ಅಂಕಣಗಳು

Subscribe


 

ತ್ಯಾಗರಾಜ- ನೃತ್ಯನಾಟಕ ಸಾಹಿತ್ಯ

Posted On: Tuesday, January 22nd, 2019
1 Star2 Stars3 Stars4 Stars5 Stars (1 votes, average: 3.00 out of 5)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಮತ್ತು ನೂಪುರ ಭ್ರಮರಿಯ ನಂಟು ಇಂದು ನಿನ್ನೆಯದಲ್ಲ. ನಿಯತಕಾಲಿಕೆಯ ಹಿತೈಷಿಗಳ ಪೈಕಿ ಉಪಾಧ್ಯಾಯರಿಗೆ ಅಗ್ರಸ್ಥಾನವೇ ಇದೆ. ಹಾಗಾಗಿ ಶಂಕರನಾರಾಯಣ ಉಪಾಧ್ಯಾಯರನ್ನು ಲೇಖಕರು, ಕವಿ, ರಂಗನಿರ್ದೇಶಕ, ರಾಮಕಥಾ ರೂಪಕ ನಿರ್ದೇಶಕರು, ಅವಧಾನ ಪೃಚ್ಛಕರು ಎಂದೆಲ್ಲಾ ಪರಿಚಯಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನೂಪುರ ಬಳಗದ ಅನೇಕ ಯೋಜನೆ, ದಾಖಲೀಕರಣ, ಶೋಧನೆಗಳಿಗೆ ಕಾವಲಾಗಿ, ಮಾರ್ಗದರ್ಶಕರಾಗಿ, ಚಿಂತಕರಾಗಿ, ಪೋಷಕರಾಗಿರುವವರು ಎಂದು ಶ್ರುತಪಡಿಸಿಕೊಳ್ಳುವುದರಲ್ಲೇ ನಮಗೆ ಹೆಚ್ಚಿನ ಖುಷಿಯಿದೆ. ಅವರೊಂದಿಗಿನ ಕಲಾಯಾತ್ರೆಗಳ ಹೆಜ್ಜೆಯನ್ನು ಮೆಲುಕು ಹಾಕಲು ಹೊರಟರೆ ಪುಟಗಳು ಸಾಲವು.

ಅವರ ವಿದ್ವತ್ತು, ಕಲೆ, ನೇರ ನುಡಿ, ವಿಮರ್ಶೆ, ಕಾವ್ಯ, ಬರೆಹಗಳ ಧಾಟಿ, ಭಾಷೆ, ಮಾತು, ಪದ-ವಾಕ್ಯ ಸಮಾಹಾರ, ರಂಗಜ್ಞಾನ, ನಿರ್ದೇಶನ, ಕಲಾಪ್ರೋತ್ಸಾಹ, ಪ್ರಾಮಾಣಿಕ ಕಲಾಮನಸ್ಸುಗಳ ಪೋಷಣೆ, ಆಯೋಜನೆ, ಸಂಘಟನೆ, ಪುಸ್ತಕ ಬರೆವಣಿಗೆಯ ಹರಹು, ಕಲಾಮೀಮಾಂಸೆಗಳ ಚಿಂತನೆಗಳನ್ನು ಪರಾಮರ್ಶಿಸುತ್ತಾ ಹೋದರೆ ಗ್ರಂಥವೇ ಆದೀತೇನೋ! ನಾಡಿನ ಅನೇಕ ವಿದ್ವಾಂಸರೊಂದಿಗೆ, ಕಲಾವಿದರೊಂದಿಗೆ ಅವರಿಗಿರುವ ಹೊಕ್ಕು ಬಳಕೆ ಬಹಳ ಆಪ್ತ. ವಯಸ್ಸು-ಪದವಿಗಳ ಹಮ್ಮಿನಿಂದ ಕಳಚಿಸಿ ಯಾರನ್ನಾದರೂ ಮುಕ್ತವಾಗಿ ಮಾತನಾಡಿಸಬಲ್ಲ, ಎಲ್ಲರಿಗೂ ನಿಲುಕುವ ಸ್ನೇಹಜೀವಿ. ರಸ-ಭಾವ-ಬದುಕು-ವ್ಯಕ್ತಿತ್ವದ ಕುರಿತು ಯಾರ ಮುಲಾಜಿಗೂ ಬೀಳದ ಸ್ಪಷ್ಟ, ಸ್ವತಂತ್ರ ನಿಲುವು ಅವರದ್ದು. ಬುದ್ಧಿಗೂ ಭಾವಕ್ಕೂ ಏಕಕಾಲಕ್ಕೆ ಎಟುಕುವ ವ್ಯಕ್ತಿತ್ವ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ.

ಕೊರ್ಗಿ ಅವರ ಬರೆಹಗಳೆಂದರೆ ಕಾವ್ಯದೊಳಗಿನ ಗದ್ಯ, ಗದ್ಯದೊಳಗಿನ ಕಾವ್ಯ. ಆಶುನಿರೂಪಣೆಯ ಕವಿತ್ವದಲ್ಲಂತೂ ಅವರದ್ದು ಸೋದಾಹರಣ ಪ್ರತಿಭೆ. ಅವರ ಬರೆಹದ ನಿದರ್ಶನಕ್ಕೆ- ಕಳೆದ ಮತ್ತು ಈ ಶತಮಾನದ ನಾಟ್ಯಲೋಕದ ನಡೆದಾಡುವ ದಂತಕತೆಯೆನಿಸಿದ ಡಾ.ಪದ್ಮಾ ಸುಬ್ರಹ್ಮಣ್ಯಂರಂತಹ ನಾಟ್ಯವನ್ನು ಕನ್ನಡ ಭಾಷೆಯ ಚೆಲುವಿಗೊಡ್ಡಿ ಆಸ್ವಾದನಾ ರೂಪದಲ್ಲಿ ಬರೆದ ಪ್ರಬಂಧವು ವಿಮರ್ಶೆ-ಕಾವ್ಯ-ಗದ್ಯಗಳನ್ನೂ ಏಕಕಾಲಕ್ಕೆ ಸಮೀಕರಣಗೊಳಿಸಿ ಸ್ವತಃ ಪದ್ಮಾ ಅವರನ್ನೇ ನಿಬ್ಬೆರಗುಗೊಳಿಸಿದೆ ! ಹೀಗೆ ಒಂದು ಅತ್ಯಪೂರ್ವ ಬರೆಹ ಪ್ರಕಾರವಾಗಿಯೂ ಗುರುತಿಸಿಕೊಂಡು ನಾಟ್ಯಾಮೃತವರ್ಷ ಎಂಬ ಹೆಸರಿನಲ್ಲಿ ಮರುಮುದ್ರಣವನ್ನೂ, ಇಂಗ್ಲೀಷ್‌ಗೆ ಭಾವಾನುವಾದವನ್ನೂ ಕಂಡ ನಾಟ್ಯಪ್ರದರ್ಶನಮೀಮಾಂಸೆ. ಒಂದರ್ಥದಲ್ಲಿ ಪದ್ಮಾ ಅವರ ನಾಟ್ಯಕ್ಕೆ ಕೊರ್ಗಿ ಅವರು ಅರ್ಪಿಸಿದ ಗದ್ಯವಿಮರ್ಶಾಕಾವ್ಯವೂ ಹೌದು. ಇನ್ನು ಗೋಯಕ್ಷವೈಭವ, ಕೃಷ್ಣಕರ್ಣಾಮೃತದ ಕನ್ನಡ ಅವತರಣಿಕೆ, ಕಾವ್ಯಕ್ಕೇ ಹೊಸತೆನಿಸುವಂತೆ ಮೇಘ-ವರ್ಷಗಳ ಕುರಿತ ೨೦೦ಕ್ಕೂ ಮಿಗಿಲಾದ ಛಂದೋಮಯ ಕಾವ್ಯಗುಚ್ಛ, ತ್ಯಾಗರಾಜ ಭಾವ-ಬದುಕಿನ ಕೃತಿಯನ್ನೂ ಸೇರಿದಂತೆ ಹೊರಬಂದಿರುವ ಅವರ ಅನೇಕ ಕೃತಿಗಳು ಓದುಗರಿಗೆ ರಸದೂಟ. ಅವರೇ ಹುಟ್ಟುಹಾಕಿದ ಕಾವ್ಯಾರಾಮ ವಾಟ್ಸಾಪ್ ಬಳಗ ಛಂದೋಬದ್ಧ ಕಾವ್ಯಕನ್ನ್ಯಕೆಗಳ ಸುಂದರ ನಾಟ್ಯಶಾಲೆ.

ಒಟ್ಟಿನಲ್ಲಿ ಯಾವುದೇ ಬರೆಹವಿರಲಿ, ಶೋಧವಿರಲಿ, ಕಾರ್ಯಕ್ರಮವಿರಲಿ…, ಅವರೊಂದಿಗಿನ ಮಾತು-ಮಥನ-ಸಂಸರ್ಗ-ಸ್ನೇಹ ನಮ್ಮನ್ನು ಇನ್ನಷ್ಟು ಪಕ್ವಗೊಳಿಸುವ ದಾರಿ. ಅವರೊಂದಿಗಿನ ಸ್ನೇಹ ಹಲವು ಕಲಾರತ್ನಗಳನ್ನು ಒದಗಿಸಿದೆ. ಕಲೆಯ ಹಲವು ಬೆಟ್ಟಗಳನ್ನು ಹತ್ತಿಳಿಯುವಂತೆ ಮಾಡಿದೆ. ಒಂದರ್ಥದಲ್ಲಿ ಬಳಗದಲ್ಲಿ ಅವರು ಹಿರಿಯಣ್ಣನಂತೆ. ತಿದ್ದುವ, ಗುದ್ದುವ, ಬೈಯುವ, ಬೆವರಿಳಿಸುವ, ಮೆಚ್ಚುವ ಎಲ್ಲ ಹಕ್ಕುಗಳು ಅವರಿಗಿದೆ. ಶಂಕರನಾರಾಯಣ ಉಪಾಧ್ಯಾಯರ ಹಿರಿಯ ಸಹೋದರ ಕೀರ್ತಿಶೇಷ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರಿಂದ ಆರಂಭವಾದ ನಂಟು ನೂಪುರ ಭ್ರಮರಿಯೊಂದಿಗಷ್ಟೇ ಅಲ್ಲದೆ ಕೌಟುಂಬಿಕವಾಗಿ, ಕಲೋದ್ಯೋಗಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಸಾಕಷ್ಟು ಸುಗ್ರಾಸವನ್ನೇ ನೀಡುತ್ತಲಿದೆ. ಅವರು ಯತಾರ್ಥದಲ್ಲೂ ಹೆಸರಿಗೆ ಅನ್ವರ್ಥವೆನಿಸುವಂತೆ ಉಪಾಧ್ಯಾಯರೇ ! ನಾವು ಅವರಿಗೆ ಆಜನ್ಮ ಋಣಿಗಳು. ನೂಪುರ ಭ್ರಮರಿಯ ವಿಮರ್ಶಾ ವಾಙ್ಮಯಿ ಪ್ರಶಸ್ತಿ ಶಂಕರನಾರಾಯಣರ ವಿಮರ್ಶನಶೀಲವ್ಯಕ್ತಿತ್ವಕ್ಕೆ ನಾವಿತ್ತ ಚಿಕ್ಕ ಅರ್ಪಣೆಯಷ್ಟೇ. ಅವರ ವಿದ್ವತ್ತಿಗೆ, ಕವಿತ್ವಕ್ಕೆ, ಕಲೆಯಲ್ಲಿನ ನಿರಂತರ ದುಡಿತಕ್ಕೆ ರಾಷ್ಟ್ರಮಟ್ಟದ ಮನ್ನಣೆಗಳು ಅರ್ಹ. ಆದರೂ ಅವುಗಳ ಮರ್ಜಿಗೆ ಬೀಳದ ಅಪೂರ್ವ ಜೀವನಪ್ರೀತಿ ಅವರಿಗಿದೆ. ಒಟ್ಟಿನಲ್ಲಿ ಕೊರ್ಗಿ ಅವರ ಬಗ್ಗೆ ಬರೆದಷ್ಟೂ ಕಡಿಮೆಯೇ!

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಬರೆಯುತ್ತಿರುವ ರಂಗಾಕ್ಷರವೆಂಬ ವಿನೂತನ ಪ್ರಯೋಗ ಪ್ರಾವೀಣ್ಯದ ಸರಣಿ ಮಾಲಿಕೆಯ ಮೂಲಕ ಅವರದೇ ಸೃಷ್ಟಿ-ವ್ಯಷ್ಟಿಯಲ್ಲಿ ಮೂಡಿಬಂದ ಗೀತ-ನೃತ್ಯ-ರೂಪಕಗಳ ಸಂವಿಧಾ. ಪ್ರಾಯೋಗಿಕವಾಗಿಯೂ ರೂಪಕ ಮಾಧ್ಯಮದಲ್ಲಿ ರಂಗದಲ್ಲಿ ಪ್ರಚಲಿತವಾದ ಹೆಗ್ಗಳಿಕೆ ನೂಪುರ ಭ್ರಮರಿಯ ಕುಟುಂಬಕ್ಕಿದ್ದು ಅದಕ್ಕೂ ಕಾರಣಕರ್ತರು ಉಪಾಧ್ಯಾಯರೇ ಎಂಬುದನ್ನು ಬೇರೆ ಹೇಳಬೇಕಿಲ್ಲ.

ಪ್ರಸ್ತುತ- ಕಲಾಮಾಧ್ಯಮ, ಬರೆವಣಿಗೆ, ಅಂಕಣ, ಪ್ರಕಟಣೆ.. ಹೀಗೆ ಯಾವುದೇ ಮುಖದಿಂದ ನೋಡಹೊರಟರೂ ಇದು ಕಲಾಜಗತ್ತಿಗೇ ನವೀನ ಪ್ರಾಕಾರ-ಆಕಾರ. ಇದನ್ನು ಯಥೋಚಿತವಾಗಿ ಬಳಸಿ ಬೆಳೆಸಿಕೊಳ್ಳುವ ಹೊಣೆ ಕಲಾಮನಸ್ಸುಗಳದ್ದು.- ಸಂಪಾದಕಿ.

 

ದೊಂದು ಐತಿಹಾಸಿಕ ಎನ್ನಬಹುದಾದ ರಂಗರೂಪಕ. ಕರ್ಣಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ತ್ಯಾಗರಾಜರನ್ನು ಕುರಿತದು. ತ್ಯಾಗರಾಜರ ಕೆಲವು ಪ್ರಸಿದ್ಧಕೃತಿಗಳ ಹಿಂದೆ ಒಂದೊಂದು ಉದಂಕ ಪ್ರಚಲಿತವಿದೆ. ಮಹಾನುಭಾವರ ಜೀವನಗಾಥೆಗಳೇ ಹಾಗೆ; ಏನಾದರೊಂದು ವ್ಯಾಜವಿರಬೇಕು; ಮಹಿಮೆ ಇರಬೇಕು; ವಿಸ್ಮಯವಿರಬೇಕು. ಮಹನೀಯರ ಮಾತುಕೃತಿಗಳು ಅವರ ದೈನಂದಿನಿಯೊಂದಿಗೆ ತಳುಕು ಹಾಕಿಕೊಂಡಿರಬೇಕು. ರಾಮ-ಕೃಷ್ಣರಿಂದ ತೊಡಗಿ ಅಧುನಾತನ ಸಾಧಕರವರೆಗೂ ಇಂಥ ಶ್ರದ್ಧಾರ್ಚನಗಳು ಜನಮಾನಸದಲ್ಲಿ ಸ್ಥಾನಾಪನ್ನವಾಗಿದ್ದಾವೆ. ವಾಸ್ತವದ ಪರಿಧಿಯ ಆಚೆ ನಿಂತು, ಸಾಧಕರಿಗೆ ಸಂಬಂಧಿಸಿದ ಅಲೌಕಿಕ ಅತಿಮಾನುಷ ಘಟನೆಗಳನ್ನು ನೋಡಬೇಕು. ಇದು ತರ್ಕದ ಸಾಣೆಯ ಬಾಬತ್ತಿನದ್ದಲ್ಲ. ಪ್ರಪತ್ತಿವಿನೀತವಾದ ಪ್ರಶ್ನಾತೀತ ಭಕ್ತಿಯಿಂದ ಗರಿಗಟ್ಟುವ ಮಹೊಮೋದಂಕಗಳಿಂದ ಸಾಧಕರ ವ್ಯಕ್ತಿತ್ತ್ವ ಇನ್ನಿನ್ನೂ ಉಜ್ಜ್ವಲಗೊಳ್ಳುತ್ತದೆ. ಪರಂಪರೆಯ ಪ್ರಥೆಯಿಂದ ಆಯಾ ವ್ಯಕ್ತಿಗಳು, ವರ್ತಮಾನಕ್ಕೆ ನಿತ್ಯಾನ್ವಯರಾಗುತ್ತಾರೆ. ಈ ಹಿನ್ನೆಲಯಲ್ಲಿ ಪ್ರಕೃತ ತ್ಯಾಗರಾಜರ ರೂಪಕ ರೇಖಿಸಲ್ಪಟ್ಟಿದೆ. ತ್ಯಾಗರಾಜಕೃತಿಗಳ ನಿರ್ಮಾಣದ ಕಥಾವರಣಗಳಲ್ಲಿ ಅಲ್ಲಲ್ಲಿ ಉಕ್ತಿಭೇದವಿದೆ. ಇಲ್ಲಿ ಆಧರಿಸಿದ್ದು ಒಂದು ಆಕರವನ್ನು. ಈ ಕಥೆಗಳಾವುವೂ ಅಧಿಕೃತವಾದ ದಾಖಲೆಗಳಲ್ಲವಾದ್ದರಿಂದ, ರಂಗಾನುಕೂಲವಾದ ಘಟನೆಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಮೂಲಕೃತಿಗಳನ್ನು ಬೇಕಾದವರು, ಬೇಕಾದಷ್ಟು ಮೊಗೆದುಕೊಳ್ಳಬಹುದು. ಆದ್ದರಿಂದ ಅಂತಹ ಮೂಲಕೃತಿಯಪೂರ್ಣಪಾಠವನ್ನು ಇಲ್ಲಿ ಕೊಟ್ಟಿಲ್ಲ. ಈ ಸೂಚನೆಯನ್ನು ಪ್ರಯೋಗಕಾರರು ಗಮನಿಸಬೇಕಾಗಿ ವಿನಂತಿ. ಅಂತೆಯೇ ಕೃತಿಗಳ ಬಗೆಗಿನ ಹೆಚ್ಚಿನ ಕಥಾವರಣ ಪ್ರಕೃತ ಲೇಖಕರ ಬರೆವಣಿಗೆಯಲ್ಲಿ ಬೆಂಗಳೂರು ಗಿರಿನಗರದ ಶ್ರೀಭಾರತೀಪ್ರಕಾಶನದಿಂದ ಪ್ರಕಟಿತವಾದ ಸಂತ ತ್ಯಾಗರಾಜ ಕೃತಿಯನ್ನೂ ಪರಾಮರ್ಶಿಸಬಹುದು.

(ತಂಜಾವೂರಿನ ದೊರೆ ಶರಭೋಜಿಯು ಸಿಂಹಾಸನಾರೂಢನಾಗಿದ್ದಾನೆ. ಅವನ ಇಕ್ಕೆಲಗಳಲ್ಲಿ ಮಂತ್ರಿಗಳು, ವಿದ್ವಾಂಸರು. ಹಿನ್ನೆಲೆಯಲ್ಲಿ ದೂರದಲ್ಲಿ ಕೇಳಿದಂತೆ ಎಂದರೋ ಮಹಾನುಭಾವುಲುವಿನ ಸಮೂಹಗಾನ. ಇದನ್ನು ಆಲಿಸುತ್ತಾ ಕೈಯಲ್ಲಿ ತಾಳ ಹಾಕಿ, ತಲೆದೂಗಿ, ರಾಜಸದ ಆಧಿಕ್ಯದಿಂದ ಭುಜವನ್ನು ಕುಣಿಸಿ, ಗರ್ವದಿಂದ ಮಂತ್ರಿಗಳೆಡೆ ನೋಡುತ್ತಾನೆ.)

ಏಕತಾಳ : ತಂಜಾವೂರಿನ ದೊರೆ ಶರಭೋಜಿಯು ಅಧಿಕಾರಿಗೆ ಆದೇಶಿಸಿದ

ನಿತ್ಯವು ರಾಮನ ಸ್ತುತಿಯನು ರಚಿಸುವ ತ್ಯಾಗರಾಜರಿಗೆ ತಿಳುಹಿ ಇದ

‘ಇನ್ನು ಮುಂದೆ ಈ ರಾಜಸ್ತುತಿಯನು ರಚಿಸಿ, ಬಂದು ಆಸ್ಥಾನದಲಿ

‘ಹಾಡಬೇಕು’ ಎಂಬುದು ನಮ್ಮಿಚ್ಛೆಯು, ಗಾನಗೋಷ್ಠಿಯನು ಏರ್ಪಡಿಸಿ

(ಒಬ್ಬ ಹಿರಿಯ ನಿವೇದಿಸುತ್ತಾನೆ.) ಅಷ್ಟತಾಳ (ಛಾಪುತಾಳ-ಮಿಶ್ರ)

ಮನ್ನಿಸಬೇಕೆನ್ನ ಮಾತ | ತ್ಯಾಗ| ರಾಜರಾಗಮಿಸರಾಜಾಸ್ಥಾನಕೆ ನಾಥ ||

ರಾಮಸಾನ್ನಿಧ್ಯ ಒಂದುಳಿದು | ಅನ್ಯ|ರಾ ಮನುಜರ ಸ್ತುತಿ ಮಾಡರು ಬಂದು ||

(ಶರಭೋಜಿ) ತ್ರಿಪುಟತಾಳ

ಬಾಯಿಮಾತಿನ ಕರೆಯದಾದರೆ ಗಣಿಸನೇನೋ ಕಲಾವಿದ

ಹೇರಳದ ಧನಕನಕವಸ್ತುವ ನೀಡಲೊಡನೆಯೆ ಒಪ್ಪುವ

ಹಾರ-ಕಂಕಣ-ಕಡಗ-ರತ್ನಾಭರಣ-ಚೀನಾಂಬರಗಳ

ತ್ಯಾಗರಾಜರ ಮನೆಗೆ ಮುಟ್ಟಿಸಿ, ತಿಳುಹಿ ನಮಗಿಹ ಬಯಕೆಯ (ನಿರ್ಗಮನ)

(ರಾಜಭಟರೊಂದಿಗೆ ಮಂತ್ರಿ ಸುವಸ್ತುಗಳನ್ನು ಹೊತ್ತು ತ್ಯಾಗರಾಜರ ಮನೆಯತ್ತ ಬರುತ್ತಿರುವಾಗ, ರಂಗದೊಂದು ಮೂಲೆಯಲ್ಲಿ ತ್ಯಾಗರಾಜರ ಅಣ್ಣ ಜಲ್ಪೇಶ ಅವರನ್ನು ನೋಡುತ್ತಾ‌ಅನೆ. ಜಲ್ಪೇಶ ಮೈಗಳ್ಳ, ಕುಹಕಿ.) ಝಂಪೆತಾಳ

ರಾಜಭಟರೈತಹುದ ಕಾಣುತ್ತ ದೂರದಿಂ

ತ್ಯಾಗರಾಜರ ಅಣ್ಣ ಜಲ್ಪೇಶನು

ಧನಲೋಭದಿಂದುಬ್ಬಿ ಅತಿವಿನಯವನು ತೋರಿ

ಹಲುಕಿರಿದ ಕೈಯ ಮುಗಿದು

(ಜಲ್ಪೇಶ) ರೂಪಕತಾಳ

ಬನ್ನಿ ಬನ್ನಿ ರಾಜಭೃತ್ಯರೇ |ಎತ್ತ ಪಯಣ|

ಏನು ಏನು, ನಮ್ಮ ಗೇಹಕೇ|

ಓಹೊ ಓಹೊ ಕುಳಿತುಕೊಳ್ಳಿ | ಬಿಸಿಲು ಬಹಳ ಬೆವರ ನೋಡಿ |

ನಡೆದು ನಡೆದು ಕಾಲು ದಣಿಯಿತೇ | ಗಂಟು ಹೊತ್ತು

ಕತ್ತು ಕೈಯು ಬತ್ತಿ ಬಳಲಿತೇ|

(ಮಂತ್ರಿಯ ಉತ್ತರ) ಝಂಪೆತಾಳ

ತ್ಯಾಗರಾಜರಿಗಿದು ನೀಡಲಿದೆ ರಾಜಾಜ್ಞೆ

ಕಾಲ ತಳುವುದು ಸಲ್ಲ, ಸ್ವಾಮಿಗಳ ಕರೆಸಿ

(ಜಲ್ಪೇಶ ನಿರ್ಗಮನ. ರಾಮವಿಗ್ರಹದೆದುರು ನಾಮಮಗ್ನರಾದ ತ್ಯಾಗರಾಜರು. ಜಲ್ಪೇಶ ಅವರನ್ನು ಎಚ್ಚರಿಸಿ ಸನ್ನೆ ಮಾಡುತ್ತಾನೆ. ತ್ಯಾಗರಾಜರು ರಾಜಭಟರತ ಬರುತ್ತಾರೆ. ಮಂತ್ರಿಯ ಬಿನ್ನಹ) ಅಷ್ಟತಾಳ

ಗಾನಮೂರ್ತಿಗಳೇ, ನಮ್ಮರಸ ಶರಭೋಜಿಗ

ಳಿತ್ತಿಹರಿದನೆಲ್ಲ ಸ್ವೀಖರಿಸಿ ||ತಾವು|

ನೃಪಸ್ತುತಿ ರಚಿಸಿ ಆಸ್ಥಾನಕಾಗಮಿಸಿ || ಅಲ್ಲಿ||

ಹಾಡಬೇಕೆಂಬುದು ರಾಜೇಚ್ಛೆ ಗಣಿಸಿ ||

(ತ್ಯಾಗರಾಜ) ತ್ರಿಪುಟತಾಳ

ರಾಮಸಂಸೇವನೆಗೆ ಮುಡಿಪಿದು ಸಂಸ್ತವನ ಕೃತಿವಿರಚನ

ನಿಧಿಗೆ ಪಡೆಯಲಿದಲ್ಲ ಗಾಣದ ಸರಕು, ಗಾನವು ದೈವಿಕ

ನೃಪರ ರಾಜಸದಗ್ಗಳದ ಹುಲು ಬಯಕೆಯನು ನಾನೊಪ್ಪೆನು

ತಂದಿರುವ ಜಡವಸ್ತು ಒಯ್ಯಿರಿ ಹಿಂದೆ, ನಾನಿದ ಮುಟ್ಟೆನು

 

(ರಾಜಭಟರು ಹಿಂದೆ ಹೊರಡುತ್ತಾರೆ. ಜಲ್ಪೇಶ ಅವರ ಹಿಂದೆ ಬೆನ್ನು ಹತ್ತುತ್ತಾನೆ. ರಂಗದಲ್ಲಿ ತ್ಯಾಗರಾಜ ಮಾತ್ರ. ತ್ಯಾಗಯ್ಯ ರಾಮವಿಗ್ರಹವನ್ನೆತ್ತಿಕೊಂಡು ರಾಮನೊಂದಿಗೆ ಮಾತಿಗೆ ತೊಡಗುತ್ತಾರೆ. ) ಕಲ್ಯಾಣಿರಾಗ-ಆದಿತಾಳ

ನಿಧಿ ಚಾಲ ಸುಖಮಾ ಸನ್ನಿಧಿ ಸೇವಾ ಸುಖಮಾ………………………………

(ಕೃತಿ ಮುಗಿದ ಮೇಲೆ, ರಾಮವಿಗ್ರಹವನ್ನು ಯಥಾಸ್ಥಾನದಲ್ಲಿಟ್ಟು ನಿರ್ಗಮಿಸುತ್ತಾರೆ. ದುಸುಮುಸು ಮುಸುಡ ಜಲ್ಪೇಶನ ಪ್ರವೇಶ.) ಝಂಪೆತಾಳ

ಮನೆಬಾಗಿಲಿಗೆ ಬಂತು ಸಂಪತ್ತು ಅದರ ಬೆಲೆ |

ತಿಳಿಯನೀ ಶತಮೂರ್ಖ ತ್ಯಾಗರಾಜ ||

ಹೊತ್ತು ಮೂರೂ ಹೊತ್ತು ತಲೆಯಲ್ಲಿ ರಾಮನನು |

ಸೊತ್ತು ಕಳಕೊಂಡನು ದರಿದ್ರರಾಜ ||

ನನ್ನ ತಮ್ಮನಿಗಿಂಥ ಮಂಕು ಕವಿಸಿದ ರಾಮ |

ಮನೆಹಾಳ, ಬಾಳ್ ಮುರುಕ, ಹೊಳೆ ಹಾರಲಿ ||

(ರಾತ್ರಿಯ ಕತ್ತಲೆ. ಜಲ್ಪೇಶ ರಾಮವಿಗ್ರಹವನ್ನು ಕದ್ದು ಎತ್ತಿಕೊಂಡು ಹೋಗಿ ಕಾವೇರಿನದಿಯಲ್ಲಿ ಮುಳುಗಿಸಿ ಮರೆಯಾಗುತ್ತಾನೆ. )

(ಬೆಳಗಿನಲ್ಲಿ ತ್ಯಾಗಯ್ಯ ನದೀಸ್ನಾನ ಮುಗಿಸಿ ಬಿಂದಿಗೆಯಲ್ಲಿ ನೀರು ತುಂಬಿ ಮನೆಗೆ ಬಂದು ವಿಗ್ರಹವನ್ನು ಕಾಣದೇ ಗಾಬರಿಯಾಗಿ, ಬಿಂದಿಗೆಯನ್ನು ಕೆಳಹಾಕಿ ರಾಮಾ ಅಂತ ಬೊಬ್ಬಿಟ್ಟು ಆರ್ತವಾಗಿ ಅಲೆಯುತ್ತಾರೆ.)

ರಾಗ ಜಯಂತಶ್ರೀ-ಆದಿತಾಳ

ಮರುಗೇಲರಾ… ಓ ರಾಘವಾ…

ತ್ರಿಪುಟತಾಳ

ಎತ್ತ ಹೋದೆಯ ರಾಮನೇ | ತ್ಯಾಗರಾಜನ ನೆಲೆಯ ತೊರೆದು |

ತೆರೆಯೊಳಿರುವೆಯ ರಾಮನೆ | ಮರೆಯೊಳಿರುವೆಯ ರಾಮನೇ |

ಯಾರದಿನ್ನಾಲಂಬನ | ಪಟ್ಟಾಭಿರಾಮ | ಯಾರದಿನ್ನಾ ಸಾಂತ್ವನ |

ಕಲ್ಯಾಣರಾಮ | ಈ ಮಗುವ ಕೈಬಿಟ್ಟೆಯಾ | ಕೋದಂಡರಾಮ |

ರಾಮನಿಲ್ಲದ ರಾಮನಲ್ಲದ ಬಾಳಿದೇತಕೆ ಸ್ವಾಮಿಯೇ| ಜಾನಕೀರಾಮ |

ಬಾಳಿದೇತಕೆ ಸ್ವಾಮಿಯೇ | ಎತ್ತ ಹೋದೆಯೊ ರಾಮನೇ|

(ತ್ಯಾಗರಾಜರು ನದೀತೀರಕ್ಕೆ ಹೋಗಿ ಆತ್ಮಾರ್ಪಣೆಗೆ ಮುನ್ನುಗ್ಗುತಿದ್ದ ಹಾಗೇ, ರಾಮನು ನೀರ ಮೇಲೆ ನಡೆದುಬರುತ್ತಿರುವುದು ಕಾಣುತ್ತದೆ. ಹರ್ಷನಿರ್ಭರಮಾನಸರಾದ ತ್ಯಾಗಯ್ಯ ಮೈಮರೆತು ಹಾಡುತ್ತಾರೆ. )

ಮೋಹನ ರಾಗ- ಆದಿತಾಳ

ನನು ಪಾಲಿಂಪ ನಡಚಿವಚ್ಚಿತಿವೋ | ನಾ ಪ್ರಾಣನಾಥ…..

ರೂಪಕತಾಳ

ನನ್ನ ಪಾಲಿಸೇ | ನಡೆದು ಬರುತಲಿಹೆಯ ಪ್ರಾಣನಾಥ |

ವನಜನಯನ ನಿನ್ನ ಮೊಗವ ಕಾಂಬುದೆನ್ನ ಗುರಿಯು ಎಂದೂ |

ಪ್ರೀತಿಯಿಂದ ನಂಬಿದಂಥ ತ್ಯಾಗರಾಜನೊಳಗ ತಿಳಿದು ||

(ದಡದ ಬುಡದಲ್ಲಿ, ಮುಳುಗಿದ್ದ ಮೂರ್ತಿ ಮೇಲೆ ಬಂದು ತೇಲುತ್ತದೆ. ತ್ಯಾಗರಾಜರು ಅದನ್ನು ತಲೆಯಲ್ಲಿ ಹೊತ್ತು ಭಕ್ತಿಮತ್ತರಾಗಿ ಕುಣಿದು, ಕೊನೆಗೆ ಎದೆಗೊರಗಿಸಿ ಭಾವಸಮಾಧಿಸ್ಥರಾಗುತ್ತಾರೆ.)

 

Leave a Reply

*

code