ಅಂಕಣಗಳು

Subscribe


 

ಆತ್ಮಾಭಿಮಾನೆ

Posted On: Friday, July 24th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 69ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಿಕೆ ಏಕಕಾಲಕ್ಕೆ ನಾಯಕನೆಡೆಗಿನ ಪ್ರೀತಿಯನ್ನು ಸಖಿಯ ಬಳಿ ಸೂಚಿಸುತ್ತಲೇ ತನ್ನ ಹೆಚ್ಚುಗಾರಿಕೆಯನ್ನು ಕೊಚ್ಚಿಕೊಳ್ಳುವಂತಿದೆ ಈ ರಚನೆ. ತನ್ನ ಪ್ರೀತಿ ಎಷ್ಟೊಂದು ಅಮೂಲ್ಯವೆನ್ನುವುದನ್ನು ಸಾರುತ್ತಾ, ತನ್ನಂಥ ಲಲನೆಯ ಮೋಹಿಸಲಾಗದ ಅವನು ಅರಸಿಕನೇ- ಇಡಿಯ ಲೋಕವನ್ನು, ಅವನನ್ನು ಕಾಮಿಸಿ ಬರುವ ತರುಣಿಯರನ್ನು ಬೆರಳಿನ ಮೆಲೆ ಕುಣಿಸಿದರೂ ತನ್ನ ಸೊಗಸು ಸಿಗದೆ ಹೋದರೆ ನಗೆಗೇಡೆನಿಸೀತು  ಎಂದೆಲ್ಲಾ ಈ ಪ್ರಗಲ್ಭೆ  ಪ್ರಶ್ನಿಸಿದ್ದಾಳೆ. ಅವನಿನ್ನೂ ತನ್ನನ್ನು ಒಪ್ಪಿ ಬಳಿ ಸಾರದೇ ಹೋದರೂ ಅವನೆಡೆಗಿನ ಮೋಹದ ಧ್ವನಿಯನ್ನು ಸೂಚಿಸುತ್ತಲೇ ತನ್ನೆಡೆಗಿನ ಅಭಿಮಾನವನ್ನು ಬಿಟ್ಟುಕೊಡದ ಧೀರೆ ಈಕೆ.

ಆತ್ಮಾಭಿಮಾನೆ

ರಾಗ: ಕಾಪಿ ; ತಾಳ: ಆದಿ

ಎನ್ನಂಥ ಲಲನೆಯ ಮೋಹಿಸಲಾಗದ-

-ನ್ನಿನೆಂಥ ಅರಸಿಕನೇ? ವರಪುರುಷನೆ ಸಖಿಯೇ ? ||ಪ||

 

ಜಗದೆಲ್ಲ ಪೆಣ್ಗಳು ಜತೆಯಾದರೂ ಅವ –

ನಿಗೆ ನನ್ನ ಸೊಗ ಸಿಗದೆ ನಗೆಗೇಡೆನಿಸದೇ? || ಅ.ಪ||

 

ಬೆರಳಿನ ತುದಿಯೊಳಗವನೀ ಅವನಿಯ

ತರುಣೀಲೋಕವ ಕುಣಿಸುಗೆ ಪೋ !

ನಿಡುಜಡೆತುದಿಗಾ ಬಡಿವಾರಗಳನು

ಬಡಿಯಿಸಿಕೊಳ್ಳದೆ ಬೆಡಗಿಹುದೇಂ ||೧ ||

 

ಆತನ ಕಾಲ್ಗಳ ಧೂಳಿಗಳಾಗಲಿ

ಪ್ರೀತಿಸಿ ಬಾನಿನ ಬೆಡಗಿಯರು |

ಬೀಳದೆ ನನ್ನೀ ಗೆಜ್ಜೆಯ ಕಾಲಿಗೆ

ಬಾಳುವನೆಂತಾ ಬಿಂಕದವಂ?    ||೨ ||

 

ಮೀಸೆಯ ಮುರಿತಕೆ ಮೋಜಿನ ಮಣಿತಕೆ

ಆಸೆಯ ನೋಟಕೆ ಅಂಗನೆಯರ್ |

ದಾಸಿಯರಾಗಲಿ; ದಾಸನಾಗದೆ ಎನ್ನಾ

ವಾಸಿಯೆನಿಪನೇಂ ವಲ್ಲಭನು? || ೩||

Leave a Reply

*

code