ನಾಯಿಕಾ-ನಾಯಕಭೇದಗಳ ಸಂಶೋಧನೆ)

೫. ನಾಟ್ಯಾಯನ ( ಇಂಗ್ಲೀಷ್ – ನೃತ್ಯಸಂಶೋಧನೆಯ ಲೇಖನಗಳ ಸಂಕಲನ)

೬. ನಾರಾಯಣ ದರ್ಶನ ( ಅರ್ಚಕರ ಆತ್ಮಕಥನ ಮತ್ತು ಸಂಸ್ಮರಣಾ ಗ್ರಂಥ)

೭. ದೇವಾಲಯ ಶಿಲ್ಪಗಳ ನಾಟ್ಯಾಯಮಾನತೆ (ಕನ್ನಡ- ನೃತ್ಯಶಿಲ್ಪಗಳ ಕುರಿತ ಶೋಧಕೃತಿ)

೮. Shilpa Shodha Sangraha  (ಇಂಗ್ಲೀಷ್- ನೃತ್ಯಶಿಲ್ಪಯಾತ್ರೆಯ ಸಂಶೋಧನ ಲೇಖನಗಳ ಸಂಕಲನ)

೯. ತಾಲಾಂತರಂಗ- ನರ್ಮ ನಟ್ಟುವಾಂಗ ( ಕನ್ನಡ. ತಾಲ ಮತ್ತು ನಟ್ಟುವಾಂಗದ ಕುರಿತ ಅಧ್ಯಯನ ಕೃತಿ)

೧೦. ಶೋಧ ವಿಜಯ – ವಿಜಯನಗರ ಸಾಮ್ರಾಜ್ಯದ ಸಾಹಿತ್ಯ- ಕಲೆ-ಶಿಲ್ಪ- ನಾಟಕಗಳ ಕುರಿತ ಸಂಶೋಧನ ಲೇಖನಗಳ ಸಂಗ್ರಹ. ಭಾರತೀಯ ಶಿಕ್ಷಣ ಸಚಿವಾಲಯದ ಗಣ್ಯ ಮಂತ್ರಿಗಳಿಂದ ನವದೆಹಲಿಯಲ್ಲಿ ಜುಲೈ 2024ರಂದು ನಡೆದ ರಾಷ್ಟ್ರೀಯ ಶಿಕ್ಷಣ ನೀತಿಯ ನಾಲ್ಕನೇ ವಾರ್ಷಿಕೋತ್ಸವದಲ್ಲಿ ಅನಾವರಣಗೊಂಡಿದ್ದು ಸಚಿವಾಲಯದ ಅಂಗಸಂಸ್ಥೆಯಾದ ಐಕೆಎಸ್ ಡಿವಿಷನ್ ನ ವತಿಯಿಂದ ಉಚಿತವಾಗಿ ಓದಲು ಲಭ್ಯವಿದೆ.

ಕಳೆದ ೧೮ ವರ್ಷಗಳಲ್ಲಿ, ಕೆಲವೇ ಕೆಲವು ಸಂಚಿಕೆಗಳಲ್ಲೇ ಪ್ರಬುದ್ಧ ಗುರು-ಕಲಾವಿದರು, ಹೆಸರಾಂತ ವಿದ್ವಾಂಸರು, ಸಂಶೋಧಕರು ಮತ್ತು ಓದುಗರ ಹರಕೆ-ಹಾರೈಕೆ- ಆಶೀರ್ವಾದ -ಮಾನ್ಯತೆ ಪಡೆದಿರುವ ನೂಪುರ ಭ್ರಮರಿಯನ್ನು ಗಮನಿಸಿದರೆ ಗುಣಮಟ್ಟದ ಸಮಗ್ರ ಕಲ್ಪನೆ ಇದಿರು ನಿಲ್ಲುತ್ತದೆ.ಈಗಾಗಲೇ ಅದೆಷ್ಟೋ ಶಿಕ್ಷಣ ಸಂಸ್ಥೆಗಳು, ನೃತ್ಯ ವಿದ್ಯಾಲಯಗಳು ತಾವೇ ಸ್ವಾಗತವನ್ನಿತ್ತು ತೆರೆದ ಹೃದಯದಿಂದ ಸ್ವೀಕರಿಸಿವೆ.  ಒಂದು ನಿಯತಕಾಲಿಕೆಯಷ್ಟೇ ಆಗಿರದೆ ಪರಾಮರ್ಶನದ ಜರ್ನಲ್ ಆಗಿ, ಹಲವು ಮಂದಿ ವಿದ್ವಾಂಸರು ಕಾತರದಿಂದ ನಿರೀಕ್ಷಿಸಿ ಓದಲ್ಪಡುವ  ಪತ್ರಿಕೆಯಾಗಿ ಮೇಲಾಗಿ ಸಂಸ್ಥೆಯಾಗಿ ಬೆಳೆದಿದೆ. ಜೊತೆಗೆ ನೂಪುರ ಭ್ರಮರಿಯೆಂಬುದು ಈಗ ಸಂಶೋಧನಾ ಪ್ರತಿಷ್ಠಾನವೂ ಹೌದು, ನೃತ್ಯ ಸಂಶೋಧಕರ ನೆಲೆಯೂ ಹೌದು.ಪ್ರಕಾಶನಸಂಸ್ಥೆಯೂ ಹೌದು, ಅಧ್ಯಯನ ಕೇಂದ್ರವೂ ಹೌದು. ಇವೆಲ್ಲವೂ ಸಾಧ್ಯವಾಗುತ್ತಿರುವುದು ಶ್ರಮ, ಸಹಕಾರ, ಪ್ರೋತ್ಸಾಹದಿಂದ. ನಿಮ್ಮ ಬೆಂಬಲ ಅನವರತ ನಮ್ಮನ್ನು ಕಾಯಲಿ.


ನೂಪುರ ಭ್ರಮರಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರು

ಕೀರ್ತಿಶೇಷ ವೇದಮೂರ್ತಿ ಬಿ.ಜಿ. ನಾರಾಯಣ ಭಟ್ :

ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಅರ್ಚಕರೂ, ಸಮಿತಿ ಸದಸ್ಯರೂ ಆಗಿ 55 ವರ್ಷಗಳ  ದೀರ್ಘಕಾಲವನ್ನು ಸೇವೆ ಗೆಂದೇ ಮುಡಿಪಿಟ್ಟವರು ಕೀರ್ತಿಶೇಷ ವೇದಮೂರ್ತಿ ಬಿ.ಜಿ. ನಾರಾಯಣಭಟ್. ಅವರ ಬದುಕು ಭರೆಹ ಭಾವಗಳ ಕುರಿತ ಸಂಕಥನವನ್ನು ೨೦೨೦ರ ಅಕ್ಟೋಬರ್ ೫ ರಂದು ನೂಪುರ ಭ್ರಮರಿಯು ಪ್ರಕಟಿಸಿದೆ.

ಶ್ರೀಯುತ ನಾರಾಯಣ ಭಟ್ಟರು ಸರಳ ಸಜ್ಜನಿಕೆಯ, ವಿದ್ವತ್ ಪೂರ್ಣ ನೆಲೆಗಟ್ಟಿನ ವಿಮರ್ಶಕರು, ಸಹೃದಯಿ ಬರೆಹಗಾರರು,  ಸೃಷ್ಟಿಶೀಲ ಮನಸ್ಸಿನ ಕಲಾವಿದರು, ಹಿರಿಯ ಚಿಂತಕರು, ಮುಕ್ತ ಮನಸ್ಸಿನ ಹೋರಾಟಗಾರರು ಹಾಗೂ ಜನ ಮಾನಸಕ್ಕೆ ಹತ್ತಿರದ ಪಂಡಿತರು ಆಗಿದ್ದವರು. ಮೂಲತಃ ದಕ್ಷಿಣ ಕನ್ನಡದ ಪಂಜಗ್ರಾಮದ ಬರ್ಲಾಯಬೆಟ್ಟು  ಎಂಬ ಪೌರೋಹಿತ್ಯ ಮನೆತನಕ್ಕೆ ಸೇರಿದ  ಇವರು ಕಡು ಬಡತನದಲ್ಲಿ ಬೆಳೆದು ಬಂದ ಶ್ರಮಜೀವಿ.  ಇವರು ನೂಪುರ ಭ್ರಮರಿ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರು ಮತ್ತು ಪತ್ರಿಕೆಯ ಕಛೇರಿ ವ್ಯವಸ್ಥೆ ನಿರ್ವಹಣೆ ಹೊತ್ತವರು. ಮಡಿಕೇರಿಯ ಹಾಲೇರಿ ರಾಜ ಮನೆತನಕ್ಕೆ ಇವರ ಪೂರ್ವಿಕರು ರಾಜಪುರೋಹಿತರಾಗಿ ಸೇವೆ ಸಲ್ಲಿಸಿ ಸನ್ಮಾನ-ಮಾನಪತ್ರ-ಉಂಬಳಿ ಭೂಮಿ-ಪ್ರಶಸ್ತಿ ಬಿರುದಾವಳಿಗಳಿಂದ ಶೋಭಿತರಾಗಿದ್ದಾರೆ. ಇವರು ತಮ್ಮ ನಿಧನ ಕಾಲದವರೆಗೂ ಅಂದರೆ ಸೆಪ್ಟೆಂಬರ್ 18, 2019 ರ ವರೆಗೂ ಟ್ರಸ್ಟ್ ನ್ನು ಮುನ್ನಡೆಸಿ ಅದರ ಪುರೋಭಿವೃದ್ಧಿಗೆ ಕಾರಣರಾಗಿದ್ದಾರೆ.

—-

 

ನೂಪುರ ಭ್ರಮರಿಯ ಪ್ರಾಚಾರ್ಯೆ/ನಿರ್ದೇಶಕಿ/ ಮುಖ್ಯಸಂಶೋಧಕರು/ಸಂಪಾದಕರು :

 ಡಾ. ಮನೋರಮಾ ಬಿ. ಎನ್.manorama

ಡಾ. ಮನೋರಮಾ ಬಿ.ಎನ್ ಕಲಾಸಂಶೋಧಕರು; ನೃತ್ಯವಿಮರ್ಶಕರು, ಸಂಶೋಧಕ ಬರೆಹಗಾರರು, ನೂಪುರ ಭ್ರಮರಿ ನೃತ್ಯ ಸಂಶೋಧನಾ ನಿಯತಕಾಲಿಕೆಯ ಮತ್ತು ಪ್ರತಿಷ್ಠಾನದ ಸಂಸ್ಥಾಪಕರು ಸಂಪಾದಕರು. ಭರತನಾಟ್ಯ-ಯಕ್ಷಗಾನ-ರೂಪಕ ಕಲಾವಿದೆ; ನೃತ್ಯ-ಯಕ್ಷಗಾನಾದಿ ಕಾರ್ಯಕ್ರಮಗಳ ಸಂಘಟಕಿ, ಸಂಯೋಜಕಿ. ಸ್ವತಃ ನೃತ್ಯಸಂಬಂಧಿತ ಅನೇಕ ವಿಶಿಷ್ಟ ಸಾಹಿತ್ಯಕೃತಿಗಳನ್ನು ಬರೆದಿರುವ ಕವಿಯೂ ಹೌದು. ಅನೇಕ ಮೌಲಿಕ ನೃತ್ಯಪುಸ್ತಕಗಳ ಪ್ರಕಾಶಕರೂ ಹೌದು.

ಅನೇಕ ಪ್ರಶಸ್ತಿ ಸನ್ಮಾನ ಪುರಸ್ಕೃತರು. ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಕರ್ನಾಟಕವಷ್ಟೇ ಅಲ್ಲದೆ ಆಂಧ್ರ, ಓಡಿಶಾ, ತಮಿಳುನಾಡು ಇತ್ಯಾದಿ ರಾಜ್ಯಗಳಿಗೂ ಉದ್ದಗಲಕ್ಕೂ ನೃತ್ಯಸಂಶೋಧನೆ ಮತ್ತು ಕ್ಷೇತ್ರಕಾರ್ಯಗಳಿಗೆ ಸಂಚರಿಸಿದ್ದಾರೆ.  ಕರ್ನಾಟಕ ಮತ್ತು ಭಾರತಸರ್ಕಾರದ ಫೆಲೋಶಿಪ್ ಗಳನ್ನು ಪಡೆದಿರುವ  ಇವರ ಮುಂದಾಳತ್ವದಲ್ಲಿ ಹಾಗೂ ಆಯೋಜಕತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೃತ್ಯಸಂಶೋಧನ ಸಮ್ಮೇಳನ, ಅನೇಕ ಕಾರ್ಯಾಗಾರ, ನೃತ್ಯ ಮತ್ತು ಯಕ್ಷಗಾನ ವಿಚಾರಸಂಕಿರಣಗಳು ಜರುಗುತ್ತಲೇ ಬಂದಿವೆ. ನಾಟ್ಯಶಾಸ್ತ್ರ, ಅಲಂಕಾರ ಶಾಸ್ತ್ರ, ನಾಯಿಕಾಭೇಧ, ನೃತ್ಯಸಂಶೋಧನೆ ಮತ್ತು ನಟ್ಟುವಾಂಗ, ಸಾಂಸ್ಕೃತಿಕ ಪತ್ರಿಕೋದ್ಯಮ ಮುಂತಾಗಿ ಸುಮಾರು ೧೧ ಬಗೆಯಾಗಿ  ನೃತ್ಯ ಕೋರ್ಸ್ ಗಳನ್ನು ನಡೆಸುತ್ತಾ ಬಂದಿದ್ದಾರೆ.

ಇವರ ೫೦೦ಕ್ಕೂ ಮಿಗಿಲು ಸಂಶೋಧನ ಲೇಖನಗಳು, ಗಣ್ಯ ಕಲಾವಿದರ ಸಂದರ್ಶನ, ಬಿಡಿಬರೆಹಗಳು, ಅಂಕಣಗಳು, ವಿಶೇಷ ಲೇಖನಗಳು ಪತ್ರಿಕೆ, ನಿಯತಕಾಲಿಕೆ, ಪುಸ್ತಕ, ಸಂಶೋಧನ ಸಂಚಿಕೆ, ವಿಶೇಷಾಂಕಗಳಲ್ಲಿ ಬೆಳಕು ಕಾಣುತ್ತಲೇ ಇವೆ. ವಿವಿಧ ವಿಶ್ವವಿದ್ಯಾನಿಲಯಗಳ ಮತ್ತು ಪ್ರತಿಷ್ಠಿತ ಸಂಸ್ಥೆಗಳ ಜಾಗತಿಕ ಮತ್ತು ರಾಷ್ಟ್ರೀಯ ವಿಚಾರಸಂಕಿರಣ ಮತ್ತು ಸಮ್ಮೇಳನಗಳಲ್ಲಿ ಶೋಧಪ್ರಬಂಧಗಳನ್ನು ಮಂಡಿಸಿದ್ದಾರೆ.  ಹಲವು ವಾರ್ಷಿಕ ಸಂಚಿಕೆಗಳ ಸಂಪಾದಕತ್ವದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅತಿಥಿ ಅಂಕಣಗಾರ್ತಿಯಾಗಿ, ಪತ್ರಿಕೆಗಳಿಗೆ ಆಹ್ವಾನಿತ ಬರಹಗಾರರಾಗಿ, ಮುಖಪುಟ ವಿಚಾರಗಳ ಲೇಖಕರಾಗಿ, ಹಲಕೆಲವು ಕಲಾಸಂಘಟನೆಗಳ ಸಕ್ರಿಯ ಸದಸ್ಯರಾಗಿ ಕೂಡಾ  ಸಾಹಿತ್ಯ- ಕಲಾ ವಲಯದಲ್ಲಿ ಸುಪರಿಚಿತರು. ದೇವಾಲಯ ಕಲೆ-ಸಾಹಿತ್ಯ-ಪರಂಪರೆಗಳ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಾ ಬಂದಿದ್ದಾರೆ. ಹಾಗೂ ಎಷ್ಟೋ ವಿದ್ಯಾರ್ಥಿಗಳ ಸಂಶೋಧನ ಭವಿಷ್ಯದಲ್ಲಿ ಮಾರ್ಗದರ್ಶಕಿಯಾಗಿ ಗುರುತರವಾದ ಪಾತ್ರ ನಿರ್ವಹಿಸಿದ್ದಾರೆ. ಇವರ ಹೆಚ್ಚಿನ ವಿವರಗಳು ಕೆಳಗಿನಂತಿವೆ.

 ಇವರ ರಚನೆಯ  ೧೧ ಕೃತಿಗಳು :

೧. ಭವ್ಯ ಇತಿಹಾಸದ ಶ್ರೀ ಓಂಕಾರೇಶ್ವರ ದೇವಾಲಯ ಎಂಬ ಸ್ಥಳಪುರಾಣ-ಐತಿಹಾಸಿಕ ನೆಲೆಯನ್ನು ವಿವೇಚಿಸುವ ಪುಸ್ತಕ (೨೦೦೪)

೨. ‘ಮುದ್ರಾರ್ಣವ’ – ಹಸ್ತ ಮುದ್ರೆಗಳ ಬಹು‌ ಆಯಾಮಗಳ ಕೃತಿ (೨೦೧೦).

೩. ‘ನೃತ್ಯಮಾರ್ಗಮುಕುರ’- ಭರತನಾಟ್ಯದ ಇತಿಹಾಸ, ನೃತ್ಯಾಂಗಗಳು, ಮಾರ್ಗಪದ್ಧತಿಯ ಪರಂಪರೆ, ಪದ್ಧತಿಗಳನ್ನು ವಿವೇಚಿಸುವ ಸಂಶೋಧನ ಕೃತಿ (೨೦೧೧)

೪. ‘ಮಹಾಮುನಿಭರತ’- ನಾಟ್ಯಶಾಸ್ತ್ರದ ಭರತಮುನಿಯ ಕಾಲ-ನೆಲೆ-ಹಿನ್ನೆಲೆಯ ಸಹಿತ ನಾಟ್ಯಶಾಸ್ತ್ರದ ಅಧ್ಯಯಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಪುಸ್ತಿಕೆ ( ೨೦೧೪) ಪರಿಷ್ಕೃತ ಆವೃತ್ತಿ (೨೦೨೪)

೫. ‘ನಂದಿಕೇಶ್ವರ’,- ನಂದಿಕೇಶ್ವರನ ಸಂಬಂಧ ಬಂದಿರುವ ಪ್ರಪ್ರಥಮ ಕನ್ನಡ ಕೃತಿ. ಭಾರತದಲ್ಲಿನ ನಂದಿಕೇಶ್ವರ ಸಂಪ್ರದಾಯ, ನಂದಿಯ ಸಂಬಂಧವಾದ ವೇದ-ಪುರಾಣ-ಆಗಮ-ತಂತ್ರ-ಮಂತ್ರ-ವ್ರತವಿಧಾನ-ದಾನಕ್ರಮ-ಜನಜೀವನ-ನೃತ್ಯಶಾಸ್ತ್ರ- ಮತ್ತು ಇದು ಅಭಿನಯದರ್ಪಣ ಮತ್ತು ಭರತಾರ್ಣವವೆಂಬ ನೃತ್ಯಲಕ್ಷಣಗ್ರಂಥಗಳ ಗುಣ ಕಥನ ವ್ಯಾಖ್ಯಾನವನ್ನೂ ಒಳಗೊಂಡಿದೆ. (೨೦೧೬)

೬. ‘ಭರತನಾಟ್ಯಬೋಧಿನಿ’- ಭರತನಾಟ್ಯದ ಎಲ್ಲಾ ಬಗೆಯ ಪರೀಕ್ಷೆಗಳಿಗೆ ಒದಗಿ ಬರುವಂಥ ಸಂಶೋಧನಾಧಾರಿತ ಪಠ್ಯಪುಸ್ತಕ ( ಸಮಿತಿಯಿಂದೊಡಗೂಡಿ ಇಂಗ್ಲೀಷ್ ಅನುವಾದದ ಸಹಿತ ಲಭ್ಯ)

೭.  ’ಯಕ್ಷನೂಪುರ’ – ಯಕ್ಷಗಾನದ ಕುರಿತಾದ ಅನೇಕ ಸಂಶೋಧನಾ ಅಧ್ಯಯನಗಳ ಕೃತಿ (೨೦೨೧)

೮.  ’ಯಕ್ಷಮಾರ್ಗಮುಕುರ’ – (ಭಾರತದ ನಾಟ್ಯ-ನೃತ್ತ-ನೃತ್ಯಗಳ ಆಂಗಿಕಾಭಿನಯದ ಸಂಶೋಧನ ಉದ್ಗ್ರಂಥ -೨೦೨೨)

೯.  ’ದೇವಾಲಯ ಶಿಲ್ಪಗಳ ನಾಟ್ಯಾಯಮಾನತ” (ಕನ್ನಡ- ನೃತ್ಯಶಿಲ್ಪಗಳ ಕುರಿತ ಶೋಧಕೃತಿ- ೨೦೨೨)

೧೦. ಯಕ್ಷಾಂಗನಾ – ( ಯಕ್ಷಗಾನದ ಸ್ತ್ರೀಪಾತ್ರಗಳು ಮತ್ತು ನಾಯಿಕಾಭಿವ್ಯಕ್ತಿಯ ಕುರಿತ ಶೋಧಕೃತಿ- ೨೦೨೩).

೧೧.  ’ತಾಲಾಂತರಂಗ- ನರ್ಮ ನಟುವಾಂಗ’ (ಕರ್ನಾಟಕದ ಮೊದಲ ನಟುವಾಂಗ ಅಧ್ಯಯನ  ಮತ್ತು ಸುಮಾರು ಸಾವಿರ ವರ್ಷಗಳ ತಾಲ ಅಧ್ಯಯನದ ಕೃತಿ- ೨೦೨೩-೨೪)

ಈ ಪೈಕಿ ನೃತ್ಯಮಾರ್ಗಮುಕುರಕ್ಕೆ ಕರ್ನಾಟಕ ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಅನುದಾನ ದೊರಕಿದೆ.  ’ಯಕ್ಷಮಾರ್ಗಮುಕುರ”ಭಾರತೀಯ ನೃತ್ತ ನೃತ್ಯ ನಾಟ್ಯಗಳ ಕುರಿತಾದ ಆಂಗಿಕಾಭಿನಯವನ್ನು ದರ್ಶಿಸುವ 900 ಪುಟಗಳ ಉದ್ಗ್ರಂಥ.  ಇದು ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಂದ ಅನೇಕ ಗಣ್ಯರ ನಡುವೆ ಅನಾವರಣಗೊಂಡು ಮಾನ್ಯವಾಗಿದೆ. ಈ ಗ್ರಂಥದ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರವು ಒಂದು ದಿನದ ವಿಚಾರಸಂಕಿರಣವನ್ನೂ 2022ರಲ್ಲಿ ಸಂಘಟಿಸಿತ್ತು. ಐಜಿಎನ್ ಸಿಎ ಸಂಸ್ಥೆಯು ಈ ಪುಸ್ತಕದ ಬಗ್ಗೆ ವಿಶೇಷ ಸಂವಾದ ಪರಿಚಯ ಕಾರ್ಯಕ್ರಮವನ್ನೂ ಏರ್ಪಡಿಸಿತ್ತು. ಈ ಗ್ರಂಥಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನೀಡುವ ಕೀರ್ತಿಶೇಷ ಬಸವಪ್ಪ ಶಾಸ್ತ್ರಿಗಳ ಅಂಕಿತದ ಗ್ರಂಥ ಪುರಸ್ಕಾರ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ 2024ರಲ್ಲಿ ಸಂದಿದೆ.

 ಇವರ ೫ ಸಂಪಾದಿತ ಕೃತಿಗಳು:

  1. ‘ನೂಪುರಾಗಮ’ – ೨೦೧೩
  2. ‘ನಾರಾಯಣದರ್ಶನ’ – ೨೦೨೦
  3. ‘ಭಾರತೀಯ ನಾಟ್ಯಸಂಪ್ರದಾಯಗಳು ಮತ್ತು ಯಕ್ಷಗಾನ – ೨೦೨೧
  4. Shilpa Shodha Sangraha  – ನೃತ್ಯಶಿಲ್ಪಯಾತ್ರೆಯ ಸಂಶೋಧನ ಲೇಖನಗಳ ಸಂಕಲನ- ೨೦೨೩
  5. ಶೋಧ ವಿಜಯ/ Shodha Vijaya- ೨೦೨೪  (ಈ Bi-lingual ಸಂಪಾದಿತ ಸಂಶೋಧನ ಕೃತಿಯು ಭಾರತೀಯ ಶಿಕ್ಷಣ ಸಚಿವಾಲಯದ ಗಣ್ಯ ಮಂತ್ರಿಗಳಿಂದ ನವದೆಹಲಿಯಲ್ಲಿ ಜುಲೈ 2024ರಂದು ನಡೆದ ರಾಷ್ಟ್ರೀಯ ಶಿಕ್ಷಣ ನೀತಿಯ ನಾಲ್ಕನೇ ವಾರ್ಷಿಕೋತ್ಸವದಲ್ಲಿ ಅನಾವರಣಗೊಂಡಿದ್ದು ಸಚಿವಾಲಯದ ಅಂಗಸಂಸ್ಥೆಯಾದ ಐಕೆಎಸ್ ಡಿವಿಷನ್ ನ ವತಿಯಿಂದ ಉಚಿತವಾಗಿ  ಇ ಬುಕ್ ಆಗಿ ಓದಲು ಲಭ್ಯವಿದೆ.)

ಬಾಲ್ಯ-ವಿದ್ಯಾಭ್ಯಾಸ

ಬಾಲ್ಯದಿಂದಲೂ ಸಾಹಿತ್ಯ, ಕಥೆ-ಕಾವ್ಯ, ಸಂಗೀತ, ನೃತ್ಯ, ರಂಗಭೂಮಿ, ವಿವಿಧ ಕ್ಷೇತ್ರದ ಅಧ್ಯಯನಗಳಲ್ಲಿ ಬಹುಮುಖ ಪ್ರತಿಭಾವಂತೆಯಾಗಿ ರಾಷ್ತ್ರೀಯ-ರಾಜ್ಯಮಟ್ಟದ ಅನೇಕ ವೇದಿಕೆಗಳಲ್ಲಿ ಮನ್ನಣೆ, ಪ್ರಶಸ್ತಿ-ಪುರಸ್ಕಾರ ಪಡೆದವರು. ಮಡಿಕೇರಿಯ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿ ಪ್ರತಿಶತ ೧೦೦% ಅಂಕಕ್ಕೆ ಕೊಡಗಿಗೇ ಪ್ರಥಮಸ್ಥಾನ ಪಡೆದು ಪ್ರತಿಷ್ಠಿತ ಪ್ರಶಸ್ತಿಗಳನ್ನು, ಚಿನ್ನದ ಪದಕವನ್ನು ಪಡೆದವರು.

ಇವರ ತಂದೆ ಮಡಿಕೇರಿಯ ಪ್ರಸಿದ್ಧ ಪುರೋಹಿತರಾದ ಬಿ.ಜಿ. ನಾರಾಯಣ ಭಟ್ ; ತಾಯಿ ಬಿ.ಎನ್ ಸಾವಿತ್ರಿ. ಇವರ ಕುಟುಂಬದ ಪೂರ್ವಿಕರು ಮಡಿಕೇರಿಯ ಲಿಂಗರಾಜನ ಆಸ್ಥಾನಪುರೋಹಿತರಾಗಿ ಸೇವೆ ಸಲ್ಲಿಸಿದವರು.

ಮನೋರಮಾ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪತ್ರಿಕೋದ್ಯಮ, ಇಂಗ್ಲೀಷ್ ಮತ್ತು ಮನಃಶಾಸ್ತ್ರದಲ್ಲಿ ಪದವಿ ಪೂರೈಸಿದರು. ನಂತರದಲ್ಲಿ ಸಮೂಹ ಸಂವಹನ-ಪತ್ರಿಕೋದ್ಯಮ ಹಾಗೂ ಭರತನಾಟ್ಯ-ಇವೆರಡರಲ್ಲೂ ಸ್ನಾತಕೋತ್ತರ ಪದವಿ ಪಡೆದು; ‘ಭರತನಾಟ್ಯದ ಸಾಮಾಜಿಕ ಸಂವಹನ ಸಾಧ್ಯತೆಗಳ’ ಕುರಿತು ಪಿ‌ಎಚ್‌ಡಿ ಉನ್ನತ ವ್ಯಾಸಂಗ ಪೂರೈಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರ ಸ್ನಾತಕೋತ್ತರ ಪ್ರೌಢಪ್ರಬಂಧವು ಇನ್ನೂ ಹೆಚ್ಚಿನ ಅಧ್ಯಯನದಲ್ಲಿ ಪ್ರಕಟಿತ ಸಂಶೋಧನ ಕೃತಿಯಾಗಿದೆ.

ದೂರದರ್ಶನ, ಟಿವಿ ಚಾನೆಲ್, ಆಕಾಶವಾಣಿಗಳಲ್ಲಿ ಇವರ ಕಾರ್ಯಕ್ರಮ, ಸಂದರ್ಶನಗಳು ಬಾಲ್ಯದಿಂದಲೂ ನಿರಂತರ ಪ್ರಸಾರವಾಗುತ್ತಲೇ ಬಂದಿವೆ. ಸಂಗೀತ-ನೃತ್ಯ ಪರೀಕ್ಷೆಗಳಲ್ಲಿ ಕೊಡಗಿಗೇ ಪ್ರಥಮಸ್ಥಾನ ಹೊಂದಿದವರು; ಕರ್ನಾಟಕದ ಮೊದಲ ರಿಯಾಲಿಟಿ ಶೋ ದೂರದರ್ಶನದ ‘ನಿತ್ಯೋತ್ಸವ’ ಭಾವಗೀತೆಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಸುಗಮಸಂಗೀತ ಕ್ಷೇತ್ರದ ಗಣ್ಯರಿಂದ ಮನ್ನಣೆ ಪಡೆದವರು.

ಸಂಗೀತ, ಸುಗಮ ಸಂಗೀತದಲ್ಲೂ ಮನೋರಮಾ ಅವರ ಸಾಧನೆ ಬಾಲ್ಯದಿಂದಲೇ ಸುವಿಖ್ಯಾತಿ. ಬಾಲ್ಯದಿಂದಲೇ ಭಾಷಣ, ಚರ್ಚೆ, ಪ್ರಬಂಧ, ಆಶುಭಾಷಣ, ಕಥೆ-ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಹಳಷ್ಟು ಬಹುಮಾನಗಳನ್ನು, ಚಿನ್ನ-ಬೆಳ್ಳಿ ಪದಕಗಳನ್ನು ಬಾಚಿಕೊಂಡಿರುವ ಇವರು, ಸಾಹಿತ್ಯ ಕೃಷಿಯಲ್ಲಿ ಸದಾ ನಿರತರರು; ಕಾರ್ಯಕ್ರಮ ನಿರೂಪಣೆಯಲ್ಲೂ ಸಿದ್ಧಹಸ್ತರು.

ಮನೋರಮಾರಿಗೆ ಮೊದಲ ನೃತ್ಯ  ಆಚಾರ್ಯೆ ಮಡಿಕೇರಿಯಲ್ಲಿ ನಾಟ್ಯನಿಕೇತನ ಸಂಸ್ಥೆಯನ್ನು ಆರಂಭಿಸಿದ ವಿದುಷಿ ವೀಣಾ ಕಾರಂತ್. ಕರ್ನಾಟಕ ಸಂಗೀತವನ್ನು ವಿದುಷಿಯರಾದ ಶ್ರೀಮತಿ ಸುಧಾಶ್ರೀಧರ್, ಶಾಂತಾಬಾಯಿ ಮತ್ತು ಸೌಮ್ಯಾ ಕೌಶಿಕ್ ಅವರಲ್ಲಿ ಪಡೆದರು.  ಮನೋರಮಾ ಅವರಿಗೆ ಹಲವು ಸಂಗೀತ- ನೃತ್ಯಸಂಯೋಜನೆ ಮಾಡಿರುವ ಅನುಭವವಷ್ಟೇ ಅಲ್ಲದೆ, ಸಂಪನ್ಮೂಲ ವ್ಯಕ್ತಿಯಾಗಿಯೂ, ತೀರ್ಪುಗಾರಾಗಿಯೂ, ನೃತ್ಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ನೃತ್ಯ ಸಮಾರಂಭಗಳಲ್ಲಿ ಇವರು ನಿರ್ವಹಿಸುವ ಅಚ್ಚುಕಟ್ಟಾದ, ಆಕರ್ಷಕ ನಿರೂಪಣೆ ಜನಮನದ ಮನ್ನಣೆ ಗಳಿಸಿದರೆ, ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿಯ ಜೊತೆಗೆ, ಜಿಲ್ಲಾ ಮತ್ತು ವಿಶ್ವವಿದ್ಯಾನಿಲಯದ ಭರತನಾಟ್ಯ ಸ್ಪರ್ಧೆಗಳಲ್ಲೆಲ್ಲಾ ಬಹುಮಾನಗಳನ್ನು ಪಡೆದಿರುವ ಇವರನ್ನು ಹಲವು ಸನ್ಮಾನಗಳೂ ಅರಸಿ ಬಂದಿವೆ.

ಯಕ್ಷಗಾನ, ತಾಳಮದ್ದಳೆ ಕಲಾವಿದ ಉಜಿರೆ ಅಶೋಕ ಭಟ್ ಅವರ ಗರಡಿಯಲ್ಲಿ ಉಜಿರೆಯ ’ಯಕ್ಷಕೂಟ’ದಲ್ಲಿ ಮನೋರಮಾ ತೆಂಕುತಿಟ್ಟು ಯಕ್ಷಗಾನದ ಕೌಶಲ್ಯಗಳನ್ನು ಕಲಿತವರು. ಇವರ ಅನೇಕ ಪಾತ್ರ/ವೇಷಗಳು ಮನ್ನಣೆಗೆ ಪಾತ್ರವಾಗಿದೆ. ಏಕಪಾತ್ರಾಭಿನಯ, ಮೂಕಾಭಿನಯ, ಕಿರುನಾಟಕಗಳನ್ನು ನಿರ್ದೇಶಿಸಿದ ಅನುಭವ, ಪ್ರದರ್ಶನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ಮನೋರಮಾರಿಗೆ ಪ್ರಶಸ್ತಿಗಳೂ ಸಂದಿವೆ. ಎಸ್.ಎಲ್.ಭೈರಪ್ಪ ಅವರ ’ಮಂದ್ರ’ ಕಾದಂಬರಿಯನ್ನಾಧರಿಸಿ ರಂಗಾಯಣ ನಿರ್ದೇಶಕ ಕಲಾಗಂಗೋತ್ರಿಯ ಡಾ. ಬಿ.ವಿ.ರಾಜಾರಾಮ್ ನಿರ್ದೇಶಿಸಿದ ನಾಟಕದಲ್ಲಿ ನರ್ತಕಿ ’ಮನೋಹರಿ ದಾಸ್’ ಪಾತ್ರ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ನಿರ್ದೇಶನದ ಭಾಸ ಮಹಾಕವಿಯ ಮಧ್ಯಮ ವ್ಯಾಯೋಗದ ಘಟೋತ್ಕಚ,  ಹಿಡಿಂಬಾ ಪಾತ್ರಗಳ ಸಹಿತ ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಡಾ. ಮನೋರಮಾ ಬಿ.ಎನ್ ಅವರ ಪತಿ ವಿಷ್ಣುಪ್ರಸಾದ್ ಎನ್ ಫೆಡರಲ್ ಬ್ಯಾಂಕ್‌ನಲ್ಲಿ ಹಿರಿಯ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಂಘಟನೆ

ಡಾ.ಮನೋರಮಾ, ಇವರೇ ಹುಟ್ಟುಹಾಕಿದ ‘ನೂಪುರ ಭ್ರಮರಿ’ – ಪ್ರತಿಷ್ಠಾನದ ಅಧ್ಯಕ್ಷೆ, ಕಳೆದ ೧೮ ವರುಷಗಳಿಂದ ಕಲಾದಿಗಂತದಲ್ಲಿ ತನ್ನದೇ ಆದ ಛಾಪು, ವಿದ್ವತ್ ವಲಯವನ್ನು ಹೊಂದಿದ ನೂಪುರ ಭ್ರಮರಿ  – ಸಂಸ್ಥೆಯ ಮ್ಯಾನಿಂಗ್ ಟ್ರಸ್ಟಿ,  ನೂಪುರ ಭ್ರಮರಿ ಐ ಕೆ ಎಸ್ ಸೆಂಟರ್ ನ ಸಂಶೋಧನ ವಿಭಾಗ ಮುಖ್ಯಸ್ಥೆ ಮತ್ತು ನಿರ್ದೇಶಕಿ, ನೂಪುರ ಭ್ರಮರಿ- ಸಂಶೋಧನ ನಿಯತಕಾಲಿಕೆ ಸಂಪಾದಕರು; ಪುಸ್ತಕ ಪ್ರಕಾಶಕರು; ನೃತ್ಯ ಸಂಶೋಧನಾ ವಿಭಾಗ ಮುಖ್ಯಸ್ಥೆ; . ರಾಜ್ಯ ಮಟ್ಟ(೨೦೧೨) ಮತ್ತು ರಾಷ್ಟ್ರಮಟ್ಟದ (೨೦೧೩) ಪ್ರಥಮ ನೃತ್ಯ ಸಂಶೋಧನ ಸಮ್ಮೇಳನ  ಹಾಗೂ  ಭಾರತದ ದಕ್ಷಿಣಪ್ರಾಂತ್ಯದ ನೃತ್ಯ ಸಂಶೋಧನ ವಿಚಾರಸಂಕಿರಣದ ಪ್ರಧಾನ ಸಂಚಾಲಕಿ ಹಾಗೂ ಆಯೋಜಕಿಯಾಗಿ ಮುನ್ನಡೆಸಿದವರು. ಇವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ‘ನೂಪುರ ಭ್ರಮರಿ’ ಐ‌ಎಸ್‌ಎಸ್‌ಎನ್ ನೋಂದಣಿಯನ್ನು ಪಡೆದ ಕಲಾಸಂಶೋಧನ ನಿಯತಕಾಲಿಕೆ. ೨೦೨೧ರಿಂದ ನೂಪುರಭ್ರಮರಿಯು Centre for Indian Knowledge systems accredited to IKS Division, a self under Ministry of Education AICTE wing ಆಗಿದೆ.

ಕಿರಿಯ ವಯಸ್ಸಿನಲ್ಲಿಯೇ ನೃತ್ಯ ಮತ್ತು ಸಾಮಾಜಿಕ ಸಂವಹನದ ಮೀಮಾಂಸೆಗಳ ಸಾಲಿನಲ್ಲಿ ಹೊಸ ಪ್ರಮೇಯಗಳನ್ನು ಸಿದ್ಧಪಡಿಸಿದವರು ಮನೋರಮಾ. ಇವರ ಡಾಕ್ಟರೇಟ್ ಪ್ರಬಂಧಕ್ಕೆ ಪೂರಕವಾಗಿ ಸಂಯೋಜಿತವಾದ ಸಾಮಾಜಿಕ ಸಂವಹನ ಉದ್ದೇಶಿತ ಭರತನಾಟ್ಯ ಪ್ರಯೋಗದ ಸಾಹಿತ್ಯಗಳು ಕನ್ನಡದಲ್ಲೇ ರಚಿತವಾಗಿ ಪ್ರದರ್ಶನ, ಪ್ರಶಂಸೆ ಕಂಡಿವೆ.

ನಾಟ್ಯಶಾಸ್ತ್ರವನ್ನೂ ಒಳಗೊಂಡಂತೆ ಹಲವು ಪುರಾತನ ಕೃತಿ, ತಾಳ, ಸಾಂಸ್ಕೃತಿಕ ಪತ್ರಿಕೋದ್ಯಮ, ಪುರಾಣಕಥಾಮಾಲಿಕೆ ಮತ್ತು ನೃತ್ಯಸಂಶೋಧನೆ ಮೊದಲಾಗಿ ಸುಮಾರು ೧೧ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆನ್‌ಲೈನ್ ಮತ್ತು ನೇರಾನೇರ ವೈಯಕ್ತಿಕವಾಗಿ ಆಯೋಜಿಸಿದ್ದಾರೆ.

ಇವರ ಮುಂದಾಳತ್ವದಲ್ಲಿ ನೂಪುರಭ್ರಮರಿ ಸಂಸ್ಥೆಯ ಮೂಲಕ ಕಲಾವಿಮರ್ಶಾಕ್ಷೇತ್ರಕ್ಕೆಂದೇ ಮೀಸಲಾದ ‘ವಿಮರ್ಶಾ ವಾಙ್ಮಯಿ’ ಪ್ರಶಸ್ತಿಯನ್ನು ಈವರೆಗೆ ನಾಡಿನ ಹಲವು ವಿಮರ್ಶಕರಿಗೆ ನೂಪುರ ಭ್ರಮರಿ ಪ್ರತಿಷ್ಠಾನದಿಂದ ನೀಡಲಾಗಿದೆ. ‘ನೂಪುರಕಲಾಕಲಹಂಸ’ ’ಸಹೃದಯ ಸದ್ರತ್ನ’, ’ಕಲಾಯೋಜನಕೌಶಿಕ’ ಪ್ರಶಸ್ತಿ ಹಾಗೂ ಅನೇಕ ಸನ್ಮಾನಗಳನ್ನೂ ವಿದ್ವಾಂಸ ಮತ್ತು ಕಲಾವಿದರಿಗೆ ಇತ್ತು ಗೌರವಿಸಿದೆ.

ಇವರು ಶೋಧಸರಣಿ, ಶ್ರವಣಸರಣಿ ಎಂಬ ಸಂಶೋಧನಾಧರಿತ ಯುಟ್ಯೂಬ್ ಕಾರ್ಯಕ್ರಮಗಳ ಪರಿಕಲ್ಪನೆಯನ್ನು ಮಾಡಿ ೨೦ ಕಂತುಗಳನ್ನು ನಿರೂಪಿಸಿ ನಿರ್ದೇಶಿಸಿದ್ದಾರೆ ; ಹಿರಿಯ ಮತ್ತು ಯುವ ಸಂಶೋಧಕರ  ಸಂಶೋಧನೆಗಳನ್ನು ಪ್ರಕಟಿಸಿದ್ದಾರೆ.  ಶಾಸ್ತ್ರರಂಗ  ಎಂಬ ಯೂಟ್ಯೂಬ್ ಸರಣಿಗಳ  ಮೂಲಕ ಸುಮಾರು ೧೮೦ ಕ್ಕೂ ಹೆಚ್ಚಿನ  ಭಾರತೀಯ ಕಲಾ ಗ್ರಂಥಗಳ ಕುರಿತ  ೬೭ ಸಂಚಿಕೆಗಳ ನಿರಂತರ ಪ್ರಸಾರ ಎಲ್ಲವೂ ಮನೋರಮಾ ಅವರ ಆಯೋಜನೆ- ಚಿಂತನೆಯ ಫಲಗಳಾಗಿವೆ.  ಕಳೆದ ಒಂದು ವರುಷದಿಂದ ಸತತವಾಗಿ ಶಾಸ್ತ್ರರಂಗ ಸಂಚಿಕೆಗಳು  ನೂಪುರಭ್ರಮರಿ ಯುಟ್ಯೂಬ್ ನಲ್ಲಿ ಪ್ರಸಾರವಾಗುತ್ತಿದ್ದು; ಭಾರತದ ಎಲ್ಲ ರಾಜ್ಯಗಳ ಪ್ರಾಚೀನ ಗ್ರಂಥಗಳ ಕುರಿತ ಸಮಗ್ರ ಸಂಶೋಧನ ಸಂಚಿಕೆಗಳಾಗಿರುವ ಇದಕ್ಕೆ ಬಹುಜನರ ಮನ್ನಣೆಯೂ ದೊರೆತಿದೆ. ಈ ಬಗೆಯ ಪ್ರಯತ್ನ ಮತ್ತು ಆಯೋಜನೆ ಭಾರತದಲ್ಲೇ ಸರ್ವಪ್ರಥಮವಾದುದು ಎಂಬುದೇ ವಿಶೇಷ. ಇವುಗಳು ಐಕೆಎಸ್ ವಿಕಿ ಎಂಬ ಅಂತರ್ಜಾಲ್ ಎಂಜಿನ್ ಗಳಲ್ಲಿ ಸಹಿತ ಲೇಖನರೂಪವಾಗಿ ಪ್ರಕಟಗೊಂಡಿವೆ.

ವೃತ್ತಿ, ಪ್ರವೃತ್ತಿ, ಸನ್ಮಾನ ಮತ್ತು ಮೈಲಿಗಲ್ಲುಗಳು

ಮನೋರಮಾ ಅವರು ಮೂರು ವರ್ಷಗಳ ಕಾಲ ಮಡಿಕೇರಿ, ಮಂಗಳೂರು ಮತ್ತು ಉಜಿರೆಯಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ವಿಷಯದಲ್ಲಿ ಬೋಧಕರಾಗಿದ್ದರು. ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾದ ಸಿನೆಮಾಗಳ ಸಬ್ಸಿಡಿ ಕುರಿತ ಅಧ್ಯಯನಕ್ಕೆ ಬೆಂಗಳೂರಿನ ಇಂಡಿಯನ್ ಸೋಶಿಯಲ್ ಅಂಡ್ ಇಕಾನಾಮಿಕ್ ಚೇಂಜ್ (ISEC) ಎಂಬ ಕೇಂದ್ರಸರ್ಕಾರದ ಸಂಸ್ಥೆಯಲ್ಲಿ ಸಂಶೋಧನ ಸಹಾಯಕಿಯಾಗಿ (೨೦೧೧-೨೦೧೨) ದುಡಿದಿದ್ದಾರೆ.  ಮತ್ತು ಅತಿಥಿ ಉಪನ್ಯಾಸಕಿಯಾಗಿ ಭಾರತದ ಸನಾತನ ಧರ್ಮ ಮತ್ತು ಸಂಪ್ರದಾಯಗಳ ವಿಷಯದಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದಲ್ಲಿ ೨೦೨೦ ನೇ ಸಾಲಿನಲ್ಲಿ  ಕಾರ್ಯ ನಿರ್ವಹಿಸಿರುತ್ತಾರೆ. ಮತ್ತು ಜೈನ್ ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾನಿಲಯ ಸಹಿತ ಕೆಲವು ನೃತ್ಯವಿಭಾಗದ ಅಧ್ಯಯನ ಮತ್ತು ಪರೀಕ್ಷ ಸಮಿತಿಗೆ ( BOS and BOE) ಪರೀಕ್ಷಕರಾಗಿದ್ದರು. ೨೦೨೪ರಲ್ಲಿ ಪುಣೆಯ MIT ವಿಶ್ವವಿದ್ಯಾನಿಲಯಕ್ಕೆ ಪಿ ಎಚ್ ಡಿ ವಿಭಾಗದ ಸಹ ಮಾರ್ಗದರ್ಶಕಿಯಾಗಿ ಆಯ್ಕೆಯಾಗಿದ್ದಾರೆ.

ಡಾ. ಮನೋರಮಾ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಫೆಲೊಶಿಪ್‌ಗೆ ಪ್ರಥಮ ವರ್ಷದಲ್ಲೇ ಪಾತ್ರರಾಗಿ ‘ಕರ್ನಾಟಕದ ನಟುವಾಂಗ ಪರಂಪರೆಯ’ ಕುರಿತು ೨೫೦ ಪುಟಗಳ ಸಂಶೋಧನೆಯನ್ನು(೨೦೧೨) ಕರ್ನಾಟಕದಲ್ಲೇ ಮೊದಲ ಬಾರಿಗೆ ಸ್ವತಃ ಸಿದ್ಧಪಡಿಸಿ ಸಲ್ಲಿಸಿದವರು. ’ಕರ್ನಾಟಕದ ಕೊರವಂಜಿ ನೃತ್ಯ ಮತ್ತು ಸಾಹಿತ್ಯ’ ಅಧ್ಯಯನದ ಕುರಿತು  ಕೇಂದ್ರಸರ್ಕಾರದ ಫೆಲೋಶಿಪ್‌ಗೂ ಪಾತ್ರವಾಗಿದ್ದಾರೆ.

ಮಡಿಕೇರಿ, ಮಂಗಳೂರು, ಮೈಸೂರು ಮುಂತಾದ ಕಡೆ ಅನೇಕ ಆಕಾಶವಾಣಿ ಸರಣಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಬೆಂಗಳೂರು ದೂರದರ್ಶನ, ಮೈಸೂರು-ಮಡಿಕೇರಿ-ಮಂಗಳೂರು ಆಕಾಶವಾಣಿ, ಬುಕ್ ಬ್ರಹ್ಮ, ನಮ್ಮ ಕುಡ್ಲ, ನವದೆಹಲಿಯ ಪ್ರಾಚ್ಯಂ, ಸಹಪೀಡಿಯಾ NMKRV ಸಹಿತ ಇನ್ನೂ ಹಲವು  ಶೈಕ್ಷಣಿಕ ಮತ್ತು ಮಾಧ್ಯಮ ಸಂಸ್ಥೆಗಳ ಡಾಕ್ಯುಮೆಂಟರಿ  ಮತ್ತು ಕಾರ್ಯಕ್ರಮಗಳಲ್ಲಿ ಅನೇಕ ಸಂದರ್ಶನ, ಉಪನ್ಯಾಸ ನೀಡಿರುತ್ತಾರೆ. ಮಿಥಿಕ್ ಸೊಸೈಟಿ, ೨೦೧೫-ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಯಕ್ಷಗಾನ ಅಕಾಡೆಮಿ ೨೦೧೯, ೨೦೨೦, ಐಜಿಎನ್ ಸಿ ಎ- ೨೦೨೪,  ಆಳ್ವಾಸ್ ನುಡಿಸಿರಿ- ೨೦೧೫, ಕರಾವಳಿಯ ಸಾಹಿತ್ಯ ಸಮ್ಮೇಳನ ೨೦೧೫, ISEC, ಅಮೃತಾನಂದಮಯಿ ವಿಶ್ವವಿದ್ಯಾಲಯ,   ಚಾಣಕ್ಯ ವಿಶ್ವವಿದ್ಯಾನಿಲಯ,  ತಮಿಳ್ನಾಡಿನಲ್ಲಿ ಜರುಗಿದ ಸ್ವದೇಶೀ  ಕಾನ್ಫರೆನ್ಸ್, IKS Division, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲಿಕೆ, ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವ, ಉಡುಪಿ ಪೇಜಾವರ ಮಠದಿಂದ ಆಯೋಜಿತವಾದ ರಾಮಾಯಣದ ಕುರಿತ ಜಾಗತಿಕ ಸಮ್ಮೇಳನ ಗಳ ಸಹಿತ ವಿವಿಧ ವಿಶ್ವವಿದ್ಯಾನಿಲಯಗಳ ಮತ್ತು ಪ್ರತಿಷ್ಠಿತ  ವೇದಿಕೆಗಳಲ್ಲಿ ಉಪನ್ಯಾಸ, ಭಾಷಣ,  ಶೋಧಪ್ರಬಂಧ ಮಂಡನೆಗಳನ್ನು ಮಾಡಿರುತ್ತಾರೆ.  ಇವರ ಮಾತುಕತೆ-ಸಂದರ್ಶನ, ಅಭಿಪ್ರಾಯಗಳು ಪತ್ರಿಕೆ, ಮಾಧ್ಯಮ ಮತ್ತು ಮುಖ್ಯವಾದ ರಾಜ್ಯ- ರಾಷ್ಟ್ರೀಯ- ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಸಾಕಷ್ಟು ಗರಿಮೆಯನ್ನು ಪಡೆಯುತ್ತಲೇ ಬಂದಿವೆ.

ಭಾರತ ಶಿಕ್ಷಣ ಸಚಿವಾಲಯದ ಐಕೆಎಸ್ ಡಿವಿಷನ್ ಮತ್ತು ಯುಜಿಸಿಯ ನೂತನ ಶಿಕ್ಷಣ ನೀತಿ ಸಂಬಂಧದಲ್ಲಿ ಆಯೋಜಿತವಾದ ಭಾರತೀಯ ಕಲಾ ಪರಂಪರೆಗಳ ಪಾಠ ವಿಭಾಗಗಳಿಗೆ ಸಂಬಂಧಿಸಿದಂತೆ ಹೈದರಾಬಾದ್ ಐಐಟಿಯಲ್ಲಿ ಜರುಗಿದ ವಿಶೇಷ ಸಲಹಾ ಸಮಿತಿಯಲ್ಲಿಯೂ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರದ ಮಾಸಾಶನ ಸಮಿತಿಯ ಸದಸ್ಯರಾಗಿ ೨೦೧೯-೨೦೨೦ರ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರದ ಬಸವಪ್ರಶಸ್ತಿ, ಶಾಂತಲಾಪ್ರಶಸ್ತಿ ಮೊದಲಾದ ಪ್ರಶಸ್ತಿ ಸಮಿತಿಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. IKS Division AICTE  ಇದರ ೨೦೨೨ ಹಾಗೂ ೨೦೨೩ ನೇ ಸಾಲಿನಲ್ಲಿ  ಭಾರತದ ಶೈಕ್ಷಣಿಕ-ಕಲೆ- ಸಂಶೋಧನೆಗೆ ಸಂಬಂಧಿಸಿ ಸಲ್ಲಿಕೆಯಾಗಿದ್ದ  ಐ ಕೆ ಎಸ್ ಪ್ರಾಜೆಕ್ಟ್ ಗಳ ಆಯ್ಕೆ ಸಮಿತಿಯಲ್ಲಿ ಪರೀಕ್ಷಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಯಕ್ಷಗಾನ ಅಕಾಡೆಮಿ ಜಾರಿಗೆ ಬಂದ ಹೊಸತರಲ್ಲಿ ಯಕ್ಷಶಿಕ್ಷಣದ ಸಾರ್ವಕಾಲಿಕ ಶಿಸ್ತಿಗೆ ಸುಳ್ಯದಲ್ಲಿ ಹಮ್ಮಿಕೊಂಡ ಯಕ್ಷಗಾನ ವಿದ್ವಾಂಸರನ್ನೊಳಗೊಂಡ ರಾಜ್ಯ ಮಟ್ಟದ ಯಕ್ಷಗಾನ ಶಿಕ್ಷಣ ಕಾರ್ಯಾಗಾರ, ಮತ್ತು ಪರೀಕ್ಷಾ ಪದ್ಧತಿ ಕರಡು ಪ್ರತಿಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು; ಯಕ್ಷಗಾನಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನೂ ಇವರು ಕೈಗೆತ್ತಿಕೊಂಡು ಮುನ್ನಡೆಯುತ್ತಿದಾರೆ. ಅಧ್ಯಯನಾನುಕೂಲಿ ಲೇಖನಗಳನ್ನು ಯಕ್ಷಗಾನ ಸಮ್ಮೇಳನಕ್ಕೆ ರಚಿಸಿ ಕೊಟ್ಟಿದ್ದು  ಧರ್ಮಭಾರತೀ ಪತ್ರಿಕೆಯಲ್ಲಿ ಅಂಕಣಗಾರ್ತಿಯಾಗಿಯೂ ಇವರು ಹೆಸರಾದವರು. ಉಡುಪಿಯ ಗೋವಿಂದಪೈ ಅಧ್ಯಯನ ಕೇಂದ್ರದಲ್ಲಿ ನಡೆದ ಯಕ್ಷಗಾನ ಅಕಾಡೆಮಿಯ ವತಿಯಿಂದ ಸಂಘಟಿಸಲಾದ ಕೂಚಿಪುಡಿ ಮತ್ತು ಯಕ್ಷಗಾನ ಸಹಸಂಬಂಧ ಮತ್ತು ಬೆಂಗಳೂರಿನಲ್ಲಿ ಜರುಗಿದ ಯಕ್ಷಗಾನದಲ್ಲಿ ಔಚಿತ್ಯ ಎಂಬ ವಿಷಯದ ಒಂದು ದಿನದ ಕಾರ್ಯಾಗಾರದಲ್ಲಿ ವಿಶೇಷ ತಜ್ಞ‌ ಅಭ್ಯಾಗತರಾಗಿ ಪಾಲ್ಗೊಂಡಿದ್ದಾರೆ. ಮನೋರಮಾ ಅವರು ಯಕ್ಷಭಾಣಿಕಾದಂತಹ ಸಂಶೋಧನಾತ್ಮಕ ರಂಗಪ್ರಯೋಗಗಳ ಚಿಂತಕಿ, ಕಲಾವಿದೆ ಕೂಡಾ. ವಿಜಯನಗರ ಕರ್ನಾಟ ಸಾಮ್ರಾಜ್ಯದ ಗಂಗಾದೇವಿಯ ಮಧುರಾ ವಿಜಯ ಕಾವ್ಯವನ್ನು ಮೊದಲ ಬಾರಿಗೆ ಯಕ್ಷಗಾನದಲ್ಲಿ ಪ್ರಸಂಗವಾಗಿಸುವ ಹಿಂದಿನ ಚಿಂತನೆ, ಪರಿಕಲ್ಪನೆ  ಮತ್ತು ಇತಿಹಾಸ ಅಧ್ಯಯನವು ( ೨೦೨೪) ಮನೋರಮಾ ಅವರದ್ದೇ ಆಗಿದೆ. ಕರ್ನಾಟಕ ಸರ್ಕಾರದ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಇವರ ಮುಂದಾಳತ್ವದ ನೂಪುರ ಭ್ರಮರಿ ಸಂಸ್ಥೆಯ ವತಿಯಿಂದ ನಾಟ್ಯಶಾಸ್ತ್ರ- ಯಕ್ಷಗಾನ- ಮತ್ತು ಸೋದರ ಕಲೆಗಳೊಂದಿಗೆ ಸಹಸಂಬಂಧದ ಕುರಿತು ಡಿಸೆಂಬರ್ ೧೫, ೨೦೧೯ ರಲ್ಲಿ ಬೆಂಗಳೂರಿನಲ್ಲಿ ಒಂದು ದಿನದ ಸಂಶೋಧನ ವಿಚಾರಸಂಕಿರಣವೂ ಜರುಗಿದ್ದು ; ಅನೇಕ ಖ್ಯಾತನಾಮರ ಪ್ರಸ್ತುತಿಗಳು ಜರುಗಿವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.  ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರಿಂದ ಯಕ್ಷಗಾನ ವಿಚಾರದ ಸಂಶೋಧನೆಗೆ ಸನ್ಮಾನಿತರಾಗಿದ್ದಾರೆ. ಮತ್ತು ಅವರ ಸಂದರ್ಶನಗಳನ್ನೂ ಮಾಡಿ ದೇವಾಲಯ ಸಂಬಂಧಿತವಾಗಿ ಶೋಧ ಪ್ರಬಂಧಗಳನ್ನೂ ಬರೆದು ಮಂಡಿಸಿದ್ದಾರೆ.

ಶತಾವಧಾನಿ ಡಾ. ಆರ್ ಗಣೇಶರ ಅಭಿನಯಭಾರತಿ, ಡಾ. ಶೋಭಾ ಶಶಿಕುಮಾರ್ ಅವರ ನಾಟ್ಯಾಯನ, ಡಾ. ದ್ವರಿತಾ ವಿಶ್ವನಾಥರ ನಾಯಿಕಾಂತರಂಗ ಕೃತಿಗಳನ್ನೂ ಪ್ರಕಟಿಸಿದ್ದಾರೆ. ದೆಹಲಿಯ ಸಹಪಿಡಿಯಾ(sahapedia) ಅಂತರ್ಜಾಲ ವಿಶ್ವಕೋಶತಾಣ ಕ್ಕೆ ಡಾ.ಮನೋರಮಾ ಅವರು ಸಂಪಾದಕಿಯಾಗಿ ಯಕ್ಷಗಾನದ ಶಾಸ್ತ್ರ ಮತ್ತು ಪ್ರದರ್ಶನವಿಭಾಗ ಹಾಗೂ ಯಕ್ಷಗಾನದ ಸಹಮಾಧ್ಯಮಗಳಾದ ಚಿಕ್ಕಮೇಳ, ತಾಳಮದ್ದಳೆ ವಿಚಾರಗಳಿಗೆ ಕಾರ್ಯನಿರ್ವಹಿಸಿದ್ದು; ಭಾರತೀಯ ನೂಪುರ (ಗೆಜ್ಜೆ) ಸಂಸ್ಕೃತಿ, ಅವಧಾನ ಇತ್ಯಾದಿ ವಿಷಯಗಳಲ್ಲೂ ಅಂತರ್ಜಾಲ ವಿಶ್ವಕೋಶಕ್ಕೆ ಸಂಪಾದಕಿಯಾಗಿ ಲೇಖಿಕೆಯಾಗಿ, ಸಂಶೋಧಕಿಯಾಗಿ ದುಡಿದಿದ್ದಾರೆ. ಲಿಂಕ್ : https://www.sahapedia.org/search/node/yakshagana . ಈ ಬಗೆಯ ಸಂಶೋಧನ ಲೇಖನಗಳ ಗುಚ್ಛವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಯು ೨೦೨೧ ರಲ್ಲಿ ಯಕ್ಷನೂಪುರ ಎಂಬ ಶೀರ್ಷಿಕೆಯ ಕೃತಿಯಾಗಿ ಪ್ರಕಟಿಸಿದೆ.

ಹಲವು ನೃತ್ಯಸಂಬಂಧಿತ ಕಾವ್ಯ/ಸಾಹಿತ್ಯಗಳನ್ನೂ ರಚಿಸಿರುವ ಡಾ.ಮನೋರಮಾ  ಕನ್ನಡ ಪದವರ್ಣ, ಜಾವಳಿ, ಪದ, ಕೌತಗಳ ರಚನೆಗಳನ್ನೂ ಮಾಡಿದ್ದಾರೆ. ಅನೇಕ ಪದ್ಯ ಮತ್ತು ರಚನೆಗಳನ್ನು ಮಾಡಿದ್ದಾರೆ. ಭರತಮುನಿಯ ನಾಟ್ಯಶಾಸ್ತ್ರದ ಕುರಿತ ‘ನಾಟ್ಯಚಿಂತನ’(೨೦೧೪) ಎಂಬ ಕಾರ್ಯಾಗಾರದ ರೂವಾರಿಗಳಲ್ಲೊಬ್ಬರಾಗಿದ್ದು; ಇವರ ರಚನೆಯಲ್ಲಿ ಬಂದ ನಾಟ್ಯಶಾಸ್ತ್ರದ ಕಥೆಗಳ ಕುರಿತ ಕಾವ್ಯವು ಕನ್ನಡದಲ್ಲಿದೆ ಹಾಗೂ ಅದನ್ನಾಧರಿಸಿದ ಕಥಾಗುಚ್ಛವನ್ನು ಕನ್ನಡ- ಇಂಗ್ಲಿಷ್ ನಲ್ಲಿ ಐಕೆಎಸ್ ಡಿವಿಷನ್ ಪ್ರಕಟಿಸುತ್ತಿರುವ ಅಂತರ್ಜಾಲ ಆಪ್ ಗೆ ಸಲ್ಲಿಸಿದ್ದಾರೆ. ಅಂತೆಯೇ ಇವರಿಗೆ ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಪ್ರಶಸ್ತಿ, ಉಡುಪಿ ಎಂಜಿಎಂ ಕಾಲೇಜಿನ ವತಿಯಿಂದ ಏರ್ಪಡಿಸಲಾದ ರಾಜ್ಯಮಟ್ಟದ ಕಥಾಸ್ಪರ್ಧೆ ಪ್ರಶತಿ ಸಹಿತ ಇವರು ಬರೆದಿರುವ ಕಥೆಗಳಿಗೆ ಅನೇಕ ಪ್ರಶಸ್ತಿಗಳೂ ಸಂದಿವೆ.

ಭಾರತದ ಶಿಕ್ಷಣ ಸಚಿವಾಲಯದ ವತಿಯಿಂದ ಐಕೆಎಸ್ ಡಿವಿಷನ್ ಗೆ ನೀಡಲಾದ ಅನೇಕ ಮಹತ್ತ್ವಪೂರ್ಣ ಜವಾಬ್ದಾರಿಗಳನ್ನು ನಿಭಾಯಿಸಿರುವ ಮನೋರಮಾ ಅವರು ಜ್ಞಾನಗುಂಜನ್- ೨೦೨೪ ಎಂಬ ಮಹತ್ತ್ವಪೂರ್ಣ ಪುಸ್ತಕಕ್ಕೆ ಸಹಕಾರಿಯಾಗಿ ಅನೇಕ ಲೇಖನಗಳನ್ನು ಬರೆದುಕೊಟ್ಟಿರುತ್ತಾರೆ. ಚಿಂತನ ಬಯಲು, ಪ್ರೇಕ್ಷಾ,  ದೆಹಲಿಯ ಭಾರತೀಯ  ವಿದ್ಯಾಭವನದ ಭವನ್ಸ್ ಜರ್ನಲ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಿತ ಅನೇಕ ವಿಶೇಷ ಸಂಶೋಧನ ನಿಯತಕಾಲಿಕೆಗಳಲ್ಲಿ. ಅಭಿನಂದನ- ಸಂಸ್ಮರಣ ಗ್ರಂಥಗಳಲ್ಲಿ ಹಾಗೂ ಜಾಗತಿಕ, ರಾಷ್ಟ್ರೀಯ ವಿಚಾರಸಂಕಿರಣ ಮತ್ತು ಸಮ್ಮೇಳನಗಳಲ್ಲಿ ಶೋಧಪ್ರಬಂಧಗಳನ್ನು ಮಂಡಿಸಿದವರಾಗಿದ್ದಾರೆ.

 ಮನೋರಮಾ ಅವರು ಮಂಗಳೂರಿನ ಯಕ್ಷೋತ್ಸವ ಸ್ಪರ್ಧೆಯಲ್ಲಿ ವಿಶೇಷ ಪ್ರಶಸ್ತಿಗೆ ಪಾತ್ರವಾಗಿ, ಸತತ ೩ ವರ್ಷಗಳ ಕಾಲ ಅಲ್ಲಿ ನೀಡಿದ  ಯಕ್ಷಗಾನ ಪ್ರದರ್ಶನಗಳಲ್ಲಿ ಹಿರಿಯ ಕಲಾವಿದರಿಂದ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಇವರು ಕನ್ನಡದ ಮೊತ್ತಮೊದಲ ಶತಾವಧಾನದಲ್ಲಿ ಪೃಚ್ಛಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ‘ಅಕ್ಕ’ ಕನ್ನಡ ಕೂಟಗಳ ಜಾಗತಿಕ ಪ್ರಬಂಧ ಸ್ಪರ್ಧೆಯಲ್ಲಿ ೨೦೦೮ರಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರರಾಗಿದ್ದು ವಿದ್ವತ್ ಸಮ್ಮಾನಕ್ಕೆ ೨೦೧೦ರಲ್ಲಿ ಪಡೆದಿದ್ದಾರೆ. ನವೆಂಬರ್ ೨೦೧೪ರಲ್ಲಿ ಉಡುಪಿಯಲ್ಲಿ ಕಾಣಿಯೂರು ಮಠಾಧೀಶರಿಂದ ‘ಭರತಪ್ರಶಸ್ತಿ’ಯನ್ನೂ, ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಾಧಕರತ್ನ ಪ್ರಶಸ್ತಿಯನ್ನು 2024 ರಲ್ಲಿ ಡಾ. ಮನೋರಮಾ ಸ್ವೀಕರಿಸಿದ್ದಾರೆ. ಯಕ್ಷಗಾನದ ಮಾಸಿಕ ಯಕ್ಷಪ್ರಭಾದ ದಶಮಾನೋತ್ಸವ, ಹೆಜ್ಜೆಗೆಜ್ಜೆ ಸಂಸ್ಥೆ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನದ ಪ್ರತಿಷ್ಠಾನದಿಂದ ಸನ್ಮಾನಿತರಾಗಿದ್ದಾರೆ. ಸಾಧನಾ ಸಂಗಮ ಟ್ರಸ್ಟ್ ನ ಸಾಧನ ಕಲಾಯೋಗಿ ಪ್ರಶಸ್ತಿಗೆ ೨೦೨೦ರಲ್ಲಿ, ಸಾಯಿ ಆಟ್ಸ್ ಇಂಟರ್ ನ್ಯಾಶನಲ್ ನ ಬೆಸ್ಟ್ ಡ್ಯಾನ್ಸ್ ಸ್ಕಾಲರ್ ಪ್ರಶಸ್ತಿಗೆ 2022ರಲ್ಲಿ ಭಾಜನರಾಗಿದ್ದಾರೆ. ೨೦೨೪ ರಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಯಕ್ಷಗಾನ ಕಾಡೆಮಿಯ ಪುಸ್ತಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ಸಂಸ್ಥೆಯ ವಿವಿಧ ಸಮಿತಿಯಲ್ಲಿರುವ ಸಂಶೋಧಕ/ವಿದ್ವಾಂಸ ಬಳಗ

ಶತಾವಧಾನಿ ಡಾ. ಆರ್. ಗಣೇಶ್

ಉಜಿರೆ ಅಶೋಕ ಭಟ್

ವಿದ್ವಾನ್  ಕೊರ್ಗಿ ಶಂಕರನಾರಾಯಣ ಉಪಾಧ್ಯಾ ಯ

ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ

ಸಾವಿತ್ರಿ ಬಿ.ಎನ್

ವಿಷ್ಣುಪ್ರಸಾದ್ ಎನ್

ಎನ್. ರಾಮ ಭಟ್

ಡಾ. ಶಾಲಿನಿ ವಿಠಲ್

ಡಾ. ದ್ವರಿತಾ ವಿಶ್ವನಾಥ

ರೋಹಿಣೀ ಎ. ಆರ್

ಮತ್ತು ಇನ್ನೂ ಅನೇಕ ಸಹೃದಯಿಗಳು ಮತ್ತು ಅಧ್ಯಯನ ವಿದ್ಯಾರ್ಥಿಗಳು.

ನೀವೂ ನಮ್ಮವರೇ! ನಮ್ಮ ಜೊತೆಗಿದ್ದೀರಿ ಎಂಬ ಭಾವನೆ ನಮ್ಮದು. ಸಂಸ್ಥೆಯ ಪೋಷಣೆ, ಪಾಲನೆ ಆ ಮೂಲಕ ಭಾರತೀಯ ಸಂಸ್ಕೃತಿಯ ಮೌಲ್ಯವರ್ಧನೆ ನಮ್ಮ ಧ್ಯೇಯ. ಅದಕ್ಕಾಗಿ ಕೈಜೋಡಿಸೋಣ. ಪ್ರತಿಯೊಬ್ಬರೂ ಕೈ ಕೂಡಿಸಿ ಮುನ್ನಡೆಯುತ್ತಾ,  ಯಶಸ್ಸಿನ ತುತ್ತತುದಿಯಲ್ಲಿಯೂ  ಎಲ್ಲರೂ ಜೊತೆಗಿರೋಣ. ಈ ಸಂಸ್ಥೆ ನಮ್ಮೆಲ್ಲರದ್ದು !