Author: ಸಂಪಾದಕರು
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ
ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ 9- ಧುವಾಢ, ಲಾಗ, ತಿರಿಪ, ಮೊದಲಾದ ವಿಶಿಷ್ಟ ನೃತ್ತಗಳ ಬಗ್ಗೆ ಹೇಳುವ, ಪಂಡಿತ ಮಂಡಲಿಗಳು ಸಂಕಲಿಸಿದ ದೇವೆಂದ್ರ ಮತ್ತು ದೇವಣಾಚಾರ್ಯರ ಹೆಸರಿನಲ್ಲಿರುವ ಸಂಗೀತ ಮುಕ್ತಾವಳಿ ಗ್ರಂಥಗಳು
ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)
Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 9- Sangīta Muktāvali texts by Devedra Bhaṭṭa and Devanācārya of Vijayanagara Karṇāṭa Period, which discusses Dhuvāḍha, Lāga and different kinds of Dance systems ; compiled by Panḍita Manḍalis.
Research, Writing and Presentation by :
Dr Manorama B N,
Principal Investigator, Director and Editor- Noopura Bhramari ®
Co-operation by
Dr Dwaritha Viswanatha Smt. Shalini P. Vittal
Co-Principal Investigators, Noopura Bhramari IKS Centre
Smt. Rohini A. R Research Fellow,
& Sri. Vishnuprasad N Trustee, Noopura Bhramari ®
Theme Music by
Nirmiti An abode of Arts and Culture, Bengaluru.
(Singer Vid Balasubhramanya Sharma, Bengaluru)
Audio and Video Recording by
Crossfade studio, Bengaluru
ಲೇಖನ
ದೇವಣಾಚಾರ್ಯ ಮತ್ತು ದೇವೇಂದ್ರ ಚಿಂತಾಮಣಿ ಎಂಬುವರ ಹೆಸರಿನಲ್ಲಿ ಲಭ್ಯವಿರುವ ಗ್ರಂಥಗಳೇ ಸಂಗೀತ ಮುಕ್ತಾವಲಿ. ಮುಕ್ತಾವಳಿಯೆನ್ನುವುದರ ಅರ್ಥ ಅಮೂಲ್ಯವಾದ ರತ್ನಾಹಾರ ಎಂಬುದಾಗಿ. ಗೀತ-ವಾದ್ಯ-ನೃತ್ಯಗಳೆಂಬ ಸಂಗೀತಪದ್ಧತಿಗೆ ಈ ಗ್ರಂಥವು ತೊಡಿಸಿರುವ ಅಮೂಲ್ಯಹಾರದಂತೆ ಎಂಬ ಅರ್ಥವನ್ನು ಉಳ್ಳದ್ದು. ಹಾಗೆಂದು ಸಂಗೀತಮುಕ್ತಾವಳಿ- ಈ ಗ್ರಂಥವು ಒಂದೇ ಆಗಿ ಇಂದಿಗೆ ಇಲ್ಲ. ಇಬ್ಬರ ಹೆಸರಿನಲ್ಲಿ ಎರಡು ಗ್ರಂಥಗಳು ಕಂಡುಬರುತ್ತವೆ. ಒಂದು ದೇವೇಂದ್ರ ಚಿಂತಾಮಣಿ ಅಥವಾ ದೇವೇಂದ್ರ ಭಟ್ಟ ಎನ್ನುವಾತ ಬರೆದ ಸಂಗೀತ ಮುಕ್ತಾವಳಿ. ಇದರ ಕಾಲ ಅಂದಾಜು ಸುಮಾರು ೧೪೨೯ನೇ ಇಸವಿ. ಇನ್ನೊಂದು ದೇವಣಾಚಾರ್ಯ ಅಥವಾ ದೇವಣಭಟ್ಟ ಬರೆದ ಸಂಗೀತಮುಕ್ತಾವಳಿ. ಇದರ ಕಾಲವೂ ಅಂದಾಜು ೧೪೦೬-೧೪೨೨ನೇ ಇಸವಿ. ಇವೆರಡು ಗ್ರಂಥದ ಲಕ್ಷಣಗಳನ್ನು ಗಮನಿಸಿದಾಗ ಇವೆರಡು ಗ್ರಂಥದ ಪ್ರಾಂತ್ಯವೂ ಕರ್ಣಾಟಕ-ಆಂಧ್ರ-ಮಹಾರಾಷ್ಟ್ರಗಳಿಗೆ ಒಪ್ಪುವಂತಿದೆ. ಮತ್ತೊಂದು ಸಂಗೀತ ಮುಕ್ತಾವಳಿ ಹೆಸರಿನ ಗ್ರಂಥವು ಓಡಿಶಾ- ಬಂಗಾಲದ ವ್ಯಾಪ್ತಿಯಲ್ಲಿದ್ದ ಹರಿಚಂದನ ಎಂಬುವನ ಹೆಸರಿನಲ್ಲಿದೆ. ಇದರ ಕಾಲ ೧೭೫೦ನೇ ಇಸವಿ.
ದೇವೇಂದ್ರಭಟ್ಟನು ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲದ ಆಸ್ಥಾನ ವಿದ್ವಾಂಸ. ವ್ಯಾಕರಣ, ತರ್ಕ, ಮೀಮಾಂಸೆ, ಗೀತ ಮತ್ತು ನೃತ್ಯಗಳಲ್ಲಿ ಸಾಕಷ್ಟು ಪರಿಶ್ರಮವಿದ್ದವ. ಈತ ಕರ್ನಾಟಕ-ಆಂಧ್ರ- ಗೌಡ- ಮಹಾರಾಷ್ಟ್ರ ಮೊದಲಾದ ಪ್ರದೇಶಗಳಲ್ಲಿ ಮಾನ್ಯವಾಗಿದ್ದ ರುದ್ರಟ ಎಂಬುವವನ ಶಿಷ್ಯ. ದೇವೇಂದ್ರನು ಸ್ಮೃತಿಚಂದ್ರಿಕಾ ಎಂಬ ಮತ್ತೊಂದು ಗ್ರಂಥವನ್ನೂ ರಚಿಸಿದ್ದನೆಂದು ತಿಳಿದುಬರುತ್ತದೆ. ದೇವೇಂದ್ರನಿಗೇ ದೇವಣಾಚಾರ್ಯ, ದೇವಣಭಟ್ಟ ಎಂಬ ಹೆಸರುಗಳೂ ಇದ್ದವೆಂದು ಕೆಲವು ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದರೆ ದೇವೇಂದ್ರ ಮತ್ತು ದೇವಣ ಎಂಬ ಹೆಸರಿನ ಲಾಕ್ಷಣಿಕರು ಇಬ್ಬರಲ್ಲ, ಒಬ್ಬನೇ ಎಂಬ ತರ್ಕವಿದೆ. ಕಾರಣ ಇಬ್ಬರ ಹೆಸರು, ಗ್ರಂಥದ ಹೆಸರು ಮತ್ತು ಕಾಲವನ್ನು ಗಮನಿಸಿಕೊಂಡಾಗ ಸಾಕಷ್ಟು ಸಾಮ್ಯಗಳು ಇವೆ. ಜೊತೆಗೆ ದೇವೇಂದ್ರ ಚಿಂತಾಮಣಿಯ ಹೆಸರಿನಲ್ಲಿರುವ ಚಿಂತಾಮಣಿ ಎಂಬುದು ದೇವಣಾಚಾರ್ಯನು ತನ್ನನ್ನು ಕರೆದುಕೊಂಡ ತೌರ್ಯತ್ರಿಕ ಚಿಂತಾಮಣಿ ಎಂಬ ವಿಶೇಷ ಹೆಸರನ್ನೇ ಹೋಲುತ್ತದೆ. ಆದರೆ ಗ್ರಂಥಲಕ್ಷಣಗಳನ್ನು ಗಮನಿಸಿದಾಗ ಇವೆರಡು ಗ್ರಂಥಗಳಲ್ಲೂ ಸಾಕಷ್ಟು ಭಿನ್ನತೆಗಳನ್ನು ಗುರುತಿಸಬಹುದು. ಅಂತೆಯೇ ರಾಮಕೃಷ್ಣಕವಿಗಳು ದೇವಣನನ್ನು ದೇವೇಂದ್ರನು ಉಲ್ಲೇಖಿಸಿಕೊಂಡಿದ್ದಾನೆ ಎಂದೂ ಸೂಚಿಸಿದ್ದಾರೆ. ಆದ್ದರಿಂದ ಇವೆರಡೂ ಒಂದೇ ಬೃಹದ್ಗ್ರಂಥವು ಎರಡಾಗಿ ಬರೆಯಲ್ಪಟ್ಟಿರಬಹುದೇ ಅಥವಾ ಬೇರೆ ಬೇರೆ ಗ್ರಂಥಗಳೇ ಎಂಬ ವಿಚಾರ ಇಂದಿಗೂ ನಿರ್ಣಯವಾಗಿಲ್ಲ.
ಸಂಗೀತಮುಕ್ತಾವಳಿ ಗ್ರಂಥಕರ್ತರ ಬದುಕಿನ ಬಗ್ಗೆ ಹೆಚ್ಚು ವಿವರಗಳು ತಿಳಿದುಬರುವುದಿಲ್ಲ. ಆದರೆ ಈ ಗ್ರಂಥರಚನೆಯ ಹಿಂದೆ ಒಂದಷ್ಟು ಮಂದಿ ಪಂಡಿತರು ಒಂದೆಡೆ ಸೇರಿ ಮಂಡಲಿಯನ್ನು ಮಾಡಿಕೊಂಡು ತೀರ್ಮಾನಿಸಿ ಲಕ್ಷಣರಚನೆಯಲ್ಲಿ ಗುರುತರ ಪಾತ್ರ ವಹಿಸಿದ್ದರು ಮತ್ತು ತರ್ಕಗಳು ನಡೆದು ತೀರ್ಮಾನವಾಗಿ ಅವುಗಳೇ ಗ್ರಂಥಗಳಾಯಿತೆನ್ನುವುದು ಗೊತ್ತಾಗುತ್ತದೆ. ಇಂದಿನ ಕಾಲಕ್ಕೆ ಸಂಪಾದಕ ಮಂಡಳಿ, ಸಂಕಲನಸಮಿತಿ ಎಂಬುದೆಲ್ಲ ಹೇಗೆ ಇವೆಯೋ ಅಂದಿನ ಕಾಲಕ್ಕೂ ಪಂಡಿತ ಮಂಡಲಿಗಳು ನಡೆಯುತ್ತಿದ್ದವು. ಎಲ್ಲ ವರ್ಗದ ವಿದ್ವಾಂಸರ ಅಭಿಪ್ರಾಯಗಳಿಗೂ ಸಮಾನಾವಕಾಶವಿತ್ತು ಎನ್ನುವುದು ಅರಿವಾಗುತ್ತದೆ.
ದೇವಣಾಚಾರ್ಯನ ಸಂಗೀತಮುಕ್ತಾವಳಿಯು ಶಿವನ ನಾಂದೀಸ್ತುತಿಯಿಂದ ಆರಂಭಗೊಳ್ಳುತ್ತದೆ. ತಕ್ಷಣವೇ ಅಭಿನಯನಿರ್ಣಯ ಎಂಬ ಅಧ್ಯಾಯವಿದೆ. ಆದರೆ ಪೂರ್ಣಪ್ರಮಾಣದಲ್ಲಿ ಅರ್ಥೈಸಿಕೊಳ್ಳುವಂತೆ ಇದರ ಭಾಗಗಳು ಕಂಡುಬರುವುದಿಲ್ಲ. ಅದಾಗಿ ಪೇರಣ, ಗೌಂಡಲಿ, ಶುದ್ಧಪದ್ಧತಿ, ತಾಲ, ವಾದ್ಯ, ಪ್ರಬಂಧಗಳ ಬಗ್ಗೆ ಅಳಿದುಳಿದಂತೆ ತೋರುವ ಲಕ್ಷಣಗಳು ಮೊದಲನೇ ಭಾಗದಲ್ಲೇ ಕಂಡುಬರುತ್ತವೆ. ಇದರಿಂದ ಈ ಗ್ರಂಥದ ಬಹಳಷ್ಟು ಭಾಗ ನಷ್ಟವಾಗಿದೆ, ಪೂರ್ಣ ದೊರೆತಿಲ್ಲವೆಂದೇ ಅಭಿಪ್ರಾಯಿಸಬಹುದು. ಅದಾಗಿ ಹಸ್ತ, ಅಂಗೋಪಾಂಗ ಅಭಿನಯ, ಸ್ಥಾನಕ, ಚಾರಿ, ಕರಣ, ಅಂಗಹಾರ, ಗತಿ, ವೃತ್ತಿ, ರಸ, ನೃತ್ಯಬೃಂದ, ನೃತ್ಯಸಭೆ ಮೊದಲಾದ ಎಲ್ಲ ಆಂಗಿಕಾಭಿನಯ ಮತ್ತು ನೃತ್ಯವ್ಯವಸ್ಥೆ ಜರುಗುವ ಸಭೆಯ ಲಕ್ಷಣಗಳನ್ನೂ ವಿವರಿಸಲಾಗಿದೆ.
ಇನ್ನು ದೇವೇಂದ್ರನ ಹೆಸರಿನಲ್ಲಿರುವ ಸಂಗೀತಮುಕ್ತಾವಳಿಯ ವಿಚಾರಕ್ಕೆ ಬಂದರೆ ಈ ಗ್ರಂಥವು ಪಂಡರೀಕವಿಠಲನ ನರ್ತನನಿರ್ಣಯ, ಚತುರದಾಮೋದರನ ಸಂಗೀತದರ್ಪಣ, ವೇದಸೂರಿಯೆಂಬುವನ ಸಂಗೀತಮಕರಂದಗಳು ಕೂಡಾ ಮುಖ್ಯವಾಗಿ ಚರ್ಚಿಸುವ ಉತ್ಲ್ಪುತಿ ಕರಣಗಳು; ಅದರಲ್ಲೂ ಭ್ರಮರಿಗಳನ್ನೇ ಬಳಸಿ ಮಾಡುವ ನೃತ್ತವಿಶೇಷವನ್ನು ಇಲ್ಲಿಯೂ ಕಾಣಬಹುದು. ಆ ನೃತ್ತವೇ ಧುವಾಡ ಮತ್ತು ಧಾವನಲಾಗಗಳು. ಅವುಗಳಿಗೆ ಬಳಸುವ ಭ್ರಮರಿಕ್ರಮಗಳೇ ತಿರಿಪ/ಉರುಪಗಳು ಹಾಗೂ ಲಾಗ. ಇವು ಗತಿ-ತಾಲ-ನಡೆ ಸಹಿತವಾಗಿವೆ. ಅದರಲ್ಲೂ ಕರ್ನಾಟ ಮತ್ತು ದ್ರಾವಿಡ ಪ್ರದೇಶಗಳಲ್ಲಿ ಧುವಾಡವು ಬಗೆಬಗೆಯಾಗಿ, ನಾನಾ ಕ್ರಮಗಳಲ್ಲಿ ಮಾಡುವಂಥದ್ದು ಎಂಬ ವಿಚಾರವೂ ದೇವೇಂದ್ರನ ಸಂಗೀತಮುಕ್ತಾವಳಿಯಲ್ಲಿದೆ. ದೇವಣಾಚಾರ್ಯನ ಗ್ರಂಥ ತಂಜಾವೂರು ಸರಸ್ವತಿ ಮಹಲ್ ಗ್ರಂಥಾಲಯದಿಂದ ಸಂಪಾದನೆಗೊಂಡು ಅಚ್ಚಾಗಿದ್ದು; ದೇವೇಂದ್ರನ ಹೆಸರಿನಲ್ಲಿರುವ ಸಂಗೀತಮುಕ್ತಾವಳಿ ಇನ್ನೂ ಹಸ್ತಪ್ರತಿಯಲ್ಲೇ ಉಳಿದುಕೊಂಡಿದೆ. ಇವುಗಳ ಸಂಶೋಧನಾತ್ಮಕ ವಿಶ್ಲೇಷಣೆಯನ್ನು ಈ ಲೇಖನದ ಲೇಖಕರಾದ ಡಾ. ಮನೋರಮಾ ಬಿ ಎನ್ ಅವರ ಯಕ್ಷಮಾರ್ಗಮುಕುರ ಗ್ರಂಥದಲ್ಲಿ ಕಾಣಬಹುದು.
Sangita Muktavali by Chintamani Devendra (Devanagari Manuscript). 1 and 2 – RSN-TMSSML-6646B, Tanjore: Maharaja Serfoji Saraswati Mahal Library.
Venkataramanan, N (Ed.) (1991). Sangita Muktavali of Devanacharya- Natyashastra. Tanjavur: Maharaja Serfoji’s Sarasvati Mahal Library.
ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. ವಿವರಗಳಿಗೆ https://www.noopurabhramari.com/yakshamargamukura/