ಅಂಕಣಗಳು

Subscribe


 

ಶಾಶ್ವತವಿಲಾಸಿನಿ

Posted On: Tuesday, August 25th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 89ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  :  ಸಖಿ/ಬಂಧು/ನೆರೆಮನೆಯಾಕೆಯ ದೂರನ್ನು ಕೇಳಿದ ನಾಯಿಕೆಯು ತನ್ನ ಕಾಂತನ ಬಗೆಗಿನ ವಿಶ್ವಾಸವನ್ನು ಪ್ರಕಟೀಕರಿಸುತ್ತಾ ಸಖಿಯನ್ನು ತರಾಟೆಗೆ ತೆಗೆದುಕೊಂಡ ಸ್ವಾಧೀನಪತಿಕೆಯ ಸನ್ನಿವೇಶವಿಲ್ಲಿನದ್ದು. ನಲ್ಲನನ್ನು ಸಮರ್ಥಿಸಿಕೊಂಬ ನಾಯಿಕೆಯ ನುಡಿಯಲ್ಲೇ  ತನ್ನ ಪ್ರೀತಿ ಜಗುಳಲಾರದು, ತನ್ನ ಪ್ರೇಮವಿಲಾಸಕ್ಕೆ ಯಾರು ಭಂಗ ತರಲು ಸಾಧ್ಯವಿಲ್ಲ ಎಂದೆಲ್ಲಾ ದೃಢವಾಗಿಯೇ ಹೇಳಿಕೊಂಡಿದ್ದಾಳೆ.

ಶಾಶ್ವತವಿಲಾಸಿನಿ

ರಾಗ : ಚಾರುಕೇಶಿ ; ತಾಳ : ರೂಪಕ

ನಂಜುನುಡಿಯಲೇಕೆ ನೀನು ? ಬಲ್ಲೆನಾತನಂ

ಅಂಜಿ ಮುನಿದು ಮರೆಯಲಾರೆ ನನ್ನ ನಲ್ಲನಂ ||ಪ||

 

ಅವನ ಚಾಳಿ-ಪಾಳಿಯೆಲ್ಲವಸಲು ತಿಳಿಯದೇ?

ಕವಿದು ಬಂದ ಕೂರ್ಮೆಯಿಂದ ಬರಿದೆ ಸೋಲ್ತೆನೇಂ ?

ಕವಲು ಕಾಣದೆನ್ನ ಕಾದಲ್ಕುಡಿಯದೆಂದಿಗೂ

ಶಿವನೆ ಬರಲಿ, ಜವನೆ ಬರಲಿ, ಜಗುಳಲಾರದು || ೧||

 

ಹೆರರ ಹಾಳು ಹೊಲಬುನುಡಿಯ ಸುರಿಗೆಯಿರಿದು ನೀ-

ನಿರದೆ ನನ್ನ ಮನವ ಮಸಣ ಮಾಡಲಪ್ಪೆಯೇಂ ?

ದುರುಳು ಜಗವದೆಲ್ಲರಲ್ಲೂ ಕೊರೆಯ ಕಾಂಬುದು

ಸರಿಯಲಾರೆನೊಲವಿನಿಂದ ದೂರವೆಂದಿಗೂ || ೨||

 

ಆರ ತಂತ್ರಕಾದೆ ನೀನು? ಚಾರುವಾಕ್ಯಸಂ-

-ಸಾರೆಯಾವ ನೀರೆ ನಿನ್ನ ಮರುಳುಗೆಯ್ದಳು?

ಸೂರೆಹೋಗಲೇಳು ನನ್ನ ಮಾನಜೀವನ !

ದೂರವಾಗಲೇಳು ಬಾಳು ಬೀತು ನಲ್ಲನಾ ! ||೩ ||

 

Leave a Reply

*

code