ಅಂಕಣಗಳು

Subscribe


 

ಅಭಿನಯಭಾರತೀ- ಮುಗ್ಧಾಭಿನಂದನಿ

Posted On: Thursday, November 5th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 101ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  :ತನ್ನಿಂದ ಚಿಕ್ಕವನಿದ್ದಿರಬಹುದಾದ ನಾಯಕನನ್ನು ಮುಗ್ಧನೆಂದೇ ಗಣಿಸಿದ್ದ ಪರಕೀಯ ನಾಯಿಕೆಯ ಗ್ರಹಿಕೆ ತಪ್ಪಾಗಿದೆಯೆನ್ನುವುದೇ ಈ ಪದ್ಯದ ಸ್ವಾರಸ್ಯ. ಸರಸವಾಡುವ ವರಸೆಯನ್ನು ಹೇಳಿಕೊಡಹೊರಟರೆ ತಾನೇ ವಿಲಾಸಗಳನ್ನು ರಸಾವಹವಾಗಿ ಪೂರೈಸಿದನೆಂದೂ ಹೇಳುವ ಆಕೆಯ ಆಕ್ಷೇಪಣೆಯಲ್ಲಿಯೇ ಮೆಚ್ಚುಗೆಯೂ ಮೈಮೂಡಿದೆ. ಹುಡುಗುತನದ ಚಿಗುರುಮೀಸೆಯ ಎಳೆಯವನೆಂದು ತಾನು ಬಗೆದಿರೆ, ತನ್ನಲ್ಲಿ ಮೋಹವನ್ನೂ, ಅದರೊಂದಿಗೆ ಕಳವಳವನ್ನೂ ಕೊಟ್ಟಿದ್ದಾನೆಂದೂ ಪ್ರಕಟೀಕರಿಸುತ್ತಾ ತನ್ನ ಪತಿ ಬರುವ ಹೊತ್ತಿಗೆ, ಎಚ್ಚರಿಸಲಾಗಿ ಮಿಂಚಿನಂತೆ ಕಣ್ಮರೆಯಾದನೆಂದೂ ಸನ್ನಿವೇಶವನ್ನು ಬಣ್ಣಿಸಿ ಸಖಿಯ ಬಳಿ ಹೇಳುತ್ತಾ ಆತನ ಚಟುಲತೆಯ ಬಗ್ಗೆ ಅಚ್ಚರಿಗೊಂಡಿದ್ದಾಳೆ.

ಮುಗ್ಧಾಭಿನಂದನಿ

ರಾಗ : ಕುಂತಲವರಾಳಿ ; ತಾಳ : ಏಕ

ಮುಗ್ಧನೆಂದರಿತಿದ್ದೆನಿವನನ್ನು ವಿ-

ದಗ್ಧನೆ ತಾನಾಗಿಹನೀತಂ ||  ||

 

ಸರಸದ ವರಸೆಯ ಕಲಿಸಲಿಕೆ

ಸರಿದರೆ ನಾನೀ ಸರದಾರಂ |

ಭರದಲಿ ಚರಮವಿಲಾಸಗಳ-

ನ್ನೊರೆದು ಮೆರೆಯಿಸಿದ ರಸಪೂರಂ ||||

 

ಎನ್ನಯ ಪತಿ ಬರ್ಪ ತರುಣದಲಿ

ಚೆನ್ನ! ನೀಂ ಜಾರಿಕೋ’ ಎಂಬ ಮುನ್ನಂ |

ಹೊನ್ನಿನ ಮಿಂಚನು ಮೀರಿಸುವಂ-

ತಿನ್ನು ಕಾಣಿಸದೆ ಮೆಯ್ಮರೆಯಾದಂ ||||

 

ಹುಡುಗುತನದ ಚಿಗುರ್ಮೀಸೆಯವಂ

ನಡುಗುವನೆಂದಾಂ ಬಗೆದಿರಲು |

ನೆಡಿಸಿದನೆನ್ನೊಳೇಂ ಮೋಹವನು

ಕೊಡಿಸಿದನಲ್ಲೇ! ಕಳವಳವಂ ||೩ ||

Leave a Reply

*

code