Author: -ವಿದ್ವಾನ್ ಮಹೇಶ ಭಟ್ ಹಾರ್ಯಾಡಿ, ಉಡುಪಿ
ಇದು ಜಗದಂಬೆಯನ್ನು ಕುರಿತು ರಚಿಸಿದ ಪಂಚರಾಗಮಾಲಿಕೆ. ಮಲಯಮಾರುತ, ಮಲಹರಿ, ವಾಚಸ್ಪತಿ, ವರಾಳಿ, ಜಗನ್ಮೋಹಿನಿ ಎಂದು ರಾಗಮುದ್ರೆ ಬರುವಂತೆ ರಚಿಸಲಾಗಿದೆ. ಹಾಡುಗಾರಿಕೆಯಲ್ಲಿ ನುರಿತವರು ಆಯಾ ಚರಣವನ್ನು ಆಯಾ ರಾಗದಲ್ಲಿ ಹಾಡಬಹುದು. ‘ವಾಣೀವತ್ಸಲ’ ಎಂಬುದು ಕೃತಿಕಾರನ ಅಂಕಿತ.
ತಾಯೆ! ನಿನ್ನಯ ಮಗನ ಮೊರೆಯನಾಲಿಸೆಯೇನು?
ಸಂಸಾರತಾಪದಲಿ ಬೆಂದು ನೊಂದಿರುವೆ |
ಮಲಯಮಾರುತದಂತೆ ತಂಪುತಂಪಾಗಿರುವ
ನಿನ್ನ ಕುಡಿನೋಟಗಳನೆನ್ನೆಡೆಗೆ ಬೀರು ||
ಯುವತಿಯರ ಕಂಗಳುಪಮಾನವಾಗಿಹೆವು ನಾ-
ವೆಂದು ಬೀಗುತ್ತಿದ್ದ ಕಮಲಹರಿಣಗಳು |
ಶರಣು ಬಂದಿಹ ಜನರ ಪಾಪಗಳ ತೊಡೆಯುವೀ
ನಿನ್ನ ಕಂಗಳ ಮುಂದೆ ನಾಚಿ ನಿಂತಿಹವು ||
ಕೋಟಿವಾಚಸ್ಪತಿಗಳುದ್ಭವಿಸಿ ಬಂದೊಡಂ
ಹೇಳಿ ಮುಗಿಸಲ್ಕಹುದೆ? ನಿನ್ನ ಗುಣದಣುವ |
ಆದೊಡಂ ತನ್ನ ಮನಕಾನಂದವೀಯಲ್ಕೆ
ನಿನ್ನ ಗುಣಗಳ ಹಾಡುತಿರುವನೀ ಕಂದ ||
ಸಜ್ಜನವರಾಳಿಗಳು ನಿನ್ನ ಪಾದಾಂಬುಜದಿ
ಪುಣ್ಯಮಕರಂದವನು ಹೀರುತ್ತಲಿಹವು |
ಆದರೀ ಕಂದನಿಗೆ ವಿಷಯಸರ್ಪವು ಕಡಿದು
ವಿಷವೇರುತಿದೆಯಮ್ಮ! ಕಾಪಾಡೆಯೇನು?
ಹೇ ಜಗನ್ಮೋಹಿನಿಯೆ! ಮೋಹವನು ತರಿಸು ನೀ
ಎನ್ನಲಿಹ ಮೋಹಾದಿಷಡ್ವೈರಿಗಳಿಗೆ |
ಕಾರುಣ್ಯದೋರು ವಾಣೀವತ್ಸಲನ ಮೇಲೆ
ತಡ ಮಾಡಿದರೆ ನಿನ್ನ ಮಗುವಿಗಾಪತ್ತು ||