Author: ಮನೋರಮಾ. ಬಿ.ಎನ್
ಭಾರತೀಯ ನೃತ್ಯಕಲಾ ಪರಿಷತ್ : ದಿವಂಗತ ಅಂಬಳೆ ಸುಬ್ಬರಾವ್ ಅವರಿಂದ ಸ್ಥಾಪಿತವಾದ ನೃತ್ಯ-ಲಲಿತಕಲೆಗಳ ತರಬೇತಿ ಸಂಸ್ಥೆ. ಕೊಡಗಿನಲ್ಲಿ ನೃತ್ಯದ ಕುರಿತಾಗಿ ಆಸಕ್ತಿ ಮತ್ತು ಶಿಕ್ಷಣ ಡಲು ಪ್ರಾರಂಭಿಸಿದ ಮೊದಲ ಸಮಗ್ರ ಶಾಲೆ ಎಂದರೆ ತಪ್ಪೇನಿಲ್ಲ. ಕೊಡಗಿನಲ್ಲಿ ನೃತ್ಯ ರಂಗಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿದ ಸುಬ್ಬರಾವ್ ಮತ್ತು ಅವರ ಕುಟುಂಬ; ನೃತ್ಯ ಮಾತ್ರವಲ್ಲದೆ ಸಂಗೀತ, ಕೂಚುಪುಡಿ, ಮೃದಂಗ, ಪಿಟೀಲು ಮುಂತಾದ ಕ್ಷೇತ್ರದಲ್ಲಿ ಹಲವು ಕಲಾವಿದರನ್ನು ಕೊಡುಗೆಯಾಗಿ ಕೊಟ್ಟಿದೆ. ಕೂಚಿಪುಡಿ ಶೈಲಿಯ, ಭರತನಾಟ್ಯ ಮತ್ತು ಯೋಗದ ಪಟ್ಟುಗಳ ದೂಪಾರತಿ ನೃತ್ಯ ರಂಗಕ್ಕೆ ಇವರ ಕಾಣಿಕೆ ಎಂದರೆ ತಪ್ಪೇನಿಲ್ಲ.
ದ್ವಾರಂ ವೆಂಕಟಸ್ವಾಮಿ ನಾಯ್ಡು, ವರದಾರಾಜ ಅಯ್ಯಂಗಾರ್, ನಂಜನಗೂಡು ನಾಗರತ್ನಮ್ಮ ಇವರ ಬಳಿಯಲ್ಲಿ ಅಭ್ಯಸಿಸಿದ ಗುರು ವಿದ್ವಾನ್ ಅಂಬಳೆ ಸುಬ್ಬರಾಯರು ಸಾಂಸ್ಕೃತಿಕವಾಗಿ ಕೊಡಗನ್ನು ಬೆಳೆಸಿದವರು. ನೃತ್ಯ ವಿದ್ವಾಂಸ ವಿ. ಎಸ್. ಕೌಶಿಕ್ ಅವರ ಗೆಳೆಯರೂ, ಸಮಕಾಲೀನರೂ ಆದ ಸುಬ್ಬರಾಯರು, ಕೊಡಗಿನಲ್ಲಿ ಸಾಂಸ್ಕೃತಿಕ ರಂಗದ ಅವಶ್ಯಕತೆ ಮನಗಂಡರು. ೧೯೭೨ ರ ಶಿವರಾತ್ರಿಯಂದು ನೃತ್ಯಕಲಾ ಪರಿಷತ್ತನ್ನೂ ಒಳಗೊಂಡಂತೆ ಕುಟುಂಬವನ್ನೇ ಕಲಾಸೇವೆಗಾಗಿ ಮುಡಿಪಿಟ್ಟರು.
ಇವರ ಪುತ್ರಿ ಕುಮಾರಿ ಅಂಬಳೆ ರಾಜೇಶ್ವರಿ ಅವರು ಶಂಕರನಾರಾಯಣ್, ಕೇರಳ ಕಲಾಮಂಡಲಂನ ಚಿನ್ನಮ್ಮ, ಮೋಹನ್ ಭಾರ್ಗವ್, ವಿ. ಎಸ್. ಕೌಶಿಕ್, ಮಚಲೀಪಟ್ಟಣಂನ ಭಾಗವತೀ ಕೃಷ್ಣಕುಮಾರ್ ಮುಂತಾದವರ ಗರಡಿಯಲ್ಲಿ ಸಂಗೀತ, ಭರತನಾಟ್ಯ, ಕೂಚುಪುಡಿಯನ್ನು ಕರಗತ ಮಾಡಿಕೊಂಡು ನೃತ್ಯ ಜಗತ್ತಿನ ಸೇವೆಯನ್ನು ಮುಂದುವರೆಸಿದರೆ, ಸುಬ್ಬರಾಯರ ಪುತ್ರ ಸತ್ಯಪ್ರಸಾದ್ ಮೃದಂಗ ವಿದ್ವಾನ್ ಆಗಿ ಪ್ರಸಿದ್ಧರು. ಸತ್ಯಪ್ರಸಾದರ ಪುತ್ರರಾದ ಹೇರಂಬ -ಹೇಮಂತರೂ ಕೊಳಲು ಕ್ಷೇತ್ರದಲ್ಲಿಈಗಾಗಲೇ ಬಾಲ ಪ್ರತಿಭೆಗಳಾಗಿ ಮಿಂಚುತ್ತಿದ್ದು, ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ.
ಈ ಮೂರುವರೆ ದಶಕಗಳಲ್ಲಿ ಸುಮಾರು ೧೮,೦೦೦ ವಿದ್ಯಾರ್ಥಿಗಳು ಸಂಸ್ಥೆಯಿಂದ ಶಿಕ್ಷಣ ಪಡೆದಿದ್ದು ದೇಶ-ವಿದೇಶಾದ್ಯಂತ ಯಶಸ್ಸು ದಾಖಲಿಸಿದ್ದಾರೆ. ಭಾರತವನ್ನೂ ಒಳಗೊಂಡಂತೆ ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ದಕ್ಷಿಣ ಆಫ್ರಿಕಾ, ಯು.ಎಸ್.ಎ ಇತ್ಯಾದಿ ದೇಶಗಳಲ್ಲಿ ಪರಿಷತ್ ಒಟ್ಟು ೬೦೦ ಶಾಖೆಗಳನ್ನು ಹೊಂದಿದೆ. ಪ್ರಸಕ್ತ ಅಂಬಳೆ ರಾಜೇಶ್ವರಿಯವರು ಹಾಸನದ ಶಾಖೆಯಲ್ಲಿ ಶಿಕ್ಷಣ ನೀಡುತ್ತಿದ್ದರೆ, ಪರಿಷತ್ತಿನ ಶಾಖೆ ಮಡಿಕೇರಿ ಮತ್ತು ಕೊಡಗಿನ ಒಳನಾಡುಗಳಲ್ಲಿ ಮುಂದುವರೆದಿದೆ. ಇವರ ಶಿಷ್ಯೆ ಜಯಶ್ರೀ ಸುಮಾರು ೮ ವರ್ಷಗಳ ಕಾಲ ಮಡಿಕೇರಿಯಲ್ಲಿ ತಮ್ಮದೇ ಆದ ನೃತ್ಯ ತರಗತಿಯನ್ನು ವೇದಾಂತಸಂಘದಲ್ಲಿ ಮಾಡುತ್ತಾ ಬಂದಿರುತ್ತಾರೆ.
ನಾಟ್ಯನಿಕೇತನ : ಪಂದನಲ್ಲೂರು ಶೈಲಿಯ ಉಳ್ಳಾಲ ಮೋಹನ್ ಕುಮಾರ್, ರಾಜೇಶ್ವರಿ, ಮುರಳೀಧರರಾವ್ ಅವರ ಶಿಷ್ಯೆ ಶ್ರೀಮತಿ ವಿದುಷಿ ವೀಣಾ ಕಾರಂತ್ ಅವರು ಈ ಸಂಸ್ಥೆಯ ಸ್ಥಾಪಕ ನೃತ್ಯಗುರುಗಳು. ೧೩ ವರ್ಷಗಳ ಕಾಲ ಮಡಿಕೇರಿಯಲ್ಲಿ ಸೇವೆ ಸಲ್ಲಿಸಿ, ನಂತರ ಮಂಗಳೂರಿನಲ್ಲಿ ನೆಲೆಸಿ ಚಂದ್ರದೀಪ ನೃತ್ಯ ತರಬೇತಿ ಶಾಲೆಯನ್ನು ಸ್ಥಾಪಿಸಿದ ತರುವಾಯ, ಸುಮಾರು ೬ ವರ್ಷಗಳಿಂದ ಶ್ರೀಮತಿ ವಿನಯಾ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ನಾಟ್ಯನಿಕೇತನ ಮುನ್ನಡೆಯುತ್ತಿದೆ.
ವಿನಯಾ ಕೃಷ್ಣಮೂರ್ತಿ ಮಂಗಳೂರಿನ ವಿದುಷಿ ಕಮಲಾ ಭಟ್, ಮಂಡ್ಯದ ವಿದುಷಿ ಚೇತನಾ ರಾಧಾಕೃಷ್ಣ ಅವರ ಗರಡಿಯಲ್ಲಿ ಪಳಗಿದವರು. ಸುಮಾರು ೨೦ ವರ್ಷಗಳಿಂದ ಸುಮಾರು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಪೋಷಿಸುತ್ತಾ, ಮುನ್ನಡೆಸುತ್ತಾ ಬಂದಿರುವ ಈ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಸಾಧನೆಗಳಿಗೆ ಮುನ್ನುಡಿ ಬರೆದಿದ್ದಾರೆ.
ಸೌರಭ ನೃತ್ಯ ಕಲಾ ಪರಿಷತ್ : ಶ್ರೀಮತಿ ವಿದುಷಿ ಶ್ರೀವಿದ್ಯಾ ಮುರಳೀಧರ್(ರಾಮನ್) ಅವರ ಕನಸಿನ ಕೂಸಾಗಿ ಮೈ ತಳೆದದ್ದೇ ಸೌರಭ. ಸುಮಾರು ೧೫ ವರ್ಷಗಳ ಹಿಂದೆ ವಿದುಷಿ ಅಂಬಳೆ ರಾಜೇಶ್ವರಿ ಅವರಿಂದ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ಪಂದನಲ್ಲೂರು ಶೈಲಿಯ ಖ್ಯಾತ ನೃತ್ಯ ಗುರುಗಳಾದ ಮುರಳೀಧರರಾವ್ ಅವರಲ್ಲಿ ವಿದ್ಯಾಭ್ಯಾಸ ಕೈಗೊಂಡ ಶ್ರೀವಿದ್ಯಾ, ನಾಡ-ಹೊರನಾಡ ಸ್ಪರ್ಧೆ, ದೂರದರ್ಶನ ಪ್ರದರ್ಶನಗಳಲ್ಲಿ ಪ್ರಶಸ್ತಿ, ಸನ್ಮಾನ ಪುರಸ್ಕೃತರು. ಮುರಳೀಧರರಾಯರ ಗ್ರಂಥ ’ನೃತ್ಯಲೋಕ’ ದ ನೃತ್ಯ ಕಲಾವಿದೆಯ ಭಂಗಿಗಳ ಛಾಯಾಚಿತ್ರ ಇವರ ಪ್ರತಿಭೆಗೆ ಸಾಕ್ಷಿ ಎಂಬಂತಿದೆ. ಇಂಗ್ಲೀಷ್ ಸ್ನಾತಕೋತ್ತರ ಪದವಿ ಪೂರೈಸಿ, ಹಂಪಿ ವಿಶ್ವವಿದ್ಯಾನಿಲಯದಿಂದ ಭರತನಾಟ್ಯ ನಾಯಕ-ನಾಯಿಕಾ ಭಾವಗಳ ಕುರಿತಾಗಿನ ಪ್ರಬಂಧಕ್ಕೆ ಪಿಎಚ್ಡಿ ಪದವಿ ಪಡೆದಿದ್ದಾರೆ. ಇವರ ಕಿರಿಯ ಸಹೋದರಿ ಶ್ರೀಮತಿ ವಿದುಷಿ ಶ್ರೀಧನ್ಯಾ ರಾಮನ್ ಇವರೂ ಅಕ್ಕನೊಂದಿಗೆ ಒಡಗೂಡಿದ ಉತ್ತಮ ಕಲಾವಿದೆ. ದಶಕಗಳ ಹಿಂದೆ ಪುಟಾಣಿನಗರದ ಬಳಿ ಪ್ರಾರಂಭವಾದ ಈ ನೃತ್ಯ ಸಂಸ್ಥೆಯಲ್ಲಿ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತರಬೇತಿ ಪಡೆದು ನಾಡಿನಾದ್ಯಂತ ಮಿಂಚಿದ್ದಾರೆ.
ನೃತ್ಯ ನಿನಾದ : ವಿದುಷಿ ನಿರ್ಮಲಾ ಬೋಪಣ್ಣ ಅವರ ನಿರ್ದೇಶನದಲ್ಲಿ ಪೊನ್ನಂಪೇಟೆಯಲ್ಲಿ ದಶಕಗಳ ಹಿಂದೆ ಬೆಳೆದು ಬಂದ ಸಂಸ್ಥೆ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಗೀತ-ನೃತ್ಯ-ತಾಳವಾದ್ಯಗಳಲ್ಲಿ ತರಬೇತಿ ನೀಡುತ್ತಾ, ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆತಿಥೇಯವಾಗುತ್ತಾ ಬಂದಿದೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಗೀತ ಸ್ನಾತಕೋತ್ತರ ಪದವಿಯನ್ನು ಉನ್ನತ ದರ್ಜೆಯಲ್ಲಿ ಪೂರೈಸಿದ ಆಕಾಶವಾಣಿ-ದೂರದರ್ಶನ ಕಲಾವಿದೆ ಇವರು. ಇವರ ವಿದ್ಯಾರ್ಥಿಗಳು ನಾಡಿನಾದ್ಯಂತ ಮೆಚ್ಚುಗೆ ಗಳಿಸಿದ್ದಾರೆ.
ನೃತ್ಯ ಮಂಟಪ ಟ್ರಸ್ಟ್ : ಕಳೆದ ೩ ವರ್ಷಗಳಿಂದೀಚೆಗೆ ಶ್ರೀಮತಿ ವಿದುಷಿ ರೂಪಾ ಶ್ರೀಕೃಷ್ಣ ಉಪಾಧ್ಯ ಅವರ ನೇತೃತ್ವದಲ್ಲಿ ಮಡಿಕೇರಿಯ ಕಾವೇರಿ ಬಡಾವಣೆಯಲ್ಲಿ ಮುನ್ನಡೆಯುತ್ತಿರುವ ಟ್ರಸ್ಟ್, ಕಲಾಕ್ಷೇತ್ರ ಪದ್ಧತಿಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವೀಯುತ್ತಾ ಬಂದಿದೆ. ಪ್ರಾರಂಭವಾದ ಅಲ್ಪ ಕಾಲದಲ್ಲಿಯೇ ಈ ಸಂಸ್ಥೆಯ ವಿದ್ಯಾರ್ಥಿಗಳು ನಾಡಿನಾದ್ಯಂತ ಮಿಂಚಿ ಉತ್ತಮ ಯಶಸ್ಸು ಗಳಿಸಿದ್ದಾರೆ.
ಶಿವಮೊಗ್ಗದ ನಾಟ್ಯಗುರು ವಿದ್ವಾನ್ ಜನಾರ್ಧನ, ಬೆಂಗಳೂರಿನ ವಿಶ್ರುತ ಪರ್ ಫಾರ್ಮಿಂಗ್ ಆರ್ಟ್ಸ್ ನ ವಿದುಷಿ ಬಿ. ಕೆ. ವಸಂತಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಪಳಗಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭರತನಾಟ್ಯ ಸ್ನಾತಕೋತ್ತರ ಪದವಿಯನ್ನು ಉನ್ನತ ದರ್ಜೆಯಲ್ಲಿ ಪಡೆದವರು. ಮೂಲತಃ ಶಿವಮೊಗ್ಗದವರಾದ ರೂಪಾ ಉಪಾಧ್ಯ, ಗುರುವಾಗಿ ಮತ್ತು ಕಲಾವಿದೆಯಾಗಿ ದೂರದರ್ಶನ, ಹೊರನಾಡ ಕನ್ನಡಿಗರಿಂದಲೂ ಮೆಚ್ಚುಗೆಗೆ ಪಾತ್ರರಾಗಿ ಹಲವು ಸನ್ಮಾನ ಪುರಸ್ಕೃತರು.
ಭಾರತೀಯ ವಿದ್ಯಾಭವನ : ಭಾರತೀಯ ಲಲಿತಕಲೆಗಳ ಬಗ್ಗೆ ಶಿಕ್ಷಣ ಮತ್ತು ಅಧ್ಯಯನದ ಮನೋಭಾವ ಬೆಳೆಸುವ ದೇಶಾದ್ಯಂತ ಹಬ್ಬಿದ ಭಾರತೀಯ ವಿದ್ಯಾಭವನದ ಕೊಡಗು ಶಾಖೆಯು ಹಲವು ಕಾರ್ಯಾಗಾರ, ಉಪನ್ಯಾಸಗಳನ್ನು ನಡೆಸುತ್ತಾ ಬಂದಿದೆ. ಸ್ಪಿಕ್ ಮೆಕೆಯ ಹಲವು ಕಾರ್ಯಕ್ರಮಗಳಿಗೆ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿಯ ವಿದ್ಯಾಭವನ ತನ್ನ ಆವರಣವನ್ನು ಆಸರೆಯಾಗಿ ನೀಡಿದೆ. ಪ್ರಾರಂಭಿಕ ಗುರುಗಳಾಗಿ ಮಂಡ್ಯದ ಗುರು ಚೇತನಾ ರಾಧಾಕೃಷ್ಣ ವಿದ್ಯಾರ್ಥಿಗಳಿಗೆ ತರಬೇತಿಯನ್ನಿತ್ತರೆ, ಪ್ರಸಕ್ತ ವಾಣಿ ಅವರು ಗುರುವಾಗಿ ಮುಂದುವರಿಯುತ್ತಿದ್ದಾರೆ.
ಇವರಷ್ಟೇ ಅಲ್ಲದೆ ಮಾದಾಪುರದ ಶ್ರೀ ಶಂಕರಯ್ಯ ಮಾಸ್ಟರ್, ವಿರಾಜಪೇಟೆಯ ಶ್ರೀನಿವಾಸ್ ಅವರದ್ದು ಕೊಡಗಿನ ನೃತ್ಯ ಗುರುಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಕೇಳಿ ಬರುವ ಹೆಸರು. ಜೊತೆಗೆ ಬಾಲಕೃಷ್ಣ, ಭಾರತೀ ರಮೇಶ್, ಪಕ್ಕದ ಜಿಲ್ಲೆಗಳಿಂದ ಬಂದು ನೃತ್ಯ ಕಲಿಸುವ ಹಲವು ಗುರುಗಳು ಜಿಲ್ಲೆಯ ಕಲೆಯ ಸೊಬಗನ್ನು ಹೆಚ್ಚಿಸುತ್ತಿದ್ದಾರೆ.
November 3rd, 2008 at 3:05 pm
good going