ಅಂಕಣಗಳು

Subscribe


 

ನಾಟ್ಯಶಾಸ್ತ್ರಕಥನಮಾಲಿಕೆ- ನಾಲ್ಕನೇ ಅಧ್ಯಾಯ- ತಾಂಡವಲಕ್ಷಣ ಡಿಮ/ ತಾಂಡವನೃತ್ತ  

Posted On: Monday, September 28th, 2015
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಮನೋರಮಾ ಬಿ.ಎನ್

ಕಾವ್ಯ/ಸಾಹಿತ್ಯ-ಸಂಯೋಜನೆ : ಮನೋರಮಾ ಬಿ.ಎನ್

ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)

 

ಭರತಮುನಿ- ಸಮಗ್ರವಿಶ್ವಕಾವ್ಯಮೀಮಾಂಸೆಗೆ ಚೂಡಾಮಣಿಯಂತಿರುವ ನಾಟ್ಯಶಾಸ್ತ್ರದ ರಚನಕಾರ. ಅಲಂಕಾರಶಾಸ್ತ್ರದ ಐತಿಹಾಸಿಕ ವಿಕಾಸಕ್ಕೆ ತಾಯಿಬೇರಾದ ಪುಣ್ಯಪುರುಷ. ಸೌಂದಂiiಮೀಮಾಂಸೆಗಳಿಗೆ ಆರ್ಷಮೂಲದ ಜೀವಸ್ರೋತಸ್ಸು. ಭಾರತೀಯ ಸೌಂದರ್ಯಶಾಸ್ತ್ರಸೌಧದ ಸ್ವರ್ಣಶಿಖರದಂತಿರುವ ರಸತತ್ತ್ವವನ್ನು ಧಾರೆಯೆರೆದ ಕಾರಣಪುರುಷ. ನಾಟ್ಯಮಂಡಪದ ಆದ್ಯ ಪ್ರವರ್ತಕ. ಭಾರತದೇಶವಷ್ಟೇ ಅಲ್ಲ, ಅಖಂಡ ಭೂಮಂಡಲದ ಸಾಂಸ್ಕೃತಿಕ, ಸಾಹಿತ್ಯಜೀವಿಗಳ ಪಿತಾಮಹ. ಬೇರೆ ಬೇರೆ ಕಾಲ, ದೇಶಕ್ಕೆ ತಕ್ಕಂತೆ ಸಾರ್ವಕಾಲಿಕವಾಗಿ ಕಲೆಯ ವಿಶಿಷ್ಟ ಮಾದರಿಗಳನ್ನು, ಸಾಧ್ಯತೆಗಳನ್ನು ಕಟ್ಟಿಕೊಟ್ಟ ಭರತರ್ಷಿ ಯತಾರ್ಥದಲ್ಲಿಯೂ ಕಲಾಸರಸ್ವತಿಯ ರಾಯಭಾರಿ. ಆತನ ವ್ಯಕ್ತಿತ್ವ, ಸೂತ್ರ, ಕರ್ತೃತ್ವ ಎಲ್ಲವೂ ಬಗೆದದ್ದು ತಾರೆ ಉಳಿದದ್ದು ಆಕಾಶ ಎಂಬ ಮಾತಿಗೆ ಅನ್ವರ್ಥ.

ಆದ್ದರಿಂದಲೇ ಭರತಮುನಿಯಿಂದ ಬರೆಯಲ್ಪಟ್ಟ ನಾಟ್ಯಶಾಸ್ತ್ರ ಭರತಸೂತ್ರವೆಂಬುದಾಗಿಯೂ ಪ್ರಚಲಿತ. ಕಲಾವಿಶ್ವಕೋಶ, ಸಂಸ್ಕೃತಿಸರ್ವಸ್ವಸಂಗ್ರಹವಾಗಿ, ಎಲ್ಲ ಕಾಲಕ್ಕೂ ಸಲ್ಲುವ ತತ್ವ-ಪ್ರಯೋಗನಿಧಿಯಾಗಿ, ಸಮಗ್ರ ದರ್ಶನಸಿದ್ಧಾಂತದ ಪ್ರತಿರೂಪವಾಗಿ ನಾಟ್ಯಶಾಸ್ತ್ರವು ಸರ್ವಕಾಲಕ್ಕೂ ಆದರಣೀಯ. ಭಾರತೀಯ ಸಂಸ್ಕೃತಿಯ ಸಮಗ್ರತೆಗೆ ಸಂಬಂಧಿಸಿದಂತೆ ನಾಟ್ಯಶಾಸ್ತ್ರದ ಮೌಲ್ಯ ಮಹೋನ್ನತವಾದದ್ದು. ನಾಟ್ಯದ ಉತ್ಪತ್ತಿ, ಪ್ರಯೋಗ, ಅಂಗಗಳು ಮೊದಲಾದವನ್ನು ಕುರಿತು ಹೇಳದೇ ಉಳಿದ ವಿಷಯವೆಂಬುದು ಯಾವುದೂ ಅದರಲ್ಲಿಲ್ಲ. ನಾಟ್ಯಪ್ರಪಂಚವಷ್ಟೇ ಅಲ್ಲ, ಕಾವ್ಯಮೀಮಾಂಸೆ, ಅಲಂಕಾರಶಾಸ್ತ್ರದ ಪ್ರಥಮ ಕುಸುಮಗಳು ಕುಡಿಯೊಡೆದದ್ದು ಭರತನ ಬೊಗಸೆಯಲ್ಲಿ. ಹಾಗಾಗಿ ಕಾವ್ಯಲಕ್ಷಣಕಾರರಿಗೆಲ್ಲಾ ಭರತನೇ ಪ್ರಥಮಗುರುವಾಗಿ ವಂದ್ಯನಾಗಿದ್ದಾನೆ.

ಪ್ರಸ್ತುತ ಈ ನಾಟ್ಯಶಾಸ್ತ್ರಕಥನಮಾಲಿಕೆಯು ೩೬ ಅಧ್ಯಾಯದ ಪರ್ಯಂತ ಹಬ್ಬಿರುವ ನಾಟ್ಯಶಾಸ್ತ್ರದೊಳಗೆ ಬರುವಂತಹ ಭಾರತೀಯ ಸಂಸ್ಕೃತಿಯ, ನಾಟ್ಯಕಲೆಯ ಕುರಿತಾದ ಆಕರ್ಷಕ ಕಥೆಗಳನ್ನು ಪ್ರತೀ ಸಂಚಿಕೆಗೆ ನಿಮ್ಮ ಮುಂದೆ ಅನಾವರಣಗೊಳಿಸುತ್ತಾ ಸಾಗಲಿದೆ. ಅದಕ್ಕೆ ಪೂರಕವಾಗಿ ಪುತ್ತೂರಿನಲ್ಲಿ ನಡೆದ ನಾಟ್ಯಚಿಂತನ ಕಾರ್ಯಾಗಾರದ ಸಮಯದಲ್ಲಿ ಬರೆಯಲಾದ ನಾಟ್ಯಶಾಸ್ತ್ರಕಥೆಗಳ ಕಾವ್ಯಮಾಲಿಕೆ ಮತ್ತು ಕಥೆಯ ಅಧ್ಯಾಯದ ಸಂಕ್ಷಿಪ್ತ ವಿವರವನ್ನು ಮಹಾಮುನಿ ಭರತ ಎಂಬ ಕೃತಿಯಿಂದ ಆಯ್ದು ಪ್ರಕಟಿಸಲಾಗುತ್ತದೆ. ಇದು ಆಸಕ್ತ ಕಲಾವಿದರಿಗೆ, ನೃತ್ಯಸಂಯೋಜನೆಯ ಪ್ರತಿಭೆಯನ್ನಿಟ್ಟುಕೊಂಡು ಸಾಹಿತ್ಯಕ್ಕಾಗಿ ಅರಸುತ್ತಿರುವ ಗುರು-ಶಿಕ್ಷಕರಿಗೆ, ವಿದ್ಯಾರ್ಥಿಮಿತ್ರರಿಗೆ, ಚಿಣ್ಣರ ಕುತೂಹಲದ ಕಥಾಪ್ರಪಂಚಕ್ಕೆ, ಕಲಾಪ್ರೇಮಿಗಳಾದ ಸಹೃದಯ ಓದುಗರಿಗೆ ಒಳ್ಳೆಯ ರಸಾಹಾರವನ್ನು ಕೊಡಲಿದೆ ಎಂಬುದು ನಮ್ಮ ಅಭೀಪ್ಸೆ. ನಮ್ಮ ಆಶಯಕ್ಕೆ ತಾವೂ ಇಂಬುಕೊಡುತ್ತೀರಲ್ವಾ? -ಸಂ.

 

ಕಳೆದ ಸಂಚಿಕೆಗಳಲ್ಲಿ ಪ್ರಥಮ ಅಧ್ಯಾಯ ನಾಟ್ಯೋತ್ಪತ್ತಿಯಿಂದ ಮೊದಲ್ಗೊಂಡು ತಾಂಡವಲಕ್ಷಣದ ಮೊದಲನೇ ಭಾಗ ಸಮವಕಾರವನ್ನು ನಿರೂಪಿಸಲಾಗಿತ್ತು. ಪ್ರಸ್ತುತ ತಾಂಡವಲಕ್ಷಣದಲ್ಲಿ ಬರುವ ಮತ್ತೊಂದು ಪ್ರಸಕ್ತಿಯಿಂದ ಭರತನು ಮೊದಲು ಮಾಡುವ ಡಿಮ ಎಂಬ ನಾಟ್ಯಪ್ರಯೋಗದ ಕಥೆಯನ್ನು ಆರಿಸಲಾಗಿದೆ. ಈ ಡಿಮದ ಕತೆ ಸಾಕ್ಷಾತ್ ಶಿವನ ತ್ರಿಪುರದಹನದ ಕತೆಯೂ, ಆ ಸಂದರ್ಭದಲ್ಲಿ ಆತನ ಉಗ್ರ-ಅನುಗ್ರಹ ಭಾವದ ತ್ರಿಪುರ ತಾಂಡವದ ಕತೆಯೂ ಆಗಿರುವುದರಿಂದ ಸಮಯೋಚಿತವಾಗಿ ಆ ಕತೆಯನ್ನೂ ಮುಂದಿಡಲಾಗಿದೆ.

ಡಿಮ ಎಂಬುದು ನಾಟ್ಯಶಾಸ್ತ್ರ ಹೇಳುವ ೧೦ ಬಗೆಯ ರೂಪಕಗಳೆಂಬ ನಾಟ್ಯವಿಧಾನದಲ್ಲಿ ಒಂದು ಬಗೆಯಾಗಿದ್ದು; ಉದ್ಧತ ಚಲನೆ-ಅಭಿನಯಗಳು ಹೆಚ್ಚು ಆವರಿಸಿಕೊಂಡಿರುತ್ತದೆ. ಉಳಿದ ಮೂರು ವೃತ್ತಿಗಳಿಗಿಂತ ಅಧಿಕವಾಗಿ ಆರ್ಭಟ-ಮಾಯೆಯ ಸ್ವರೂಪದ ಆರ್ಭಟೀ ವೃತ್ತಿಯ ಪ್ರಯೋಗಕ್ಕೆ ಪ್ರಾಶಸ್ತ್ಯ. ಶೃಂಗಾರ, ಹಾಸ್ಯಗಳನ್ನು ಹೊರತುಪಡಿಸಿ ಉಳಿದ ಆರು ರಸ-ಭಾವದ ಬಳಕೆಯೇ ಇಲ್ಲಿ ಪ್ರಧಾನ. ಕಥೆಯ ಅಂಶವು ಹೆಚ್ಚಾಗಿ ಮಾಯೆ, ಭೇಧ ತಂತ್ರಗಳನ್ನೇ ಅನುಸುರಿಸಿದ್ದು ಈ ಪ್ರಸಕ್ತಿಗೆ ತ್ರಿಪುರ ಸಂಹಾರದ ಕತೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಭರತನು ಹಿಮಾಲಯದ ತಪ್ಪಲಲ್ಲಿ ಶಿವನೆದುರಿಗೆ ಪ್ರಯೋಗ ಮಾಡಿದ ಮೊದಲೆರಡು ಕಥಾ ಸನ್ನಿವೇಶಗಳಲ್ಲಿ ಡಿಮವೂ ಒಂದಾಗಿದ್ದು; ಇದನ್ನು ನೋಡಿದ ಶಿವನು ತಾನು ಸಂಧ್ಯಾಕಾಲದಲ್ಲಿ ಮಾಡಿದ ತಾಂಡವವನ್ನು ಸ್ಮರಣೆಗೆ ತಂದು ಅದರ ಕಲಿಕೆಗೆ ತಂಡುವಿಗೆ ಆದೇಶಿಸುವುದರಿಂದ ತ್ರಿಪುರಸಂಹಾರದ ಕತೆ ಹೆಚ್ಚಿನ ಆದ್ಯತೆ ಪಡೆದುಕೊಂಡಿದೆ.

ತಾಂಡವಗಳಲ್ಲಿ ಪ್ರಧಾನವಾಗಿ ೭ ವಿಧ. ಅವುಗಳನ್ನು ಸಪ್ತತಾಂಡವಗಳೆಂದು ಕರೆಯುತ್ತಾರೆ. ೧೦೮ ಬಗೆಯ ತಾಂಡವಗಳೂ ಉಂಟೆಂದು ಶಾಸ್ತ್ರಕಾರರು ಹೇಳುತ್ತಾರೆ. ಆ ತಾಂಡವದ ಪೈಕಿ ಸಂಧ್ಯಾತಾಂಡವದಲ್ಲಿ ಶಿವನು ಮುಸ್ಸಂಜೆ ಅಂದರೆ ಸಂಧ್ಯಾ ಸಮಯದಲ್ಲಿ ತಾಂಡವ ಮಾಡುತ್ತಿದ್ದ ಎಂಬ ವಿವರಣೆಯನ್ನು ಗ್ರಂಥಗಳು ಕೊಡುತ್ತವೆ. ಸಂಧ್ಯಾ ತಾಂಡವದಲ್ಲಿ ಶಿವನು ನರ್ತನಕ್ಕೆ ಗೌರಿ ಮಾತ್ರ ಪ್ರೇಕ್ಷಕಳು. ಉಳಿದಂತೆ ಎಲ್ಲ ದೇವಾನುದೇವತೆಗಳು ಒಂದಲ್ಲ ಒಂದು ಕಾರ್ಯದಲ್ಲಿ ನಾಟ್ಯಕಲಾಸಹಾಯಕರು. ಉದಾಹರಣೆಗೆ ಸರಸ್ವತಿ ವೀಣೆಯನ್ನೂ, ಬ್ರಹ್ಮನು ತಾಳವನ್ನೂ, ವಿಷ್ಣು ಮದ್ದಳೆಯನ್ನು, ಇಂದ್ರನು ಕೊಳಲನ್ನೂ ನುಡಿಸುತ್ತಾನೆ. ಲಕ್ಷ್ಮಿ ಹಾಡುತ್ತಾಳೆ. ಎಲ್ಲಾ ದೇವತೆಗಳು ಒಂದೊಂದು ವಾದ್ಯವನ್ನು ನುಡಿಸುತ್ತಾ ಶಿವನ ಡಮರಿನ ಗತಿಯನ್ನೂ ಕೇಳುತ್ತಿದ್ದಾರೆ. ಸತಿಯ ಸಂತೋಷವನ್ನು ಲಕ್ಷಿಸಿ ಶಿವನ ನರ್ತನದ ಆನಂದಮಯ ರೂಪವೇ ಸಂಧ್ಯಾತಾಂಡವದ ಪ್ರಸಕ್ತಿ.

ಇನ್ನು ಸುಬ್ರಹ್ಮಣ್ಯನಿಂದ ತಾರಕಾಸುರನ ವಧೆಯಾದ ಮೇಲೆ ನಡೆಯುವ ಕತೆಯೆಂದು ತ್ರಿಪುರದಹನವನ್ನು, ತ್ರಿಪುರ ತಾಂಡವವನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗುತ್ತದೆ. ತಾರಕಾಸುರನ ಮಕ್ಕಳು ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ. ತಾರಕಾಸುರನ ಸಂಹಾರದ ನಂತರ ರಾಕ್ಷಸಶಿಲ್ಪಿ ಮಯನು ಇವರೊಂದಿಗೆ ಸೇರಿಕೊಂಡು ಪ್ರಯಾಗದಲ್ಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಅಮರತ್ವವನ್ನೂ, ಯಾವ ದೇವತೆಗಳಿಂದಲೂ ನಾಶಪಡಿಸಲಾಗದ ಮೂರು ಪಟ್ಟಣಗಳನ್ನು ನಿರ್ಮಿಸುವ ವರ ಬೇಡುತ್ತಾನೆ. ಬ್ರಹ್ಮನು ಅಮರತ್ವ ಸಾಧ್ಯವಿಲ್ಲವೆಂದೂ, ಆದರೆ ಪಟ್ಟಣಗಳನ್ನು ಕಲ್ಪಿಸಿಕೊಳ್ಳುವ ಶಕ್ತಿಯನ್ನು ಅನುಗ್ರಹಿಸುತ್ತಾ, ಒಬ್ಬನೇ ಮೂವರನ್ನೂ ಏಕಕಾಲಕ್ಕೆ ಒಂದೇ ಬಾಣದಿಂದ ಕೊಂದರೆ ಮಾತ್ರ ಈ ತ್ರಿಪುರಗಳಿಗೂ, ಅಸುರರಿಗೂ ನಾಶವೆಂದು ಹೇಳುತ್ತಾನೆ. ಅದರಂತೆ ಭೂಮಿಯ ಮೇಲೆ ಕಬ್ಬಿಣದ ಪಟ್ಟಣವನ್ನೂ, ಆಕಾಶದಲ್ಲಿ ಬೆಳ್ಳಿಯ ಪಟ್ಟಣವನ್ನೂ, ಅದರ ಮೇಲ್ಭಾಗದಲ್ಲಿ ಚಿನ್ನದ ಪಟ್ಟಣವನ್ನು ನಿರ್ಮಿಸಿ ತಾರಾಕ್ಷನಿಗೆ ಚಿನ್ನದ ಪಟ್ಟಣವನ್ನೂ, ಕಮಲಾಕ್ಷನಿಗೆ ಬೆಳ್ಳಿಯ ಪಟ್ಟಣವನ್ನೂ, ವಿದ್ಯುನ್ಮಾಲಿಗೆ ಕಬ್ಬಿಣದ ಪಟ್ಟಣವನ್ನೂ ನೀಡುತ್ತಾನೆ. ನಂತರ ಮಯನು ಬುದ್ಧಿವಾದ ಹೇಳಿ ಕೆಟ್ಟಕೆಲಸಕ್ಕೆ ಹೊಗಬಾರದೆಂದೂ, ದೇವತೆಗಳಿಗೆ ತಂಟೆ ಮಾಡದೆ ದೈವಭಕ್ತಿಯಿಂದ ಇದ್ದು ಆಚಾರಹೀನರಾಗದೆ ಬದುಕಿ ಎಂದು ಉಪದೇಶಿಸುತ್ತಾನೆ. ಮೊದಮೊದಲಿಗೆ ಧರ್ಮಪರಾಯಣರಾಗಿ ಶಿವನನ್ನೇ ನಂಬಿ ನಡೆದರೂ; ಕ್ರಮೇಣ ಈ ನಿಯಮವನ್ನು ಮೀರಿ ಎಲ್ಲರಿಗೂ ಉಪದ್ರವ ನೀಡತೊಡಗುತ್ತಾರೆ ಅಸುರತ್ರಿವಳಿಗಳು. ಆಗ ಎಲ್ಲರೂ ಶಿವನ ಮೊರೆಹೊಗಲಾಗಿ; ಶಿವನು ಭೂಮಿಯನ್ನೇ ರಥವನ್ನಾಗಿ, ನಾಲ್ಕು ವೇದಗಳನ್ನು ನಾಲ್ಕು ಕುದುರೆಗಳನ್ನಾಗಿ ಮಾಡಿ, ಬ್ರಹ್ಮನನ್ನು ಸಾರಥಿಯಾಗಿಸಿ, ಮಂದರಪರ್ವತವನ್ನೇ ಬಿಲ್ಲನ್ನಾಗಿಸಿ, ಸಮುದ್ರವನ್ನೇ ಬತ್ತಳಿಕೆ ಮಾಡಿ ಆದಿಶೇಷನನ್ನು ಹೆಡೆಯಾಗಿ ಬಿಗಿದು, ಈ ಮೂರು ಪಟ್ಟಣಗಳು ಒಂದೇ ಕಡೆ ಸೇರಿದ್ದ ಸಂಧಿಯನ್ನು, ಕಾರ್ತಿಕ ಶುಕ್ಲ ಪಂಚದಶಿಯ ದಿನದ ಮುಹೂರ್ತವನ್ನು ಕಂಡು ವಿಷ್ಣುವನ್ನೇ ಬಾಣವನ್ನಾಗಿಸಿ ಸುಟ್ಟು ನಾಶಮಾಡಿದ. ಇದೇ ನಂತರದ ದಿನಗಳಲ್ಲಿ ಮೂವರು ವ್ಯಕ್ತಿಗಳು ಒಂದು ಕಡೆ ಸೇರಬಾರದೆಂದೂ, ಅಧರ್ಮಕ್ಕೆ ಎಡೆ ಮಾಡಿಕೊಡುತ್ತದೆಂಬ ನಂಬಿಕೆಗೆ ಎಡೆಮಾಡಿದೆ. ಅಂತೆಯೇ ತ್ರಿಪುರಸಂಹಾರದ ಸಂಕೇತವಾಗಿ ದೇವಾಲಯಗಳಲ್ಲಿ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಹೀಗೆ ತ್ರಿಪುರದಹನವನ್ನು ಮಾಡುವ ಸಂದರ್ಭದಲ್ಲಿ ಶಿವನ ನಾಟ್ಯಕಲ್ಪದ ವರ್ಣನೆಯನ್ನು ತಾಂಡವದ ಒಂದು ಬಗೆಯೆಂದು ಕರೆಯಲಾಗಿದೆ.

ಈ ಕತೆಯನ್ನು ಭರತನು ಪ್ರಯೋಗಿಸಿದ ಬಳಿಕ ಶಿವನು ಈ ನಾಟ್ಯಪ್ರಯೋಗಗಳನ್ನು ಮೆಚ್ಚಿ, ತಂಡುವನ್ನು ಕರೆದು ೧೦೮ ಕರಣಗಳು, ೩೨ ಅಂಗಹಾರ, ನಾಲ್ಕು ರೇಚಕಗಳು, ನಿಶ್ಚಿತ ದೇವತೆಗಳಿಗೆ ಒಪ್ಪುವ ನೃತ್ತವಿನ್ಯಾಸಗಳಾದ ಪಿಂಡೀಬಂಧಗಳ ಜ್ಞಾನವನ್ನು ಭರತನಿಗೆ ನೀಡುವಂತೆ ಆದೇಶಿಸುತ್ತಾನೆ. ಬ್ರಹ್ಮಕೃತ ನಾಟ್ಯದ ಪ್ರಸಕ್ತಿಗೆ ಒಪ್ಪುವಂತೆ ರಂಜನೀಯವೂ, ಆಹ್ಲಾದಕರವೂ ಆದ ನೃತ್ತಸಾಧ್ಯತೆಗಳನ್ನು ನೀಡುವುದಕ್ಕೆಂದೇ ಭರತನಿಗೆ ಶಿವನ ಆಜ್ಞೆಯನ್ನು ತಂಡುವು ಪ್ರಸಾದಿಸುತ್ತಾನೆ. ತಂಡುವು ಹೇಳಿಕೊಟ್ಟ ಕಾರಣ ತಾಂಡವವೆಂದು ಹೆಸರಾದ ಈ ನೃತ್ತಕ್ರಮವನ್ನು ಕೇವಲ ಉದ್ಧತರೂಪದಲ್ಲಷ್ಟೇ ಅಲ್ಲ; ಲಲಿತ ಶೃಂಗಾರ-ರಸಮೂಲವಾದ ಸುಕುಮಾರವಾಗಿಯೂ ನರ್ತಿಸಬಹುದು ಎನ್ನುವುದು ಈ ಮೂಲಕ ಎಂದೆಂದಿಗೂ ಕಲಾವಿದ ಮಹಾಶಯರು ಅರಿತುಕೊಳ್ಳಲೇಬೇಕಾದ ಅಂಶ.

ಇದೇ ಅಧ್ಯಾಯದಲ್ಲಿ ಮುಂದೆ ತಾಂಡವವಿಧಿಕ್ರಿಯೆ, ಗೀತ-ನೃತ್ತ ಪ್ರಯೋಗ, ಸುಕುಮಾರಶೈಲಿಗಳ ಕುರಿತ ಮುನಿಗಳ ಸಂದೇಹಕ್ಕೆ ಭರತನ ಉತ್ತರವಿದೆ. ಅದರಲ್ಲೂ ಪ್ರಮುಖವಾಗಿ ನೃತ್ತವು ಯಾವ ಅರ್ಥವನ್ನು ಕೊಡದಿದ್ದರೂ ನೃತ್ತದಿಂದ ನಾಟ್ಯರಂಗವು ಕಳೆ ಕಟ್ಟುತ್ತದೆ. ಮನುಷ್ಯರ ಸ್ವಭಾವಕ್ಕೆ ನೃತ್ತ ಇಷ್ಟ. ಅದು ಮಂಗಲಕರವಾದ ರಂಜನೆ. ಈ ಬಗೆಯ ನೃತ್ತರೂಪದ ದೇವತಾಸ್ತುತಿಯೇ ತಾಂಡವದ ವಸ್ತು. ಇದಕ್ಕೆ ಕರಣಾಂಗಹಾರಗಳು ಅವಶ್ಯಕ ಎನ್ನುವ ಭರತಮತ ಮನನೀಯ. ಆದರೆ ಮಾರ್ಗೋತ್ತರ ಕಾಲದ ಶಕೆಗಳಲ್ಲಿ ನೃತ್ತ-ತಾಂಡವ-ಲಾಸ್ಯಗಳೆಂಬ ವಿಭಾಗವ್ಯಾಖ್ಯಾನಗಳು ಭರತನಿಗಿಂತ ಬೇರೆಯದೇ ಆಯಾಮವನ್ನು ಹಿಡಿದವು. ಅದರಲ್ಲಿ ಪ್ರಮುಖವಾಗಿ ನೃತ್ತವನ್ನು ಅಭಿನಯವಿಲ್ಲದ ನರ್ತನವೆಂದು ಮೂಲೆಗುಂಪು ಮಾಡಲಾಗಿದ್ದು; ಇಂದಿಗೆ ನೃತ್ತದ ವ್ಯಾಖ್ಯಾನವೇ ಕರಣಾಂಗಹಾರದಿಂದ ಪಕ್ಕಕ್ಕೆ ಹೊರಳಿ ಬದಲಾಗಿಹೋಗಿರುವುದು ವಿಪರ್ಯಾಸ. ಯತಾರ್ಥದಲ್ಲಿ ನೃತ್ತವೆಂಬುದು ಕಥಾ/ಇತಿವೃತ್ತಾತ್ಮಕರಹಿತವೇ ವಿನಾ ಅಭಿನಯಸಹಿತವಾಗಿಯೇ ಇರುತ್ತದೆ ಎನ್ನುವ ಪ್ರತಿಪಾದನೆ ಭರತನದ್ದು. ಇದನ್ನು ಪ್ರಸ್ತುತ ನೃತ್ಯಪದ್ಧತಿಗಳಲ್ಲಿಯೂ ಅರಿತು ಅಳವಡಿಸಿಕೊಂಡು ಮುನ್ನಡೆದರೆ ಎಂದೆಂದಿಗೂ ಯಶಸ್ಸು, ಸೌಂದರ್ಯಾಭಿವ್ಯಕ್ತಿ ನಿಸ್ಸಂಶಯ.

 

ಡಮರುಗವ ಪಿಡಿದೆತ್ತಿ ನರ್ತಿಸುವ ಶಿವನಂದು

ಡಿಮವನ್ನು ನೋಡಿದನು ಹರುಷದಿಂದೆ

(ಡಿಮ ರೂಪಕದ ಪ್ರದರ್ಶನ)

ಉದ್ಧತದ ಆರಭಟಿ ಷಡ್ರಸವು ಉಜ್ವಲಿಸೆ

ಮಾಯೆ ಭೇಧಗಳಿಹುದು ತ್ರಿಪುರಸಂಹಾರ…

(ಜತಿ ಅಥವಾ ಸ್ವರಕಲ್ಪನೆ)

ಶಿವ ಭರತನಿಗೆ : ನವನಾಟ್ಯ ಶುಭಕರವು ಸತ್ತ್ವಾಶ್ರಿತ…

ಸೌಭಾಗ್ಯ ಜೀವನವು ರಸಪೋಷಿತ

ಶುಭಕರವು ಈ ನಾಟ್ಯ ಜ್ಞಾನಪೀಯೂಷ

ಕರಣಾಂಗಾಹಾರವಿರೆ ತೋಷವೇಷಾ

ಮುಸ್ಸಂಜೆ ಹೊತ್ತಲ್ಲಿ ಮಾಡಿದಾ ನೃತ್ಯಸ್ಮೃತಿ (ಗತಿವ್ಯತ್ಯಾಸ ಮತ್ತು ಜತಿ)

ಜೊತೆಗೂಡೆ ರೇಚಕದಿ ಪರಿಪೂರ್ಣ ರಂಗಕೃತಿ

(ಶ್ಲೋಕರೂಪದಲ್ಲಿ) ‘ಹಸ್ತಪಾದಸಮಾಯೋಗೇ ನೃತ್ತಸ್ಯ ಕರಣಂ ಭವೇತ್’

‘ಆತ್ಮಕಾಯಸಮಾಯೋಗೇ ನೃತ್ತಸ್ಯ ಕರಣಂ ಭವೇತ್’

(ತಂಡು ಭರತನಿಗೆ ಹೇಳಿಕೊಡುವಂತೆ ಮಾಡಬಹುದು. ಪಾಟಾಕ್ಷರ-ಆಲಾಪನೆ-ಸ್ವರಕಲ್ಪನೆಯ ಸಂಯೋಗ)

ತಂಡು ತಿಳುಹಿದ ಕತದಿ ತಾಂಡವದಚರಿತ

ಪರಮಾರ್ಥ ಪೋಷಕವು ಸಹೃದಯಸುಚರಿತ

(ಜತಿ ಅಥವಾ ಆಲಾಪನೆ)

ಶೈಲಸುತೆ ವಿಶ್ವನಾಟ್ಯವ ಕಂಡು ಸುಖಿಸೆ

ಅಭಿಜಾತ ಲೀಲೆಯಿದು ಭರತರ್ಷಿ ಲಿಖಿಸೆ

ದೇವಗಂಧರ್ವಕಿನ್ನರರೆಲ್ಲ ಕಲಿ-ನಲಿಯೆ

ರಸ ಭಾವ ಯೋಗದಭಿನೀತಿಯದು ಕಲೆಯೆ

(ನರ್ತನದೊಂದಿಗೆ)

ಋಷಿವಾಕ್ಕು ಇದುವೆ ಮಾರ್ಗಾಭಿನಯದಾ ರೂಪ..

ಮೇಳವಿಸೆ ಸ್ವ-ರೂಪ ನಾಟ್ಯ ಚೆಲುವಿನ ಪಾಕ…

(ಸ್ವರಕಲ್ಪನೆ ಅಥವಾ ಪಾಟಾಕ್ಷರ ನಿರ್ದೇಶನ ಅಥವಾ ಅಲಾಪನೆ ಬಳಸಬಹುದು)

Leave a Reply

*

code