Author: ಮನೋರಮಾ. ಬಿ.ಎನ್
ಚಂದ್ರಕಲಾಹಸ್ತ
ಲಕ್ಷಣ: ತೋರು ಬೆರಳು, ಮತ್ತು ಹೆಬ್ಬೆರಳನ್ನು ಉದ್ದಕ್ಕೆ ಬಲ ಭಾಗಕ್ಕೆ ಹಿಡಿದು, ಉಳಿದ ಬೆರಳುಗಳನ್ನು ಅಂಗೈಗೆ ಮುಖ ಮಾಡುವುದು ಅಥವಾ ಸೂಚಿಯ ಹೆಬ್ಬೆರಳನ್ನು ಬೇರ್ಪಡಿಸುವುದು. ಚಂದ್ರಕಲಾ ಎಂದರೆ ಚಂದ್ರನ ಕಲೆ ಎಂದು ಹೆಸರು. ಈ ಹಸ್ತಕ್ಕೆ ಬಾಲಚಂದ್ರ ಎಂಬ ಹನ್ನೊಂದು ಹೆಸರೂ ಇದೆ.
ಈ ಹಸ್ತದ ವಿನಿಯೋಗ ಅಭಿನಯ ದರ್ಪಣವನ್ನು ಹೊರತುಪಡಿಸಿದರೆ, ನಾಟ್ಯಶಾಸ್ತ್ರ ಮತ್ತು ಇನ್ನುಳಿದ ಗ್ರಂಥಗಳಲ್ಲಿ ಅಷ್ಟಾಗಿ ಕಂಡು ಬಂದಿಲ್ಲ. ಯೋಗಶಾಸ್ತ್ರದಲ್ಲಿ ರೋಗನಿವಾರಕ ಮುದ್ರೆಗಳ ಪೈಕಿ ಕಂಡುಬರುವ ಕುಂಟ ಮುದ್ರೆಯು ಚಂದ್ರಕಲಾ ಹಸ್ತವೇ ಆಗಿದ್ದು, ದೇಹದ ಎಲ್ಲಾವಿಧದ ತೊಂದರೆಗಳ ನಿವಾರಣೆಗೆ ಉಪಯುಕ್ತ ಎನ್ನಲಾಗಿದೆ. ದಿನನಿತ್ಯ ಜೀವನದಲ್ಲಿ ಅಳತೆಗೆ, ಯೋಚನೆ ಮಾಡುವಲ್ಲಿ (ಕೆನ್ನೆಯ ಬಳಿ ಇಟ್ಟುಕೊಂಡು)ಈ ಹಸ್ತವು ಬಳಕೆಯಾಗುತ್ತದೆ.
ವಿನಿಯೋಗ: ಚಂದ್ರ, ಮುಖ, ಒಂದು ಗೇಣು ಎಂದು ಅಳೆಯುವುದು, ಚಂದ್ರನ ಆಕಾರದ ವಸ್ತುವನ್ನು ಸೂಚಿಸುವುದು, ಶಿವನ ಕಿರೀಟದಲ್ಲಿರುವುದು, ಗಂಗಾನದಿ, ಹರಿತ ಮಾಡುವುದು.
ಇತರೆ ವಿನಿಯೋಗ: ಚೋಟಿನ ಅಳತೆ, ಗಾಂಢೀವ ಧನಸ್ಸು, ಆನೆಯ ದಂತ, ಶ್ಲಾಘನೆ ಅಥವಾ ಸ್ತೋತ್ರಾರ್ಹ ಎಂಬರ್ಥ, ನೇಗಿಲು, ಬಾಣಗಳ ಗುರಿಹಿಡಿಯುವಿಕೆ, ದುಂಡಾಗಿ ಸುತ್ತುವುದು, ಕಾಲಪ್ರಮಾಣ, ಬೀಸಣಿಗೆ, ಮೂಗಿನ ಮೇಲೆ ಬೆರಳಿಟ್ಟಾಗ ಆಶ್ಚರ್ಯ, ಗಲ್ಲದ ಮೇಲೆ ಇಟ್ಟಾಗ ಹಾಸ್ಯ, ‘ನೀನು ಸಮರ್ಥ’ ಎಂಬ ಕುಹಕದ ಮಾತು. ಬಾಲಕರು ವಿನೋದಕ್ಕಾಗಿ ಕೊಂಬನ್ನು ಊದುವುದು- ಈ ಮುಂತಾದ ವಿಷಯಗಳನ್ನು ಸೂಚಿಸಬಹುದು.
ಚಂದ್ರಕಲಾ ಹಸ್ತದಲ್ಲಿನ ಕಿರು, ಉಂಗುರ ಮತ್ತು ಮಧ್ಯಮ-ಈ ಮೂರು ಬೆರಳುಗಳನ್ನು ಸ್ವಲ್ಪ ಮೇಲೆತ್ತಿ ಬಾಗಿಸಿ ಹಿಡಿಯುವುದರಿಂದ ಪ್ರಾಲಂಭ ಎಂಬ ಇನ್ನೊಂದು ಮಾದರಿಯ ಅಸಂಯುತ ಹಸ್ತವೇರ್ಪಡುತ್ತದೆ. ಪ್ರಾಲಂಭ ಎಂದರೆ ನೇತಾಡುವುದು ಎಂದರ್ಥ.
ಈ ಹಸ್ತದ ವಿನಿಯೋಗಗಳು ಈ ಬಗೆಯಲ್ಲಿವೆ : ದ್ವಾರಪಾಲಕ ಹಸ್ತ, ಆಲೋಚನೆ, ಆಶ್ಚರ್ಯ, ಕೋಪವೇಕೆ ಎಂದು ಪ್ರೀತಿಯಿಂದ ಕೇಳು, ಏಕೆ, ಹೇಗೆ, ಯಾರು, ಮುಂತಾದ ಪ್ರಶ್ನೆ ಕೇಳಲು ನೃತ್ಯ ಮತ್ತು ನಿತ್ಯ ಜೀವನದಲ್ಲೂ ಬಳಕೆಯಾಗುತ್ತದೆ. ವಿಟನನ್ನು ಧಿಕ್ಕರಿಸುವುದು, ಮಾರ್ಗವನ್ನು ಬಿಟ್ಟುಕೊಡುವುದು, ಜಗಳವಾಡುವಾಗ ಹೆಂಗಸರು ಕೈ ನೀಡುವುದು, ಅನ್ಯೋನ್ಯಾಲಿಂಗನ, ‘ನನ್ನ ಕೈಯಲ್ಲೇನೂ ಇಲ್ಲ’ ಎಂದು ಸೂಚಿಸುವುದು, ಮೋಕ್ಷ ಮತ್ತು ಮಹಿಮೆಯ ಸೂಚನೆ ಇನ್ನಿತರ ವಿನಿಯೋಗಗಳು.