ಶಾಸ್ತ್ರರಂಗ ಭಾಗ 3- ಉತ್ತರ/ಪಾಂಚಾಲೀ (Video series)-ಸಂಚಿಕೆ 37-ತ್ರಿಲೋಚನಾದಿತ್ಯನ ನಾಟ್ಯಲೋಚನ,ಮದನಪಾಲನ ಆನಂದಸಂಜೀವನ

Posted On: Sunday, June 23rd, 2024
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ 3- ಉತ್ತರ/ಪಾಂಚಾಲೀ
ಸಂಚಿಕೆ 37 : ತ್ರಿಲೋಚನಾದಿತ್ಯನ ನಾಟ್ಯಲೋಚನ, ದೆಹಲಿಯ ರಾಜ ಮದನಪಾಲನ ಆನಂದಸಂಜೀವನ

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 3- Uttara/Pāncālī (Northern Region of Ancient Bhārata)

Episode 37- Nāṭyalocana of Trilocanāditya and Ānandasanjīvana by Madanapāla, King of Delhi

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

 

ನಾಟ್ಯಲೋಚನವು ಭಾರತೀಯ ನಾಟ್ಯರಂಗಭೂಮಿಗೆ ಹತ್ತಿರವಾದ ನಾಟ್ಯಶಾಸ್ತ್ರದ ಭರತನ ನಿಲುವುಗಳ ಹಾದಿಯಲ್ಲೇ ಬರೆಯಲ್ಪಟ್ಟ ಸಂಸ್ಕೃತ ಗ್ರಂಥ. ನಾಟ್ಯಕ್ಕೆ ದೃಷ್ಟಿಸಮಾನವಾದುದು ಎಂಬ ಅರ್ಥದಲ್ಲಿರುವ ಈ ಗ್ರಂಥದ ರಚನಾಕಾರ ತ್ರಿಲೋಚನಾದಿತ್ಯನೆಂದು ಹೇಳಲಾಗುತ್ತದೆ. ಈ ಗ್ರಂಥ ರಚನೆಯ ಕಾಲ ೧೩ನೇ ಶತಮಾನ.

ತ್ರಿಲೋಚನಾದಿತ್ಯ- ಗ್ರಾಂಥಿಕ ವಿವರಗಳು

ಈತ ಯಾವ ಪ್ರದೇಶದಲ್ಲಿ ಬದುಕಿದ್ದ, ಎಲ್ಲಿದ್ದ ಎಂಬುದು ತಿಳಿದುಬಂದಿಲ್ಲ. ಆದರೆ ಈ ಗ್ರಂಥದ ಶೈಲಿ, ಅನುಸರಿಸಿದ ಕೆಲವು ಪೂರ್ವಸೂರಿಗಳ ಕ್ರಮಗಳನ್ನು ಗಮನಿಸಿದಾಗ ಉತ್ತರ ಭಾರತದವನಿದ್ದಿರಬಹುದೆಂಬ ಅಭಿಪ್ರಾಯ ಬಲವಾಗಿ ಮೂಡುತ್ತದೆ.

ಸ್ವತಃ ತ್ರಿಲೋಚನಾದಿತ್ಯನೇ ಲೋಚನ ವ್ಯಾಖ್ಯಾಂಜನ ಎಂಬ ವ್ಯಾಖ್ಯಾನವನ್ನು ಈ ನಾಟ್ಯಲೋಚನ ಗ್ರಂಥಕ್ಕೆ ಬರೆದಿದ್ದನೆಂದೂ ತಿಳಿಯುತ್ತದೆ. ಜೊತೆಗೆ ಈತ ಭರತನ ನಾಟ್ಯಶಾಸ್ತ್ರಕ್ಕೆ ೨ನೇ ಭಾಗವೆಂಬಂತೆ ಭರತೋದಯ ಎಂಬ ಗ್ರಂಥವನ್ನೂ ಮತ್ತು ರಾಮಚರಿತಮ್ ಎಂಬ ನಾಟಕವನ್ನೂ ಬರೆದಿದ್ದನೆನ್ನಲಾಗಿದೆ. ಈ ನಾಟ್ಯಲೋಚನ ಗ್ರಂಥವು ಸಾಗರನಂದಿಯ ನಾಟಕಲಕ್ಷಣರತ್ನಕೋಶದ ಲಕ್ಷಣಗಳಿಗೆ ನಿಕಟವಾಗಿರುವುದನ್ನೂ ಗಮನಿಸಿದಾಗ ತ್ರಿಲೋಚನಾದಿತ್ಯನು ಸಾಗರನಂದಿಯಿಂದ ಪ್ರಭಾವಿತನಾಗಿದ್ದನೆಂಬುದು ತಿಳಿಯುತ್ತದೆ.

ನಾಟ್ಯಲೋಚನ- ಗ್ರಂಥವೈಶಿಷ್ಟ್ಯ

ನಾಟ್ಯಲೋಚನ ಗ್ರಂಥ ತನ್ನ ಲಕ್ಷಣವಿವರಗಳಲ್ಲಿ ಅನೇಕಾನೇಕ ರೂಪಕ ಅಥವಾ ಕಾವ್ಯಗಳನ್ನು ಗಮನಿಸಿ ದಾಖಲಿಸಿರುವುದನ್ನು ಮನಗಾಣಬಹುದು. ಶಾಕುಂತಲ, ವಿಕ್ರಮೋರ್ವಶೀಯ, ಕರ್ಪೂರಮಂಜರಿ, ರಘುವಂಶಮ್, ಗಾಥಾಸಪ್ತಶತಿ, ನಾಗಸರ್ವಸ್ವ, ಅನರ್ಘರಾಘವ, ರತ್ನಾವಲೀ, ವೇಣಿಸಂಹಾರ, ಬಾಲರಾಮಾಯಣ, ರಾಮಾನಂದ, ಪುಷ್ಪದೂತಿಕಾ ಕುಲವೀಥೀ, ಉನ್ಮತ್ತರಾಘವ, ಚೌರಿಕಾವಿವಾಹ, ಕುಂಭಕ ಮೊದಲಾದ ಎಷ್ಟೋ ನಾಟಕಗಳನ್ನು ಉಲ್ಲೇಖಿಸಿ ರಂಗಭೂಮಿಯ ಲಕ್ಷಣಗಳನ್ನು ಬರೆದಿದೆ. ಜೊತೆಗೆ ಪಾಣಿನಿ, ಭೃಗುಸ್ವಾಮಿ, ಭಾರದ್ವಾಜ, ರಾಹುಲ, ಮಾಘ, ಮಲ್ಲನಾಗ, ಭವಭೂತಿ, ಮಾತೃಗುಪ್ತಾದಿ ಪೂರ್ವಸೂರಿಗಳ ವಿಚಾರಗಳನ್ನೂ ಉಲ್ಲೇಖಿಸಿದೆಯೆಂದರೆ ತ್ರಿಲೋಚನಾದಿತ್ಯನ ಅಧ್ಯಯನ ವಿಸ್ತಾರ ದೊಡ್ಡದು ಎನ್ನುವುದು ಅರ್ಥವಾಗುತ್ತದೆ.

ನಾಟ್ಯಲೋಚನವು ಮಹಾನಟ ಶಿವನ ಸ್ತುತಿಯಿಂದ ಆರಂಭವಾಗುತ್ತದೆ. ನಾಟ್ಯಲೋಚನದಲ್ಲಿ ನಾಟ್ಯಪ್ರಯೋಜನ, ನಾಂದಿ-ಪ್ರಸ್ತಾವನಾದಿ ಅಂಗಗಳು, ಮಸೀ ವೇಷ, ಸ್ಥಾನಕ, ಪಾತ್ರಪ್ರವೇಶನ, ಗತಿ-ಚಾರಿ, ರಸ-ಭಾವ, ಅಂಗೋಪಾಂಗ ಅಭಿನಯ, ನಾಯಕಾ ನಾಯಿಕಾ, ಸ್ಮರಾವಸ್ಥಾ, ಹಾವ-ಭಾವ, ಶಬ್ದಾರ್ಥ ನಿಶ್ಚಯಗಳೆಂಬ ೧೨ ಅಧ್ಯಾಯಗಳಿವೆ. ಆಹಾರ್ಯಾಭಿನಯದ ಎಷ್ಟೋ ಸಂಗತಿಗಳ ಬಗ್ಗೆ ಮಸೀವೇಷ ಎಂಬ ಶೀರ್ಷಿಕೆಯ ಅಧ್ಯಾಯವು ಚರ್ಚಿಸಿದೆ.

ಪ್ರೇರಣೆ ಮತ್ತು ಸಂಪಾದನೆ

ಈ ಗ್ರಂಥವನ್ನು ಉಲ್ಲೇಖಿಸಿ ರಾಘವಭಟ್ಟ, ವಾಸುದೇವ, ರಂಗನಾಥ, ದಿನಕರ ಹಾಗೂ ಶುಭಂಕರ ಮೊದಲಾದ ಲಾಕ್ಷಣಿಕರು ಬೇರೆ ಗ್ರಂಥಗಳಿಗೆ ಬರೆದ ಲಕ್ಷಣ- ವ್ಯಾಖ್ಯಾನ ಬರೆದಿರುವುದನ್ನೂ ಗಮನಿಸಬಹುದು. ಇದರಿಂದಾಗಿ ಮಧ್ಯಕಾಲೀನ ಭಾರತದಲ್ಲಿ ನಾಟ್ಯಲೋಚನವು ಒಂದು ಪ್ರಮುಖ ಗ್ರಂಥವಾಗಿತ್ತೆನ್ನುವುದು ತಿಳಿಯುತ್ತದೆ.ಈ ಗ್ರಂಥದ ಹಸ್ತಪ್ರತಿಗಳು ವಾರಣಾಸಿ ಸರಸ್ವತೀ ಭವನ್ ಗ್ರಂಥಾಲಯ ಮತ್ತು ಕೊಲ್ಕತ್ತಾ ಏಷ್ಯಟಿಕ್ ಸೊಸೈಟಿ ಗ್ರಂಥಾಲಯಗಳಿಂದ ದೇವನಾಗರಿ ಮತ್ತು ಬಂಗಾಲೀ ಭಾಷೆಗಳಲ್ಲಿ ದೊರಕಿದ್ದು ; ಅಮಲ್ ಶಿಬಿ ಪಾಠಕ್ ಎನ್ನುವವವರು ಸಂಪಾದಿಸಿ ಅನುವಾದ ಸಹಿತ ಪ್ರಕಟಿಸಿದ್ದಾರೆ.

 

ಆನಂದಸಂಜೀವನ ಗ್ರಂಥ

ಇದಲ್ಲದೆ ಹಸ್ತಪ್ರತಿಯಲ್ಲಿ ಅಂಶಾಂಶ ರೂಪದಿಂದ ಉಳಿದುಬಂದ ಗ್ರಂಥ ೧೪೨೮ರಲ್ಲಿ ರಚಿತವಾದ ರಾಜ ಮದನಪಾಲನ ರಚಿಸಿದ ಗ್ರಂಥ ಆನಂದಸಂಜೀವನ. ಈ ಮದನಪಾಲ ದೆಹಲಿಯಲ್ಲಿ ಆಳಿದ ತೆಲುಗು ರಾಜ. ಧರ್ಮಶಾಸ್ತ್ರ, ನಿಘಂಟು, ಸಂಗೀತಕ್ಷೇತ್ರಗಳಲ್ಲಿ ಪರಿಶ್ರಮ ವಹಿಸಿ ಗ್ರಂಥಗಳನ್ನು ಬರೆದವ. ಮಹಾರಾಣ ಕುಂಭಕರ್ಣನ ಸಂಗೀತರಾಜ ಉದ್ಗ್ರಂಥ ಹಾಗೂ ಸಂಗೀತಶಿರೋಮಣಿಯೆಂಬ ಪಂಡಿತ ಮಂಡಲಿ ಸಂಕಲಿತ ಮತ್ತೊಂದು ಗ್ರಂಥದಲ್ಲಿ ಇದು ಉಲ್ಲೇಖಿಸಲ್ಪಟ್ಟಿದೆ ಎಂದರೆ ಬಹುಶಃ ಆ ಕಾಲಕ್ಕೆ ಇದು ಬಹಳ ಪ್ರಸಿದ್ಧಿಯುಳ್ಳದ್ದಾಗಿರಬೇಕು. ನಾಂದಿಯಲ್ಲಿ ದೇವಿಯ ಕುರಿತಾದ ಶ್ಲೋಕಗಳನ್ನು ಕಾಣಬಹುದು. ಈತನು ತನ್ನ ಮೊದಲನೇ ಅಧ್ಯಾಯವಾದ ತಾಲದಲ್ಲಿ ೧೩೦ ತಾಲಗಳ ವಿಮರ್ಶೆಯನ್ನೂ ಮಾಡಿದ್ದಾನೆ. ಅದಾದ ಬಳಿಕ ರಾಗ, ಪ್ರಬಂಧ, ವಾದ್ಯ, ನೃತ್ತ ಮೊದಲಾದ ಅಧ್ಯಾಯವಿಷಯಗಳಿವೆ. ಲಾಸ್ಯತಂತ್ರಗಳ ಸಹಿತ ಎಷ್ಟೋ ಮಾರ್ಗೋತ್ತರ ಚಲನವಲನಗಳ ಲಕ್ಷಣಗಳನ್ನು ಕೂಡಾ ಸೂಚಿಸಿದ್ದಾನೆ. 

ಮದನಪಾಲನ ಕರ್ಮವಿವೇಕ ಎಂಬ ಈತನ ಗ್ರಂಥ ಬಹಳ ಮೌಲ್ಯವುಳ್ಳದ್ದಾಗಿತ್ತೆಂದೂ ತಿಳಿದುಬರುತ್ತದೆ. ಈ ಆನಂದಸಂಜೀವನದ ಹಸ್ತಪ್ರತಿಗಳು ಕೊಲ್ಕತ್ತ ಏಷ್ಯಟಿಕ್ ಸೊಸೈಟಿ ಗ್ರಂಥಾಲಯ, ಮಧ್ಯಪ್ರದೇಶದ ಕೈರಾಘರ್ ವಿಶ್ವವಿದ್ಯಾನಿಲಯ ಮತ್ತು ಶ್ರೀವೇಂಕಟೇಶ್ವರ ಹಸ್ತಪ್ರತಿ ಸಂಶೋಧನಾಲಯದಲ್ಲಿವೆ. ಇದನ್ನು ಸಂಪಾದಿಸಿ ಪ್ರಕಟಿಸಿದರೆ ಉತ್ತರಭಾರತದ ಗೀತ-ವಾದ್ಯ-ತಲ-ನೃತ್ಯಗಳ ವಿಷಯದಲ್ಲಿ ಕಲೆ ಮತ್ತು ಗ್ರಂಥಾಧ್ಯಯನಕ್ಕೆ ಹೆಚ್ಚಿನ ಪುಷ್ಠಿ, ಆಧಾರ ಸಿಗುತ್ತದೆ.

 

ಪರಾಮರ್ಶನ ಗ್ರಂಥಗಳು

Amal Shibi Phatak. 2012. Nāṭyalocanam of Trilocanāditya. Cahukambha Samskrit Samstan.Natakalakshanaratnakosha of Sagaranandin. 1972. Babulal Shukla Shastri (Ed). Chowkambha Sanskrit Series. https://archive.org/details/in.ernet.dli.2015.408248

Nataka Lakshan Ratna Kosha. 1974. Ed Siddheshwar Chattopadhyaya. Calcutta : Punthi Pusthak

Natyashastra with Abhinavabharati Commentary. 2012. Ed R S Nagar. Delhi : Parimal Publication

ಈ ಗ್ರಂಥಗಳಲ್ಲಿರುವ ಆಂಗಿಕಾಭಿನಯದ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/yakshamargamukura/

Leave a Reply

*

code