ಅಂಕಣಗಳು

Subscribe


 

ವಿಡಂಬನಕುಟುಂಬಿನೀ

Posted On: Thursday, July 30th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 73ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ಪತಿಯಿಂದ ಪ್ರಣಯ ಚೇಷ್ಟೆಗಳನ್ನು ಬಯಸುವ ಪ್ರಗಲ್ಭಾ ಸ್ವೀಯಾ ನಾಯಿಕೆಯು ಪತಿಯ ಮುಗ್ಧತನವನ್ನು ಹೇಳುತ್ತಾ ತನ್ನ ದಾಂಪತ್ಯಚೋದ್ಯವನ್ನು ಸಖಿಯೊಂದಿಗೆ ಹೇಳಿಕೊಳ್ಳಲಾರದೆ ಹೇಳಿಕೊಂಡಿದ್ದಾಳೆ. ಅದರೊಳಗೂ ಕಟ್ಟಳೆ ಅತಿಯಾಗಿಯೇ ಇರುವ ಅವಿಭಕ್ತ ಕುಟುಂಬದ ತನ್ನ ಸಂಸಾರದಲ್ಲಿ ಪ್ರೇಮಭೋಜನವನ್ನು ತಾನೇ ಬಡಿಸಿ ಬಾಯಿಗೆ ತಿನ್ನಿಸಬೇಕಾದದ್ದಕ್ಕೆ ಹಳಹಳಿಸಿದ್ದಾಳೆ. ಈ ಕುರಿತಾಗಿ ಬಗೆಬಗೆಯಾದ ಮಾರ್ಗವನ್ನಾಂತು ತಿಳಿಯಪಡಿಸಲು ಯತ್ನಿಸಿದರೂ ಅದೆಲ್ಲವೂ ನಿಷ್ಫಲವಾಗಿದೆಯೆಂದು ಈ ವಿಪ್ರಲಬ್ಧೆ ವಿಡಂಬನೆಯನ್ನು ಮಾಡಿದ್ದಾಳೆ.

ವಿಡಂಬನಕುಟುಂಬಿನೀ

ರಾಗ: ತಿಲಕ್ ಕಾಮೋದ್ ; ತಾಳ : ರೂಪಕ

ಏನೆನ್ನಲಿ ಸಖಿ ! ಏನೆನ್ನಲಿ ?

ಈ ನನ್ನ ದಾಂಪತ್ಯಚೋದ್ಯವನು ಮ-

-ತ್ತೇನೆನ್ನಲಿ ಸಖಿ ! ಏನೆನ್ನಲಿ ?  || ಪ ||

 

ನಾನೇ ಮುಂದಾಗಬೇಕಾಗಿರ್ಪುದು

ಮಾನಾಂಚಲವ ನೀಗಬೇಕಿರ್ಪುದು

ಆ ನಾಥನೋ ಮುಗ್ಧಲಜ್ಜಾಭರ

ಶ್ರೀನಾಥಸುತನೋ ಅತಿದುರ್ಭರ  ||೧  ||

 

ಒಟ್ಟಾದ ಸಂಸಾರವದು ಸಂತತ

ಕಟ್ಟುನಿಟ್ಟಿಂದ ನೇರ್ಪಾದ ಗುರುಶಾಸನ

ಅಟ್ಟು ಮತ್ತೆಲೆಯಲ್ಲಿ ಬಡಿಸಿರ್ಪುದ –

-ನ್ನಿಟ್ಟು ತಿನ್ನಿಸೆ ಕಾಯ್ವುದಂ ಕಂಡೆಯಾ? ||೨ ||

 

ಸೂಚಿಸಿದ್ದಾಯಿತು; ವಾಚಿಸಿದ್ದಾಯಿತು

ರೋಚಿಸಿದ್ದಾಯಿತು ವಿಷಯಗಳ |

ಪೇಚಿಗೆ ಸಿಲ್ಕಿಸಿ ವಿರಚಿಸಿದ್ದಾಯಿತು

ಗೋಚರಿಸದು ಮತ್ತೆ ಮತಿಗೇನೂ  || ೩ ||

Leave a Reply

*

code