ಅಂಕಣಗಳು

Subscribe


 

ಇಂದಿನ ಕಲಿಕೆಯ ದಾರಿ

Posted On: Wednesday, October 28th, 2015
1 Star2 Stars3 Stars4 Stars5 Stars (No Ratings Yet)
Loading...

Author: -ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಕಾಸರಗೋಡು

ಭ್ರಮರಿಯ ಸಂಪುಟ ಒಂಭತ್ತರ ಎರಡನೇ ಸಂಚಿಕೆಯಲ್ಲಿ ಮೂಡಿಬಂದ ಮೂರ್ತಿ ದೇರಾಜೆ ಅವರ ‘ಶಿಕ್ಷಣ ಎಂಬ ನಾಟಕವೂ, ನಾಟಕವೆಂಬ ಶಿಕ್ಷಣವು’ ವಿಶಿಷ್ಟ ಬರೆಹವಾಗಿತ್ತು. ಹಿಂದೊಮ್ಮೆ ಅಧ್ಯಾಪಕನಾಗಿದ್ದ ನನ್ನ ಮನಃಶಾಸ್ತ್ರ ಪ್ರಜ್ಞೆಗೆ ಉತ್ತೇಜನ ನೀಡಿದುದು ನಿಜ. ಇದರೊಂದಿಗೆ ಸಂಪಾದಕೀಯದಲ್ಲಿ ಹೊರಹೊಮ್ಮಿದ ಹೇಳಿಕೆಗಳು ನನ್ನೊಡಲ ಆಶಯಕ್ಕೆ ಬೆಂಬಲ ನೀಡಿದುದರಿಂದ ನನಗನಿಸಿದ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಇಂದಿನ ದಿನಗಳ ಕಲಿಕೆಯ ದಾರಿ ಹಿಂದಿನಂತಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಿಂದಿನ ಸಂಪ್ರದಾಯಗಳೆಲ್ಲಾ ಹಿಂದೆಯೇ ಉಳಿದು ಈಗ ಬಂದಿರುವ ಕಲಿಕಾವಿಧಾನಗಳನ್ನು ಎಣಿಕೆ ಮಾಡುತ್ತಾ ಹೊರಟರೆ ಈ ವಿಚಾರ ಇನ್ನೂ ಸ್ಪಷ್ಟವಾಗುತ್ತದೆ. ಮನೆಯೇ ಮೊದಲಪಾಠಶಾಲೆ, ತಾಯಿಯೇ ಮೊದಲಗುರು ಎಂಬ ಹೇಳಿಕೆಯೇನೋ ಉಳಿದಿದೆ. ಆದರೆ ಇಂದಿಗೆ ಗಂಡಹೆಂಡತಿ ಇಬ್ಬರೂ ಕೆಲಸಗಾರರಾಗಿದ್ದು ಹಿರಿಯರಾರೂ ಮನೆಯಲ್ಲಿಲ್ಲದೆ, ದಾದಿಯರನ್ನೇ ಅವಲಂಬಿಸಿಕೊಂಡಿರುವ ಕಾಲಕ್ಕೆ ಮನೆಯಾಗಲೀ, ತಾಯಿಯಾಗಲೀ ಪಾಠವಾಗಿ, ಗುರುವಾಗುವುದರಲ್ಲಿ ಎಲ್ಲಿದೆ ಅವಕಾಶ? ಮೂರು ವರುಷ ಪ್ರಾಯ ಆಗಲೂ ಕಾಯದೆ ಯಾವ ಶಾಲೆಗೆ ಕಳುಹಿಸಬಹುದೆಂದು ಲೆಕ್ಕ ಹಾಕುವ ಅಪ್ಪ-ಅಮ್ಮಂದಿರೇ ಇಂದಿನ ಕಾಲಕ್ಕೆ ಹೆಚ್ಚು. ಎಷ್ಟೋ ಬಾರಿ ಮಗು ಹುಟ್ಟುವ ಮೊದಲೇ ಶಾಲೆ ಕಾದಿರಿಸುವವರೂ ಇದ್ದಾರೆ. ಮತ್ತೊಂದೆಡೆ ಸರಕಾರೀ ಶಾಲೆಗಳ ದುಸ್ಥಿತಿ, ಖಾಸಗಿಯವರ ಹಾವಳಿ. ಕೆಲವೊಂದೆಡೆ ಈ ಪ್ರಸಂಗಗಳಿಗೆ ಅಪವಾದಗಳಿರಬಹುದು. ಆದರೆ ಎಲ್ಲೆಡೆ ಪೈಪೋಟಿ ನಡೆಯುತ್ತಿರುವಂತೂ ನಿಜ.

ಇವೆಲ್ಲವೂ ಯಾಂತ್ರೀಕೃತ ಮಾಧ್ಯಮದ ಹೆಗ್ಗಳಿಕೆಯ ಕೊಡುಗೆಗಳೆಂದರೆ ತಪ್ಪಾಗಲಾರದು. ಲೆಕ್ಕಕ್ಕಿಲ್ಲದಷ್ಟು ಎಣಿಕೆಯಲ್ಲಿ ದಿನದಿನವೂ ಏರುತ್ತಿರುವ ಟಿವಿ ಚಾನಲ್‌ಗಳ ಭರಾಟೆ, ಅವು ಎಡೆಬಿಡದೆ ಜನರನ್ನು ಸೆಳೆಯುವ ತಂತ್ರಗಳು, ಶೀಲ-ಅಶ್ಲೀಲವೆನ್ನುವ ವ್ಯತ್ಯಾಸ ತಿಳಿಯದೆ ಪ್ರಸಾರವಾಗುವ ಕಾರ್ಯಕ್ರಮಗಳು- ಒಟ್ಟಿನಲ್ಲಿ ತಮ್ಮ ಅಸ್ತಿತ್ತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ತಮ್ಮ ಚಾನಲ್‌ಗಳ ನಿರಂತರ ಚಾಲನೆಯೊಂದನ್ನೇ ನೋಡಿಕೊಳ್ಳುವವರ ಮಧ್ಯೆ, ಹಸಿಗೋಡೆಯಂತೆ ನಿರ್ಮಲ ಚಿತ್ತದಲ್ಲಿರುವ ಮಗುವಿನ ಮನಸ್ಸು ಚಂಚಲಗೊಳ್ಳುತ್ತಲೇ ಸಾಗಿದೆ. ಒಟ್ಟಿನಲ್ಲಿ ಮಕ್ಕಳಿಗೆ ಯಾವುದೇ ರೂಪದಲ್ಲಿ ಹೇಳಿದರೂ ಅವರು ಹಿರಿಯರ ಹೇಳಿಕೆಗೆ ಗಮನವೇ ನೀಡುತ್ತಿಲ್ಲ ಎಂಬ ಸ್ಥಿತಿಯಲ್ಲಿ ನಾವಿಂದಿದ್ದೇವೆ. ಇಂತಹ ಮಾಧ್ಯಮಗಳನ್ನು ನಿರ್ದಾಕ್ಷಿಣ್ಯವಾಗಿ ನಿರ್ಬಂಧಗೊಳಿಸುವ ಗದಾಪ್ರಹಾರ ಆದೀತೇ? ಅಲ್ಲಿಯವರೆಗೂ ಈ ಚರ್ಚೆಗಳು ನಡೆಯುತ್ತಲೇ ಇರುತ್ತವೆ.

ಕಲೆಯ ಆರಾಧಕನು ಅಲೆಯುತ್ತನಿಹನಲ್ಲ

ನೆಲೆಯೆಲ್ಲಿ ಇಹುದೆನಗೆ ಎನ್ನುತ್ತಲಿಹನೆ?

ಕಲೆಯ ಬೆಲೆಗೆ ಪಡೆದು ಬೆಳೆಸುವೆನು ಎನ್ನದಿರು

ಬೆಲೆಯ ಪಡಿಗೇ ಸಿಗುವ ನೆಲೆ ಇಲ್ಲದಾ ಸರಕು ಇದು ಅಲ್ಲ ನೋಡಾ

ಕಲೆಯ ಒಲುಮೆಯು ನಿನಗೆ ಬಲುಮುಖ್ಯವೆನ್ನುವುದಾ ತಿಳಿದೆಯಾದರೆ ಸಾಕು

ಒಲಿದು ನಲಿಯಲೆಬೇಕು ಕಲಿಭೀಮನಂತೆ

 

 

Leave a Reply

*

code