Author: ಶತಾವಧಾನಿ ಡಾ. ಆರ್. ಗಣೇಶ್, ಬೆಂಗಳೂರು
ಪ್ರಿಯನ ಸಂದೇಶವನ್ನನುಸರಿಸಿ ಇಲ್ಲವೇ ಕಾಮಪೀಡಿತಳಾಗಿ ಆತನನ್ನು ತಾನಾಗಿಯೇ ಅರಸಿಕೊಂಡು ಹೋಗುವವಳು ಅಥವಾ ತನ್ನ ಪ್ರಿಯನನ್ನು ಸಖಿಯರ ಕಡೆಯಿಂದ ಕರೆಸಿಕೊಳ್ಳುವವಳು ಅಭಿಸಾರಿಕೆ. ಈಕೆ ಹೊರಡುವ ಪ್ರಕೃತಿಸಂದರ್ಭವನ್ನನುಸರಿಸಿ ಜ್ಯೋತ್ಸ್ನಾಭಿಸಾರಿಕೆ, ತಮಿಸ್ರಾಭಿಸಾರಿಕೆ, ದಿವಸಾಭಿಸಾರಿಕೆ ಮತ್ತು ವರ್ಷಾಭಿಸಾರಿಕೆಯೆಂಬ ಉಪವಿಭಾಗಗಳೂ ಇವೆ. ಈಕೆಗೆ ಅಭಿಮುಖವೆನಿಸುವ ನಾಯಕನೇ ಅಭಿಸಾರಕ. ಪ್ರಿಯೆಯನ್ನು ಸೇರಲು ಸಂಕೇತವನ್ನು ಅನುಸರಿಸಿ ಅಥವಾ ಸಂಕೇತಸ್ಥಲಕ್ಕೆ ಅಭಿಮಾನದಿಂದ ತೆರಳುವ ಸಾಮಾನ್ಯವಾಗಿ ಅವಿವಾಹಿತನೋ ಅಥವಾ ಉಪಪತಿಯೋ ಆಗಿರುತ್ತಾನೆ.
ಈ ಕಾವ್ಯಸಂದರ್ಭದಲ್ಲಿ ನೀಡಲಾದ ನಾಯಕನು ಮಧ್ಯಮಗುಣ, ಧೀರಲಲಿತ ಪ್ರವೃತ್ತಿಯನಾಗಿದ್ದು ; ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪದಂತೆಯೇ ಕಾಣಿಸಿಕೊಳ್ಳುತ್ತಾನೆ. ಮಳೆ ಬರುವ ಸೂಚನೆಯಿದೆ, ಬಾನು ಗುಡುಗುತ್ತಲಿದೆ. ಇಂತಹ ಸಂದರ್ಭದಲ್ಲಿಯೇ ಸಂಕೇತಸ್ಥಲಕ್ಕೆ ಹೋಗುವ ಅವಸರ ನಾಯಕನಿಗೆ. ಆದರೆ ತನ್ನ ಕಾರ್ಯಕಾರಣವನ್ನು ತಿಳಿದವರು ಆಡಿಕೊಂಡು ನಗುವ ಸಾಧ್ಯತೆಗಳಿದ್ದಾಗ್ಯೂ ಜಗದಲ್ಲಿ ಆಡಿಕೊಳ್ಳುವವರನ್ನು ಕೇಳಲಾರೆನೆನ್ನುತ್ತಾನೆ ಅಭಿಸಾರಕ. ಮನಸ್ಸು ಇಚ್ಛೆಪಟ್ಟು ಸಾಗುವಲ್ಲಿ ಭಯ, ವಿಚಾರಣೆಯ ಹಂಗು ತನಗಿಲ್ಲವೆಂಬ ಧೈರ್ಯ ಆತನದ್ದು. ತನ್ನೊಂದಿಗಿರುವ ಸಖರು ತನ್ನನ್ನು ನೋಡಿ ಸೋಲು ನನಗೇ ಎಂದು ಆಡಿಕೊಂಡರೆ ಆಡಲಿ; ಏನೆಂದು ಬೇಕಾದರೂ ಹೇಳಲಿ; ಸೊಗಸೆಂಬುದು ಪ್ರಿಯೆಯ ರೂಪದಲ್ಲಿ ಅಲ್ಲಿರುವಾಗ, ಅದರ ಮಾಧುರ್ಯವನ್ನು ತಾನು ಬಲ್ಲೆನಾದ್ದರಿಂದ ಇಂತಹ ತರ್ಕ, ಬಿಗುಗಳೇ ನಗೆಪಾಟಲು ಎಂದು ಸಮರ್ಥಿಸಿಕೊಳ್ಳುತ್ತಾನೆ. ಅಷ್ಟಕ್ಕೂ ಆ ಭಾಮಿನೀಮಣಿಯೇ ನಿರ್ಭೀತೆಯಾಗಿರಲು ನನ್ನಂತವನಿಗೆ ಶಂಕೆ, ಅಳುಕುಗಳು ಶೋಭಾಸ್ಪದವಲ್ಲ. ನನ್ನನ್ನು ಆಡಿಕೊಳ್ಳುವ ಭೂಪರೆಲ್ಲರೂ ಅಸೂಯಾತಪ್ತರು; ಪ್ರೀತಿಯಲ್ಲಿ ಲಾಭವೇ ಇರುವಾಗ ನಷ್ಟದ ಮಾತೆಲ್ಲಿ? ಎಂದು ತನಗೆ ತಾನೇ ಸಮಾಧಾನಿಸಿಕೊಳ್ಳುತ್ತಾನೆ. ತನ್ನ ಚರ್ಯೆ, ಸಿಂಗಾರಗಳ ಬಗ್ಗೆ ಮತ್ತೊಮ್ಮೆ ನೋಡಿಕೊಂಡು ಸರಿಯಾಗಿದೆಯೇ, ಅನುರೂಪವೆನಿಸೀತೇ ಎಂದು ಆಗಾಗ ಪರಿಕಿಸುತ್ತಾನೆ. ಅತ್ತಲಿಂದ ಬಾನು ಗುಡುಗುತ್ತಲಿದೆ. ಎಲ್ಲಿ ತನ್ನ ಪ್ರಿಯೇ ತೊಯ್ದು ಹೋದಾಳೋ ಎಂಬ ಆತಂಕ ಬೇರೆ ಕಾಡುತ್ತಲಿದೆ. ವ್ಯರ್ಥ ಯೋಚನೆಗಳ ನಡುವೆ ತಡ ಮಾಡುವುದು ಸರ್ವಥಾ ಸಾಧುವಲ್ಲ; ಆ ಕಾರಣ ಸೂಕ್ತವೂ ಅಲ್ಲ ಎಂದು ಆತನ ಮನ ನುಡಿದಲ್ಲಿಗೇ ಪ್ರಣಯದ ಬೆಂಬತ್ತಿ ಆತನ ಮನಸ್ಸು ಹೆಜ್ಜೆಯನ್ನು ವೇಗವಾಗಿಸುತ್ತದೆ.
ಇಲ್ಲಿ ರತಿ ಸ್ಥಾಯಿಭಾವ. ನಾಯಕನ ಪ್ರಿಯೆ ಇಲ್ಲಿನ ಆಲಂಬನ ವಿಭಾವ. ಆಕೆಯ ಪ್ರೀತಿ-ನಡವಳಿಕೆ, ಸುತ್ತಮುತ್ತಲ ಪ್ರಕೃತಿ, ಜನರ ನಡವಳಿಕೆಗಳು ಈತನಿಗೆ ಉದ್ದೀಪನ ವಿಭಾವ. ಶಂಕೆ, ಆತಂಕ, ಅಭಿಲಾಷೆ, ಚಿಂತನ, ಅಂಜಿಕೆ, ಉತ್ಸುಕತೆ ಈತನಲ್ಲಿ ಕಂಡುಬರುವ ವ್ಯಭಿಚಾರಿಭಾವಗಳು. ಸಸ್ಯಸಂಪತ್ತಿನ ಭೂಮಿ, ನಿರ್ಜನಪ್ರದೇಶ, ಜೀರ್ಣಾವಸ್ಥೆಯ ದೇವಾಲಯ, ದೂತಿಯ ಮನೆ, ಅರಣ್ಯ, ನದೀ ತಟಾಕ, ಉಪವನ, ಉದ್ಯಾನ, ಸ್ಮಶಾನ, ಸಮುದ್ರತೀರ, ಸೇತುವೆ ಈತನ ಅಭಿಸರಣದ ಸ್ಥಾನಗಳು. ಇಲ್ಲಿನ ಸಾಹಿತ್ಯವು ಕಂದಪದ್ಯದಿಂದ ಪ್ರಾರಂಭವಾಗಿ ನಾಯಕನ ಲಕ್ಷಣಗಳನ್ನು ವ್ಯಾಖ್ಯಾನಿಸುತ್ತದೆ. ನಂತರದ ಲಕ್ಷ್ಯಗೀತೆಯಲ್ಲಿ ನಾಯಕನಿಗೆ ಸಂಬಂಧಿಸಿದ ಉದ್ದೀಪನ ವಿಭಾವಗಳ ಸೂಕ್ಷ್ಮಗಳಿವೆ.
ರಾಗ : ಮಾಂಡ್ ತಾಳ : ಖಂಡಛಾಪು
ಅಭಿಸಾರಿಕೆಯಂ ಸೇರ-
ಲ್ಕಭಿಮಾನದೆ ಸೋಪಹಾರನಾಗಿದೊ ಸಾರ-
ಲ್ಕಭಿಲಷಿಸುವ ಸಂಕೇತ-
ಕ್ಕಭಿಮುಖನಭಿಸಾರಕಾಖ್ಯನಾಯಕನೀತಂ ||
ಎನಗೇಕೆ ಭಯಕಾರಣ- ವಿಚಾರಣ
ಮನದಾಣ್ಮನೆಡೆ ಸಾರಲು- ಯಾವಾಗಲು ||ಪ||
ಜಗದಾಡಿಕೆಯಕೇಳೆನಭಿಜಾತರಿಗೆ ಸೋಲೆ-
ನಗಡೆಂದುಕೊಳ್ಳಲಿ ಸಖರೆಲ್ಲರು |
ಸೊಗಸಲ್ಲಿ ಸಂದಿರೆ ನಗೆಪಾಟಲೀ ತರ್ಕ,
ಬಿಗುಪೇಕೆ ? ನಾ ಬಲ್ಲೆನಾ ಸವಿಯನು || ೧ ||
ಆ ಭಾಮಿನೀಮಣಿಯೆ ನಿರ್ಭೀತೆಯಾಗಿರಲು
ಶೋಭಾಸ್ಪದವೆ ಶಂಕೆ ?- ನಿರಂಕುಶಂಗೆ !
ಈ ಭೂಪರೆಲ್ಲರಸೂಯಾಭಿತಪ್ತರು
ಲಾಭವೊಂದೇ ಬೇಟದಲಿ- ನಷ್ಟವೆಲ್ಲಿ ? || ೨ ||
ಬಿಡು ಬಿಡಿದೊ ತಡವಾದುದೆಡರಾಗಬೇಡ !
ಸಡಗರದ ಸಿಂಗಾರ – ಸರಿತಾನೆ ಎಲ್ಲ !
ಗುಡುಗುತ್ತಲಿದೆ ಬಾನು ; ಬಾಲೆ ನೀರಾದಾಳು !
ಕೊಡು ಕೈಗೆ ಪ್ರಣಯೋಪಹಾರ-ವಿಹಾರ ! || ೩ ||