ಅಂಕಣಗಳು

Subscribe


 

ಔಚಿತ್ಯಾನ್ಯೆ

Posted On: Saturday, July 18th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 63ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕನ ಪ್ರಣಯರುಚಿಯನ್ನು ಒಂದೇ ದಿನಕ್ಕೆ ಖಾಲಿ ಮಾಡಿ ಉಣ್ಣುವ ದುಂದುಗಾರಿಕೆ ತರವಲ್ಲವೆಂದು ಪರಕೀಯ ನಾಯಿಕೆಯೇ  ಔಚಿತ್ಯವನ್ನು ಉಪದೇಶಿಸಿರುವುದು ಈ ಪದ್ಯದ ಸೊಗಸು. ಹಾಗೆಂದು ಆಕೆ ಹೇಳುವುದರ ಹಿಂದೆ ಸಾಕಷ್ಟು ಕಾರಣಗಳೂ ಇವೆ. ಸಂಜೆಯಾಗಿದೆ; ಆತಂಕಿತಳಾಗಿದ್ದಾಳೆ. ಸುತ್ತಮುತ್ತಲಿನವರಲ್ಲಿ ತಮ್ಮ ವಿಷಯ ಗುಲ್ಲಾಗುವ ಸಾಧ್ಯತೆಗಳಿವೆ. ನೂರೆಂಟು ನೆಪಗಳಿಂದ ನಲ್ಲನ ಬಳಿ ಬಂದಿರುವ ಈಕೆಯನ್ನು ಕಾಣದೆ ಪತಿ ಕುಪಿತನಾಗುವ ಸಾಧ್ಯತೆಗಳಿವೆ. ಹಾಗೆಂದು ಆಸೆಗಳೇನು ಬತ್ತಿಹೋಗಿಲ್ಲವಲ್ಲ ನಾಯಿಕೆಗೆ ! ನಲ್ಲನ ಬಗೆಬಗೆಯಾದ ರತಿಚೇಷ್ಟೆಗಳಿಂದ ಚಿತ್ತವೂ ತುಂಬಿದೆ; ಸಂಯಮವೂ ಕಳೆದುಹೋಗುತ್ತಿದೆ. ಹಾಗೆಂದೇ ಆತನೊಂದಿಗೆ ಲಲ್ಲೆಗರೆಯುತ್ತಲೇ ಸಂಯಮವನ್ನು ಉಪದೇಶಿಸಿ ಅವನೊಂದಿಗಿದ್ದ ಕ್ಷಣ ಮಿಂಚಿನಂತೆ ಬಂದು ಹೋಯಿತಲ್ಲ ಎಂದು ವಿಷಣ್ಣಳೂ ಆಗಿದ್ದಾಳೆ.

ಔಚಿತ್ಯಾನ್ಯೆ

ರಾಗ: ಸುರುಟಿ ; ತಾಳ : ಆದಿ/ಮಿಶ್ರಛಾಪು

ಆಸೆಗೆ ಇತಿಯೆಲ್ಲಿ? ಮೋಹಕ್ಕೆ ಮಿತಿಯೆಲ್ಲಿ

ಈ ಸರಸವು ಸಾಕೋ |

ಒಂದೇ ದಿನದೊಳಗಂದಿಸಿಕೊಳ್ಳುವ

ದುಂದುಗಾರಿಕೆಯೇಕೋ ? ||ಪ||

 

ಹೊತ್ತು ಕಂತುತ್ತಿದೆ; ಕತ್ತಲೆ ಕವಿದಿದೆ

ಚಿತ್ತವು ತುಂಬುತ್ತಿದೆ |

ಸುತ್ತಲಿನವರೇನೋ ಬಿತ್ತುವ ಮುನ್ನವೇ

ತುತ್ತೆತ್ತಿ ಕೈ ತೊಳೆಯೋ || ೧||

 

ನೆಪಗಳು ನೂರೆಂಟು ವಿಪುಲಿಸೆ ನಾ ಬಂದೆ

ತ್ರಪೆಯನು ಕೊನೆಮಾಡೋ

ಕುಪಿತನಾಗನೆ ಎನ್ನ ಉಪಟಳಿಸುವ ಪತಿ ?

ಸಪದಿ ಸಂಪೂರ್ತಿಸೋ ! || ೨||

 

ಸಂಯಮವಳಿಯುವ ಸಮಯ ಬರುತಿದೆ

ಸಂಪು ಹೊಡೆಯುವೆಯೇಕೋ

*ಪುಂಯುವತಾಸ್ಮಿತ ! ವಿರಮಿಸಿ ರಕ್ಷಿಸೊ !

*ಶಂಪಾಚಲವೀ ಸ್ಥಿತಿ || ೩||

 

*ಪುಂಯುವತಾಸ್ಮಿತ = ಪೌರುಷ ಯೌವನಗಳ ಸೊಗಡಿನ ಸ್ಮಿತವುಳ್ಳವ

*ಶಂಪಾಚಲ = ಮಿಂಚಿನಂತೆ ಚಂಚಲ

 

Leave a Reply

*

code