ಅಂಕಣಗಳು

Subscribe


 

ರತಿಹತೆ

Posted On: Tuesday, July 7th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 56ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಲ್ಲನನ್ನು ಬಯಸಿದ್ದೇ ತಪ್ಪಾಯಿತು ಎಂದು ತನ್ನೊಳಗೆ ಇಲ್ಲವೇ ಸಖಿಯಲ್ಲಿ ಬೈಯುತ್ತಿರುವ ಈ ನಾಯಿಕೆ ಮೇಲ್ನೋಟಕ್ಕೆ ಖಂಡಿತೆಯಂತೆ ತೋರಿದರೂ ಆಕೆಯ ಇಲ್ಲಿನ ಭಾವ ರತಿಯಲ್ಲಿಲ್ಲ. ಪರಕೀಯೆಯಂತೆ ಈಕೆ ಕಂಡರೂ ನಾಯಕನನ್ನು ಬಯಸಿದ ಪರಿಣಾಮ ತನ್ನ ಪತಿ, ತವರು ಮನೆ, ಗಂಡನಮನೆ, ಬಂಧುವರ್ಗ, ಗೆಳತಿಯರು, ನೆರೆಹೊರೆಯವರೆಲ್ಲ ಹಳಿಯುವಂತಾಗಿದೆಯೆಂಬ ಮಟ್ಟಿಗೆ ಹಲುಬುತ್ತಿದ್ದಾಳೆ. ಹಾಲನೂಡುವ ಎಳೆಯ ಕಂದನೂ ಬಳಿಗೆ ಬರದಂತಾಗಿದೆ. ಇಷ್ಟು ದಿನ ತನ್ನನ್ನು ಅಲಂಕರಿಸಿದ್ದ ಶೀಲವತಿಯೆಂಬ ಪಟ್ಟ ಇಂದಿಗೆ ದೂರ ಸರಿದಿದೆ ಎಂದು ಕೊರಗುತ್ತಿದ್ದಾಳೆ. ಈಕೆ ರತಿಯನ್ನು ಬಯಸಿ ಅದರಿಂದ ಹತಳಾದ ಅಂದರೆ; ಅದರಿಂದಲೇ ತನ್ನ ಸ್ಥಾನಮಾನವನ್ನು ಕಳಕೊಂಡ ನಾಯಿಕೆ.

ರತಿಹತೆ

ರಾಗ: ಭೈರವಿ ; ತಾಳ : ಖಂಡಛಾಪು

ಇನ್ನೇನು ಬೇಕಾಗಿದೆ? ನಿಷ್ಕರುಣಂಗೆ

ಇನ್ನಿಷ್ಟು ಸಾಕಾಗದೇ? ಆ ಕಠಿನಂಗೆ ||ಪ||

 

ಇನ್ನೇನನಿನ್ನೆಷ್ಟನವ ಕಂಡು ಮುದಗೊಂಡು

ಎನ್ನ ಸನ್ನಿಧಿಗೆಂದು ತಾ ಬರ್ಪನೆಂದು ||ಅ.ಪ||

 

ತಂದೆ ತಾಯ್ಗಳು ತಿಳಿದು ಬಂಧುವರ್ಗವು ಹಳಿದು

ಕೊಂದು ಕೂಗಲು ನಂಟರೀ ಕುಲದ ಛಲವಂ |

ಅಕ್ಕಪಕ್ಕದ ಜನರು ಮುಕ್ಕುಳಿಸೆ ನಿಂದೆಗಳು

ನಕ್ಕು ಲೇವಡಿಸಿರಲು ಮೈತ್ರೀನಟಿಯರು ||೧ ||

 

ಅಟ್ಟಿ ಮೆಟ್ಟಿರೆ ನಾಥನಿಟ್ಟು ಸುಟ್ಟಿರೆ ಬೀಗ-

ರೊಟ್ಟು ಸೇರುತ ದೂರಲೀ ಧೂರ್ತಲೋಕ |

ಶೀಲವತಿಯಾ ಪಟ್ಟ ಕೀಲು ಕಳಚುತ ಬಿತ್ತು

ಪಾಲನೂಡುವ ಕಂದ ಬಳಿಸುಳಿಯದಾದ ||೨ ||

**********************

 

 

Leave a Reply

*

code