Author: ಅಂಬಿಕಾ ಬಿ.ಜಿ, ಹರೀಶ್ ಟಿ.ಜಿ.,ಭ್ರಮರಿ ಶಿವಪ್ರಕಾಶ್,ಸುರೇಶ್ ಬಿ.ವಿ.ಜಾಲಹಳ್ಳಿ,ಸದಾನಂದ ಸುವರ್ಣ,ಡಿ. ಕೇಶವ,
ಬಡಗುತಿಟ್ಟು ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ, ಉಡುಪಿಯ ಶ್ರೀದೇವಿ, ಬೆಂಗಳೂರಿನ ರವಿಶಂಕರ ಶರ್ಮ, ನಂದಕುಮಾರ್, ವಿನಾಯಕ ಕೋಡ್ಸರ, ಕಣ್ವತೀರ್ಥ ನಾರಾಯಣ ಭಟ್, ಕೂಚಿಪುಡಿ ನೃತ್ಯ ಗುರು ವೀಣಾ ಮೂರ್ತಿ ವಿಜಯ್ ಶುಭ ಹಾರೈಸಿ ಪ್ರಶಂಸಿಸಿದ್ದಾರೆ.
ನಿಜಕ್ಕೂ ಅಪೂರ್ವವಾದ ಕಾರ್ಯ ನಿಮ್ಮದು. ಅಭಿನಂದನೆಗಳು. ನೂಪುರದ ಭ್ರಮರಿಯ ಅಭಿವೃದ್ಧಿಗಾಗಿ ನೀವು ಆರಿಸಿಕೊಂಡ ಮಾರ್ಗದಲ್ಲಿ ಔನತ್ಯ ಕಾಣಲಿ. ನಿಮ್ಮ ವೆಬ್ಸೈಟ್ನಲ್ಲಿ ಲೇಖನಗಳನ್ನು ಓದಲು ಅತೀವ ಆನಂದಪಡುತ್ತೇನೆ.
-ಡಿ. ಕೇಶವ, ‘ಕಲಾಶ್ರೀ’, ಬಾಸೆಲ್, ಸ್ವಿಟ್ಜರ್ಲ್ಯಾಂಡ್
ನೂಪುರ ಭ್ರಮರಿ ಚಿಕ್ಕ, ಚೊಕ್ಕ ಆಕರ್ಷಕ ಪತ್ರಿಕೆ. ಚೆನ್ನಾಗಿದೆ. ಪತ್ರಿಕೆ ನಡೆಸುವುದು ಒಂದು ಸಾಹಸವೇ ಸರಿ. ಈ ಸಾಹಸಕಾರ್ಯದಲ್ಲಿ ನಿಮಗೆ ಶುಭವಾಗಲೆಂದು ಹಾರ್ದಿಕವಾಗಿ ಬಯಸುತ್ತೇನೆ. ಅಭಿನಂದನೆಗಳು.
-ಸದಾನಂದ ಸುವರ್ಣ, ರಂಗಕರ್ಮಿ, ಮಂಗಳೂರು.
ರಾಕೇಶ್ ಕುಮಾರ್ ಕಮ್ಮಜೆ ಅವರ ‘ಕೆಂಡ ತಂದಿಟ್ಟರೂ ಕೆಂಡವಾಗದ ನರಸಿಂಹ ಭಟ್’ ಲೇಖನ ಚೆಂಡೆ ಕಲಾವಿದ ನೆಡ್ಲೆ ನರಸಿಂಹ ಭಟ್ ಅವರ ಸೌಮ್ಯತೆಯನ್ನು ಎತ್ತಿ ಹಿಡಿದಿದೆ. ಹಾಗೂ ಎನ್ವೀ ವೈದ್ಯ ಅವರು ಬರೆದ ‘ಶಿರಸಿಯಲ್ಲಿ ಮೊಟ್ಟಮೊದಲ ಕಥಕ್ ಡಿಪ್ಲೋಮಾ ತರಗತಿ’ ಲೇಖನದಿಂದ ಶಿರಸಿ ನಗರದಲ್ಲಿ ಇಂತಹ ಶಿಕ್ಷಣ ಇರುವುದು ನೃತ್ಯಾಸಕ್ತರಿಗೆ ತಿಳಿಯುವಂತಾಯಿತು. ಅನೂಷಾ ಭಟ್ ಅವರ ‘ಥಾಟ್-ಪರಿಚಯ’ ಲೇಖನ ಸಂಪೂರ್ಣ ಮಾಹಿತಿ ನೀಡಿ ಓದುಗರಿಗೆ ಹಿಡಿಸುವಂತಿದೆ.
– ಜ್ಯೋತಿ ಎಲ್. ಹೆಗಡೆ, ಸಿದ್ದಾಪುರ, ಉತ್ತರ ಕನ್ನಡ.
ಸಂಚಿಕೆ ಸುಂದರವಾಗಿ ಬಂದಿದೆ. ಮಂಜೀರದಲ್ಲಿ ವ್ಯಕ್ತವಾದ ಆತಂಕಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಕಲೆಯ ಹೊರತಾಗಿಯೂ, ಕಲೆಗಿಂತ ಬದುಕಿಗೆ ಇನ್ನಷ್ಟು ಅನಿವಾರ್ಯವಾದ ಸಂಗತಿಗಳ ಕುರಿತು ಇದೇ ರೀತಿಯ ದಿವ್ಯ ತಾತ್ಸಾರ ಕಾಣುತ್ತಿದೆ. ಇದು ಮತ್ತೂ ದೊಡ್ಡ ಬೆಂಕಿ. ಸಂಚಿಕೆ ಸಂಗ್ರಹಿಸುವಂತಿದೆ.
-ಎನ್ವೀ ವೈದ್ಯ ಹೆಗ್ಗಾರ್, ಶಿರಸಿ
ನಿಮ್ಮ ಕಲಾಸಕ್ತಿ ನಿಜಕ್ಕೂ ಸಂತಸ ತಂದಿದೆ. ನೃತ್ಯಕ್ಕೆ ಸಂಬಂಧಿಸಿದಂತೆ ನೂಪುರ ಭ್ರಮರಿಯ ಹುಟ್ಟು, ಬೆಳವಣಿಗೆ ಕಲಾವಿದರಿಗೆ ಮಾರ್ಗದರ್ಶಿಯಾಗಿದೆ. ಪ್ರಯತ್ನ ಉತ್ತುಂಗಕ್ಕೇರಲಿ.
– ಕುಮಾರ್ ಪೆರ್ನಾಜೆ, ಪುತ್ತೂರು, ದ.ಕ
ನೂಪುರ ಭ್ರಮರಿ ಸಂಚಿಕೆಗಳನ್ನು ಗಮನಿಸುತ್ತಿದ್ದೇನೆ. ವಿಶಿಷ್ಟ ಪ್ರಯತ್ನ. ನೃತ್ಯಾಸಕ್ತರು ಅಗತ್ಯ ಗಮನಿಸಬೇಕಾದ ಲೇಖನಗಳನ್ನು ಕಲೆ ಹಾಕುತ್ತಿದ್ದೀರಿ. ಶುಭಾಶಯಗಳು.
ದೂರದ ಅಮೇರಿಕದಲ್ಲಿದ್ದರೂ ನನ್ನ ಮಿತಿಯೊಳಗೆ ನೃತ್ಯದ ಒಲವನ್ನು ಉಳಿಸಿಕೊಂಡ ನನಗೆ ನಿಮ್ಮ ಸಂಚಿಕೆಯ ಬರಹಗಳು ತುಂಬ ಆತ್ಮೀಯವಾಗಿ ಕಂಡಿವೆ. ಉಡುಪಿಯ ಸಮೂಹ ರಂಗಚಟುವಟಿಕೆಗಳಲ್ಲಿ ಪಾಲ್ಗೊಂಡ ಸವಿ ನೆನಪುಗಳು ಮರುಕಳಿಸುತ್ತಿವೆ. ವಿಶೇಷ ಸಂಚಿಕೆಯಲ್ಲಿ ನನ್ನ ತಂದೆಯವರ(ಪ್ರೊ ಉದ್ಯಾವರ ಮಾಧವ ಆಚಾರ್ಯ) ರಂಗ ಕೃತಿ ಅಂಬೆಯನ್ನು ನನ್ನ ನೃತ್ಯ ಗುರುಗಳಾದ ಡಾ ವಸುಂಧರಾ ದೊರೆಸ್ವಾಮಿ ಅವರು ಪ್ರಸ್ತುತ ಪಡಿಸಿದುದರ ಬಗ್ಗೆ ನಿಮ್ಮ ವಸ್ತು ನಿಷ್ಠ ವಿಮರ್ಶೆ ಮನಸ್ಸಿಗೆ ಮುದ ನೀಡಿತು. ನೃತ್ಯ ಪ್ರಯೋಗಗಳಿಗೆ ಇಂಥ ವಿಮರ್ಶೆ ಅಗತ್ಯ.
ಉಡುಪಿಯ ಅಕಾಡೆಮಿ ಆಫ್ ಸ್ಕೂಲ್ ಆಪ್ ಮ್ಯೂಸಿಕ್ ಆಂಡ್ ಫೈನ್ ಆರ್ಟ್ಸ್ ಸಂಸ್ಥೆ ೧೯೫೭ ರಲ್ಲಿ ಸ್ಥಾಪನೆಗೊಂಡು ಹಿರಿಯ ಗುರುಗಳಾದ ಮೋಹನ್ ಕುಮಾರ್,ಭಾಗವತ ಮಾಧವ ರಾವ್ ಮತ್ತು ಇತ್ತೀಚೆಗೆ ರಾಮಕೃಷ್ಣ ಕೊಡಂಚ ಇವರುಗಳ ನೇತೃತ್ವದಲ್ಲಿ ಆಸಕ್ತರಿಗೆ ನೃತ್ಯ ಶಿಕ್ಷಣ ನೀಡುತ್ತ ಬಂದಿದೆ. ವಾರ್ಷಿಕ ಸಂಚಿಕೆಯ ಪರಿಭ್ರಮಣದಲ್ಲಿ ಇವರ ಪರಿಚಯ ಬಿಟ್ಟು ಹೋಗಿತ್ತು.
ನೂಪುರ ಭ್ರಮರಿ ನೂರ್ಕಾಲ ಬಾಳಲಿ.
– ಭ್ರಮರಿ ಶಿವಪ್ರಕಾಶ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ
ನೂಪುರ ಭ್ರಮರಿಯ ೨ನೇ ವರ್ಷದ ವರ್ಣಮಯ ಸಂಚಿಕೆ ಓದಿದೆ. ಪ್ರತಿಕ್ರಿಯಿಸಲು ವಿಳಂಬವಾದದಕ್ಕೆ ಕ್ಷಮಿಸಿ.
ನೂಪುರದ ಕಲರ್ಫುಲ್ ಮುಖಪುಟ, ವಿನ್ಯಾಸ ತುಂಬಾ ಆಕರ್ಷಕವಾಗಿತ್ತು. ಸಂಪಾದಕೀಯದಲ್ಲಿ ಎರಡು ವರ್ಷಗಳ ಯಶೋಗಾಥೆಯನ್ನು ಹೃದ್ಯವಾಗಿ ಬರೆದಿದ್ದಿರಿ. ಹತ್ತಾರು ಏಳು-ಬೀಳುಗಳ ತಾಕಲಾಟದ ನಡುವೆಯೂ ಭ್ರಮರಿ ಸಹೃದಯಿ ಕಲಾರಾಧಕರ ಕಣ್ಮಣಿಯಾಗಿ ಬೆಳೆದಿದ್ದು ನಿಜಕ್ಕೂ ಅಚ್ಚರಿ. ಮುಂದೆಯೂ ಓದುಗರ ಮನದಲ್ಲಿ ನೂಪುರ ಭ್ರಮರಿ ಸದಾ ಅನಭಿಷಿಕ್ತ ಸಾಮ್ರಾಜ್ಞಿಯಾಗಿ ಮೆರೆಯಲಿ.
ಇಡೀ ಸಂಚಿಕೆ ರೂಪಿಸುವಲ್ಲಿ ಸಂಪಾದಕೀಯ ಮಂಡಳಿಯ ಶ್ರದ್ಧೆ, ದಕ್ಷತೆ, ಕ್ರಿಯಾಶೀಲತೆ, ಬದ್ಧತೆ ಪ್ರಶಂಸನೀಯ. ಅನುಶ್ರೀ ಬಂಡಾಡಿಯವರ ‘ಹೆಜ್ಜೆಯ ಅನುರಣಿಸುವ ಗೆಜ್ಜೆಯು ನಾ’ ಸ್ವಗತ ಲಹರಿ ಸಂಕ್ಷಿಪ್ತವಾಗಿದ್ದರೂ ಮನದಾಳದಲ್ಲಿ ಮತ್ತೆ ಮತ್ತೆ ಅನುರಣಿಸುವಂತಿತ್ತು.
ಯಕ್ಷಗಾನದ ಧೃವತಾರೆ, ದಂತಕತೆ ಕೆರೆಮನೆ ಶಂಭು ಹೆಗಡೆಯವರಿಗೆ ಸಲ್ಲಿಸಿದ ನುಡಿನಮನ ಭಾವಪರವಶಗೊಳಿಸಿತು. ಪರಿಪಕ್ವ ಚೇತನ ಕೆರೆಮನೆ ಶಂಭು ಹೆಗಡೆಯವರು ಯಕ್ಷಗಾನದ ವೇಷದಲ್ಲೇ ಅಸ್ತಂಗತರಾಗಿದ್ದರೂ, ಕನ್ನಡ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಕನ್ನಡದ ಯಾವ ಪತ್ರಿಕೆಯೂ ನೂಪುರದಷ್ಟು ಸಶಕ್ತವಾಗಿ, ಸತ್ವಶಾಲಿಯಾಗಿ ಅವರ ವ್ಯಕ್ತಿತ್ವವನ್ನು ಬಿಂಬಿಸಿರಲಿಲ್ಲ. ನೂಪುರದ ನುಡಿ ನಮನ ವಿಶಿಷ್ಟವಾಗಿತ್ತು.
ನೂಪುರ ಭ್ರಮರಿ ಸಂಚಿಕೆಯಿಂದ ಸಂಚಿಕೆಗೆ ವೈವಿಧ್ಯತೆ, ಮೌಲ್ಯಯುತ ಲೇಖನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಾಧನೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಸಂತಸಕರ ಸಂಗತಿ. ಪತ್ರಿಕೆಯ ಜೈತಯಾತ್ರೆ ಮುಂದುವರಿಯಲಿ. ನಮ್ಮ ತ್ರಿಕರಣಪೂರ್ವಕ ಬೆಂಬಲ ಯಾವಾಗಲೂ ಇದ್ದೇ ಇರುತ್ತದೆ.
-ಸುರೇಶ್ ಬಿ.ವಿ.ಜಾಲಹಳ್ಳಿ, ರಾಯಚೂರು.
ಹೊಸ ಹರೆಯದ ಹುಡುಗಿಯ ಹಾಗೆ ಮೈ ತುಂಬಿಕೊಂಡ ವಾರ್ಷಿಕ ಸಂಭ್ರಮದ ನೂಪುರಕ್ಕೆ ಮಂಟಪರ ಲಾವಣ್ಯದ ಸೊಗಸು, ಸುಂದರ ವಿನ್ಯಾಸ. ಅಭಿನಂದನೆಗಳು.
-ಹರೀಶ್ ಟಿ.ಜಿ., ಕನ್ನಡ ಉಪನ್ಯಾಸಕರು, ಆಳ್ವಾಸ್ ಕಾಲೇಜು, ಮೂಡಬಿದ್ರೆ
ಪತ್ರಿಕೆಯ ಎಲ್ಲಾ ಸಂಚಿಕೆಗಳು ಬಹಳ ವೈವಿಧ್ಯಮಯವಾಗಿಯೂ, ನೃತ್ಯ ಶಿಕ್ಷಾರ್ಥಿಗಳಿಗೆ ಸರ್ವ ರೀತಿಯಲ್ಲಿಯೂ ಸಹಕಾರಿಯಾಗಿ, ಸುಂದರವಾಗಿ ಮೂಡಿ ಬರುತ್ತಿದೆ. ಎಲ್ಲಾ ರೀತಿಯಲ್ಲಿಯೂ ನಿಮಗೆ ಶುಭವನ್ನು ಹಾರೈಸುತ್ತೇವೆ.
-ಅಂಬಿಕಾ ಬಿ.ಜಿ., ಹಾಸನ