ಅಂಕಣಗಳು

Subscribe


 

ರುಕ್ಮಿಣೀ ಪಟ್ಟಕ್ಕೆ ಒಲಿಯಿತು ‘ದೇವಿ’- ಭಾಗ 6

Posted On: Saturday, October 17th, 2009
1 Star2 Stars3 Stars4 Stars5 Stars (No Ratings Yet)
Loading...

Author: Dr.Manorama, BN

(ರುಕ್ಮಿಣೀ ನೃತ್ಯ ರಂಗದ ಪಾಲಿಗೆ ಪ್ರವರ್ತಕಿ. ಭರತನಾಟ್ಯದ ಪ್ರವರ್ಧಮಾನಕ್ಕೆ ಮೂಲ ಸ್ರೋತ. ಶೃಂಗಾರ ರಸದ ಅತೀ ಎನಿಸುವ ಅಂಶಗಳನ್ನು ತೆಗೆದು ಹಾಕಿ ಭಕ್ತಿಶೃಂಗಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನಿತ್ತರು. ನೃತ್ಯ ಗ್ರಂಥಗಳಲ್ಲಿ ಉಪಲಬ್ಧವಿರುವ ಹಸ್ತ-ಮುದ್ರೆಗಳ ವಿನ್ಯಾಸಗಳನ್ನು ಕ್ರಮವತ್ತಾಗಿ ಜಾರಿಗೆ ತಂದರು. ಅಡವುಗಳನ್ನು ಪರಿಷ್ಕರಿಸಿ ಚೌಕಟ್ಟು ಹಾಕಿಕೊಟ್ಟರು. ವಯೋಲಿನ್‌ನ್ನು ಬಳಕೆಗೆ ಒಗ್ಗಿಸಿಕೊಂಡರು. ಮುಖ್ಯವಾಗಿ ನರ್ತಕಿಯ ಬಲಬದಿಗೆ ಹಿಮ್ಮೇಳದವರನ್ನು ಕುಳ್ಳಿರಿಸಿ ಸ್ಥಾನ ಕಲ್ಪಿಸಿದರು…)

ಸಾಂಪ್ರದಾಯಿಕ ಕಂದಾಚಾರಗಳು ಮುರಿದುಬೀಳಲಾರಂಭಿಸಿದ್ದವು. ಕ್ರಮೇಣ ತಮ್ಮ ಮಕ್ಕಳನ್ನು ಪೋಷಕರು ಕಲಾಕ್ಷೇತ್ರಕ್ಕೆ ನೃತ್ಯ ಕಲಿಯಲು ಕಳಿಸಲಾರಂಭಿಸಿದರು. ಮೊದಲೆಲ್ಲಾ ಪ್ರತಿಯೊಬ್ಬರ ಮನೆಗೆ ಹೋಗಿ ಟಿಕೆಟ್ ನೀಡಿದರೂ ಬರಲು ಒಪ್ಪದಿದ್ದ ಜನರ ಮನಸ್ಥಿತಿ ಬದಲಾಗುತ್ತಾ ಬಂತು. ರುಕ್ಮಿಣಿ ಎಂದರೆ ಸಾಕು, ಮೂಗು ಮುರಿಯುತ್ತಿದ್ದ ಮಂದಿಯೂ ಕಣ್ಣರಳಿಸಿ ನೋಡಹೊರಟರು. for-darpana-rukmi
ಸಾದಿರ್ ಕಾಲಕ್ಕೆ ದೇವದಾಸಿಗಳ ಮೈಮೇಲೆ ಹೇರಲಾಗುತ್ತಿದ್ದ ಮಣಭಾರದ ಕಾಮಪ್ರಚೋದಕ ವೇಷಭೂಷಣಗಳೂ, ಅತೀ ಎನಿಸುವ ಅಲಂಕಾರಗಳೂ ಮರೆಯಾಗುತ್ತಾ ಬಂದಿತ್ತು. ಸರಳ ಉಡುಗೆ, ನಿರ್ದಿಷ್ಟ ಬಗೆಯ ಆಭರಣಗಳನ್ನು ಬಳಸುವ ಚಾಲ್ತಿ ಹೆಚ್ಚು ಹತ್ತಿರವಾಯಿತು. ಅದರಲ್ಲೂ ಭರತನಾಟ್ಯಕ್ಕೆ ಇಟಾಲಿಯನ್ ವಿನ್ಯಾಸಕಿ ಮೇಡಮ್ ಕಸಾನ್ ಸಹಾಯದಿಂದ ರುಕ್ಮಿಣಿ ನವೀನ ಬಗೆಯ ಸುಂದರವಾದ ವಸ್ತ್ರಗಳನ್ನು ರೂಪಿಸಿದರು. ಇಂದಿಗೂ ಕೆಲವು ಸಣ್ಣ ಪುಟ್ಟ ಮಾರ್ಪಾಡಿನೊಂದಿಗೆ ಅವರೀರ್ವರೂ ನಿರೂಪಿಸಿಕೊಟ್ಟ ವಸ್ತ್ರಾಭರಣಗಳೇ ಚಾಲ್ತಿಯಲ್ಲಿವೆ.
ಕಲಾವಿದರನ್ನು ಗುಣಮಟ್ಟದ ಆಕರ್ಷಣೆಯೊಂದಿಗೆ ಬಿಂಬಿಸಬೇಕಾದರೆ, ಒಳ್ಳೆಯ ನಿಲುವುಗಳನ್ನು ಕೊಡಬೇಕಾದರೆ ರಂಗ ಮತ್ತು ಬೆಳಕಿನ ವ್ಯವಸ್ಥೆ ಅತೀ ಮುಖ್ಯ ಎಂಬ ಅರಿವೂ ರುಕ್ಮಿಣಿಗೆ ಇತ್ತು. ಹಾಗಾಗಿಯೇ ಥಿಯೋಸೋಫಿಕಲ್ ಸೊಸೈಟಿಯಲ್ಲಿದ್ದ ರಂಗನಟರಾದ ಕಾನ್ರಾಡ್ ವೋಲ್ಡ್ರಿಂಗ್, ಅಲೆಕ್ಸ್, ಮೇರಿ ಎಲ್ಮೋರ್ ಇವರುಗಳ ಸಹಾಯದಿಂದ ಬೆಳಕು ವ್ಯವಸ್ಥೆಯ ರೀತಿ-ನೀತಿಗಳನ್ನು ಪರಿಣಾಮಕಾರಿಯಾಗಿ ಬಳಕೆಗೆ ತಂದರು.

ಸಾದಿರ್ ಪ್ರವರ್ತಕರಲ್ಲೊಬ್ಬರಾದ ಪೊನ್ನಯ್ಯ ಪಿಳ್ಳೈ

ಸಾದಿರ್ ಪ್ರವರ್ತಕರಲ್ಲೊಬ್ಬರಾದ ಪೊನ್ನಯ್ಯ ಪಿಳ್ಳೈ

ಸುಧಾರಣೆಗಳನ್ನು ಮಾಡಿದರೆ ಸಾಕೇ? ಅದನ್ನು ಭವಿಷ್ಯದಲ್ಲೂ ಪರಿಪಾಲಿಸಿಕೊಂಡು ಹೋಗಲು ಒಳ್ಳೆಯ ಪರಂಪರೆ ಬೇಕಲ್ಲವೇ? ಹಾಗಾಗಿಯೇ ಕಂದಾಚಾರಗಳನ್ನಿಟ್ಟುಕೊಂಡು ಪ್ರಭುತ್ವ ಸಾಧಿಸಲೆತ್ನಿಸುತ್ತಿದ್ದ ಗುರುಗಳನ್ನು ಕಲಾಕ್ಷೇತ್ರದಲ್ಲಿ ಪಾಠ ನಡೆಸಲು ರುಕ್ಮಿಣೀ ಉಳಿಸಿಕೊಳ್ಳುತ್ತಿರಲಿಲ್ಲ. ಮಾತ್ರವಲ್ಲದೆ, ಕ್ರಮೇಣ ಪೂರಕ ಕಲೆಗಳ ಶಿಕ್ಷಣಕ್ಕೂ ಅವಕಾಶ ವ್ಯಾಪಕವಾಗಿ ದೊರೆಯಿತು. ಅಂಬು ಪಣಿಕ್ಕರ್, ಚಂದು ಪಣಿಕ್ಕರ್ ಅವರಂತಹ ಕಥಕ್ಕಳಿಯ ಮೇರು ಗುರುಗಳು ರುಕ್ಮಿಣೀಗೆ ಹೆಗಲು ಕೊಟ್ಟರು. ಕಾಳಿದಾಸ ನೀಲಕಂಠ ಅಯ್ಯರ್, ಪಾಪನಾಶಂ ಶಿವನ್ ಮುಂತಾದ ಮಹಾನ್ ಗುರುಗಳು ಅರುಂಡೇಲ್ ಅವರ ಪ್ರದರ್ಶನಗಳಿಗೆ ಸಂಗೀತ, ತಾಳಕ್ಕೆ ಜೊತೆಯಾದರು.
ಸಂಗೀತ ರುಕ್ಮಿಣೀ ಅರುಂಡೇಲ್ ಅವರ ಮೊದಲ ಆಸಕ್ತಿ. ನೃತ್ಯವು ಸಂಗೀತಕ್ಕೆ ದೃಶ್ಯ ರೂಪ ಕೊಡುವ ಸಾಧನ ಎಂಬುದು ಅವರ ನಂಬಿಕೆ. ಟೈಗರ್ ವರದಾಚಾರ್ಯ, ಮೈಸೂರು ವಾಸುದೇವಾಚಾರ್ಯ, ಮಧುರೈ ಸುಬ್ರಹ್ಮಣ್ಯ ಅಯ್ಯರ್, ವೀಣಾ ಕೃಷ್ಣಮಾಚಾರ್ಯ, ಟಿ. ಕೆ. ರಾಮಸ್ವಾಮಿ ಅಯ್ಯಂಗಾರ್, ವೀಣಾ ಸಾಂಬಶಿವ ಅಯ್ಯರ್, ಬುಡಲೂರು ಕೃಷ್ಣಮೂರ್ತಿ ಶಾಸ್ತ್ರಿ, ರಾಜಾರಾಮ್, ಎಂ.ಡಿ. ರಾಮನಾಥನ್, ತುರೆಯೂರು ರಾಜಗೋಪಾಲ ಶರ್ಮ ಮುಂತಾದ ಗುರುಗಳು ಸಂಗೀತ ಅಭ್ಯಾಸಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು.
ರುಕ್ಮಿಣೀಯಲ್ಲಿರುವ ಶಕ್ತಿಯನ್ನು ಗುರುತಿಸಿದ್ದರು ಥಿಯೋಸೋಫಿಕಲ್ ಸೊಸೈಟಿಯ ಪ್ರವರ್ತಕಿ ಆನಿ ಬೆಸೆಂಟ್. ಆದಾಗಲೇ ಥಿಯೋಸೋಫಿಕಲ್ ಸೊಸೈಟಿಯ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ರುಕ್ಮಿಣೀಗೆ ಅಂದಿನ ಕಾಲಕ್ಕೆ ಮೊದಲು ಒಲಿದು ಮುಡಿಗೇರಿದ ಪಟ್ಟ ಯಾವುದೆಂದುಕೊಂಡಿರಿ ?
‘ದೇವಿ’ !
for-darpana-rukmini-devi-arundaleರುಕ್ಮಿಣೀ ವಿಶ್ವ ಮಾತೃ ಸಪ್ತಾಹದ ನಾಯಕಿಯಾಗಿದ್ದರು. ರಾಷ್ಟ್ರದ ಪ್ರತಿನಿಧಿಯಾಗಿ ಮಹತ್ತರ ಜವಾಬ್ದಾರಿ.
ಅಂದಿನಿಂದ ರುಕ್ಮಿಣೀ ಅರುಂಡೇಲ್  ‘ರುಕ್ಮಿಣೀದೇವಿ ಅರುಂಡೇಲ್’ !

Leave a Reply

*

code