Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ
ಇಂದಿನ ತಲೆಮಾರಿನ ಯಕ್ಷಗಾನ ಆಸಕ್ತರಿಗೆ ನೆಡ್ಲೆ ನರಸಿಂಹ ಭಟ್ ಅನ್ನುವ ಅದ್ಭುತ ಚೆಂಡೆವಾದಕನ ಬಗ್ಗೆ ಹೆಚ್ಚಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಮನೆಯಲ್ಲಿ ಅಪ್ಪನೋ ಅಜ್ಜನೋ ಯಕ್ಷಗಾನದ ಬಗ್ಗೆ ಹೇಳುತ್ತಿದ್ದರೆ ನೆಡ್ಲೆ ನರಸಿಂಹ ಭಟ್ ಅವರ ಹೆಸರು ಖಂಡಿತವಾಗಿಯೂ ಮಧ್ಯದಲ್ಲಿ ಬಂದು ಹಾದು ಹೋಗದಿರಲಿಕ್ಕಿಲ್ಲ. ಯಾಕೆಂದರೆ ಅವರ ಹೊರತಾಗಿ ಚೆಂಡೆ ಮದ್ದಳೆಗಳ ಕುರಿತಾಗಿ ಮಾತಾಡುವುದು ಕಷ್ಟ! ಅಷ್ಟರ ಮಟ್ಟಿಗೆ ನರಸಿಂಹ ಭಟ್ ಮತ್ತು ಚೆಂಡೆ ಮದ್ದಳೆಗಳು ಅನ್ಯೋನ್ಯ.
ನರಸಿಂಹ ಭಟ್ ಎಷ್ಟು ಸಜ್ಜನರಾಗಿದ್ದರೆಂದರೆ ಅವರು ಯಾರನ್ನೂ ನೋಯಿಸಲು ಇಷ್ಟಪಡುತ್ತಿರಲಿಲ್ಲ. ತಾನು ಮಹಾನ್ ಸಾಧಕನಾಗಿದ್ದರೂ ಆ ಹಮ್ಮಿರಲಿಲ್ಲ. ಯಾರಾದರೂ ಹೊಸದಾಗಿ ಚೆಂಡೆ ಬಾರಿಸಿ ನಂತರ ನರಸಿಂಹ ಭಟ್ಟರಲ್ಲಿ ನನ್ನ ಚೆಂಡೆ ಹೇಗಾಗಿದೆ ಎಂದು ಕೇಳಿದರೆ ನರಸಿಂಹ ಭಟ್ ಮೊದಲಿಗೆ ಹೇಳುತ್ತಿದ್ದ ಮಾತು ‘ ಓ ಬಹಳ ಚೆನ್ನಾಗಿತ್ತು’ ಅಂತ. ಮತ್ತೆ ನಿಧಾನವಾಗಿ ‘ಎಲ್ಲವೂ ಚೆನ್ನಾಗೇ ಆಗಿದೆ… ಓ ಅಲ್ಲಿ ಕರ್ಣನ ಪ್ರವೇಶ ಆಗುತ್ತದಲ್ಲ ಆಗ ಇನ್ನೂ ಸ್ವಲ್ಪ ಚೆಂಡೆ ಜೋರಾಗಬೇಕು….. ಉಳಿದಂತೇನೂ ಇಲ್ಲ, ಮತ್ತೆ.. ಹಾಗೆಯೇ ಸ್ವಲ್ಪ ಉರುಳಿಕೆ ಇನ್ನೂ ನಾಜೂಕಾದರೆ ಚೆಂಡೆ ಮತ್ತಷ್ಟು ಸೊಗಸಾದೀತು.. ಇನ್ನೇನಿಲ್ಲಪ್ಪ ಚೆನ್ನಾಗೇ ಆಗಿದೆ ಬಿಡು…. ಕೆಲವೊಂದು ಕಡೆ ಸ್ವಲ್ಪ ಹದವರಿತು ಬಾರಿಸಿದರೆ ಎಲ್ಲವೂ ಸರಿಯಾಗಿಬಿಡುತ್ತದೆ…’ ಹೀಗೆ ಚೆನ್ನಾಗಿದೆ ಅನ್ನುತ್ತಲೇ, ಬಲು ನಾಜೂಕಾಗಿ ಕೇಳಿದವನಿಗೆ ನೋವಾಗದಂತೆ ತಪ್ಪುಗಳನ್ನು ತಿಳಿಹೇಳುತ್ತಿದ್ದವರು ನರಸಿಂಹ ಭಟ್.
ಒಮ್ಮೆ ಏನಾಯಿತೆಂದರೆ, ಯಕ್ಷಗಾನದ ಮಧ್ಯೆ ನರಸಿಂಹ ಭಟ್ ಟೀ ಕುಡಿದು ಬರೋಣ ಎಂದು ಅಲ್ಲೇ ಟೆಂಟ್ ಹತ್ತಿರ ಮಾಡಿದ್ದ ತಾತ್ಕಾಲಿಕ ಹೊಟೇಲಿಗೆ ಹೋದರು. ಅಲ್ಲಿ ತನಗೆ ಟೀ ತಂದಿತ್ತ ಹುಡುಗನಲ್ಲಿ ಬಿಸಿ ಬಿಸಿ ಏನಿದೆಯಪ್ಪಾ ಅಂತ ತಿನ್ನುವುದಕ್ಕೆ ಕೇಳಿದರು. ಹುಡುಗ ಭಟ್ಟರನ್ನು ತಮಾಷೆ ಮಾಡೋಣ ಅಂತ ಅಲ್ಲಿದ್ದವರ ಮುಂದೆ ದೊಡ್ಡದಾಗಿ ‘ಬಿಸಿ ಬಿಸಿ ಕೆಂಡ ಇದೆ’ ಅಂದ. ನೆರೆದಿದ್ದವರು ನಕ್ಕರು. ಆದರೆ ವಿಚಲಿತರಾಗದ ನರಸಿಂಹ ಭಟ್ ನಸುನಗುತ್ತಾ ‘ಸರಿ ಅದನ್ನೇ ತಾರಪ್ಪಾ..’ ಅನ್ನಬೇಕೇ? ಹುಡುಗನಿಗೆ ಅವಮಾನವಾದಂತಾಯಿತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ, ಭಟ್ಟರ ಮುಂದೆ ಸೋಲಬಾರದೆಂದು ನೇರ ಒಳಗೆ ಹೋಗಿ ತಟ್ಟೆಯೊಂದರಲ್ಲಿ ಕೆಂಡವನ್ನಿಕ್ಕಿ ಭಟ್ಟರ ಮುಂದೆ ತಂದಿಟ್ಟ. ಸದಾ ತಾಳ್ಮೆಯಿಂದಿರುವ ಭಟ್ ಈಗ ಆ ಹುಡುಗನಿಗೆ ಖಂಡಿತಾ ಬೈತಾರೆ ಅಂತ ನೆರೆದಿದ್ದವರೆಲ್ಲಾ ಅಂದುಕೊಂಡರೆ, ಭಟ್ಟರು ನಸುನಗುತ್ತಲೇ ಇದ್ದರು!
ಉಳಿದಿದ್ದ ತುಸು ಟೀಯನ್ನು ಕುಡಿದು ಮುಗಿಸಿದ ಭಟ್, ಮೆಲ್ಲ ಕಿಸೆಯಿಂದ ಬೀಡಿಯೊಂದನ್ನು ತೆಗೆದು ತುಟಿಯಲ್ಲಿರಿಸಿ ಆ ಹುಡುಗ ತಂದಿಟ್ಟ ಕೆಂಡದಲ್ಲಿ ಉರಿಸಿ ಧಮ್ ಬಿಡುತ್ತಾ ಟೀಯ ಹಣ ಕೊಟ್ಟು ‘ಇನ್ನು ಕೆಂಡ ಒಳಗೆ ತೆಗೆದುಕೊಂಡು ಹೋಗಪ್ಪಾ’ ಎಂದು ಸೌಮ್ಯವಾಗಿಯೇ ಹೇಳಿ ನಿಧಾನವಾಗಿ ಹೊರನಡೆದರು.
ಹುಡುಗ ದಿಗ್ಭ್ರಮೆಯಿಂದ ನೋಡುತ್ತಲೇ ಇದ್ದ….!!!