ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 12- ಅಚ್ಯುತರಾಯನ ತಾಳಕಲಾಬ್ಧಿ, ಸೋಮನಾರ್ಯನ ನಾಟ್ಯಚೂಡಾಮಣಿ& ಅಪ್ರಕಟಿತ-ಅಲಬ್ಧ ಲಕ್ಷಣಗ್ರಂಥಗಳು

Posted On: Sunday, December 31st, 2023
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ ೧೨- ತಾಳಕಲಾಬ್ಧಿ, ತಾಲಲಕ್ಷಣಂ, ನಾಟ್ಯಚೂಡಾಮಣಿಗಳನ್ನೂ ಹೊಂದಿಕೊಂಡಂತೆ ಮೊದಲಾದ ವಿಜಯನಗರ ಕರ್ನಾಟ ಸಾಮ್ರಾಜ್ಯದ ಹಲವು ಅಪ್ರಕಟಿತ ಹಾಗೂ ಅಲಬ್ಧ ತಾಳ ಸಂಬಂಧಿತ ಲಕ್ಷಣಗ್ರಂಥಗಳು ಮತ್ತು ಕಾರಣಗಳು

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 12- Acyutarāya’s Tālakalābdhi, Tālalakśhnam, Somanārya’s Nāṭya Cūḍāmaṇi and Reason behind those lost treatises of Vijayanagara Karnāṭa dynasty age.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ಗ್ರಂಥನಾಶ

ಅನ್ಯದೇಶ ಮತ್ತು ಮತಗಳಿಂದ ಭಾರತಕ್ಕೆ ಆದ ಸತತ ಆಕ್ರಮಣಗಳ ಫಲವಾಗಿ ಉತ್ತರಭಾರತದ ವ್ಯಾಪ್ತಿಯಲ್ಲಿ ಬರೆಯಲ್ಪಟ್ಟ ಅನೇಕ ಮಹತ್ತ್ವಪೂರ್ಣ ಸಂಗೀತ-ನಾಟ್ಯಗ್ರಂಥಗಳು, ದೇವಾಲಯ ವಾಸ್ತು ಮತ್ತು ಶಿಲ್ಪಗಳೂ ನಾಶವಾಗಿವೆ. ಆಕ್ರಮಣದಲ್ಲಿ ಉತ್ತರ ಮತ್ತು ಪಶ್ಚಿಮ ಭಾರತವಂತೂ ಹೆಚ್ಚಿನ ಬೇನೆಯನ್ನುಂಡಿದೆ. ಅದರಲ್ಲೂ ಮತಂಗ, ಕೋಹಲ, ಕೀರ್ತಿಧರ, ಭಟ್ಟನಾಯಕ, ಭಟ್ಟತೌತ ಮೊದಲಾದ ಮೇರು ಲಾಕ್ಷಣಿಕರ ಗ್ರಂಥಾಧ್ಯಾಯಗಳನ್ನು ಕಳೆದುಕೊಂಡೇ ಶತಮಾನಗಳು ಸರಿದವು. ಅಂತೆಯೇ ವಿಜಯನಗರ ಸಾಮ್ರಾಜ್ಯದ ಮೇಲಾದ ಆಕ್ರಮಣದಿಂದ ಉಂಟಾದ ಸಾಂಸ್ಕೃತಿಕ ವಿಚ್ಛಿದ್ರ-ವೈಕಲ್ಯಗಳು ಮತ್ತು ಅದರಿಂದ ಏರ್ಪಟ್ಟ ಕವಲುಗಳು ಕಲಾಸಂಪ್ರದಾಯದ ಪಾಲಿಗೆ ಮಾಸಲಾರದ ಗಾಯಗಳಾಗಿ ಉಳಿದುಕೊಂಡಿವೆ. ಸನಾತನಧರ್ಮದ ಪುನರುಜ್ಜೀವನಕ್ಕೆಂದೇ ದುಡಿದ ಅನೇಕ ಲಕ್ಷ್ಯ-ಲಕ್ಷಣರಾಶಿಗಳಲ್ಲಿ ಕೂಡಾ ಈ ನೋವು ಉಳಿದು ಹೋಗಿದೆ. ಅಂಥ ಲಕ್ಷಣವಿಚಾರಗಳು ಅಲ್ಲಿಲ್ಲಿ ಶಿಥಿಲರೂಪದಿಂದ ದಕ್ಕುತ್ತವೆ. ಹೀಗೆ ಶಿಥಿಲವಾದ ಹಸ್ತಪ್ರತಿಗಳಲ್ಲಿ ಕೂಡಾ ಸರಿಯಾದ ಪೋಷಣೆಯಿಲ್ಲದೆ ಹರಿದುಹೋಗಿರುವಂಥವು ಇವೆ; ಅಕ್ಷರಗಳು ಮಾಸಿಹೋಗಿವೆ. ಈ ಅಭಾಗ್ಯ ಇತ್ತೀಚಿನ ಶತಮಾನದ ಗ್ರಂಥಗಳನ್ನೂ ತಟ್ಟಿವೆ.

 

ಅಚ್ಯುತರಾಯನ ಗ್ರಂಥ ತಾಲಕಲಾಬ್ಧಿ ಮತ್ತು ಇನ್ನಿತರ  ಅಲಬ್ಧ ಗ್ರಂಥಗಳು

 ವಿಜಯನಗರ ಕರ್ನಾಟಸಾಮ್ರಾಜ್ಯ ಚಕ್ರವರ್ತಿಯಾಗಿದ್ದ ಶ್ರೀಕೃಷ್ಣದೇವರಾಯನ ಅಳಿಯ ಅಚ್ಯುತರಾಯನ ಗ್ರಂಥ ತಾಲಕಲಾಬ್ಧಿ. ತಾಲಕಲೆಯ ಸಾಗರ ಎಂಬುದು ಇದರ ಅರ್ಥ. ಇದರ ರಚನೆಯ ಕಾಲ ಅಂದಾಜು ೧೫೩೦ನೇ ಇಸವಿ. ಹದಿನೈದು- ಹದಿನಾರನೇ ಶತಮಾನದ ವೇಳೆಗೆ ತೋರಿಕೊಳ್ಳುವ ಎಷ್ಟೋ ತಾಲ ಪ್ರಸ್ತಾರವಿಚಾರ, ತಾಲಾಂಗಗಳ ಕ್ರಮ, ತಾಳದಶಪ್ರಾಣಗಳ ವಿವರಗಳನ್ನು ಸವಿಸ್ತಾರವಾಗಿ ಒಳಗೊಂಡ ತಾಲಕ್ಕೇ ಮೀಸಲಾದ ಗ್ರಂಥವಿದು. ತಾಲಕಲಾವಾರಿಧಿ ಮತ್ತು ತಾಲಮಹೋದಧಿ ಎಂಬ ಹೆಸರುಗಳಿಂದಲೂ ಪ್ರಸಿದ್ಧವಾಗಿದ್ದ ಈ ಗ್ರಂಥದ ಪೂರ್ಣಪಾಠ್ಯ ಇಂದಿಗೆ ಲಭ್ಯವಿಲ್ಲ. ಹಸ್ತಪ್ರತಿಯಾಗಿ ಸಿಗುವ ಇದು ಪೂರ್ಣಪ್ರಮಾಣದಲ್ಲಿ ಪ್ರಕಟಗೊಂಡಿಲ್ಲ.

ಸಂಗೀತಚಂದ್ರೋದಯ, ಸಂಗೀತವಿದ್ಯಾವಿನೋದ, ಸಂಗೀತಾರ್ಣವ, ಸಂಗೀತಮಾರ್ಗ, ಸಂಗೀತಚೂಡಾಮಣಿ, ನೃತ್ತಚೂಡಾಮಣಿ, ಸಂಗೀತಮಣಿದರ್ಪಣ, ಚತುರ್ಭಾಷಾವಿಲಾಸ, ಕಾತ್ಯಾಯನೀಯ, ಆಂಜನೇಯಮತ ಎಂಬುದಾಗಿ ಒಂದಾನೊಂದು ಕಾಲಕ್ಕೆ ಬರೆಯಲ್ಪಟ್ಟ ಗ್ರಂಥಗಳಿದ್ದವು. ಕ್ರಮೇಣ ಲುಪ್ತವಾಗಿ ಹೋದವು. ಇಂಥ ಗ್ರಂಥಗಳಲ್ಲಿರುವ ಉಲ್ಲೇಖಗಳ ಸಹಿತ ತಾಲದಶಪ್ರಾಣಗಳ ಕುರಿತ ವಿವೇಚನೆ ತಾಲಕಲಾಬ್ಧಿ ಗ್ರಂಥದಲ್ಲಿ ಕಂಡುಬರುತ್ತದೆ. ಈ ಗ್ರಂಥಗಳಂತೆಯೇ ತೆಲುಗು ಭಾಷೆಯಲ್ಲಿ ಪೋಲೂರಿ ಗೋವಿಂದಕವಿ ರಚಿಸಿದ ತಾಲದಶಪ್ರಾಣಪ್ರದೀಪಿಕಾ ಮತ್ತು ರಾಗತಾಳಚಿಂತಾಮಣಿ, ಸಾರಿದೇವ ಮತ್ತು ಪರಮೇಶ್ವರ ಬರೆದಿದ್ದನೆನ್ನಲಾದ ತಾಲಕಲಾವಿಲಾಸ ಎಂಬ ಎರಡು ಗ್ರಂಥಗಳು, ವಿಜಯನಗರ ಕರ್ನಾಟ ಸಾಮ್ರಾಜ್ಯದ ಸಾಳುವ ತಿಮ್ಮರಾಜುವಿನ ಸಹೋದರನಾದ ಗೋಪತಿಪ್ಪನ ತಾಲದೀಪಿಕಾ, ಇವೆಲ್ಲವೂ ತಾಲವಿಚಾರಕ್ಕೆ ಸಂಬಂಧಿಸಿದ ಮಹತ್ವಪೂರ್ಣ ಶಾಸ್ತ್ರಗ್ರಂಥಗಳು. ಇವುಗಳಲ್ಲಿ ಬಹುತೇಕ ಇಂದಿಗೆ ಪ್ರಕಟಿತರೂಪದಲ್ಲಿ ಲಭ್ಯವಿಲ್ಲ.

 

ತಾಲಲಕ್ಷಣಂ, ನಾಟ್ಯಚೂಡಾಮಣಿಗಳು

ಕೆಲವೊಮ್ಮೆ ತಮ್ಮ ಪೂರ್ವಪರಂಪರೆಯ ಶಾಸ್ತ್ರಲಕ್ಷಣವಿಚಾರಗಳನ್ನು ಉಲ್ಲೇಖಿಸಿ, ವಿಶ್ಲೇಷಿಸಿ ಅನೇಕ ಲಾಕ್ಷಣಿಕರು ಗ್ರಂಥಗಳನ್ನು ಬರೆಯುತ್ತಾರೆ. ಆದರೆ ಬರೆದವರ ಹೆಸರು ಕಳೆದುಹೋಗಿ, ಅಳಿದುಳಿದ ಪ್ರತಿಗಳು ಪ್ರಖ್ಯಾತ ಪೂರ್ವಿಕರ ಹೆಸರಿನಲ್ಲೇ ಕಂಡುಬರುವುದಿದೆ. ಅಂಥ ಒಂದು ಪ್ರಸಕ್ತಿ ತಾಲಕಲಾಬ್ಧಿಗೂ ಕಂಡುಬಂದಿದೆ. ತಮಿಳ್ನಾಡು ಮತ್ತು ತಿರುಪತಿಯಲ್ಲಿ ದೊರೆತ ಕೋಹಲೋಕ್ತವೆನ್ನಲಾಗುವ ತಾಲಲಕ್ಷಣಂ ಎಂಬ ಗ್ರಂಥಹಸ್ತಪ್ರತಿಯಲ್ಲಿ ಅಚ್ಯುತಭೂಬುಜ ಎಂದಾಗಿ ಅಲ್ಲಲ್ಲಿ ಉಕ್ತವಾಗಿದ್ದು; ತಾಲಲಕ್ಷಣಂ ಗ್ರಂಥಕ್ಕೆ ನೀಡಲಾದ ತೆಲುಗಿನ ವ್ಯಾಖ್ಯಾನವೂ ಅಚ್ಯುತರಾಯಲ ಎಂದು ಹೇಳಿದೆ. ಈ ಹಸ್ತಪ್ರತಿಯಲ್ಲಿರುವ ತಾಲಪ್ರಶಂಸೆಯ ಶ್ಲೋಕಗಳು ತಾಲಕಲಾಬ್ಧಿಯದ್ದೆಂದು ವಿದ್ವಾಂಸರಾದ ಮಾನಪಲ್ಲಿ ರಾಮಕೃಷ್ಣ ಕವಿಗಳು ಉಲ್ಲೇಖಿಸಿದ್ದಾರೆ. ಆದ್ದರಿಂದ ತಾಲಲಕ್ಷಣಂ ಎಂಬ ಗ್ರಂಥವು ತಾಲಕಲಾಬ್ಧಿಯ ಪ್ರತಿಯಾಗಿದ್ದಿರುವ ಸಾಧ್ಯತೆಗಳೇ ಹೆಚ್ಚು.

ವಿಜಯನಗರ ಸಾಮ್ರಾಜ್ಯದ ಅಚ್ಯುತರಾಯನ ಆಸ್ಥಾನದಲ್ಲಿದ್ದ ಅಷ್ಟಾವಧಾನಿ ಸೋಮನಾರ್ಯ ಅಥವಾ ಸೋಮನಾಥಭಟ್ಟ ಎಂಬುವನೂ ನಾಟ್ಯಚೂಡಾಮಣಿ ಎಂಬ ಗ್ರಂಥವನ್ನು ೧೫೪೦ನೇ ಇಸವಿಯಲ್ಲಿ ಬರೆದಿದ್ದ. ಈತನ ಆಚಾರ್ಯ ಸೀತಾರಾಮನೆಂಬುದಾಗಿ ತಿಳಿದುಬರುತ್ತದೆ. ಇದಕ್ಕೆ ಸ್ವರರಾಗಸುಧಾರಸ ಎಂಬ ಹೆಸರಿನ ಸಹಿತ ಸಂಗೀತರತ್ನಾಕರವೇ ಮೊದಲಾದ ಇನ್ನೂ ಹಲವು ಹೆಸರುಗಳೂ ಈ ಗ್ರಂಥಕ್ಕೆ ಇರುವುದು ಹಸ್ತಪ್ರತಿ ಸಂಪಾದನೆಯ ವೇಳೆ ಕಂಡುಬಂದಿದೆ. ಇದು ತಾಲಕಲಾಬ್ಧಿಯನ್ನು ಅನುಸರಿಸಿ ಬರೆದ ವ್ಯಾಖ್ಯಾನವೆಂಬ ಮಾತೂ ಇದೆ. ಇರಲಿ, ಆದರೆ ಇದೂ ಕೂಡಾ ತಾಲಕಲಾಬ್ಧಿಯಂತೆಯೇ ತುಣುಕುಗಳಲ್ಲಿ ಮಾತ್ರ ಲಭ್ಯವಿದೆ. ಇಂದಿಗೆ ನಾಟ್ಯಚೂಡಾಮಣಿ ಗ್ರಂಥದ ನಾಟ್ಯಾಧ್ಯಾಯದ ಬಹುತೇಕ ಸಂಗತಿಗಳು ಲುಪ್ತವಾಗಿವೆ. ಕೇವಲ ನಾಟ್ಯೋತ್ಪತ್ತಿ ಮತ್ತು ಆಚಾರ್ಯರ ವಿವರಗಳಷ್ಟೇ ದೊರೆಯುತ್ತವೆ. ನೃತ್ಯಕ್ಕೆ ಹೋಲಿಸಿದರೆ ರಾಗ, ಗೀತ, ತಾಲದ ವಿಚಾರಗಳು ಕೊಂಚ ಹೆಚ್ಚು ದೊರೆಯುತ್ತವೆ. ಗ್ರಂಥವು ಸರಸ್ವತೀ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ.

ಪೋಲೂರಿ ಗೋವಿಂದ ಕವಿಯು ತನ್ನ ಗ್ರಂಥ ರಾಗತಾಳಚಿಂತಾಮಣಿಯಲ್ಲಿ ಈ ಸೋಮನಾರ್ಯನನ್ನು ನೆನೆದಿದ್ದಾನೆ. ಅಭಿನವಭರತಸಾರಸಂಗ್ರಹ, ಮಹಾಭರತಚೂಡಾಮಣಿ, ರಸಿಕಜನಮನೋಲ್ಲಾಸಿನಿ ಸಾರಸಂಗ್ರಹ ಭರತಶಾಸ್ತ್ರ, ಭರತಕಲ್ಪಲತಾಮಂಜರಿ ಮೊದಲಾದ ೧೭-೧೮-೧೯-೨೦ನೇ ಶತಮಾನಕ್ಕೆ ಸಲ್ಲುವ ಗ್ರಂಥಗಳೂ ನಾಟ್ಯಚೂಡಾಮಣಿಯ ಲಕ್ಷಣಗಳನ್ನು ಹೋಲುತ್ತವೆಯೆಂದು ಈ ಗ್ರಂಥವನ್ನು ಸಂಪಾದಿಸಿದ ಡಾ. ಪ್ರೇಮಲತಾ ಅವರು ಅಭಿಪ್ರಾಯಿಸಿದ್ದಾರೆ.

ಸಮಾರೋಪ

ಉತ್ತರಭಾರತಕ್ಕೆ ಹೋಲಿಸಿದರೆ ಗೀತ-ವಾದ್ಯ- ನೃತ್ಯಸಂಬಂಧಿಯಾದ ಗ್ರಂಥ ಮತ್ತು ಪ್ರಯೋಗ ಪರಂಪರೆಗಳಾಗಿರಲಿ ಅಥವಾ ದೇವಾಲಯಗಳ ಶಿಲ್ಪ- ವಾಸ್ತುಗಳ ಬಾಳುವಿಕೆಯಾಗಿರಲಿ ಇಂದಿಗೂ ಹೆಚ್ಚು ಕಂಡುಬರುವುದು ದಕ್ಷಿಣ ಮತ್ತು ಪೂರ್ವಭಾರತದ ಪ್ರಾಂತ್ಯಗಳಲ್ಲೇ. ಅದರೊಳಗೂ ಹೆಚ್ಚಿನ ಎಲ್ಲ ಗ್ರಂಥಗಳ ರಚನೆ ಅಂದಿನ ವಿಶಾಲ ಕರ್ನಾಟಕದ ವ್ಯಾಪ್ತಿಯಲ್ಲೇ ಆಗಿತ್ತು; ಉತ್ತರ-ಪೂರ್ವ-ಪಶ್ಚಿಮಭಾರತದಲ್ಲಿ ಬರೆದ ಕೆಲವು ಗ್ರಂಥಗಳಲ್ಲೂ ಕರ್ನಾಟಕದ ಉಲ್ಲೇಖ ಬರುತ್ತದೆಯೆನ್ನುವುದು ನಮ್ಮ ಹೆಮ್ಮೆ. ಆದರೆ ಅವುಗಳ ಪೈಕಿ ಎಲ್ಲವೂ ಮುದ್ರಣಗೊಂಡಿಲ್ಲ. ಹಸ್ತಪ್ರತಿ, ತಾಳೆಗರಿಗಳಲ್ಲಿ ಸಾಕಷ್ಟು ಬೆರಕೆಗಳೂ ಆಗಿವೆ. ಇವುಗಳ ಅಧ್ಯಯನ ನಡೆಸುವಲ್ಲಿ, ಪೂರಕವಾದ ಸಹಕಾರ, ಮುಕ್ತ ಅನುಕೂಲ, ಅಂತರ್ಜಾಲದ ಆವೃತ್ತಿಗಳನ್ನು ಇಂದಿನ ಸರ್ಕಾರಗಳು ಉದಾರವಾಗಿ ಮಾಡುವ ಆವಶ್ಯಕತೆ ಇದೆ.

ತಾಲ, ಗೀತ, ನೃತ್ಯ, ಅಭಿನಯ.. ಹೀಗೆ ಕಲೆಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ ಕರ್ನಾಟಕದ ಲಾಕ್ಷಣಿಕರನ್ನೇ ಓದಿಕೊಂಡರೂ ಬೇಕಾದಷ್ಟಾಯಿತು. ಅಷ್ಟರಮಟ್ಟಿಗೆ ಕನ್ನಡಿಗರ ಕೊಡುಗೆ ಕಲಾಕ್ಷೇತ್ರಕ್ಕೆ ಅಪಾರವಾಗಿದೆ. ಅದು ನಮ್ಮ ಹೆಮ್ಮೆ ಕೂಡಾ. ಅದರಲ್ಲೂ ವಿಜಯನಗರ ಕರ್ನಾಟಸಾಮ್ರಾಜ್ಯ ಕಾಲದ ವಿದ್ವಾಂಸರ ಪರಿಶ್ರಮವೇ ಅಧಿಕವಿದೆ. ಪುರಂದರದಾಸರ ಸಹಿತ ಇನ್ನೂ ಕೆಲವು ಮಹಿಮರು ತಾಲದಶಪ್ರಾಣ ಮತ್ತು ಮಾರ್ಗ-ದೇಶೀ ತಾಲಪ್ರಸ್ತಾರಗಳಲ್ಲಿದ್ದ ಅರಾಜಕತೆಗಳನ್ನು ತಿದ್ದಿ, ಪರಿಷ್ಕರಿಸಿ ಸೂಳಾದಿ ತಾಲಗಳ ಪ್ರಯೋಗಪದ್ಧತಿಯನ್ನು ನಿರ್ಣಯಿಸಿದ್ದಾರೆ. ಇವರೆಲ್ಲರಿಗೂ ನಾವು ಸದಾ ಋಣಿಯಾಗಿರಬೇಕು.

 

ಪರಾಮರ್ಶನಗಳು

ತಾಲ ಸಂಬಂಧಿತ ಗ್ರಂಥಗಳ ವಿಚಾರ ವಿಶ್ಲೇಷಣೆಯನ್ನು ತಿಳಿಯಬಯಸುವವರು ಡಾ.ಮನೋರಮಾ ಬಿ ಎನ್ ರಚಿಸಿರುವ ಮತ್ತು ನೂಪುರಭ್ರಮರಿಯು ಪ್ರಕಟಿಸಿದ ತಾಲಾಂತರಂಗ – ನರ್ಮನಟುವಾಂಗ ಎಂಬ ಅಧ್ಯಯನ ಗ್ರಂಥವನ್ನು (೨೦೨೩- ೨೦೨೪) ಓದಬಹುದು.

Dr. V Premalatha, Department of Music, Central University of Tamil Nadu, Thiruvarur , “Nāṭyacūḍāmaṇi of Sōmanārya, edited by V Premalatha,” MusicResearchLibrary, accessed December 31, 2023, https://musicresearchlibrary.net/omeka/items/show/3625.

Tålalakshanm of Acyutaråya; Edited by Dr. V. Premalatha; published by National Mission for Manuscripts New Delhi & New Bharatiya Book Corporation- New Delhi With a Telugu Commentary (Critical Edition and Translation). https://www.namami.gov.in/sites/default/files/Prakshika/PRAKASHIKA-57%20Talalakshnam.pdf

Leave a Reply

*

code