Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು
ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 50ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ.
ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.
ಇಂದಿನ ನಾಯಿಕೆ : ಮೊದಲೆಲ್ಲಾ ತನ್ನೆಡೆಗೆ ಅತಿಶಯವಾಗಿ ಪ್ರೀತಿಯನ್ನು ತೋರುತ್ತಿದ್ದ ನಾಯಕನಿಗೆ, ಇದೀಗ ತನ್ನ ಒಲವು ಕಹಿಯೆನಿಸಿದೆ, ಒಗರೆನಿಸಿದೆ ಎಂಬುದೇ ನಾಯಿಕೆಯ ಪಾಲಿಗೆ ನುಂಗಲಾರದ ತುತ್ತಾಗಿದೆ. ತನ್ನ ಸೊಗಸು ರಾತ್ರೆಯಲ್ಲಿ ಮರೆಯಾದೀತೇನೋ ಎಂದು ಸಂಜೆಗೆ ಅವನಾಗಿಯೇ ರಂಜಿಸಿ ಒಲವಿನ ದೀಪವ ಬೆಳಗಿಸಿದವನು ಇದೀಗ ತನ್ನನ್ನು ಮುಟ್ಟಲೂ ಬರುತ್ತಿಲ್ಲ ಎಂಬ ಪರಿತಾಪ ಹೆಚ್ಚಿದೆ. ಅಧರಾಮೃತ ಸವಿದು ಬಗೆಬಗೆಯದ ಮಧುರ ಸಂಕೇತಗಳಿಂದ ಮಾತಾಡಿದವನು ಇದೀಗ ಬೇರೊಂದು ರತಿಯೆಡೆಗೆ ಆಕರ್ಷಿತನಾಗಿ ಈ ಐಶ್ವರ್ಯವನ್ನು ಅದಟಿನಿಂದ ಒದೆದು ದೂರಾದದ್ದಕ್ಕೆ ಸಂಕಟ ಇಮ್ಮಡಿಸಿದೆ. ಹೀಗೆ ಅಕ್ಕರೆಯೆನ್ನುವುದೇ ಶೂನ್ಯವಾದ ಮೇಲೆ ಎಷ್ಟೇ ಒಳ್ಳೆಯದೇ ಇದ್ದರೂ ಅದರೆಡೆಗೆ ಮಮಕಾರ ಕ್ಷೀಣೀಸುವುದು ಸಹಜವೆಂದೂ ಬಗೆಬಗೆಯ ಉಪಾಧಿಗಳ ಉದಾಹರಣೆಯನ್ನು ಕೊಟ್ಟು ಕಳವಳಿಸಿದ್ದಾಳೆ ಈ ವಿಪ್ರಲಬ್ಧೆ. ಹಳೆಯ ಸಿಹಿನೆನಪುಗಳ ಸ್ಮೃತಿಯೇ ಅದರ ಛಾಯೆಯೂ ಇಲ್ಲದಂತಾದ ಪ್ರಕೃತದ ಬಾಳನ್ನು ಚುಚ್ಚಿ ನೋಯಿಸಿದೆ.
ಕ್ಷುಣ್ಣವಿಷಣ್ಣೆ
ರಾಗ: ಜೋನ್‌ಪುರಿ ; ತಾಳ : ಆದಿ
ಅವನಿಗೆ ವೆಗಟಾದುದೇ – ಎನ್ನೊಲವು | ಧವನಿಗೆ ಕಮಟಾದುದೇ ? || ಪ ||
ಸಿಹಿಯ ಸಹವಾಸ ಸಾಕಹುದೇ? ಕಹಿಯೊಗರುಗಳೇ ಬೇಕಹುದೇ ? || ಅ.ಪ ||
ಸಂಜೆಗೆ ಮುನ್ನವೇ ಸೊಗಸೆನ್ನದು ಮರೆಮಂಜಾದೀತೆನುತಲಿ ತಹಿಸಿ |
ರಂಜಿಸಿ ದೀಪವ ಬೆಳಗಿಸುತಿದ್ದವನೆಂಜಲಿಸಲೂ ಬಾರನೇ ? || ೧||
ಅಧರಕ್ಕಧರವ ಜೋಡಿಸಿ ನಿರ್ಭರಮಧುರಸಂಜ್ಞೆಗಳಲಿ ನುಡಿದವನು |
ನಿಧುವನದಾಸೆಗೆ ನಿಧಿಯನ್ನೊದೆದವನಧಟಿಂ ದೂರಾದನೇ ?||೨||
ಅಕ್ಕರೆಯಳಿಯಲು ಸಕ್ಕರೆ ಸೇರದು ದಕ್ಕಿದ ಮೊಲ್ಲೆಯೂ ಮುಳ್ಳಹುದು
ಸಿಕ್ಕಿದ ಹುಣಿಸೆಯೂ ಮಾವ ಮರೆಯಿಪುದು ಸಕ್ಕದನುಡಿಯೂ ಸಿಡಿಲಹುದು ||೩ ||