ಅಂಕಣಗಳು

Subscribe


 

ಪರಿಭ್ರಮಣ-ಉಡುಪಿ

Posted On: Monday, February 16th, 2009
1 Star2 Stars3 Stars4 Stars5 Stars (No Ratings Yet)
Loading...

Author: ಎನ್.ರಾಮ ಭಟ್, ಸಾಹಿತಿಗಳು, ಉಡುಪಿ

ನೂಪುರ ಭ್ರಮರಿಯು ಮೂರನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುವ  ಈ ಹೊತ್ತಿಗೆ, ಕರಾವಳಿಯ ಸಾಂಸ್ಕೃತಿಕ ರಾಜಧಾನಿಯೆಂದು ಹೆಸರು ಪಡೆದುಕೊಳ್ಳುತ್ತಿರುವ ಉಡುಪಿಯ ನೃತ್ಯ ಶಿಕ್ಷಣ ತರಬೇತಿ ಸಂಸ್ಥೆಗಳ ಮತ್ತು ಕಲಾವಿದರ ಪರಿಚಯ- ಪರಿಭ್ರಮಣವನ್ನು ಮಾಡಿಕೊಳ್ಳೋಣವೇ?


ಶ್ರೀ ರಾಧಾಕೃಷ್ಣ ನೃತ್ಯ ನಿಕೇತನ : ಈ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಆಸಕ್ತ ವಿದ್ಯಾರ್ಥಿಗಳಿಗೆ ಭರತನಾಟ್ಯ, ಕೂಚು ಪುಡಿ ಹಾಗೂ ಆಂಧ್ರ ಶೈಲಿಯ ನೃತ್ಯದ ತರಬೇತಿಯನ್ನು ನೀಡುತ್ತಿದ್ದು, ಭಾರತದಾದ್ಯಂತ ಮಾತ್ರವಲ್ಲದೆ ಹೊರದೇಶಗಳಲ್ಲೂ ನೃತ್ಯ ಕಾರ್ಯಕ್ರಮವನ್ನಿತ್ತಿದೆ.  ಈ ಸಂಸ್ಥೆಯನ್ನು ನಾಟ್ಯಕಲಾ ಪ್ರಪೂರ್ಣ, ನೃತ್ಯಕಲಾಸಿಂಧು, ನೃತ್ಯಕಲಾ ಭೂಷಣ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮುಂತಾದ ಪ್ರಶಸ್ತಿ-ಬಿರುದುಗಳಿಂದ ಪುರಸ್ಕೃತರಾದ ನಾಟ್ಯಾಚಾರ್ಯ ದಿ.ರಾಧಾಕೃಷ್ಣ ತಂತ್ರಿಯವರು ಸ್ಥಾಪಿಸಿದ್ದು, ಅವರ ತರುವಾಯ ಪುತ್ರಿ ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ ಮುನ್ನಡೆಸುತ್ತಿದ್ದಾರೆ.
ಇಲ್ಲಿನ ವಿದ್ಯಾರ್ಥಿಗಳೆಲ್ಲರೂ ಭರತನಾಟ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಶೇಕಡಾ ನೂರು ಫಲಿತಾಂಶದೊಂದಿಗೆ ಉತ್ತಮ ಅಂಕ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದು, ಕೂಚುಪುಡಿ ಪರೀಕ್ಷೆಗಳಲ್ಲಿ ಹಾಜರಾದ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಸಂಸ್ಥೆಯ ಕೀರ್ತಿ ಪತಾಕೆ ಎತ್ತಿ ಹಿಡಿದಿದ್ದಾರೆ. ಇವರು ರೂಪಿಸಿದ ದಶಾವತಾರ, ಕೃಷ್ಣ ದರ್ಶನ, ನವಗ್ರಹ ಸ್ತುತಿ, ವಿಶ್ವರೂಪ ದರ್ಶನ, ಅರ್ಧನಾರೀಶ್ವರ, ವಂದೇ ಮಾತರಂ, ಸೂರ್ಯ ನಮಸ್ಕಾರ ಇತ್ಯಾದಿ ನೃತ್ಯ ರೂಪಕಗಳು ಪ್ರಖ್ಯಾತಿಗೊಂಡಿವೆ. ಪ್ರತಿ ವರ್ಷ ಚಿಣ್ಣರ ನೃತ್ಯೋತ್ಸವ, ಯುವ ನೃತ್ಯೋತ್ಸವ, ನೃತ್ಯಾರ್ಪಣ ಮೊದಲಾದ ಕಾರ್ಯಕ್ರಮಗಳು ಜನ-ಮನಗೆದ್ದಿದೆ. ಅಲ್ಲದೆ, ಉಡುಪಿಯಲ್ಲಿ ಕಳೆದ ಆರು ವರ್ಷಗಳಿಂದ ಭರತಮುನಿ ಜಯಂತ್ಯುತ್ಸವವನ್ನು ವೈಭವದಿಂದ ಆಚರಿಸುತ್ತಾ ನೃತ್ಯ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ.

ಹೆಜ್ಜೆ-ಗೆಜ್ಜೆ, ಮಣಿಪಾಲ: ಈ ಸಂಸ್ಥೆಯು ಕಳೆದ ೧೬ ವರ್ಷಗಳಿಂದ ಎಳೆಯರಲ್ಲಿರುವ ಕಲಾ ಪ್ರತಿಭೆಯನ್ನು ಉಳಿಸಿ, ಬೆಳೆಸುವ ಸಲುವಾಗಿ ವಿದುಷಿ ಯಶಾ ರಾಮಕೃಷ್ಣರವರ ನಿರ್ದೇಶನದಲ್ಲಿ ಶ್ರಮಿಸುತ್ತಿರುವ ಕಲಾ ಸಂಸ್ಥೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದು, ಉನ್ನತ ಮಟ್ಟದ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ಪ್ರತಿಷ್ಠಿತ ವೇದಿಕೆಗಳಲ್ಲಿ ನಡೆಸಿಕೊಟ್ಟಿರುವ ಹೆಜ್ಜೆ-ಗೆಜ್ಜೆಯು ಉಡುಪಿಯ ಶ್ರಿ ಪಲಿಮಾರು ಮಠದ ಪರ್ಯಾಯಾವಧಿಯಲ್ಲಿ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಭರತ ಪ್ರಶಸ್ತಿಯನ್ನು ಪಡೆದಿರುತ್ತದೆ. ಸಂಸ್ಥೆಯ ವಿದ್ಯಾರ್ಥಿಗಳು ಈಗಾಗಲೇ ಭರತನಾಟ್ಯದಲ್ಲಿ ರಾಜ್ಯ ಮಟ್ಟದ ಹಲವಾರು ಬಹುಮಾನಗಳನ್ನು, ಶಿಷ್ಯ ವೇತನವನ್ನು ಪಡೆದುದಲ್ಲದೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ೯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಸಂಸ್ಥೆಯು ಉಡುಪಿಯ ರಾಜಾಂಗಣದಲ್ಲಿ ಈಗಾಗಲೇ ‘ನೃತ್ಯವಾಹಿನಿ’ ಹಾಗೂ ‘ನಾಟ್ಯಾರಾಧನ’ ಶಾಸ್ತ್ರೀಯ ನೃತ್ಯ ಸರಣಿ ಕಾರ್ಯಕ್ರಮಗಳನ್ನು ನೆರವೇರಿಸಿ, ಉದಯೋನ್ಮುಖ ಕಲಾವಿದರನ್ನು ಪರಿಚಯಿಸಿರುತ್ತದೆ.  ಉಡುಪಿಯಲ್ಲಿ ದಿ.ಪದ್ಮಿನಿ ರಾವ್‌ರವರ ನೇತೃತ್ವದಲ್ಲಿ ನೃತ್ಯ ಅಭಿನಯದ ಮೇಲೆ ಒಂದು ದಿನದ ಕಾರ್ಯಾಗಾರವನ್ನು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತಲ್ಲದೆ ಹಿರಿಯ/ಕಿರಿಯ ನೃತ್ಯ ಶಿಕ್ಷಕರಿಗೆ, ಹಿನ್ನೆಲೆ ಗಾಯಕರಿಗೆ, ವರ್ಣಾಲಂಕಾರ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.   ವಿದುಷಿ ಯಶಾ ರಾಮಕೃಷ್ಣರವರ ಪುತ್ರಿ ಹಾಗೂ ಸಂಸ್ಥೆಯ ವಿದ್ಯಾರ್ಥಿನಿ ಕು. ದೀಕ್ಷಾಳಿಗೆ ಮೈಸೂರಿನ ನೃತ್ಯ ಕಲಾ ಪರಿಷತ್‌ನಿಂದ ನೃತ್ಯ ಕಲಾ ಸಿಂಧು ಪ್ರಶಸ್ತಿ, ಈ-ಟಿವಿಯ `ಎದೆ ತುಂಬಿ ಹಾಡುವೆನು’ ಪ್ರಶಸ್ತಿ ಲಭಿಸಿರುತ್ತದೆ.

ನೃತ್ಯ ನಿಕೇತನ, ಕೊಡವೂರು: ಉಡುಪಿ ತಾಲೂಕಿನ ಗ್ರಾಮೀಣ ಪ್ರದೇಶವಾದ ಕೊಡವೂರಿನಲ್ಲಿರುವ ನೃತ್ಯ ನಿಕೇತನವು ಕಳೆದ ೧೬ ವರ್ಷಗಳಿಂದ ಅನೇಕ ನೃತ್ಯ ಕಲಾವಿದರನ್ನು ರೂಪಿಸಿದ ಕೀರ್ತಿ ಪಡೆದಿದ್ದು, ಇದರ ಅನೇಕ ಶಾಖೆಗಳು ಉಡುಪಿಯ ವಿವಿಧೆಡೆಗಳಲ್ಲಿ ಸಾಂಪ್ರದಾಯಿಕ ಭರತನಾಟ್ಯವನ್ನು ಕಲಿಸುತ್ತಿದ್ದು, ನೃತ್ಯ ಕಲಿಯಬಯಸುವ ಆಸಕ್ತ ಮಕ್ಕಳಿಗೆ ವರದಾನವಾಗಿದೆ. ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ಲಕ್ಷ್ಮೀ ಗುರುರಾಜ್, ವಿದ್ವಾನ್ ಸುಧೀರ್ ರಾವ್ ಕೊಡವೂರು, ವಿದುಷಿ ಶ್ರೀಮತಿ ಮಾನಸಿ ಸುಧೀರ್ ಇವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಪಂಚವಟಿ, ಭಸ್ಮಾಸುರ ಮೋಹಿನಿ, ಭಕ್ತ ಪ್ರಹ್ಲಾದ, ಶ್ರೀಕೃಷ್ಣಂ ವಂದೇ ಜಗದ್ಗುರುಂ, ಹರಿಹರ ಮಹಾತ್ಮೆ, ಭೂ ಕೈಲಾಸ ಮುಂತಾದ ನೃತ್ಯ ರೂಪಕಗಳನ್ನು ದೇಶದ ಉದ್ದಗಲಕ್ಕೂ ನೀಡಿ ರಸಿಕರ ಮೆಚ್ಚುಗೆ ಗಳಿಸಿದ್ದಾರೆ.
ಈ ಸಂಸ್ಥೆಯು ನೃತ್ಯೋತ್ಸವ ಹಾಗೂ ಶ್ರೀ ಪೇಜಾವರ ಮಠದ ಪರ್ಯಾಯ ಕಾಲದಲ್ಲಿ ೨ ವರ್ಷಗಳ ಕಾಲ ‘ನೃತ್ಯ ಸೌರಭ’ ಶಾಸ್ತ್ರೀಯ ನೃತ್ಯ ಸರಣಿ ಹಾಗೂ  ಶ್ರೀ ಅದಮಾರು ಮಠದ ಪರ್ಯಾಯ ಕಾಲದಲ್ಲಿ ೨ ವರ್ಷಗಳ ಕಾಲ ನೃತ್ಯ ಕೌಸ್ತುಭ ಶಾಸ್ತ್ರೀಯ ನೃತ್ಯ ಸರಣಿ ಯನ್ನು ಆಯೋಜಿಸಿದ್ದು, ಸುಮಾರು ಮುನ್ನೂರಕ್ಕೂ ಮಿಕ್ಕಿದ ಕಲಾವಿದರನ್ನು ಪರಿಚಯಿಸಿದೆ.  ಉಡುಪಿಯಲ್ಲಿ ‘ವಿಶ್ವರೂಪ’ ಎನ್ನುವ ರಾಷ್ಟ್ರೀಯ ನೃತ್ಯೋತ್ಸವ ಮತ್ತು ಅಖಿಲ ಕರ್ನಾಟಕ ನೃತ್ಯ ಕಲಾವಿದರ ಸಮ್ಮೇಳನ ವನ್ನು ಸಂಯೋಜಿಸಿದ ಕೀರ್ತಿಯು ಈ ಸಂಸ್ಥೆಗೆ ಸಲ್ಲುತ್ತದೆ.  ಅಮೆರಿಕದ ಮತ್ತು ಫ್ರಾನ್ಸ್‌ನ ರಂಗ ಕಲಾವಿದರಿಗೆ ಭರತ ನಾಟ್ಯದ ಪ್ರಾಥಮಿಕ ಶಿಕ್ಷಣವನ್ನು ನೀಡಿದ ಕೀರ್ತಿಯೂ ಈ ಸಂಸ್ಥೆಗೆ ಸಲ್ಲುತ್ತದೆ.

ಶಾರದಾ ನೃತ್ಯಾಲಯ: ಉಡುಪಿ ನಗರ ಸಮೀಪದ ಮಾರ್ಪಳ್ಳಿ ಗ್ರಾಮ ಪರಿಸರದಲ್ಲಿ ಕ್ರಿಯಾಶೀಲವಾಗಿರುವ ಈ ನೃತ್ಯ ಸಂಸ್ಥೆ ಹತ್ತು ವರ್ಷಗಳಿಂದ ನೃತ್ಯಾಸಕ್ತರಿಗೆ ನೃತ್ಯ ಶಿಕ್ಷಣವನ್ನು ನೀಡುತ್ತಿದೆ. ಈ ಸಂಸ್ಥೆಯ ನೃತ್ಯ ನಿರ್ದೇಶಕಿ ಶ್ರೀಮತಿ ಪಾವನಾ ರಾಜೇಂದ್ರ ಇವರು ನೃತ್ಯ ಗುರು ದಿ.ಶ್ರೀ ರಾಧಾಕೃಷ್ಣ ತಂತ್ರಿ ಮತ್ತು ಕರ್ನಾಟಕ ಕಲಾ ತಿಲಕ ಡಾ. ವಸುಂಧರಾ ದೊರೆಸ್ವಾಮಿಯವರಲ್ಲಿ ನೃತ್ಯಶಿಕ್ಷಣವನ್ನೂ, ವಿದ್ವಾನ್ ಪಿ.ಮಧೂರು ಬಾಲಸುಬ್ರಮಣ್ಯಂ ಇವರಲ್ಲಿ ಸಂಗೀತ ಶಿಕ್ಷಣವನ್ನೂ ಪಡೆದಿರುತ್ತಾರೆ.
ಕಲಾನಿಧಿ : ಉಡುಪಿಯ ಕುಂಜಿಬೆಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾಸಂಸ್ಥೆ.  ಕಳೆದ ಹತ್ತು ವರ್ಷಗಳಿಂದ ನೃತ್ಯ ಕಲಾವಿದೆ ವಿದುಷಿ ಪ್ರವೀಣಾ ಮೋಹನ್ ಹಾಗೂ ವಿದುಷಿ ಪ್ರತಿಮಾ ಕಿರಣ್ ಸಹೋದರಿಯರು ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.  ಇಲ್ಲಿ ಸುಮಾರು ೪೦ರಿಂದ ೪೫ ಮಂದಿ ವಿದ್ಯಾರ್ಥಿಗಳು ನೃತ್ಯಾಭ್ಯಾಸ ಮಾಡುತ್ತಿದ್ದಾರೆ.  ಸ್ವತ: ಚಿತ್ರಕಲಾವಿದೆಯೂ ಆಗಿರುವ ವಿದುಷಿ ಪ್ರವೀಣಾ ಮೋಹನ್ ತಮ್ಮ ಪತಿ ಛಾಯಾಚಿತ್ರ ಪತ್ರಿಕೋದ್ಯಮಿ ಆಸ್ಟ್ರೋ ಮೋಹನ್ ಜೊತೆಯಲ್ಲಿ ಅನೇಕ ಚಿತ್ರಕಲಾ ಪ್ರದರ್ಶನ ನೀಡಿದ್ದಾರೆ.

ಶ್ರೀದೇವಿ ನಾಟ್ಯಾಂಜಲಿ, ಬ್ರಹ್ಮಾವರ: ಈ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿಯನ್ನು ನೀಡುತ್ತಿದೆ. ಈ ಸಂಸ್ಥೆಯನ್ನು ೧೯೯೮ರಲ್ಲಿ ಕಲಾವಿದೆ ವಿದುಷಿ ಶ್ರೀಮತಿ ಶ್ರದ್ಧಾರವರು ಸ್ಥಾಪಿಸಿದ್ದು, ಪ್ರಸ್ತುತ ಅವರ ತಂಗಿ ವಿದುಷಿ ಶ್ರೀಮತಿ ಶ್ರೀದೇವಿ ರಾಘವೇಂದ್ರ ಅವರ ನಿರ್ದೇಶನದಲ್ಲಿ ಮುನ್ನಡೆಯುತ್ತಿದ್ದು, ಸುಮಾರು ೭೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯಾಭ್ಯಾಸ ಮಾಡುತ್ತಿದ್ದಾರೆ.
ಶ್ರೀದೇವಿ ರಾಘವೇಂದ್ರ ಅವರು ತನ್ನ ೫ನೇ ವರ್ಷದಲ್ಲಿ ಸುರತ್ಕಲ್‌ನ ಶ್ರೀ ಚಂದ್ರಶೇಖರ ನಾವಡರಲ್ಲಿ ಭರತನಾಟ್ಯದ ಪ್ರಾಥಮಿಕ ಪಾಠವನ್ನು ಕಲಿತು, ಮುಂದೆ ಉಡುಪಿಯ ಭರತನಾಟ್ಯ ಕಲಾವಿಮರ್ಶಕರಾದ ಶ್ರೀ ನಾರಾಯಣ ಭಟ್ಟರ ಮತ್ತು ಕುಂದಾಪುರದ ಶ್ರೀನಿವಾಸ ಆಚಾರ್ಯರ ಮಾರ್ಗದರ್ಶನದಲ್ಲಿ ಮುನ್ನಡೆದರು.
ಮುಂದೆ ಮೈಸೂರಿನಲ್ಲಿ ಕರ್ನಾಟಕ ಕಲಾತಿಲಕ ಮೈಸೂರಿನ ಡಾ.ವಸುಂಧರಾ ದೊರೈಸ್ವಾಮಿಯವರಲ್ಲಿ ಪಂದನೂರು ಶೈಲಿಯ ನಾಟ್ಯಾಭ್ಯಾಸವನ್ನು ಮಾಡಿ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಮೈಸೂರು ವಿಭಾಗಕ್ಕೆ ಪ್ರಥಮ ಸ್ಥಾನದೊಂದಿಗೆ ತೇರ್ಗಡೆ ಹೊಂದಿದರು. ಪ್ರಸ್ತುತ ಶ್ರೀದೇವಿ ಅವರು ವಿವಾಹಾನಂತರ ಪತಿ ಶ್ರೀ ರಾಘವೇಂದ್ರ ತುಂಗರೊಡನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದು, ಅವರ ಶಿಷ್ಯೆಯರು ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಇವರಷ್ಟೇ ಅಲ್ಲದೆ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನ ಬಳಿಯ ನೃತ್ಯನಿಕೇತನದ ವಿದುಷಿ ಮಂಗಳಾ, ಅಮ್ಮುಂಜೆಯ ಭ್ರಮರೀ ನಾಟ್ಯಾಲಯದ ವಿದ್ವಾನ್ ಭವಾನಿ ಶಂಕರ, ಉಡುಪಿಯ ಸ್ವಾತಿ ಭಟ್ ಮುಂತಾದವರು ನೃತ್ಯ ದಾಸೋಹದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.


(ಲೇಖಕರು ಕಲಾಸಕ್ತರು, ಬರಹಗಾರರು)

1 Response to ಪರಿಭ್ರಮಣ-ಉಡುಪಿ

  1. Bhramari Shivaprakash

    Namaste,
    Udupiya Academy school of Music and Fine Arts samsthe, 1957 ralli sthaapanegondu, hiriya gurugalada Mohan Kumar, Bhagavatha Madhava Rao, matthu ittichege guru Ramakrishna Kodancha ivara nethruthvadalli aasaktharige nruthya shikshana niduttaa bandide.

Leave a Reply

*

code