Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು
ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 17ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ.
ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ.
ಇಂದಿನ ನಾಯಿಕೆ- ನಾಯಕನಿಗಾಗಿ ಸರ್ವಸನ್ನದ್ಧಳಾಗಿ ಕಾಯುತ್ತಾ ಬೇಸತ್ತು ಬಸವಳಿದು ನಾಯಕನ ನಡತೆಯ ಬಗೆಗೆ ಶಂಕಿಸುವ ಈ ನಾಯಿಕೆ ವಿಪ್ರಲಬ್ಧೆ. ಆಕೆಯ ಕ್ಷೋಭೆಗೊಂಡ ಮನಸ್ಸಿನ ತುಂಬಾ ಇನಿಯನು ಸವತಿಯ ಮನೆಗೆ ಹೋಗಿರಬಹುದಾದ ಸಂದೇಹ ಬಲವಾಗಿ ತುಂಬಿಕೊಂಡಿದೆ. ಸವತಿಯ ಜಾಣತನಕ್ಕೆ ಶಾಪ ಹಾಕುತ್ತ, ತನ್ನ ಸುಭಗತನಕ್ಕೆ ತಾನೇ ಖೇದಗೊಳ್ಳುವ ಈಕೆ ಪ್ರಕ್ಷೋಭಿಣಿಯಲ್ಲದೆ ಮತ್ತೇನು?!
ಪ್ರಕ್ಷೋಭಿಣಿ
ರಾಗ :ಶುಭಪಂತುವರಾಳಿ ; ತಾಳ :ಆದಿ
ಇನ್ನೇತಕೀ ಸಿಂಗಾರ? ಸ್ಮರಸಂಗರ |
ಭಿನ್ನೈಸು ಸೊಗಸಂ ಸಖೀ || ಪ ||
ಬರುವೆನೆಂದಾಣೆಯ ನುಡಿದಾಣ್ಮನೀ ಕಡೆ |
ತಿರುಗಿ ನೋಡದೆ ಸಾರೆ ಸವತಿಯ ಮನೆಯೆಡೆ || ಅ.ಪ ||
ಮೊನ್ನೆ ತಾನೇ ಬಂದು ಚೆನ್ನೆ ! ನಿನ್ನರಮನೆ-
ಗಿನ್ನು ಬಂದಿರ್ಪೆನೆಂದೊಲವಿನಿಂದಂ |
ಬಿನ್ನಾಣಗೆಯ್ದವನಿಂದೆಂತು ನಂಬಿಸಿ
ಕನ್ನೆಯ ಕೊರಳ್ಕೊಯ್ದು ಬೆನ್ನಲ್ಲಿ ತಿವಿದನು ! ||೧ ||
ಅವನಿಗೆಂದಾಂ ಗೈದಿರ್ದ ರಸಭೋಜನಂಗಳ
ಸವಿಯೆಲ್ಲಮೆನ್ನಂ ಮೂದಲಿಸಿದೆ |
ಅವನಂತರಂಗಕ್ಕೆ ಇಂಪಾಗಲೆಂದಿದ್ದ
ನವಭೋಗಸಾಮಗ್ರಿ ಮುಳ್ಳಾಗಿದೆ ||೨ ||
ಹೊಂಚಿರ್ದು ಹಿಡಿದಳೊ; ಹಾವಭಾವಂಗಳ
ಸಂಚಿಂದೆ ಸುಲಿದಳೊ ಸರದಾರನಂ |
ಚಂಚಲಾಂಚಲದಿಂದೆ ಬೀಸಿ ಕಟ್ಟಿದಳೇನೊ
ಕಿಂಚಿತ್ತೂ ಕೃಪೆಯಿರದಾ ಕಲುಷಿತೆ ||೩ ||
************