Author: -ಡಾ.ಮನೋರಮಾ ಬಿ.ಎನ್
ಪುಸ್ತಕ : ಯಕ್ಷಗಾನ ಶಿಕ್ಷಣ ಪಠ್ಯಪುಸ್ತಕ -ಪ್ರಾಥಮಿಕ ವಿಭಾಗ ( ತೆಂಕುತಿಟ್ಟು ಮತ್ತು ಬಡಗುತಿಟ್ಟು)
ಪ್ರಕಾಶಕರು : ಕರ್ನಾಟಕ ಪಠ್ಯಪುಸ್ತಕ ಸಂಘ ( ರಿ.), ಬೆಂಗಳೂರು
ಪ್ರಕಟಣಾ ವರ್ಷ : ೨೦೧೯
ರಚನಾಸಮಿತಿಯ ಅಧ್ಯಕ್ಷರು : ಹೊಸ್ತೋಟ ಮಂಜುನಾಥ ಭಾಗವತರು.
ಬೆಲೆ – ೯೯ರೂ
ಕಳೆದ ದಶಕದ ಅಂತಿಮ ವರುಷಗಳಲ್ಲಿ ಯಕ್ಷಗಾನ ಬಯಲಾಟ ಅಕಾಡೆಮಿ ನೂತನವಾಗಿ ರಚನೆಯಾಗುತ್ತಿದ್ದಂತೆಯೇ ಕೈಗೆತ್ತಿಕೊಂಡ ಕೆಲಸ ಯಕ್ಷಗಾನ ಶಿಕ್ಷಣಕ್ಕೊಂದು ವ್ಯವಸ್ಥಿತವಾದ ಪಠ್ಯವೊಂದನ್ನು ಒದಗಿಸುವುದು. ಮತ್ತು ಭರತನಾಟ್ಯ, ಶಾಸ್ತ್ರೀಯ ಸಂಗೀತ ಪರೀಕ್ಷೆಗಳಿಗಿದ್ದಂತೆ ಯಕ್ಷಗಾನಕ್ಕೂ ಪರೀಕ್ಷಾವ್ಯವಸ್ಥೆಯೊಂದನ್ನು ಆಗುವಂತೆ ನೋಡಿಕೊಳ್ಳುವುದು. ಕಾರಣ, ಕಲಾಶಿಕ್ಷಣದ, ಪರೀಕ್ಷೆ-ಪದವಿಪತ್ರದ ಭಾಗವಾಗದೇ ಯಕ್ಷಗಾನವು ಇದ್ದ ಕೊರತೆ ಕಲಾವಂತರನ್ನು ಬಹಳಷ್ಟು ಕಾಲ ಕಾಡಿದೆ. ಕರ್ನಾಟಕದ ಸಮೃದ್ಧ ನಾಟ್ಯಕಲೆಯೊಂದು ಅಕಾಡೆಮಿಕ್ ಆಗುವಲ್ಲಿ, ರಾಜ್ಯ-ರಾಷ್ಟ್ರಮಟ್ಟದ ಮಾನ್ಯತೆಯನ್ನು ಭವಿಷ್ಯಕ್ಕೆ ಪಡೆಯುವಲ್ಲಿ ಬಹು ಕಾಲದಿಂದ ನಿರೀಕ್ಷೆಯಲ್ಲಿದ್ದ ಅಪೇಕ್ಷಿತ ನಡೆಯಾಗಿತ್ತು. ಹಾಗೆಂದು ಇದಕ್ಕೆ ಅಪಸ್ವರಗಳು ಬಂದಿಲ್ಲವೆಂದಲ್ಲ. ಆದಾಗ್ಯೂ ಅಕಾಡೆಮಿಯೊಂದು ಪಟ್ಟು ಹಿಡಿದು ಮಾಡಬೇಕಾದ, ಮಾಡಿಸಬೇಕಾದ ಕರ್ತವ್ಯಗಳಲ್ಲಿ ಇದು ನಿಶ್ಚಯವಾಗಿಯೂ ಮೊದಲ್ಪಂಕ್ತಿಯ ಶೈಕ್ಷಣಿಕ ಉಪಕ್ರಮ. ತನ್ಮೂಲಕ ಅಸಂಘಟಿತವಾದ, ಚೆದುರಿಹೋಗಿ, ಸಾಕಷ್ಟು ಸಂವಾದ-ವಾಗ್ವಾದಗಳನ್ನು ಕಂಡಿರುವ ಕಲಾಶಿಕ್ಷಣ ವ್ಯವಸ್ಥೆಯೂ ಉಪಕೃತವಾಗುವಂಥ ಕೆಲಸ.
ಈ ಹಾದಿಯಲ್ಲಿ ಮೊದಲ ಸವಾಲು- ಕಲಾಕ್ಷೇತ್ರಕ್ಕಾಗಿ ದುಡಿದ, ದುಡಿಯುತ್ತಿರುವ ಜಿಜ್ಞಾಸುಗಳನ್ನು ಒಟ್ಟಾಗಿಸಿ ಪಠ್ಯಪುಸ್ತಕ ರಚನೆ ಮಾಡುವುದು. ಯಕ್ಷಗಾನವೆಂಬೊ ಸಂಕೀರ್ಣಕಲೆಯನ್ನು ಪರೀಕ್ಷಾಕ್ರಮಕ್ಕೆ ಅನುಕೂಲವಾದ ಮುಷ್ಠಿಯೊಳಗೆ ಸರಳವೂ, ಆಕರ್ಷಕವಾಗಿಯೂ ಕಾಣುವಂತೆ ಹಿಡಿದಿಡುವುದೇ ಸಾಹಸ. ಯಾವುದನ್ನು ಬಿಟ್ಟರೂ ಅಪಖ್ಯಾತಿ, ಅಪಚಾರ ತಪ್ಪಿದ್ದಲ್ಲ. ಜೊತೆಗೆ ತಜ್ಞರಿಗೆ ಸುಲಭವೆನಿಸುವುದು ವಿದ್ಯಾರ್ಥಿಗಳಿಗೂ ಅದೇ ರೀತಿಯಾಗಿ ಕಾಣಬೇಕೆಂದಿಲ್ಲವಲ್ಲ! ಶಿಕ್ಷಣವ್ಯವಸ್ಥೆಯೊಳಗಿನ ಅನುಕೂಲ-ಕಲಿಕೆಯ ಹಾದಿಯನ್ನು ಗುರುತಿಸಿಕೊಂಡೂ ನಡೆಯಬೇಕಾದ ಅನಿವಾರ್ಯತೆ. ಆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆ.ವಿ.ಜಿ.ಪುರಭವನದಲ್ಲಿ ೨ ದಿನದ ಯಕ್ಷಶಿಕ್ಷಣ ಕಮ್ಮಟ/ಕಾರ್ಯಾಗಾರವೊಂದನ್ನು ಶಿಕ್ಷಕರ ಯಕ್ಷಗಾನ ಒಕ್ಕೂಟದ ಸಹಭಾಗಿತ್ವ ದಲ್ಲಿ ೨೦೦೯ ರ ಜನವರಿ ೩೧ ಮತ್ತು ಫೆಬ್ರವರಿ ೦೧ರಂದು ಆಯೋಜಿಸಿ; ರಾಜ್ಯದ ಆಯ್ದ ಸುಮಾರು ೬೦ಮಂದಿ ಯಕ್ಷಶಿಕ್ಷಣ ತಜ್ಞರಿಂದ ‘ಶಿಕ್ಷಣದಲ್ಲಿ ಯಕ್ಷಗಾನ ಮತ್ತು ಯಕ್ಷಗಾನ ಶಿಕ್ಷಣ’ ಎಂಬ ಎರಡು ವಿಷಯಗಳಲ್ಲಿ ಚಿಂತನ-ಮಂಥನವಾಗಿ ಪಠ್ಯಕ್ಕೆ ಕರಡು ಪ್ರತಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಈ ಐತಿಹಾಸಿಕ ನಡೆಯಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ೫ ತಂಡಗಳನ್ನಾಗಿ ವಿಭಜಿಸಿ ಪ್ರತಿಯೊಂದು ತಂಡವೂ ಪರಸ್ಪರ ಸಂವಾದಗಳ ಮೂಲಕ ನಿರ್ಧಾರಕ್ಕೆ ಬಂದು ಸಮಗ್ರ ಪದ್ಧತಿಯತ್ತ ಮುನ್ನಡೆಯಲು ಅವಶ್ಯವಾದ ಕ್ರಮಗಳ ನಕ್ಷೆಯನ್ನು ಪಡೆಯಲು ಆ ಕಮ್ಮಟ ಸಾಕಷ್ಟು ಕೆಲಸ ಮಾಡಿತ್ತು; ಅದೂ ಕೇವಲ ಎರಡು ದಿನಗಳ ಅತ್ಯಲ್ಪ ಸಮಯದಲ್ಲೇ. ಯಕ್ಷಗಾನದ ಚರಿತ್ರೆ-ಸ್ವರೂಪ, ಯಕ್ಷಗಾನ ಬೋಧನೆ-ಕಲಿಕೆ, ಪ್ರಸಂಗ-ವೇಷಭೂಷಣ, ಮೌಲ್ಯಮಾಪನ, ಶಿಕ್ಷಣದಲ್ಲಿ ಯಕ್ಷಗಾನ ಎಂಬುದಾಗಿ ಐದು ತಂಡಗಳಾಗಿ ವಿಭಾಗಿಸಲ್ಪಟ್ಟಿದ್ದ ಆ ಕಾರ್ಯಕ್ರಮದಲ್ಲಿ ತೆಂಕುತಿಟ್ಟು, ಬಡಗುತಿಟ್ಟು, ಬಡಾಬಡಗು, ಪಾರಿಜಾತ, ದೊಡ್ಡಾಟ, ಸಣ್ಣಾಟ, ರಾಧನಾಟ ಮುಂತಾಗಿ ಯಕ್ಷಗಾನಸಂಜಾತಕಲೆಗಳ ನುರಿತ ವಿದ್ವಾಂಸರು, ಯಕ್ಷಕಲಾವಿದರು, ಲೇಖಕರು, ವಿವಿಧ ಕ್ಷೇತ್ರಗಳ ತಜ್ಞರು, ಪ್ರಾಥಮಿಕ-ಪ್ರೌಢ ಶಿಕ್ಷಕರು ಭಾಗವಹಿಸಿದ್ದರು. (ಇಂತಹ ಗಣ್ಯಾತಿಗಣ್ಯ ವಿದ್ವಾಂಸರ ನಡುವೆ ಕಿರಿಯಳಾದ ನನ್ನನ್ನೂ ಮೌಲ್ಯಮಾಪನ ತಂಡಕ್ಕೆ ಸಂಪನ್ಮೂಲ ವ್ಯಕ್ತಿಯಾಗಿಸಿದ್ದು ನನ್ನ ಭಾಗ್ಯಗಳಲ್ಲೊಂದು. ಸ್ತ್ರೀಯರ ಪಾಲ್ಗೊಳ್ಳುವಿಕೆ ಯಕ್ಷಗಾನದಲ್ಲಿ ಮೊದಲಾದ ದಿನಗಳವು. ಹಾಗಿದ್ದೂ ವೇದಿಕೆಯೇರಿ ಅಭಿಪ್ರಾಯವನ್ನು ಹಂಚಿಕೊಳ್ಳುವಲ್ಲಿಂದ ತೊಡಗಿ ‘ಶಿಕ್ಷಣ ಮೌಲ್ಯಮಾಪನಕ್ರಮ’ ತಂಡದಲ್ಲಿದ್ದು ; ನಂತರದಲ್ಲೂ ಕೆಲವು ಪಠ್ಯನಿರ್ಮಾಣದ ನೆಲೆಯಲ್ಲಿ ಸಲಹೆಯನ್ನು ನೀಡಿದ್ದು ಮನಃಪಟಲದಲ್ಲಿ ಹಸಿರಾಗಿದೆ.)
ಇದೀಗ ಬರೋಬ್ಬರಿ ಹತ್ತು ವರುಷಗಳ ತರುವಾಯ ಸತತ ಶ್ರಮ, ಕಲೆಯುವಿಕೆ, ಬರೆಯುವಿಕೆ, ಪರಾಮರ್ಶಿಸುವಿಕೆ ಮತ್ತು ಅನೇಕ ಕಲಾಧುರೀಣರ ಒತ್ತಾಸೆಯಲ್ಲಿ ಪಠ್ಯರಚನೆಯಾಗಿ, ಅಕಾಡೆಮಿಯ ಪ್ರಕೃತ ಅಧ್ಯಕ್ಷರ ಮುತುವರ್ಜಿಯಲ್ಲಿ ಅದು ಪ್ರಕಟವೂ ಆಗಿ ಮಾರುಕಟ್ಟೆಯಲ್ಲಿದೆ. ಸರ್ಕಾರಿ ವ್ಯವಸ್ಥೆಯೊಳಗೆ ಬೆನ್ನುಬಿದ್ದು ಅಕಾಡೆಮಿಕ್ ಕೆಲಸ ಮಾಡಿಸುವ ಶ್ರಮ ಅದನ್ನು ಅನುಭವಿಸಿದವರಿಗೇ ಗೊತ್ತು. ಒಂದರ್ಥದಲ್ಲಿ ಪ್ರವಾಹದ ವಿರುದ್ಧ ಈಜುವ ಕೆಲಸ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಮತ್ತು ಪಠ್ಯಪುಸ್ತಕ ರಚನಾ, ಸಲಹಾಸಮಿತಿಗೂ ಅಭಿನಂದನೆಗಳು ಸಲ್ಲುತ್ತವೆ.
ಒಟ್ಟು ನಾಲ್ಕು ಮುಖ್ಯ ಅಧ್ಯಾಯಗಳಲ್ಲಿ ಪಠ್ಯ ರೂಪುಗೊಂಡಿದೆ. ಅವುಗಳೊಳಗೆ ಮೂರ್ನಾಲ್ಕು ಪ್ರಪ್ರತ್ಯೇಕ ಘಟಕಗಳಾಗಿ ಅಧ್ಯಾಯವನ್ನು ವಿಭಜಿಸಲಾಗಿದೆ. ಯಕ್ಷಗಾನದ ಪರಿಚಯ, ಅಂಗ ಮತ್ತು ಇತಿಹಾಸವನ್ನು ಹೇಳುವುದರಿಂದ ಮೊದಲ್ಗೊಂಡು ರಂಗಸ್ಥಳ, ವೇಷಭೂಷಣಗಳ ಪ್ರಾಥಮಿಕ ಪರಿಜ್ಞಾನ ಅಚ್ಚುಕಟ್ಟಾಗಿ ಮೂಡಿದೆ. ಮೂರನೇ ಅಧ್ಯಾಯವು ಪ್ರಸಂಗ ಮತ್ತು ಅರ್ಥಗಾರಿಕೆಯ ಕುರಿತಾಗಿ ಸಂಕ್ಷಿಪ್ತ ಚಿತ್ರಣ ನೀಡಿದೆ. ನಾಲ್ಕನೇ ಅಧ್ಯಾಯದಲ್ಲಿ ಪ್ರಾಯೋಗಿಕ ತಿಳಿವಳಿಕೆಗೆ ಬೇಕಾದ ಲಯ, ತಾಳ, ಹೆಜ್ಜೆಗಾರಿಕೆಯ ಸ್ವರೂಪ, ರಂಗಕ್ರಮಗಳನ್ನು ದೀರ್ಘವಾಗಿ ಹೇಳಲಾಗಿದೆ. ಇವೆಲ್ಲಾ ಅಧ್ಯಾಯಮಧ್ಯದಲ್ಲಿ ಅರ್ಥಗಾರಿಕೆ, ಪಾತ್ರ ಪರಿಕಲ್ಪನೆಗೆ ಅನುಕೂಲವಾಗುವ ಪುರಾಣಜ್ಞಾನವನ್ನು ಸಂಕ್ಷಿಪ್ತವಾಗಿ ನೀಡಿರುವುದು ಸ್ವಾಗತಾರ್ಹ ನಿಲುವು.
ಹಾಗೆಂದು ಪಠ್ಯಪುಸ್ತಕದ ರಚನೆ ಮತ್ತು ಪ್ರಕಟಣೆಯು ಸ್ವಯಂಪೂರ್ಣವಾಗಿದೆ ಎಂದಲ್ಲ. ಇದನ್ನು ಸ್ವತಃ ಪಠ್ಯಸಮಿತಿಯ ಅಧ್ಯಕ್ಷರೇ ಆರಂಭಕ್ಕೆ ಒಪ್ಪಿಕೊಂಡಿದ್ದಾರೆ. ಈಗಿನ್ನೂ ಪ್ರಾಥಮಿಕ ಹಂತದ ಪಠ್ಯ ಬಂದಿದೆಯಷ್ಟೇ. ಮತ್ತು ಅದರೊಳಗೂ ಸಾಕಷ್ಟು ಚಿಕಿತ್ಸಕ ಬದಲಾವಣೆಗಳು ಜರುಗಬೇಕು. ಪರೀಕ್ಷಾವ್ಯವಸ್ಥೆಯಾಗಿ ಕರ್ನಾಟಕಪರ್ಯಂತ ಕಲೆಯೊಂದನ್ನು ನಿಯಮಿಸುವುದಾದಲ್ಲಿ ಕೆಲವು ಸೇರ್ಪಡೆ-ಬೇರ್ಪಡೆಗಳು ಪಠ್ಯದೊಳಗೂ, ಆಚೆಗೂ ಅವಶ್ಯವಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿಯೇ ಪಠ್ಯಪುಸ್ತಕವನ್ನು ಪರಾಮರ್ಶಿಸಿ ಕೆಳಗೆ ನೀಡಲಾದ ಸಲಹೆಗಳನ್ನು ಗಮನಿಸಿ ರೂಢಿಸಿಕೊಂಡಲ್ಲಿ ಹೆಚ್ಚಿನ ಫಲವಂತಿಕೆಯನ್ನು ಕಾಣಬಹುದಾಗಿದೆ.
ಸಲಹೆಗಳು
೧. ತೆಂಕುತಿಟ್ಟು ಮತ್ತು ಬಡಗುತಿಟ್ಟನ್ನೆರಡನ್ನೂ ಒಟ್ಟಿಗೆ ಸೇರಿಸಿ ಪುಸ್ತಕ ಮಾಡಲಾಗಿದೆ. ಎರಡೂ ತಿಟ್ಟುಗಳ ಪ್ರದರ್ಶನಕ್ಕೂ ಅದರದ್ದೇ ಆದ ಸಂವಿಧಾನ, ನಡಾವಳಿ, ವಿಸ್ತಾರವಿದೆ. ಎರಡೂ ತಿಟ್ಟುಗಳಲ್ಲಿಯೂ ಏಕಕಾಲಕ್ಕೆ ಅಭ್ಯಾಸವೆಂದರೆ ತರಬೇತುದಾರರಿಗೂ, ಕಲಿಕಾರ್ಥಿಗಳಿಗೂ ಅದರಲ್ಲೂ ಪ್ರಾಥಮಿಕ ವಿದ್ಯಾಭ್ಯಾಸದ ಮಕ್ಕಳಿಗಂತೂ ನಿಜವಾಗಿಯೂ ಕಷ್ಟ, ಶ್ರಮದಾಯಕ. ಮೇಲಾಗಿ ಆಹಾರ್ಯ ಪರಿಕರಗಳನ್ನು ಯೋಜಿಸಿಕೊಳ್ಳುವುದೂ ತ್ರಾಸವುಂಟುಮಾಡುತ್ತದೆ. ಜೊತೆಗೆ ಪ್ರದರ್ಶನವಿಭಾಗಕ್ಕೆ ಯಾವ ತಿಟ್ಟನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದರ ನಿರ್ದಿಷ್ಟ ಸೂಚನೆ ನೀಡಲಾಗಿಲ್ಲ. ಈ ಕುರಿತಾಗಿ ಸ್ಪಷ್ಟತೆ ನೀಡಿದರೆ ಒಳಿತು.
೨. ಯಕ್ಷಗಾನದ ಕಲಿಕೆಯ ಕ್ರಮ ಈವರೆಗೂ ಉಳಿದ ಶಾಸ್ತ್ರೀಯ ಸಂಗೀತ, ಭರತನಾಟ್ಯ ನೃತ್ಯಕಲೆಗಳಂತೆ ಸಾರ್ವಕಾಲಿಕವಾಗಿ ಒಂದೇ ಸಂವಿಧಾನವೆಂಬಂತೆ ಬೆಳೆದುಬಂದಿಲ್ಲ. ಈ ಮೊದಲು ಇದ್ದ ಕಲಿಕಾ ಕೇಂದ್ರಗಳ ಪಠ್ಯವ್ಯವಸ್ಥೆಯೊಳಗೂ ಏಕರೂಪತೆ ಇದ್ದಿರಲಿಲ್ಲ. ಪ್ರಾಥಮಿಕ ಹೆಜ್ಜೆಗಾರಿಕೆಯ ಪಟ್ಟುಗಳನ್ನು ಹೊರತುಪಡಿಸಿದರೆ ಮತ್ತುಳಿದಂತೆ ಸರ್ವಾರ್ಥದಲ್ಲಿಯೂ ಯಕ್ಷಗಾನವು ತನ್ನ ಪ್ರಯೋಗಭೂಮಿಕೆಯೊಳಗೇ ಅಭ್ಯಾಸಿಗಳನ್ನು ತಯಾರು ಮಾಡಿಕೊಂಡಿದ್ದ ವ್ಯವಸ್ಥೆ. ಮೌಖಿಕವಾಗಿ ಶ್ರುತಿಪರಂಪರೆಯಂತೆ ಕಲಿತುಬಂದಿರುವ ಕಲೆ. ಮೇಳದೊಳಗೇ ಇದ್ದು, ಹಿರಿಯರಿಂದ ಕಲಿತು ರೂಢಿಸಿ ಅಳವಡಿಸಿಕೊಂಡು ಅನುಭವದ ಹಿನ್ನೆಲೆಯಲ್ಲಿ ಮಾಗಿದ ರಂಗಭೂಮಿ. ಆಯಾ ಹೊತ್ತಿನ ಅವಶ್ಯಕತೆಯನ್ನು ನೆಮ್ಮಿ ನಡೆಯುವ ಮೇಳಗಳೊಳಗೂ ಪಠ್ಯವನ್ನೇ ಆಧರಿಸಿದ ಶಿಕ್ಷಣ ಕ್ರಮವನ್ನು ಮುಂದಕ್ಕೂ ರೂಢಿಸುವುದು ಸುಲಭವಲ್ಲ. ಇನ್ನು ಹವ್ಯಾಸಿಗಳ ಪಾಲುದಾರಿಕೆಯೊಳಗೂ ಬೆಳೆದಿರುವ ಯಕ್ಷಗಾನ ಬಯಲಾಟ ಪ್ರದರ್ಶನಗಳಲ್ಲೂ ಕಲಾವಿದನಾಗುವುದಿದ್ದರೂ ಅಲ್ಲಿಯೂ ಅದರದ್ದೇ ಆದ ಚೌಕಟ್ಟು, ರೀತಿ, ತಂಡದ ಪ್ರಾತಿನಿಧ್ಯಗಳನ್ನು ಗುರುತಿಸಬಹುದು. ಹೀಗಿರುವಲ್ಲಿ ಹಲವು ಪರಂಪರೆಗಳ ವೈವಿಧ್ಯದ ಬಾಳುವಿಕೆ ಇಲ್ಲಿ ಸರ್ವೇ ಸಾಮಾನ್ಯ. ಹಾಗಾಗಿ ಪಠ್ಯರೂಪಕ್ಕೆ ಇಳಿಸುವಾಗ ಮುಖ್ಯವಾಗಿ ಆಂಗಿಕ, ತಾಳಕ್ರಮ ಇತ್ಯಾದಿಗಳಲ್ಲಿ ಚಾಲ್ತಿಯಲ್ಲಿರುವ ಸೂತ್ರವನ್ನು ಬಳಸುವುದು ಅನುಸರಣೆಗೆ ವಿಹಿತವೆನಿಸಿಕೊಳ್ಳುತ್ತದೆ.
ಹಾಗಾಗಿ ಪಠ್ಯವೊಂದನ್ನು ಬರೆದಾಕ್ಷಣ ಅದನ್ನು ಅರ್ಥ ಮಾಡಿಕೊಳ್ಳಬೇಕಾದ ಪ್ರಯಾಸ ಮೊದಲಿಗೆ ಕಾಣುವುದು ಅದನ್ನು ಕಲಿಸಬೇಕಾದ ಜವಾಬ್ದಾರಿಯುಳ್ಳ ತರಬೇತುದಾರರು ಅಥವಾ ಶಿಕ್ಷಕರಿಗೇ. ಅದರೊಳಗೂ ನೃತ್ಯ ಮತ್ತು ಸಂಗೀತದ ಪ್ರಾಥಮಿಕ ಪರೀಕ್ಷಾ ಪಠ್ಯಗಳಿಗೆ ಹೋಲಿಸಿದರೆ ಯಕ್ಷಗಾನದ ಪಾಥಮಿಕ ವಿಭಾಗದ ಈ ಪಠ್ಯಪುಸ್ತಕ ಸಾಕಷ್ಟು ಕ್ಲಿಷ್ಟವೇ ಇದೆ. ಯಕ್ಷಗಾನ ಬಲ್ಲವರಿಗೂ ಮೇಲ್ನೋಟಕ್ಕೆ ಸುಲಭವಾಗಿ ಎಟುಕುವಂತಿಲ್ಲ. ಈಗಾಗಲೇ ಪಠ್ಯದಲ್ಲಿ ಬಹ್ವಂಶ ವ್ಯಾಪಿಸಿರುವ ಸಂಜ್ಞೆ- ಗ್ರಾಂಥಿಕವಾದ ಸೂಕ್ಷ್ಮ, ಸಂಕೇತಕ್ರಮಗಳು ಸಂಶೋಧಕರಿಗೆ ಸ್ವಾರಸ್ಯವೆನಿಸಬಹುದು. ಆದರೆ ಅವುಗಳನ್ನು ಮತ್ತೂ ಸರಳ ಮಾಡಬಹುದಾಗಿತ್ತು ಎನ್ನುವುದು ವಿದ್ಯಾರ್ಥಿಗಳನ್ನು ಗಮನಿಸಿಕೊಂಡಾಗಲಂತೂ ಮತ್ತಷ್ಟು ನಿಶ್ಚಯವಾಗುತ್ತದೆ. ಪ್ರಾಥಮಿಕ ಪಠ್ಯದೊಳಗೇ ಇವೆಲ್ಲಾ ವಿವರ ಬಾಹುಳ್ಯವನ್ನೂ ಹಾಕುವ ಬದಲು ಮಾಧ್ಯಮಿಕ ಪಠ್ಯಕ್ಕೆ ಹಲವಷ್ಟನ್ನು ವಿಸ್ತರಿಸಿಕೊಳ್ಳಬಹುದಾಗಿತ್ತು ಎಂದು ಅನಿಸುತ್ತದೆ. ಮುಖ್ಯವಾಗಿ ನಾಲ್ಕನೇ ಅಧ್ಯಾಯದ ತಾಳ, ಸಂಕೇತ, ಕುಣಿತದ ಕ್ರಮಗಳ ಕುರಿತು ಕೊಟ್ಟಿರುವ ವಿವರಗಳು ವಿದ್ಯಾರ್ಥಿಗಳ ದೃಷ್ಟಿಯಿಂದ ಕೊಂಚ ಕ್ಲಿಷ್ಟವೇ ಆಗಿದೆ. ತರಬೇತುದಾರರೂ ತಲೆ ಕೆಡಿಸಿಕೊಂಡರೆ ಆಶ್ಚರ್ಯವಿಲ್ಲ. ಆದ್ದರಿಂದ ಒಂದುವೇಳೆ ಇದೇ ಪಠ್ಯ ಯಥಾವತ್ ಮುಂದುವರೆಯುವುದಾದಲ್ಲಿ ತರಬೇತುದಾರರಿಗೇ ಪಠ್ಯದ ಕುರಿತು ಪೂರ್ವತರಬೇತಿಯ ಅವಶ್ಯಕತೆ ಖಂಡಿತವಾಗ್ಯೂ ಇದೆ. ಹಾಗಿದ್ದಲ್ಲಿ ಮಾತ್ರ ಸರ್ವಾನುಮತ, ಸಾರ್ವಕಾಲಿಕ ಸ್ವಾಗತ ದೊರೆತೀತು.
೩. ಯಕ್ಷಗಾನವು ವಾಚಿಕಾಭಿನಯ ಪರಿಪುಷ್ಠವಾದ ಕಲೆ. ಒಂದಷ್ಟು ಪದ್ಯಗಳು ಮತ್ತು ಅರ್ಥಗಳನ್ನು ಅಧ್ಯಾಯದಲ್ಲಿ ಉದಾಹರಣೆಯೆಂಬಂತೆ ನೀಡಿದ್ದರಾದರೂ ಪೂರ್ಣಪ್ರಮಾಣದ ಯಕ್ಷಗಾನಕ್ಕೆ ಅವಷ್ಟೇ ಸಾಕಾಗುವುದಿಲ್ಲ. ಮೇಲಾಗಿ ಬಾಯಿಪಾಠದ ಉಪಕ್ರಮವೇ ಆಶುತ್ವದ ಎಲ್ಲಾ ಅಂಶಗಳನ್ನು ಹಿಂದಕ್ಕೆಳೆಸಿ ಕಲಾಸೌಂದರ್ಯವನ್ನು ಹಾಳುಗೆಡಹಬಲ್ಲದು. ಆ ಎಚ್ಚರಿಕೆ ಪಠ್ಯದೊಳಗೂ ಇದೆ. ಅದನ್ನು ಜಾಗರೂಕತೆಯಿಂದ ತರಬೇತುದಾರರು ಹೊಂದಾಣಿಸಿಕೊಳ್ಳುವ ಮತ್ತು ಅಭ್ಯಾಸಿಗಳು ಅಳವಡಿಸಿಕೊಳ್ಳುವ ನೆಲೆಯಲ್ಲಿ ಕೆಲವು ಮೌಲಿಕ ಬದಲಾವಣೆಗಳನ್ನು ಭವಿಷ್ಯದ ಪಠ್ಯಗಳಲ್ಲಿ ಮಾಡಿಕೊಳ್ಳಬೇಕಿದೆ.
೪. ಮಾದರಿ ಪ್ರಶ್ನಪತ್ರಿಕೆ ಮತ್ತು ಪರೀಕ್ಷೆಯ ಮೌಲ್ಯಮಾಪನ ವಿಧಾನ, ಪರೀಕ್ಷೆಯ ಅಂಕನಿರ್ದಿಷ್ಟತೆಯನ್ನು ಪಠ್ಯವು ಅಳವಡಿಸಿಕೊಂಡಿಲ್ಲ. ಬಹುಷಃ ಪರೀಕ್ಷಾವ್ಯವಸ್ಥೆ ಜಾರಿಯಾಗುವ ಕಾಲಕ್ಕೆ ಅದನ್ನು ನಿರ್ದಿಷ್ಟಪಡಿಸುವ ಯೋಜನೆಗಳಿರಬಹುದು. ಆದಾಗ್ಯೂ ಪ್ರಕಟಿತ ಪಠ್ಯದಲ್ಲೇ ಅದನ್ನು ನೀಡಿದ್ದಿದ್ದರೆ ಕಲಿಕೆ ಹಾಗೂ ಪರೀಕ್ಷೆಯ ಹಿನ್ನೆಲೆಯಲ್ಲಿ ಬಹಳ ಒಳ್ಳೆಯದಿತ್ತು.
೫. ಪ್ರಯೋಗವಿಭಾಗದ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ವಿಧಿಗಳನ್ನು ಪಠ್ಯವು ಹೇಳಿಲ್ಲ. ಯಾವುದನ್ನು ಪರೀಕ್ಷೆಯಲ್ಲಿ ಬರೆಯಬೇಕು, ಯಾವುದನ್ನು ಮೌಖಿಕ ಪರೀಕ್ಷೆಗೆ ಬಳಸಬೇಕು, ಯಾವುದನ್ನು ಪ್ರಯೋಗಕ್ಕಿಟ್ಟುಕೊಳ್ಳಬೇಕು, ಆಂಗಿಕಾದಿ ಅಭಿನಯಗಳಲ್ಲಿ ಎಷ್ಟನ್ನು ಯಾವ ಮಟ್ಟಿಗೆ ಕಲಿತುಕೊಳ್ಳಬೇಕೆಂಬ ಸ್ಪಷ್ಟತೆ ಇನ್ನೂ ಬಂದಿದ್ದರೆ ಒಳ್ಳೆಯದಿತ್ತು.
೬. ಪಠ್ಯದಲ್ಲಿ ಹಲವಷ್ಟು ಗ್ರಾಂಥಿಕ ಮತ್ತು ವಿಷಯಪ್ರತಿಪಾದನೆಗಳಲ್ಲಿ ದೋಷಗಳಿವೆ. ಅದನ್ನು ಸರಿಪಡಿಸಿಕೊಳ್ಳುವುದು ವಿಹಿತ. ಅಂತೆಯೇ ಬಡಾಬಡಗು ತಿಟ್ಟನ್ನು ಸಂಪೂರ್ಣ ಕೈಬಿಡಲಾಗಿರುವುದಕ್ಕೆ ಪಠ್ಯರಚನೆಯ ಹಿನ್ನೆಲೆಯಲ್ಲಿ ಯಾವುದೇ ತರ್ಕಗಳನ್ನೂ ಸ್ಪಷ್ಟವಾಗಿ ಪ್ರತಿಪಾದಿಸಿಲ್ಲ.
೭. ಕರ್ನಾಟಕ ಯಕ್ಷಗಾನವೆಂದಾಕ್ಷಣ ಮೂಡಲಪಾಯ, ದೊಡ್ಡಾಟ ಮತ್ತು ಇತರೆ ಪ್ರಬೇಧಗಳ ಕೊಡುಗೆಯನ್ನೂ ಮನಗಾಣಬೇಕು. ಆದರೆ ಪಡುವಲಪಾಯದಷ್ಟು ಶಿಕ್ಷಿತ, ಸುಧಾರಿತ ಶಿಕ್ಷಣಕ್ರಮ ಅಲ್ಲಿ ಈವರೆಗೆ ಬೆಳೆದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಸಮಗ್ರ ಪುನರುಜ್ಜೀವನದೊಂದಿಗೆ ಆ ಕಲಾಪ್ರಭೇದಗಳಿಗೂ ನ್ಯಾಯ ಒದಗುವಂತೆ ಸೂಕ್ತ ಸರಳ ಪಠ್ಯರಚನೆ ಭವಿಷ್ಯದಲ್ಲಿ ಆದರೆ ಸಂಘಟನೆ ಮತ್ತು ಕಲಾಸಂರಕ್ಷಣೆಯ ದೃಷ್ಟಿಯಲ್ಲಿ ಮತ್ತಷ್ಟು ಒಳಿತು.
ಕೊನೆಯ ಮಾತು : ಕಲೆಯೇ ಧ್ಯಾನವಾದ ಕಲಾವಂತರಿಗೆ, ಬದುಕಾಗಿಸಿಕೊಂಡ ಕಲಾವಿದರಾದವರಿಗೆ ಪರೀಕ್ಷೆಯ ಅವಶ್ಯಕತೆಯಿರುವುದಿಲ್ಲ. ಪರೀಕ್ಷೆಯ ಪದವಿಪತ್ರಗಳೇ ಕಲಾವಿದನಾಗುವಲ್ಲಿ ಮಾನದಂಡವೂ ಅಲ್ಲ. ಹಾಗಿದ್ದೂ ಪರೀಕ್ಷೆ-ಪದವಿಪತ್ರಗಳು ಕಾಲವು ನಿರೀಕ್ಷಿಸುವ ಮತ್ತು ಸ್ವೀಕರಿಸಿರುವ ಸಾರ್ವವರ್ಣಿಕ ನಡೆ. ಮೌಲ್ಯವರ್ಧನೆಗೆ ಪರೀಕ್ಷೆಗಳನ್ನು ಊರೋಗೋಲಾಗಿಸಿಕೊಳ್ಳುವಲ್ಲಿ ಔಚಿತ್ಯ, ವಿವೇಕದ ನಡೆ ಬೇಕು. ಈ ಎಚ್ಚರದಲ್ಲಿಯೇ ಶಿಕ್ಷಣಕ್ರಮ ವಿಕಸಿತವಾಗಬೇಕು. ಆಗಲೇ ಕಲೆಗಳು ತಮ್ಮ ಸೌಗಂಧವನ್ನು ಪರೀಕ್ಷೆಗಳಿಂದಾಚೆಗೂ ಉಳಿಸಿಕೊಂಡಾವು.
—————–
January 6th, 2020 at 8:16 pm
ಅನೇಕ ಉತ್ತಮ ಸಲಹೆಗಳಿವೆ. ಪರೀಕ್ಷೆ ಪಾಸು ಮಾಡುವವರಿಗೆ ಉದ್ಯೋಗ ದೊರಕುವಲ್ಲಿ ಉಪಕಾರವಾಗುವಂತಹ ನಿಯಮವನ್ನು ಸರಕಾರವು ಇಡಬೇಕಾಗಿದೆ. ಹಾಗಾದರೆ ಮಾತ್ರ ಹೆಚ್ಚು ಜನ ಇದರತ್ತ ಮನಸ್ಸು ಮಾಡುತ್ತಾರೆ.
ಯಾವುದೇ ವಿಷಯಗಳು, ವಿದ್ಯೆಗಳು ಈಗ ಸರಳವಾಗಬೇಕು ಎನ್ನುವ ಕೂಗಿನಿಂದ ಬಹಳ ಜಾಳಾಗಿವೆ…ಮೂಲವನ್ನು ಸರಿಯಾಗಿ ಅಧ್ಯಯನ ಮಾಡುವ ಮನಃಸ್ಥಿತಿಯೂ ಕಳೆದುಹೋಗುತ್ತಿದೆ... ಪಠ್ಯವು ಕ್ಲಿಷ್ಟವಾಗಿಯೂ ಶಾಸ್ತ್ರೋಕ್ತವಾಗಿಯೂ ಇರಲಿ..ಆದರೆ ಉದ್ಯೋಗವು ಅದರಿಂದ ಕಾಯಂ ಆಗಿ ದೊರೆಯುವಂತಾಗಲೀ… ಹಾಗಾದರೆ ಎಷ್ಟು ಕ್ಲಿಷ್ಟವಾದರೂ ಕಲಿಯುತ್ತಾರೆ...ಈಗ ಎಂತೆಂತಹ ಕಠಿಣವಾದ ಪರೀಕ್ಷೆಗಳನ್ನೇ ಉದ್ಯೋಗಕ್ಕಾಗಿ ಬರೆಯುತ್ತಾರಲ್ಲವೇ? ಲಲಿತಕಲೆಗಳಿಗೂ ಅದೇ ಮಹತ್ವವಿರಲಿ.
January 6th, 2020 at 10:32 pm
ಅನೇಕ ಸಲಹೆಗಳು ಚೆನ್ನಾಗಿವೆ. ಮೌಲ್ಯಯುತವಾದುದಾಗಿವೆ. ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ) ಸಂಸ್ಥೆ ಯಕ್ಷರಂಗದ ಅದ್ವಿತೀಯ ವಿಮರ್ಶಕರಾದ ಡಾ. ಕೆ. ಎಂ. ರಾಘವ ನಂಬಿಯಾರರು, ಯಕ್ಷಗಾನದ ಗುರುಗಳಾದ ಶ್ರೀ ಸಬ್ಬಣಕೋಡಿ ರಾಮ ಭಟ್ಟರು, ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಿರುವ ಸದ್ಯ ಶ್ರೀ ಬಪ್ಪನಾಡು ಮೇಳದಲ್ಲಿ ಪ್ರಧಾನ ಪಾತ್ರಧಾರಿಯಾಗಿರುವ ಶ್ರೀ ಮಧೂರು ರಾಧಾಕೃಷ್ಣ ನಾವಡರು ಯಕ್ಷಗಾನ ಕಲಾವಿದ ಲೇಖಕರಾದ ಶ್ರೀ ಸಮೀರ ಸಿ. ದಾಮ್ಲೆ ಇವರುಗಳ ಸಹಾಯ ಸಹಕಾರದಿಂದ ಪ್ರಕಟಗೊಂಡ ಯಕ್ಷಗಾನ ಪಠ್ಯಪುಸ್ತಕದ ಲೋಪ ದೋಷಗಳ ಯಾದಿಯನ್ನು ತಯಾರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಎರಡು ತಿಂಗಳುಗಳೇ ಕಳೆದವು. ಇದೇ ಯಾದಿಯನ್ನು ಸಂಸ್ಥೆಯ ಬ್ಲಾಗಿನಲ್ಲಿ, ಫೇಸ್ಬುಕ್ಕಿನಲ್ಲಿ, ವಾಟ್ಸ್ ಆಪಿನಲ್ಲಿ ಬಿತ್ತರಿಸಿಯೂ ತಿಂಗಳೆರಡು ಕಳೆಯಿತು. ಯಾರ, ಯಾವ ಪ್ರತಿಕ್ರಿಯೆಗಳಿಲ್ಲ.
ದಿವ್ಯ ಮೌನವೇ ಉತ್ತರವಾಗಿದೆ.
ಮಾಹಿತಿಗಾಗಿ – ಯಕ್ಷಗಾನ ಪಠ್ಯಪುಸ್ತಕ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕಾರ್ಯವಲ್ಲವೆಂದೂ, ಕರ್ನಾಟಕ ಯಕ್ಷಗಾನ ಅಕಾಡೆಮಿಗೂ, ಪ್ರಕಟಿತ ಯಕ್ಷಗಾನ ಪಠ್ಯಪುಸ್ತಕಕ್ಕೂ ಯಾವ ವಿಧವಾದ ಸಂಬಂಧವಿರುವುದಿಲ್ಲವೆಂದೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರರು ಎರಡೆರಡು ಬಾರಿ ತ್ರದ ಮುಖೇನ ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ) ಸಂಸ್ಥೆಗೆ ಧೃಡಪಡಿಸಿರುತ್ತಾರೆ. (ಪತ್ರಗಳು ಲಭ್ಯವಿದೆ.)
ಕಟೀಲು ಸಿತ್ಲ ರಂಗನಾಥ ರಾವ್
ಸ್ಥಾಪಕ ಕಾರ್ಯದರ್ಶಿ
ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ)