Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು
ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 10ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ.
ಪ್ರಕೃತ ಕಂತಿನಲ್ಲಿ ಭರತಮುನಿಯ ನಾಟ್ಯಶಾಸ್ತ್ರವನ್ನು ನೃತ್ಯರೂಪಕದಲ್ಲಿ ಅಭಿವ್ಯಕ್ತಿಸಲು ಉಪಯೋಗುವಂತೆ ಇಡಿಯ ನಾಟ್ಯಶಾಸ್ತ್ರ ಕಥನವನ್ನು ರೇಖಿಸಿಹ ರಚನೆಯನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಪ್ರಥಮಾಧ್ಯಾಯ ನಾಟ್ಯೋತ್ಪತ್ತಿಯಿಂದ ಮೊದಲ್ಗೊಂಡು ತಾಂಡವ ಪ್ರಕರಣರೂಪಕಗಳೆರಡರ ನಿರ್ಮಾಣ, ಚತುರ್ವೃತ್ತಿ ನಿರ್ಮಾಣದ ಸಹಿತ ಅಂತಿಮ ಅಧ್ಯಾಯ ನಾಟ್ಯಾವತರಣದ ವರೆಗೂ ನಾಟ್ಯಶಾಸ್ತ್ರದಲ್ಲಿ ಕೀರ್ತಿಸಲಾದ ಕತೆಗಳನ್ನು ಮತ್ತು ಮಾರ್ಗೋತ್ತರ ಕಾಲದಲ್ಲಿ ಪ್ರಸಿದ್ಧವಾದ ಉಷಾ ಪರಿಣಯ ಮತ್ತು ಆ ಬಳಿಕದ ನೃತ್ಯಗಾಥೆಯನ್ನು ಕಂದಪದ್ಯ, ಉತ್ಪಲಮಾಲಾ ಮೊದಲಾಗಿ ಅನೇಕ ಛಂದಸ್ಸುಗಳಿಂದ ಸೊಗಸಾಗಿ ಹೆಣೆಯಲಾಗಿದೆ. ಈ ರಚನೆಯೇ ಕನ್ನಡದ ಪಾಲಿಗೆ ಪ್ರಥಮವೆನಿಸಿದ ನಾಟ್ಯಶಾಸ್ತ್ರದ ಕಥನವಾಗಿದ್ದು; ಪ್ರಥಮತಃ ನೃತ್ಯಮಾಧ್ಯಮದಲ್ಲಿ ಅಭಿವ್ಯಕ್ತಿಸಿದ ಕೀರ್ತಿ ಕೀರ್ತಿಶೇಷ ಸುಂದರೀ ಸಂತಾನಂ ಅವರಿಗೆ ಸಲ್ಲುತ್ತದೆ.
(ರಾಗಮಾಲಿಕೆ; ತಾಳಮಾಲಿಕೆ)
(ಆಭೋಗಿ-ವಿತಾಳ) ಭರತಾಗಮಕಾಸಾರದ
ಸರಸೀರುಹಸದೃಶಮಪ್ಪ ನಲ್ಗತೆಗಳಿದೋ |
ತೆರೆದೆರ್ದೆಯಿಂದಾಲಿಸಿಮೊ-
ಲ್ದುರುಮನದಿಂ ನೋಡಿ ನಲಿಯಿರೊಲ್ದು ಸುಹೃದರೇ !
(ಮಾಯಾಮಾಳವಗೌಳ- ಆದಿತಾಳ )
ಕೃತಯುಗದಂತ್ಯದೆ ಹಿತವಿಲ್ಲದೆ ಜಗ-
ವತಿಬೇಸರದಿಂ ಬಳಲುತಿರೆ ||
ದೇವ-ದಾನವರು ; ಜೀವರಾಶಿಗಳು
ಮಾನವರೆಲ್ಲರು ತೊಳಲುತಿರೆ ||
ವಿರಿಂಚಿಯೆಡೆಗಂ ವಿಪಂಚಿರುಚಿಗಂ
ವಿರಾಗದಿಂದಂ ಬಳಿಸಂದು ||
ಬೇಡಿದರೆಲ್ಲರು ಒಮ್ಮನದಿಂ-ಕೈ ಜೋಡಿಸುತೆಲ್ಲರು ಬಿಮ್ಮೆನುತುಂ ||
ಬೇಕು ಬೇಕೆಮಗೆ ವಿನೋದ- ಅದು ಕಂಡುಕೇಳಿ ನಲಿವಾಮೋದ ||
‘ಕ್ರೀಡನೀಯಕಮಿಚ್ಛಾಮೋ ದ್ರಷ್ಟುಂ ಶ್ರೋತುಂ ಚ ಯದ್ಭವೇತ್ ’
ಆಟಿಕೆಯೊಂದನು ಬಯಸಿದೆವು- ಅದು ನೋಟಕಾಲಿಕೆಗೆ ಸಿಗಲೆಳೆಸಿದೆವು ||
(ಸುರುಟಿ ರಾಗ) ಈಗಾಗಲೇ ಎಲ್ಲವನು ಗೆಯ್ದ ವಿಧಿಯು
ಆಗಮವನೊಂದ ನಿರ್ಮಿಸಿದನಿದೊ ಹೊಸತು ||
ಋಗ್ಯಜುಸ್ಸಾಮಂಗಳಿಂದಥರ್ವದೊಳಿಂ
ಮೃಗ್ಯಸೌಂದರ್ಯಮಂ ಸಾಕಾರವಾಗಿ ||
( ಋಕ್ – ಅಗ್ನಿಮೀಳೇ ಪುರೋಹಿತಂ ; ಯಜುಸ್ – ಇಷೇ ತ್ವೋರ್ಜೇ ತ್ವಾ ; ಸಾಮ: ಅಗ್ನ ಆಯಾಹಿ ವೀತಯೇ ; ಅಥರ್ವ : ಶಂ ನೋ ದೇವಿರಭಿಷ್ಟಯಃ )
ವಾಚಿಕವ ಋಕ್ಕಿನಿಂದಾಂಗಿಕ ಯಜುಸ್ಸಿಂ
ರೋಚಕಂ ಗಾನ ಸಾಮದೆ ಕೋದು ನಲವಿಂ ||
ರಸವನಾಥರ್ಣದೆ ರೂಪಿಸಿ ವಿಧಾತಂ
ಹೆಸರಿಸಿದನೀ ಪಂಚಮಶ್ರುತಿಯ ಚೆಲುವಿಂ ||
(ಕುಂತವರಾಳಿ ರಾಗ, ರೂಪ್ಕತಾಳ ) ಇದು ನಾಟ್ಯಂ ಇದಕಾಟ್ಯಂ ತ್ರಿಭುವನವಿಶ್ರಾಂತಿಕರಂ
ಇದು ಸರ್ವಜನಾನಂದಪ್ರದ-ಸರಸವಿಹಾರಂ ||
ಭೀರುಗಳಿಗೆ ಧೈರ್ಯಪ್ರದ ; ವೀರರಿಗಿದು ಶಾಂತಿಪ್ರದ
ಆರ್ತರಿಗಿದು ಹರ್ಷಾಸ್ಪದ, ಕೂರ್ತವರಿಗೆ ಕಾಮ್ಯಪ್ರದ ||
ಇದು ಕೊಳ್ಳಿರಿದಂ ! ಮುದದೊಳ್ಳಿತಿಗಿದಂ !
(ದೇಶ್ ರಾಗ , ವಿತಾಳ ) ಮುನಿಭರತನಿಗೀ ಶ್ರುತಿಯಂ
ಜನಹಿತಕೆಂದಿತ್ತು ಕಮಲಸಂಭವನಾಗಳ್ ||
ಮನನೀಯಲಾಸ್ಯಕೆನುತುಂ
ಜನಿಯಿಸಿದಂ ಸುಂದರಾಪ್ಸರೆಯರಂ ನಲವಿಂ ||
(ಬೇಹಾಗ್‌ರಾಗ, ಮಿಶ್ರಛಾಪು ತಾಳ) ಹೊಮ್ಮಿಬಂದರು ಬಂಧುರಾಂಗನೆಯರ್ ಸಮಂತು ವಿಲಾಸದಿಂ
ಚಿಮ್ಮಿ ಸಂದರು ಸುಂದರಾನನೆಯರ್ ಸಮಂಚಿತ ಹಾಸದಿಂ ||
ಬಳ್ಳಿಯಂದದಿ ಬಳ್ಕುತಂ ಮಿಂಚುಳ್ಳಿಯಂದದೆ ತುಳ್ಕುತಂ |
ಮಿಂಚುಗೊಂಚಲು ಮೂಡಿಪ ಸ್ಮರಪಂಚಬಾಣಗಳೆಂಬಿನಂ ||
(ಅಮೃತವರ್ಷಿಣಿ ರಾಗ, ಆದಿತಾಳ ) ದೇವಾಸುರನರವೃಂದದೆದುರು ಮುನಿಭರತಂ – ನಾಟ್ಯರತಂ
ಭಾವಿಸಿ ತೋರಿದನಮೃತಮಥನರೂಪಕಮಂ – ದೀಪಕಮಂ ||
ಸದಸದ್ರೂಪದ ಚಿಂತನೆಗಳು ಮತಿಮಂಥನದಿಂ ಜಗದೊಳ್
ಒದವಿಪ ಸುಖದುಃಖಾನಂತರದಾನಂದವ ಸೂಚಿಸುತುಂ ||
(ಕೇದಾರಗೌಳ ರಾಗ ; ಖಂಡಛಾಪು) ಕಂಡಿದಂ ಕನಿಲಿತ್ತು ರಾಕ್ಷಸಕುಲಂ | ಚಂಡಿಸುತ್ತಳಿಸಿತ್ತು ರಂಗದ ನಲಂ ||
ಕಾಪಿಡಲ್ ರೂಪಕವನಿಂದ್ರದೇವಂ | ದಾಪಿಟ್ಟು ಜರ್ಜರದೆ ಪೊಯ್ದ ರಿಪುವಂ ||
ರಸರಂಗದಪಮಾನದಿಂ, ರಣರಂಗದೊಳು ಸೋಲಿನಿಂ
ಕಸಿವಿಸಿಯ ಬೇಸರದಿ ಕಳವಳದ ನೋವಿನಲಿ ||
ಅಸುರರೆಲ್ಲರು ಬ್ರಹ್ಮನಂ ಬೇಡಿದರ್ – ನಮಗೇಕೆ ಹೀನಾಯವೆಂದಾಡಿದರ್ ||
(ಸಾಮರಾಗ, ವಿತಾಳ ) ಕಂಗಳಿಗೆಂದು ಗೆಯ್ವ ರಮಣೀಯಕಯಾಗಮಿದಲ್ತೆ ಸರ್ವಥಾ
ಮಂಗಳಕಾರಿ ; ಈ ಬಗೆಗೆ ನೋಯ್ವುದು ಸಲ್ಲದು ; ನೀಗುತೆಲ್ಲ ಕಾ-
ಮಂಗಳ ರಾಗಮಂ, ಮುನಿಸಿನಿಂದೊಗೆದಿರ್ಪ ವಿರೋಧರೋಷಮಂ
ಸಂಗದ ಭಂಗಮಿಲ್ಲದ ಚಿದಂಬುಧಿಯಂದದೆ ನೋಳ್ಪುದೆಲ್ಲಮಂ ||
(ಸೌರಾಷ್ಟ್ರ ರಾಗ, ತ್ರ್ಯಶ್ರಆದಿತಾಳ) ಅಂದಿನಿಂದ ಜರ್ಜರದರಾಧನೆ-ಸಂಸ್ಥಾಪನೆ ರಂಗದೊಳ್
ಸಂದುದು; ಸಂರಕ್ಷಣೆಯೆನೆ ನಾಟ್ಯಕಲಾಲೀಲೆಗೆ ಜಗದೊಳ್ ||
(ಶಂಕರಾಭರಣ ರಾಗ, ಚತುರಶ್ರ ಆದಿತಾಳ) ಭರತಮುನಿಯು ತನ್ನವರ ಕೂಡೆ ಕೈಲಾಸಕೆಂದು ತೆರಳಿ
ಹರನ ಮುಂದೆ ಪುರಹರಣಲೀಲೆಯನು ತೋರೆ ನಾಟ್ಯದಲ್ಲಿ ||
ತ್ರಿಗುಣಗಳನು ಮೇಣವಸ್ಥಾತ್ರಯವ ಯೋಗಿ ಮೀರಿ ನಡೆವ
ತತ್ತ್ವವಿರುವ ಈ ದಿವ್ಯರೂಪಕವ ಮೆರೆಯೆ ಶಿವನು ನಲಿದ ||
(ಬಿಲಹರಿ ರಾಗ) ಇಳೆಯಾಯಿತು ರಥ, ಶ್ರುತಿಯಾದವು ಹಯ
ಚಂದ್ರ-ಸೂರ್ಯರಾಗಲು ಗಾಲಿ ||
ಮೇರುಧನುವಿಗಾ ವಾಸುಕಿ ಹುರಿಯೆನೆ
ವಿರಿಂಚಿಸಾರಥಿ ಶಿವನು- ಶ್ರೀಹರಿಸಾಯಕಚಿದ್ಭವನು ||
ಗೆಯ್ದ ಯುದ್ಧದೊಳ್ ತ್ರಿಪುರಾಸುರರು
ಸುಯ್ದು ಸೋತು ಸತ್ತರ್; ಅಯ್ದಿ ನರಕವಳಿದರ್ ||
(ಪೂರ್ವಿಕಲ್ಯಾಣಿರಾಗ, ತ್ರ್ಯಶ್ರ ಆದಿತಾಳ) ಶಿವನು ಕಂಡು ಭರತಮುನಿಯ ತ್ರಿಪುರದಾಹನಾಟ್ಯವ
ಸವಿಯನಿಮ್ಮಡಿಸುವ ತೆರದೆ ಕಲಿಸಿದನತಿಚೆಲುವಿನ ||
ತನ್ನ ಸಾಂಧ್ಯತಾಂಡವೀಯಕರಣಾಂಗಹಾರವ
ಸನ್ನುತ ಸರ್ವಾಂಗಭಾವ ಸಂಪನ್ನವಿಹಾರವ ||
(ದೇವಗಾಂಧಾರಿ ರಾಗ, ವಿತಾಳ) ಇಂತಪ್ಪ ನಾಟ್ಯಕಲೆಯೊಳ-
ನಂತಶಯನವಿಷ್ಣು ತನ್ನ ಮಧುಕೈಟಭಹೃತ್-
ಕಾಂಟನ ಕಾಲದೆ ಜನಿಸಿದ
ಕಾಂತಕಠೋರಪ್ರಕಾರವೃತ್ತಿಗಳೆರೆದಂ ||
(ಹರಿಕಾಂಬೋಧಿ ರಾಗ) ನಾರಾಯಣನಿರೆ ಶೇಷಶಯನದೊಳು, ನಾಭಿಕಮಲದಿಂ ವಿಧಿಯುದಿಸೆ |
ಸೃಷ್ಟಿಯನೆಸಗುವ ಆತನ ಯತ್ನವ ಮಧುಕೈಟಭರದಟಿಂ ತಡೆಯೆ ||
ಬ್ರಹ್ಮದೇವಸಂರಕ್ಷೆಗೆಂದು ಹರಿ ಉದ್ಧತರೂಪದ ಆರಭಟೀ ವೃತ್ತಿಯಿಂದೆ ಸೆಣಸಲು ಬರಲು |
ಮುಡಿಯು ಕೆದರಿತಾ ಕುರುಳನೆಲ್ಲವನು ಲೀಲೆಯಿಂದ ಕೈಶಿಕಿವಿಧಿಯಿಂ ಹೆಣೆದು ಕಟ್ಟಿಕೊಳುತಿರಲು ||
ನುಡಿಯು ಬೆಡಗಿನಿಂ ಮಾತಿನೇರಿನಿಂ ದನುಜರನ್ನು ಮರುಳಾಗಿಸಲೆನ್ನುತ ಭಾರತೀವೃತ್ತಿ ಬಳಸಲು |
ಕಟ್ಟಕಡೆಗೆ ಸತ್ತ್ವೋನ್ನತಿಯಿಂದಾ ಸಾತ್ತ್ವತೀವೃತ್ತಿಯನು ಬಳಸಿ ದೇವವೈರಿಗಳನಳಿಸಿರಲು ||
ಆಗ ಜನಿಸಿದವು ವೃತ್ತಿಗಳು | ರಂಗತಂತ್ರಸಂಪತ್ತಿಗಳು ||
(ವರಾಳಿ ರಾಗ, ಮಿಶ್ರಛಾಪುತಾಳ ) ಈ ಪರಿಯೊಳಾ ಹರಿ-ಹರ-ಬ್ರಹ್ಮರ ದಯಾನಯಲೀಲೆಯಿಂ |
ರೂಪುಗೊಂಡು ಸಮೃದ್ಧವಾದೀ ನಾಟ್ಯವೇದವನೊಲ್ಮೆಯಿಂ ||
ಭರತಮುನಿ ಬೋಧಿಸಿರೆ ತನ್ನಯ ಶಿಷ್ಯಪುತ್ರರಿಗಾದಿಯೊಳ್ |
ಮೆರೆದು ಮಲೆತರವರ್ಗಳೀ ಶ್ರುತಿ ದುರುಪಯೋಗಕೆ ಸಿಲ್ಕಿರೆ ||
(ವಾಗಧೀಶ್ವರಿ ರಾಗ, ತ್ರ್ಯಶ್ರ ಆದಿತಾಳ) ದೇವತೆಗಳ ಚಾರಿತ್ರ್ಯವ ಗೇಲಿಗರೆದು ನಲಿದರು
ಋಷಿ-ಮುನಿಗಳ ಮಾಹಾತ್ಮ್ಯವ ಧಿಕ್ಕರಿಸುತ ಮೆರೆದರು ||
ಹಿರಿಯರೆಂಬ ಗೌರವಕ್ಕೆ ಬೆಲೆನೀಡದೆ ಮಲೆತರು
ಕಿರಿಯತನದ ವಿನಯವನ್ನು ಕಳೆದು ಖೂಳರಾದರು ||
(ಹಂಸನಾದ ರಾಗ, ಖಂಡಛಾಪುತಾಳ ) ಇಂತಾಗಲಿದರಿಂದೆ ಮುನಿದು ಋಷಿವೃಂದ
ಅಂತರಂಗದೆ ಕುದಿದು ಶಪಿಸಿತಧಟಿಂದ ||
ಗಾಯತ್ರಿಗೆರವಾಗಿ, ವಿಪ್ರತ್ವವಿರದಾಗಿ
ನೋಯಲೆಂದೀ ಜನರು ಪತಿತರಿರ್ಕೆಂದು ||
(ಕಲ್ಯಾಣಿರಾಗ, ವಿತಾಳ) ಭರತಮುನಿಯ ಬೇಡಿಕೆಯಿಂ
ಸುರರೆಲ್ಲರ ನಲ್ಮೆಯಿಂದೆ ನಾಟ್ಯಕಲೆಯದೇ ||
ಗುರುತರಮಹರ್ಷಿಶಾಪಾ-
ಕ್ಷರಂಗಳಿಂ ಬಾಧೆಗೊಳ್ಳದಂತುಳಿದತ್ತು ||
ಉಷಾಪರಿಣಯ
(ಮೋಹನರಾಗ) ಗಿರಿಜೆ ಶಿವನಿಂ ಕಲಿತ ನಾಟ್ಯಕೆ ತನ್ನ ನಯಮಂ ಜೋಡಿಸೆ
ಮೆರೆದುದಾ ಕಲೆ ಮೃದುಲಮೋಹಕಲಾಸ್ಯಭಾಸುರಭಾವದಿಂ ||
ಇಂತು ಸಲ್ಲುವ ಕುಣಿತವಂ ಬಾಣಾಸುರಾತ್ಮಜೆಗೊಲ್ಮೆಯಿಂ
ಕಾಂತಕಾಯೆ ಸಮಂತು ಕಲಿಸಿದಳಲ್ತೆ ಭಕ್ತೆಗೆ ಭಾಗ್ಯಮಂ ||
(ದ್ವಿಜಾವಂತಿರಾಗ, ಆದಿತಾಳ ) ಒರ್ಮೆ ಕನಸಿನೊಳು ಕಾಂತಪುರುಷನಂ ಕೂರ್ಮೆ ಮೀರಿ ಕಂಡಳು ಬಾಲೆ
ನಸುಕಿನಲ್ಲಿ ನನಸಾಗಲೆಂದು ಕನಸನ್ನುಸುರಲು ಗೆಳತಿಯ ಬಳಿ ಲೀಲೆ ||
ಚಿತ್ರಲೇಖೆ ಬರೆದಳು ಜಗದೆಲ್ಲರ ಚಿತ್ರಸುಂದರ ಚಿತ್ರಗಳ |
ಅನಿರುದ್ಧನ ಚಿತ್ರದೊಳಾ ಉಷೆಕಣ್- ಬಿನದಂಬಟ್ಟುದು, ಕರಗಿತ್ತು ||
(ತಿಲಂಗ್ ರಾಗ, ಆದಿತಾಳ) ಚಿಂತೆಯೇಕೆಂದು ಚಿತ್ರಲೇಖೆ ತಾಂ ಕಾಂತೆಗೊರೆದು ನಟ್ಟಿರುಳಿನೊಳು |
ತಂದಳೊಯ್ಯನಾ ಅನಿರುದ್ಧನ ಮುದವೊಂದೆ ದ್ವಾರಕಾವತಿಯಿಂದಂ ||
ಕಣ್ಣು ಕಣ್ಣನೊಡನುಡಿದತ್ತು- ಮನವಿನ್ನು ಮನದೊಡಂ ಕೆಡೆದತ್ತು |
ಅನಿರುದ್ಧನ ಹೃದಯಾನುರಾಗವಾ ವನಿತೆ ಉಷೆಯಲ್ಲಿ ನೆಲೆಸಿತ್ತು ||
(ಮಧ್ಯಮಾವತಿ ರಾಗ, ಆದಿತಾಳ) ಈ ಪರಿ ಉಷಾನಿರುದ್ಧರ
ಲೋಪರಹಿತರಕ್ತಿಯಾಗೆ, ಪರಿಣಯಪಥದೊಳ್ |
ಸ್ತೂಪಿಸೆ, ದ್ವಾರಾವತಿಗಂ
ದೀಪಿಕೆ ಉಷೆ ಬಂದು ಕಲಿಸಿದಳ್ ಕಲೆಯನಿದಂ ||
(ಸಿಂಧುಭೈರವಿರಾಗ, ಖಂಡಛಾಪುತಾಳ) ಇಂತಾಯ್ತು ನಾಟ್ಯಶಾಸ್ತ್ರಾವತರಣಂ
ಸಂತಸಕ್ಕೆಡೆಯಾಯ್ತು ಸರ್ವಜನಕಂ |
ಧರೆಗಿಳಿದ ಪಂಚಮಶ್ರುತಿ ಎಲ್ಲ ಚೆಲುವಂ
ಎರೆದಿತ್ತು, ನಲವಿತ್ತು ; ಯೋಗವೆನಿಸೆ ||