Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು
ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 126ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ.
ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.
ಪ್ರಕೃತ, ನಾಯಿಕೆಯರಿಗೆ ಸಮದಂಡಿಯೋ ಎಂಬಂತೆ ಬರೆಯಲಾದ ನಾಯಕಾವಸ್ಥೆಗಳ ಪದ್ಯಗಳು ಪ್ರಕಟವಾಗುತ್ತಿದೆ. ಅಷ್ಟನಾಯಿಕೆಯರಿಗೆ ಪ್ರತಿಸ್ಪಂದಿಯಾಗುವ ಅಷ್ಟಾವಸ್ಥೆಗಳ ನಾಯಕರ ಶ್ರೇಣಿ ಶ್ರೀಯುತ ಗಣೇಶರದ್ದೇ ಕೊಡುಗೆ. ಆ ಲಕ್ಷಣಗಳ ಜೊತೆಜೊತೆಗೆ ಆ ನಾಯಕರ ಸ್ವಾರಸ್ಯವನ್ನು ಬಣ್ಣಿಸುವಂತೆ ನೃತ್ಯಾನುಕೂಲಿಯಾದ ಅನೇಕ ರಚನೆಗಳನ್ನು ಮಾಡಿದ್ದಾರೆ.
ಇಂದಿನ ನಾಯಕಾಭಿವ್ಯಕ್ತಿ : ಚೈತ್ರದ ಚಂದ್ರೋದಯದಲ್ಲಿ ಅಲಂಕಾರಭೂಷಿತನಾಗಿ ಎಲ್ಲಿಗೋ ನಡೆದುಹೋಗುತ್ತಿರುವ ನಾಯಕನ ಗಮ್ಯದ ಬಗ್ಗೆ ತಿಳಿಯುವ ಆಸಕ್ತಿಯಿಂದ ಬಗೆಬಗೆಯ ಪ್ರಶ್ನೆಗಳನ್ನೆತ್ತಿರುವ ರಚನೆಯಿದು. ಆತನ ನಡೆಯು ಪ್ರೇಮಪಾಥೇಯಕ್ಕೆ ಸವಿಯನ್ನಿತ್ತು ಮನ್ಮಥನನ್ನೇ ಕೈಹಿಡಿದೆತ್ತುವಂತಿದೆ. ಮತ್ತೆಲ್ಲಿಯೂ ಏಕಾಗ್ರನಾಗದೆ, ತನ್ನ ಗಮ್ಯವೊಂದನ್ನೇ ನೆಚ್ಚಿ ತೆರಳುವ ಆತನ ಗಮನವನ್ನು ವಿಕೇಂದ್ರೀಕರಿಸಲು ಬೇರಾವುದಕ್ಕೂ ಸಾಧ್ಯವಾಗದಾಗಿದೆ. ಆತನ ವಿರಹದ ಮಟ್ಟವನ್ನು ತಿಳಿಸುವಂತೆ ಬಗೆಬಗೆಯ ಸನ್ನಿವೇಶಗಳು ಒದಗಿಬಂದಿವೆ. ಹಾಗೆಂದೇ ಈತ ಅಭಿಸಾರಿಕಾ ನಾಯಿಕೆಯ ಸಮದಂಡಿಯಾದ ಅಭಿಸಾರಕ ನಾಯಕನಿವನು.
ನರ್ಮಯಾತ್ರಿಕ
ರಾಗ : ಖಮಾಚ್ ; ತಾಳ : ಮಿಶ್ರಛಾಪು/ಖಂಡಛಾಪು
ಯಾತ್ರೆಗೆ ತೆರಳಿರ್ಪೆಯಾ-ಸ್ಪತ್ಪಾತ್ರ ! |
ಚೈತ್ರಚಂದ್ರೋದಯದೊಳು ||ಪ||
ಪ್ರೇಮಪಾಥೇಯಕ್ಕೆ ಸ್ಮೃತಿಯ ಸವಿಯನ್ನಿತ್ತು |
ಕಾಮನ ಕೈವಿಡಿದೆತ್ತಲೆತ್ತಲ್ ||ಅ.ಪ||
ಸಿಂಗಾರದೊಗರೇನು? ಸಂಗಾತಿಗೊಲವೇನು?
ಸಂಗೀತಗತಿಯಂತೆ ಸಾಂಗತ್ಯವೇನು?
ಅಂಗೀಕರಿಸೆಯೇನು- ಅಂಗನೆಯರ ನೀನು?
ತಂಗದೆ ಹಿಂಗದೆ ಸಾಗುವೆಯೇನು? ||೧ ||
ತುಹಿನಾಂಶುತಾಪಕ್ಕೆ ತಳಮಳಗೊಳ್ವೆಯಾ?
ಸಹನೀಯವೇ ಕೋಕಿಯಾಕ್ರಂದನ?
ಸಿಹಿನೀರನ್ನೆರೆವ ಪ್ರಪಾಲಿಪಾಲಿಕೆಯರ
ಮಹಿಮೆಗೆ ಮನಸೋಲದಂತಿಹೆಯಾ? || ೨||
ಗಮ್ಯವದಾವುದು? ಸೌಮ್ಯ ! ಸಂಮೋಹಕ!
ಸಾಮ್ಯವದಾವುದೀ ಸಡಗರಕ್ಕೆ?
ರಮ್ಯರಾಜೀವಾಸ್ಯ ! ಕಾಮ್ಯಕರ್ಮಕ್ಕಾವ
ನಮ್ಯನಾಮಧೇಯ ನೀಡುವುದು? ||೩ ||