ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 8-ಅಶೋಕಮಲ್ಲನ ನೃತ್ತಾಧ್ಯಾಯ/

Posted On: Sunday, December 3rd, 2023
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ 8- ಕ್ಷತ್ರಿಯ ರಾಜ ಅಶೋಕಮಲ್ಲನ ನೃತ್ತಾಧ್ಯಾಯ ಮತ್ತು ಅದು ಸೂಚಿಸಿದ ಕಲಾಸ ಕರಣಗಳ ವಿಶ್ಲೇಷಣೆ

 

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 8- King Aśokamalla’s Nr̥ttādhāya and his special aspects on Kalāsa Karaṇa category

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

 

ಲೇಖನ :

ಅಶೋಕಮಲ್ಲನ ಗ್ರಂಥ ನೃತ್ತಾಧ್ಯಾಯ. ೧೪-೧೫ನೇ ಶತಮಾನದ ಆಸುಪಾಸಿನಲ್ಲಿ ರಚಿಸಲ್ಪಟ್ಟದ್ದು. ‘ಮಲ್ಲ’ಎಂಬುದಾಗಿ ಅಂತ್ಯವಾಗುವ ಆತನ ಹೆಸರನ್ನು ಗಮನಿಸಿದರೆ ಕರ್ನಾಟಕ- ಆಂಧ್ರಪ್ರದೇಶದ ಆಸುಪಾಸಿನಲ್ಲಿ ಇದ್ದಿರಬಹುದೆಂದು, ಓರ್ವ ಕ್ಷತ್ರಿಯನೆಂದೂ ಅಂದಾಜಿಸಬಹುದು.

ಅಶೋಕಮಲ್ಲ – ವೈಯಕ್ತಿಕ ವಿವರಗಳು

ಅಶೋಕಮಲ್ಲನೇ ತನ್ನನ್ನು ನೃಪ, ಭೂಭುಜ, ಪೃಥ್ವಿಂದ್ರೇಣ ಎಂದು ಸಂಬೋಧಿಸಿಕೊಂಡಿದ್ದಾನೆ. ಈತನ ತಂದೆ ವೀರಸಿಂಹನೆಂದು ಗ್ರಂಥದೊಳಗಿನ ಶ್ಲೋಕಗಳಿಂದಲೇ ತಿಳಿದುಬರುತ್ತದೆ. ಹೀಗಿದ್ದೂ ಈತ ಎಲ್ಲ್ಲಿಯವನೆಂದು ತಿಳಿಯುವುದಿಲ್ಲ.ಭರತನಿಂದ ಮೊದಲ್ಗೊಂಡು ತಂಡು, ವಾಯುಸೂನು ಹನುಮಂತ, ಕೋಹಲ, ಕೀರ್ತಿಧರಾಚಾರ್ಯ, ಅಭಿನವಗುಪ್ತಪಾದಾಚಾರ್ಯರರನ್ನು ಲಕ್ಷಣ ರಚನೆಯ ವೇಳೆ ಸ್ಮರಿಸಿಕೊಂಡಿದ್ದಾನೆ.

ನೃತ್ತಾಧ್ಯಾಯ- ಗ್ರಂಥವಿಶೇಷ ಮತ್ತು ಅಧ್ಯಾಯಕ್ರಮ

ಈ ಗ್ರಂಥವು ಹೆಸರೇ ಹೇಳುವಂತೆ ನೃತ್ತಕ್ಕೆ ಸಂಬಂಧಿಸಿದ ಎಲ್ಲ ಮಾರ್ಗ ಮತ್ತು ಮಾರ್ಗೋತ್ತರ ಅಂದರೆ ದೇಶೀವಿಚಾರಗಳನ್ನು ಅಂಗೋಪಾಂಗ ವ್ಯಾಯಾಮಗಳಿಂದ ಮೊದಲ್ಗೊಂಡು ವಿವೇಚಿಸಿದೆ. ೧೬೧೧ ಶ್ಲೋಕಗಳು ನೃತ್ಯಾಧ್ಯಾಯದಲ್ಲಿದೆ. ಅಭಿನಯಹಸ್ತ ಮತ್ತು ನೃತ್ತಹಸ್ತ ಲಕ್ಷಣಗಳು, ಅಂಗ-ಉಪಾಂಗ- ಪ್ರತ್ಯಂಗ ಅಭಿನಯಗಳ ಕ್ರಮ, ವಿವಿಧ ದೃಷ್ಟಿ ಪ್ರಕರಣ, ಭಾವಾಭಿನಯ, ಸ್ಥಾನಕ, ಚಾರೀ, ಕರಣಗಳು, ಅಭಿನವಭಾರತೀ ಗ್ರಂಥದ ನಂತರಕ್ಕೆ ಬಹುವಾಗಿ ಉಲ್ಲೇಖಗೊಳ್ಳುವ ವಿವಿಧ ವರ್ತನ- ಚಾಲಕಾ ಪ್ರಕರಣಗಳು, ಮುಡುಪಚಾರಿಗಳು, ಅಂಗಹಾರ, ಮಂಡಲಗಳು, ನಾಟ್ಯಶಾಸ್ತ್ರ ಮತ್ತು ಅದರ ನಂತರದ ಕಾಲಗಳಲ್ಲಿ ಬಂದಿರೋ ಎಷ್ಟೋ ಅಂಶಗಳನ್ನು ಸಂಗ್ರಹಿಸಿದೆ. ಆ ಪೈಕಿ ಅಶೋಕಮಲ್ಲನ ನೃತ್ತಾಧ್ಯಾಯದ್ದೇ ಕೊಡುಗೆ ಎನ್ನಬಹುದಾದ ಸಂಗತಿಗಳನ್ನು ಗಮನಿಸುವುದಾದರೆ- ಹತ್ತು ಬಗೆಯ ದೇಶೀ ಲಾಸ್ಯಾಂಗವಿಧಿಗಳನ್ನೂ ಸಂಗೀತರತ್ನಾಕರವು ಸೂಚಿಸಿದ್ದರೆ; ನೃತ್ತಾಧ್ಯಾಯ ಗ್ರಂಥದಲ್ಲಿ ಈ ಲಾಸ್ಯಾಂಗವಿಧಿಗಳು ಸುಮಾರು ಮೂವತ್ತೇಳು ಇವೆ. ಹಾಗೆಯೇ ಕಲಾಸವೆಂಬ ಹೆಸರಿನಲ್ಲಿ ಮತ್ತಷ್ಟು ವೈವಿಧ್ಯಗಳನ್ನು ಈ ಗ್ರಂಥವು ಹೇಳಿ ಅಂತ್ಯಗೊಳ್ಳುತ್ತದೆ.

ಕಲಾಸವೆಂಬ ಪರಿಭಾಷೆಯನ್ನು ಅನೇಕ ಗ್ರಂಥಗಳು ನೃತ್ಯವಿಚಾರದಲ್ಲಿ ಸೂಚಿಸಿವೆ. ಸರಳವಾಗಿ ಹೇಳುವುದಾದರೆ, ಸಂಗೀತರತ್ನಾಕರದಲ್ಲಿ ತಿಳಿಯಪಡಿಸುವಂತೆ ಕಲಾಸವೆನ್ನುವುದು ನೃತ್ಯಾಂತ್ಯಕ್ಕೆ ಭಂಗಿಯೊಂದನ್ನು ಏರ್ಪಡಿಸುವುದಕ್ಕೆ ಬೇಕಾಗಿರುವ ವಾದ್ಯಕಾರರ ಒಂದು ಕೌಶಲ್ಯವುಳ್ಳ ಸಂಯೋಜನೆ. ಆದರೆ ನೃತ್ತಾಧ್ಯಾಯ, ನೃತ್ತರತ್ನಾವಳಿ, ನೃತ್ಯರತ್ನಕೋಶ, ಸಂಗೀತಕಲ್ಪಲತಿಕಾ, ಸಂಗೀತನಾರಾಯಣ ಮೊದಲಾದ ಎಷ್ಟೋ ಗ್ರಂಥಗಳು ಇದನ್ನು ಕಲಾಸಕರಣವೆಂಬುದಾಗಿ ಹೇಳಿಕೊಂಡಿವೆ. ಈ ಕಲಾಸಕರಣ ಎನ್ನುವ ವರ್ಗದಲ್ಲಿ ವಿದ್ಯುತ್, ಖಡ್ಗ, ಮೃಗ, ಬಕ, ಹಂಸ, ಪ್ಲವ ಎಂಬ ಆರು ಬಗೆಗಳಿವೆ. ಇವುಗಳ ಸ್ವರೂಪವನ್ನು ಗಮನಿಸಿದಾಗ, ಇವು ಹಸ್ತ-ಪಾದಭೇದ-ಆಹಾರ್ಯಪರಿಕರಗಳ ಬಳಕೆಯನ್ನೂ ಒಳಗೊಂಡಂತೆ ಇರುವ ದೇಶೀಗತಿಭೇದ ಅಥವಾ ಲಾಸ್ಯಾಂಗವರ್ಗವೆನ್ನಬಹುದು. ಆದರೆ ಇವು ಕರಣಗಳೆಂದೇ ಹೆಸರಾಗಿರುವುದರಿಂದ ಎಷ್ಟೋ ಮಂದಿ ಇವನ್ನು ಉತ್ಪ್ಲುತಿ ಮತ್ತು ಮಾರ್ಗಕರಣಗಳ ಪಥಕ್ಕೇ ಸೇರಿಸಿಬಿಟ್ಟಿದ್ದಾರೆ![1]

ಉದಾಹರಣೆಗೆ ಹೇಳುವುದಾದರೆ- ಖಡ್ಗಧಾರಣೆಯನ್ನು ಮಾಡಿ ನರ್ತಕಿಯು ಸುತ್ತಮುತ್ತಲೂ ಗಮನಿಸಿ ಮಾಡುವ ನೃತ್ತಚಲನೆಯು ಖಡ್ಗಕಲಾಸವೆನಿಸಿಕೊಳ್ಳುತ್ತದೆ. ಪಾದಾಂಗುಲಿಗಳನ್ನು ಪಸರಿಸಿ, ಅವಗುಂಠನ ವಸ್ತ್ರವನ್ನು ಹಿಡಿದು, ಆಗಾಗ್ಗೆ ಕೆಳಗಿಳಿಸಿ, ಗರ್ಭಹಾರದಿಂದ ಖಿನ್ನವಾದ ಹರಿಣಿಯಂತೆ ಆಲಸ್ಯದಿಂದ ಚಲಿಸುವ, ಹರಿಣದಂತೆ ಓಡೋಡುವ ಲಕ್ಷಣ ಮೃಗಕಲಾಸ. ಬಕಪಕ್ಷಿ ಹೇಗೆ ತನ್ನ ರೆಕ್ಕೆಗಳನ್ನು ಫಡಫಡಿಸುವುದೋ ಅಂತೆಯೇ ಹಸ್ತ್ತಗಳನ್ನು ರಚಿಸಿ, ಎದ್ದು, ಸುಂದರ ಭಂಗಿಗಳಿಂದ ನರ್ತಿಸುವುದು ಬಕಕಲಾಸ. ಮೀನನ್ನು ಹಿಡಿಯುವಂತೆ, ತಪ್ಪಿಹೋಗುವಂತೆ ಮುಂದೆ ಮತ್ತು ಹಿಂದಕ್ಕೆ ವೇಗವಾಗಿ ಚಲಿಸುವುದರ ಸಹಿತ ಕಾಲ್ಬೆರಳನ್ನು ಕೈಯಿಂದ ಮುಟ್ಟುತ್ತಾ ನರ್ತಿಸುವ ಮತ್ತಷ್ಟು ಲಕ್ಷಣಗಳನ್ನು ಉಲ್ಲೇಖಿಸಿದೆ. ಹಂಸದಂತೆ ಕಾಲುಗಳನ್ನಿರಿಸಿ ನಾನಾ ಪ್ರಕಾರಗಳಲ್ಲಿ ಸುಂದರವಾಗಿ ಚಲಿಸುವುದು ಹಂಸಕಲಾಸ. ಒಟ್ಟಿನಲ್ಲಿ ಜವನಿಕೆಯನ್ನು ಹಿಡಿದು ಕುಣಿಯುವ, ನಮಸ್ಕರಿಸುವ, ಪುಷ್ಪಾಂಜಲಿಯನ್ನು ಮಾಡುವ ಸಂದರ್ಭಗಳೂ ಕಲಾಸಕರಣದಲ್ಲಿ ಇವೆ. ಆದರೆ ಇವು ಮಾರ್ಗ-ದೇಶೀಕರಣಗಳಂತೆ ಅಲ್ಲ. ಬದಲಾಗಿ ಲಾಲಿತ್ಯ/ಸುಕುಮಾರ ಗತಿಯು ಆದ್ಯತೆಯಾಗಿರುವ ನಿರ್ದಿಷ್ಟ ನೃತ್ಯಶೈಲಿಯೆನ್ನಬಹುದು.[2]

ಆಧಾರಗ್ರಂಥಗಳು

Gairola, Vachaspati (Ed.) (1969). Ashokamalla Virachit Nritadhyaya (With Hindi translation). Ilahabad: Samvartika Prakashan.

Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries.  Madras: Adyar Library.

  1.  ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. ವಿವರಗಳಿಗೆ https://www.noopurabhramari.com/yakshamargamukura/
  2.  ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- https://www.noopurabhramari.com/want-to-subscribe-noopura-bhramari-and-purchase-the-dance-books/

Leave a Reply

*

code