ಅಂಕಣಗಳು

Subscribe


 

ಅನನ್ಯಾನ್ಯೆ

Posted On: Monday, July 6th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 55ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕ ಕೇಳಿಕೊಂಡಿದ್ದಾನೆಂಬ ಕಾರಣಕ್ಕೆ ಈ ನಾಯಿಕೆ ಆತನ ಪ್ರೇಮಬಯಕೆಯನ್ನು ಈಡೇರಿಸಿದ್ದಾಳೆ. ಹಾಗೆಂದ ಮಾತ್ರಕ್ಕೆ ಅವನಿಗೇ ಸೋತು ಸಲ್ಲಲು ಸಾಧ್ಯವೇ, ತಾನೇ ಅವನನ್ನರಸಿ ನಡೆದಿದ್ದೇನೆಯೇ ಎಂಬ ಕೊಂಕನ್ನೆತ್ತಿದ್ದಾಳೆ. ಆಕೆಯ ಮನೆಯ ರೀತಿ ಮನಸ್ಸಿಗೆ ಹರುಷ ಕೊಟ್ಟಿಲ್ಲ, ವಿಷಮದಾಂಪತ್ಯದ ನಡುವೆ ಒದ್ದಾಟ ಎಂದು ನುಡಿದ ಮಾತ್ರಕ್ಕೆ ನಲ್ಲನೆನಿಸಿಕೊಂಡವನು ಅದನ್ನೇ ಸಲುಗೆ ಮಾಡಿಕೊಂಡು ತನ್ನ ಸಂಸಾರವನ್ನೇ ಗಾಳಿಮಾತಿಗೆ ತೂರಿಬಿಡಲು ಹೊರಡುವುದು ಸರಿಯೇ? ಅತ್ಯಾಪ್ತನೆಂದು ವರ್ತಿಸಹೊರಟರೆ ಅದನ್ನೊಪ್ಪಲಾದೀತೇನು; ತನಗೇನು ಮರ್ಯಾದೆಯೆನ್ನುವುದಿಲ್ಲವೇ? ತರುಣನೆನಿಸಿಕೊಂಡವನಿಗೆ ಸಂಸಾರೆಯ ಕಷ್ಟವೇನು ಗೊತ್ತು?  ಎಂದೆಲ್ಲಾ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ ಈ ಖಂಡಿತೆ. ಇಷ್ಟಾಗಿಯೂ ತನ್ನ ಹರೆಯಕ್ಕೆ ಮಸುಕು ಬಡಿದಿಲ್ಲ; ರತಿಚೇಷ್ಟೆಗಳು ನಶಿಸಿಲ್ಲ; ತನ್ನ ಪ್ರಣಯಕ್ಕೆ ಬೇಡಿಕೆಯುಂಟೆಂದೂ ಹೇಳಿಕೊಂಬ ಈಕೆ ಪರಕೀಯೆಯೆಂಬ ನಾಯಿಕಾ ವೈವಿಧ್ಯಕ್ಕೆ ಸೇರುವವಳು.

 

ಅನನ್ಯಾನ್ಯೆ

ರಾಗ : ಷಣ್ಮುಖಪ್ರಿಯ ; ತಾಳ : ರೂಪಕ

ಸುಂದರಾಂಗ ನೀನು ಸತ್ಯ, ಸಮ್ಮತಿಸಿದೆನೋ

ಅಂದ ಮಾತ್ರಕ್ಕೇನು? ನಾನು ಸೋತು ಸಂದೆನೇ ||ಪ||

 

ಬಯಸಿ ಬಂದು ಬಿಡಿಯವುಡಿದು ಬೆಡಗನಾಂತೆನೇ?

ನಯವನುಳಿದು ಬಿಗಿದು ಬೀಗಿ ಬಿಸುಪಲೇತಕೋ ? ||ಅ.ಪ||

 

ಎನ್ನ ಮನೆಯ ರೀತಿ ಮನಕೆ ಮುದವತಾರದೆಂ-

ದೆನ್ನ ಪಾಡನೇಕೋ ಸಲುಗೆ ಮೂಡಿ ನುಡಿದೆನಾಂ |

ನಿನ್ನನೇನು ಕೇಳಿಕೊಂಡು ಕಲೆಯೆ ಬಂದೆನೇ?

ಮನ್ನಣೆಗಳ ಮಾನ ಮಾನಿನಿಯರಿಗಿಲ್ಲವೇ? ||೧ ||

 

ಹಾಳು ಬಾಳು ನಾರಿಯರದು, ನಾನೂ ಒಪ್ಪಿದೆ

ಜಾಳು ಚೇಲವಲ್ತೆ ವಿಷಮದಾಂಪತ್ಯ ನಿತ್ಯ !

ಗೋಳು ಕೇಳ್ವರಾರು ತರುಣರೀ ಸಂಸಾರೆಯಾ ?

ಗಾಳಿಮಾತಿಗಿವಳ ಬಾಳು ತೂರಿಬಿಡುವುದೇ? ||೨ ||

 

ಆದೊಡೇನು? ಬಾಡಲಿಲ್ಲ ಹರೆಯದ ಹಾರ

ಮೋದವಾರಲಿಲ್ಲ ಮದನನಿಳಿಯದ ಪೂರ |

ಸಾಲುಸಾಲು ರಸಿಕಯುವಕನಿಕರವು ನಿರತ

ಕೀಲಿಸುತ್ತ ಕೇಳುತಿಹುದು ಹದನವನರಿತ ||೩ ||

 

ಇಂತಿರಲತ್ಯಾಪ್ತನೆಂದು ಚಿಂತಿಸುತ್ತ ಪ್ರಸ್ತಾವಿಸು-

ವಂತರದಲ್ಲಿಂತು ಸೆಟೆದು ಸಿಡಿಯುವ ಕಿಡಿಗುಡುವುದು ಸಾಕೋ ? ||೪ ||

 

Leave a Reply

*

code