ಅಂಕಣಗಳು

Subscribe


 

ಸ್ಮೃತಿವಿಸ್ಮಿತೆ

Posted On: Friday, May 8th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 16ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ.  ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ.

ಇಂದಿನ ನಾಯಿಕೆ- ನೆನಪುಗಳಲ್ಲಿ ಬೇಯುತ್ತಾ, ತನ್ನನ್ನು ಕನಿಕರಿಸಿಕೊಳ್ಳುತ್ತಾ, ಕಾಂತನ ಬಗೆಗೆ ಅತಿಚಿಂತಿತಳೂ ಆಗಿ ಆತನ ಅನಾಗಮನಕ್ಕೆ ಕಾರಣಗಳನ್ನು ಊಹಿಸುವ ನಾಯಿಕೆ. ಈಕೆಯನ್ನು ಕಲೋಪಚಾರದಲ್ಲಿ ಪ್ರೋಷಿತಪತಿಕೆಯಾಗಿ ಅಥವಾ ವಿಪ್ರಲಬ್ಧೆಯಾಗಿಯೂ ಚಿತ್ರಿಸಿಕೊಳ್ಳಬಹುದು.

ಸ್ಮೃತಿವಿಸ್ಮಿತೆ

ರಾಗ : ಕನ್ನಡ ; ತಾಳ : ಖಂಡಛಾಪು

ಏನಾದನೇನಾದನೇ ಮನೋಹರ-

ನೇನಿಂತುದೂರಾದನೇ ? ||ಪ||

ಭಾಮಾವಿಧೇಯತೆಯೇ ಮೈದಳೆದ ಕಾಂತ

ಸೀಮಾರಹಿತನಾದುದೇಂ ಮಾಯೆಯೋ ? ||ಅ.ಪ||

 

ತನುವೊಂದು ಮನವೊಂದು ಮೊದಲಿದ್ದಿತಾ ಬಳಿಕ

ತನುವೆರಡು ಮನವೊಂದೆನುತ ಸವೆದುದೇ?

ಮನವೆರಡೆನಲ್ಕಿಂದು ಗತಿಯಾವುದೇ ಎನ್ನ

ಘನಕಠಿನಚಿತ್ತಕ್ಕೆ ಫಲವಾದುದೇ? ||೧ ||

 

ಇದು ಸಲ್ಲ, ಸಲ್ಲದು; ಅದು ಚೆಲ್ವು, ಚೆಲ್ವದು;

ಅದು ಸಲ್ಲದಿದು ಚೆಲ್ವು; ಚೆಲ್ವಿದು ಸಲ್ಗೆ |

ಮೊದಲಿಂತು ಹದನಾಗಿ ಮನದಾಸೆಗಿನಿದಾಗಿ

ಮುದವಿತ್ತು ಮುದವಾಂತು ಮರೆಯಾದನೇ? ||೨ ||

 

ಮಣಿಮಾಲೆ ಬಿಗಿಯಪ್ಪುಗೆಯ ಬೇರ್ಪಡಿಪುದೆಂದು

ಗಣಿಸಿದ್ದನಿಂದೆಮ್ಮ ನಡುವಲ್ಲಿಯೇ |

ವನಶೈಲಸಾಗರಂಗಳ ನಿರ್ಮಿಸುತ್ತೆಲ್ಲಿ

ಕನಸಾಗಿ ಕಥೆಯಾಗಿ ದೂರಾದನೇ? || ೩||

 

Leave a Reply

*

code