Author: 'ಮನೂ' ಬನ
(ವಿ.ಸೂ : ಹಸ್ತ ವಿನಿಯೋಗದ ಪ್ರಧಾನ ಅಂಶಗಳನ್ನು ಅಭಿನಯ ದರ್ಪಣದಿಂದಲೂ, ಇತರೆ ವಿನಿಯೋಗಗಳನ್ನು ನೃತ್ಯ ಶಾಸ್ತ್ರಕ್ಕೆ ಸಂಬಂಧಿಸಿದ ನಾಟ್ಯಶಾಸ್ತ್ರ, ಹಸ್ತ ಮುಕ್ತಾವಳಿ, ನರ್ತನ ನಿರ್ಣಯ, ಲಾಸ್ಯರಂಜನ, ಹಸ್ತ ರತ್ನಾವಳಿ, ಭರತಾರ್ಣವ, ಸಾರಸಂಗ್ರಹ, ಸಂಗೀತ ರತ್ನಾಕರ, ಭರತಸಾರ, ಪತಂಜಲಿ ಯೋಗ ಶಾಸ್ತ್ರ ಮುಂತಾದವುಗಳಿಂದ , ಸಂಶೋಧನೆಗಳಿಂದ ಉಲ್ಲೇಖಿತ.)
ಲಕ್ಷಣ: ಪತಾಕ ಹಸ್ತದ ಅಂಗೈ ಮಧ್ಯ ಭಾಗವನ್ನು ಕುಗ್ಗಿಸಿ, ಹಳ್ಳದಂತೆ ಮಾಡಿ, ಬೆರಳುಗಳ ತುದಿಯನ್ನು ಸ್ವಲ್ಪವೇ ಮಡಿಸಿದಂತೆ ಮಾಡುವುದು. ಹಸ್ತ ಮುಕ್ತಾವಳಿಯಲ್ಲಿ ಸರ್ಪಶಿರವೆಂದು ಹೆಸರು. ಸರ್ಪಶಿರ ಎಂದರೆ ಹಾವಿನ ಹೆಡೆ ಎಂದರ್ಥ. ಇದು ನಪುಂಸಕ ಹಸ್ತದ ಪ್ರಕಾರಗಳಲ್ಲಿದೆ. ಒಡಿಸ್ಸಿ ನೃತ್ಯಪ್ರಕಾರದಲ್ಲಿ ಈ ಹಸ್ತಕ್ಕೆ ದನ್ಶ, ಮಣಿಪುರಿಯಲ್ಲಿ ಅಹಿತುಂಡ ಎಂದು ಹೆಸರು. ಯೋಗ ಶಾಸ್ತ್ರದಲ್ಲಿ ಉಲ್ಲೇಖಿತವಾಗಿರುವ ಶಾಸ್ತ್ರೀಯ ಮುದ್ರೆಗಳ ಪೈಕಿ ಎಲ್ಲ ಬೆರಳುಗಳನ್ನು ಓರೆಯಾಗಿ ಹಾವಿನಂತೆ ಮಡಚುವುದು ಗ್ರಾಸ ಮುದ್ರಾ ಎನಿಸಿಕೊಳ್ಳುತ್ತದೆ.
ವಿನಿಯೋಗ: ಚಂದನ, ಹಾವು, ಮಂದ್ರಸ್ಥಾಯಿ, ತಲೆಯ ಮೇಲೆ ನೀರು ಚಿಮುಕಿಸುವುದು, ಪೋಷಣೆ, ದೇವರ್ಷಿಗಳ ತರ್ಪಣ ಬಿಡುವುದು, ಪಕ್ಕದವರನ್ನು ತಟ್ಟುವುದು, ಆನೆಯ ಕುಂಭಸ್ಥಳ, ಮಲ್ಲರು ಭುಜ ತಟ್ಟುವುದು, ನಿಧಾನ ಸೂಚನೆ, ಪಾಲಿಸುವುದು.
ಇತರೆ ವಿನಿಯೋಗ: ತಲೆಯ ನೇವರಿಕೆ, ಕಣ್ಣೀರು ಒರೆಸುವುದು, `ಅಯ್ಯೋ, ಅಬ್ಬ” ಎಂಬ ಅರ್ಥದಲ್ಲಿ, ಮುಖಮಾರ್ಜನ, ಕುಳ್ಳನನ್ನು ತೋರಿಸುವುದು, ನಮಸ್ಕಾರ, ಪ್ರತಿಮೆ, ಲಜ್ಜೆ, ಹಿರಿಯರ ಮಾತನ್ನು ಕೇಳುವುದು, ಕಣ್ಣು ಮುಚ್ಚುವುದು, ವಿಚಾರ ಚಿಂತನೆ, ಮೃಗಗಳ ಕಿವಿಯನ್ನು ಸೂಚಿಸುವುದು, ಚಪ್ಪಾಳೆ, ದೋಣಿ, ದೊನ್ನೆ, ಕುಶಲ ಪ್ರಶ್ನೆ, ಗಂಧ ತೆಗೆದು ಕೊಳ್ಳುವುದು, ಮ್ಲೇಚ್ಛರ ವಂದನೆ, ಶ್ರೇಷ್ಟ ಸ್ತ್ರೀ, ಕುಂಕುಮ ಕೊಡುವುದು, ಕೆಸರು ತೆಗೆಯುವುದು, ದಾನ ಕೇಳುವುದು, ಗಡ್ಡವನ್ನು ಹಿಡಿಯುವುದು, ಹಾವಿನ ಗತಿ ತೋರಿಸಲು, ಕಣ್ಣುಮುಚ್ಚಾಲೆ, ದುಃಖಿತರಾಗಿ ಕೆನ್ನೆಗೆ ಕೈಯಿಡುವಾಗ, ಗೆದ್ದಾಗ ತೊಡೆ ತಟ್ಟಲು, ಬಿಸಿಲ ಝಳಕ್ಕೆ ಮುಖಮುಚ್ಚುವುದು, ಬಾಳೆಗೊನೆ ತೋರಿಸುವುದು, ಮೃಗಗಳ ಕಿವಿ, ಕುಂಕುಮ-ಚಂದನ, ಹೆಣ್ಣಿನ ಆಕಾರ ತೋರಿಸುವುದು, ಘಟವಾದ್ಯ ನುಡಿಸುವಾಗ, ಅಭ್ಯಂಜನ, ಅತ್ಯಾಶ್ಚರ್ಯ ಇವುಗಳನ್ನು ಅಭಿನಯಿಸುವಾಗ ಬಳಕೆಯಾಗುತ್ತದೆ.
ಸಂಕರ ಹಸ್ತ ವಿಭಾಗದಲ್ಲಿ ಬೈತಲೆ ಚಾಚಲು, ಹಣೆಯ ಪ್ರದೇಶದಲ್ಲಿ ಸರ್ಪಶೀರ್ಷವನ್ನು ಹಿಡಿದಾಗ, ನಾನಾರ್ಥ ಹಸ್ತ ವಿಭಾಗದಲ್ಲಿ ಸರ್ಪಶೀರ್ಷವನ್ನು ಅಡ್ಡಲಾಗಿ ಹಿಡಿದರೆ ಪಕ್ಷಕಾಲವೆಂದೂ, ಅಧೋಮುಖವಾಗಿ ಹಿಡಿದರೆ ಭಾವ ಪ್ರಯೋಗದಲ್ಲೂ, ಹೇಮಂತ ಋತುವೆಂದೂ, ಕಾಳಿಂಗ ನರ್ತನದ ಕೃಷ್ಣನ ನಾಟ್ಯದಲ್ಲೂ ಬಳಸಬಹುದು.
ಸರ್ಪಶಿರ ಹಸ್ತಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಎತ್ತಿ ಕೆಳಗಿಳಿಸುವುದು ಕ್ಷೀರ (ಹಾಲಿನ ಸಾಗರ)ದ ಸೂಚಕ. ಎಡಗೈಯಲ್ಲಿ ಸರ್ಪಶೀರ್ಷ ಹಸ್ತವನ್ನು, ಬಲಗೈಯಲ್ಲಿ ಸೂಚೀ ಹಸ್ತವನ್ನು ಹಿಡಿದರೆ ರಾಹು ಹಸ್ತ. ಎಡಗೈಯಿಂದ ಸರ್ಪಶಿರವನ್ನು ಹಿಡಿದು ಅದರ ಮೇಲೆ ಬಲಗೈಯಿಂದ ಮೃಗಶೀರ್ಷವನ್ನು ಹಿಡಿದರೆ ಪುತ್ರೀಪುತ್ರ ಹಸ್ತ.
ಯಕ್ಷಗಾನದಲ್ಲೂ ಸರ್ಪ, ಆನೆ, ಮಲ್ಲರ ಶೌರ್ಯಪ್ರದರ್ಶನ ತೋರಿಸುವಾಗ ಬಳಕೆಯಾಗುತ್ತದೆ.
ನಿತ್ಯಜೀವನದಲ್ಲೂ ಹಾವು ಎನ್ನಲು, ತುರಿಸಿಕೊಳ್ಳಲು, ಸುಮ್ಮನೇ ಕೆನ್ನೆಯ ಮೇಲೆ ಕೈಯಿಟ್ಟು ಯೋಚಿಸಲು ಬಳಕೆಯಾಗುತ್ತದೆ.
ಹಸ್ತ ಮುಕ್ತಾವಳಿಯ ಪ್ರಕಾರ ಈ ಹಸ್ತಕ್ಕೆ ೧೭ ವಿನಿಯೋಗಗಳಿವೆ. ಜೊತೆಗೆ ವರ್ಧಮಾನ ಹಸ್ತವೆಂಬ ಸಂಯುತ ಹಸ್ತದಲ್ಲಿ ಸರ್ಪಶಿರ ಹಸ್ತದ ಬಳಕೆಯಾಗುತ್ತದೆ.
ಸರ್ಪಶಿರ ಹಸ್ತಗಳನ್ನು ಮೊಳಕೈ ಬಳಿ ಅಡ್ಡವಾಗಿ ತಿರುಗಿಸಿ (ಕೈಕಟ್ಟಿಕೊಂಡಂತೆ) ಒಂದರ ಮೇಲೊಂದನ್ನು ಕೆಳಮುಖವಾಗಿ ಹಿಡಿಯುವುದರಿಂದ ಕೂರ್ಪರಸ್ವಸ್ತಿಕ ಎಂಬ ಹಸ್ತವೇರ್ಪಡುತ್ತದೆ. ಕೂರ್ಪರಸ್ವಸ್ತಿಕ ಎಂದರೆ ಸ್ವಸ್ತಿಕಾಕೃತಿಯಾದ ಮೊಳಕೈ.
ವಿನಿಯೋಗ: ರಾಜ ಮತ್ತು ಗುರುಗಳ ಸಮೀಪದಲ್ಲಿ ವಿನಯ ಪ್ರದರ್ಶನ, ಕಲಿತ ವಿದ್ಯೆಯನ್ನು ಒಪ್ಪಿಸುವುದು, ಆಶಾಭಂಗ, ಆನಂದಾವಿರ್ಭಾವ ಪರಾಙ್ಮುಖತೆ.
ಮೊಣಕೈ ಮತ್ತು ಭುಜದ ನಡುವೆ ಸರ್ಪಶೀರ್ಷ ಹಸ್ತಗಳಿಂದ ಹಿಡಿದುಕೊಂಡರೆ ಗಜದಂತಹಸ್ತ ಎನ್ನುತ್ತದೆ ನಾಟ್ಯ ಶಾಸ್ತ್ರ. ಸಂಗೀತ ರತ್ನಾಕರ, ಹಸ್ತಮುಕ್ತಾವಳಿಯಲ್ಲೂ ಇದು ಕಂಡು ಬಂದಿದ್ದು, ಸರ್ಪಶೀರ್ಷ ಹಸ್ತಗಳ ಸ್ಥಾನಕದ ಬದಲಾವಣೆಗಳಿವೆ.
ಇನ್ನೊಂದು ಮೂಲದ ಪ್ರಕಾರ ಅಂಗುಷ್ಟಗಳು ಮೇಲ್ಮುಖವಾಗಿರುವಂತೆ ಅರ್ಧಚಂದ್ರ ಹಸ್ತಗಳನ್ನು ಎದೆಗೆ ಒಂದಕ್ಕೊಂದು ಎಂಟು ಅಂಗುಲ ದೂರವಾಗಿರುವಂತೆ ಅನ್ಯೋನ್ಯಾಭಿಮುಖವಾಗಿ ಹಿಡಿಯುವುದು ಗಜದಂತ ಎಂದರೆ ಆನೆಯ ಕೋರೆಹಲ್ಲು.
ವಿನಿಯೋಗ: ವಧೂವರರ ವಿವಾಹದಲ್ಲಿ, ಅತಿ ಭಾರವಾದುದನ್ನು ಒಯ್ಯುವುದರಲ್ಲಿ, ಕಂಬವನ್ನು ಹಿಡಿದೆತ್ತುವುದು, ಕಲ್ಲುಗಳನ್ನು ಒಡೆಯುವುದು, ಆನೆ, ಉಯ್ಯಾಲೆ, ನೋಡುವುದು, ತೋಳುಗಳ ಮುರಿತದಿಂದಾದ ಶಬ್ದ. ಆನೆಯ ದಂತ, ಉದ್ದನೆಯ ದೋಣಿ, ಕುಂಬಾರನು ಮಡಿಕೆ ಹೊತ್ತೊಯ್ಯುವುದು. ಮನೆಯ ಬಾಗಿಲು, ಎರಡು ಸಾಲು, ಪುಸ್ತಕದ ಪ್ರಮಾಣ, ಹಲಸಿನ ಕಾಯಿ, ರಸ್ತೆಯ ಮಧ್ಯಭಾಗ.