ಅಂಕಣಗಳು

Subscribe


 

ವಿಚಿತ್ರವಚನಾ, ವೇಷಧಾರಿಣಿ, ಮಣಿಹಾರಿಣಿ ಮತ್ತು ಮಾಲಿನಿಸಖಿ

Posted On: Friday, November 20th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 109ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ನಾಯಿಕಾ-ನಾಯಕಾವಸ್ಥೆಗೆ ಪೂರಕವೂ, ಪ್ರೇರಕವೂ, ಪೋಷಕವೂ ಆದ ಸಖ್ಯಾಭಿವ್ಯಕ್ತಿಯ ಸಂಚಿಕೆಗಳಲ್ಲಿ ಇದೂ ಒಂದು. ಈ ಸಂಚಿಕೆಗಳಲ್ಲಿ ಪ್ರಧಾನವಾಗಿ ಸಖಿ/ಗೆಳತಿ/ನೆರೆಮನೆಯಾಕೆ/ಹಿತಚಿಂತಕಿ/ದಾಸಿ ಹೀಗೆ ಅನೇಕರನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಈಕೆಯ ಪಾತ್ರ, ಲಕ್ಷಣದ ಕುರಿತಾಗಿ ನಾಟ್ಯಶಾಸ್ತ್ರದಿಂದ ಮೊದಲ್ಗೊಂಡು, ಪಂಡರೀಕ ವಿಠಲನ ದೂತೀಕರ್ಮಪ್ರಕಾಶದ ವರೆಗೂ ಸಖಿ/ದೂತಿಯರ ಅನೇಕ ಪ್ರಸ್ತಾಪವಿದೆ. ಜಯದೇವನ ಗೀತಗೋವಿಂದದಲ್ಲಿ ಸಖಿ ಗುರುಸಮಾನಳೆಂಬ ತತ್ತ್ವಾರ್ಥವನ್ನೂ ಕಾಣಬಹುದಾಗಿದೆ. ನಾಯಿಕೆ-ನಾಯಕರ ಸಮಾಗಮ ಮತ್ತು ಬೇರ್ಪಡುವಿಕೆಯ ಹಿನ್ನೆಲೆಯಲ್ಲಿ ಇವಳ ಪಾತ್ರವಿದ್ದು; ಇವಳ ಮಾತುಗಳೇ  ಪದ್ಯಗಳ ರೂಪದಲ್ಲಿ ಹರಿದುಬಂದಿದೆ. 

ಈ ಕೆಳಕಂಡ  ರಚನೆಗಳನ್ನು ಮೊತ್ತಮೊದಲ ಬಾರಿಗೆ ಪಂಡರೀಕ ವಿಠಲನ ದೂತೀಕರ್ಮಪ್ರಕಾಶವೆಂಬ ದೂತಿಯರಿಗೆ ಮೀಸಲಾದ ಲಕ್ಷಣಗ್ರಂಥದ ಕುರಿತ ಶಾಲಿನೀ ವಿಠಲ್ ಅವರ ಸಿಸಿಆರ್ಟಿ ನೃತ್ಯಸಂಶೋಧನೆಯ ಅಂಗಭಾಗವಾಗಿ ಮುಕ್ತಕಗಳಂತೆ ಬರೆಯಿಸಿ ನರ್ತಿಸಲಾಗಿತ್ತು. ಡಾ.ಶೋಭಾ ಶಶಿಕುಮಾರ್ ಅವರು ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ ಅವರ ರಾಗಸಂಯೋಜನೆಗೆ ನೂಪುರ ಭ್ರಮರಿಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾಗೌರಿ ಸಭಾಂಗಣದಲ್ಲಿ ಅಭಿನಯಿಸಿದ್ದರು.  ದೂತಿಯರ ಪುನರ್ ನವೀಕರಣಕ್ಕೆ ಸಂಬಂಧಿಸಿದಂತೆ  ಲಕ್ಷಣಕ್ಕೆ ಅನುಸಾರವಾಗಿ ಮಾಡಲಾದ ರಚನೆಗಳು ಇದಾಗಿದ್ದವು. ನೃತ್ಯದಲ್ಲಿ ಬಹು ಸೊಗಸಿನ ಪ್ರಸ್ತುತಿಯಾಗಿದ್ದ  ಅವುಗಳ ವಿಡಿಯೋ ಸರಣಿ ಇಲ್ಲಿದೆ. https://www.facebook.com/shaaledotcom/videos/315175349155926/ 

https://m.facebook.com/story.php?story_fbid=1233925860096535&id=139783552784864

ಇಂದಿನ ದೂತಿಯರೆನಿಸಿಕೊಂಡ ಸಖಿಯರು ನಾಲ್ಕು ಮಂದಿ : ವಿಚಿತ್ರವಚನಾ, ವೇಷಧಾರಿಣಿ, ಮಣಿಹಾರಿಣಿ ಮತ್ತು ಮಾಲಿನಿ . ಇವರು ನಾಯಕ ಮತ್ತು ನಾಯಿಕೆಯರು ಪರಸ್ಪರ ಜೊತೆಗೂಡುವಲ್ಲಿ ಬರುವ ಅಡ್ಡಿ ಆತಂಕಗಳಿಗೆ ತಮ್ಮದೇ ಆದ ಪರಿಹಾರೋಪಾಯಗಳನ್ನು ಕೈಗೊಂಡು ಪ್ರಯತ್ನಶೀಲರಾಗಿ ಕಾರ್ಯಕ್ಕೆ ಮುನ್ನುಗ್ಗಿದವರು.  

ಒಗಟಿನಂತಹ  ಮಾತಿನ ಜಾಣ್ಮೆಯಿಂದ ದೌತ್ಯವನ್ನು ನಿರ್ವಹಿಸುವ ಜಾಣೆ : ವಿಚಿತ್ರವಚನಾ. ಇಲ್ಲಿ ’ಗೂಳಿ’ (ನಾಯಕ), ಲಕ್ಷ್ಮಿಯಜ್ಜಿಯ ಮನೆಯಾಚೆ  (ಲಕ್ಷ್ಮಿ ಹುಟ್ಟಿದ  ನೀರಿನ ತಟಾಕ) ವಿಚಿತ್ರವಚನರಚನೆಗಳು.

ಬಲು ದಿನದಿಂ  ನೀಂ ಕಾಣಲು ಬಯಸಿದ
ಚೆಲುವು-ಬಲ್ಮೆಗಳ ಗೂಳಿಯದೋ |
ಕೆಳದಿ! ಲಕ್ಷ್ಮಿಯಜ್ಜಿಯ ಮನೆಯಾಚೆಯೆ
ಸುಳಿದಿದೆ, ಬಾ ನೋಡಲು ಜವದೆ||

ದೌತ್ಯಸಾಧನೆಗೆಂದು ನಿಜ ನಡೆ ನುಡಿಯನ್ನು ಮರೆಮಾಚಿ ವೇಷ ಧರಿಸುವವಳು : ವೇಷಧಾರಿಣಿ. ಈಕೆಯು ನಾಯಿಕೆಯನ್ನು ಭೇಟಿ ಮಾಡುವಲ್ಲಿ ತಡೆಗೊಡೆಯಾಗಿರುವ ಹಿರಿಯರನ್ನು, ಕಾವಲುಗಾರರನ್ನು ನಿವಾರಿಸಿಕೊಂಡು ಹೋಗಲು ಪ್ರಸಾದ ನೀಡುವ  ಪುರೋಹಿತನ ವೇಷಧರಿಸಿದ್ದಾಳೆ.

ಚದುರೆ ದೂತಿ ನಾಯಿಕೆಡೆ  ಸಾಗಲು
ಪದಪಿಂ ಸಂದೇಶವನೊರೆಯಲ್|
ಪ್ರಸಾದವೀಯುವ ಪುರೋಹಿತನವೊಲ್
ಹಸನ್ಮುಖದೆ ನಡೆದಿರುವಳಿದೋ ||

ಬಗೆಬಗೆಯಾದ ಹೂವುಗಳ ಮಾಲೆ ಮತ್ತು ಗುಚ್ಛದ ಮೂಲಕ ಇಲ್ಲವೇ ಪುಷ್ಪಗಳ ಸಂಕೇತದಿಂದಲೇ ಪ್ರೇಮದೌತ್ಯವನ್ನು ಸಾಧಿಸುವವಳು :  ಮಾಲಿನಿ.  ಇಲ್ಲಿ ಮಲ್ಲಿಗೆ  ಮತ್ತು ನೈದಿಲೆಗಳು ವಸಂತಕಾಲದ ಪೂರ್ಣಿಮೆಯಂದು ಪ್ರೇಮಿಯನ್ನು ಸಂಧಿಸಬೇಕೆಂದು ಹೇಳುವ ಕುರುಹುಗಳು. 

ವಸಂತಪೂರ್ಣಿಮೆಯಂದು ನಲ್ಲನೆಡೆ
ಲಸದ್ರಾಗದೊಳು ಸಾಗೆನಲು/
ಮಲ್ಲಿಗೆಯೊಡನಿದೊ ಬೆಳ್ನೈದಿಲೆಯನು
ಚಲ್ಲಗಾರ್ತಿ ನಾಯಿಕೆಗೀವಳ್ ||

ಬಗೆಬಗೆಯಾದ ಬಳೆ, ಮಣಿ, ಮುತ್ತು ಮಾಲೆಗಳನ್ನು ಪೋಣಿಸಿ, ಅಲಂಕರಿಸಿ, ಧರಿಸಿಕೊಡುವವಳಂತೆ ಬಂದು  ಆ ಮೂಲಕ ದೌತ್ಯವನ್ನು ತಲುಪಿಸುವವಳು : ಮಣಿಹಾರಿಣಿ.  ಇಲ್ಲಿ ಈಕೆ ಬಳೆಗಾತಿ. 

ಬಳೆಗಳ ತೊಡಿಸುವ ನೆವದೊಳು ಬಂದಳು
ನಳಿನಮುಖಿಯೀಕೆ ಬಲುಜಾಣೆ |
ಸುಳಿದಿರೆ ಹಿರಿಯರು, ಬೆರಳ ಸನ್ನೆಯೊಳೆ
ತಿಳಿಸುವಳಂಗೈಯೊಳೆ ಬರೆದು ||

 

 

 

 

Leave a Reply

*

code