ಅಂಕಣಗಳು

Subscribe


 

ಸ್ವಾಸ್ಥ್ಯಸಖಿ

Posted On: Sunday, October 18th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 93ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  : ನಾಯಿಕಾ-ನಾಯಕರ ನಡುವಿನ ವೈಮನಸ್ಯವು ಶಾಶ್ವತವಲ್ಲವೆಂದು ಹಿತನುಡಿಗಳನ್ನಾಡಿದ್ದ ಸಖಿಯ ಮಾತಿನಂತೆಯೇ ಎಲ್ಲವೂ ಸುಖಾಂತ್ಯವಾದ ಹಿನ್ನೆಲೆಯಲ್ಲಿ ಸಖಿ ತನ್ನ ವಿಶ್ವಾಸದ ಮಾತುಗಳನ್ನು ಮತ್ತೊಮ್ಮೆ ಆಡುತ್ತಿದ್ದಾಳೆ. ಪತಿ ಪತ್ನಿಯರ ಜಗಳ ಉಂಡು ಮಲಗುವ ತನಕ ಎಂಬ ಗಾದೆಯಂತೆಯೇ, ಯಾರ್ಯಾರೋ ತಂದಿಟ್ಟ ಗಲಾಟೆಗಳು ನಾಯಿಕೆ-ನಾಯಕರ ಅನುರಾಗದ ಮುಂದೆ ಕ್ಷುಲ್ಲಕವೆಂದೂ, ಮೈತ್ರಿಯು ಕ್ಷಮೆಯಲ್ಲಿಯೇ ನೆಲೆಸಿದೆಯೆಂದೂ ದಾಂಪತ್ಯ ಸ್ವಾಸ್ಥ್ಯದ ತಿಳುವಳಿಕೆಯನ್ನ ಹೇಳಿದ್ದಾಳೆ. ದಾಂಪತ್ಯದಲ್ಲಿ ಕಹಿಯೂ ಒಂದು ರುಚಿ, ಜಗಳವಾಡುವುದ ಒಂದು ರತಿಲೀಲೆಯೆಂಬ ಹಿತವಾಕ್ಯವನ್ನಾಡಿದ್ದಾಳೆ ಈ ಅನುಭವಿ ಗೆಳತಿ.

ಸ್ವಾಸ್ಥ್ಯಸಖಿ

ರಾಗ: ಮಧ್ಯಮಾವತಿ ; ತಾಳ : ಮಿಶ್ರಛಾಪು

ಅಂದೇ ನಾನೆನ್ನಲಿಲ್ಲವೇ – ಈ ವೈಮುಖ್ಯ

ಕುಂದಿ ಮರೆಯಪ್ಪುದೆಂದು||  ||

 

ಗಂಡಹೆಂಡಿರ ವೈರವುಂಡು ನಿದ್ರಿಪಲ್ಲಿಗೆ

ಕಂಡೂ ಕಾಣದ ಕಸಿವಿಸಿ ತಾತ್ಕಾಲಿಕ || ಅ.ಪ ||

 

ನಿಮಗಾಗದವರಾರೊ ತಂದಿಟ್ಟದ್ದೀ ತಂಟೆ

ಸಮನಿಲ್ಲ ನಿಮ್ಮನುರಾಗಕ್ಕಿಡೀ |

ಕ್ಷಮೆಯಲ್ಲಿ ನೆಲಸಿರ್ಪ ದಂಪತಿಯರ ಮೈತ್ರಿ

ಸುಮಬಾಣ ರತಿಯರ್ಕಳೇಂ ? || ೧||

 

ಆದೊಡೇಂ ಹಿತವಾಕ್ಯವೊಂದನ್ನು ಲಾಲಿಸು

ಕಾದುವುದೂ ಒಂದು ರತಿಲೀಲೆಯೇ !

ಮಾದಕದಾಂಪತ್ಯಭೋಜನದೊಳಿದುವೇ

ಸ್ವಾದು ದಲ್ ತಿಕ್ತರುಚಿ ಮಿತಿಯಲ್ಲಿಯೇ !    || ೨||

 

Leave a Reply

*

code