ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 6-ಜಾಯಸೇನಾಪತಿಯ ನೃತ್ತರತ್ನಾವಳಿ

Posted On: Sunday, November 19th, 2023
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ 6 – ಕಾಕತೀಯ ವಂಶದ ರಾಜರ ಸೇನಾಪತಿ, ಶಾಸ್ತ್ರವಿಚಕ್ಷಣ ಜಾಯಸೇನಾಪತಿಯ ವಿಶಿಷ್ಟ ಗ್ರಂಥ ನೃತ್ತರತ್ನಾವಳಿ

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 5- Sangīta Treatises authored by Chalukya royal family- Jagadekamalla’s Sangīta Cūḍāmaṇi, Haripāladeva’s Sangīta Sudhākara and Somadeva’s Sangīta Ratnāvalī (Rare texts of 11-12th CE, which is still unpublished)

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ಶಾತವಾಹನರ ನಂತರ ಆಂಧ್ರಪ್ರದೇಶವನ್ನು ಆಳಿದ ಪ್ರಮುಖ ರಾಜವಂಶ ಕಾಕತೀಯರು. ೧೧ರಿಂದ ೧೪ನೇ ಶತಮಾನ ಇವರ ಪ್ರಭುತ್ವದ ಅವಧಿ. ಮೂಲತಃ ಕಲ್ಯಾಣಿ ಚಾಲುಕ್ಯರಿಗೆ ಸಾಮಂತರಾಗಿದ್ದವರು. ಕ್ರಮೇಣ ಸ್ವತಂತ್ರ ಪ್ರಭುತ್ವಕ್ಕೆ ಬಂದರು. ಇವರೂ ಕೂಡಾ ಕಲೆಯ ಉತ್ಕಟ ಪೋಷಕರಾಗಿದ್ದರು. ಅದಕ್ಕೆ ಸಾಕ್ಷಿಯೆಂಬಂತೆ ಆ ಕಾಲದ ನೃತ್ತವಿಶೇಷಗಳನ್ನು ಅರಿಯುವಲ್ಲಿ ನೆರವಾಗುವ ಗ್ರಂಥವೇ ಜಾಯಪಸೇನಾಪತಿಯ ನೃತ್ತರತ್ನಾವಳಿ. ರತ್ನಾವಳಿಯೆಂದರೆ ಅಮೂಲ್ಯವಾದ ರತ್ನಗಳ ಹಾರ. ಅಂದರೆ ಈ ಗ್ರಂಥವನ್ನು ನೃತ್ತವೆಂಬ ರತ್ನಗಳ ಹಾರ ಎಂಬುದಾಗಿ ಅನ್ವಯಿಸಬಹುದು. ಇದನ್ನು ಬರೆದ ಕಾಲ ಅಂದಾಜು ೧೨೫೩ನೇ ಇಸವಿ.

ಜಾಯಪಸೇನಾಪತಿ- ವೈಯಕ್ತಿಕ ವಿವರಗಳು

ಜಾಯಪಸೇನಾಪತಿ – ಹೆಸರೇ ತಿಳಿಸುವಂತೆ ಜಾಯನನೆಂಬಾತ ಓರ್ವ ಸೇನಾಪತಿ. ಅದರಲ್ಲೂ ಗಜಸಾಧನಿಕ ಅಂದರೆ ಗಜದಳದ ಮುಖ್ಯಸ್ಥ. ಈತನನ್ನು ಜಾಯಸೇನ/ಜಯ ಸೇನಾನಿ / ಜಯಸೇನಾ / ಜಯ ಸೇನಾದಿನಾಥ / ಜಾಯನ / ಜಯಪ್ಪ ನಾಯಕ / ಜಯಾಚಾರ್ಯ / ಜಯಪ್ಪ ನಾಯ್ಡು ಎಂಬ ಹೆಸರುಗಳಿಂದಲೂ ಗುರುತಿಸಿದ್ದಾರೆ. ಜಾಯನನ ಹಿರಿಯರು ಒಂದು ಕಾಲದಲ್ಲಿ ವೆಲನಾಡು ಪ್ರದೇಶದ ಉಸ್ತುವಾರಿ ವಹಿಸಿದ್ದ ಅಯ್ಯ-ಕುಲ ಸಂಜಾತರು. ಜಾಯನನ ತಾತ ನಾರಾಯಣ ನಾಯಕನು ಕೃಷ್ಣಾ ನದಿಯ ಸಮೀಪ ದ್ವೀಪವೊಂದನ್ನು ಪಟ್ಟಣವಾಗಿ ಪರಿವರ್ತಿಸಿದ್ದನಂತೆ. ಈ ಪ್ರಾಂತ ಚಂದವೋಲು ಎಂಬ ಪ್ರದೇಶದಿಂದ ಆಳಿದ ತೆಲುಗು ಚೋಳರ ಸುಪರ್ದಿಯಲ್ಲಿತ್ತು. ಕಾಕತೀಯ ವಂಶದ ದೊರೆ ಗಣಪತಿದೇವ ಅದನ್ನು ವಶಪಡಿಸಿಕೊಂಡ ಬಳಿಕ ಈತನ ತಂದೆ ಪಿನ್ನ ಚೋಡ ನಾಯಕ ಗಣಪತಿ ದೇವನ ಆಶ್ರಯಕ್ಕೆ ಬಂದ. ಹಾಗಿದ್ದೂ ಜಾಯನನ ತಂದೆಯ ಶೌರ್ಯ ಪರಾಕ್ರಮವನ್ನು ಮೆಚ್ಚಿದ ಗಣಪತಿದೇವನು, ಜಾಯನನ ಸೋದರತ್ತೆಯರನ್ನು ಮದುವೆಯಾದ. ಅದಾಗಿ ರಾಜನ ನಿರ್ದೇಶನದಂತೆ ಜಾಯನನ ತಂದೆ ಕೆಲಕಾಲ ದಿವಿ-ಸೀಮಾ ಎನ್ನುವಲ್ಲಿ ಉಸ್ತುವಾರಿ ವಹಿಸಿದ್ದನು. ಆಗಿನ್ನೂ ಜಾಯನ ಚಿಕ್ಕ ಹುಡುಗ.

೧೧೯೮ರಿಂದ ೧೨೬೨ನೇ ಕಾಲದ ವರೆಗೂ ಆಳಿದ್ದ ರಾಜ ಗಣಪತಿ ದೇವ. ಜಾಯನನ ಪ್ರತಿಭೆ, ಶ್ರದ್ಧೆ, ಬುದ್ಧಿವಂತಿಕೆ, ಸಜ್ಜನಿಕೆ ಮತ್ತು ಅವನ ಕಲಿಯುವ ಬಯಕೆಯನ್ನು ಗಮನಿಸಿ ಗಜಪತಿ ದೇವನೇ ಅವನ ಶಿಕ್ಷಣಕ್ಕೆ ಏರ್ಪಾಡು ಮಾಡಿದ. ಹಾಗೆಯೇ ಗುಂಡಾಮಾತ್ಯರೆಂಬ ಆಚಾರ್ಯರ ಬಳಿ ನೃತ್ಯಶಿಕ್ಷಣಕ್ಕೂ ವ್ಯವಸ್ಥೆ ಮಾಡಿದ್ದನೆಂದು ತಿಳಿದುಬರುತ್ತದೆ. ಅನಂತರ ಜಾಯನನನ್ನು ಗುಂಟೂರಿನ ತಾಮ್ರಪುರಿಯ ನಾಯಕನಾಗಿ ೧೨೧೩ನೇ ಇಸವಿಯಲ್ಲಿ ಗಜಪತಿದೇವ ನೇಮಿಸಿದನು ಮತ್ತು ’ವೈರಿಗೋಧುಮ ಘರಟ್ಟ’ ಎಂಬ ಬಿರುದು ನೀಡಿ ಗೌರವಿಸಿದ.

ತನಗೆ ಅರಸನಿಂದ ದೊರಕಿದ ವಿದ್ಯೆ, ಸ್ಥಾನಗಳಿಗೆ ಗೌರವವಾಗಿ ಜಾಯಪಸೇನಾನಿಯು ತನ್ನ ಗ್ರಂಥದಲ್ಲಿ ಗಜಪತಿ ದೇವನನ್ನು ಆಗಾಗ ಸ್ತುತಿಸಿದ್ದಾನೆ. ತನ್ನ ಆಶ್ರಯದಾತಾರನ ಬಗ್ಗೆ ಅಪಾರ ಗೌರವ ಹೊಂದಿದ್ದನೆಂದು ಪ್ರತೀ ಅಧ್ಯಾಯದ ಅಂತ್ಯಕ್ಕೂ ತಿಳಿಯುತ್ತಲೇ ಹೋಗುತ್ತದೆ. ಉದಾಹರಣೆಗೆ ಮೊದಲ ಅಧ್ಯಾಯದ ಅಂತ್ಯಕ್ಕೆ ಇತಿ ಶ್ರೀಮನ್ಮಹಾರಾಜಾಧಿರಾಜ ಗಣಪತಿ ದೇವ ಗಜಸಾಧನಿಕ ಜಾಯಸೇನಾಪತಿ ವಿರಚಿತಾಯಾಂ ನೃತ್ತರತ್ನಾವಲ್ಯಾಂ ನರ್ತನವಿವೇಕೋ ನಾಮ ಪ್ರಥಮೋಧ್ಯಾಯಃ ಎಂದೇ ಅಂಕಿತಗೊಳಿಸುತ್ತಾನೆ. ಅಂತೆಯೇ ಅನೇಕ ಕಡೆ ಗಜಪತಿದೇವನ ಬಗ್ಗೆ ನೃತ್ತ-ಗೀತ ಸಂಬಂಧಿಯಾಗಿ ಪ್ರತ್ಯೇಕವಾದ ಸ್ತುತಿಶ್ಲೋಕಗಳೂ ಕಂಡುಬಂದಿವೆ. ಗಜಪತಿದೇವನು ಕಲ್ಪವೃಕ್ಷ, ಕರ್ಣರನ್ನೂ ಮೀರಿಸಿದ್ದ, ಎಂಬಿತ್ಯಾದಿ ಅಲಂಕಾರಸಹಿತವಾದ ಸ್ತುತಿಶ್ಲೋಕಗಳನ್ನೂ ಕಾಣಬಹುದು. ಶೌರ್ಯ ಮತ್ತು ವಿದ್ಯೆ ಎರಡರಲ್ಲೂ ಅಸಾಮಾನ್ಯ ಪ್ರತಿಭೆಯನ್ನು ಸಂಪಾದಿಸಿದ್ದ ಜಾಯನನು ಗಜಪತಿ ದೇವನ ಬಳಿಕ ಗಜಪತಿ ದೇವನ ಮಗಳು ರುದ್ರಮದೇವಿಗೂ ಸೇವೆ ಸಲ್ಲಿಸಿದ್ದನೆಂದೂ ತಿಳಿದುಬರುತ್ತದೆ. ಹೀಗೆ ಜಾಯನನು ವೃತ್ತಿಯಲ್ಲಿ ಸೇನಾನಿಯಾದರೂ ಹೃದಯದಲ್ಲಿ ಕಲಾಭಿಜ್ಞ. ಆತ ಸಂಗೀತಗಾರ ಮತ್ತು ಕವಿ. ಅಂತೆಯೇ ನರ್ತಕನೂ, ನಾಟ್ಯಾಚಾರ್ಯನೂ ಆಗಿ ಬೆಳೆದ ಅಪೂರ್ವ ವ್ಯಕ್ತಿತ್ವ ಜಾಯನನದ್ದು. ಒಟ್ಟಿನಲ್ಲಿ ಜಾಯನನು ವೀರನೂ ಹೌದು ಮತ್ತು ವಿದ್ವಾಂಸನೂ ಹೌದು. ಶಾಸ್ತ್ರದಲ್ಲೇ ಇರಲಿ, ಶಸ್ತ್ರದಲ್ಲೇ ಇರಲಿ ಜಾಯನನು ಪ್ರಸಿದ್ಧ.

ನೃತ್ತರತ್ನಾವಳಿ ಗ್ರಂಥ ಮತ್ತು ಭಾರತೀಯ ದೇವಾಲಯಶಿಲ್ಪ ಸಂಬಂಧ

ಭಾರತೀಯ ದೇವಸ್ಥಾನ ಸಂಪ್ರದಾಯದ ಆಚಾರ-ವಿಚಾರ-ಜೀವನದಲ್ಲಿ ಅನರ್ಘ್ಯ, ಅಮೂಲ್ಯವೆನಿಸುವ ಸಂಪತ್ತಿದೆ. ಅದು ಕೇವಲ ಆರ್ಥಿಕ ಆದಾಯ ಅಥವಾ ಚಿನ್ನ ಬೆಳ್ಳಿ ಮುತ್ತು ರತ್ನವೆಂಬ ಲೌಕಿಕ ಸಂಪತ್ತಷ್ಟೇ ಅಲ್ಲ; ಜೊತೆಗೆ ಆಧ್ಯಾತ್ಮಿಕ, ಶಾಸ್ತ್ರ, ಕಲೆ, ಆಗಮ ಮೊದಲಾದ ಬೌದ್ಧಿಕ, ಸಾಂಸ್ಕೃತಿಕ, ಧಾರ್ಮಿಕ, ನೈತಿಕ ಸಂಪತ್ತು ಕೂಡಾ. ದೇವಾಲಯವೆನ್ನುವುದು ಇಹಕ್ಕೂ ಪರಕ್ಕೂ ಸಾಧನವಾದ ಮಾರ್ಗ. ಇದನ್ನು ಚೆನ್ನಾಗಿ ಅರಿತಿದ್ದವನು ಜಾಯನ. ಸ್ವತಃ ದೈವಭಕ್ತನಾಗಿದ್ದು ದೇವಾಲಯ ಸಂಪ್ರದಾಯವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಜಾಯನನಲ್ಲಿ ಸ್ವಭಾವತಃ ಆ ಸಂಪ್ರದಾಯವೇ ಬಹಳಷ್ಟು ವಿಚಾರಗಳನ್ನು ಹುಟ್ಟು ಹಾಕಿಸಿದೆ ಎನ್ನುವುದೂ ತಿಳಿಯುತ್ತದೆ. ನೃತ್ತರತ್ನಾವಳಿಯು ಕೂಡಾ ಜಾಯಸೇನಾಪತಿಯ ಇಷ್ಟದೈವವಾದ ಶಿವನ ಕುರಿತಾಗಿ ಶೃಂಗಾರಮಯವಾದ ಮತ್ತು ನೃತ್ತಕ್ಕೆ ಹೊಂದುವಂಥ ನಾಂದಿಸ್ತುತಿ “ಮೌಲಿಂ ಸ್ವೇದಜಲಾರ್ದ್ರಕುಂತಲಮುರಃ’ ಪ್ರಾರಂಭವಾಗುತ್ತದೆ.

ಕಾಕತೀಯರ ರಾಜಧಾನಿ ವಾರಂಗಲ್ ಬಳಿಯ ಪಾಲಂಪೇಟ್‌ನಲ್ಲಿ ಸಾವಿರ ಕಂಬಗಳ ೧೩ನೇ ಶತಮಾನದ ರಾಮಪ್ಪ ದೇವಾಲಯವಿದೆ. ಇದು ಗಣಪತಿ ದೇವನ ಮತ್ತೋರ್ವ ಸೇನಾ ಮುಖ್ಯಸ್ಥ ರೇಚೆರ್ಲ ರುದ್ರನಿಂದ ನಿರ್ಮಿಸಲ್ಪಟ್ಟಿದೆ. ಈಗ ಈ ದೇವಸ್ಥಾನವನ್ನು ವಿಶ್ವ ಪರಂಪರೆಯ ಸ್ಮಾರಕವೆಂದು ಘೋಷಿಸಲಾಗಿದೆ. ಈ ದೇವಸ್ಥಾನದ ಶಿಲ್ಪಗಳನ್ನು ಜಾಯನನು ಕೂಲಂಕಷವಾಗಿ ಅಧ್ಯಯನ ನಡೆಸಿದ್ದನೆಂದೂ, ಅದರ ಎಷ್ಟೋ ಅಂಗಭಂಗಿಗಳನ್ನು ತನ್ನ ಗ್ರಂಥ ನೃತ್ತರತ್ನಾವಳಿಯಲ್ಲಿ ನಮೂದಿಸಿದ್ದನೆಂದು ಹೇಳಲಾಗುತ್ತದೆ. ಅಂತೆಯೇ ದೇವಾಲಯ ನರ್ತನ ಪರಂಪರೆಗೆ ವಾರೀಸುದಾರರಾಗಿದ್ದ ದೇವದಾಸಿಯರಿಂದಲೂ ಆತ ಬಹಳಷ್ಟು ಕಲಿತಿದ್ದನೆಂದೂ ಮತ್ತು ಕಲಿಸಿದ್ದನೆಂದೂ, ಅವರಿಗೆ ದೊರೆಯು ಸಾಕಷ್ಟು ಕೊಡುಗೆ ದಾನಗಳನ್ನು ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದನೆಂದೂ ತಿಳಿದುಬರುತ್ತದೆ.

ನೃತ್ತರತ್ನಾವಳಿ – ರಚನಾಕ್ರಮ, ಅಧ್ಯಾಯಗಳು ಮತ್ತು ಲಕ್ಷಣವಿಶೇಷತೆ

ಸುಮಾರು ೧೭೦೦ ಶ್ಲೋಕಗಳನ್ನು ಈ ಗ್ರಂಥವು ಹೊಂದಿದೆ. ಈ ಗ್ರಂಥದಲ್ಲಿ ಒಟ್ಟು ಎಂಟು ಅಧ್ಯಾಯಗಳು ಇವೆ. ನರ್ತನವಿವೇಕವೆನ್ನುವುದು ಮೊದಲ ಅಧ್ಯಾಯ. ಅಂಗನಿರೂಪಣ ಎರಡನೆಯದ್ದು. ಚಾರೀ ಸ್ಥಾನಕ ಮಂಡಲ ಲಕ್ಷಣ ಮೂರನೇಯದ್ದು. ಕರಣಾಂಗಹಾರವಿವೇಚನ ನಾಲ್ಕನೇ ಅಧ್ಯಾಯ, ದೇಶೀಪಾಟ ಚಾರೀ ಲಾಸ್ಯಾಂಗ ಮತ್ತು ಗತಿಲಕ್ಷಣಗಳು ಐದು ಮತ್ತು ಆರನೇ ಅಧ್ಯಾಯಗಳು, ವಿವಿಧ ದೇಶೀನೃತ್ತಗಳ ಸಹಿತ ಶಿಕ್ಷಾಪದ್ಧತಿ-ನೃತ್ತಮಂಡಪ-ಸಭೆ- ಬೃಂದ ಇತ್ಯಾದಿ ನೃತ್ತಸಂಬಂಧಿಯಾದ ವಿವರಗಳನ್ನು ತಿಳಿಸುವುದು ಏಳನೇ ಅಧ್ಯಾಯವಾದರೆ, ಸಭಾಪತಿ, ಪ್ರಧಾನ ನರ್ತಕಿಯ ನೇಪಥ್ಯ, ವಾದ್ಯಮೇಳವಿನ್ಯಾಸವನ್ನು ತಿಳಿಸುವುದು ಎಂಟನೇ ಅಧ್ಯಾಯ.

ಭರತಮುನಿಯ ನಾಟ್ಯಶಾಸ್ತ್ರದ ಪ್ರಕಾರ ನೃತ್ತವೆಂದರೆ ಕುಣಿತ ಎಂದರ್ಥ. ಮನುಷ್ಯರ ಸ್ವಭಾವಕ್ಕೆ ಕುಣಿತವು ಬಹಳ ಇಷ್ಟ. ಇಂಥ ಹಲವು ಬಗೆಯ ನೃತ್ತಗಳನ್ನು ಗಮನಿಸಿಕೊಂಡಂತೆ ಅವುಗಳಿಗೆ ಬೇಕಾದ ಆಂಗಿಕಾಭಿನಯವೆನ್ನುವ ವಿಭಾಗವನ್ನು ನೃತ್ತರತ್ನಾವಳಿ ಎಂಬ ಜಾಯನನ ಗ್ರಂಥ ಚರ್ಚಿಸಿದೆ. ಜೊತೆಗೆ ವಾರಂಗಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದ ನೃತ್ತಗಳು ಅವುಗಳನ್ನು ನರ್ತಿಸಲು ಬಳಸುತ್ತಿದ್ದ ವಿವಿಧ ಆಂಗಿಕಾಭಿನಯ- ಅಂಗೋಪಾಂಗ ವ್ಯಾಯಾಮ, ಹಸ್ತಾಭಿನಯ, ಸ್ಥಾನಕ, ಚಾರಿ, ಕರಣ ಇತ್ಯಾದಿ ಅನೇಕ ಅಭ್ಯಾಸಗಳನ್ನು ಈ ಗ್ರಂಥವು ವಿಶದವಾಗಿ ಚರ್ಚಿಸುತ್ತದೆ. ಗ್ರಂಥವು ಆರಂಭದಲ್ಲಿ ನಾಟ್ಯಶಾಸ್ತ್ರದಲ್ಲಿರುವ ಲಾಸ್ಯಾಂಗಗಳನ್ನು ವಿವರಿಸಿದರೂ ಅನಂತರದಲ್ಲಿ ಪ್ರಮುಖವಾಗಿ ನಲವತ್ತಾರು ಪ್ರಾದೇಶಿಕ ಅಂದರೆ ದೇಶೀ ಲಾಸ್ಯಾಂಗಗಳನ್ನು ವಿವರಿಸಿದೆ. ಜೊತೆಗೆ ಇವುಗಳಲ್ಲಿ ಪೇರಣಿ, ಪ್ರೇಂಖಣ, ಶುದ್ಧ ನರ್ತನ, ಚರ್ಚರಿ, ರಾಸಕ, ದಂಡ ರಾಸಕ, ಶಿವಪ್ರಿಯ, ಕಂದುಕ ನರ್ತನ, ಭಾಂಡಿಕ ನೃತ್ಯ, ಚರಣ ನೃತ್ಯ, ಚಿಂದು, ಗೊಂದಲಿ, ಕೋಲಾಟ ಮುಂತಾದ ಅನೇಕ ದೇಶೀ ನೃತ್ತಗಳನ್ನೂ ವಿವರಿಸುತ್ತದೆ.

ಗ್ರಂಥಪ್ರೇರಣೆ

ನಾಟ್ಯಶಾಸ್ತ್ರದ ವ್ಯಾಖ್ಯಾನಕಾರ ಕೀರ್ತಿಧರಾಚಾರ್ಯನಂಥವರ ವ್ಯಾಖ್ಯಾನಗಳನ್ನು ಕಾಣಿಸಿಕೊಡುವಲ್ಲಿಯೂ ನೃತ್ತರತ್ನಾವಳಿಯ ಶ್ರಮ ವಿಶೇಷವಾದದ್ದು. ಸಂಗೀತರತ್ನಾಕರವು ಅಭಿನವಗುಪ್ತನ ಪರಂಪರೆಯನ್ನು ವಿಶೇಷವಾಗಿ ಪಾಲಿಸಿದ್ದನ್ನು ಗುರುತಿಸಬಹುದು. ಹಾಗೆಯೇ ಇಂದಿಗೆ ಲುಪ್ತವಾಗಿ ಹೋಗಿರುವ ಕೀರ್ತಿಧರ ಮತ್ತು ಭಟ್ಟತಂಡು, ಮತಂಗ, ಕೋಹಲರೆಂಬ ಪೂರ್ವಸೂರಿ ಗ್ರಂಥಕರ್ತರು ಬರೆದಿರಬಹುದಾದ ನೃತ್ತಭಾಗಗಳನ್ನು ಉದ್ಧರಿಸಿಕೊಳ್ಳುವಲ್ಲಿ ಜಾಯಪಸೇನಾನಿಯ ನೃತ್ತರತ್ನಾವಳಿಯು ಬಹಳ ಮಹತ್ತ್ವದ್ದೆನಿಸುತ್ತದೆ. ಕೆಲವೊಂದು ಲಕ್ಷಣ-ವಿಧಾನ-ವರ್ಗೀಕರಣಗಳಲ್ಲಿ ಚಾಲುಕ್ಯರಾಜ ಮೂರನೇ ಸೋಮೇಶ್ವರನ ಮಾನಸೋಲ್ಲಾಸ ಮತ್ತು ನೃತ್ತರತ್ನಾವಳಿಗಳ ನಡುವೆ ಸಾಮ್ಯ ಕಂಡುಬರುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಜಾಯನನು ನಾಟ್ಯಶಾಸ್ತ್ರದ ಅಧ್ಯಯನದಲ್ಲಿ ಬಹಳಷ್ಟು ಸಮಯ ಮೀಸಲು ಇಟ್ಟಿದ್ದನೆಂದೂ, ಅದರ ಹಲವಾರು ವ್ಯಾಖ್ಯಾನಗಳನ್ನು ಆಳವಾಗಿ ಪರಿಶೀಲಿಸುವುದು; ಮತ್ತು ಪ್ರತಿಯೊಂದೂ ತನ್ನ ಸಂಪ್ರದಾಯಕ್ಕೆ ಬದ್ಧವಾಗಿರುವ ವಿದ್ವಾಂಸರೊಂದಿಗೆ ಹೇರಳವಾಗಿ ಚರ್ಚಿಸುವುದು; ಅನೇಕ ಗುರುಗಳಿಂದ ಶಾಸ್ತ್ರದ ರಹಸ್ಯಗಳನ್ನು ಕಲಿಯುವುದನ್ನು ಮಾಡುತ್ತಿದ್ದನಂತೆ.

ಹೀಗೆ ತನ್ನ ವಿದ್ಯೆಯ ಬಗೆಗಿನ ಅಭಿಮಾನವೇ ‘ಭರತನು ತನ್ನ ಈ ಗ್ರಂಥವನ್ನು ಮುಂದೊಮ್ಮೆ ನೋಡಿದರೆ ಎಂಥ ಅದ್ಭುತ. ಜಾಯಸೇನಾನಿಯು ನನ್ನ ಹೃದಯವನ್ನು ಬಹಳ ಚೆನ್ನಾಗಿ ಅರ್ಥೈಸಿಕೊಂಡಿದ್ದಾನೆ’ ಎಂದು ಕೊಂಡಾಡುವನು’ ಎಂಬ ಸಾಲುಗಳನ್ನು ಬರೆಯಿಸಿದೆ. ಇಂಥ ಲಾಕ್ಷಣಿಕನನ್ನು ಮುಂದಿನವರು ಪರಾಮರ್ಶಿಸುವುದು ಆಶ್ಚರ್ಯವೇನಲ್ಲ ಬಿಡಿ.., ರಾಜಾ ಕುಂಭಕರ್ಣ, ವೇಮಭೂಪಾಲ, ತುಳಜೇಂದ್ರ ಮೊದಲಾದವರು ಜಾಯನನ್ನು ಸ್ಮರಿಸಿಕೊಂಡಿದ್ದಾರೆ.[2]

ಸಂಪಾದನ ಮತ್ತು ಪ್ರಕಟಣೆ

ಗ್ರಂಥದ ಹಸ್ತಪ್ರತಿಯನ್ನು ವಿದ್ವಾಂಸರು ಸಂಪಾದಿಸಿ ಪ್ರಕಟಿಸಿದ್ದು; ಇಂಗ್ಲಿಷ್ ಮತ್ತು ತೆಲುಗಿಗೂ ಅನುವಾದ ಮಾಡಲಾಗಿದೆ. ಇದಲ್ಲದೆ ಗೀತರತ್ನಾವಳಿ ಮತ್ತು ವಾದ್ಯರತ್ನಾವಳಿಗಳೆಂಬ ಗ್ರಂಥಗಳನ್ನೂ ರಚಿಸಿದ್ದಾನಾದರೂ ಅವುಗಳು ಇಂದಿಗೆ ದೊರೆತಿಲ್ಲ. ಆ ಪೈಕಿ ಗೀತರತ್ನಾವಳಿಯಲ್ಲಿ ನೃತ್ತಕ್ಕೆ ಸಂಬಂಧಿಸಿದ ಭ್ರಮರೀಭೇದಗಳ ಉಲ್ಲೇಖ ಅಪಾರವಾಗಿತ್ತು ಎನ್ನುವುದೂ ನೃತ್ತರತ್ನಾವಳಿಯಿಂದಲೇ ತಿಳಿದುಬರುತ್ತದೆ.

ಪರಾಮರ್ಶನ ಗ್ರಂಥಗಳು

ಮನೋರಮಾ ಬಿ.ಎನ್ ( 2022). ಯಕ್ಷಮಾರ್ಗಮುಕುರ.[3] ಉಜಿರೆ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ.

Ananthakrishna Sharma, Rallapalli (Ed.&Tr.) (1969). Nritta Ratnavali (Telugu) Hyderabad: Andhrapradesha Sangita Nataka Academy.

Raghavan, V (1965). Nritta Ratnavali of Jaya senapati. Madras: Government Oriental Manuscripts Library.

Rao, Venugopal, Pappu and Thakore, Yashoda (Ed.) (2013). Nritta Ratnavali of Jayasenapati. Warangal: Kakatiya heritage trust.

Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries.  Madras: Adyar Library.

  1.  https://www.youtube.com/watch?v=AcWcrPx5ZKI&ab_channel=NoopuraBhramari
  2.  ಯಕ್ಷಮಾರ್ಗಮುಕುರ. https://www.noopurabhramari.com/yakshamargamukura/
  3.  https://www.noopurabhramari.com/yakshamargamukura/ https://www.noopurabhramari.com/want-to-subscribe-noopura-bhramari-and-purchase-the-dance-books/

Leave a Reply

*

code