ಅಂಕಣಗಳು

Subscribe


 

ಪ್ರೇಮೋನ್ಮಾದಿನಿ

Posted On: Sunday, July 5th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 54ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ– ಮನ್ಮಥರೂಪನಾಗಿರುವ ನಾಯಕನನ್ನು ಕಂಡ ನಾಯಿಕೆಯ ಹೃದಯಕ್ಕೇ ಸವಿಯಾದ ಬೆಂಕಿ ಇಟ್ಟಂತಾಗಿದೆ. ಆತನನ್ನು ನೋಡಿದಾಕ್ಷಣ ಹೊರಹೊಮ್ಮಿರುವ ಪ್ರೇಮೋನ್ಮಾದಕ್ಕೆ ಆಕೆಯ ಅಭಿವ್ಯಕ್ತಿಯೂ ಕಾವ್ಯಮಯವಾಗಿದೆ. ಆತನ ಕಣ್ಣಿನ ಕುಣಿಕೆಗೆ ಈಕೆ ಸೆರೆಯಾಗಿದ್ದಾಳೆ; ಚಿತ್ತವು ಬಣ್ಣಬಣ್ಣದ ಬೆರಗಿನ ಕನಸೆನಿಸಿದೆ; ಬಣ್ಣನೆಗೆ ದಕ್ಕದಷ್ಟು ಮನಸ್ಸಿನಲ್ಲಿ ಆಲೋಚನಾ ತರಂಗಗಳೆದ್ದಿವೆ. ನಾಯಕನನ್ನು ಬಗೆಬಗೆಯಾಗಿ ವರ್ಣಿಸಿದಷ್ಟೂ ಆಕೆಗೆ ಸಾಲುತ್ತಿಲ್ಲ. ಇಂತಿರ್ಪ ನಾಯಿಕೆಯ ಮನೋ ಇಂಗಿತವನ್ನು ಅರಿತು ಪ್ರಣಯ ಚಿಲುಮೆಗೆ ಚೈತನ್ಯವಾಗಲು, ಆಕೆಯ ಹಿಗ್ಗಿನ ಬೆಳೆಗೆ ಸುಗ್ಗಿ ಬಂದಂತೆ ಮಾಡಲು, ಸ್ವರ್ಗ ಸಮಾನವಾದ ನಲವಿನ ಉಣಿಸನ್ನು ಈಯಲು ನಾಯಕನನ್ನು ಕೋರಿದ್ದಾಳೆ. ನಾಯಿಕೆಯ ಈ ವಿರಹಾವಸ್ಥೆ ಯ ಪ್ರಣಯವ್ಯಾಪಾರಕ್ಕೆ ಆಕೆಯ ಸಖಿಯೂ ಸಾಕ್ಷಿಯೆನಿಸಿದ್ದಾಳೆ.

ಪ್ರೇಮೋನ್ಮಾದಿನಿ

ರಾಗ : ಹಿಂದೋಳ ; ತಾಳ : ಆದಿ

ಸವಿಬೆಂಕಿ ಎದೆಗಂಟಿತೋ – ಕಂದರ್ಪದರ್ಪಣ ! ||ಪ||

ನವಭಾವಕವಿತಾವತಾರಕ್ಕೆ ಮೊದಲಾಯ್ತೋ !

ಕುವಲಯ- ಕಮಲಗಳ್ ಮಲರಿದಂತಾಯಿತೋ ||ಅ.ಪ||

ಕಣ್ಣಿನ ಕುಣಿಕೆಗೆ ಸೆರೆಯಾಗಿ – ಚಿತ್ತ

ಬಣ್ಣದ ಕನಸೇ ಬೆರಗಾಗಿ |

ಮಣ್ಣ ಮನಸಿನೊಳು ತಿಣ್ಣನನಸಿನೊಳು

ಬಣ್ಣನೆಗೆಟುಕದ ಬಗೆಗಳು ಸೊಗಸಾಗಿ ||೧ ||

ನೀನಿಂದೆನ್ನನು ನೋಡಿದೆಯಂತೆ

ನಾ ರಸಮೂರ್ಚ್ಛೆಗೆ ಸಂದೆನಂತೆ |

ಈ ನರ್ಮಸಖಿಯೇ ಸಾಕ್ಷಿಯಂತೆ

ಮಾರಮಂದಿರಾಸ್ವಾದಸುಂದರ ! ಧೀರ ! ಸಾರಚಾರುತಾಗಭೀರ !! ||೨ ||

ಒಲವಿನ ಚಿಲುಮೆಗೆ ಚೈತನ್ಯವಾಗೋ !

ಹಿಗ್ಗಿನ ಬೆಳೆಗೆ? ಸುಗ್ಗಿಯೆನಿಸೋ |

ನಲವಿನ ನಾಣ್ಯಕೆ ಟಂಕಸಾಲೆ ನೀ

ಕುಗ್ಗದ ಸಗ್ಗದ ಸೊಗಸೆನಿಸೋ || ೩||

Leave a Reply

*

code