Author: ಮನೋರಮಾ. ಬಿ.ಎನ್
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ
ಶಾಸ್ತ್ರರಂಗ ಭಾಗ 4 : ಪಶ್ಚಿಮ/ ಆವಂತೀ
ಸಂಚಿಕೆ ೪೩ : ಜೈನಮುನಿ ವಾಚನಾಚಾರ್ಯ ಸುಧಾಕಲಶನ ಸಂಗೀತೋಪನಿಷತ್ ಸಾರೋದ್ಧಾರ ಮತ್ತು ಅದರ ವಿಶೇಷ ಸಂಗತಿಗಳು ಹಾಗೂ ಮಂಡನನ ಸಂಗೀತ ಮಂಡನ ಸೇರಿದಂತೆ ಭಾರತೀಯ ಗೀತ-ನೃತ್ಯ- ಯಕ್ಷಗಾನ ರಂಗಭೂಮಿಗಳಿಗೆ ಜೈನರ ಕೊಡುಗೆಗಳು
ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)
Noopura Bhramari- Centre for Indian Knowledge systems
Śāstra Ranga
Part 3- Uttara/Pāncālī (Northern Region of Ancient Bhārata)
Episode 38- Muhammad Shah’s Sangīta Mālikā and the contribution of Indian Muslim community towards Dance Treatises.Part 4- Paschima/Āvantī (Western Region of Ancient Bhārata) Episode 43 : Jain Saint Vācanācārya Sudhākalaśa’s Sangītopanishat Sāroddhāra and the contributions of Jain saints and experts towards Indian Music-Dance-Yakshagana field.
Research, Writing and Presentation by :
Dr Manorama B N,
Principal Investigator, Director and Editor- Noopura Bhramari ®
Co-operation by
Dr Dwaritha Viswanatha Smt. Shalini P. Vittal
Co-Principal Investigators, Noopura Bhramari IKS Centre
Smt. Rohini A. R Research Fellow,
& Sri. Vishnuprasad N Trustee, Noopura Bhramari ®
Theme Music by
Nirmiti An abode of Arts and Culture, Bengaluru.
(Singer Vid Balasubhramanya Sharma, Bengaluru)
Audio and Video Recording by
prayog studio, Bengaluru
ಲೇಖನ
Authored by ಡಾ.ಮನೋರಮಾ ಬಿ.ಎನ್.
ಸಂಗೀತೋಪನಿಷತ್ ಸಾರೋದ್ಧಾರ- ಸಂಗೀತ ಕ್ಷೇತ್ರದ ತತ್ವಾರ್ಥ ಸಂಗ್ರಹದ ಸಾರದ ಶ್ರೇಷ್ಠ ಕೃತಿ ಎಂಬ ಅರ್ಥವನ್ನು ಹೊರಸೂಸುವ ಈ ಗ್ರಂಥದ ಕರ್ತೃ ಜೈನಮುನಿ ವಾಚನಾಚಾರ್ಯ ಸುಧಾಕಲಶ. ಮಧ್ಯಪ್ರದೇಶ-ಗುಜರಾತ್-ರಾಜಾಸ್ಥಾನ ವಿಭಾಗಗಳಿಗೆ ಸೇರುವ ಈ ಗ್ರಂಥವು ನೃತ್ಯ ಮತ್ತು ಗೀತ-ವಾದ್ಯಶಾಸ್ತ್ರದ ಪಶ್ಚಿಮ ಭಾರತದ ಪ್ರವೃತ್ತಿ ಭೇದಗಳಿಗೆ ಪ್ರವರ್ತಕರೂಪವೆನಿಸಿಕೊಳ್ಳಲು ಅರ್ಹವಾಗಿದೆ. ಈ ಗ್ರಂಥದ ಹಸ್ತಪ್ರತಿ ಬಿಕಾನೇರ್ ಮತ್ತು ಮುಂಬಯಿಯಲ್ಲಿ ದೊರೆತಿದೆ. ಜಿನರತ್ನಕೋಶವೆಂಬ ಸಮುಚ್ಛಯದಲ್ಲಿ ಈ ಗ್ರಂಥದ ಉಲ್ಲೇಖಗಳನ್ನು ಗುರುತಿಸಲಾಗಿದೆ.
ಈತನು ಶ್ವೇತಾಂಬರ ಜೈನ ಸಮುದಾಯದ ಮಾಲಧಾರೀಯ ಗಚ್ಛಕ್ಕೆ ಸೇರಿದ್ದ ಮುನಿ. ಶ್ರೀತಿಲಕ ಮತ್ತು ಶ್ರೀ ರಾಜಶೇಖರ ಸೂರಿ ಎಂಬ ಮುನಿಗಳ ಶಿಷ್ಯ. ಈತನ ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥವು ರಚನೆಗೊಂಡ ಕಾಲಮಾನ ಸಾಮಾನ್ಯಶಕ ಸುಮಾರು ೧೩೨೪ರಿಂದ ೧೩೫೦ನೇ ಇಸವಿ. ಸುಧಾಕಲಶನು ಇದಕ್ಕಿಂತ ಮೊದಲೇ ಮತ್ತಷ್ಟು ಬೃಹತ್ ಪ್ರಮಾಣದಲ್ಲಿ ಸಂಗೀತ ಗ್ರಂಥವೊಂದನ್ನು ರಚಿಸಿದ್ದನೆಂದೂ ತಿಳಿದುಬರುತ್ತದೆ. ಜೊತೆಗೆ ಏಕಾಕ್ಷರ ನಾಮಮಾಲಾ ಎಂಬ ೫೦ ಪದ್ಯಗಳ ಪುಸ್ತಿಕೆಯೂ ಈತನ ಹೆಸರಲ್ಲಿ ಕಂಡುಬರುತ್ತದೆ.ಸುಧಾಕಲಶನ ಗುರುಗಳೆನಿಸಿದ ಅನೇಕ ಹಿರಿಯ ಮುನಿಗಳೂ ಸಂಗೀತಶಾಸ್ತ್ರದಲ್ಲಿ ಅಪಾರ ಪ್ರತಿಭಾಸಂಪನ್ನರಾಗಿದ್ದರೆಂಬುದು ತಿಳಿದುಬರುತ್ತದೆ.
ಸುಧಾಕಲಶನ ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥವು ಜಿನಸ್ತುತಿ, ಭಾರತೀಸ್ತುತಿ ಹಾಗೂ ಗುರುನಮಸ್ಕಾರ ಶ್ಲೋಕಗಳಿಂದ ಆರಂಭಗೊಳ್ಳುತ್ತದೆ. ಜೊತೆಗೆ ಪ್ರತೀ ಅಧ್ಯಾಯಗಳಲ್ಲೂ ಜಿನಪತಿ, ತೀರ್ಥಂಕರ ಸ್ತುತಿಗಳನ್ನು ಗುರುತಿಸಬಹುದು. ಈ ಗ್ರಂಥವು ಆರು ಅಧ್ಯಾಯಗಳಲ್ಲಿದ್ದು; ಮೊದಲ ನಾಲ್ಕು ಅಧ್ಯಾಯಗಳು ಗೀತ- ಪ್ರಬಂಧ, ಪ್ರಸ್ತಾರಾದಿ ಸೋಪಾಶ್ರಯ ತಾಲ ಪ್ರಕಾಶ, ಗಾನಸ್ವರ ರಾಗಾದಿ ಪ್ರಕಾಶನ, ಚತುರ್ವಿಧ ವಾದ್ಯಪ್ರಕಾಶನ ಎಂಬ ಹೆಸರುಳ್ಳವು. ಇವು ದೇಶೀಪ್ರಬಂಧ, ದೇಶೀತಾಲ, ಶ್ರುತಿ-ಸ್ವರ- ಗಾಯನ, ರಾಗ ಮತ್ತು ವಾದ್ಯಗಳ ವಿವರಣೆಗಳನ್ನು ಹೊಂದಿವೆ. ಐದನೇ ಮತ್ತು ಆರನೇ ಅಧ್ಯಾಯಗಳು ನೃತ್ಯಕ್ಕೆ ಸಂಬಂಧಿಸಿದ- ನೃತ್ಯಪದ್ಧತಿ ಪ್ರಕಾಶನ ಎಂಬ ಅಧ್ಯಾಯಗಳಾಗಿವೆ. ಅದರಲ್ಲೂ ಐದನೇ ಅಧ್ಯಾಯದಲ್ಲಿ ನರಕೃತ ಮತ್ತು ನಾರೀಕೃತ ಎಂಬುದಾಗಿ ನರ್ತಕ -ನರ್ತಕಿಯರ ನೃತ್ಯವಿಭಾಗಗಳನ್ನು ವಿಂಗಡಿಸುತ್ತಾನೆ ಸುಧಾಕಲಶ. ಇಲ್ಲಿ ನರಕೃತವಾದುದು ಅಂದರೆ ನೃತ್ತ ಅಥವಾ ನಾಟಕ ; ನಾರೀಕೃತವೆನ್ನುವುದು ನೃತ್ಯ ಎಂಬುದು ತಿಳಿದುಬರುತ್ತದೆ. ಹಾಗೆಯೇ ಶಿವಭಕ್ತನಾದ ಪಾಲಕ ಎಂಬ ಹೆಸರಿನ ಪ್ರದ್ಯೋತನೆಂಬ ಆವಂತೀ ಜೈನರಾಜನಿಂದ ಭೂಲೋಕದಲ್ಲಿ ನೃತ್ಯವು ಪ್ರಚುರಿಸಲ್ಪಟ್ಟಿತು ಎಂದೂ ಸ್ತುತಿ ಮಾಡುತ್ತಾನೆ. ಹಸ್ತಾದಿ ಅಂಗೋಪಾಂಗ ಅಭಿನಯಗಳು, ಮಾರ್ಗ ಮತ್ತು ದೇಶೀ ಎಂಬ ವಿಭಾಗಗಳಲ್ಲಿ ಸ್ಥಾನಕ – ಚಾರಿಗಳನ್ನು ವ್ಯವಹರಿಸಿದ್ದಾನೆ. ಆರನೇ ಅಧ್ಯಾಯದಲ್ಲಿ ಕರಣ, ಅಂಗಹಾರ, ಭ್ರಮರಿ, ನೃತ್ಯಪದ್ಧತಿ, ನೃತ್ಯ ಶಿಕ್ಷಾರಂಭ ಕ್ರಮ, ಸಭಾಲಕ್ಷಣಗಳನ್ನು ವಿವರಿಸಿದ್ದಾನೆ.
ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥವು ಅನೇಕ ವಿಷಯಗಳಲ್ಲಿ ಮಹತ್ವದ್ದಾಗಿದೆ, ವಿಶಿಷ್ಟವೂ ಆಗಿದೆ. ಲಕ್ಷಣಗಳಲ್ಲಿ ಬಹಳಷ್ಟು ಅನನ್ಯತೆಗಳನ್ನು ಕಾಣುವಂತೆಯೇ ಬರೆಯುತ್ತಾನೆ ಸುಧಾಕಲಶ. ಉದಾಹರಣೆಗೆ ಹೇಳುವುದಾದರೆ- ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥದಲ್ಲಿ ಪಟ್ಟಾವುಜ ವಾದನಕ್ಕೆ ಪೂರಕವಾಗಿ ಘಾತಿಸುವಂತೆ ಏಳು ಬಗೆಯ ಪಾದಕರ್ಮಗಳನ್ನು ಹೆಚ್ಚುವರಿಯಾಗಿ ಕಾಣಬಹುದು. ಚಾರಿಗಳ ನಾಮಕರಣವೂ ಕೊಂಚ ಭಿನ್ನವಾಗಿದೆ. ಭ್ರಮಂತಲ್ಲಿ, ಉತ್ಸಾಂದಿತಾ, ರೇಚಿಕೋರ್ದ್ಧಿಕಾ, ಅಂಚಿತಾ, ವೀಚೀ, ಸಬಾಹುಕಾ, ಉದ್ವೇಷ್ಟಿತ, ಸಂಶ್ಲಿಷ್ಟಾ ಎಂಬ ಭೂಮಿಚಾರಿಗಳೂ; ಆಕಾಶಚಾರಿಗಳ ಪೈಕಿ ನೂಪುರಪಾಟಿಕಾ, ಘೂರ್ಣಿತೋನ್ಮತ್ತ, ತಿರ್ಯಗಾಂಚಿತಾ, ಉತ್ಪ್ಲುತಾಲಗಸಂಸ್ಥಾನ ಮತ್ತು ಸಂಕ್ಷಿಪ್ತಾ ಎಂಬ ಚಾರಿಗಳು ಕಾಣಸಿಗುತ್ತವೆ. ಕರಣಲಕ್ಷಣಗಳಲ್ಲೂ ಸಾಕಷ್ಟು ಭಿನ್ನತೆಯನ್ನು ಈತನ ಸಂಪ್ರದಾಯ ಸೂಚಿಸಿದೆ. ರೇಚಿತ, ಅಂಸಾಂಚಿತ, ಪಾದೋರುಶ್ಲಿಷ್ಟಕ, ಪಾರ್ಷ್ಣಿಸಂಘಟ್ಟಿತಾ, ಲತಾಕುಂಚಿತ ಮುಂತಾದ ಕೆಲವು ಪರ್ಯಾಯ ಕರಣಗಳನ್ನೂ ಲಕ್ಷಣೀಕರಿಸಿದೆ. ಇನ್ನು ಸುತ್ತುವ ತಿರುಗುವ ಚಲನೆಗಳುಳ್ಳ ಭ್ರಮರಿಯ ವಿಭಾಗೀಕರಣವು ಈ ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥದಲ್ಲಿ ಕಂಡುಬಂದಿದೆ. ೩೨ ವಿಧದ ಭ್ರಮರಿ ಸಮುಚ್ಚಯದ ಬಗ್ಗೆ ಸುಧಾಕಲಶನು ತಿಳಿಸಿದ್ದಾನೆ. ಅವು ಆಕಾಶ, ಭೂಮಿ ಚಾರಿಗಳಂತೆಯೇ ಪ್ರಯುಕ್ತವಾದಾಗ ಮತ್ತೂ ೩೨ ರೀತಿಯ ವೈಶಿಷ್ಟ್ಯಪೂರ್ಣ ಭ್ರಮರಿಗಳು ಏರ್ಪಡುತ್ತವೆಯೆಂದಿದೆ. ಹೀಗೆ ಭರತಶಾಸ್ತ್ರದ ಪಶ್ಚಿಮದ ವಿಶಿಷ್ಟ ಪರಂಪರೆಯನ್ನು ಗುರುತಿಸಬಹುದಾದ ಲಕ್ಷಣಗಳನ್ನು ಪ್ರಮುಖತಃ ಭ್ರಮರಿಗಳಲ್ಲಿ ನಾನು ಕಂಡುಕೊಂಡಿದ್ದೇನೆ. ಈ ಕುರಿತಾದ ಹೆಚ್ಚಿನ ವಿವರಗಳಿಗೆ ಅಧ್ಯಯನ ಗ್ರಂಥ ಯಕ್ಷಮಾರ್ಗಮುಕುರವನ್ನು[1] ಓದಬಹುದು.
ಸಂಗೀತ ಸಾರೋದ್ಧಾರ ಎಂಬ ಮತ್ತೊಂದು ಗ್ರಂಥವು ಶಾರದಾನಂದನ ಎಂಬ ವಿಶೇಷಣವನ್ನು ಪಡೆದ ಕೀಕರಾಜ ಎಂಬಾತನ ಹೆಸರಿನಲ್ಲಿದ್ದು; ಪುಣೆಯ ಭಂಡಾರ್ಕರ್ ಸಂಸ್ಥೆಯಲ್ಲಿ ಇದರ ಹಸ್ತಪ್ರತಿಗಳಿವೆ. ಈ ಕೀಕರಾಜನ ಸಂಗೀತ ಸಾರೋದ್ಧಾರ ಗ್ರಂಥವೂ ಗೀತ, ಸ್ವರ, ರಾಗ, ಪ್ರಕೀರ್ಣಕ, ಗೀತಪ್ರಬಂಧ, ವಾದ್ಯ, ತಾಲ, ನೃತ್ಯ ಎಂಬ ಅಧ್ಯಾಯಗಳನ್ನು ಹೊಂದಿದೆ. ಇದಲ್ಲದೆ ಪರಾಶರಗೋತ್ರೀಯ ರಾಮಕೃಷ್ಣಭಟ್ಟನ ರಾಮಕೌತೂಹಲ ಅಥವಾ ರಾಗಕೌತೂಹಲವೆಂಬ ಹೆಸರಿನ ಗ್ರಂಥವು ಸಂಗೀತ ಸಾರೋದ್ಧಾರ ಎಂಬ ಹೆಸರಿನಿಂದಲೂ ಬಿಕಾನೇರ್‌ನ ಹಸ್ತಪ್ರತಿ ಕ್ಯಾಟಲಾಗ್‌ನಲ್ಲಿ ಗುರುತಿಸಬಹುದೆಂದು ಡಾ. ವಿ. ರಾಘವನ್ ಬರೆದಿದ್ದಾರೆ.[2] ಈ ಗ್ರಂಥವೂ ಗೀತ ನೃತ್ಯ-ವಿಷಯಕವಾಗಿದೆಯೆಂದೇ ಹೇಳಲಾಗಿದೆ. ಇನ್ನು ೧೭೦೦-೧೭೫೦ನೇ ಇಸವಿಯಲ್ಲಿದ್ದ ಮೈಸೂರಿನ ಶ್ರೀರಂಗನಾಥನ ಸಂಗೀತಸಾರೋದ್ಧಾರ ಸಂಗೀತಶಾಸ್ತ್ರದುಗ್ಧಾಬ್ಧಿ ಎಂಬ ಕನ್ನಡ-ತೆಲುಗು ಬರೆವಣಿಗೆಯಲ್ಲಿರುವ ಹಸ್ತಪ್ರತಿಯೂ ಮೈಸೂರು: ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿದೆ.[3] ಇದೂ ಗೀತ, ಸ್ವರ, ರಾಗ, ಪ್ರಬಂಧ, ತಾಲ, ನೃತ್ತ ಇತ್ಯಾದಿ ಅಧ್ಯಾಯ ವಿಷಯಗಳನ್ನು ಹೊಂದಿದೆ. ರಂಗಪೂಜೆ, ಪುಷ್ಪಾಂಜಲಿ ವಿಧಿ, ನರ್ತಕ-ನಟಿ ಲಕ್ಷಣ, ಅಂಗೋಪಾಂಗ ಅಭಿನಯಗಳನ್ನು ನೃತ್ತ ಅಧ್ಯಾಯದಲ್ಲಿ ಹೊಂದಿದೆ. ಈ ಸಾರೋದ್ಧಾರ ಗ್ರಂಥಗಳು ಈವರೆಗೂ ಯುಕ್ತರೀತಿಯಿಂದ ಪ್ರಕಟಣೆಯ ಭಾಗ್ಯ ಪಡೆದಿಲ್ಲ.
ವಾಚನಾಚಾರ್ಯ ಸುಧಾಕಲಶನ ಗ್ರಂಥವನ್ನು ಓದುತ್ತಾ ಹೋದಂತೆ ನಮ್ಮ ಭಾರತೀಯ ಕಲೆ ಮತ್ತು ಸಂಸ್ಕೃತಿಯ ಪ್ರಪಂಚಕ್ಕೆ ಜೈನಮುನಿಗಳ ಕೊಡುಗೆಯ ವಿಚಾರವನ್ನು ತಿಳಿಯಪಡಿಸಬೇಕೆಂಬ ಬಯಕೆ ನನಗಾಗುತ್ತಿದೆ.
ಆಚಾರ್ಯ ಹೇಮಚಂದ್ರ ಕ್ರಿ.ಶ. ೧೦೮೮ ರಲ್ಲಿ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಧುಂಧೂಕಾ ಎಂಬ ಪಟ್ಟಣದಲ್ಲಿ ಜನಿಸಿದ. ಅವನ ಬಾಲ್ಯದ ಹೆಸರು ಚಾಂಗದೇವ ಮತ್ತು ಅವನ ತಂದೆಯ ಹೆಸರು ಚಾಚಿಗ ಮತ್ತು ತಾಯಿಯ ಹೆಸರು ಪಾಹಿನಿ ದೇವಿ. ಬಾಲ್ಯದಿಂದಲೂ ಧಾರ್ಮಿಕ ಮುಖಂಡರ ಸಂಪರ್ಕದಲ್ಲಿರುವ ಸೌಭಾಗ್ಯ ಚಾಂಗದೇವನಿಗೆ ಸಿಕ್ಕಿತ್ತು. ಆದ್ದರಿಂದ, ತಮ್ಮ ಎಂಟನೇ ವಯಸ್ಸಿನಲ್ಲಿ ಆಚಾರ್ಯ ದೇವಚಂದ್ರ ಸೂರಿಯವರಿಂದ ದೀಕ್ಷೆ ಪಡೆದ. ದೀಕ್ಷೆಯ ನಂತರ ಸೋಮಚಂದ್ರ ಎಂದು ಹೆಸರಿಸಲಾಯಿತು. ಸ್ವಲ್ಪ ಕಾಲದಲ್ಲೇ ಸೋಮಚಂದ್ರನು ಸಕಲ ಶಾಸ್ತ್ರಗಳಲ್ಲಿ ಅಗಾಧ ಪಾಂಡಿತ್ಯ ಗಳಿಸಿದನು. ೧೧೬೬ ರಲ್ಲಿ, ತನ್ನ ೨೧ ನೇ ವಯಸ್ಸಿನಲ್ಲಿ, ಸೋಮಚಂದ್ರನು ತನ್ನ ಗುರುಗಳಿಂದ ಆಚಾರ್ಯ ಹುದ್ದೆಗೆ ಏರಿದನು ಮತ್ತು ಆಚಾರ್ಯ ಹೇಮಚಂದ್ರ ಎಂಬ ಹೆಸರಿನಿಂದ ಪ್ರಸಿದ್ಧನಾದನು.
ಆಚಾರ್ಯ ಹೇಮಚಂದ್ರ ಪುರಾಣ, ಕಾವ್ಯ, ಸ್ತೋತ್ರ, ವ್ಯಾಕರಣ, ಅಲಂಕಾರ, ಕೋಶ, ನ್ಯಾಯ ಮತ್ತು ಯೋಗಶಾಸ್ತ್ರದಂತಹ ವಿವಿಧ ವಿಷಯಗಳಲ್ಲಿ ಸಾಹಿತ್ಯ ರಚಿಸುವಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಅವರ ಪ್ರಮುಖ ಕೃತಿಗಳೆಂದರೆ – ಕಾವ್ಯಾನುಶಾಸನ, ಶಬ್ದಾನುಶಾಸನ, ಛಂದೋನು-ಶಾಸನ, ದ್ವಾತ್ರಿಶಂಕ, ದ್ವಯಾಶ್ರಯ ಕಾವ್ಯ, ತ್ರಿಶಷ್ಟಿ ಶಾಲಪುರುಷ ಚರಿತ, ಯೋಗಶಾಸ್ತ್ರ, ಪ್ರಮಾದಶಾಸ್ತ್ರ, ಅನೇಕಾರ್ಥ ಸಂಗ್ರಹ, ನಿಘಂಟ ಮತ್ತು ದೇಶನಾಮಮಾಲ. ಈ ಪೈಕಿ ಕಾವ್ಯಾನುಶಾಸನ ನೃತ್ಯದ ವಿವರಗಳಿಗೆ ಅತ್ಯಂತ ಉಪಯುಕ್ತವಾಗಿದೆ.
ರಾಮಚಂದ್ರ ಮತ್ತು ಗುಣಚಂದ್ರ ಅವರು ೧೨ ಶತಮಾನದಲ್ಲಿ ಕಂಡುಬರುವ ಗುಜರಾತಿನ ವ್ಯಾಪ್ತಿಗೆ ಸೇರುವ ಜೈನ ಲೇಖಕರು ಮತ್ತು ನಾಟ್ಯದರ್ಪಣ ಎಂಬ ಕೃತಿಯ ಜಂಟಿ ಕರ್ತೃತ್ವವನ್ನು ಹೊಂದಿದ್ದಾರೆ. ರಾಮಚಂದ್ರ ಮತ್ತು ಗುಣಚಂದ್ರರು ಆಚಾರ್ಯ ಹೇಮಚಂದ್ರನ ವಿದ್ಯಾರ್ಥಿಗಳಾಗಿದ್ದರು. ’ಇಂತಹ ಮಹಾನ್ ಗುರುವಿನ ವಿದ್ಯಾರ್ಥಿಗಳಾಗಿರುವುದು ಹೆಮ್ಮೆಯ ಸಂಗತಿ’ ಎಂದು ಗ್ರಂಥದಲ್ಲಿ ತಿಳಿಸಿದ್ದಾರೆ. ಅವರ ನಾಟ್ಯ ದರ್ಪಣಗ್ರಂಥವು ನಾಟಕದ ಕ್ಷೇತ್ರಕ್ಕೆ ಹಿಡಿದ ಕನ್ನಡಿ ಎಂಬ ಅರ್ಥವನ್ನು ಹೊಂದಿದ್ದು ಅನೇಕ ವಿಷಯಗಳಲ್ಲಿ ನೃತ್ಯ ಮತ್ತು ರಂಗಭೂಮಿಗೆ ಉಪಯುಕ್ತ ಗ್ರಂಥವಾಗಿದೆ.
ಬಹುಶಃ ರಾಮಚಂದ್ರ ಅವರು ನಾಟ್ಯದರ್ಪಣ ಗ್ರಂಥದ ಮೂಲ ಲೇಖಕರಾಗಿರಬಹುದು, ಏಕೆಂದರೆ ಅವರ ಹೆಸರಿನಲ್ಲೇ ಅನೇಕ ಕೃತಿಗಳನ್ನು ಗ್ದುರುತಿಸಬಹುದು ಮತ್ತು ಅವರ ಇನ್ನಿತರ ಕೃತಿಗಳಲ್ಲಿ ನಾಟ್ಯ ದರ್ಪಣದ ಪದ್ಯಗಳನ್ನು ಸಹ ಉಲ್ಲೇಖಿಸಿದ್ದಾರೆ. ರಾಮಚಂದ್ರ ಅವರು “ಪ್ರಬಂಧ ಶತ” ದ ಲೇಖಕರೆಂದು ಜನಪ್ರಿಯರಾಗಿದ್ದಾರೆ. ಈ “ಪ್ರಬಂಧ ಶತ” ಎಂದರೆ “ಪ್ರಬಂಧ ಶತ” ಎಂಬ ಹೆಸರಿನ ಕೃತಿಯೇ ಅಥವಾ ನೂರು ಪ್ರಬಂಧಗಳು ಇದ್ದ ಕಾರಣ ಹಾಗೆಂದು ಹೆಸರಾಯಿತೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ರಾಮಚಂದ್ರ ಮತ್ತು ಗುಣಚಂದ್ರ ಅವರು ಜೈನ ನ್ಯಾಯವನ್ನು ಆಧರಿಸಿ ದ್ರವ್ಯಲಂಕಾರ ಎಂಬ ಇನ್ನೊಂದು ಕೃತಿಯನ್ನು ಬರೆದಿದ್ದಾರೆ.
ಮಹಾರಾಷ್ಟ್ರ ದಕ್ಷಿಣದಲ್ಲಿ ಪಾರ್ಶ್ವದೇವನ ಕೊಡುಗೆಯೂ ಬಹಳ ಮೌಲಿಕವಾಗಿದೆ. ಪಾರ್ಶ್ವದೇವನು ೧೨-೧೩ನೇ ಶತಮಾನದ ಅವಧಿಯಲ್ಲಿದ್ದ ಓರ್ವ ಸಂಗೀತ ಶಾಸ್ತ್ರಕಾರ ಜೈನಮುನಿ. ಆದಿದೇವ ಮತ್ತು ಗೌರಿ ಎನ್ನುವ ಬ್ರಾಹ್ಮಣ ದಂಪತಿಗಳ ಮಗ. ವಯಸ್ಕನಾಗುತ್ತಾ ಜೈನ ಮತದತ್ತ ಆಕರ್ಷಿತನಾಗಿ ಅಭಯಚಂದ್ರ ಮುನಿಯ ಶಿಷ್ಯರಾಗಿದ್ದ ಶ್ರೀ ಮಹಾದೇವ ಆರ್ಯರಲ್ಲಿ ಶಿಷ್ಯತ್ವ ಸ್ವೀಕರಿಸಿದ. ಜೈನ ದಿಗಂಬರ ಮುನಿಯಾದ. ಈತ ಬರೆದ ಗ್ರಂಥ ಸಂಗೀತ ಸಮಯಸಾರ. ಇದು ರಚಿತಗೊಂಡ ಕಾಲ ಅಂದಾಜು ೧೧೬೫ರಿಂದ ೧೩೩೦ನೇ ಇಸವಿಯ ಮಧ್ಯಭಾಗ. ಪಾರ್ಶ್ವದೇವನು ಗೌರವದಿಂದ ದಿಗಂಬರ ಸೂರಿ ಎಂಬ ಜೈನವಿದ್ವಾಂಸನನ್ನೂ ತನ್ನ ಗ್ರಂಥ ಸಂಗೀತಸಮಯಸಾರದ ನೃತ್ಯಾಧ್ಯಾಯದಲ್ಲಿ ನೆನೆದಿದ್ದಾನೆ. ಬಹುಷಃ ಈತನೂ ಸಂಗೀತ-ನೃತ್ಯಕ್ಷೇತ್ರದಲ್ಲಿ ಸಾಕಷ್ಟು ಪರಿಣತಿ ಪಡಿದಿದ್ದ ಪಾರ್ಶ್ವದೇವನ ಶಿಕ್ಷಕ ಇದ್ದ ಹಾಗಿದೆ.
೧೪೪೭-೪೮ನೇ ಇಸವಿಯಲ್ಲಿ ರಚಿತವಾದ ಜೈನ ಲಾಕ್ಷಣಿಕ ಮಂಡನನ ಸಂಗೀತಮಂಡನ, ಶೃಂಗಾರಮಂಡನ ಎಂಬ ಗ್ರಂಥಗಳೂ ಗೀತ-ವಾದ್ಯ-ತಾಲ-ನೃತ್ಯಪ್ರಬಂಧಗಳನ್ನು ಮತ್ತು ನೃತ್ತಾದಿ ಅಂಗೋಪಾಂಗ ಅಭಿನಯಗಳನ್ನು ತಿಳಿಸುವ ಮುಖ್ಯ ಆಕರಗ್ರಂಥಗಳಲ್ಲೊಂದು. ಮಾಳವರಾಜ್ಯದಲ್ಲಿ ಮಂತ್ರಿಯೂ ಆಗಿದ್ದ ಮಂಡನನು ತನ್ನ ಸಂಗೀತಮಂಡನ ಗ್ರಂಥದ ನೃತ್ಯಪರಿಚ್ಛೇದ ಎಂಬ ಅಧ್ಯಾಯದಲ್ಲಿ ಸ್ಥಾನಕ, ಚಾರಿ, ಭ್ರಮರಿ, ನೃತ್ಯಾಭ್ಯಾಸ ಪ್ರಕರಣ, ಪಾತ್ರ ಲಕ್ಷಣ, ಗೋಲಕ ಕ್ರೀಡಾ, ಚರ್ಚರೀ ಪ್ರಬಂಧ ಇತ್ಯಾದಿಗಳನ್ನೂ ತಿಳಿಸಿದ್ದಾನೆ. ಆದರೆ ಮಂಡನನ ಈ ಗ್ರಂಥಗಳು ಹೊರ ಜಗತ್ತಿಗೆ ಇಂದಿಗೂ ಅಪರಿಚಿತ. ಇರುವ ಹಸ್ತಪ್ರತಿಗಳಲ್ಲಿಯೂ ಸಾರಾಂಶದ ರೂಪದಲ್ಲಷ್ಟೇ ವಿವರಗಳು ಉಳಿದುಬಂದಿವೆ. ಸಂಗೀತೋಪನಿಷತ್ ಸಾರೋದ್ಧಾರ ಕೃತಿಯು ಕೂಡ ಸಂಗೀತಮಂಡನ ಗ್ರಂಥದ ಬಗ್ಗೆ ತಿಳಿಸಿದೆ.
ಕನ್ನಡದ ಆದಿಕವಿಯೆಂದೇ ಕೊಂಡಾಡಲ್ಪಟ್ಟ ಪಂಪನ ಆದಿಪುರಾಣದಲ್ಲಿ ಬರುವ ನೀಲಾಂಜನೆಯ ನೃತ್ಯ ಬಹುಪ್ರಸಿದ್ಧ. ಆದರೆ ಇದೊಂದೇ ಅಲ್ಲ, ಜೈನ ಲಕ್ಷಣಗ್ರಂಥಗಳಲ್ಲಿ ಇನ್ನು ಎಂಥೆಂಥ ನೃತ್ಯದ ವಿವರಗಳಿವೆ ಗೊತ್ತಾ? ಜಿನರತ್ನಕೋಶವೆಂಬ ಸಮುಚ್ಛಯದಲ್ಲಂತೂ ಸಂಗೀತ ದೀಪಿಕಾ, ಸಂಗೀತ ರತ್ನಾವಲಿ, ಸಂಗೀತಸಹಪಿಂಗಳ ಎಂಬಿತ್ಯಾದಿ ಗ್ರಂಥಗಳ ಉಲ್ಲೇಖವೂ ದೊರೆಯುತ್ತದೆ.
ನಾಯಾಧಮ್ಮಕ ಮತ್ತು ರಾಯಪಸೇಣ್ಯಯ ಸುತ್ತ ಎಂಬ ಜೈನಗ್ರಂಥದಲ್ಲಿ ೭೨ ವಿಧವಾದ ಕಲೆಗಳ ವಿವರಗಳಿವೆ. ರಾಯಪಸೇಣ್ಯಯ ಸುತ್ತ ಗ್ರಂಥದಲ್ಲಿ ಗೀತ-ನೃತ್ತ-ತಾಲಗಳು, ವಿಧವಿಧವಾದ ವಾದ್ಯಗಳು, ನಟ್ಟ ಮತ್ತು ನಡ ಅಂದರೆ ನರ್ತಕ ಮತ್ತು ನಟರಿಂದ ಪ್ರಸ್ತುತಿಗೊಳ್ಳುವ ವಿಲಂಬೀಯ, ದುಯ ವಿಲಂಬೀಯ, ಅಂಚೀಯ, ರಿಭಿಯ, ಆರಭಡ, ಭಸೋಲ, ಸಂಕುಚಿಯ, ಉಪ್ಪಯನೀವಯಪವಟ್ಟ, ಪಸಾರೀಯ, ರಯಾರಯ್ಯ, ಭಾಂತಸಂಭಾಂತ ಮೊದಲಾದ ವಿಶಿಷ್ಟ ಪ್ರಾಕೃತ ಭಾಷೆಯ ಹೆಸರುಳ್ಳ ನೃತ್ಯಗಳು, ಅದಕ್ಕೆ ಬೇಕಾದ ವಿಧವಿಧವಾದ ಸ್ಥಾನಕ ಚಾರಿಗಳು, ಮಂಡಲ-ಗತಿಗಳು, ಕಥಾವಸ್ತುವಿನ ದಶರೂಪಕಗಳನ್ನೂ ಗುರುತಿಸಬಹುದು. ಸ್ಥೂಲೀಭದ್ರ ಮತ್ತು ಕೋಶ ಎಂಬ ಗ್ರಂಥಗಳಲ್ಲಿ ಮಾರ್ಗೋಚಿತವಾದ ಕರಣಗಳನ್ನು ಅಳವಡಿಸಿಕೊಂಡ ಸುಯಿ ನಾಟ್ಟ ಅಥವಾ ಸೂಚೀನೃತ್ಯವೆಂಬ ಉಲ್ಲೇಖವನ್ನೂ ಕಾಣಬಹುದು. ವಸುದೇವಹಿಂಡಿ ಎಂಬ ನಾಲ್ಕು- ಐದು ಶತಮಾನಕ್ಕೆ ಸಲ್ಲುವ ಜೈನಗ್ರಂಥವು ನೀರಿನ ಗಡಿಯಾರದಲ್ಲಿ ನೀರು ತುಂಬುವ ತನಕ ನೃತ್ಯಗಾತಿ ನರ್ತಿಸುತ್ತಾ ಅಂತ್ಯಕೆ ತುಂಬಿದ ನೀರಿನಿಂದ ನರ್ತಕಿಯನ್ನು ಮಜ್ಜನ ಮಾಡಿಸುವ ವಿಧಿಯುಳ್ಳ ನಾಳಿಕಾಗಲಕ ಎಂಬ ವಿಶಿಷ್ಟ ಸಮಯಾಧಾರಿತ ನೃತ್ಯವನ್ನೂ ಪ್ರಸ್ತಾವಿಸುತ್ತದೆ. ಒಟ್ಟಿನಲ್ಲಿ ಜೈನ ಲಾಕ್ಷಣಿಕರ ಗ್ರಂಥಗಳಲ್ಲೂ ಅನೇಕ ಗೀತ-ವಾದ್ಯ-ನೃತ್ಯ-ತಾಲ- ಪ್ರಬಂಧ ಅಧ್ಯಯನಗಳಿಗೆ ಆಕರವಾಗುವ ವಿಷಯಗಳಿವೆ.
ಲಕ್ಷಣದಲ್ಲಷ್ಟೇ ಅಲ್ಲ ಪ್ರಯೋಗಪ್ರಾವಣ್ಯದಲ್ಲೂ ಅದೆಷ್ಟೋ ಜೈನ ಬಸದಿಗಳು ಸಂಗೀತ ನೃತ್ಯ-ವಾದ್ಯ-ಶಿಲ್ಪಗಳ ಆಡುಂಬೊಲವಾಗಿರುವುದನ್ನು ಕಾಣುತ್ತೇವೆ. ಪಡುವಲಪಾಯ ಅದರಲ್ಲೂ ತೆಂಕುತಿಟ್ಟಿನ ಯಕ್ಷಗಾನದಲ್ಲೂ ಆದಿಪುರಾಣ, ಶ್ರೀ ಪಾರ್ಶ್ವನಾಥ ಚರಿತೆ, ಚಕ್ರೇಶ್ವರ ವಜ್ರನಾಭ, ಅಶನೀಶ ವಿಜಯ, ಆಚಾರ್ಯ ಸಮಂತಭದ್ರ, ಕನಕಮಂಜರೀ ಕಲ್ಯಾಣ, ಶ್ರೀ ಜ್ವಾಲಾಮಾಲಿನಿ ಮಾಹಾತ್ಮ್ಯ, ಶ್ರೀ ಕೂಷ್ಮಾಂಡಿನೀ ದೇವೀ ಮಾಹಾತ್ಮ್ಯ, ಜಿನಭಕ್ತೆ ಅಗ್ನಿಲೆ, ನೇಮಿನಾಥ ಚರಿತೆ, ಜಿನದತ್ತರಾಯ ಚರಿತೆ, ಚಾವುಂಡರಾಯ ಚರಿತೆ, ಅಡಗೂರು ಚರಿತೆ, ಚಕ್ರವರ್ತಿ ಹೊಯ್ಸಳೇಶ್ವರ, ಭರತೇಶ ವೈಭವ, ಭರತೇಶ ದಿಗ್ವಿಜಯ ಮುಂತಾದ ಜೈನ ಪ್ರಸಂಗಗಳು ರಚನೆಯಾಗಿದ್ದು ಆ ಪೈಕಿ ಭರತ ಬಾಹುಬಲಿ ಕಥಾವಸ್ತುವಿನ ಪ್ರಸಂಗವು ಸಾವಿರಕ್ಕೂ ಮಿಕ್ಕಿ ಪ್ರಯೋಗ ಪ್ರದರ್ಶನಗಳನ್ನು ಕಾಣುತ್ತಲೇ ಬಂದಿದೆ.
ಸನಾತನ ಧರ್ಮದ ಕವಲೆಂಬಂತೆಯೇ ಕಾಣಿಸಿಕೊಳ್ಳುವಂಥ ಜೈನಸಂಪ್ರದಾಯಗಳಲ್ಲಿ ಭಾರತದ ಅಸ್ಮಿತೆಯನ್ನು ಪ್ರಧಾನವಾಗಿ ಗುರುತಿಸಬಹುದು. ಭರತನ ನಾಟ್ಯಶಾಸ್ತ್ರಕ್ಕೆ ಋಣಿಯಾದ ಬರೆವಣಿಗೆಗಳನ್ನು ಗಮನಿಸಬಹುದು. ಪ್ರಾಚೀನದಲ್ಲಷ್ಟೇ ಅಲ್ಲ, ವರ್ತಮಾನದ ಭಾರತದಲ್ಲೂ ಜೈನ ಸಮುದಾಯವು ಕಲೆ-ವಿದ್ಯೆ-ವಿಚಾರ-ಕಾವ್ಯ-ಸಂಸ್ಕೃತಿ-ಸಮಾಜಕ್ಕೆ ನೀಡಿರುತ್ತಿರುವ ಕೊಡುಗೆ ಅಪಾರವಾದುದು.
Natyashastra with Abhinavabharati Commentary. 2012. Ed R S Nagar. Delhi : Parimal Publication
Sangītopanishat Saroddhara.Author: Vacanacarya Sudhakalasa; Editor: Umakant Premanand Shah 1961. http://musicresearchlibrary.net/omeka/items/show/855
ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೪: ಪಶ್ಚಿಮ/ ಆವಂತೀ ಸಂಚಿಕೆ ೪೩ : – https://www.youtube.com/channel/UCzsvThi5o-5X1-5kp7jaxVQ / @noopurabhramari1212