ಅಂಕಣಗಳು

Subscribe


 

ವಿಶ್ವಾಸಿನಿ

Posted On: Monday, August 24th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 88ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  :  ತನ್ನ ಕಾಂತನಲ್ಲಿ ವಿಶ್ವಾಸವಿರಿಸಿಕೊಂಡ ನಾಯಿಕೆಯು ತನ್ನಾಣ್ಮನ ವಿರುದ್ಧವಾಗಿ ದೂರು/ಚಾಡಿ ಹೇಳಲು ಬಂದ ಸಖಿ/ದೂತಿ/ನೆರೆಮನೆಯಾಕೆ/ಬಂಧುವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವಾಕೆ. ತನ್ನ ಕಾಂತನ ನಿಯತ್ತನ್ನು ಸಮರ್ಥಿಸಿಕೊಳ್ಳುವಲ್ಲಿ ಒಂದು ಪಟ್ಟು ಅತಿಶಯವಾಗಿಯೇ ಆತನ ನಡವಳಿಕೆಯನ್ನು ಕೊಂಡಾಡುತ್ತಾ ಚಾಡಿ ಹೇಳುತ್ತಿರುವಾಕೆಯನ್ನು ಜರೆಯುವ ಈ ರಚನೆಯಲ್ಲಿ ಸ್ವಾಧೀನಪತಿಕೆಯ ನಡವಳಿಕೆ ದಟ್ಟೈಸಿದೆ.  ನಾಯಕನು ಹಲವು ಹೆಂಗಳೆಯರನ್ನು ಹೊಂದಿದ್ದರೂ ಅವನ ಅಂತರಂಗದ ಆಧಾರಶ್ರುತಿಯೇ ತಾನು, ಅವಮಾನಿಸುವುದು ಒಳ್ಳೆಯದಲ್ಲ, ಆತ ಇಚ್ಛೆಪಟ್ಟಲ್ಲಿ ಆತನಿಗೆ ಏನು ಬೇಕಾದರೂ ಮಾಡಿಯೇನು,  ನಿನ್ನ  ಕುಹಕ, ಕುಟುಕುಗಳು ನನಗೆ ತಿಳಿಯದೇ? ನೀನೀ ಬಗೆಯಾಗಿ ಸಲ್ಲದ ಮಾತಾಡುತ್ತಿರುವುದು ನನ್ನೆದೆಯಲ್ಲಿರುವ ಅರಸ ಕೇಳಿಸಿಕೊಂಡಾನು ಎಂಬ ತನ್ನ ನಲ್ಲನ ಬಗೆಗಿನ ಬೆಚ್ಚಗಿನ ಪ್ರೀತಿಯ ಮನೋಭಾವವೊಂದಿಗೇ ಬಂದಾಕೆಗೆ ಎಚ್ಚರಿಕೆಯನ್ನು ಕೊಟ್ಟಿದ್ದಾಳೆ.  

ವಿಶ್ವಾಸಿನಿ

ರಾಗ: ಹಂಸಧ್ವನಿ ;     ತಾಳ: ಆದಿ

ನನ್ನಾತನ ನಿಯತ್ತು ನನ್ನೊಬ್ಬಳಿಗೆ ಗೊತ್ತು |

ಇನ್ನೇಕೆ ಭಿನ್ನೈಪುದೋ ಎಲೆ ! ಚಾಡಿಯ ಮೋಡಿ ! ||ಪ||

 

ಹತ್ತು ಹೆಂಗಳ ಹಾಡಿಗವನೊರ್ವನೇ ರಾಗ-

ವಿತ್ತಿರಲಿ; ಬಗೆ ತೆತ್ತಿರಲಿ |

ಅವನಂತರಂಗದ ಆಧಾರಶ್ರುತಿ ನಾನು

ಅವಮಾನಿಸದಿರಾತನನುರಾಗವಂ || ೧||

 

ಮತ್ಕಾಂತನಾಶಿಸೆ ಮದಿರಾಕ್ಷಿಯರ ನಾನೆ

ಹೃತ್ಕೋಶದಿಂ ಹೊನ್ನ ಮಳೆಗೆರೆದು |

ರಂಭಾದಿಗಳನೆಲ್ಲ ರಂಗಕ್ಕೆ ತರಿಸುವೆ-

ನಂಭೋಜಕಿರ್ಪುದೆ ಕೆಸರು ಕೊಳೆ? ||೨ ||

 

ಚಲ್ಲಗಾರ್ತಿಯೆ ನೀನಿಲ್ಲದ ಸಲ್ಲದ

ಹೊಲ್ಲವನಿಲ್ಲಿಗೆ ತರಲೇಕೆ ?

ಮೆಲ್ಲಗೆ ಮಾತಾಡಿ ನಿಲ್ಲದೆ ನೀ ಸಾಗು

ನಲ್ಲನೆನ್ನದೆಯೊಳಿದ್ದಾಲಿಸಿಯಾನು ||  ೩ ||       

 

Leave a Reply

*

code