Author: ಮನೋರಮಾ. ಬಿ.ಎನ್
ಗಂಡು ಕಲೆಯೆಂಬ ಅನ್ವರ್ಥನಾಮಕ್ಕೆ ಪೂರಕವಾಗಿ ಹಿಂದಿನಿಂದಲೂ ಯಕ್ಷಗಾನದಲ್ಲಿ ಪುರುಷರಿಗೆ ಪ್ರಾತಿನಿಧ್ಯವಿರುವುದು ಹೌದು. ಆದರೆ ಕಲೆಯು ಸ್ತ್ರೀಯರನ್ನು ದೂರವಿಟ್ಟಿಲ್ಲ. ಆದರೆ ಹಿಂದಿನ ದಶಕಗಳಲ್ಲಿ ನಾನಾ ಕಾರಣಗಳಿಂದ, ಸಮಸ್ಯೆಗಳಿಂದ ಅವರು ಹಿಂದೆ ಇದ್ದದೇ ಹೆಚ್ಚು. ಮೇಳಗಳ ರಾತ್ರಿ-ಹಗಲೆನ್ನದ ತಿರುಗಾಟ, ವೇಷಭೂಷಣ ತೊಡುವುದರಲಿ, ವಾಚಿಕಾಭಿನಯದಲ್ಲಿ ಬೇಕಾಗುವ ಗಡಸುತನ, ಗಟ್ಟಿತನ, ಸ್ತ್ರೀಯರ ಮನೋ-ದೈಹಿಕ ವ್ಯತ್ಯಾಸಗಳು.., ಹೀಗೆ ಪುರುಷರು ಅನಿವಾರ್ಯವೆಂಬಂತೆ ಯಕ್ಷಗಾನದ ಭಾಗವೇ ಆಗಿಹೋಗಿದ್ದಾರೆ. ಅದು ಕಲೆಯ ದೋಷವಲ್ಲ, ಸಮಾಜದ ಆಯಾ ಕಾಲದ ವಸ್ತುಸ್ಥಿತಿ.
ಆದರೆ ಬದಲಾದ ಕಾಲಘಟ್ಟಕ್ಕೆ ಸ್ತ್ರೀಯರ ಭಾಗವಹಿಸುವಿಕೆ ಹೆಚ್ಚಾಗಿ ಇತ್ತೀಚಿನ ದಶಕಗಳಲ್ಲಿ ಸಮಯ ಮಿತಿಯಲ್ಲಿ ಪ್ರದರ್ಶನ ನೀಡುವ ಹಲವು ತಂಡಗಳು, ಕಲಾವಿದರ ಬಳಗಗಳು ಹುಟ್ಟಿಕೊಂಡಿವೆ. ಶ್ರೀಮತಿ ವಿದ್ಯಾ ಕೋಳ್ಯೂರಿನಂತವರು ‘ಯಕ್ಷ ಮಂಜೂಷಾ’ ಸಂಘಟಿಸಿ, ಹಿಂದಿ, ಇಂಗ್ಲೀಷ್ನಲ್ಲೂ ಪ್ರಸಂಗ ಸಂಯೋಜಿಸಿ, ಯಕ್ಷಗಾನದ ವಿವಿಧ ಸಾಧ್ಯತೆಗಳನ್ನು ಪುರುಷರಿಗೂ ಕಾಣಿಸಿಕೊಟ್ಟು ಯಕ್ಷಗಾನಕ್ಕೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ರಾಜ್ಯ, ರಾಷ್ಟ್ರಗಳಲ್ಲೂ ಪ್ರೇಕ್ಷಕರನ್ನು ಪಡೆದುಕೊಂಡವರು. ಲೀಲಾವತಿ ಬೈಪಡಿತ್ತಾಯ ಅವರಂತೂ ಭಾಗವತಿಕೆಯಲ್ಲಿ ಮೈಲಿಗಲ್ಲೇ ಸರಿ. ಭಾಗವತಿಕೆಗೆ ಏರುದನಿಯ ಕಂಚಿನ ಕಂಠ, ಗಂಭೀರ ಲಾಲಿತ್ಯಗಳು ಕೇವಲ ಪುರುಷರಿಂದಲಷ್ಟೇ ಅಲ್ಲ, ಸ್ತ್ರೀಯರಿಂದಲೂ ಸಾಧ್ಯ ಎಂದು ಸಾಬೀತು ಮಾಡಿ ತೋರಿಸಿದವರು.
ಇತಿಹಾಸದ ಕರಿನೆರಳಿನ ಪರಿಣಾಮ ಗೆಜ್ಜೆ ಕಟ್ಟುವುದೇ ಅಪರಾಧ ಎಂಬ ಭಾವನೆ ಬೇರೂರಿದ ಒಂದು ಕಾಲವಿತ್ತು. ಆದರೆ ಇಂದು ಯಾವುದೇ ಕಲೆಯಾದರೂ ಅದರಲ್ಲಿ ಭಾಗವಹಿಸುವುದು ಗುಣಮಟ್ಟದ ಮನಸ್ಸುಗಳಿಗೆ ಉದಾಹರಣೆ ಎಂಬ ಇನ್ನೊಂದು ಶಕೆ ಬಂದಿದೆ. ಕಾಲಚಕ್ರ ನಿರಂತರ ಪರಿಭ್ರಮಣದಲ್ಲಿ ಇರುತ್ತದೆ ಎಂಬುದಕ್ಕೆ ಇದು ಒಳ್ಳೆಯ ಸಾಕ್ಷಿ.
ಮುಮ್ಮೇಳದಲ್ಲಿ, ತಾಳಮದ್ದಳೆಯಲ್ಲಿ ಸ್ತ್ರೀಯರ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚುತ್ತಿದ್ದರೂ, ಹಿಮ್ಮೇಳದಲ್ಲಿ ಇನ್ನೂ ಸಾಕಷ್ಟು ಬೆಳವಣಿಗೆಗಳು ಆಗಬೇಕಾದದ್ದು ಭವಿಷ್ಯದ ನಿರೀಕ್ಷೆಗಳಲ್ಲೊಂದು. ಇಂತಹ ನಿರೀಕ್ಷೆಯನ್ನು ಪೂರ್ಣ ಮಾಡುವ ನಿಟ್ಟಿನಲ್ಲಿ ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ಕಂಡು ಬರುತ್ತಿವೆ. ಈ ಸಾಲಿಗೆ ಸೇರುವಂತಹ ಒಂದು ಪ್ರದರ್ಶನ ಇತ್ತೀಚೆಗೆ ಸುಳ್ಯದ ಯಕ್ಷ ಶಿಕ್ಷಣ ಕಾರ್ಯಾಗಾರದ ಕಂಡು ಬಂದಿತು.
ಸುಳ್ಯದ ಶಿಕ್ಷಕರ ಯಕ್ಷಗಾನ ಒಕ್ಕೂಟ ಮತ್ತು ಖಂಡಿಗೆಮೂಲೆ ತಂಡದ ಚಿಣ್ಣರು ಪ್ರದರ್ಶಿಸಿದ ಗಿರಿಜಾ ಕಲ್ಯಾಣ, ತಾರಾಕಾಸುರ ವಧೆ ಪ್ರಸಂಗ ೪ ಗಂಟೆಯ ಪ್ರದರ್ಶನ ಎಳೆಯರಲ್ಲಡಗಿದ ಪ್ರತಿಭೆಗೆ, ಅಚ್ಚುಕಟ್ಟು ನಿರೂಪಣೆಗೆ ಕನ್ನಡಿ ಹಿಡಿದಿತ್ತು. ಪುಟ್ಟ ಮಕ್ಕಳಿಗೆ ಪಠ್ಯಕ್ರಮದ ಆಧಾರದಂತೆಯೇ ಯಕ್ಷನೃತ್ಯವನ್ನು ಕಲಿಸಿದವರು ಸಬ್ಬಣ್ಣಕೋಡಿ ರಾಮ್ ಭಟ್ ಮತ್ತು ಸುಧಾಕರ್. ಮಾರ್ಗದರ್ಶನ ನೀಡಿದ್ದವರು ಒಕ್ಕೂಟದ ಹಿರಿಯ ಕಲಾವಿದರು.
ಅವರೆಲ್ಲರ ಪ್ರಯತ್ನ ಮನನೀಯ.
ಚಿಣ್ಣರ ಜೊತೆಗೆ ಗಮನ ಸೆಳೆದವರು ; ಭಾಗವತಿಕೆಯಾದಿಯಾಗಿ ಹಿಮ್ಮೇಳದಲ್ಲಿ ಯಶಸ್ವೀ ಸಹಕಾರವಿತ್ತ ಯುವತಿಯರು. ಅದೂ ಕಾಲೇಜು, ಪ್ರೌಢ ವಿದ್ಯಾಭಾಸದಲ್ಲಿ ತೊಡಗಿಕೊಂಡಿರುವ ಈಗಾಗಲೇ ಹವ್ಯಾಸೀ ಹಿಮ್ಮೇಳ ಕಲಾವಿದರಾದಿಯಾಗಿ ಸುಳ್ಯದ ಅಷ್ಟೂ ಹವ್ಯಾಸಿ ಕಲಾವಿದರ ಪ್ರದರ್ಶನಗಳಿಗೆ ಒಳ್ಳೆಯ ಸಾಥ್ ನೀಡುತ್ತಾ ಎಲ್ಲರಿಗೂ ಬೇಕಾಗಿರುವವರು.
ಬಡತನದ ಹಿನ್ನಲೆಯಿಂದಲೇ ಬಂದು ಶ್ರದ್ಧೆಯಿಂದ ಕಲಿತು ಈಗ ಭಾಗವತಿಕೆಯಲ್ಲಿ ಮಿಂಚುತ್ತಿರುವ ಸುಳ್ಯದ ನೆಹರೂ ಪದವಿ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿನಿ ಭವ್ಯಾ ಸಮರ್ಥ ಹಿಮ್ಮೇಳಪಟು. ಬನಾರಿ ಅವರ ಬಳಿ ಭಾಗವತಿಕೆಯ ಪಟ್ಟುಗಳನ್ನು ಕಲಿತ ಭವ್ಯಾ, ಭಾಗವತಿಕೆಯಲ್ಲಿ ಮಹಿಳೆಯರ ಕೊರತೆಯನ್ನು ನೀಗಿಸುವಲ್ಲಿ ಎತ್ತಿದ ಕೈ ಎನಿಸಬಲ್ಲಂಥವರು. ಹಾಗಾಗಿ, ಕಂಚಿನ ಕಂಠದ ಈ ಯುವತಿ ಆಪ್ಯಾಯಮಾನಳೆನಿಸುವುದು ಅತಿಶಯೋಕ್ತಿಯಲ್ಲ. ಮದ್ದಳೆಯಲ್ಲಿ ಕುಮಾರಿ ಚೊಕ್ಕಾಡಿಯ ಪುಷ್ಪಲತಾ ಅವರದ್ದು ಒಳ್ಳೆಯ ಹೊಂದಾಣಿಕೆ. ಇವರೀರ್ವರೂ ಕುಮಾರ ಸುಬ್ರಹ್ಮಣ್ಯ ವಳಕುಂಜ ಅವರ ಪ್ರೋತ್ಸಾಹವನ್ನುಂಡು ಮುನ್ನಡೆಯುತ್ತಿರುವವರು.
ಜೊತೆಗೆ, ಪೀಠಿಕೆಯ ಮಟ್ಟುಗಳೊಂದಿಗೆ ಚೆಂಡೆಂii ಸಮರ್ಥ ನಿರೂಪಣೆ ೧೦ನೇ ತರಗತಿ ಕಲಿಯುತ್ತಿರುವ ಕುಮಾರಿ ದಿವ್ಯಾ ಮರ್ಕಂಜ ಅವಳದ್ದು. ತಂದೆ, ಚೆಂಡೆ ಕಲಾವಿದ ತೋಟ ಚಾವಡಿ ನಾರಾಯಣ ಅವರೇ ಮಗಳ ಗುರು. ಕಳೆದ ವರ್ಷದ ಪ್ರತಿಭಾ ಕಾರಂಜಿಯಲ್ಲಿ ವಾದ್ಯವಾದನದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತೆ ಈಕೆ. ಇವರೆಲ್ಲರಿಗೂ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಿರುವವರು ಪುರುಷರೇ ಎಂಬುದನ್ನು ಎಲ್ಲರೂ ಗಮನಿಸಬೇಕು.
ಎಂಥಹ ಅರಸಿಕರು ಕೂಡಾ ಇವರ ಸಾಧನೆಗೆ, ಪ್ರತಿಭೆಗೆ ಒಮ್ಮೆಯಾದರೂ ಚಪ್ಪಾಳೆ ಹಾಕಲೇಬೇಕು. ಇಂತಹ ನಿಲುವುಗಳು ಸಾರ್ವರ್ತ್ರಿಕವಾಗಲಿ.
July 2nd, 2009 at 10:38 pm
e lekhana odida nanage thumbha khushiyayithu heegeye sthriyary himmeladallu abhivriddhi hondali , badalaguva thantrikateya kalagattadalli yakshaganada uliyuvikege thamma seveyannu arpisuthirali endu nanna haraike…..