Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು
ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 24ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ.
ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.
ಇಂದಿನ ನಾಯಿಕೆ- ಆಗತಾನೇ ಮನೆಗೆ ಬಂದ ನಾಯಕನನ್ನು ಚಾಳಿಸುವ ಈಕೆ ಖಂಡಿತೆಯೇ. ಹೆಣ್ಣುಗಳನ್ನು ಬೇಟೆಯಾಡುವಷ್ಟರ ಮಟ್ಟಿಗೆ ಲೋಲನೆಂಬುದಾಗಿ ಹದವಾಗಿ ಹಂಗಿಸುತ್ತಾ, ಆತನ ಜಾಲದ ಕುರಿತು ವ್ಯಂಗ್ಯವಾಗಿ ಪ್ರಶ್ನಿಸಿ ವಿಮರ್ಶಿಸುತ್ತಿದ್ದಾಳೆ. ಆತನ ರತಿಬೇಟೆಗೆ ಸಾಕ್ಷಿಯಾಗಿಯೋ ಎಂಬಂತೆ ಕಾಣುತ್ತಿರುವ ದೇಹದ ಮೇಲಿನ ಚಿಹ್ನೆಗಳನ್ನೂ ಗಮನಿಸಿ ಆಡಿಕೊಂಡಿದ್ದಾಳೆ.
ಮೃಗಯಾವಿಮರ್ಶಿನೀ
ರಾಗ : ಶುದ್ಧಸಾವೇರಿ ತಾಳ : ತ್ರ್ಯಶ್ರಗತಿ ಆದಿ
ಬೇಟೆಯಿಂದ ಮರಳಿ ಬಂದೆಯಾ ಮನೋಹರಾ !
ಬೇಟೆಯೂಟ ಸವಿದು ಬಂದೆಯಾ ? ||ಪ||
ಆವ ತರುಣ ಹರಿಣಿ ನಿನ್ನ ಬಲೆಗೆ ಬಿದ್ದಳು?
ಆವ ಸಮದಕರಿಣಿ ನಿನ್ನ ಕಣೆಗೆ ಸಿಕ್ಕಳು?
ಆವ ರಸಿಕ ಶಾರಿ ನಿನ್ನ ಭಾವಪಂಜರದೊಳು ಬಂದಿ ?
ಹೊಂಚು ಹಾಕಿ ಸಂಚು ಮಾಡಿ ಮಂಚಕಟ್ಟಿಸಿ
ಚಂಚಲತ್ವ ನೀಗಿ ಸಾಗಿ ವಂಚಿಸುತ್ತಲಿ
ಪಂಚಬಾಣಮಹಿಮೆಯಿಂದ ಸಂಚಯಿಸಿದ ಸತ್ತ್ವವೆಲ್ಲಿ ?
ಬಳುಕುಬಳ್ಳಿತೋಳ್ಗಳಲ್ಲಿ ಸಿಲುಕಿ ನುಲಿದೆಯಾ?
ಹುಲಿಯ ಹಲ್ಲು-ಕರಡಿಯುಗುರು ಗುರುತಿದಲ್ಲವೇ?
ಅಲತಿಗೆಯನು ಪೋಲ್ವ ರಕ್ತದೆಳೆಗಳೇನು ಫಾಲದಲ್ಲಿ?
ನೆರೆಯ ಮನೆಯ ಸೇರಿಕೊಂಡ ಭೋಗಿನಿಯನು ನೀ
ಭರದಿ ಬೇಟೆಯಾಡಲೆಂದು ಸುದ್ದಿ ಬಂದಿದೆ
ಕೊರತೆಯಿಲ್ಲ ಊರಿನಲ್ಲು? ತರಳ ! ನಿನ್ನ ಸರಳ ಗುರಿಗೆ !!