ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ (Video series)-ಸಂಚಿಕೆ 66 : ಅರ್ವಾಚೀನ ಸಂಗ್ರಹ ಗ್ರಂಥಗಳು

Posted On: Sunday, January 12th, 2025
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ/ ದಕ್ಷಿಣ ಭಾರತ

ಸಂಚಿಕೆ 66 : ವಿದ್ಯಾಚಕ್ರವರ್ತಿಯ ಭರತ ಸಂಗ್ರಹ, ಚೆರುಕುರಿ ಲಕ್ಷ್ಮೀಧರನ ಭರತಶಾಸ್ತ್ರ, ಉಟಕೇ ಗೋವಿಂದಾಚಾರ್ಯನ ಸಂಗೀತಸಂಗ್ರಹ, ಕರ್ಣಪೂರನ ಭರತಶಾಸ್ತ್ರ, ಭೂಧರ ರಾಜಯ್ಯ ದೀಕ್ಷಿತರ ಭರತಾರ್ಥ ಚಂದ್ರಿಕಾ,ವೆಂಕಟರಾಮನ ಸಕಲ ಭರತ ಸಾರ ಸಂಗ್ರಹ, ಹರಿವಲ್ಲಭನ ಸಂಗೀತಸಾರ, ಮುಡುಂಬಿ ನರಸಿಂಹಾಚಾರ್ಯನ ಭರತಾರ್ಣವಸಾರಸಂಗ್ರಹ, ಅಪ್ಪಲಾಚಾರ್ಯರ ಸಂಗೀತಸಂಗ್ರಹಚಿಂತಾಮಣಿ, ಚಂದ್ರಶೇಖರನ ಅಂಗಲಕ್ಷಣನಿರೂಪಣ, ಘನಶ್ಯಾಮದಾಸ ಅಥವಾ ನರಹರಿ ಚಕ್ರವರ್ತಿಯ ಸಂಗೀತಸಾರಸಂಗ್ರಹ, ಪಾರ್ತಿಸುಬ್ಬನ ಯಕ್ಷಗಾನ ಸಭಾಲಕ್ಷಣ, ವೆಂಕಟಸುಂದರಸಾನಿಯ ರಸಿಕಜನಮನೋಲ್ಲಾಸಿನಿ ಸಾರಸಂಗ್ರಹ ಭರತಶಾಸ್ತ್ರಮು ಮತ್ತು ಅನಾಮಿಕ ಕೃತಿಕಾರರ ಭರತಕಲ್ಪಲತಾಮಂಜರಿ, ಭರತಸರ್ವಾರ್ಥಸಂಗ್ರಹ, ಸಕಲಭರತಸಾರಸಂಗ್ರಹ, ಭರತಸಾರ ಸಂಗ್ರಹ ಎಂಬಿತ್ಯಾದಿ ಅರ್ವಾಚೀನ ಸಂಗ್ರಹ ಗ್ರಂಥಗಳು ಮತ್ತು ಅವುಗಳ ವಿಷಯ ವಿಶೇಷ ಲಕ್ಷಣಗಳ ಅಧ್ಯಯನ ವಿಮರ್ಶೆ.

 

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 5 : Dākśinātya (Southern Region of Ancient Bhārata)

Episode 66 : Sangraha texts and their unique subject features, such as Vidyachakravarti’s Bharata Sangraha, Cherukuri Lakshmidhar’s Bharata Shastra, Utake Govindacharya’s Sangeeta Sangraha, Karnapura’s Bharata Shastra, Bhudhara Rajayya Dikshita’s Bharatartha Chandrika, Venkatramana’s Sakala Bharata Sara Sangraha, Harivallabha’s Sangeeta Sara, Mudumbi Narasimhacharya’s Bharatarṇava Sara Sangraha, Appalacharya’s Sangeeta Sangraha Chintamani, Chandrashekhara’s Angalakshana Niroopana, Ghanashyama Dasa/Narahari Chakravarti’s Sangeeta Sara Sangraha, Parthisubba’s Yakshagana Sabha Lakshana, Venkata Sundarasani’s Rasika Jana Manollasini Sara Sangraha Bharata Shastramu, as well as anonymous works like Bharata Kalpalata Manjari, Bharata Sarvartha Sangraha, Sakala Bharata Sara Sangraha, and Bharata Sara Sangraha.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha &

Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

  ಅರ್ವಾಚೀನ ಸಂಗ್ರಹಗ್ರಂಥಗಳು

ಈ ಸಂಚಿಕೆಯಲ್ಲಿ ನಾವು ಒಂದಷ್ಟು ಸಂಗ್ರಹ ಅಥವಾ ಸಂಕಲಿತವೆನಿಸುವ ಗ್ರಂಥಗಳನ್ನು ಅವಲೋಖಿಸೋಣ. ಆ ಪೈಕಿ ಒಂದಷ್ಟು ಗ್ರಂಥಗಳಿಗೆ ರಚನಾಕಾರರು ಯಾರೆಂಬುದು ತಿಳಿದುಬರುತ್ತದೆ. ಮತ್ತೊಂದಷ್ಟು ಗ್ರಂಥಗಳಿಗೆ ಇಲ್ಲ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ವಿಜಯನಗರ ಕರ್ನಾಟ ಸಾಮ್ರಾಜ್ಯದ ಅವಸಾನದ ಬಳಿಕ ಮರಾಠಾ ರಾಜರು, ಮೈಸೂರಿನ ಒಡೆಯರ್ ರಾಜರು, ನಾಯಕರು ಆಳ್ವಿಕೆಗೆ ಬಂದರು. ಅವರ ಕಾಲದಲ್ಲಿ ಒಂದಷ್ಟು ಸ್ವತಂತ್ರಗ್ರಂಥಗಳು ರಚನೆಯಾದವಾದರೂ; ಕ್ರಮೇಣ ಬ್ರಿಟಿಷ್ ಸಾಮ್ರಾಜ್ಯದ ಹಿಡಿತ ಹೆಚ್ಚುತ್ತಾ ಹೋದಂತೆಲ್ಲ ಸಂಸ್ಕೃತದಲ್ಲಿ ಸಂಗೀತಶಾಸ್ತ್ರಗ್ರಂಥಗಳನ್ನು ಸ್ವತಂತ್ರವಾಗಿ ಬರೆಯುವ ಸಂಪ್ರದಾಯವೇ ನಿಂತುಹೋದಂತಾಯಿತು. ಬದಲಾಗಿ ಕೆಲವಷ್ಟು ಗ್ರಂಥಗಳಲ್ಲಿ ಉಳಿದುಬಂದ ಲಕ್ಷಣಗಳನ್ನು ಸಂಕಲಿಸಿದ ಸಂಗ್ರಹಗ್ರಂಥಗಳು ಸಂಗ್ರಹಚೂಡಾಮಣಿ, ಸಾರಸಂಗ್ರಹ, ಭರತಸಂಗ್ರಹ ಎಂಬಿತ್ಯಾದಿ ಹೆಸರುಗಳಲ್ಲಿ ಹೇರಳವಾಗಿ ರಚನೆಯಾದವು. ಅದರಲ್ಲೂ ಹಸ್ತಾಭಿನಯ ಮತ್ತು ಕೆಲವು ಅಂಗೋಪಾಂಗಭೇದಗಳನ್ನು ಉಲ್ಲೇಖಿಸಿ ಆವರೆಗೆ ಇದ್ದ ಶಾಸ್ತ್ರಲಕ್ಷಣವನ್ನು ಬರೆದಿಟ್ಟವರು ಹೆಚ್ಚು ಮಂದಿ. ಅಂದರೆ ಗ್ರಂಥರಚನೆಯಲ್ಲಿ ಸ್ವಂತಿಕೆಯೂ ಕಡಿಮೆ. ಮತ್ತು ಲಕ್ಷಣರಚನೆಯಲ್ಲಿ ಪ್ರೌಢಿಮೆಯೂ ಕಡಿಮೆ.

ಹಾಗೆಂದು ಸಂಗ್ರಹ ಎಂಬ ಹೆಸರಿನ ಗ್ರಂಥಗಳೆಲ್ಲವೂ ತೀರಾ ಅರ್ವಾಚೀನವೆನ್ನಲೂ ಆಗದು. ಉದಾಹರಣೆಗೆ: ಹೊಯ್ಸಳ ಅರಸ ಮೂರನೇ ಬಲ್ಲಾಳನ ಆಶ್ರಯದಲ್ಲಿದ್ದ ಆಲಂಕಾರಿಕ, ಶೈವಾಚಾರ್ಯ ವಿದ್ಯಾಚಕ್ರವರ್ತಿಯ ಭರತ ಸಂಗ್ರಹ ಎಂಬ ಗ್ರಂಥ ೧೪ನೇ ಶತಮಾನದ್ದು. ಅದಾಗಿ ಚೆರುಕುರಿ ಲಕ್ಷ್ಮೀಧರನ ಭರತಶಾಸ್ತ್ರಗ್ರಂಥ- ೧೬ನೇ ಶತಮಾನದ್ದು. ಇದರ ಹಸ್ತಪ್ರತಿ ಪುಣೆಯ ಭಂಡಾರ್ಕರ್ ಗ್ರಂಥಾಲಯದಲ್ಲಿದೆ. ಹೀಗೆ ಸಂಗ್ರಹಗ್ರಂಥಗಳಲ್ಲಿ ಕೆಲವಷ್ಟು ನಾಲ್ಕೈದು ಶತಮಾನ ಹಳೆಯವು. ಆದರೆ ಬಹುತೇಕ ಸಂಗೀತವೆನ್ನುವ ಗೀತ-ತಲ-ವಾದ್ಯ-ನೃತ್ಯ ವಿಷಯದ ಸಂಗ್ರಹ ಗ್ರಂಥಗಳು ಬಂದದ್ದು ತೀರಾ ಇತ್ತಿಚೆಗಿನ ಎರಡು ಮೂರು ಶತಮಾನಗಳಲ್ಲಿ ಎಂಬುದಂತೂ ಸತ್ಯ.

ತಂಜಾವೂರಿನಲ್ಲಿದ್ದ ಮರಾಠಾರಾಜರ ಆಶ್ರಯದಲ್ಲಿದ್ದ ವಿದ್ವಾಂಸ ಉಟಕೇ ಗೋವಿಂದಾಚಾರ್ಯನ ಸಂಗೀತಸಂಗ್ರಹ ಉದ್ಗ್ರಂಥದ ನಾಟ್ಯಶಾಸ್ತ್ರಸಂಗ್ರಹ ೧೭೫೦ನೇ ಇಸವಿಯದ್ದು. ಮರಾಠೀ ಪಾಠ್ಯ ಸಹಿತವಾಗಿರುವ ಕೃತಿಯು ಪಂಡಿತ ವಾಸುದೇವಶಾಸ್ತ್ರಿಸಂಪಾದನೆಯಲ್ಲಿ ತಂಜಾವೂರು ಸರಸ್ವತೀ ಮಹಲ್ ಗ್ರಂಥಾಲಯದ ವತಿಯಿಂದ ಎರಡು ಸಂಪುಟಗಳಲ್ಲಿ ಪ್ರಕಟವಾಗಿದೆ. ಶಾರ್ಙ್ಗದೇವನ ಸಂಗೀತ ರತ್ನಾಕರ, ದೇವಣಾಚಾರ್ಯನ ಸಂಗೀತ ಮುಕ್ತಾವಳಿ, ಭಲ್ಲಟನ ಶೃಂಗಾರ ಶೇಖರ, ದಾಮೋದರನ ಸಂಗೀತ ವೇದಸೂರಿಯ ಸಂಗೀತ ಮಕರಂದ ಮೊದಲಾದ ಗ್ರಂಥಗಳ ಆಧಾರದಿಂದ ರಚಿತವಾದ ಗ್ರಂಥವಿದು. ನಾಟ್ಯೋತ್ಪತ್ತಿಯಿಂದ ಮೊದಲ್ಗೊಂಡು ನೃತ್ತ-ನಾಟ್ಯಾದಿ ವಿವಿಧ ಪರಿಭಾಷೆಗಳು, ನಾಟ್ಯಧರ್ಮೀ ಲೋಕಧರ್ಮೀ, ಅಂಗೋಪಾಂಗ ಅಭಿನಯಗಳು, ಸ್ಥಾನಕ, ಚಾರಿಲಕ್ಷಣಗಳು, ನಕ್ಷತ್ರ, ಗ್ರಹ, ರಾಶಿ, ಪ್ರಾಣಿ, ಪಕ್ಷಿ, ದಶಾವತಾರ, ಸ್ವರ-ರಾಗಾಭಿನಯ ಹಸ್ತಗಳು, ನವಗ್ರಹ, ಇತ್ಯಾದಿ ವಿವಿಧ ಹಸ್ತಾಭಿನಯ ಭೇದಗಳನ್ನು ಕಾಣಬಹುದು. ನಾಟ್ಯಶಾಸ್ತ್ರದ ಮತು ಭರತೋತ್ತರ ಕಾಲದ ಸ್ಥಾನಕ, ಚಾರಿಗಳ ವಿವರಗಳೂ ಇವೆ. ಆದರೆ ಹಸ್ತಾಭಿನಯದ ಲಕ್ಷಣಗಳನ್ನು ಗಮನಿಸಿದಾಗ ನಂದಿಕೇಶ್ವರನ ಪರಂಪರೆಯನ್ನು ಅನುಸರಿಸಿದಂತಿದೆ. ವಿಶೇಷವೆಂದರೆ – ‘ಸಂಗೀತರತ್ನಾಕರೇ’ ಎಂದೇ ವಿವೇಚಿಸಿ ‘ಆಂಗಿಕಂ ಭುವನಂ’ ಎಂಬ ಪ್ರಸಿದ್ಧ ಶ್ಲೋಕವನ್ನು ಗ್ರಂಥಾರಂಭಕ್ಕೆ ಹೇಳಿದೆ. ಇದೇ ರೀತಿಯಾಗಿ ಹಲವು ಗ್ರಂಥಲಕ್ಷಣಗಳನ್ನು ಆಯ್ದು ಸಂಕಲಿಸಿದ ಮುಮ್ಮಡಿ ಚಿಕ್ಕಭೂಪಾಲರ ಅಭಿನವಭರತ ಸಾರಸಂಗ್ರಹ ೧೬೬೦-೭೦ನೇ‌ಇಸವಿಯದ್ದು. ಈ ಗ್ರಂಥದ ಕುರಿತಾದ ಸಂಚಿಕೆಯೊಂದು ಶಾಸ್ತ್ರರಂಗ ಮೊದಲನೇ ದಾಕ್ಷಿಣಾತ್ಯ ಭಾಗದಲ್ಲಿದೆ.

ಬಹಳಷ್ಟು ಸಂಗ್ರಹ ಗ್ರಂಥಗಳು ೧೮-೧೯ನೇಶತಮಾನದ ಆಸುಪಾಸಿನಲ್ಲಿ ರಚಿತವಾಗಿರುವಂಥವು. ಕರ್ಣಪೂರನ ಭರತಶಾಸ್ತ್ರಗ್ರಂಥ- ಹಸ್ತಾಭಿನಯ, ತಾಲ, ಗೀತದ ಕುರಿತಾದ ಕೃತಿ. ಭೂಧರ ರಾಜಯ್ಯ ದೀಕ್ಷಿತರ್ ಬರೆದ ಭರತಾರ್ಥ ಚಂದ್ರಿಕಾ ತೆಲುಗು ಲಿಪಿಯಲ್ಲಿ ಮೈಸೂರು ಹಸ್ತಪ್ರತಿ ಸಂಗ್ರಹಾಲಯದಲ್ಲಿದೆ.

ವೆಂಕಟರಾಮ ಎಂಬ ಸಕಲ ಭರತ ಸಾರ ಸಂಗ್ರಹ- ತೆಲುಗು ಲಿಪಿಯಲ್ಲಿದೆ. ಅಂತೆಯೇ ಹರಿವಲ್ಲಭನ ಸಂಗೀತಸಾರ- ೧೭೩೫ರ ಕಾಲದ್ದು. ನೃತ್ಯ, ಗೀತ, ವಾದ್ಯ, ತಾಲವಿಷಯಕವಾದ ಈ ಗ್ರಂಥದ ಹಸ್ತಪ್ರತಿ ಜೋಧಪುರದ ಮಹಾರಾಜ ಮಾನ್ಸಿಂಗ್ ಪುಸ್ತಕಾಲಯದಲ್ಲಿದೆ. ಸಂಗೀತಸಾರ ಸಂಗ್ರಹ ಎಂಬ ಕೃತಿಯೊಂದು ನೇಪಾಲದ ೧೭ನೇ ಶತಮಾನದ ಅರಸ ಜಗಜ್ಜ್ಯೋತಿರಮಲ್ಲನ ಕೃತಿ. ಮುಡುಂಬಿ ನರಸಿಂಹಾಚಾರ್ಯನ ಕೃತಿ- ಭರತಾರ್ಣವಸಾರಸಂಗ್ರಹ ೧೭೪೦ನೇ ಇಸವಿಯದ್ದು. ಸೀತಾರಾಮಶಾಸ್ತ್ರಿಗಳ ಸಂಕಲನದ ತೆಲುಗುಗ್ರಂಥ ಭರತಸಂಗ್ರಹಮು – ೧೯೦೮ನೇ ಇಸವಿಯದ್ದು. ಇವ್ಯಾವ ಗ್ರಂಥಗಳೂ ಪ್ರಕಟಗೊಂಡಿಲ್ಲ.

ಇನ್ನು ಅಪ್ಪಲಾಚಾರ್ಯರ ಸಂಸ್ಕೃತ-ತಮಿಳು ಲಿಪಿಯ ಸಂಗೀತಸಂಗ್ರಹಚಿಂತಾಮಣಿ ೧೮೨೫-೧೮೩೪ನೇ ಇಸವಿಯದ್ದು. ತಾಲ, ನೃತ್ತ ಇತ್ಯಾದಿ ವಿಷಯಗಳನ್ನು ಚರ್ಚಿಸುವ ಮಲಯಾಲ ಸಂಸ್ಕೃತ ಲಿಪಿಯ ಹಸ್ತಪ್ರತಿಯಲ್ಲಿರುವ ಇದು ಅಡ್ಯಾರ್ ಗ್ರಂಥಾಲಯದಲ್ಲಿದೆ. ಚಂದ್ರಶೇಖರ ಎಂಬುವನ ಹೆಸರಲ್ಲಿ ಅಂಗಲಕ್ಷಣನಿರೂಪಣವೆಂಬ ಹೆಸರಿನ ತೆಲುಗು ಲಿಪಿಯ ಟೀಕೆಯ ಗ್ರಂಥದ ಹಸ್ತಪ್ರತಿಯಿದೆ. ಇದು ಭರತಾಚಾರ್ಯ ಪ್ರಶಂಸಾ, ನಾಟ್ಯಪ್ರಸಂಗ, ನಾಟ್ಯಶಾಲೆ- ಸಭಾಲಕ್ಷಣಗಳು, ಪಾತ್ರಲಕ್ಷಣಗಳು, ನೇಪಥ್ಯ, ಕಿಂಕಿಣೀ, ಶಿರಸ್ಸು, ವಕ್ಷ, ಪಾರ್ಶ್ವ, ಗ್ರೀವಾ, ಕಟಿ, ಪಾದ, ಅಭಿನಯ ಮತ್ತು ನೃತ್ತಹಸ್ತಗಳು ಮೊದಲಾದ ಇನ್ನೂ ಹಲವು ಅಂಗೋಪಾಂಗ ಅಭಿನಯ ಲಕ್ಷಣಗಳನ್ನು ಸಂಗ್ರಹಿಸಿದ ಕೃತಿಯಾಗಿದೆ. ಬಂಗಾಳದ ಘನಶ್ಯಾಮದಾಸ ಅಥವಾ ನರಹರಿ ಚಕ್ರವರ್ತಿಯ ಸಂಗೀತಸಾರಸಂಗ್ರಹವಿದೆ. ೧೮ನೇ ಶತಮಾನದ ಆದಿಯಲ್ಲಿ ರಚನೆಗೊಂಡ ಗ್ರಂಥ. ಇದು ಪ್ರಕಟಣೆಯ ಭಾಗ್ಯ ಕಂಡ ಕೃತಿ. ಇದನ್ನು ಈಗಾಗಲೇ ಓಡ್ರಮಾಗಧೀ ಭಾಗದ ಸರಣಿಗಳಲ್ಲಿ ಅವಲೋಕಿಸಿದ್ದೇವೆ. ಇನ್ನೊಂದು ಪ್ರಕಟಿತವಾದ ಕೃತಿ ೧೮-೧೯ನೇ ಶತಮಾನದ ನಡುವಿನದ್ದೆಂದು ಹೇಳಬಹುದಾದ ಕವಿ ಪಾರ್ತಿಸುಬ್ಬನ ಸಂಕಲನದ್ದು ಎನ್ನಲಾಗುತ್ತಿರುವ ಯಕ್ಷಗಾನ ಸಭಾಲಕ್ಷಣ. ಯಕ್ಷಗಾನದ ಪೂರ್ವರಂಗಕ್ಕೆಂದೇ ಬರೆಯಲಾದ ಇಲ್ಲವೇ ಪೂರ್ವರಂಗದ ಲಕ್ಷಣಗಳನ್ನು ಒಂದೆಡೆ ಸಂಕಲಿಸಿ ಅದಕ್ಕೆ ಒಂದಷ್ಟು ಪ್ರಾಚೀನ ಶ್ಲೋಕಗಳನ್ನೂ ಸೇರಿಸಿ ಸಂಗ್ರಹಿಸಲ್ಪಟ್ಟ ಗ್ರಂಥ.

೧೮ನೇ ಶತಮಾನಾನಂತರದ ಕೆಲವು ಸಂಗ್ರಹ ಕೃತಿಗಳಲ್ಲಿ ಕೆಲವನ್ನು ಯಾರು ಬರೆದದ್ದೆಂದೇ ತಿಳಿಯುವುದಿಲ್ಲ. ಅವುಗಳ ಪೈಕಿ ಹಸ್ತಲಕ್ಷಣಭೇದ ಮತ್ತು ವಿನಿಯೋಗಗಳು ಮುಖ್ಯವಾದ ಗ್ರಂಥ ಭರತಸರ್ವಾರ್ಥಸಂಗ್ರಹ (ಅನೇಕಾನೇಕ ಹೊಸ ಹೆಸರುಳ್ಳ ವಿವಿಧ ರೀತಿಯ ಹಸ್ತಗಳಿವೆ. ಆದರೆ ಇವೆಲ್ಲವೂ ಈಗಾಗಲೇ ಪ್ರಾಚೀನ ಗ್ರಂಥಗಳು ಹೇಳಿದ ವಿವಿಧ ಹಸ್ತಗಳನ್ನು ಜೋಡಿಸಿ ಹಿಡಿದ ಮಿಶ್ರ ಪ್ರಕಾರಗಳಾಗಿವೆ. ಇದೇ ರೀತಿಯಲ್ಲಿ ಸಕಲಭರತಸಾರಸಂಗ್ರಹ ಗ್ರಂಥ. ಇದರ ವಿವಿಧ ಹಸ್ತಲಕ್ಷಣಗಳು, ಅಂಗೋಪಾಂಗ ಅಭಿನಯ ಭೇದಗಳು ಹಾಗೂ ಅವುಗಳ ವಿನಿಯೋಗಗಳ್ನುನೋಡಿದರೆ ಸ್ವಲ್ಪಮಟ್ಟಿಗೆ ಸಂಗೀತರತ್ನಾಕರವನ್ನೂ ಹೊಂದಿಕೊಂಡಂತೆ ಮತ್ತು ಭರತಾರ್ಣವ, ಅಭಿನಯದರ್ಪಣವೇ ಮುಂತಾದ ನಂದಿಕೇಶ್ವರ ರಚಿತ ಗ್ರಂಥಪರಂಪರೆಯಿಂದ ಬಹುಮಟ್ಟಿಗೆ ಪ್ರಭಾವಿತವಾಗಿ ಲಕ್ಷಣಗಳನ್ನು ನಕಲಿಸಿದಂತೆಯೇ ಅನಿಸುತ್ತದೆ. ಮೈಸೂರು ಹಸ್ತಪ್ರತಿ ಸಂಶೋಧನಾಲಯದಲ್ಲೂ ಭರತಸಾರ ಸಂಗ್ರಹವೆಂಬ ಕೃತಿಯೊಂದಿದೆ.

ಇದೇ ರೀತಿಯಾದ ತೆಲುಗು -ಕರ್ನಾಟ ಸೀಮೆಗೆ ಒಪ್ಪುವಂತಿರುವ ಅನಾಮಿಕ ಲಾಕ್ಷಣಿಕನ ತೆಲುಗು ಲಿಪಿಯ ಗ್ರಂಥ ಭರತಕಲ್ಪಲತಾಮಂಜರಿ – ೧೮೮೭ರಲ್ಲಿ ಸುಬ್ಬಾಶಾಸ್ತ್ರಿ ಮತ್ತು ಅಂಕಾಜಿ ಶಾಸ್ತ್ರಿ ಅವರ ಸಂಪಾದನೆಯಲ್ಲಿ ಇದು ಪ್ರಕಟಗೊಂಡಿದೆ. ಸರಸ್ವತೀ ಪ್ರಾರ್ಥನಾ ಅಂಬಾಪ್ರಾರ್ಥನಾ, ಗುರುಪ್ರಾರ್ಥನಾಗಳಿಂದ ಆರಂಭಗೊಳ್ಳುವ ಈ ಗ್ರಂಥ ಭಾವರಸಪ್ರಕರಣ, ನಾಯಿಕಾ-ನಾಯಕ ಪ್ರಕರಣ, ಶೃಂಗಾರಾದಿ ರಸಭೇದ ಲಕ್ಷಣ, ಸ್ವರ-ತಾಲ-ಶ್ರುತಿ-ಪ್ರಬಂಧ-ರಾಗ-ಲಯ- ವಿವಿಧ ಜಾತಿಯ ಸೂಳಾದಿ ತಾಳಗಳು-ಪೂರ್ವರಂಗ- ರಂಗಾಧಿದೇವತಾಪ್ರಾರ್ಥನ- ರಂಗಮಂಟಪಲಕ್ಷಣ-ಸಭಾನಾಯಕ-ಮಂತ್ರಿ-ಸಭಾ- ಸಾಮಾಜಿಕ- ಬೃಂದ- ಗಾಯಕ- ವಾದಕ-ಮಾರ್ದಂಗಿಕ- ನಟಿಲಕ್ಷಣಗಳು- ವಿವಿಧ ಧ್ಯಾನಶ್ಲೋಕಗಳು-ಪಾತ್ರಪ್ರವೇಶ-ನೇಪಥ್ಯ-ಕಿಂಕಿಣೀ-ವಾದ್ಯ-ಅಭಿನಯ-ನಟನಾರಂಭ ಲಕ್ಷಣ-ಚತುರ್ವಿಂಶಂತಿ ನಾಟ್ಯ- ಪೂರ್ವರಂಗ- ಅಷ್ಟದಿಕ್ಪಾಲಕ ಪುಷ್ಪಾಂಜಲಿ-ಪ್ರಾರ್ಥನೆ- ಚೂರ್ಣಿಕೆ- ಅಸಂಯುತಾದಿ ನಾನಾರ್ಥ ಹಸ್ತಭೇದಗಳು ಮತ್ತು ವಿನಿಯೋಗಗಳು- ಚಾರಿ- ರೇಖಾ-ಬಾಂಧವ್ಯಹಸ್ತ- ದಶಾವತಾರದಿ ವಿವಿಧ ರೀತಿಯ ಹಸ್ತಾಭಿನಯಗಳು- ಶಿರ-ದೃಷ್ಟಿ ಗ್ರೀವಾಭೇದಗಳು- ವಿವಿಧ ರೀತಿಯ ನಾಟ್ಯದ್ವಾದಶಾಂಗಗಳೆಂಬ ಅರ್ವಾಚೀನ ಕ್ರಮಗಳು ಹೀಗೆ ಕ್ರಮಬದ್ಧವಾಗಿ ವಿಷಯ ವಿವರಣೆಯುಳ್ಳ ಅಧ್ಯಾಯಗಳಿಂದ ವಿಸ್ತರಿಸುತ್ತದೆ.

ಹೆಚ್ಚು ಕಡಿಮೆ ಇದೇ ಗ್ರಂಥದ ಲಕ್ಷಣಮಾದರಿಗಳನ್ನೇ ಯಥಾವತ್ತು ನೆನಪಿಸುವ ಮತ್ತೊಂದು ಗ್ರಂಥ ಬೆಂಗಳೂರಿನ ಹಲಸೂರಿನ ಸೋಮೇಶ್ವರ ದೇವಾಲಯದಲ್ಲಿ ಘನ ನಾಯಿಕಾಸಾನಿಯಾಗಿ ಸೇವೆ ಸಲ್ಲಿಸಿದ ವೆಂಕಟಸುಂದರಸಾನಿಯ ರಸಿಕಜನಮನೋಲ್ಲಾಸಿನಿ ಸಾರಸಂಗ್ರಹ ಭರತಶಾಸ್ತ್ರಮು. ಇದನ್ನು ಮೈಸೂರು ಅರಸರ ಮುಂದಾಳತ್ವದಲ್ಲಿ ೧೯೦೬-೦೮ನೇ ಇಸವಿಯಲ್ಲಿ ಸುಬ್ಬನರಸಿಂಹ ಶಾಸ್ತ್ರಿ ಅವರ ಸಂಪಾದಕತ್ವದಲ್ಲಿ ಪ್ರಕಟಿಸಲಾಗಿತ್ತು. ಸಾಕಷ್ಟು ಲಕ್ಷಣಶೈಥಿಲ್ಯವಿರುವ ಮತ್ತು ವಿಷಯ ವಿವರಗಳಲ್ಲಿ ಸಂಪೂರ್ಣವೆನ್ನಲಾಗದ ಕೃತಿಯಿದು. ಆದರೂ ೧೯-೨೦ನೇ ಶತಮಾನದ ಮಹತ್ತ್ವದ ಅದರಲ್ಲೂ ಕೊನೆಯ ಬಹುಮುಖ್ಯ ಆಚಾರ್ಯಕೃತಿಯೆಂಬಂತೆ ಇದನ್ನು ಪಗಣಿಸಿಕೊಂಡುಬರಲಾಗುತ್ತಿದೆ. ಕಾರಣ ಇದು ಯಕ್ಷಗಾನದ ಕಲಾವಿದರ ಸಹಿತ ಅನೇಕರಿಗೆ ಭರತಶಾಸ್ತ್ರವೆಂಬ ಮಟ್ಟಿಗೆ ದೊರಕಿದ್ದು. ಇದರ ಅಧ್ಯಾಯಗಳು ಕ್ರಮವಾಗಿ ಕವಿತ್ವಲಕ್ಷಣಮ್, ನಾಟಕಸಂವಿಧಾನಮ್, ಸಂಗೀತಶಾಸ್ತ್ರಮ್, ನಾಟ್ಯಾಭಿನಯಶಾಸ್ತ್ರಮ್- ಕ್ರಮವಾಗಿ ಕವಿತ್ವ, ದಶರೂಪಕಕ್ಕೆ ಸಲ್ಲುವ ಲಕ್ಷಣಗಳು, ರಾಗ, ಗೀತ, ತಾಲ, ಮತ್ತು ಅಭಿನಯ ನೃತ್ತದ ಬಗ್ಗೆ ಚರ್ಚಿಸಿದೆ. ಅದರಲ್ಲೂ ನಾಟ್ಯಾಭಿನಯ ಶಾಸ್ತ್ರಮ್ ಅನುವ ನಾಲ್ಕನೇ ಅಧ್ಯಾಯ ಬಹುತೇಕ ಭರತಕಲ್ಪಲತಾಮಂಜರಿಯನ್ನೇ ಎಲ್ಲ ರೀತಿಯಲ್ಲೂ ಹೋಲುತ್ತದೆ. ಇವೆರಡೂ ಗ್ರಂಥದ ಲಕ್ಷಣಗಳನ್ನು ಗಮನಿಸಿದಾಗ ಸಂಗೀತ ರತ್ನಾಕರ, ಸಂಗೀತ ಮುಕ್ತಾವಳಿ, ಭರತಾರ್ಣವ, ಅಭಿನಯದರ್ಪಣ, ಮೊದಲಾದ ಇನ್ನೋ ಅನೇಕಾನೇಕ ಗ್ರಂಥಗಳಿಂದ ಪ್ರೇರಣೆ ಪಡೆದದ್ದು ಮತ್ತು ಅಲ್ಲಿಲ್ಲಿ ದೊರಕಿದ ಲಕ್ಷಣಗಳನ್ನು ಒಟ್ಟಾಗಿ ನಕಲಿಸಿದ್ದು ವೇದ್ಯವಾಗುತ್ತದೆ. ಹಾಗೆಂದೇ ನಾಟ್ಯದ್ವಾದಶಾಂಗವೇ ಮೊದಲಾದ ಕೆಲವು ವಿಭಾಗಗಳಲ್ಲಿ ಸ್ಪಷ್ಟತೆಯ ಕೊರತೆ ಸ್ಪಷ್ಟವಾಗಿ ಕಾಣುತ್ತದೆ. ಇವೆರಡೂ ಗ್ರಂಥಗಳು ಹೇಳುವ ನಾಟ್ಯ ಎಂಬ ಎಲ್ಲ ವಿವರಗಳು ರಂಗಭೂಮಿಯದ್ದಲ್ಲ; ಬದಲಾಗಿ ನೃತ್ಯಗಳೇ ಆಗಿವೆಯೆನ್ನುವುದನ್ನು ಮರೆಯುವಂತಿಲ್ಲ.

ಒಟ್ಟಿನಲ್ಲಿ ಪೂರ್ವಸೂರಿಗಳ ಗ್ರಂಥಗಳಲ್ಲಿನ ಅಂಶಗಳನ್ನು ಪ್ರತಿ ಮಾಡಿಟ್ಟಂತೆ ತೋರುವ ಅರ್ವಾಚೀನವಾದ ಸಂಗ್ರಹಕೃತಿಗಳು ಇವು. ಹೀಗಾಗಲು ಕಾರಣ: ಗೀತ-ವಾದ್ಯ-ನೃತ್ಯಶಾಸ್ತ್ರಗಳಲ್ಲಿ ಆವರೆಗೂ ಇದ್ದ ಎಷ್ಟೋ ವಿಷಯಗಳು ೧೭ನೇ ಶತಮಾನದಿಂದೀಚೆಗೆ ಪ್ರಯೋಗಪರಂಪರೆಯಲ್ಲಿ ಶಿಥಿಲವಾಗಿ ಅಲ್ಲೊಂದಷ್ಟು ಇಲ್ಲೊಂದಷ್ಟು ಎಂಬಂತೆ ಕಾಣಸಿಗುತ್ತವೆ. ಪರಿಭಾಷೆಗಳು ಕೂಡಾ ಕಳಾಹೀನವಾಗಿಬಿಡುತ್ತವೆ. ಸಾಕಷ್ಟು ಮಿಶ್ರವೆನಿಸುವ ಲಕ್ಷಣೋಲ್ಲೇಖಗಳು ಕಂಡುಬರುತ್ತವೆ. ಎಷ್ಟೋ ಗ್ರಂಥಗಳಲ್ಲಿ ಅವವೇ ಲಕ್ಷಣಗಳು ನಕಲು ಪ್ರತಿಯೆಂಬಷ್ಟು ಕಂಡುಬರುತ್ತವೆ. ಇಷ್ಟೇ ಅಲ್ಲ; ದೇವದಾಸಿ-ರಾಜದಾಸಿ ಮೊದಲಾದ ಕುಲವೃತ್ತಿಯಲ್ಲೂ ಹಲವು ಬದಲಾವಣೆಗಳು ಘಟಿಸುತ್ತವೆ. ಆವರೆಗೂ ದೇವದಾಸಿ ಮನೆತನ ಮತ್ತು ಅವರ ಕಲೆಗೆ ಇದ್ದ ಇದ್ದ ಉನ್ನತ ಸ್ಥಾನ-ಮಾನಗಳ ವ್ಯತ್ಯಾಸ ಕ್ರಮೇಣ ಕುಗ್ಗುತ್ತಾ ಹೋಗುವುದನ್ನು ಮನಗಾಣಬಹುದು. ತಂಜಾವೂರಿನ ತುಳಜ ಮಹಾರಾಜ ಸಂಗೀತ ಸಾರಾಮೃತಗ್ರಂಥದ ಬಳಿಂತೂ ಸ್ವತಂತ್ರವೆನಿಸುವ ಪ್ರೌಢ ರಚನೆಗಳು ಕಾಣಸಿಗುವುದೇ ವಿರಳ. ಇದಕ್ಕೆ ಮುಖ್ಯ ಕಾರಣವೆಂದರೆ ಬ್ರಿಟಿಷ್ ಮಿಷನರಿಗಳ ಆಡಳಿತದಲ್ಲಿ ಭಾರತೀಯ ದೇವಾಲಯ ಮತ್ತು ರಾಜಪ್ರಭುತ್ವಕ್ಕೆ ಒದಗಿದ ಆಪತ್ತು. ಪರಿಣಾಮವಾಗಿ ಆವರೆಗೆ ಉಳಿದುಬಂದ ಕಲೆಯನ್ನು ಸಾಧ್ಯವಾದಷ್ಟೂ ಎಚ್ಚರಿಕೆಯಿಂದ ಪೋಷಿಸಿ ರಕ್ಷಿಸಿಟ್ಟುಕೊಳ್ಳುವ ಸವಾಲು ಪ್ರಧಾನವಾಗಿ ಎಲ್ಲರಿಗೂ ಎದುರಾಗಿತ್ತು. ದೇವಾಲಯನಿರ್ಮಾಣಗಳಲ್ಲೂ ಆ ಮೊದಲಿನ ಕಾಲಗಳಲ್ಲಿ ಕಾಣಬಹುದಾದ ಶಿಲ್ಪಗಳ ಸೊಬಗು ಬಹುತೇಕ ಮರೆಯಾಗಿಬಿಡುವುದನ್ನು ಗಮನಿಸಬಹುದು. ಒಟ್ಟಿನಲ್ಲಿ ಬ್ರಿಟಿಷರ ಆಡಳಿತದ ಅವಧಿ ಕಲೆ-ಸಂಸ್ಕೃತಿಯ ಪಾಲಿಗೆ ಕರಾಳ ರಾತ್ರಿಯಾಗಿ ಬರೋಬ್ಬರಿ ಕಲೆಯನ್ನು ಎರಡು ಶತಮಾನಗಳ ಕಾಲ ಕಾಡಿಬಿಟ್ಟಿತು. ಜೊತೆಗೆ ನೃತ್ಯನಿಷೇಧ ಕಾಯ್ದೆಯ ಕಟ್ಟುಪಾಡು ಲಕ್ಷ್ಯ-ಲಕ್ಷಣಗ್ರಂಥಗಳ ಸರಾಗವಾದ ಹರಿಯುವಿಕೆಗೆ ದೊಡ್ಡ ತಡೆಗೋಡೆಯೇ ಆಗಿತ್ತು. ಹೀಗಿದ್ದೂ ಅವು ತಮ್ಮ ಕಲೆಯ ಸಂಪತ್ತನ್ನು ಉಳಿಸಿ ಬೆಳೆಸಲು ಹಿಂದೇಟು ಹಾಕಿಲ್ಲ. ಯಥಾಸಾಧ್ಯ ಪ್ರಯತ್ನಿಸಿದೆ; ಪ್ರಾಚೀನರ ಕೆಲಸಗಳನ್ನು ಗುರುತಿಸಿಕೊಂಡೇ ಅವುಗಳನ್ನು ಹೊಕ್ಕು ಬಳಸಿ ಬರೆದಿವೆ; ಉಳಿಸಿವೆ – ಬೆಳೆಸಿವೆ. ಇಂಥ ಧ್ಯೇಯ, ಕಲಾಪ್ರೀತಿ ನಮ್ಮ ಇಂದಿನ ದಿನಗಳನ್ನು ಪೋಷಿಸಿದೆ. ಅದಕ್ಕೆ ನಾವು ಋಣಿಯಾಗಿರೋಣ ಮತ್ತು ಆ ಸಂಸ್ಕೃತಿ ರಕ್ಷಣೆಯ ಗ್ರಂಥಪೋಷಣೆಯ ಆಶಯ ನಮ್ಮ ಜೀವನದಲ್ಲೂ ಇರಲಿ ಅಲ್ವೇ?

 

———

 

 

Leave a Reply

*

code