Author: Editor
ಕ್ಷಮೆಯಿರಲಿ, ತುಂಬಾ ತಡಮಾಡಿದೆವು ಎನ್ನಿಸಿತೇ? ಕಳೆದ ಸಂಚಿಕೆಯಿಂದ ಈವರೆಗೆ ಕಳೆದ ಆರು ತಿಂಗಳುಗಳ ಅವಧಿ ತೀರಾ ಲಂಬಿಸಲ್ಪಟ್ಟದ್ದೆಂದು ಕಂಡಿತೇ? ದ್ವೈಮಾಸಿಕವಾಗಿದ್ದದ್ದು ಷಣ್ಮಾಸಿಕವಾಯಿತೆಂದು ಬೇಸರ ಬಂತೇ? – ಅದಕ್ಕೇ ಮೊದಲಾಗಿ ಮನ್ನಿಸಬೇಕೆಂದು ಕೇಳಿದ್ದು. ಒಳ್ಳೆಯ ಗುಣಮಟ್ಟದ ಲೇಖನಗಳಿಗಾಗಿ ಕಾಯುವಿಕೆ ಅನಿವಾರ್ಯವಷ್ಟೇ. ಕಂಡಕಂಡದ್ದನ್ನೆಲ್ಲಾ ತಂದು ತುರುಕಿ ನಿಗದಿತ ದಿನದೊಳಗೆ ಕೈಗೆ ತಲುಪಿಸಿ ನಿಟ್ಟುಸಿರಿಡುವ ಬದಲು ಲೇಖನಗಳ ಮಟ್ಟವನ್ನು ಗುಣಾತ್ಮಕವಾಗಿ ಕಾಯ್ದುಕೊಳ್ಳುವುದೇ ಪತ್ರಿಕೆಯ ಬಾಳುವಿಕೆಗೆ ಭೂಷಣವೆಂದು ನಮ್ಮ ನಂಬುಗೆ. ಚಂದಾದಾರಿಕೆಯನ್ನಿತ್ತ ನಿಮ್ಮ ಹೃದಯವೈಶಾಲ್ಯಕ್ಕೆ ಈ ತಾಳುವಿಕೆಯೂ ಒಂದು ಪರೀಕ್ಷೆಯಂತೆಯೇ ಆಯಿತು. ಹಾಗೆಂದು ಈ ನಿರೀಕ್ಷೆಯಲ್ಲೂ ಒಂದು ಸುಖವಿದೆಯಲ್ಲವೇ? ನಿಮ್ಮ ನಿರೀಕ್ಷೆ ಸುಳ್ಳಾಗದಂತೆ ಆರು ತಿಂಗಳ ಅಷ್ಟೂ ಪುಟವನ್ನೂ ತುಂಬಿಸಿದ್ದೇವೆ. ಅದೂ ಕಣ್ಣು-ಮನಸ್ಸು-ಬುದ್ಧಿಗೂ ತುಂಬಬೇಕೆಂಬ ಮಹದಾಸೆ ಹೊತ್ತು.
ಇಷ್ಟೇ ಅಲ್ಲ, ಪತ್ರಿಕೆಯ ಆಕಾರ-ವ್ಯವಹಾರ-ಪ್ರಸರಣದಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂಬುದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿದೆ. ಅಕ್ಷರ ಅಕ್ಷರವೂ ಮುದ್ರಿತವಾಗಿ ಪ್ರಕಟಿತ ಆವೃತ್ತಿಯಲ್ಲಿಯೇ ನಿಮ್ಮ ಮುಂದೆ ಬರುತ್ತಿದ್ದ ಪತ್ರಿಕೆ ಇದೀಗ ಅಂಗೈಯಗಲದ ಮೊಬೈಲಿನಲ್ಲೋ, ಲ್ಯಾಪ್ ಟಾಪ್-ಕಂಪ್ಯೂಟರಿನ ಪರದೆಯಲ್ಲೇ ಕಾಣಸಿಗುತ್ತಿದೆ. ಈ ಮೊದಲೂ ವೆಬ್ ಆವೃತ್ತಿ ಇತ್ತಾದರೂ ಅದು ಬಹಳ ತಿಂಗಳ ಬಳಿಕ ಅಂತರ್ಜಾಲಕ್ಕೇರುತ್ತಿತ್ತು. ಈಗ ಹಾಗಲ್ಲ. ಇನ್ನು ಮುಂದಕ್ಕೆ ಪ್ರತಿಯೊಂದು ಅಕ್ಷರವೂ ಡಿಜಿಟಲ್ ರೂಪದಲ್ಲಿಯೇ ನಿಮ್ಮ ಕಣ್ಣೆವೆಗೆ ಸಿಗಲಿದೆ. ಅದಕ್ಕೂ ಐಎಸ್‌ಎಸ್‌ಎನ್ ಸಂಖ್ಯೆಯ ಸಂಶೋಧನ ನಿಯತಕಾಲಿಕೆಯ ಭಾಗ್ಯ ಜೊತೆಗಿದೆ.
ಅದೇನು, ಪತ್ರಿಕೆ ರೂಪಿಸುವಿಕೆ ಬೇಸರ ಬಂದಿತೇ ಎಂದು ಕೇಳಿದರೆ ಅದಲ್ಲ ಕಾರಣ. ನಮ್ಮ ಸಂಪಾದಕ ಮಂಡಳಿಯ ಮತ್ತು ನಮ್ಮ ಕಲಾಭೂಮಿಕೆಯ ದಿಗ್ಧರ್ಶಕರಲ್ಲೊಬ್ಬರಾದ ಶತಾವಧಾನಿ ಡಾ. ಆರ್. ಗಣೇಶರು ಎರಡು-ಮೂರು ವರುಷದ ಮೊದಲೇ ಪತ್ರಿಕೆಯನ್ನು ಡಿಜಿಟಲ್ ಮಾಡಿದರೆ ಉತ್ತಮ ಎಂದು ಸೂಚಿಸಿದ್ದರು! ಆಗ ‘ಆನ್‌ಲೈನ್ ಎಲ್ಲರ ಕೈಗೆಟುಕದ ಮಾತು, ಪತ್ರಿಕೆಯ ಚಂದಾದಾರರು ಮುದ್ರಣಮಾಧ್ಯಮ ಪ್ರಿಯರು’ ಎಂದೇ ಅವರ ಅಭಿಪ್ರಾಯವನ್ನು ಮುಂದಕೊತ್ತಿದ್ದೆವು. ಆದರೆ ಕಾಲದ ನಡೆಗೆ ಜೊತೆಗೂಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೆಚ್ಚುತ್ತಿರುವ ಮುದ್ರಣ ಖರ್ಚು, ಅಂಚೆ ತಲುಪುವಲ್ಲಿ ಆಗುತ್ತಿರುವ ವಿಳಂಬ ಮತ್ತು ಸಾಕಷ್ಟು ತೊಂದರೆಗಳು, ಆನ್‌ಲೈನ್ ಪ್ರತಿಗಳ ಬೇಡಿಕೆ, ಉಳಿಕೆ ಮುದ್ರಿತ ಪ್ರತಿಗಳ ನಿರ್ವಹಣೆಯ ಸಮಸ್ಯೆ- ಹೀಗೆ ಎಲ್ಲವೂ ನಮ್ಮ ಪ್ರಧಾನಮಂತ್ರಿಯವರ ಆಶಯಕ್ಕೆ ಹೊಂದುವಂತೆ ನಡೆಯಲು ಮತ್ತೆ ಮತ್ತೆ ಪ್ರೇರೇಪಿಸಿವೆ. ಕಾಸೆಂಬುದೇ ಕ್ಯಾಶ್‌ಲೆಸ್ ಆಗುವಾಗ ಪತ್ರಿಕೆ ಆಗದಿದ್ದರೆ ಹ್ಯಾಗೆ? ಹಾಗೆಂದೇ ಚಂದಾದಾರಿಕೆಯೂ ಇನ್ನು ಮುಂದೆ ಪೇಟಿಎಂ, ಆನಲೈನ್ ಟ್ರಾನ್ಸ್ಫರ್, ಮೊಬೈಲ್ ಬ್ಯಾಂಕಿಂಗ್‌ಗೆ ಅನುಕೂಲವಾಗುವಂತೆ ಡಿಜಿಟಲ್. ಕ್ಷಣಾರ್ಧದಲ್ಲಿ ಪತ್ರಿಕೆ ಕೈಸೇರಿ ಅಲ್ಲಿಯೇ ನಿಮ್ಮ ಬಿಡುವಿನ ಸಮಯಕ್ಕೊದಗಿ ಓದು ನಡೆಯಬೇಕೆಂದರೆ ಈ ಸುಧಾರಣೆ ಅವಶ್ಯವೂ ಕೂಡಾ. ನಿಮಗಿದು ಒಪ್ಪಿಗೆಯೆಂಬುದೇ ನಮ್ಮ ಭಾವನೆ.
ಹತ್ತನೇ ವರುಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನೂಪುರ ಭ್ರಮರಿಗೆ ಎಲ್ಲವೂ ಹೊಸತಿನ ಸಂಭ್ರಮ. ಅಷ್ಟಕ್ಕೂ ಹೊಸತನ ಎಂದರೆ ಯಾವುದು ? – ಹಳತಲದ್ದು ಹೊಸತು – ಅಂದರೆ ಇವತ್ತಿನ ಕಾಲಘಟ್ಟಕ್ಕೆ ಸ್ಪಂದಿಸುವುದು- ಆಧುನಿಕತೆ ಎಂಬುದು ಸಾಮಾನ್ಯ ತಿಳಿವು. ಈಗಿನದ್ದಲ್ಲದ ಎಲ್ಲ ವಸ್ತು-ವಿಷಯ-ಕಾಲವೂ ಹೊಸತೇ. ಅದು ಪ್ರತೀ ಕ್ಷಣದ ಹುಟ್ಟು.
ಹೊಸತನ, ನೂತನ ಅಥವಾ ನಾವೀನ್ಯ ಎಂಬುದು ಪದಾರ್ಥ(ಪದ+ ಅರ್ಥ)ಕ್ಕಿಂತಲೂ ವಾಕ್ಯಾರ್ಥಕ್ಕೆ ಒಗ್ಗುವ ಪದ. ಇಂಗ್ಲೀಷ್ ಭಾಷೆಯಲ್ಲಿ ಅನೇಕ ಸಾಂದರ್ಭಿಕ ಅರ್ಥಗಳನ್ನು ಪಡೆಯುವುದು ಈ ದೃಷ್ಟಿಯಿಂದಲೇ. Search For Newness, Birth, Quest, Revolution In Fresh Possibilities, Breaking Monotony, Overcoming Monotony, Renewal Of Life In, Regaining Beauty, Restoring Vibrancy…, ಹೀಗೆ ಹೊಸತನ ಎಂಬುದಕ್ಕೆ ಸತ್ಯ, ಕಾಣ್ಕೆ, ದರ್ಶನ, ರಸ ಎಂಬೆಲ್ಲಾ ಆದರ್ಶಗಳ ಮೌಲ್ಯ ಹೊಂದಿಕೊಂಡು ಬಾಳುತ್ತವೆ. ಹಾಗಾಗಿ ಹೊಸತಿನೊಂದಿಗೆ ಸದಾಶಯವನ್ನು ಪಾಲಿಸಿ ಪೊರೆಯಬೇಕಾದ ಜವಾಬ್ದಾರಿ ಅಂತರ್ಗರ್ಭಿತವಾಗಿ ಹಿಂಬಾಲಿಸಿಕೊಂಡು ಬಂದೇ ಬರುತ್ತದೆ. ಇದು ಕಲಾವರಣದಲ್ಲಂತೂ ನೂರಕ್ಕೆ ನೂರು ದಿಟ.
ನಾವೀನ್ಯವು ನಿತ್ಯವೈವಿಧ್ಯ. ಅದರ ಬಯಕೆ ಮತ್ತು ನಿರೂಪಣೆ ಮನುಷ್ಯನ ಜನ್ಮಸಹಜ ಹಪಹಪಿಕೆ. ಏಕತಾನತೆಯಲ್ಲಿ ಬಾಳಲು ಯಾವೊಬ್ಬ ಸಂಘಟನಾಜೀವಿಗೂ ಸಾಧ್ಯವಿಲ್ಲ. ಬದುಕಿನ ಕುಲುಮೆಯನ್ನು ನಿತ್ಯ ಬೆಚ್ಚಗಿರಿಸಲು ನೋಡುವ ನೋಟ, ಕೇಳುವ ಧ್ವನಿ, ಆಡುವ ಆಟ, ಊಟ, ಕೂಟ… ಹೀಗೆ ಎಲ್ಲದರಲ್ಲಿಯೂ ಆ ನಿರ್ದಿಷ್ಟ ಹೊತ್ತಿನಿಂದ ಬೇರೆಯದೇ ಆದ ನಾವೀನ್ಯತೆ ಬೇಕು.
‘ವರುಷಕೊಂದು ಹೊಸತು ಜನುಮ ವರುಷಕೊಂದು ಹೊಸತು ನೆಲೆಯು ಅಖಿಲಜೀವಜಾತಕೆ,
ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೆ ಏತಕೆ?-‘
ಪ್ರಕೃತಿಯು ವರುಷ ವರುಷವೂ ತಾಳುವ ಜೀವನಾವೀನ್ಯ ಮನುಷ್ಯನ ನಿಡುಗಾಲ ಬಯಕೆ. ಆತನ ಜೀವನ ಬಗೆಯೇ ಭಿನ್ನ ಮತ್ತು ದೀರ್ಘವೆಂಬುದು ಆತನ ಕೊರಗಿಗೆ ಕಾರಣ. ಹಾಗೆಂದು ಕಾಡುವ ಏಕತಾನತೆಯನ್ನು ಭಂಗಿಸಿದರಲ್ಲವೇ ಬದುಕಿನ ಸ್ವಾದ? ಅದಕ್ಕೆಂದೇ ಪ್ರಕೃತಿಯು ತೊಡುವ ಹೊಸ ಅಂಗಿಯನ್ನು ತಾನೂ ತೊಟ್ಟು ನಲಿಯುವ ಆಸೆ. ಪ್ರಕೃತಿಗೆ ಸ್ಪಂದಿಸುವಂತಹ ಸಂಭ್ರಮಗಳಿದ್ದರೋ ಸರಿ, ಇಲ್ಲವಾದರೆ ತಾನೇ ದಿನ, ಹೊತ್ತನ್ನು ನಿಶ್ಚಯಿಸುತ್ತಾನೆ. ಹೊತ್ತಿನೊಳಗಿನ ಗತ್ತನ್ನು ನೆನಪಿಸಿಕೊಳ್ಳಲು ನೂರೆಂಟು ಬಗೆಯನ್ನು ಕಲೆಸುತ್ತಾನೆ, ಕಲೆಯಾಗಿಸುತ್ತಾನೆ.
ಅದರಲ್ಲೂ ಯಾವುದೇ ಮಾನವನ ಆಂತರ್ಯದಲ್ಲಿಯೂ ‘ತನ್ನದೂ ಅಂತ ಕೊಡುಗೆಯಿರಬೇಕು. ಅದನ್ನು ಇತಿಹಾಸ ಒಪ್ಪಬೇಕು. ಭವಿಷ್ಯತ್ತಿಗೆ ಉಪಕಾರಿಯಾಗಬೇಕು ಎಲ್ಲರಿಗಿಂತ ಬೇರೆಯದೇ ಆದುದನ್ನು ಮಾಡಬೇಕು’ ಎಂಬೆಲ್ಲಾ ಕನಸುಗಳಿರುತ್ತವೆ. ಹೊಸತು ಕೊಡಬಹುದಾದ ಉತ್ಸಾಹ, ನವಿರು ಪುಳಕಕ್ಕೆ ಮನಸು ರೆಕ್ಕೆ ಬಿಚ್ಚುತ್ತದೆ. ಹಳೆಯ ದಿನಗಳನ್ನು ನೆನೆಯುತ್ತಾ ಹೊಸ ಕನಸುಗಳು ಚಿಗುರೊಡೆಯುತ್ತದೆ. ಇದಕ್ಕೆ ಅನುಕೂಲಕರವಾಗಿ ಪರಿಸರ ಮತ್ತು ಪ್ರಚೋದನೆ ದೊರಕಿದರಂತೂ ಆತನ ಇಚ್ಛೆ, ಕ್ರಿಯೆ, ಜ್ಞಾನಶಕ್ತಿಗಳು ಒಟ್ಟಾಗಿ ತೊಡಗಿ ಊರ್ಧ್ವಮುಖಿಯಾಗಿ ದುಡಿದು ಹೊಸತಿನ ಹಾದಿಗೆ ಒಂದಷ್ಟು ಸಾಮಗ್ರಿಗಳನ್ನು ಒದಗಿಸುತ್ತಾ ಹೋಗುತ್ತವೆ. ಆದರೆ ಇವುಗಳಲ್ಲಿ ಜವಾಬ್ದಾರಿಯೆನಿಸುವ ಉತ್ಪಾದಕಶಕ್ತಿಗಳು ಹೆಚ್ಚಿದ್ದರೆ ಸಾಮಾಜಿಕವಾಗಿ ಚರ್ಚಿತ/ಒಪ್ಪಿತ/ಸಂವಹನಕಾರಿಯೆನಿಸಿ ಗುಣಾತ್ಮಕ ಮೌಲ್ಯ ಏರ್ಪಡುತ್ತದೆ. ಅದುವೇ ಅಭೂತಪೂರ್ವವೆನಿಸುವ ಬೆಳೆವಳಿಳಿಗೆಗಳಿಗೆ, ಮನುಕುಲದ ಉದ್ಧಾರಕ್ಕೆ ಕಾರ್ಯ-ಕಾರಣವಾಗುತ್ತವೆ. ಹೊಸತನಕ್ಕೆ ಸಾಕ್ಷರವೂ, ಸಾಕ್ಷಾತ್ಕರವೂ ಒದಗುವುದು ಆಗಲೇ. ಇಲ್ಲವಾದರೆ ರಾಕ್ಷಸತ್ವವೋ, ನಿರ್ಜೀವತೆಯೋ ಕಟ್ಟಿಟ್ಟ ಬುತ್ತಿ. ಹೊಸತೆಲ್ಲವೂ ಹಸನಾದ ಹಸಿರಲ್ಲ, ನೂತನವೆಲ್ಲ ಔನ್ನತ್ಯದ್ದಲ್ಲ, ಆಧುನಿಕವೆಲ್ಲವೂ ಆನಂದದಾಯಕವಲ್ಲ ಎನ್ನುವುದು ಆಗಲೇ. ಹಸನಲ್ಲ, ಹಸಿರಲ್ಲವೆಂದಾದ ಮೇಲೆ ಅಂತಹ ಹಳವಂಡಗಳಿಗೆ ಕಾಲ-ಧರ್ಮೋಚಿತವಾಗಿ ಹನನವೊಂದೇ ಮಾರ್ಗ. ಇದೇ ‘ಸೃಷ್ಟಿ’ ಮತ್ತು ‘ಲಯ’ಕ್ಕಿರುವ ವೈಚಿತ್ರ್ಯದ ಅಂತರ.
ಇದೇ ತತ್ತ್ವವೇ ಕಲೆಯಲ್ಲೂ ಅನ್ವಯವಾಗುವುದು. ಹಾಗೆ ನೋಡಿದರೆ ಯಾವುದೇ ಕಲೆಯೂ ಆ ಹೊತ್ತಿನ ಹೊಸ ದೃಷ್ಟಿ ಮತ್ತು ಸೃಷ್ಟಿಯೇ ಹೌದು. ಪ್ರತೀ ಕಲಾವಿದನ ನೋಟ, ಬೇಟ, ಹೂಟಗಳಲ್ಲೂ ಆತನ ಮಿತಿಗೊಳಗೇ ನಾವೀನ್ಯತೆಯ ಪಸೆಯಿರುತ್ತದೆ. ಆದರೆ ಆ ಹೊಸತನದ ಹಸೆ ಎಷ್ಟು ವರುಷಕ್ಕೆ, ಎಷ್ಟು ಮಂದಿಗೆ, ಕಲೆಯ ಯಾವ ಮಟ್ಟಿನ ಪ್ರಗತಿಗೆ ತನ್ನನ್ನು ತಾನು ಹಾಸಿಕೊಳ್ಳುತ್ತದೆ ಎಂಬುದೇ ಅದರ ಮೌಲ್ಯಮಾಪನ ಪ್ರಶ್ನೆ. ಹೊಸತೆಂಬುದು ಅನ್ವೇಷಣೆಯೇ? ಹುಡುಕಾಟವೇ? ಅಪಾಯವೇ? ಕೊಡುಗೆಯೇ? ಕೊಡಲಿಯೇ? ಒಪ್ಪಿದ್ದೆಲ್ಲಿ? ತಪ್ಪಿದ್ದೆಲ್ಲಿ?- ಹೀಗೆ ಕಲಾಂತರಂಗದ ಮಥನ, ಪುನರ್ಮನನ, ಅನುಸಂಧಾನವೇ ಕಲೆಯ ಸೃಷ್ಟಿ ಮತ್ತು ಲಯದ ರಹಸ್ಯ. ಇದನ್ನು ಕಲಾವಿದನಾದವನು ನಿತ್ಯ ಬಿಡುಗಣ್ಣಾಗಿ ಪರಿಕಿಸಿಕೊಳ್ಳುವುದು ಕಲಾಧರ್ಮ ಮತ್ತು ಆತನೊಳಗಿನ ಕಲೆಗೆ ಚಿರಂಜೀವಿತ್ವವನ್ನು ಆವಾಹಿಸುವ ಕಲಾಮರ್ಮ.
ಹೊಸತೋ ವರ್ತಮಾನದ ಭಂಟನೆನಿಸಿದರೂ ಕ್ಷಣಕ್ಷಣಕ್ಕೂ ಭವಿಷ್ಯತ್ತಿನ ಪರಿವೇಷದಲ್ಲಿಯೇ ತನ್ನನ್ನು ತಾನು ಗುರುತಿಸಿಕೊಳ್ಳುವ ನೆಂಟ. ಪ್ರತೀಕ್ಷಣಕ್ಕೂ ಚಹರೆ ಬದಲಿಸುವ ತುಂಟ. ಆದ್ದರಿಂದಲೇ ಹೊಸತಿಗೂ ಇತಿಹಾಸಕ್ಕೂ ಕೂದಲೆಳೆಯ ಅಂತರದ ನಂಟು. ಹೊಸತೆಂಬುದು ಭೂತ-ಭವಿಷ್ಯತ್-ವರ್ತಮಾನಕ್ಕೆಲ್ಲದಕ್ಕೂ ಕೌಟುಂಬಿಕ ಬಂಧು. ಈ ತತ್ತ್ವವನ್ನು ಉದಾಹರಣೆಯ ಸಹಿತವಾಗಿ ಗಮನಿಸಿದಾಗ ಮತ್ತೊಂದಷ್ಟು ಸ್ಪಷ್ಟತೆ ಒದಗೀತೋ ಎನೋ !
ರಾಮನಡಿಯಿಟ್ಟ ನೆಲ ಭೀಮನು ಸುರಿದ ಗಾಳಿ
ವ್ಯೋಮದೆ ಭಗೀರಥಂ ತಂದ ಸುರತಟಿನೀ
ಸೋಮನಂ ಪೆತ್ತ ಕಡಲ್ ಯೀ ಪುರಾತನಂಗಳಿರೆ ನಾವ್
ಎಂತು ಪೊಸಬರಲೊ ಮಂಕುತಿಮ್ಮ
ರಾಮ ಅಡಿಯಿಟ್ಟು ಓಡಾಡಿದ ನೆಲ;ಭೀಮ ಉಸಿರಾಡಿದ ಗಾಳಿ; ಭಗೀರಥನು ದೇವಗಂಗೆಯನ್ನು ತಂದ ಆ ಪ್ರಯೋಗಸಾಫಲ್ಯ, ಚಂದ್ರನನ್ನು ಹೆತ್ತ ಕಡಲೆಂಬ ಪುರಾತನ ವಿಷಯಗಳೆಲ್ಲ ಈಗಲೂ ಇದ್ದು ನಮ್ಮನ್ನು ಸಲಹಬೇಕಾದರೆ ನಾವು ಮಾತ್ರ ಹೊಸಬರಾಗಲು ಹೇಗೆ ಸಾಧ್ಯ? – ಹೊಸತಿನ ಧರ್ಮ-ಮರ್ಮಗಳನ್ನು ಅರಿಯಬೇಕಾದ ಬಗೆಯೂ ಹೀಗೆಯೇ. ಭೂತಕಾಲದ ಒಳಿತು ಕೆಡುಕು ವಿವೇಚನೆಯ ನೈಕಟ್ಯ ಅದಕ್ಕೆ ನಮ್ಮ ಇಂದಿನ ಹೊಸತೆಂಬ ವರ್ತಮಾನಕ್ಕೆ ಬೇಕು. ಒಂದಷ್ಟು ಪೂರ್ವಸೂರಿಗಳ ಅವಲೋಕನವನ್ನು ಮಾಡಿಕೊಳ್ಳುವುದು ಹೊಸತಿನ ಆಶಯ- ಅನುಕೂಲಗಳ ವಿವೇಚನೆಗೆ ಪೂರಕ, ಪ್ರೇರಕ, ಪೋಷಕ.
ಮನೋರಂಜನೆಯೆಂಬುದೇ ಇರದಿದ್ದ ಕಾಲಕ್ಕೆ ಸೃಷ್ಟಿಯಾದ ನಾಟ್ಯವೇದ ಮತ್ತು ಅದನ್ನನುಸರಿಸಿ ರಚಿತವಾದ ಭರತನ ನಾಟ್ಯಶಾಸ್ತ್ರ ಹಾಗೂ ಪ್ರಯೋಗಗಳೆಲ್ಲವೂ ಆಯಾ ಕಾಲದ ಹೊಸಹೊನ್ನುಗಳೇ. ನಂತರಕ್ಕೂ ನಾಟ್ಯಶಾಸ್ತ್ರವನ್ನನುಸರಿಸಿ ಬಂದ ಮೀಮಾಂಸೆಗಳು, ಅಲಂಕಾರತತ್ತ್ವಗಳು ಇಂತಹ ಹೊಸತಿನ ಗುಣಧರ್ಮವಿವೇಚನೆ ಮಾಡಿದವುಗಳೇ. ಉದಾಹರಣೆಗೆ- ಇಂದಿಗೆ ಪ್ರತಿಯೊಂದು ಕಾಲ-ಧರ್ಮಗಳಲ್ಲಿಯೂ ವ್ಯಾಪಕವಾಗಿ ಬಳಕೆಯಲ್ಲಿರುವಂತಹ ‘ನವರಸ’ ಎಂಬ ಒಂಭತ್ತು ಬಗೆಯ ರಸವೈವಿಧ್ಯವೇ ಒಂದಾನೊಂದು ಕಾಲಕ್ಕೆ ನವ್ಯವಾಗಿತ್ತು. ಮೂಲತಃ ನಾಟ್ಯಶಾಸ್ತ್ರದಲ್ಲಿ ಹೇಳಲಾದದ್ದು ಅಷ್ಟರಸಗಳು. ಆದರೆ ಭರತಮಾರ್ಗದೊಳಗಡಗಿದ್ದ ಶಾಂತರಸವು ಪ್ರತ್ಯಕ್ಷವಾಗಿ ತೋರಿಕೊಂಡದ್ದು ನಾಟ್ಯಶಾಸ್ತ್ರ ರಚನೆಯಾದ ಎಷ್ಟೋ ಶತಮಾನಗಳ ಅನಂತರ. ಅಂದರೆ ಆವರೆಗೆ ನಾಟ್ಯಗರ್ಭದೊಳಗಿದ್ದದ್ದು ಕಾಲಧರ್ಮೋಚಿತವಾಗಿ ಹೊಸತೆಂಬಂತೆ ತೋರಿಕೊಂಡಿತಷ್ಟೇ. ಅಂತೂ ಅಂದಿನಿಂದ ಇಂದಿನವರೆಗೂ ನವರಸವೆಂಬುದೇ ಪರಮಾದರ್ಶವಾಗಿ, ಶಾಂತವು ಸಮಸ್ತ ರಸವೈವಿಧ್ಯದ ಪರಮಮೌಲ್ಯವಾಗಿ, ಚರಮಗುರಿಯಾಗಿ ನಿಂತಿದೆ. ಮಾತ್ರವಲ್ಲ, ಭಕ್ತಿ, ಸ್ನೇಹ, ವಾತ್ಸಲ್ಯ, ಧೀರ ಇತ್ಯಾದಿ ಬೇರೆ ಬೇರೆ ಭಾವಗಳೂ ರಸವೈವಿಧ್ಯದ ಹಾದಿಯಲ್ಲಿ ಕಂಡುಕೊಳ್ಳಲು ಪ್ರೇರಣೆಯಾಗಿದೆ. ಹಾಗಾಗಿ ಹೊಸತೆಂದಾಕ್ಷಣ ಧುತ್ತನೆ ಎಲ್ಲಿಂದಲೋ ಉದ್ಭವವಾದುದಲ್ಲ; ಬದಲಾಗಿ ಆವರೆಗೆ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳದೇ ಇದ್ದದ್ದು. ಒಟ್ಟಿನಲ್ಲಿ ಹೊಸತೆಂಬುದು ಕಾಂಬ ಕಣ್ಣ್ಣುಗಳ ಕಾಣ್ಕೆ.
ನಂತರದಲ್ಲಿಯೂ ಪ್ರದರ್ಶನಕಲೆಗಳನ್ನು ಸಾಕ್ಷೀಕರಿಸಿದ ಪ್ರತೀ ಹೆಜ್ಜೆಗಳೂ, ಶಿಲ್ಪ-ಚಿತ್ರಗಳೂ, ಗೀತ-ಗ್ರಂಥಗಳೂ ಹೊಸತಿನ ಹರಕೆಗಳೇ. ಹೇಮಚಂದ್ರಸೂರಿ, ಬೌದ್ಧ ಗ್ರಂಥ ಲಲಿತವಿಸ್ತರ, ಲಲಿತಾಸಹಸ್ರನಾಮ, ಮಾನಸೋಲ್ಲಾಸ, ಕಾಮಸೂತ್ರ ಹೇಳುವ ಚತುಷಷ್ಟಿ ಕಲೆಗಳಲ್ಲಿ ವೈವಿಧ್ಯತೆ ಇರುವುದೂ ಇದೇ ಕಾರಣಕ್ಕೇ. ಇನ್ನು ಈ ಹೊತ್ತಿಗೆ ಅತ್ಯಂತ ಪ್ರಸ್ತುತವೂ, ಆದರ್ಶವೂ, ಸಾಕ್ಷೀಭೂತವೂ ಆಗಿರುವುದನ್ನು ಸಂದರ್ಭೋಚಿತವಾಗಿ ಗಮನಿಸೋಣ. ನೃತ್ಯ ನಿಷೇಧಗೊಂಡು ಸಂಗೀತ ನೃತ್ಯಾದಿಗಳನ್ನು ಕಲಿಯುವುದೇ ಪಾಪ ಎಂಬ ಭಾವ ಬೇರೂರಿ ಸದಿರ್ ಎಂಬ ನೃತ್ಯಪದ್ಧತಿಯು ಅವಸಾನದಂಚಿನಲ್ಲಿದ್ದ ಕಾಲಕ್ಕೆ ರುಕ್ಮಿಣೀದೇವಿ ಅರುಂಡೇಲ್, ಕೃಷ್ಣ ಅಯ್ಯರ್ ಮುಂತಾದವರು ಭರತನಾಟ್ಯವೆಂಬ ನೂತನ ಹೆಸರನ್ನಿತ್ತು ರೂಪಿಸಿದ ಅನೇಕ ನವೀನ ಸುಧಾರಣೆಗಳ ಫಲವೇ ಇಂದಿಗೆ ಭರತನಾಟ್ಯವು ಮನೆಮಾತಾಗಿರುವುದು. ಆದರೆ ಅದೇ ಸುಧಾರಣೆಗಳ ಶಿಸ್ತಿನಲ್ಲಿ ಮುಂದೊಂದು ದಿನಗಳಲ್ಲಿ ಸೌಂದರ್ಯದ ಸಂಸ್ಕಾರಪ್ರಜ್ಞೆ ಮರೆಯಾಗುತ್ತಾ, ನಾಟ್ಯಶಾಸ್ತ್ರದ ನೆರಳೂ ಲುಪ್ತವಾಗಿ ನವನೃತ್ಯವೆಂಬ ಶಾಸ್ತ್ರಸಮುಚಿತವಲ್ಲದ ಹೊಸತಲ್ಲದ ಹೊಸತು ಸೇರಿಕೊಂಡಿತು. ಆ ಹೊತ್ತಿಗೆ ಸರಿಯಾಗಿ ಸುಧಾರಣೆಯೋಪಾದಿಯಲ್ಲಿ ಬಂದು ನಾಟ್ಯಶಾಸ್ತ್ರದ ಕರಣಾದಿ ಆಂಗಿಕವನ್ನು ಕಾಲಗರ್ಭದಿಂದೆತ್ತಿ ಮರುನಿರೂಪಣೆ ಮಾಡಿದವರು ಡಾ. ಪದ್ಮಾ ಸುಬ್ರಹ್ಮಣ್ಯಂ. ಅಂತೆಯೇ ಯಕ್ಷಗಾನವನ್ನು ಗಮನಿಸಿದರೆ ಪಾರ್ತಿಸುಬ್ಬನಿಂದ ಯಕ್ಷಗಾನ ಕಲೆಯ ಬೀಜಾಂಕುರ, ಶಿವರಾಮ ಕಾರಂತರಿತ್ತ ರೂಪಕ ಸ್ಪರ್ಶ, ಕುರಿಯ ವಿಠಲಶಾಸ್ತ್ರಿಗಳ ಅಭಿನಯ ನಿರೂಪಣೆ, ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆ, ಸೂರಿಕುಮೇರು ಗೋವಿಂದ ಭಟ್ಟರ ಆಂಗಿಕಪಾಠಗಳು, ಶತಾವಧಾನಿ ಗಣೇಶ್ ಮತ್ತು ಮಂಟಪ ಪ್ರಭಾಕರ ಉಪಾಧ್ಯರ ಸಾರಥ್ಯದಲ್ಲರಳಿದ ಸ್ತ್ರೀವೇಷದ ಸೊಗಸು, ಏಕವ್ಯಕ್ತಿ ಯಕ್ಷಗಾನದ ನಿರೂಪಣೆ ಹಾಗೂ ಕಾವ್ಯಸಾಹಿತ್ಯ… ಹೀಗೆ ಎಲ್ಲವೂ ಹೊಸತನ್ನು ಚೆಲುವಾಗಿಸಿದ, ಕಲಾಸ್ವಾದನೆಯನ್ನು ಕಾಪಿಟ್ಟ, ಆಯಾ ಕಾಲಕ್ಕೆ ಆಧುನಿಕವೂ ಕ್ರಾಂತಿಕಾರಿಯೂ ಎನಿಸಿದ ಕೌಶಲ್ಯ. ನಾಟಕದಲ್ಲಾದರೋ ಕೆ.ವಿ.ಸುಬ್ಬಣ್ಣ, ಬಿ.ವಿ.ಕಾರಂತರ ರಂಗಪ್ರಯೋಗಗಳು, ಕಲಿಕಾ ಕಸರತ್ತುಗಳು ಹೊಸತನದ ಮೂರ್ತರೂಪ.
ಇಂತಹ ಮೌಲಿಕವಾದ ಕಾರ್ಯಗಳ ನಡುವೆ ಬಂದು, ಮಿಂಚಿ ಮರೆಯಾದವು ಅದೆಷ್ಟೋ. ಶಾಸ್ತ್ರೀಯನೃತ್ಯಾವರಣದಲ್ಲಿ ಬೆಳೆದರೂ ಉದಯಶಂಕರ್, ಮೃಣಾಲಿನಿ ಸಾರಾಭಾಯ್, ಚಂದ್ರಲೇಖ, ರಾಂಗೋಪಾಲ್‌ರಂತಹ ಅನೇಕ ಕಲಾಪೀಪಾಸುಗಳು ಹೊಸತೆನ್ನುವ ಧೋರಣೆಗೆ ತಮ್ಮದೇ ಆದ ಅಭಿವ್ಯಕ್ತಿಯ ಕಲಾಮೀಮಾಂಸೆ ಬರೆದುಕೊಂಡವರಿದ್ದಾರೆ. ಅವರನ್ನೇ ಅನುಸರಿಸಿ ಸಮಕಾಲೀನ ನೃತ್ಯಗಳನ್ನೇ ತಮ್ಮ ಕನಸುಗಳಿಗೆ ನೃತ್ಯಸಾಧ್ಯತೆಗಳಾಗಿ ಕಂಡುಕೊಂಡವರಿದ್ದಾರೆ. ಇನ್ನು ಪ್ರದರ್ಶಕ ಕಲೆಗಳ ಅಸಾಮಾನ್ಯತೆಯನ್ನು ವಿಸ್ತಾರವಾಗಿಸಿದ ಸಿನೆಮಾದಂತಹ ಕಲೆಯೂ ಕೂಡಾ ಕ್ಷಣಕ್ಷಣಕ್ಕೂ ಅನೇಕ ಹೊಸತನ್ನೇ ದಾಖಲಿಸುತ್ತಾ ಹೋದ ಒಂದು ಕಲಾವಿಶ್ವಕೋಶ. ಸಿನೆಮಾ ಪ್ರಯೋಗಗಳನ್ನು ಗಮನಿಸಿ ಮಾಡಿದ ಯಕ್ಷಗಾನ ರಂಗಪ್ರಯೋಗಗಳೂ ಹೊಸತಿನ ಪಟ್ಟಿಯಲ್ಲಿ ನಿಲ್ಲುವಂತವೇ. ಇತ್ತೀಚೆಗಂತೂ ‘ವಾಸ್ತವವನ್ನು ಸಮೀಪಿಸುವ, ವರ್ತಮಾನದ ಧ್ವನಿಯನ್ನು ಎತ್ತಿ ಹಿಡಿಯುತ್ತೇವೆ’ಯೆನ್ನುವ ಎಡಪಂಥೀಯ ವಿಚಾರಗಳನ್ನೋ, ರಾಷ್ಟ್ರವಿರೋಧಿ-ಸನಾತನವಿರೋಧಿವಿಚಾರ ಪೋಷಿಸುವ ರಂಗಪ್ರಯೋಗಗಳನ್ನೋ ಹೊಸತಿಗೆ ಹರಿಕಾರ ಎಂದು ಪರಿಭಾವಿಸಲಾಗುತ್ತದೆ.
ಹೀಗೆ ಹೊಸತೆಂಬ ಧೋರಣೆಯ ಪಟ್ಟಿ ದೊಡ್ಡದು. ಆದರೆ ಅವುಗಳ ಗುಣ-ಗಂಧ ಬೆರಳೆಣಿಕೆಯದ್ದು. ಆಗಲೇ ಹೇಳಿದಂತೆ ಹೊಸತೆಂಬುದೆಲ್ಲವೂ ವೃದ್ಧಿಪ್ರಾಯವಾಗಿಯೇ ಇರಬೇಕೆಂದೇನಿಲ್ಲವಲ್ಲ. ಬತ್ತದ ಅಂತರ್ಜಲಕ್ಕೂ, ಉಕ್ಕಿದ ನೆರೆಗೂ ಗುಣಧರ್ಮದಲ್ಲಿ ಸಾಕಷ್ಟು ವ್ಯತ್ಯಾಸಗಳಿರುವಂತೆ.
ಹೊಸತೆಂಬುದು ಕುಂಬಾರನ ಚಕ್ರದಂತೆ. ಮಣ್ಣು ಮೊದಲಿನದೇ. ತಳೆಯುವ ಆಕಾರ ಮಾತ್ರ ಭಿನ್ನ. ಕುಂಬಾರನ ಕಸುವಿಗನುಸಾರ ಕುಡಿಕೆಯ ರೂಪು ತಳೆಯುತ್ತದೆ. ಇಂತಿಪ್ಪ ಹೊಸತು ಹಳತಿನ ಒಪ್ಪಂದವೋ ಚಕ್ರದಂತೆ ಪರಿಭ್ರಮಣಸೂಚಿ. ಹಳತನ್ನು ಬಿಟ್ಟ ಹೊಸತಿಗೆ ಔಚಿತ್ಯವಿಲ್ಲ. ಹೊಸತಿನ ಸ್ಪರ್ಶವಿಲ್ಲದ ಹಳತಿಗೆ ಬೆಲೆಯಿಲ್ಲ. ಅದಕ್ಕೆ ಅಲ್ಲವೇ ಡಿವಿಜಿಯವರು ಹೇಳಿದ್ದು.
ಹೊಸಚಿಗುರು ಹಳೇ ಬೇರು ಕೂಡಿರಲು ವನಸೊಬಗು
ಹೊಸಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ
ಋಷಿ ವಾಕ್ಯದಿಂ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ
ಹಾಗೆಂದು ಹಳತಿಗೂ ಹೊಸತಿಗೂ ರೂಪನಿಷ್ಠವಾಗಿ ಕಸಿ ಕಟ್ಟುವುದಾದರೆ ಅದರಿಂದ ಕಲಾಸಮಷ್ಠಿಗೆ ಅನುಕೂಲವಾದೀತೇ ? – ಔಚಿತ್ಯವೆಂಬ ತೂಕಬಟ್ಟಲು ಇರುವುದೇ ಇದಕ್ಕಾಗಿ. ಜಾನಪದದ ವಿಶಾಲ ಹರಿವು, ವ್ಯಾಪ್ತಿ, ಲೋಕಧರ್ಮಿಯ ಬೀಡುಬೀಸಾದ ಆಯಾಮಕ್ಕೆ ಇಂತಹ ಕಸಿ ಒಗ್ಗುವ ಸಾಧ್ಯತೆಗಳಿವೆ. ಆದರೆ ಶೈಲೀಕೃತವಾದ ಶಿಷ್ಟ ಪ್ರದರ್ಶಕ ಕಲೆಗಳಿಗೆ ಅದರದ್ದೇ ಆದ ಹದ, ನಾಟ್ಯಧರ್ಮಿಯ ಸೊಗಸು ನಿಶ್ಚಿತ ಪಾಠಕ್ರಮದ ಬಂಧದಲ್ಲಿ ಸೂತ್ರೀಕರಿಸಲ್ಪಟ್ಟಿರುತ್ತದೆ. ಈ ಸಾಂಪ್ರದಾಯಿಕ ಕಲೆಗಳಲ್ಲಿ ಚೂರು ಎಚ್ಚರ ತಪ್ಪಿದರೂ ‘ಕಸಿ’ ಆ ಕಲೆಯ ಜಾತಿ (ಜನ್ಮತಃ ಇರುವುದು) ಅಂದರೆ ವಂಶವಾಹಿಯನ್ನೇ ವಿರೂಪಗೊಳಿಸುವ ಅಪಾಯಗಳಿವೆ. ಫಲವಾಗಿ ಕೃತಕಗರ್ಭಗಳೋ, ವಿಕಾರಸಂತತಿಗಳೋ ಮೂಡಿದರೆ ಅತಿಶಯವಲ್ಲ. ಇದಕ್ಕೆ ನಿದರ್ಶನ ಇಂದಿಗೂ ಕಲಾವರಣದಲ್ಲಿ ಅಳುತ್ತಾ, ಅಳಿಸುತ್ತಲೇ ಇರುವ ಹಲವು ಪ್ರಯೋಗಶಿಶುಗಳು.
ಯಾವುದೇ ಕಲೆಗೂ ಅದರ ಆವರಣ ಮತ್ತು ಹೂರಣ ಅಂದರೆ ರೂಪ ಮತ್ತು ಸ್ವರೂಪಗುಣ (Form and Content) ದ ಸಮನ್ವಯವೇ ಅದರ ಇರುವಿಕೆ. ಈ ಇರುವಿಕೆಯನ್ನು ಗೌರವಿಸುವುದೇ ಅದರ ಸತ್ತ್ವವನ್ನು ಕಾಪಿಡುವ ಮೂಲನಿಧಿ. ಒಂದುವೇಳೆ ರೂಪ ಮತ್ತು ಸ್ವರೂಪಗುಣವೆರಡನ್ನೂ ಪ್ರತ್ಯೇಕಿಸುವುದೆಂದರೆ ಅದು ಆ ಕಲೆಯ ಇರುವಿಕೆಯನ್ನೇ ಕದಡಿದಂತೆ. ಅದರಲ್ಲೂ ಶಿಷ್ಟಪ್ರದರ್ಶನಕಲೆಗಳಲ್ಲಿ ಇವೆರಡರ ನಡುವಿನ ಬಾಂಧವ್ಯವು ಶಿಸ್ತಿನ ಪಾಕದಲ್ಲಿ ಮತ್ತಷ್ಟು ಗಟ್ಟಿ. ಇಂತಹ ಕಲೆಗಳಲ್ಲಿ ಸ್ವರೂಪಗುಣದ ಹದವನ್ನು ಆಲೋಚಿಸದೆ ರೂಪವನ್ನಷ್ಟೇ ಬದಲು ಮಾಡುವುದರಿಂದ ಆ ಕಲೆಯ ಅಸ್ಥಿ ಮಾತ್ರ ಉಳಿದುಕೊಂಡೀತು. ಕಾರಣ, ಕಲೆಯೆಂಬ ಬೀಜದ ಪೋಷಣೆಗೆ ಅದರದ್ದೇ ಆದ ವಾತಾವರಣ, ಸಂಸ್ಕೃತಿಯ ಆವರಣ ಬೇಕು. ಗುಣಸ್ವರೂಪದ ಪ್ರಕಾಶಕ್ಕೆ ಅದರ ರೂಪ ಸಹಕರಿಸಬೇಕೇ ವಿನಾ ರೂಪವೊಂದೇ ಪರಮಾದರ್ಶವಲ್ಲ. ಹಾಗೆಂದು ರೂಪವನ್ನು ಬಿಟ್ಟರೆ ಕಲಾವೈವಿಧ್ಯಗಳು ಮೂರ್ತವಾಗಿ ತೋರಲಾರವು. ಅಂತೂ ಎರಡೂ ಒಂದಕ್ಕೊಂದು ಸಹವರ್ತಿಯಾಗಿ ನಡೆದರೇನೇ ಆ ಕಲೆಯ ಒಟ್ಟಂದಕ್ಕೆ ಬೆಲೆ.
ಆದರೆ ಹೊಸತನದ ಅಪೇಕ್ಷೆಯಲ್ಲಿರುವ ಅನೇಕ ಕಲಾವಿದರು ಕೈಹಾಕುವುದೇ ರೂಪದ ತಿದ್ದುಪಡಿಕೆಗೆ. ರೂಪದ ಕಲಿಕೆಗೆ ಶಾಲೆಗಳಿವೆ, ಶಿಕ್ಷಕರಿದ್ದಾರೆ. ಕಲಿಕೆ ಸುಲಭ. ಆದರೆ ಗುಣಸ್ವರೂಪದ ಕಲಿಕೆ ಆಳವಾದ ಅಧ್ಯಯನ, ಅಂತರ್ದೃಷ್ಟಿ, ಚಿಂತನೆ ಬೇಕು. ಬಹಳಷ್ಟು ಮಂದಿಗೆ ಎರಡನೇಯದು ಅಷ್ಟು ಸುಲಭಸಾಧ್ಯವಲ್ಲ. ಆದರೆ ಸ್ವರೂಪಗುಣದ ಪ್ರಜ್ಞೆಯನ್ನೇ ಪಕ್ಕಕ್ಕಿಟ್ಟು ಮಾಡುವ ಮೇಲ್ಮಟ್ಟದ ರೂಪವ್ಯತ್ಯಾಸಗಳು ಮೇಲ್ನೋಟಕ್ಕೆ ಹೊಸತನದ ಬೋಧೆಯನ್ನು ಕೊಡಬಹುದು. ಆದರೆ ಅವುಗಳಲ್ಲಿ ಜೀವವಿರುವುದಿಲ್ಲ. ಕಲ್ಲಿಗೂ ಶೃಂಗಾರ ಮಾಡಬಹುದು. ಆದರೆ ಬಿಂಬದಲ್ಲೇ ಚೈತನ್ಯ ಇಲ್ಲದೇ ಹೋದರೆ ಉತ್ಸವಮೂರ್ತಿಯಿದ್ದೇನು ಫಲ? ಹೀಗೆ ರೂಪನಿಷ್ಟವಾಗಿಯೇ ಕಲಾವಿದನು ಉಳಿದನೆಂದಾದರೆ ರಕ್ಷಿಸಬೇಕಾದದ್ದೇ ಭಕ್ಷಿಸುವಂತಾಯಿತು ಎಂಬಂತೆ ಕ್ರಮೇಣ ಆವರಣವೇ ಕಲೆಯ ಹೂರಣವನ್ನು ಆಕ್ರಮಿಸಿ ಕೊಲ್ಲುತ್ತಾ ಹೋಗುತ್ತದೆ. ಹೊಸತನದ ಹೆಸರಿನಲ್ಲಿ ನಡೆಯುವ ಕಲೆಯೊಂದರ ನಿಧಾನಮರಣ! ಕಡೆಗೊಮ್ಮೆ ಆ ಕಲೆಯ ಬೀಜಗುಣವೇ ಪ್ರಶ್ನಾರ್ಹವಾದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಕಲೆಯ ಸಹಜ ಸತ್ತ್ವ-ತತ್ತ್ವಗಳನ್ನು (potentiality) ಅರ್ಥ ಮಾಡಿಕೊಳ್ಳದೆ ಅಲ್ಲಿ ನಮ್ಮ ಹೊಸತನವೆಂಬ ಸರಕನ್ನು ತುಂಬಲು ಹೊರಡುವುದೇ ಕಲಾವೃಕ್ಷದಲ್ಲಿ ಬಂದಣಿಕೆಯನ್ನು ಹುಟ್ಟುಹಾಕಿಸಿದಂತೆ. ಆಗೆಲ್ಲಾ ಪ್ರಶ್ನಿಸಿಕೊಳ್ಳಬೇಕಾದದ್ದು ಕಲಾವಿದರಾಗಿ ಕಲೆಗಳೊಳಗಿರುವ ಸರಕನ್ನು ಬಳಸಿಕೊಂಡಿದ್ದೇವೆಯೇ? ಅಥವಾ ಕಲಾವಿದನ ಪ್ರತಿಭಾಶೂನ್ಯತೆಗೆ ಕಲೆಯೇ ಆರೋಪಿಯಾಗಿ ತನ್ನ ಅಸ್ತಿತ್ವವನ್ನೇ ಆತನಿಗೆ ಮಾರಿಕೊಳ್ಳುವ ಮರ್ಜಿಗೆ ಬಿತ್ತೇ?
ಇದಕ್ಕಿಂತ ಹೆಚ್ಚಿನ ಅಪಾಯ ಕಲೆಯ ತಾಕತ್ತನ್ನು ಅರಿಯದೆ ನಮ್ಮ ತಾಕತ್ತನ್ನು ಅದರ ಮೇಲೆ ಹೇರುವಂತದ್ದು. ವಾಸ್ತವ ಬೇಕೆಂಬ ಹಟಕ್ಕೆ ರೂಪ-ಸ್ವರೂಪಗುಣದ ವಿವೇಚನೆಯಿಲ್ಲದೆ ಲೋಕಧರ್ಮಿಯನ್ನು ಯಥಾವತ್ತಾಗಿ ಕಲೆಯಲ್ಲಿ ಕಾಣಿಸಹೊರಡುವುದು ಅಂತಹ ಒಂದು ಉಪದ್ವ್ಯಾಪ. ಇದಕ್ಕೆ ಪೂರಕವೋ ಎಂಬಂತೆ ಕಲೆಯಲ್ಲಿ ಹೊಸತು ಎಂದಾಕ್ಷಣ ಪೌರಾಣಿಕ ಸಂಬಂಧಿ ಚಿತ್ರಣಗಳಿಗಿಂತ, ಶಾಸ್ತ್ರೀಯ ರಂಗಪ್ರದರ್ಶನಗಳಿಗಿಂತ ಭಿನ್ನವಾದದ್ದು ಎಂಬ ಕಲ್ಪನೆಯೇ ಬಹುಪಾಲು ಜನರಿಗಿದೆ. ಹೊಸತು ಎಂದಾಕ್ಷಣ ವಾಸ್ತವಕ್ಕೆ ಕಲೆಯು ಪೂರಕವಾಗಿರಬೇಕು ಎಂಬ ಆಶಯವೇನೋ ಯುಕ್ತವೇ ಹೌದು. ಆದರೆ ವಾಸ್ತವಕ್ಕೆ ಸರಿಗಟ್ಟುವ ಯತ್ನದಲ್ಲಿ ಸಮಂಜಸವಾದುದನ್ನು ಆರಿಸುವುದು ಮತ್ತು ಅನುಸರಿಸುವುದೂ ಕೂಡಾ ಬಹಳ ಮುಖ್ಯವಲ್ಲವೇ? ಅಭಿನಯದಲ್ಲಿ ಸಂಚಾರಿಗಳನ್ನು ಬದಲು ಮಾಡಬಹುದು; ಹಾಗೆಂದು ಚತುರ್ವಿಧ ಅಭಿನಯದಿಂದಾಚೆಗೆ ಐದನೇ ಅಭಿನಯವನ್ನು ಸೃಷ್ಟಿಸಲಾದೀತೇ?
ಹೊಸತನ ಎಂಬುದೇ ನಿತ್ಯಸೂರ್ಯೋದಯದಂತೆ. ಎಷ್ಟೇ ಸಲ ನೋಡಿದರೂ ಪ್ರತೀದಿನದ ಸೂರ್ಯ ಹೊಸಬನೇ. ನಿತ್ಯಪ್ರಕೃತಿಯ ವಸ್ತುವೇ ಕಾವ್ಯ(ಕಲೆ)ದ್ದು ಎನ್ನುತ್ತಾನೆ ಧ್ವನಿಲಕ್ಷಣ ಪ್ರತಿಪಾದಕನಾದ ಆನಂದವರ್ಧನ. ಅಂತಹ ಸೂರ್ಯೋದಯ, ಸೂರ್ಯಾಸ್ತವೇ ಎಷ್ಟೋ ಕಾಲದಿಂದ ನಿತ್ಯವಿನೂತನವಾದ ಕಾವ್ಯವಸ್ತು ನಮಗೆಲ್ಲರಿಗೂ ಸುವೇದ್ಯ. ಅಂದರೆ ನಮ್ಮ ಸನಾತನ ಸಂಪ್ರದಾಯ-ಪರಂಪರೆ ಯಾವತ್ತಿಗೂ ಹೊಸತನ ನಿರಾಕರಿಸಿದ್ದೇ ಇಲ್ಲವೆಂದಾಯಿತಲ್ಲ! ನಿತ್ಯ ಕರಗುವ, ಕರಗಿಸುವ, ಅರಳುವ, ಅರಗಿಸುವ, ಬೆಳೆಯುವ ಗತಿಶೀಲತೆಯೇ ಹೊಸತನ. ಅನುಭಕ್ಕೆ ಬಂದದ್ದನ್ನೇ ಅತಿಶಯಿಸಿ ಹೇಳುವುದು ಕಲೆಯ ಆಸ್ತಿ. ಇದಕ್ಕಾಗಿ ಜಡಪ್ರಕೃತಿಯನ್ನು ಸಂದರ್ಭೋಚಿತವಾಗಿ ಮಾನುಷೀಕರಣ ಮಾಡಲೂ ನಾವು ಬಲ್ಲೆವು. ಮಕ್ಕಳು ಅಂಬೆಗಾಲಿಟ್ಟು ನೆಲಕ್ಕೆ ಬಿದ್ದಾಗ ನೆಲವನ್ನೇ ನಿಂದಿಸುವ ಪರಿ ಆ ಸಾಲಿನಲ್ಲಿ ಚಿಕ್ಕ ನಿದರ್ಶನ. ಇನ್ನು ಪೌರಾಣಿಕ ಪಾತ್ರಗಳನ್ನು ಮಾನುಷೀಕರಣಗೊಳಿಸುತ್ತಾ ದೇವತಾಪಾತ್ರಗಳಲ್ಲೋ, ಗಿಡ-ಮರ-ನದಿಗಳಲ್ಲೋ ಮನುಷ್ಯತ್ವದ ಬೇರೆ ಬೇರೆ ಭಾವಗಳನ್ನೇ ಆರೋಪಿಸುತ್ತಲೇ ಆ ಅತಿರಮ್ಯತೆಯಲ್ಲೇ ಏಕಕಾಲಕ್ಕೆ ಜೀವನವಿಸ್ತಾರವನ್ನೂ ಮತ್ತು ಕಲೆಯ ಕ್ಷಿತಿಜವನ್ನೂ ಶತಶತಮಾನಗಳಿಂದಲೇ ಕಂಡುಕೊಂಡವರು. ಹಾಗೆಂದೇ ರಾಮಾಯಣಾದಿ ಕಾವ್ಯಗಳು, ಪುರಾಣದ ಕತೆಗಳು ಹಳತಾಗಿರಬಹುದು; ಆದರೆ ಎಂದಿಗೂ ಅವು ಅಪ್ರಸ್ತುತವಾಗಿಲ್ಲ. ಕಾರಣ ಅವು ಮನೋನಿಷ್ಠ. ಅಲ್ಲಿ ತತ್ತ್ವ, ತಥ್ಯ, ಅನುಭವಕ್ಕೆ ಹೆಚ್ಚು ಬೆಲೆ. ಅಲ್ಲಿನ ಪಾತ್ರಗಳು ಅತಿಶಯವಿದ್ದೀತು, ಅತಿಮಾನುಷವಿದ್ದೀತು. ಆದರೆ ಅವುಗಳ ಮಾನಸಿಕ ತೊಳಲಾಟಗಳಿಗೆ ಸಾವೇ ಇಲ್ಲ. ಇಂತಹ ಮಾಂತ್ರಿಕ ಸ್ಪರ್ಶದ ಪ್ರಕೃತಿಯೇ ಕಲಾಕುಸುಮಗಳ ಸಹಜ ಅರಳುವಿಕೆಗೆ ಪೋಷಕ. ಅಂದರೆ ಕಲೆ ಸಂಪೂರ್ಣ ಭಾವಪ್ರಪಂಚಕ್ಕೆ ಸಂಬಂಧಿಸಿದ್ದು. ವಾಸ್ತವವನ್ನು ಮೀರಿದ್ದು ಎಂದೆನಿಸಿದರೂ, ಕಲೆಗೆ ಭಾವರಸಗಳ ಯಾಜಮಾನ್ಯ ಇಲ್ಲದೇ ಹೋದರೆ ಎಷ್ಟೇ ಹೊಸತಿಗೆ ರಹದಾರಿಯೆಂದು ಉದ್ಘೋಷಿಸಿಕೊಂಡರೂ ಅದು ಶವಶೃಂಗಾರವೇ.
ಅಷ್ಟಕ್ಕೂ ಇದ್ದದ್ದನ್ನು ಇದ್ದ ಹಾಗೆ ಹೇಳುವುದಾದರೆ ನಾಟ್ಯಧರ್ಮಿಯೆಂಬ ನಯಗಾರಿಕೆಗೇನು ಬೆಲೆ? ಲೋಕದಲ್ಲಿದ್ದುದ್ದನ್ನೆಲ್ಲಾ ಯಥಾವತ್ತಾಗಿ ರಂಗಕ್ಕೆ ತಂದರೆ ಕಲೆಯ ಸೊಗಸು ಉಳಿದೀತೇ? ಹೊಸ ವಸ್ತುಗಳ ಹುಡುಕಾಟ ಮತ್ತು ಸಮಕಾಲೀನತೆಯ ಪ್ರತಿಮೆಗಳ ಭ್ರಮೆಗೆ ಸಿಲುಕಿ ರಾಮನಿಗೆ ಬರ್ಮುಡಾ ಹಾಕುವುದೋ, ಸೀತೆಗೆ ಮುಟ್ಟಾಳೆ ಇಡುವುದೋ, ರಾವಣನಿಗೆ ಒಳ್ಳೆಯತನದ ಪಟ್ಟ ಕಟ್ಟುವುದೋ ಮಾಡುವುದಿದ್ದರೆ ಅಂತಹ ರೂಪನಿಷ್ಠವಾದ, ವ್ಯಕ್ತಿನಿಷ್ಠವಾದ ಹೊಸತಿಗೆ ಎಷ್ಟು ದಿನ ಬೆಲೆಯಿದ್ದೀತು? ಹಾಗಾಗಿ ಅನುಕರ್ತರಿಗೆ (ಪಾತ್ರಗಳಾಗಿ ಬರುವವರು) ಅನುಕಾರ್ಯರ (ರಾಮ, ಕೃಷ್ಣ ಇತ್ಯಾದಿ ಪಾತ್ರಗಳು)ನ್ನು ಎಷ್ಟರಮಟ್ಟಿಗೆ ಎಲ್ಲೆಲ್ಲಾ ಅನ್ವಯ ಮಾಡಿಕೊಳ್ಳಬೇಕೆಂಬ ಅರಿವು ಬೇಕು.
ಯಾವುದೇ ಪ್ರಯೋಗವಾದರೂ ರಂಗದಿಂದ ಪ್ರೇಕ್ಷಕರ ಮನೋರಂಗಕ್ಕೆ ಸಂವಹನವಾದರೆ ಸಾರ್ಥಕ. ಹಾಗೆಂದು ತತ್‌ಕ್ಷಣದ ಸಂದರ್ಭಕ್ಕೋ, ಸಮಸ್ಯೆಗೋ ಸಮಕಾಲೀನ ಎನ್ನುವಂತಹ ಪ್ರಯೋಗಗಳನ್ನು ರೂಪಿಸಿದರೂ ಆ ಸಮಸ್ಯೆ ತೀರಿದ ನಂತರ ಪ್ರಯೋಗಗಳು ಅಪ್ರಸ್ತುತ ಎನ್ನಿಸಿಬಿಡುತ್ತವೆ. ಉದಾಹರಣೆಗೆ ಏಯ್ಡ್ಸ್ ಜಾಗೃತಿ, ಅನಕ್ಷರತೆ, ಚಿಕೂನ್ ಗೂನ್ಯಾ, ಬಾಲಕಾರ್ಮಿಕ ಪದ್ಧತಿಯಂತವನ್ನು ಆಧರಿಸಿ ಬಂದ ನಾವೀನ್ಯ ಪ್ರಯೋಗಗಳು ಸಮಸ್ಯೆ ತೀಕ್ಷ್ಣತೆ ತಗ್ಗುತ್ತಿದ್ದಂತೆ ಮರೆಯಾಗಿದ್ದು. ಅದೇ ಕಾವ್ಯಾದಿ ಪುರಾಣಗಳು ಪ್ರಸ್ತಾಪಿಸುವ ಜೀವನಮೌಲ್ಯ-ಅಪಮೌಲ್ಯಗಳ ಕತೆಗಳಾದರೆ ಸಂಕೇತಮಾತ್ರದಿಂದಲೇ ಯಾವ ಕಾಲಕ್ಕೂ ಪ್ರಸ್ತುತವಾಗಿಬಿಡುತ್ತವೆ ಮಾತ್ರವಲ್ಲ, ಭಾವಪೂರ್ವಕವಾಗಿ ವಿವೇಚನೆ ಹೇಳುವ ಕಾಂತಾಸಮ್ಮಿತೆಯಾಗಿ ಆಪ್ಯಾಯಮಾನವೂ ಆಗುತ್ತವೆ.
ಕಲೆಗೆ ನೈತಿಕಮೌಲ್ಯದ ಪ್ರತಿಪಾದನೆ, ಸಾಮಾಜಿಕ ಜವಾಬ್ದಾರಿಯ ಉದ್ದೇಶವಿಲ್ಲವೆಂದಲ್ಲ. ಆದರೆ ಅವುಗಳೇ ಕಲೆಯ ಪರಮಸ್ಥಾಯಿಯಲ್ಲ. ವ್ಯುತ್ಪತ್ತಿಯು ಏನಿದ್ದರೂ ಆನಂದವನ್ನು ಅನುಸರಿಸಿ ಬಂದರೇನೇ ಕಲೆಯ ವೃದ್ಧಿ. ಇದನ್ನು ಆಲಂಕಾರಿಕರು ಎಷ್ಟೊಂದು ತೀವ್ರತೆರನಾಗಿ ಆಲೋಚನೆ, ಆಲೋಢನೆ, ಶೋಧನೆ, ವ್ಯಾಖ್ಯಾನ ಮಾಡಿದ್ದರೆಂದರೆ; ಆ ಪ್ರಮಾಣದ ಉಗುರಿನ ಮೊನೆಯಷ್ಟು ಇಂದಿನ ಬಹುತೇಕ ಕಲಾವಿದರು ನೈತಿಕ ಹೊಣೆಗಾರಿಕೆಯನ್ನು ಕೂಡಾ ಹೊತ್ತು ಮುನ್ನಡೆಯುವುದಿಲ್ಲ. ಹೀಗಿರುವಾಗ ಯಾವುದೇ ಅಧ್ಯಯನದ ನೆರವನ್ನೂ ಪಡೆಯದೇ ‘ಹೊಸ ಮಾದರಿ’ ಎಂದು ರೂಪಿಸಿದರೆ ಕಲೆಯ ಗತಿಯೇನು? ಅಂತಹ ಕಲೆ ನೋಡಿ ತಲೆ ಕೆರೆದುಕೊಳ್ಳುವಂತಾದ ಪ್ರೇಕ್ಷಕರ ಮತಿಯ ಪಾಡೇನು? ಕಣ್ಣಿಗೂ, ಬುದ್ಧಿ ಭಾವಕ್ಕೂ ಸಾಮರಸ್ಯ ಏರ್ಪಡಿಸಬೇಕಾದವುಗಳೇ ಸಮರ ಹೂಡುವಂತಾಗಬಾರದಲ್ಲಾ !?
ಅಷ್ಟಕ್ಕೂ ಕಲೆಯನ್ನು ಜನರು ನೋಡಲು ಬರುವುದೇ ವಿಶ್ರಾಂತಿಗಾಗಿ, ಮನೋಲ್ಲಾಸಕ್ಕಾಗಿ. ‘ವಿಶ್ರಾಂತಿ ಜನನಂ ನಾಟ್ಯವೇದದೃಶ್ಯತಿ’-ನಾಟ್ಯಶಾಸ್ತ್ರವೇ ಹೇಳುವಂತೆ ಬದುಕಿನ ಜಂಜಡಗಳಿಂದ ಹೊರತಾದ ಆನಂದದ ಅಪೇಕ್ಷೆಯೇ ಪ್ರೇಕ್ಷಕನ ಪರಮಗುರಿ. ನಾಟ್ಯವೆಂಬ ಎಲ್ಲ ರಂಜನೆಗಳ ಮೂಲಮಾತೃಕೆ ಹುಟ್ಟಿಕೊಂಡದ್ದೂ ‘ಕ್ರೀಡನೀಯಕಮಿಚ್ಛಾಮಹ’ – ಆಟದಂತೆ ಮುದ ನೀಡಬೇಕು ಎಂಬ ಅಪೇಕ್ಷೆಯಿಂದಲೇ. ಹೀಗಿರುವಾಗ ರಸಕ್ಕೂ ಭಾವಕ್ಕೂ ಏರದೆಯೇ, ತಕ್ಕಮಟ್ಟಿಗೆ ಕಲೆಯ ಪೂರ್ವಾಪರ ತಿಳಿದಿರುವ ಕಲಾಭಿಜ್ಞರಿಗೂ ಸಂವಹನಶೀಲವಾಗದೇ ಮತ್ತಷ್ಟು ದ್ವಂದ್ವ, ಬದುಕಿನ ನೋವುಗಳನ್ನೇ ಮತ್ತೆ ಮತ್ತೆ ನೆನಪಿಸಿ ಕೊರಗಿಸುವಂತಾದರೆ ಅಂಥವು ರಂಜನೆಯಾದರೂ ಹೇಗಾದೀತು? ಅವು ಹೊಸತಿನ ಹೆಸರಲ್ಲಿ ತೆವಳುವ ಅನಾಥಪ್ರೇತಗಳಾಗುವುದರಲ್ಲಿ ಅನುಮಾನವೇ ಇಲ್ಲ.
ಒಟ್ಟಿನಲ್ಲಿ ಕಲೆ ಹೆಚ್ಚೆಚ್ಚು ಸ್ವರೂಪನಿಷ್ಠವಾಗುತ್ತ ಆನಂದಕ್ಕೆ ಸ್ರೋತವಾದಲ್ಲಿಗೆ ಚಿರಂತನವಾಗಿ ಹೊಸ ಪರಿವೇಷವನ್ನು ಪಡೆಯುತ್ತಾ ಹೋಗುತ್ತದೆ ಎಂಬುದಂತೂ ಸುಸ್ಪಷ್ಟ. ಹಾಗಾಗಿಯೇ ಪ್ರಸ್ತುತ ಕಾಲಕ್ಕೆ ಸ್ಪಂದಿಸಹೊರಟ ಪ್ರಾಜ್ಞ ಕಲಾನಿರ್ಮಾರ್ತೃಗಳೂ ಕಲೆಯ ಹೂರಣವನ್ನು ಕೆಡಿಸದಂತೆ ಚಿಂತಿಸಿ ಕೌಶಲ್ಯದಿಂದ ನಿರೂಪಿಸುತ್ತಾರೆ. ಉದಾಹರಣೆಗೆ ಶೀಲಸಂಕ್ರಾಂತಿ ಮತ್ತು ಘೋರಮಾರಕದಂತಹ ಯಕ್ಷಗಾನ ರಂಗಪ್ರಯೋಗಗಳು ಸಮಕಾಲೀನ ಆರೋಗ್ಯಸಮಸ್ಯೆಗಳನ್ನು ಕುರಿತು ಚರ್ಚಿಸಿದರೂ ಅವುಗಳ ಕಥಾವಿನ್ಯಾಸವು ಯಕ್ಷಗಾನದ ರಂಗಕ್ಕೊಪ್ಪುವ ಪೌರಾಣಿಕ ನೆಲೆಯನ್ನೇ ಆಶ್ರಯಿಸಿತ್ತು. ಡಾ. ಪದ್ಮಾಸುಬ್ರಹ್ಮಣ್ಯಂ ಅವರ ಪ್ರದರ್ಶನಗಳಂತೂ ಪಾರಂಪರಿಕವಾಗುತ್ತಾ ಸಾಮಾಜಿಕ ನೆಲೆಯನ್ನು ಅದೆಷ್ಟೋ ಸಲ ಸ್ಪರ್ಶಿಸಿವೆ. ನಾಟಕದಲ್ಲಿ ಅಪರೂಪಕ್ಕೆಂಬಂತೆ ಆದ ಪಾರಂಪರಿಕ ವಸ್ತುಗಳನ್ನಾಧರಿಸಿದ ರಂಗಪ್ರಯೋಗಗಳೂ ಪ್ರಸ್ತುತ ಸಮಾಜವನ್ನು ವಿಡಂಬನಾತ್ಮಕವಾಗಿ ಚರ್ಚಿಸಿವೆ. ಅಂತೆಯೇ ಕರ್ನಾಟಕದಲ್ಲಿ ಡಾ. ಶೋಭಾ ಶಶಿಕುಮಾರ್ ಅವರು ವಿನ್ಯಾಸಗೊಳಿಸಿದ ‘ಸ್ತ್ರೀಶಕ್ತಿ’ ಎಂಬ ಸಮಕಾಲೀನ ಸ್ತ್ರೀಸಂವೇದನೆ-ಸಮಸ್ಯೆ ಮತ್ತು ಸಬಲೀಕರಣದ ಕುರಿತ ಭರತನೃತ್ಯ ಪ್ರಯೋಗ ಇನ್ನಾವುದೇ ಇತರ ಸ್ತ್ರೀಕೇಂದ್ರಿತ ನೃತ್ಯಪ್ರಯೋಗಗಳಿಗಿಂತ ಮೇಲ್ಸ್ತರದಲ್ಲಿದೆ. ಭರತನಾಟ್ಯದ ಇತಿಹಾಸದಲ್ಲೇ ಮೊದಲಬಾರಿಗೆ ವರ್ಣ ನೃತ್ಯಬಂಧವನ್ನು ಸಮೂಹನೆಲೆಯಲ್ಲಿ ಸಮಕಾಲೀನವಾಗಿ ಒಗ್ಗಿಸಿಕೊಂಡ ‘ಬಾಲಾಲಾಪ’ ವೆಂಬ ಮಕ್ಕಳ ಶಿಕ್ಷಣದ ವಸ್ತುವಿನ ನಿರ್ವಹಣೆಯೂ ಕಲೆಯ ಸಂವಿಧಾನವನ್ನು ಭಂಗಿಸದೆ (ಪ್ರಸ್ತುತ ಲೇಖಿಕೆಯ ಅಧ್ಯಯನಕ್ಕೆಂದು ವಿವೇಚಿಸಲಾದ ಎರಡು ಪ್ರಮುಖ ನೃತ್ಯಪ್ರಯೋಗಗಳಿವು) ವಾಸ್ತವಜೀವನಕ್ಕೆ ಹೇಗೆ ಸಂವಾದಿಯಾಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿತ್ತು.
ಕಲೆ ಕೇವಲ ಕಸುಬಲ್ಲ. ದೇಶ-ಕಾಲಧರ್ಮದ ಮೂಸೆಯಡಿಯಲ್ಲಿ ಅದರ ಸ್ವಾದವಡಗಿರುತ್ತದೆ. ಅದಕ್ಕೆ ಹೊಂದುವಂತದ್ದನ್ನು ಮಾಡಿದರೆ ಅಥವಾ ರೂಪ-ಲಕ್ಷಣ ಪರಿಷ್ಕಾರಗಳನ್ನು ತಂದರೆ ಮಾತ್ರ ಹೊಸತನಕ್ಕೆ ಅರ್ಥ. ಅದರಲ್ಲೂ ಕಲೆಯ ಕುರಿತಾದ ಅಸಹಿಷ್ಣುತೆಯ ಧೋರಣೆ ಬಿಟ್ಟು ಕಲೆಯ ಧೋರಣೆಯನ್ನೇ ಪ್ರಧಾನವಾಗಿಟ್ಟುಕೊಂಡರೆ ಕಲೆಯ ಹೊಸತಿಗೆ ನಿಜಕ್ಕೂ ಅರ್ಥ ಸಿದ್ಧಿಸುತ್ತದೆ. ಪಕ್ವಗೊಂಡಷ್ಟೂ ಹೆಚ್ಚು ದಿನ ಬಾಳುತ್ತದೆ, ಬಾಳಿಸುತ್ತದೆ. ಆದರೆ ಕಲೆ ಹೊಸತಾಗಬೇಕೆಂಬ ಲೋಲುಪತೆಯಲ್ಲಿ ಬುದ್ಧಿಗೂ, ಭಾವಕ್ಕೂ ನಿಲುಕದ್ದನ್ನು ರೂಪಿಸಿದರೆ ಅದು ಸ್ವೇಚ್ಛಾಚಾರವಾದೀತು. ಹೊಸತಾಗಿ ಪಿಂಡ ಇಟ್ಟ ಮಾತ್ರಕ್ಕೆ ಅದು ಕಲೆಯೆನ್ನಲಾದೀತೇ? ಇಲ್ಲವಲ್ಲ. ಕುಶಲ ಕಲೆಗೂ ಪ್ರದರ್ಶನ ಕಲೆಗೂ ತನ್ನ ನೆಲೆ-ಸೆಲೆಯಲ್ಲಿ ಸಾಕಷ್ಟು ಅಂತರಗಳಿವೆ. ಅಂತೆಯೇ ಕಲೆಯು ಪದ್ಧತಿ-ಪರಂಪರೆಯಂತೆಯೇ ನಡೆಯಬೇಕೆಂಬ ಅತಿಶಿಸ್ತನ್ನು ಹೇರಿದರೂ ರಂಗದಲ್ಲೇ ಕಲಾಶ್ರಾದ್ಧ ಮಾಡಬೇಕಾದ ಕರ್ಮವೊದಗುತ್ತದೆ. ‘ಪುರಾಣಮಿತ್ಯೇ ನ ಸಾಧು ಸರ್ವಂ’. ಔಚಿತ್ಯದ ನೆಲೆಯಲ್ಲಿ ಹೊಸತೆನಿಸುವ ಆಶಯ-ಆಕಾರದ ಪ್ರಯೋಗಕ್ಕೆ ಹಳತೆನಿಸುವ ವಿಷಯ-ವಿಚಾರದ ತತ್ತ್ವ-ಶಾಸ್ತ್ರದ ಸಮರಸ ಮತ್ತು ಸಮನ್ವಯ ಬೇಕು. ಸನಾತನಕ್ಕೆ ನಿತ್ಯವಿನೂತನವಾದ ಸುಗಂಧ ಇದ್ದೇ ಇರುತ್ತದೆ. ಆದರೆ ನೂತನಕ್ಕೆ ಸನಾತನದ ಗಂಧ ಆಸರಿಸುವ ಆತ್ಮೀಯ ಬಂಧವಿರಬೇಕು. ಇದನ್ನು ಕಾಂಬ ಕಣ್ಣು ಕಲಾಕೋವಿದರಿಗೂ, ಕಲಾದಾತಾರರಿಬ್ಬರಿಗೂ ಇರಬೇಕು. ಅದೇ ಕಲಾಸ್ವಾದ, ಕಲಾಹ್ಲಾದ, ಕಲಾರೋಗ್ಯದ ಹೆದ್ದಾರಿ.
ಅಂತಹ ಹೊಸತು ನಮ್ಮನಿಮ್ಮೆಲ್ಲರ ಕಲಾಹಾದಿಯನ್ನು ಕಾಯಲಿ ಎಂಬ ಸದಾಶಯದಲ್ಲಿ ಹೊಸ ಹೆಜ್ಜೆಯನ್ನಿಟ್ಟೀದ್ದೇವೆ. ಹರಕೆ-ಹಾರೈಕೆ ಜೊತೆಗಿರಲಿ.
ಪ್ರೀತಿಯಿಂದ
ಸಂಪಾದಕರು