Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು
ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 15ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ.
ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ.
ಇಂದಿನ ನಾಯಿಕೆ- ವಿರಹೋತ್ಕಂಠಿತೆಯಾಗಿ ನಾಯಕನ ಚರ್ಯೆಯನ್ನೇ ಧ್ಯಾನಿಸುತ್ತಾ ಆತನು ಇನ್ನೂ ತನ್ನಲ್ಲಿಗೆ ಬಾರದಿದ್ದುದಕ್ಕೆ ಕಾರಣಗಳನ್ನು ಶಂಕಿಸುವವಳು. ಅಂತೆಯೇ ಹಳೆಯ ನೆನಪುಗಳನ್ನು ನೆನೆಯುತ್ತಾ ಪರಿತಾಪ ಪಡುತ್ತಾ ವಿಪ್ರಲಬ್ಧೆಯಾಗುತ್ತಿರುವವಳು.
ವಿರಹೋತ್ಕ ಶಂಕಿತೆ
ರಾಗ : ಬಾಗೇಶ್ರೀ ; ತಾಳ : ರೂಪಕ
ದಕ್ಕುವನೇನೇ ಸಖಿ ಸಿಕ್ಕುವನೇ ಆ ಸುಖಿ?
ನಕ್ಕು ನಿವಾರಿಸಿ ಠಕ್ಕು ತೋರುವನೇ ಶಿಖಿ ||ಪ||
ಪಾರಿಜಾತವನ್ನು ಮುತ್ತಲೇರಾದುದೆನ್ನುತ್ತಲಂದು
ನೀರಾದವನೆನ್ನೊಳಿಂದು ಬೇರಾದನೆ ಮೀರಿ ನಿಂದು ||೧ ||
ಆವ ಬಿಂಕಗಾರ್ತಿಯವನ ಭಾವವನ್ನು ಸೆಳೆದಳೋ ?
ಆವ ಮಾಟಗಾರ್ತಿಯೆನ್ನ ಜೀವವನ್ನು ಕಳೆದಳೋ ? || ೨||
ಗತವಿಲಾಸಕಥೆಗಳೆಲ್ಲ ವ್ಯಥೆಗೆ ಸಂದವೇ?
ಸ್ಮೃತಿವಿನೋದಕೃತಿಗಳೆಲ್ಲ ಚಿತೆಗೆ ಬಂದವೇ? || ೩||
ಜೊತೆಯ ಜಾಣು ಚದುರು ಚೆಲುವು ಮಿತಿಯಿಲ್ಲದ ನಲವು ಗೆಲವು
ಚತುರಾನನಿಗೂ ಕಡೆಗೆ ಮನಸಾಗದೆ ಮುರಿದುದೇ? ||೪ ||