Author: ವಿವಿಧ ಲೇಖಕರು
(ಕಳೆದ ಸಂಚಿಕೆಯಿಂದ ಮುಂದುವರೆದುದು…)
ಪ್ರಿಯನ ಸಂದೇಶವನ್ನನುಸರಿಸಿ ಅರಸುತ್ತಾ ಇಲ್ಲವೇ ಪ್ರೇಮ-ಕಾಮಪೀಡಿತಳಾಗಿ ತನ್ನ ಇನಿಯನನ್ನು ತಾನಾಗಿ ಹುಡುಕಿಕೊಂಡು ಹೋಗುವವಳು ಅಥವಾ ತನ್ನ ಪ್ರಿಯನನ್ನು ಸಖಿಯರ ಕಡೆಯಿಂದ ಕರೆಸಿಕೊಳ್ಳುವವಳು ಅಭಿಸಾರಿಕೆ. ಈಕೆಯ ಅಭಿಸರಣದ ಸ್ಥಾನಗಳು : ಸಸ್ಯಸಂಪತ್ತಿನ ಭೂಮಿ, ನಿರ್ಜನ ಪ್ರದೇಶ, ಜೀರ್ಣಾವಸ್ಥೆಯ ದೇವಾಲಯ, ದೂತಿಯ ಮನೆ, ಅರಣ್ಯ, ನದೀ ತಟಾಕ, ಉಪವನ, ಉದ್ಯಾನ, ಸ್ಮಶಾನ, ಸಮುದ್ರತೀರ, ಸೇತುವೆ ಇತ್ಯಾದಿ. ಭಾನುದತ್ತನು ತನ್ನ ಗ್ರಂಥ ರಸಮಂಜರಿಂiiಲ್ಲಿ ಅಭಿಸಾರಿಕೆಯನ್ನು ಮೂರು ವಿಧವಾಗಿ ವಿಂಗಡಿಸಿದ್ದಾನೆ.
೧. ದಿವಸಾಭಿಸಾರಿಕಾ : ಹಾಡುಹಗಲಿನಲ್ಲಿ ನಲ್ಲನೆಡೆಗೆ ಸಾಗುವವಳು.
೨. ಜೋತ್ಸ್ನಾಭಿಸಾರಿಕಾ : ತನ್ನ ಪ್ರಿಯನನ್ನು ಹುಡುಕಿಕೊಂಡು ಚಂದ್ರನ ಬೆಳಕಿನಲ್ಲಿ ಸಾಂಕೇತಿಕ ಸ್ಥಳಕ್ಕೆ ಹೋಗುವವಳು.
೩. ತಮಿಸ್ರಾಭಿಸಾರಿಕಾ ( ಕೃಷ್ಣಾಭಿಸಾರಿಕಾ) : ಕಟ್ಟಿರುಳಿನಲ್ಲಿ ಬೆದರದೆ ತನ್ನ ಪ್ರಿಯನಿಗಾಗಿ ಹೋಗುವವಳು.
ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು.
ಅಭಿಸಾರಿಕೆಯು ಸರ್ವಾಂಗಭೂಷಿತೆಯಾಗಿ ಲಜ್ಜೆಯಿಂದ ಸಾಗುವವಳಾದರೆ ಆಕೆ ಸ್ವೀಯ. ತನ್ನ ಸಂಗಾತಿ-ಸಂಬಂಧಿಗಳನ್ನೊಳಗೊಂಡು ತನ್ನ ಇರವನ್ನು ತೋರ್ಪಡಿಸುತ್ತಾ ಸಾಗುವವಳಾದರೆ ಪರಕೀಯೆ. ಧೈರ್ಯದಿಂದ, ಮುಸ್ಸಂಜೆ-ಮಧ್ಯರಾತ್ರಿಯ ವೇಳೆಗಳಲ್ಲಿ ವಿಚಿತ್ರ ಹಾಗು ಸುಂದರ ವಸ್ತ್ರಾಭರಣಗಳನ್ನು ತೊಟ್ಟು ಸಂಗಾತಿಗಳೊಡನೆ ಪುರುಷರ ಮನಸ್ಸನ್ನು ಸೂರೆಗೊಳಿಸುತ್ತಾ, ಗೆಜ್ಜೆ-ಕಡಗಗಳನ್ನು ಸದ್ದುಗೊಳಿಸುತ್ತಾ, ಆನಂದದಿಂದ ನಗುತ್ತಾ, ಕಾಮವಿಕಾರದಿಂದ ತೊದಲಾಗಿ ಮಾತನಾಡುತ್ತಾ, ವಿಲಾಸದಿಂದ ಕಣ್ಣುಗಳನ್ನು ವಿಕಸಿಸಿ ಎಡವುತ್ತಾ ಹೋಗುವವಳು ಸಾಮಾನ್ಯೆ. ಉತ್ತಮಳಿಗೆ ಸಮಯಾಸಮಯದ ಪರಿವೆಯೇ ಇರದೆ, ಧೈರ್ಯವೇ ಆಯುಧವಾದರೆ, ಮಧ್ಯಮಳಿಗೆ ಬೇರೊಬ್ಬರ ಸಹಾಯ ಬೇಕು. ಅಧಮಳಿಗೆ ಉತ್ತಮ ವೇಳೆ ಒದಗಬೇಕು.
ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆ ಅಥವಾ ಮೇಲ್ಕಂಡ ಮೂವರು ಶೃಂಗಾರ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ. ಇವುಗಳೊಳಗೂ ಧೀರ, ಅಧೀರ, ಧೀರಾಧೀರ ಹಾಗೂ ಜ್ಞಾತ, ಅಜ್ಞಾತ, ಪ್ರೌಢ, ನವೋಢ, ಲಘು, ಗುರುವೆಂಬ ಹಲವಾರು ಬೇಧಗಳಿವೆ.
ಪ್ರಸ್ತುತ ಕಾವ್ಯ ಮತ್ತು ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಉತ್ತಮ-ಮಧ್ಯಮ ಗುಣವುಳ್ಳ; ಸ್ವೀಯಾ, ಮಧ್ಯಾ, ಜ್ಞಾತ, ಪ್ರೌಢ ಸ್ವಭಾವವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ.
ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ನಿಮ್ಮ ಕಲ್ಪನೆ-ಚಿಂತನೆಗಳಿಗೆ ಇದು ಮುಕ್ತ ವೇದಿಕೆಯಾಗಲಿ.
ಭಾಮಿನೀ
– ಶತಾವಧಾನಿ ಡಾ. ಆರ್. ಗಣೇಶ್
ಶುದ್ಧಸಾವೇರಿ ರಾಗ : ಶಾರ್ದೂಲ ವಿಕ್ರೀಡಿತ
ನಲ್ಲಂ ತಾಂ ಬರಲಿಲ್ಲಮೇತಕೊ ಅದಂತಿರ್ಕಾನೆ ಪೋಪೆಂ ಸಮು
ತ್ಫುಲ್ಲಂ ಗೊಳ್ವನವಂ ಗಡಂ ಪರಿಕಿಸುತ್ತೆನ್ನಂ ಮಲರ್ದೆಂದು ಮೇ
ಣುಲ್ಲಾಸಂ ಬಿರಿದುಣ್ಮೆ ಧೀರಲಲಿತವ್ಯಾಹಾರದಿಂ ಪೋಗುವಳ್
ಗುಲ್ಲಂ ಸೀಳ್ದಭಿಸಾರಿಕಾಖ್ಯೆ ಮಿಹಿರಂ ಮುನ್ನೀರ್ಗೆ ಸೇರ್ವನ್ನೆಗಂ ||
ಪೂರ್ವಿ ಕಲ್ಯಾಣಿ ರಾಗ : ಮತ್ತೇಭವಿಕ್ರೀಡಿತ
ನರುಗೆಂಪಾಗೆ ದಿಗಂತಮುಂ ವದನಮುಂ ವಿಸ್ಫಾರಿಸಲ್ ಸಾಂಧ್ಯವ
ಲ್ಲರೀಮಲ್ಲೀಸುಮಮುಂ ಹೃದಯಸ್ಥರತಿಯುಂ ಪೆಂಪಯ್ದೆ ಲೀಲಾವನೀ
ಧರೆಯುಂ ಪೇಶಲಕಾಯಮುಂ ರುಚಿರಸಂಕೇತಸ್ಥಲಕ್ಕೇಗೆ ಖೇ
ಚರಿಯುಂ ಚಿತ್ತಮುಮಾಗಳೊಪ್ಪಿದುದಲಾ ರಸ್ಯಾಭಿಸಾರಂ ಕರಂ ||
( ಸಂಜೆಯಾಯಿತು, ತವಕ ಬಲಿಯಿತು. ಇನಿಯನನ್ನೇ ಅರಸಿ ಅದಮ್ಯಕಾಂಕ್ಷೆಯಿಂದ ಅಭಿಸಾರಿಕೆಯಾಗಿ ನಾಯಿಕೆಯು ತೆರಳುವಳು.)
ಮಾಂಡ್ ರಾಗ : ಏಕ, ರೂಪಕ, ಕೋರೆ ತಾಳಗಳು
ಎನಗಿಲ್ಲ ಭಯಕಾರಣ-ವಿಚಾರಣ |
ಮನದಾಣ್ಮನೆಡೆ ಸಾರಲು- ಯಾವಾಗಲೂ || ಪ ||
ಜಗದಾಡಿಕೆಯ ಕೇಳೆನಭಿಜಾತರಿಗೆ ಸೋಲೆ
ನಗಡಿಪ್ಪ ಮಳೆಗಾಳಿಗಳಿಗಂಜೆನು |
ಸೊಗಸಲ್ಲಿ ಸಲ್ಲಲ್ಕೆ ಮಿಗೆ ತರ್ಕ-ಶಂಕೆಯೆ ?
ನಗಲೇಕೆ ? ನಾ ಬಲ್ಲೆನಾ ಸವಿಯನು ||
ಬೆನ್ನಟ್ಟಿ ಸುಮಬಾಣಂ ಬರ್ಪನ್ನಮೆಲ್ಲ ಸಂ
ಪನ್ನೆಯರೇ ಪೆರ್ಮಕೆನ್ನೆಯರೇ |
ಚೆನ್ನಿಗನವನಲ್ಲಿ ಜೊನ್ನಪಾಲ್ಬೆಳಕಲ್ಲಿ
ಮನ್ನಿಸೆ ಮೆಯ್ ಬಿಗಿ ಬಿಡದಿರ್ಪರೇ ?
ಮುಗಿಲೆ ಮಳೆಯಿಂ ಕಳಚಿ ಬೀಳಲಿ
ಜಗವೆ ಸಿಡಿಲಿಂ ಸಿಡಿಯಲಿ |
ಕವಿವ ಕತ್ತಲೆ ಕಣ್ಣ ಕಳೆಯಲಿ
ಬುವಿಯೆ ಬಿಮ್ಮನೆ ಬಿರಿಯಲಿ ||
—————
ಮೇಘಮೇದಿನಿ
– ದಿವಾಕರ ಹೆಗಡೆ, ಧಾರವಾಡ
ಶಿಶಿರೋದಯದಲಿ ಹೊಸಕನಸಿನ ಹದ
ವಸುಮತಿ ತಾನೆಸೆದಳು ಮುದದಿ |
ವಸನಾಪ್ಯಾಯನ ಕುಸುರಿನ ರೇಶಿಮೆ
ರಸೆ ರಾಣಿಯು ತಾ ಸಮ್ಮುದದಿ ||
—————-
ಭಾಮಿನಿಯ ಭಾವಾಭಿವ್ಯಕ್ತಿ
-ಮಂಟಪ ಪ್ರಭಾಕರ ಉಪಾಧ್ಯ
ಇದ್ದಕ್ಕಿದ್ದಂತೆ ಹೊರಗಿನ ಬದಲಾದ ಪ್ರಕೃತಿ ನನ್ನನ್ನು ಸೆಳೆಯಿತು. ಓಡಿ ಬಂದು ಹೊರ ನೋಡಿದೆ. ವ್ಹಾ ! ಬೀಸುತ್ತಿರುವ ತಂಗಾಳಿ; ಮಾದಕತೆಯ ಸುವಾಸನೆಯೊಂದಿಗೆ (ಕಾಲ ವಸಂತಕಾಲ). ಸೂರ್ಯನ ತಾಪ ಕಡಿಮೆಯಾಗಿ ಅಲ್ಲಲ್ಲಿ ಮೋಡಗಳ ದಿಬ್ಬಣ. ಅಆಷ್ಟೇ ನಾಲ್ಕಾರು ಮಳೆಹನಿಗಳು ಬಿದ್ದು ನೆಲಸುಟ್ಟ ವಾಸನೆ. ಈ ಮಳೆಹನಿಗಳಿಂದ ಭೂಮಿ ಉನಾದಗೊಂದಂತೆ ಅನಿಸಿತು. ಮೋಡಗಳಿಂದ ಉನ್ಮಾದಗೊಂಡ ನವಿಲುಗಳು ಗರಿಬಿಚ್ಚಿ ನರ್ತಿಸುತ್ತಿದ್ದವು. ಪಕ್ಷಿಗಳೆಲ್ಲ ತಮ್ಮ ತಮ್ಮ ಭಾಷೆಗಳಲ್ಲಿ ಹಾಡುತ್ತಿದ್ದವು. ಇವುಗಳಿಗೆಲ್ಲ ಪಾಠ ಹೇಳಿಕೊಡುವಂತೆ ಗುರುವಿನ ಹಾಗೆ ಶ್ರುತಿಯಲ್ಲಿ ಹಾಡುತ್ತಿತ್ತೊಂದು ಕೋಗಿಲೆ. ತುಂಬಿದ ಮರಗಳು ಬೀಸುತ್ತಿರುವ ಗಾಳಿಗೆ ಓಲಾಡುತ್ತಿದ್ದವು. ಇಡೀ ಪ್ರಕೃತಿಯೇ ನಿಗೂಢ ವ್ಯತ್ಯಾಸಕ್ಕೆ ಸ್ಪಂದಿಸುತ್ತಿರುವುದನ್ನು ಕಂಡೆ. ಎಲ್ಲಾ ಶ್ರುತಿವಾದ್ಯಗಳು ಒಮ್ಮೆಲೇ ಮಂಗಳಾರತಿಗೆ ಬಾರಿಸಿದಂತೆ ಭಾವುಕತೆಗೆ ಮಾತ್ರ ಒಳಗಾದೆ. ನನ್ನ ಶ್ರುತಿ ಧ್ವನಿಗೂಡಲೇ ಇಲ್ಲ. ತೆರೆದಬಾಯಿ ತೆರೆದ ಕಣ್ಣು ಹಾಗೇ ಇತ್ತು.
ಅಂಗಳದಲ್ಲಿ ಹೂವು ಮತ್ತು ಬಣ್ಣ ಬಣ್ಣದ ತರಗೆಲೆಗಳ ಪಟಪಟ ಸದ್ದು. ರಭಸದ ಗಾಳಿಗೆ ಇವು ಅರ್ಧವೃತ್ತಾಕಾರದಲ್ಲಿ ಸೈನಿಕರಂತೆ ನಿಂತಾಗ ಗಾಳಿ ನಿಂತಿತು. ಈ ದೃಶ್ಯ ಕಂಡಾಗ ಮನ್ಮಥನ ಹೂಬಾಣದಂತೆ ಕಂಡಿತು. ಇದು ಎಲ್ಲಿಂದ? ಯಾಕೆ? ಅಂಗಳಕ್ಕಿಳಿದು ತಲೆ ಎತ್ತಿ ಕಂಡೆ. ಆಗಸದಲ್ಲಿ ಸಪ್ತವರ್ಣದ ಕಾಮನಬಿಲ್ಲು ಪ್ರಾಯಶಃ ನನ್ನ ಪರಿಸ್ಥಿತಿ ಅರಿತು ಕಾಮನಬಿಲ್ಲನ್ನು, ಈ ಹೂಬಾಣವನ್ನು ನನ್ನೆಡೆಗೆ ಕಳಿಸಿದನೇ? ಈ ಸುಂದರ ಹೊಂದಿಕೆಯಿಂದ ಪರವಶಳಾದೆ. ಪ್ರಕೃತಿಯಲ್ಲೂ ನಾನು ಒಬ್ಬಳಾದೆ. ನೂರಾರು ಭಾವಗಳು ಬೆಂಕಿಯಂತೆ ಸುಡುತ್ತಿದ್ದವು. ಇನ್ನು ಕನಸು ಕಾಣುವುದು ವ್ಯರ್ಥ. ಯೋಚನೆ ಕಲ್ಪನೆಗಳು ಚಿಂತೆ ಆಗುವ ಮೊದಲು ಫಲಪ್ರಾಪ್ತಿ ಆಗಲೇಬೇಕು. ನನ್ನವನು ಬರುವವರೆಗೂ ನಾನು ಕಾಡಿರುವುದಕ್ಕಿಂತ ನಾನೇ ಆತನ ಬಳಿಗೆ ತೆರಳಬೇಕು.
ಪ್ರಕೃತಿಯ ವೇಗಕ್ಕೆ ನಾನೂ ಸ್ಪಂದಿಸಬೇಕೆಂದು ಮನೆಯಿಂದ ಹೊರಟೆ. ನನ ನಿರ್ಧಾರವೇ ನನ್ನ ಚಿಂತೆಗಳನ್ನೆಲ್ಲಾ ದೂರಮಾಡಿತ್ತು. ಹೊಸದಾದ ಉತ್ಸಾಹ ಧೈರ್ಯ ನನ್ನನ್ನು ಆವರಿಸಿತ್ತು. ಮುಸ್ಸಂಜೆಯಾದ್ದರಿಂದ ಜಾಗರೂಕತೆಗೆ, ಪ್ರಖರವಾದ ಬೆಳಕಿಗೆ ಎಣ್ಣೆದೀಪವನ್ನು ಹಿಡಿದು ನಿಂತೆ.ನ್ನ್ನ ಪ್ರಖರತೆಯ ಕಣ್ಣುಗಳ ಮುಂದೆ ದೀಪ ಮಂದವಾಗಿಯೇ ಇತ್ತು. ದೀಪವೂ ಅನಗತ್ಯವಾಗಿತ್ತು. ಏಕೆಂದರೆ ನಾನಿಟ್ಟ ಹೆಜ್ಜೆಗಳು ಸರಿಯಾಗಿಯೇ ಇರುತ್ತಿದ್ದವು. ನನ್ನ ದೃಷ್ಠಿ ಬಲಿಷ್ಠವಾಗಿತ್ತು. ಸ್ವಲ್ಪ ದಾರಿ ನಡೆಯುತ್ತಿರುವಾಗಲೇ ಗಾಳಿಗೆ ದೀಪ ಆರಿತು. ಮನೆಯಿಂದ ಹೊರಡುವಾಗ ಧೈರ್ಯಕ್ಕೆ ಮಾತ್ರ ದೀಪ ಬೇಕಾಗಿತ್ತು. ಅದರೆ ನನ್ನ ಹೃದಯದಲ್ಲಿಯ ಧೈರ್ಯದ ದೀಪಕ್ಕೆ ಕಣ್ಣಿನ ಕಾಂತಿಯ ಎದುರು ಯಾವ ದೀಪ ಎಷ್ಟು ಇರಲಾದೀತು? ಚಿಂತಿಸದೆ ಮುನ್ನಡೆಯುತ್ತಲೇ ಇದ್ದೆ.
ಗೌರವ ಪ್ರದರ್ಶನಕ್ಕೆ ಮುಸುಕು ಬೇರೆ ಕೇಡು. ಅದನು ಸರಿಸಿಕೊಳ್ಳುತ್ತಾ ತ್ವರಿತಲಯದಲ್ಲಿ ನಡೆಯುತ್ತಿದ್ದೆ. ನಿಜ ಹೇಳಬೇಕಿದ್ದರೆ ಬೇರೆಯವರ ದೃಷ್ಟಿಯಲ್ಲಿ ಓಡುವಷ್ಟು ಆತುರದಿಂದ ನಡೆಯುತ್ತಿದ್ದೆ. ಆದರೂ ಮಧ್ಯದಾರಿಯಲಿ ತಡೆದು ತಡೆದು ಬೇರೆಯವರ ದೃಷ್ಟಿಯಲ್ಲಿ ಪ್ರಶ್ನೆಗಳ ಸುರಿಮಳೆ. ನಾನೋ ಘಾಟಿ. ‘ಇಲ್ಲೇ ದೇವಸ್ಥಾನಕ್ಕೆ ಹೋಗಿ ಬರುವವಳಿದ್ದೆ. ಕತ್ತಲಾಗುತ್ತಲ್ಲ ಅದಕ್ಕೆ ಅವಸರ’ ಎಂದೆ. ‘ಇವರಿಗೆಲ್ಲಾ ಯಾಕೆ ನನ್ನ ಉಸಾಬರಿ?’ ಎಂದು ಮನಸಾ ಶಪಿಸಿದೆ. ಒಂದು ರೀತಿಯ ಧೈರ್ಯದಲ್ಲೇ ಹಜ್ಜೆ ಹಾಕುತ್ತಿರುವುದರಿಂದ ಹೆಚ್ಚಿಗೆ ಪ್ರಶ್ನೆಗಳಿಗೆ ಸಾಹಸ ಮಾಡಲಿಲ್ಲ. ಇವರೆಲ್ಲ ನನ್ನ ಪಾಲಿಗೆ ಅಪಶಕುನಗಳ ಪ್ರಾಣಿಗಳು ಎನ್ನಿಸಿತು. ನನ್ನ ನಡಿಗೆಯ ವೇಗ ಹೆಚ್ಚಿಸಿದೆ.
ನನ್ನ ವೇಗಕ್ಕಿಂತ ಮಳೆಯ ವೇಗ ಹೆಚ್ಚಾಗುತ್ತಿತ್ತು. ರಭಸದಿಂದ ಬಡಿದ ಮಳೆಯಿಂದ ಮೈಯ್ಯೆಲ್ಲಾ ಒದ್ದೆ ಆಯ್ತು. ಬೀಳುತ್ತಿರುವ ಮಳೆಯೊಂದಿಗೆ ಆಟವಾಡುತ್ತಲೇ ನಡೆದು ಆನಂದ ಪಡೆಯುತ್ತಿದೆ. ಆತನ ಸಮಾಗಮದ ಆತುರ, ನಿರೀಕ್ಷೆ, ಕನಸುಗಳಿಂದ ನನ್ನ ಮೈಯ್ಮನಗಳು ಕಾದಿದ್ದವು. ಮಳೆಯಿಂದಲೂ ನನ್ನ ದೇಹವೇನೂ ತಣಿದಿಲ್ಲ; ದಣಿದಿಲ್ಲ. ಆಗಾಗ ನನ್ನ ಸಮರ್ಪಣಾ ಭಾವವನ್ನು ಎಣಿಸಿ ಅಹಂಕಾರ ಪಡುತ್ತಿದ್ದೆ. ಪ್ರೀತಿಗಾಗಿ ನನ್ನ ಆತುರದ ದಾರಿಯನ್ನು ಕಂಡ ನನ್ನವನು ಸೋಲುತ್ತಾನೆ ಎಂಬ ನಂಬಿಕೆ ನನ್ನದು. ಪ್ರೀತಿ ಎನ್ನುವುದು ಹಾಗೇಯೇ ಅಲ್ಲವೇ? ಲೌಕಿಕ ಅಡೆತಡೆಗಳಿಂದ ಪ್ರೀತಿ ಇನ್ನಷ್ಟು ಹರಿತವಾಗುತ್ತದೆಯೇ ವಿನಾ ಕಡಿಮೆ ಆಗಲಾರದು. ಇವೆಲ್ಲಾ ನನ್ನ ಸುತ್ತಮುತ್ತಲಿನ ಗೊಡ್ಡುಮಂದಿಗೆ ಹೇಗೆ ಅರ್ಥವಾದೀತು? ನನ್ನ ವೇಗಕ್ಕೆ ತೊಡಕುಂಟು ಮಾಡುವವರನ್ನು ಪಾಪಿಗಳೆಂದ ಬಗೆದ ನನಗೆ ಅವರೆಲ್ಲಾ ಪಾಪದವರೆಂದು ಭಾವಿಸಿ ಉದಾರಿಯಾದೆ. ಗುಡುಗು ಮಿಂಚುಗಳು ನಿಧಾನವಾಗಿ, ನನ್ನ ಎದೆಯ ಗಟ್ಟಿತನಕ್ಕೆ ಗುಡುಗೂ ನಿಂತಿತು. ನನ್ನ ಕಣ್ಣಿನ ಕಾಂತಿಗೆ ಮಿಂಚೂ ನಾಚಿತು. ತೊಟ್ಟಿಕ್ಕುವ ಮಳೆಯ ಹನಿಗಳು ನನ್ನ ನಡೆಗೆ ಲಯವನ್ನು ಒದಗಿಸಿದವು. ಅಂತೂ ಅಬ್ಬರದಿಂದ ಹೊರಟ ನನಗೆ ದಾರಿಯುದ್ದಕ್ಕೂ ಅಬ್ಬರದ ಸ್ವಾಗತಗಳೇ ಇದ್ದವು. ಅಮ್ತೂ ನಾನು ಎಣಿಸಿದ ಸ್ಥಳವನ್ನು ಬಂದು ಮುಟ್ಟಿದೆ.
ನನಗೆ ಮೊದಲೇ ನಲ್ಲ ಬಂದುಬಿಟ್ಟನೋ ಎಂಬ ಆತಂಕದಲ್ಲಿದ್ದ ನನಗೆ ಆ ಸ್ಥಳದಲ್ಲಿ ಆತನಿಲ್ಲದಿರುವುದೂ ಒಂದು ಕ್ಷಣ ಸಮಾಧಾನ ಆಯ್ತು. ಆದರೂ ಆತಂಕದಿಂದ ಎಲ್ಲಾ ದಿಕ್ಕುಗಳಲ್ಲೂ ನೋಡಿದೆ. ಸಾವಧಾನವಾಗಿ ಎತ್ತರ ಬಂಡೆಯನ್ನು ಏರಿಕುಳಿತು ಯೋಚಿಸಿದೆ. ಆತ ಬರೆದ ಪತ್ರದ ಒಕ್ಕಣಿಕೆಯನ್ನು ನೆನಪಿಸಿಕೊಂಡೆ. ದುತನಿಂದ ತಿಳಿಸಿದ ಮಾತುಗಳನ್ನು ನೆನಪಿಸಿಕೊಂಡೆ. ಆತ ಬರುವ ಸ್ಥಳ ಇದೇ ಎಂದು ಖಾತರಿಪಡಿಸಿಕೊಮ್ಡೆ. ನನ್ನ ಸ್ಥಳದ ಆಯ್ಕೆ ಗೊಂದಲವಾಗದಿರಲಿ ಎಂದು ಮುಂದುವರೆದು ನದಿಯ ತೀರದ ಸೇತುವೆಯ ಬಳಿ ಬಂದು ನಿಂತೆ. ಇನ್ನೂ ಮುಂದುವರೆದರೆ ಹಲವು ದಾರಿಗಳು. ಗೊಂದಲ ಆದೀತೆಂದು ಅಲ್ಲೇ ಇದ್ದು ಆತನನ್ನು ಸ್ವಾಗತಿಸಲು ಸಿದ್ಧಳಾದೆ. ಆಗಲೇ ಮೋಡಗಳು ಸರಿದು ಸೂರ್ಯನ ಒಂದು ರೀತಿಯ ಕೆಂಪುಕಿರಣಗಳಿಂದ ಪ್ರತಿಫಲನಗೊಂಡ ಆಕಾಶ ಶುಭ್ರತೆಯೊಂದಿಗೆ ಪ್ರಶಾಂತವಾಗಿತ್ತು. ಕತ್ತಲಿನ ಛಾಯೆ ಇದ್ದರೂ ಮುಖಗಳನ್ನು ಗುರುತಿಸುವಷ್ಟು ಬೆಳಕಾಗಿತ್ತು. ನನ್ನ ಧಾವಂತದ ಆಯಾಸ ತಣಿಯುತ್ತಲೇ ಹೃದಯದ ಧಾವಂತ ಹೆಚ್ಚುತ್ತಿತ್ತು…