ಅಂಕಣಗಳು

Subscribe


 

ಅಭಿನಯ ಭಾರತೀ- ಮಾನಮೇದುರೆ

Posted On: Friday, July 3rd, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 52ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕನು ತನ್ನ ಸತಿಯೊಂದಿಗೆ ಇರುವುದನ್ನು ಒಪ್ಪಿಕೊಂಡಾಗ್ಯೂ ಆತನನ್ನು ಬಿಟ್ಟುಕೊಡದೆ ತನ್ನ ಕೋಪವನ್ನು ಕಾರಿಕೊಳ್ಳುವವಳು ಈ ನಾಯಿಕೆ. ಸಾಧಾರಣಾ ನಾಯಿಕೆಯಂತೆ ಅಭಿನಯಕ್ಕೆ ಕಲ್ಪಿಸಿಕೊಳ್ಳುವ ಆಪ್ತತೆ ಈ ಸಾಹಿತ್ಯದಲ್ಲಿದೆ. ಅವಳ ಮನೆಯಲ್ಲಿ ನಲ್ಲನಿರುವಾಗ ತಾನು ಬರಲಾರೆನೆಂದು ಆಕ್ಷೇಪವೆತ್ತಿ ತನಗಾಗುವ ಇರಿಸುಮುರಿಸನ್ನು ಕಾರಿಕೊಂಡಿದ್ದಾಳೆ. ಅವಳು ತನ್ನನ್ನು ನಡೆಸಿಕೊಳ್ಳುವ ರೀತಿ, ತನಗಾದ ಅನುಭವವನ್ನು ಬಿಡುಬೀಸಾಗಿ ನುಡಿದಿದ್ದಾಳೆ. ಚರಣಾಂತ್ಯಕ್ಕೆ ಆತನನ್ನು ತನ್ನಲ್ಲಿಗೆ ಬರುವಂತೆ ಅನುನಯಿಸಿದ್ದಾಳೆ. ಹೀಗೆ ವರ್ತನೆಯಲ್ಲಿ ಪ್ರೌಢಳೂ, ಗಡಸಿನ ಗುಣವುಳ್ಳವಳೂ, ಖಂಡಿತಳೂ ಆದ ಈಕೆಗೆ ಬಿಗುಮಾನ ಹೆಚ್ಚು. ಒಂದರ್ಥದಲ್ಲಿ ಈಕೆ ಮಾನವತಿಯೇ ಸರಿ ! 

ಮಾನಮೇದುರೆ

ರಾಗ: ಬೇಗಡೆ ; ತಾಳ: ಆದಿ

ನಾ ನಿನ್ನ ಮನೆಗಿನ್ನು ಬರಲಾರೆ; ಹೋಗೋ!

ಆ ನಿನ್ನ ಬಿಂಕದ ಬಿನ್ನಾಣಿಯಿರುವನಕ

ನೀನಿನ್ನು ನನ್ನಿಂದ ಬಲುದೂರ ಸಾಗೋ ||ಪ ||

 

ಮೊನ್ನೆ ಮುಸ್ಸಂಜೆ ನೀನಿರುವಾಗಲೇ ನಾನು

ಮನ್ನಿಸಿ ಬಂದಿರೆ ಬಾಗಿಲಿಗೆ |

ಕದವನು ತೆರೆಯದೆ ಮದವನು ತೋರಿದ

ಕುದಿಮನದವಳನು ಮರೆಯುವೆನೇ? ||೧ ||

 

ನೀರ ತರಲು ನಾನೇರಿಗೆ ಸಾಗಿರೆ

ನೀರೆಯವಳ ಬಗೆ ನೂರೆಂಟು !

ಮೋರೆಯ ತಿರುವುತ, ಓರೆಗಣ್ಬೀರುತ

ದೂರುವ ತೂರುವ ಪರಿ ಕೊಂಟು    || ೨||

 

ನೆರೆಹೊರೆಯವರನು ಕೆರಳಿಸಿ ಕಳುಹುತ

ನರಕವ ನಿರ್ಮಿಪ ಕಲೆಯವಳಾ |

ನಿಟಿಕೆಯ ಮುರಿವುದೇಂ? ನಟಿಸುವ ಪರಿಯದೇಂ?

ಮಿಟುಕಲಾಡಿ ಕಾಡುವ ಖೋಡಿ ||೩ ||

 

ನೀನೇ ಇಲ್ಲಿಗೆ ಬಾರೋ! ನಾನೇ ಮಲ್ಲಿಗೆ ತೇರೋ !

ಈ ನರ್ಮ-ಶರ್ಮಕೆ ಸರಿ ಯಾರೋ? ||೪ ||

 

Leave a Reply

*

code