ಅಂಕಣಗಳು

Subscribe


 

ಪ್ರಣಯವ್ಯಥಿತೆ

Posted On: Thursday, May 14th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 21ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ.  ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ- ಪ್ರಣಯವೇ ವ್ಯಥೆಯಾಗಿ ಕಾಡುತ್ತಿರುವ ಮಟ್ಟಿಗೆ ನಾಯಕನಿಂದ ನಿರಾಶಾಪರಳಾಗಿ ದೀರ್ಘ ಚಿಂತಾರ್ಹಳಾದ ವಿಪ್ರಲಬ್ಧೆ.  ದೂತಿಯ ಮೂಲಕ ಬಗೆಬಗೆಯಾಗಿ ಮಾಡಿಸಲಾದ ಸಂಧಾನ ಪ್ರಯತ್ನಗಳು ವ್ಯರ್ಥವಾಗಿ, ನಾಯಕ ಒಲಿಯದ ಸಂಕಟ ಒಂದೆಡೆಯಾದರೆ; ಸವತಿಯರಿಂದಲೂ ದೂರೀಕರಿಸಲ್ಪಟ್ಟ ತವರಿನವರಿಗೆರವಾದ ಬದುಕು ಮತ್ತೊಂದೆಡೆ. ಆದರೂ ತನ್ನ ಗೋಳಿನ ನಡುವೆ ಪ್ರಯತ್ನಶೀಲೆ ಆಕೆ.

ಪ್ರಣಯವ್ಯಥಿತೆ

ರಾಗ : ; ತಾಳ : ಆದಿ

ಅತ್ತೂ ಕರೆದೂ ಔತಣವಾಯಿತು |

ತೊತ್ತಂತಾಯಿತು ಎನ್ನ ಗತಿ || ||

 

ಅಕ್ಕರೆಯಿಲ್ಲದ ಕೂಟವಿದಿನ್ನೇನು |

ಸಕ್ಕರೆಯಿಲ್ಲದ ಪಾಯಸವೇ || ಅ.ಪ ||

 

ದೂತಿಯ ಮೂಲಕ ನೂರು ಸಂಧಾನಸಂ-

ಪ್ರೀತಿಯ ಬೇಡಿಕೆ ದೂಡಿ ದೂಡಿ |

ಹಾತೊರೆದೊಡಲಿನ ಲಜ್ಜೆಯ ಮರೆತು ಬ-

ಲ್ಸೋತು ಜೀವಕೆ ಜೋತು ಕಾಡಿಬೇಡಿ || ೧||

 

ಸವತಿಯರಲ್ಲಿ ನಾಂ ಸವಕಲುಕಸವಾಗಿ

ನವೆದು ನೇಹಕೆ ನೋಂತು ಹಿಂದೆ ಬಿದ್ದು |

ಅವನಿಗೆ ವೆಗಟಾಗಿ, ನಲ್ಮೆಗೆ ಜಿಗುಟಾಗಿ

ತವರಿಗೆ ತೆರವಾಗಿ ಹಂಬಲಿಸಿ || ೨||

 

ಅವನಿರುವಲ್ಲಿಗೆ ನೆವಗಳನೊಡ್ಡಿ ನಾಂ

ಸವೆಯಿಸಿ ನಡೆಗಳ ನೂರು ಪರಿ |

ಜವದಿ ಎನ್ನಿಂಗಿತ ಸೂಚಿಸಿ ಯಾಚಿಸಿ

ಹವಣಿಸಿ ಬಾಯ್ಬಿಟ್ಟ ಹರಕೆ, ಹರೀ !! ||೩ ||

 

Leave a Reply

*

code