Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು
ಸಾಹಿತ್ಯ-ಸಂಗೀತ-ಕಲೆ-ನೃತ್ಯ ಯಾವುದನ್ನೇ ಆಗಲಿ ಅದನ್ನು ಕಲಿಯಬೇಕಿದ್ದರೆ, ಕಲಿತು ಕಲೆಯಬೇಕಿದ್ದರೆ ಮೊದಲನೇಯದಾಗಿ ಆಸಕ್ತಿ ಆಮೇಲೆ, ಸರಿಯಾದ ಮಾರ್ಗದರ್ಶನ ಮತ್ತು ಪರಿಶ್ರಮ ಬೇಕು. ಹಾಗೆಂದು ಕಲಿಕೆ ಸುಲಭವೂ ಸಹನೀಯವೂ ಆಗಬೇಕಿದ್ದರೆ ಮೇಲೆ ಹೇಳಿದ ಮೂಲದ್ರವ್ಯಗಷ್ಟೇ ಸಾಕಾಗುವುದಿಲ್ಲ. ವಿದ್ಯಾರ್ಥಿಗೆ ಎಳವೆಯಿಂದಲೇ ಬೆಳವಣಿಗೆಗೆ ಪೂರಕವಾದ ಪೋಷಕವಾದ ಹಿನ್ನೆಲೆ ಇರಬೇಕಾಗುತ್ತದೆ. ಹಿ-ನ್ನೆಲೆ ಅಂದರೆ ಅಪ್ರಯತ್ನವಾಗಿ ತನ್ನನ್ನು ರೂಪಿಸುವ ವಾತಾವರಣ; ಅದೇ ಚಿಮ್ಮುಹಲಗೆ. ಅದೊಂದು ಬಾಲ್ಯದಿಂದಲೇ ದೊರಕಿದರೆ, ಅಭ್ಯಾಸವೂ, ಸಾಧನೆಯೂ ದುಷ್ಕರವೆನಿಸಲಾರದು. ಆದರೆ ಯಾವ ಆನುಪೂರ್ವಿ, ತತ್ಸಂಬಂಧಿಯಾದ ಪರಿಸರ ಇಲ್ಲದೆ, ಒಂದು ಕಲಾಪ್ರಕಾರದಲ್ಲಿ ಆಸಕ್ತಿಯನ್ನು ಕುದುರಿಸಿಕೊಂಡು ಅಧ್ಯಯನ ಮಾಡುವುದು ಅಕ್ಷರಶಃ ಸಶ್ರದ್ಧಾತಪಸ್ಸು. ಇಂತಹ ದಾರಿಯಲ್ಲಿ ಸಾಗುವ ಕಲಾಭಿಲಾಷಿಯ ಸಾಧನಸೋಪಾನಕ್ಕೆ ಉಘೇ ಎನ್ನಬೇಕು. ಈ ರೀತಿಯ ಕಠಿನಪಥದಲ್ಲಿ ಕ್ರಮಿಸಿ, ಮನೋಬುದ್ಧಿಕಾಯಗಳನ್ನು ದಂಡಿಸಿ, ಹಠ ಹಿಡಿದು ನೃತ್ಯಾಂಗಣದಲ್ಲಿ ಅರಳಿನಿಂತ ಹೂವು-ಸುಷಮಾ ಗೌಡ.
ಸುಷಮಾಗೌಡ ಅವರ ರಂಗಾರೋಹಣ (ಆರಂಗೇಟ್ರಂ) ಇತ್ತೀಚೆಗೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಸಂಪನ್ನವಾಯಿತು. ಈ ರಂಗಾರೋಹಣ ಎಲ್ಲದರಂತಲ್ಲ-ಹತ್ತರೊಟ್ಟಿಗೆ ಹನ್ನೊಂದು ಅಲ್ಲ-ಅನ್ನುವುದರ ಕುರಿತು ಇದಿಷ್ಟು ಪೀಠಿಕೆ ಬರೆಯಬೇಕಾಯಿತು. ಈಕೆ, ಅವರ ಮನೆತನ/ಕುಟುಂಬಾವರಣದಲ್ಲೇ ಮೊದಲ ನಾಟ್ಯಕಲಾವಿದೆ. ತನ್ನ ಬಾಲ್ಯದ ಮೌಗ್ಧ್ಯದಲ್ಲಿ ಕಿವಿಯು ಕೇಳಿರದ, ಕಣ್ಣು ಕಂಡಿರದ ನಾಟ್ಯಕಲೆಯತ್ತ ಆಕರ್ಷಣೆ ಹುಟ್ಟಿದ್ದೇ ಆಕಸ್ಮಿಕ. ನಾಟ್ಯವೆಂದರೆ ತಾಳದ ಗಣಿತೀಯವಾದ ಕಲಿಕೆಯೋ, ಕೈಕಾಲು ಮುಖ ತಿರುಚುವ ಕಸರತ್ತೋ ಅಲ್ಲವಷ್ಟೇ ! ಅಷ್ಟೇ ಆದರೆ ಇತರೇತರ ವ್ಯಾವಹಾರಿಕ ವಿದ್ಯೆಯಂತೆ ಅದನ್ನೂ ಹಗಲಿರುಳು ಒದ್ದಾಡಿ ಗಟ್ಟಿಗೊಳಿಸಿಕೊಳ್ಳಬಹುದು.
ಕಲೆ ಅಂದಾಗ, ಅದು ಪುಟ್ಟಪೂರಾ ಭಾವನಾವ್ಯಾಪಾರ ಕ್ಷೇತ್ರ. ಆ ‘ಭಾವ’ದ ಬೆನ್ನಹಿಂದೆ ಇಡಿಗಿಡೀ ಪರಂಪರೆ ಮುರಕೊಂಡು ಬಿದ್ದಿರುತ್ತದೆ. ಭಾವದ ರೂಪಣವಾಗಬೇಕಿದ್ದರೆ ಅದಕ್ಕೆ ಸಂಬಂಧಿಸಿದ ಮೂಲ-ಚೂಲಗಳನ್ನು ಅಗಿಯಬೇಕು, ಅರಗಿಸಿಕೊಳ್ಳಬೇಕು. ಒಬ್ಬ ಕಲಾವಿದನಿಗಿರುವ ನಿಜವಾದ ಸವಾಲೇ ಇದು. ಈಗ ಚಲಾವಣೆಯಲ್ಲಿರುವ ಎಷ್ಟೋ ಹೇಮಾಹೇಮಿ ಪ್ರತಿಷ್ಠಿತ ಕಲಾಕೋವಿದರೂ ಈ ವಿಭಾಗದಲ್ಲೇ ತೆಳುವಾಗಿರುತ್ತಾರೆ. ಭಾವದ ತಾಖತ್ತು ಅಂಥದ್ದು! ಆಂಗಿಕವಾದ ಕ್ರಿಯಾಕಲಾಪವನ್ನು ಹಾಗೂ ಹೀಗೂ ಮೆಯ್ಗೂಡಿಸಿಕೊಂಡು ಭಲೇ ಅನಿಸುವಂತೆ ಪ್ರಸ್ತುತಿಸಬಹುದು. ಆದರೆ ಸಮಗ್ರನಾಟ್ಯದ ಜೀವಕೇಂದ್ರವಾದ ‘ಸಾತ್ತ್ವಿಕ’ವು ಪ್ರಕಾಶಿಸಬೇಕಿದ್ದರೆ, ಭಾವದ್ರವ್ಯಕ್ಕೆ ಕಾರಣವಾಗುವ ಕಥೆ-ಪಾತ್ರ-ನಡವಳಿಕೆ-ಶಬ್ದಬೋಧ-ಅರ್ಥಾನುಸಂಧಾನ ಇವುಗಳ ಹೆಚ್ಚಿನ ಅರಿವು ಅತ್ಯವಶ್ಯ. ಕುಮಾರಿ ಸುಷಮಾ ಗೌಡ ಅವರ ನಿಷ್ಠೆ-ಶ್ರದ್ಧೆ-ಅಭ್ಯಾಸಗಳೆಲ್ಲ ಮುಪ್ಪುರಿಗೊಂಡು ಅವರನ್ನು ರಂಗದಲ್ಲಿ ಓಲಾಡಿಸಿವೆ, ತೇಲಾಡಿಸಿವೆ.
ನಮ್ಮವರ ಪೈಕಿಯಲ್ಲಿ ಯಾರೂ ಈ ಕ್ಷೇತ್ರದಲ್ಲಿ ತೆರೆದವರೂ ಇಲ್ಲ, ಮೆರೆದವರೂ ಇಲ್ಲ ಎಂಬ ಸುಷಮಾರ ಪರಿಶೀಲನವೇ ಅವರ ಕಾಲಿಗೆ ಗೆಜ್ಜೆ ಕಟ್ಟಿಸಿದ್ದು. ಗುರುವಾಗಿ ಲಭಿಸಿದವರು ಡಾ.ಶೋಭಾ ಶಶಿಕುಮಾರ್. ಸಾತ್ತ್ವಿಕದ ವಿಜಯಧ್ವಜವನ್ನು ಏರಿಸಲು ಹಾರಿಸಲು, ಚಾರಿ-ಕರಣ-ಅಡವು-ಅಂಗಾಹಾರಾದಿಗಳನ್ನು ಆನುಷಂಗಿಕವಾಗಿ ಬಳಸಿ ರಸಿಕರಿಗೆ ಭಾವಸಮಾರಾಧನವನ್ನೇ ಮಾಡುವ ಡಾ. ಶೋಭಾ, ತಮ್ಮ ಶಿಷ್ಯೆಯರನ್ನೂ ಅದೇ ಒರಳಲ್ಲಿ ಉರುಳಿಸುವ ಹೊರಳಿಸುವ ದೃಢನಿಶ್ಚಯದ ಕಲಾವಾದಿನಿ. ವಸ್ತುತಃ ಸುಷಮಾ ತನ್ನನ್ನು ಪುಟಕ್ಕಿಟ್ಟುಕೊಂಡದ್ದು ಅಂತಹ ಬೆಂಕಿಯಲ್ಲಿ.
ಇಷ್ಟೆಲ್ಲಾ ಹಿಂಜಿಹಿಂಜಿ ಯಾಕೆ ಬರೆಯಬೇಕು ಎಂದರೆ ಒಬ್ಬ ಕಲಾವಿದೆಯನ್ನು ರಂಗದ ಮೇಲಷ್ಟೇ ಕಂಡು ಷರಾ ಬರೆಯಬಾರದು ಎಂಬುದನ್ನು ಸೂಚಿಸಲಿಕ್ಕಾಗಿ. ಆರಂಭದ ಪುಷ್ಪಾಂಜಲಿಯಿಂದ ಕೊನೆಯ ತಿಲ್ಲಾನದ ತನಕ ನಮಗೆ ಸಾಮಾನ್ಯತಃ ಕಲಾವಿದೆಯಲ್ಲಿ ಕಾಣುತ್ತಿದ್ದದ್ದು ಅನಿರ್ದಿಷ್ಟವಾದ ಧಾವಂತ. ಎದೆಗುದಿ, ಗಾಬರಿ, ಭಾವಕ್ಕೂ ದೇಹಕ್ಕೂ ತಾಳೆಯಾಗದ ತಳಮಳ. ವಸ್ತುಶಃ ಶಕ್ತವಾದ ಅಭಿನಯ ಸುಷಮಾರ ಸಾತ್ತ್ವಿಕದಲ್ಲಿ ಪ್ರದರ್ಶನದುದ್ದಕ್ಕೂ ಚೆಲ್ಲುವರಿದಿತ್ತು. ಆದರೆ ನೃತ್ಯಾವಸರದಲ್ಲಿ ಕಾಣಲೇಬೇಕಾದ ‘ಸಹಜತೆ’ ಅನಗತ್ಯವಾದ ಆತಂಕದಿಂದ ದೀಪಶಿಖೆಯಂತೆ ಆಗೊಮ್ಮೆ ಈಗೊಮ್ಮೆ ಓಲಾಡುತ್ತಿತ್ತು. ಅದಕ್ಕೆ ಕಾರಣ ಆರಂಭದಲ್ಲಿ ಉಲ್ಲೇಖಿಸಿದಂತೆ, ಆನುಪೂರ್ವಿಯ ಪೂರ್ವಾವರಣದ ಕೊರತೆ. ಪ್ರತಿಯೊಂದು ಸಂಚಾರಿಯ ಭಾಗದಲ್ಲಿ, ಅಲ್ಲಲ್ಲಿ ಬರುವ ಪಾತ್ರ-ವ್ಯಕ್ತಿಗಳನ್ನು ಅತ್ಯಂತ ಎಚ್ಚರದಿಂದ ನೆನಪಿಟ್ಟುಕೊಂಡು ನಿರ್ವಹಿಸುವತ್ತಲೇ ತನ್ನ ಗಮನವನ್ನು ಸಾಂದ್ರೀಕರಿಸುತ್ತಿದ್ದುದು ಕಂಡುಬರುತ್ತಿತ್ತು.
ಆದರೂ ಮೋಹಕವಾದ ಆಂಗಿಕವನ್ನು ನಿರಾಯಾಸವಾಗಿ ನಿರಂತರನೃತ್ಯದ ಜೊತೆ ಅವರು ನಿಭಾಯಿಸುತ್ತಿದ್ದುದು ಪ್ರಶಂಸನೀಯ. ಕಷ್ಟಸಾಧ್ಯವಾದ ಚಲನ-ವಲನಗಳನ್ನು ಸಲೀಲವಾಗಿ, ಅಷ್ಟೇ ಆಕರ್ಷಕವಾಗಿ ತೂಗಿಸಿದ್ದೂ ಸ್ತುತ್ಯಪ್ರಯತ್ನ. ಮೊತ್ತಮೊದಲ ಗಣಪತಿಸ್ತುತಿಯೇ ‘ಗಜಾನನಂ ಭೂತಗಣಾದಿ ಸೇವಿತಂ’-ಬಹುಪ್ರಚುರವಾದ ಅನನ್ವೇಯಪದಗುಂಫನದ ಶ್ಲೋಕ. ಮೊದಲೇ ನೃತ್ಯಕ್ಷೇತ್ರಕ್ಕೂ ಸಾಹಿತ್ಯಕ್ಷೇತ್ರಕ್ಕೂ ಇರುವುದೇ ಆಲಿಪ್ತಸಂಬಂಧ. ಗಣಪತಿಗೆ ಸಂಬಂಧಿಸಿ ಯಾವುದೇ ಅಭಿನೇಯಕಲ್ಪವನ್ನೂ ಸೂಚಿಸದ-ಮರುಭೂಮಿಯ ಆಲದಮರ- ಈ ಪದ್ಯ. ಆದರೂ ಗುರುವಿನ ಬೆವರ ಅಚ್ಚಚ್ಚಿನಲ್ಲಿ ಎರಕಗೊಂಡ ಸುಷಮಾ, ಅಲ್ಲಿಯೇ ತನ್ನ ಛಾಪನ್ನು ಒತ್ತಿ, ತನ್ನ ಸಾಮರ್ಥ್ಯವನ್ನು ಸ್ಥಿರೀಕರಿಸಿದರು. ಅಲರಿಪು ಮತ್ತು ನಟೇಶಕೌತ್ವದ ಕ್ಷಿಪ್ರ ಅಂಗವಿಕ್ಷೇಪವೂ ದೇಹದ ಮೇಲೆ ಅವರಿಗಿರುವ ಹಿಡಿತವನ್ನು ಸಷ್ಟವಾಗಿ ತೋರಿಸಿತು. ‘ಯಮನೆಲ್ಲೂ ಕಾಣೆನೆಂದು ಹೇಳಬೇಡ’ ಎನ್ನುವ ದಾಸಸಾಹಿತ್ಯದಲ್ಲಿ ನಾಟ್ಯಾನುಕೂಲಿಯಾದ ಪದಗತಿ ಇಲ್ಲವಾದರೂ, ಸುಷಮಾ ತಕ್ಕಮಟ್ಟಿಗೆ ಸಂಚಾರಿಯ ಕಲಾಪದಲ್ಲಿ ಕತೆಯನ್ನು ರೇಖಿಸಿ, ಆಯಾ ಪಾತ್ರಗಳನ್ನು ಚಿತ್ರಿಸುವಲ್ಲಿ ಗೆಲುವಿನ ಮೆಟ್ಟಲೇರಿದರು.
ನಾಟ್ಯಕ್ಷಮತೆಗೆ ಪ್ರಮಾಣಪಾಷಾಣವಾದ ‘ವರ್ಣ’ದಲ್ಲಿ ಸುಷಮಾ ಗೌಡ ಎಷ್ಟರಮಟ್ಟಿಗೆ ಕೇವಲ ಲಯನಿರ್ವಹಣೆಯತ್ತ ಏಕಚಿತ್ತರಾಗಿದ್ದರೂ ಎಂಬುದು ಹೆಜ್ಜೆಹೆಜ್ಜೆಗೆ ಎದ್ದು ತೋರುತ್ತಿತ್ತು. ಜತಿಯಲ್ಲಾಗಲೀ ಸ್ವರಸಂಗತಿಗಳಲ್ಲಾಗಲೀ ಲೆಕ್ಕಾಚಾರ ತಪ್ಪಬಾರದೆಂಬ ಎಚ್ಚರ ಮುಖದಲ್ಲಿ ಆಗಾಗ ಹಣಿಕುತ್ತಿತ್ತು. ಶೋಭಾ ಅವರ ವರ್ಣವಿನ್ಯಾಸವೇ ಎಂತಹವರನ್ನೂ ವಿವರ್ಣಗೊಳಿಸುವಂತಹದ್ದು. ಅದರಲ್ಲೂ ಧನ್ಯಾಸಿ ರಾಗದ ಪಾಪನಾಶಂ ಶಿವನ್ ಅವರ ‘ನೀ ಇಂದ ಮಾಯುಂ’ ಎಂಬ ಬಹುಪ್ರಸಿದ್ಧ ವರ್ಣ. ಎಲ್ಲರಿಗೂ ತಿಳಿದಿರುವುದು ಎಂದಾದರೆ ಅದನ್ನು ಮತ್ತಷ್ಟು ಆಕರ್ಷಕವಾಗಿ ಪ್ರಸ್ತುತಿಗೊಳಿಸುವ ಸವಾಲು ಕೂಡಾ ಹೆಚ್ಚೇ. ಸರಿಸುಮಾರು ಮುಕ್ಕಾಲುಗಂಟೆಯ ಅಖಂಡ ವರ್ಣದ ಪ್ರಸ್ತುತಿಯಲ್ಲಿ, ಸುಷಮಾಗೌಡ ತಮ್ಮ ಮಿತಿಯನ್ನು ದಾಟಿ, ತನ್ನೊಳಗಿರುವ ಕಲಾವಿದೆಯನ್ನು ಪ್ರಶ್ನಾತೀತವಾಗಿ ಪ್ರಕಟಿಸಿದರು.
ರಂಗಾರೋಹಣದ ಸೋಪಾನವನ್ನು ಕ್ರಮಕ್ರಮವಾಗಿ ಏರುತ್ತಾ ಹೋದದ್ದಕ್ಕೆ ಸಾಕ್ಷಿಯಾದವು- ಮುತ್ತುಸ್ವಾಮಿ ದೀಕ್ಷಿತರ ವಿಳಂಬಕಾಲದ ಕೃತಿ ಮಾಮವ ಮೀನಾಕ್ಷಿ ಮತ್ತು ಧರ್ಮಪುರಿ ಸುಬ್ಬರಾಯರ ರಚನೆಯ ಜಾವಳಿ ‘ಏ ರಾರಾ’. ವಿವಾಹವನ್ನು ಮುಂದೊತ್ತಿ ನಾಟ್ಯದೊಂದಿಗೆ ರಂಗಾರೋಹಣವೆಂಬ ಮದುವೆ ಮಾಡಿಕೊಂಡ ಸುಷಮಾರ ಆತ್ಯಂತಿಕ ಭಾವಕ್ಕೆ ಸಾಕ್ಷಿಯಾದದ್ದು ಜಾವಳಿಯ ನಾಯಿಕಾನಿರೂಪಣೆ. ಇದನ್ನೆಲ್ಲ ಗಮನಿಸಿದರೆ ಅವರ ತಪೋಯಾತ್ರೆಯಲ್ಲಿ ಖಂಡಿತಾ ಯಶಸ್ಸು ಅನತಿದೂರದಲ್ಲೇ ಪ್ರಾಪ್ತವಾಗುತ್ತದೆ ಎಂದು ಉತ್ಕಂಠವಾಗಿ ಹೇಳಬಹುದು; ಹೇಳಬೇಕು. ಅವರ ಛಲಕ್ಕೆ ಅಭಿನಂದನೆಗಳು.
ಶೇಕಡಾ ೯೫ ಅಂಕದವರನ್ನು ಹೊಳೆ ದಾಟಿಸುವುದರಲ್ಲಿ ಅಂಥಾ ಭಗೀರಥ ಪ್ರಯತ್ನವಿಲ್ಲ ಗುರುಗಳಿಗೆ. ಸರಾಸರಿಯ ಗೆರೆಯಲ್ಲಿರುವವರನ್ನು ಕೊಂಡು ಕಡೆದು ಕೆತ್ತಿ ನಿಲ್ಲಿಸಿ ನೂರರ ಆಚೆ ತಲುಪಿಸುವುದು ನಿಜವಾದ ಗುರುಶಕ್ತಿ. ಅಂತಹ ಶಕ್ತಿಪಾತವನ್ನು ಮಾಡಿದ ಡಾ. ಶೋಭಾ ಶಶಿಕುಮಾರ್ ಅವರಿಗೆ ಅಭಿನಂದನೆ. ರಂಗಾರೋಹಣಕ್ಕೆ ಸಂಗೀತಸ್ತಂಭಗಳಾಗಿ ಗಾನ -ಬಾಲಸುಬ್ರಹ್ಮಣ್ಯಶರ್ಮ, ಮೃದಂಗ-ಶ್ರೀಹರಿ, ರಿದಂಪ್ಯಾಡ್-ಪ್ರಸನ್ನಕುಮಾರ್, ಕೊಳಲು –ನರಸಿಂಹಮೂರ್ತಿ, ವೀಣೆ-ಶಂಕರರಾಮನ್, ಮತ್ತು ನಿರೂಪಣೆಯಲ್ಲಿ ಡಾ. ಮನೋರಮಾ ಬಿ.ಎನ್ ಕಾರ್ಯಕ್ರಮಕ್ಕೆ ಕಳೆ ಕೂಡಿಸಿದರು.
(ಲೇಖಕರು ಕವಿ, ರಂಗನಿರ್ದೇಶಕ, ರೂಪಕ ನಿರ್ದೇಶಕರು, ಅವಧಾನ ಪೃಚ್ಛಕರು)