ಅಂಕಣಗಳು

Subscribe


 

ನಾಟ್ಯಶಾಸ್ತ್ರಕಥನಮಾಲಿಕೆ- ಇಪ್ಪತ್ತೆರಡನೇ ಅಧ್ಯಾಯ -ವೃತ್ತಿ ವಿಕಲ್ಪ

Posted On: Tuesday, March 1st, 2016
1 Star2 Stars3 Stars4 Stars5 Stars (No Ratings Yet)
Loading...

Author: ಕಾವ್ಯ/ಸಾಹಿತ್ಯ-ಸಂಯೋಜನೆ : ಡಾ. ಮನೋರಮಾ ಬಿ.ಎನ್ ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)

 

ಭರತಮುನಿ- ಸಮಗ್ರವಿಶ್ವಕಾವ್ಯಮೀಮಾಂಸೆಗೆ ಚೂಡಾಮಣಿಯಂತಿರುವ ನಾಟ್ಯಶಾಸ್ತ್ರದ ರಚನಕಾರ. ಅಲಂಕಾರಶಾಸ್ತ್ರದ ಐತಿಹಾಸಿಕ ವಿಕಾಸಕ್ಕೆ ತಾಯಿಬೇರಾದ ಪುಣ್ಯಪುರುಷ. ಸೌಂದಂiiಮೀಮಾಂಸೆಗಳಿಗೆ ಆರ್ಷಮೂಲದ ಜೀವಸ್ರೋತಸ್ಸು. ಭಾರತೀಯ ಸೌಂದರ್ಯಶಾಸ್ತ್ರಸೌಧದ ಸ್ವರ್ಣಶಿಖರದಂತಿರುವ ರಸತತ್ತ್ವವನ್ನು ಧಾರೆಯೆರೆದ ಕಾರಣಪುರುಷ. ನಾಟ್ಯಮಂಡಪದ ಆದ್ಯ ಪ್ರವರ್ತಕ. ಭಾರತದೇಶವಷ್ಟೇ ಅಲ್ಲ, ಅಖಂಡ ಭೂಮಂಡಲದ ಸಾಂಸ್ಕೃತಿಕ, ಸಾಹಿತ್ಯಜೀವಿಗಳ ಪಿತಾಮಹ. ಬೇರೆ ಬೇರೆ ಕಾಲ, ದೇಶಕ್ಕೆ ತಕ್ಕಂತೆ ಸಾರ್ವಕಾಲಿಕವಾಗಿ ಕಲೆಯ ವಿಶಿಷ್ಟ ಮಾದರಿಗಳನ್ನು, ಸಾಧ್ಯತೆಗಳನ್ನು ಕಟ್ಟಿಕೊಟ್ಟ ಭರತರ್ಷಿ ಯತಾರ್ಥದಲ್ಲಿಯೂ ಕಲಾಸರಸ್ವತಿಯ ರಾಯಭಾರಿ. ಆತನ ವ್ಯಕ್ತಿತ್ವ, ಸೂತ್ರ, ಕರ್ತೃತ್ವ ಎಲ್ಲವೂ ಬಗೆದದ್ದು ತಾರೆ ಉಳಿದದ್ದು ಆಕಾಶ ಎಂಬ ಮಾತಿಗೆ ಅನ್ವರ್ಥ.

ಆದ್ದರಿಂದಲೇ ಭರತಮುನಿಯಿಂದ ಬರೆಯಲ್ಪಟ್ಟ ನಾಟ್ಯಶಾಸ್ತ್ರ ಭರತಸೂತ್ರವೆಂಬುದಾಗಿಯೂ ಪ್ರಚಲಿತ. ಕಲಾವಿಶ್ವಕೋಶ, ಸಂಸ್ಕೃತಿಸರ್ವಸ್ವಸಂಗ್ರಹವಾಗಿ, ಎಲ್ಲ ಕಾಲಕ್ಕೂ ಸಲ್ಲುವ ತತ್ವ-ಪ್ರಯೋಗನಿಧಿಯಾಗಿ, ಸಮಗ್ರ ದರ್ಶನಸಿದ್ಧಾಂತದ ಪ್ರತಿರೂಪವಾಗಿ ನಾಟ್ಯಶಾಸ್ತ್ರವು ಸರ್ವಕಾಲಕ್ಕೂ ಆದರಣೀಯ. ಭಾರತೀಯ ಸಂಸ್ಕೃತಿಯ ಸಮಗ್ರತೆಗೆ ಸಂಬಂಧಿಸಿದಂತೆ ನಾಟ್ಯಶಾಸ್ತ್ರದ ಮೌಲ್ಯ ಮಹೋನ್ನತವಾದದ್ದು. ನಾಟ್ಯದ ಉತ್ಪತ್ತಿ, ಪ್ರಯೋಗ, ಅಂಗಗಳು ಮೊದಲಾದವನ್ನು ಕುರಿತು ಹೇಳದೇ ಉಳಿದ ವಿಷಯವೆಂಬುದು ಯಾವುದೂ ಅದರಲ್ಲಿಲ್ಲ. ನಾಟ್ಯಪ್ರಪಂಚವಷ್ಟೇ ಅಲ್ಲ, ಕಾವ್ಯಮೀಮಾಂಸೆ, ಅಲಂಕಾರಶಾಸ್ತ್ರದ ಪ್ರಥಮ ಕುಸುಮಗಳು ಕುಡಿಯೊಡೆದದ್ದು ಭರತನ ಬೊಗಸೆಯಲ್ಲಿ. ಹಾಗಾಗಿ ಕಾವ್ಯಲಕ್ಷಣಕಾರರಿಗೆಲ್ಲಾ ಭರತನೇ ಪ್ರಥಮಗುರುವಾಗಿ ವಂದ್ಯನಾಗಿದ್ದಾನೆ.

ಪ್ರಸ್ತುತ ಈ ನಾಟ್ಯಶಾಸ್ತ್ರಕಥನಮಾಲಿಕೆಯು ೩೬ ಅಧ್ಯಾಯದ ಪರ್ಯಂತ ಹಬ್ಬಿರುವ ನಾಟ್ಯಶಾಸ್ತ್ರದೊಳಗೆ ಬರುವಂತಹ ಭಾರತೀಯ ಸಂಸ್ಕೃತಿಯ, ನಾಟ್ಯಕಲೆಯ ಕುರಿತಾದ ಆಕರ್ಷಕ ಕಥೆಗಳನ್ನು ಪ್ರತೀ ಸಂಚಿಕೆಗೆ ನಿಮ್ಮ ಮುಂದೆ ಅನಾವರಣಗೊಳಿಸುತ್ತಾ ಸಾಗಲಿದೆ. ಅದಕ್ಕೆ ಪೂರಕವಾಗಿ ಪುತ್ತೂರಿನಲ್ಲಿ ನಡೆದ ನಾಟ್ಯಚಿಂತನ ಕಾರ್ಯಾಗಾರದ ಸಮಯದಲ್ಲಿ ಬರೆಯಲಾದ ನಾಟ್ಯಶಾಸ್ತ್ರಕಥೆಗಳ ಕಾವ್ಯಮಾಲಿಕೆ ಮತ್ತು ಕಥೆಯ ಅಧ್ಯಾಯದ ಸಂಕ್ಷಿಪ್ತ ವಿವರವನ್ನು ಮಹಾಮುನಿ ಭರತ ಎಂಬ ಕೃತಿಯಿಂದ ಆಯ್ದು ಪ್ರಕಟಿಸಲಾಗುತ್ತದೆ. ಇದು ಆಸಕ್ತ ಕಲಾವಿದರಿಗೆ, ನೃತ್ಯಸಂಯೋಜನೆಯ ಪ್ರತಿಭೆಯನ್ನಿಟ್ಟುಕೊಂಡು ಸಾಹಿತ್ಯಕ್ಕಾಗಿ ಅರಸುತ್ತಿರುವ ಗುರು-ಶಿಕ್ಷಕರಿಗೆ, ವಿದ್ಯಾರ್ಥಿಮಿತ್ರರಿಗೆ, ಚಿಣ್ಣರ ಕುತೂಹಲದ ಕಥಾಪ್ರಪಂಚಕ್ಕೆ, ಕಲಾಪ್ರೇಮಿಗಳಾದ ಸಹೃದಯ ಓದುಗರಿಗೆ ಒಳ್ಳೆಯ ರಸಾಹಾರವನ್ನು ಕೊಡಲಿದೆ ಎಂಬುದು ನಮ್ಮ ಅಭೀಪ್ಸೆ. ನಮ್ಮ ಆಶಯಕ್ಕೆ ತಾವೂ ಇಂಬುಕೊಡುತ್ತೀರಲ್ವಾ? -ಸಂ.

 

 

ಕಳೆದ ಸಂಚಿಕೆಗಳಲ್ಲಿ ಪ್ರಥಮ ಅಧ್ಯಾಯ ನಾಟ್ಯೋತ್ಪತ್ತಿಯಿಂದ ಮೊದಲ್ಗೊಂಡು ತಾಂಡವಲಕ್ಷಣದ ಡಿಮ ಹಾಗೂ ಮೂವತ್ತಮೂರನೇ ಅಧ್ಯಾಯವಾದ ಅವನದ್ಧ ವಾದ್ಯನಿರ್ಮಾಣದ ಕಥೆಯನ್ನು ನಿರೂಪಿಸಲಾಗಿತ್ತು. ಪ್ರಸ್ತುತ ಸಂಚಿಕೆಯಲ್ಲಿ ವೃತ್ತಿವಿಕಲ್ಪವನ್ನು ನಿರೂಪಿಸಲಾಗುತ್ತಿದ್ದು; ಇಲ್ಲಿ ನಾಟ್ಯದ ಮುಖ್ಯಲಕ್ಷಣವಾದ ಭಾರತೀ, ಸಾತ್ತ್ವತೀ, ಕೈಶಿಕೀ, ಆರ್ಭಟೀ ವೃತ್ತಿಗಳ ನಿರೂಪಣೆ, ಹಿನ್ನೆಲೆಯಾಗಿ ವಿಷ್ಣುವಿನಿಂದ ಮಧುಕೈಟಭ ಸಂಹಾರದಲ್ಲಿ ಅವುಗಳ ಉತ್ಪತ್ತಿಯ ಕಥೆ, ವೃತ್ತಿಗಳ ಭೇದ ಪ್ರಭೇದ, ವಿಭಿನ್ನ ರಸಗಳಲ್ಲಿ ಅವುಗಳ ಬಳಕೆಯನ್ನು ಭರತ ವಿವೇಚಿಸಿದ್ದಾನೆ. ಇಲ್ಲಿ ಉಲ್ಲೇಖಿತವಾಗಿರುವ ಕಥೆಯು ಪುರಾಣದ ಕಥೆಗಿಂತ ಕೊಂಚ ವ್ಯತ್ಯಾಸ ಹೊಂದಿದೆ.

ಒಂದಾನೊಂದು ಕಾಲದಲ್ಲಿ ಅಚ್ಯುತನು ತನ್ನ ಮಾಯೆಯಿಂದ ಎಲ್ಲ ಲೋಕಗಳನ್ನೂ ಸಮುದ್ರದಲ್ಲಿರಿಸಿ ಶೇಷಶಾಯಿಯಾಗಿ ಮಲಗಿದ್ದನು. ಆಗ ಮಧು ಮತ್ತು ಕೈಟಭರೆಂಬ ಅಸುರರು ಮತ್ತರಾಗಿ ಯುದ್ಧವನ್ನು ಬಯಸಿ ಭಗವಂತನನ್ನು ಕೆಣಕತೊಡಗಿದರು. ಬಾಹು, ಮುಷ್ಠಿ, ಮೊಳಗಾಲ್ಗಳಿಂದ ಗುದ್ದತೊಡಗಿದರು. ಬಿರುಸು ನಿಂದಾವ್ಯಂಜಕ ಮಾತುಗಳ ಮಳೆಯನ್ನೇ ಸುರಿಸುತ್ತಾ, ಸಮುದ್ರವನ್ನೇ ನಡುಗಿಸುವವರಂತೆ ವೇಗದಿಂದ ಧಾವಿಸತೊಡಗಿದರು. ಇವರ ಗರ್ಜನೆಯನ್ನು ಕೇಳಿದ ಬ್ರಹ್ಮನ ಮನಸ್ಸು ಕಂಪಿಸಿ ಭಗವಂತನಿಗೆ ‘ಮಾತಿಗೆ ಮಾತು ಬೆಳೆಯುತ್ತಿದೆ. ಭಾರತೀವೃತ್ತಿ ನಡೆದಿದೆಯಲ್ಲ, ಕೊಲ್ಲಬಾರದೆ’ ಎಂದು ಕೇಳಿದನು. ಆಗ ಮಧುಸೂದನನು ‘ಕಾರ್ಯವನ್ನು ಸಾಧಿಸಲೆಂದೇ ಭಾರತಿಯನ್ನು ಕಲ್ಪಿಸಿದ್ದೇನೆ ’ ಎನ್ನುತ್ತಾ ಬರೀ ಅಂಗಾಂಗಗಳ ಲಲಿತವಾದ ಚಲನವಲನಗಳಿಂದಲೇ ಅವರೊಡನೆ ಯುದ್ಧ ಮಾಡತೊಡಗಿದನು. ಭೂಮಿಯ ಮೇಲೆ ಅವನು ಊರುವ ಹೆಜ್ಜೆಗಳ ಭಾರ ಭೂಮಿಗೆ ಅತಿಯಾಗಿ ಭಾರತಿ ಜನ್ಮಿಸಿತು. ಹರಿಯ ಶಾರ್ಙ್ಗ ಧನುಸ್ಸಿನಿಂದ ಮಿಂಚಿನಂತೆ ಹೋಗುವ ಗುರಿತಪ್ಪದ ಸತ್ತ್ವಯುತ ಬಾಣಗಳಿಂದ ಸಾತ್ತ್ವತೀ ವೃತ್ತಿ ಹೊರಬಂತು. ಚಿತ್ರವಿಚಿತ್ರವಾದ ಅಂಗಾಹಾರಗಳಿಂದ ಭಗವಂತನು ಲೀಲೆಯಿಂದ ತನ್ನ ಕೇಶವನ್ನು ಕಟ್ಟಿಕೊಳ್ಳುವಾಗ ಕೈಶಿಕೀ ಹುಟ್ಟಿತು. ಅತ್ಯಂತ ಆವೇಶದಿಂದ ಅನೇಕ ಚಾರಿಗಳಿಂದ, ಚಿತ್ರವಿಚಿತ್ರ ಹೋರಾಟಗಳಿಂದ ಆರಭಟೀ ವೃತ್ತಿ ಅಸ್ತಿತ್ವಕ್ಕೆ ಬಂದಿತು. ಹೀಗೆ ಭಗವಂತನು ಯಾವ ಯಾವ ಹೋರಾಟ ನಡೆಸಿದನೋ ಆ ಒಂದೊಂದನ್ನೂ ಬ್ರಹ್ಮನು ಪ್ರಶಂಸಿಸಿದನು. ಹೀಗೆ ಈ ಕಥೆಯಲ್ಲಿ ನಾಲ್ಕು ವೃತ್ತಿಗಳ ಹುಟ್ಟನ್ನು ಹೇಳುವಲ್ಲಿಗೆ ಸೂಕ್ಷವಾಗಿ ಅವುಗಳ ಸ್ವಭಾವಗಳನ್ನೂ ತಿಳಿಸಲಾಗಿದೆ.

ಈ ಅಧ್ಯಾಯವು ಪ್ರಸ್ತುತವೆನಿಸಲು ಮತ್ತೊಂದು ಕಾರಣವೆಂದರೆ ಈ ವೃತ್ತಿಗಳು ‘ನ್ಯಾಯ’ವೆಂಬ ಹೆಸರಿನಿಂದ ಸಿದ್ಧಗೊಂಡು ಸಾವಿರಾರು ವರುಷಗಳಿಂದ ಇಂದಿನವರೆಗೂ ದೇಶದೇಶಗಳಲ್ಲಿ ಹಬ್ಬಿ ಪ್ರಚಲಿತದಲ್ಲಿರುವ ಕಳರಿಪಯಟ್ಟು, ಜೂಡೋ, ಕರಾಟೆ ಇತ್ಯಾದಿ ಸಮರಕಲೆಗಳಿಗೆ, ಯುದ್ಧಾದಿ ಸನ್ನಿವೇಶಗಳಿಗೆ ಆಧಾರವಾಗಿರುವುದು. ಈ ಪ್ರಕರಣವು ಮಧುಕೈಟಭರ ವಧೆಯ ಬಳಿಕ ಬ್ರಹ್ಮನು ವಿಷ್ಣುನಿಗೆ ಹೇಳುವ ಮಾತುಗಳಲ್ಲಿದ್ದು; ದಾನವರ ನಾಶವನ್ನು ವಿಚಿತ್ರವಾದ, ಸ್ಫುಟವಾದ, ಲಲಿತರಾದ ಅಂಗಹಾರಗಳಿಂದ ಮಾಡಿದೆ. ಲೋಕದಲ್ಲಿ ಹೋರಾಡುವುದಕ್ಕೆ ಇದೇ ಕ್ರಮ. ಶಸ್ತ್ರಗಳನ್ನು ಬಳಸುವುದಾದರೆ ಇದೇ ರೀತಿಯಲ್ಲಿ ಬಳಸುವುದು ನ್ಯಾಯವಾದ್ದರಿಂದ ಇದಕ್ಕೆ ನ್ಯಾಯವೆಂಬ ಹೆಸರು ಬರಲಿ ಎಂದು ಉಲ್ಲೇಖಿಸಲ್ಪಟ್ಟಿದೆ. ಪೂರ್ವಕಾಲದಲ್ಲಿ ಋಷಿಗಳು ಈ ವೃತ್ತಿಗಳಂತೆಯೇ ನಾಲ್ಕು ವೇದಗಳಿಂದ ಪ್ರಯುಕ್ತವಾದ ವಾಗಾಂಗಗಳ ಅಭಿನಯರೂಪವೃತ್ತಿಗಳನ್ನು ನಿರ್ಮಿಸಿ (ಋಗ್ವೇದ- ಭಾರತೀ, ಯಜುರ್ವೇದ-ಸಾತ್ತ್ವತೀ, ಸಾಮವೇದ-ಕೈಶೀಕೀ, ಅಥರ್ವಣವೇದ- ಆರ್ಭಟೀ) ಭರತನಿಗೆ ನಾಟ್ಯದ ಪ್ರಯೋಗಕ್ಕೆಂದು ಒಪ್ಪಿಸಿದರು ಎನ್ನುತ್ತಾನೆ ಭರತ.

 

(ಚತುರಶ್ರ ಮಧ್ಯಗತಿ) ಚತುರಭಿನಯಜೀವನಾ… ಚತುರಂಗಭವಸಾಧನಾ

ಚತುರ್ವೇದದಿಗ್ಧರ್ಶನ… ಚತುರ್ವೃತ್ತಿ ಸಂಕೇತ ನವಭಾವನಾ..

(ತ್ರಿಶ್ರನಡೆ ಚತುರಶ್ರ ಏಕ) ಮಾಯೆಬೀರಿ ಮಲಗಿಹನು ಶೇಷಶಾಯಿ

ರಾಗವಾಗಿ ಹಾಡಿತು ಲೋಕ ಲಾಲಿ

ಅಚ್ಯುತಂ ಕೇಶವಂ ಸತ್ಯದಾಮೋದರಂ

ಮಾಧವಂ ಶ್ರೀಧರಂ ವಾಸುದೇವಂ ಭಜೇ (ಸ್ವರಕಲ್ಪನೆ ತ್ರಿಶ್ರ ಏಕದಲ್ಲಿ)

(ಆಲಾಪನೆ -ರಾಕ್ಷಸರ ಜನ್ಮಕ್ಕೆ ಉದ್ಧತ ಜತಿ)

(ಖಂಡ/ಸಾಕಿ)

ಕರ್ಣಕಿಲ್ಬಿಷ ಸಿಡಿಯೆ ಪಡಿಮೂಡಿತಲ್ಲಿ ಪಗೆ… (ವಾದ್ಯದಲಿ ಗತಿಯ ನುಡಿಸಾಣಿಕೆ)

ಮಧು ಕೈಟಭರ ರೂಪದಲ್ಲಿ ಆಸುರ್ಯ

(ಜತಿ/ಗತಿನುಡಿಸಾಣಿಕೆ)

ಮುಷ್ಠಿ ಮೊಣಕಾಲುಗಳ ಬಡಿಬಡಿತವೊಂದು ಕಡೆ

ಬಿರುಸು ಮಾತಿನ ಸಿಡಿಲು-ಜಡಿಮಳೆಯು ಬಡಿಯೆ (ಶಬ್ದನಿರ್ಮಾಣ/ಗತಿನುಡಿಸಾಣಿಕೆ)

ಗಮನಿಸಿದ ಕಮಲಜನು… ಭಾರತಿಯ ಬೆಳವಣಿಗೆ.. (ಪಾಟಾಕ್ಷರ)

ಕನಲಿ ಕಂಪಿಸಲು ಹರಿ ಕರೆಕೊಟ್ಟ ರಣಕೆ

ಮಾತು ಮಲೆಯುವುದು ಭಾರತಿಯ ಭಾರಕ್ಕೆ

ವಧಿಸುವೆನು ಇವರನ್ನು ವೃತ್ತಿಕಲ್ಪದ ಬಲಕೆ

(ಜತಿ /ಗತಿಯ ನುಡಿಸಾಣಿಕೆ)

ಹೆಜ್ಜೆಗಳ ಭಾರಕ್ಕೆ ಭಾರತಿಯ ಜನನ…

ಶಾರ್ಙ್ಗರವ ಭಾವಕ್ಕೆ ಸಾತ್ತ್ವತಿಯ ಪ್ರಸವ…

ಅಂಗಹಾರದ ಲೀಲೆ ಕೇಶಪಾಶಕೆ ಕೈಶಿಕೀ…..(ಆಲಾಪನೆ)

ಉದ್ಧತ ವಿಚಿತ್ರ ಚಿತ್ರಾವೇಶ ಆರಭಟೀ…

ಋಗ್ವೇದ…ಭಾರತೀ

ಯಜುರ್ವೇದ…ಸಾತ್ತ್ವತೀ

ಸಾಮದಿಂ… ಕೈಶೀಕೀ

ಅಥರ್ವಣದಿ… ಆರ್ಭಟೀ

ವಿಷ್ಣು-ನಾಟ್ಯವೊಂದೇ ಅಲ್ಲ ನ್ಯಾಯವಿದು ಧರ್ಮಕ್ಕೆ

ಶಸ್ತ್ರ-ಅಸ್ತ್ರದ ನೆಲೆಯು ಶಾಸ್ತ್ರೀಯ ಕಲೆಯು

ಆತ್ಮರಕ್ಷಣೆಯ ಜೊತೆ ಭಾವದೀಪ್ತಿಯು ಬೆರೆತು

ರಸವೊಂದೇ ಜಸವಿಲಿ, ನಿತ್ಯಸತ್ಯ

Leave a Reply

*

code