Author: ಮನೋರಮಾ. ಬಿ.ಎನ್
ಶತಾವಧಾನಿ ಡಾ |ಗಣೇಶ್ ಹೀಗೆ ಹೇಳುತ್ತಾರೆ. . .
ಇಂದಿನ ರಂಗ ಪ್ರವೇಶಗಳು ನೃತ್ಯದ ಬೊಜ್ಜ ಅಂದರೆ ಶ್ರಾದ್ಧ ಮಾಡ್ತಿವೆ.
ವಿದ್ಯಾರ್ಥಿಗಳೆಲ್ಲರೂ ಕಡ್ಡಾಯವಾಗಿ ನಾವು ರಂಗಪ್ರವೇಶಕ್ಕೆ ಇಷ್ಟೆಲ್ಲಾ ದುಬಾರಿ
ಖರ್ಚು ಮಾಡಿ ಮಾಡೋದಿಲ್ಲ ಅಂದ್ರೆ ಯಾತಕ್ಕಾಗೋದಿಲ್ಲ? ವಿದ್ಯಾರ್ಥಿಗಳಿಗೇ
ತಮ್ಮ ರಂಗ ಪ್ರವೇಶ ಮಿನಿಮದುವೆ ಆದ ಹಾಗಿರಬೇಕು ಅಂತಿರುತ್ತೆ ಅಂತಾದ
ಮೇಲೆ, ರಂಗ ಪ್ರವೇಶದ ಬೂಟಾಟಿಕೆಗಳನ್ನು ತಡೆಯೋದು ಹೇಗೆ?
ನಾಟ್ಯಾಚಾರ್ಯ ಕೆ. ಮುರಳೀಧರ ರಾವ್ ಅವರ ಅನಿಸಿಕೆ ಹೀಗಿದೆ…
ಮೊದಲು ರಂಗಪ್ರವೇಶದಲ್ಲಿ ನರ್ತಕಿಯ ನೃತ್ಯ ಅಭಿನಯ ಭಾಗದ ಜಾಣ್ಮೆ
ಮುಖ್ಯವಾಗಿತ್ತು. ಈಗೀಗಂತೂ ರಂಗ ಪ್ರವೇಶಕ್ಕೂ ಮದುವೆಗೂ ವ್ಯತ್ಯಾಸವೇ
ಇಲ್ಲ. ಒಂದೊಂದ್ಸಲ ರಂಗ ಪ್ರದರ್ಶನ ಕಂಡು ಸಂತೋಷಿಸಿದ ಹುಡುಗ ಅವಳನ್ನೇ
ಮದುವೆಯಾಗಿ ಮನೆ ತುಂಬಿಸಿಕೊಳ್ಳುವಲ್ಲಿಗೆ ರಂಗಪ್ರವೇಶದ ಮೂಲಕ ಕಲಿತ ವಿದ್ಯೆ
ಮರೆಯಾದ ಸಂದರ್ಭಗಳೂ ಇದೆ. ಒಟ್ಟಿನಲ್ಲಿ ಇದು ಸಮಾಜದಲ್ಲಿ ಸುಸಭ್ಯ ನೆಲೆ
ಪಡೆಯಲು ಪಡೆದಿರಬೇಕಾದ ಸಂಸ್ಕಾರ, ನೆಂಟಸ್ತನ ಕುದುರಲು ಒಂದು ವೇದಿಕೆ!
ಮೈಸೂರಿನ ಎಸ್‌ಎಲ್‌ಎ ಫ಼ೌಂಡೇಶನ್‌ನ ಕಾರ್ಯದರ್ಶಿ, ಕಲಾ ವಿಮರ್ಶಕ
ಬಿಎಸ್‌ಎಸ್ ರಾವ್ ಅವರ ಅಭಿಪ್ರಾಯ ಹೀಗಿದೆ…
ಭರತನ ನಾಟ್ಯಶಾಸ್ತ್ರದಲ್ಲಿ ಅರಂಗೇಟ್ರಂ ಅಥವಾ ರಂಗಪ್ರವೇಶದ ಕುರಿತಾಗಿ
ಪ್ರಸ್ತಾವನೆಯೇ ಇಲ್ಲ. ಅರಂಗೇಟ್ರಂ ಪ್ರಚಲಿತಕ್ಕೆ ಬಂದದ್ದೇ ದೇವದಾಸಿಯರ
ಕಾಲದಲ್ಲಿ! ಕಲಾಕ್ಷೇತ್ರದ ಗುರು, ಭಾರತದ ಮೇರು ನೃತ್ಯ ಕಲಾವಿದೆಯಾದ
ರುಕ್ಮಿಣೀದೇವಿ ಅರುಂಡೇಲರೂ ತಮ್ಮ ವಿದ್ಯಾರ್ಥಿಗಳಿಗಾಗಿ ಅರಂಗೇಟ್ರಂನನ್ನು
ಪ್ರೋತ್ಸಾಹಿಸಲಿಲ್ಲ. ಇಂದಿಗೂ ಅವರ ಆಪ್ತ ಶಿಷ್ಯವರ್ಗ ತಮ್ಮ ಶಿಷ್ಯರನ್ನು ಅಂತಹ
ಪ್ರದರ್ಶನಗಳನ್ನು ಆಯೋಜಿಸುವುದಿಲ್ಲ. ಅರಂಗೇಟ್ರಂ ಇಂದು ಬೇಗನೆ ಹಣ ಮಾಡಲು
ಹೊರಟ ಗುರುಗಳಿಗೆ ಇರುವ ವ್ಯಾಪಾರದ ಸರಕು. ಈ ಪಿಡುಗು ಕಲ್ಪನಾತೀತವಾಗಿ
ವ್ಯಾಪಕವಾಗಿ ಹರಡುತ್ತಿದ್ದು, ಯುಎಸ್‌ಎಯಂತಹ ವಿದೇಶಗಳಲ್ಲಿ ೧ ಲಕ್ಷ ಯುಎಸ್‌ಡಿ
ಅಂದರೆ ಅಂದಾಜು ೪೦,೦೦೦೦ ರುಪಾಯಿಗಳನ್ನು ಖರ್ಚು ಮಾಡುತ್ತಾರೆ. ಇದು
ಹುಚ್ಚುತನ ಅಷ್ಟೇ ಅಲ್ಲ, ದೈವಿಕ ಕಲೆಯೊಂದಕ್ಕೆ ಬಗೆಯುವ ದ್ರೋಹ!..