ಅಂಕಣಗಳು

Subscribe


 

ಸಂಸ್ಕೃತಿ ಉತ್ಥಾನಕ್ಕೊಂದು ಸ್ಪಷ್ಟ ನಿದರ್ಶನ – ಕೀಲಾರು ಗೋಪಾಲಕೃಷ್ಣಯ್ಯ ಯಕ್ಷಗಾನ ಪ್ರತಿಷ್ಠಾನ

Posted On: Monday, October 26th, 2015
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಮನೋರಮಾ ಬಿ.ಎನ್

ಕೀಲಾರು- ‘ಪ್ರತಿಷ್ಠಾನವಾಗಿ ಹೇಗೆ ನಮ್ಮ ಚಿಂತನೆಗಳನ್ನು ರೂಪಿಸಿದೆ ’ ಎಂಬುದನ್ನು ಹೇಳುವುದಕ್ಕಿಂತ ಮುಂಚೆ ಕೀಲಾರು- ಒಂದು ಕುಟುಂಬವಾಗಿ, ಸಾಮುದಾಯಿಕ ಘಟಕವಾಗಿ ಮೊದಲಿನಿಂದಲೂ ನಮಗೆ ಆಪ್ತ. ಆದರೆ ಈ ಬಂಧಗಳಿಗಿಂತಲೂ ಹೆಚ್ಚಾಗಿ ನೂಪುರ ಭ್ರಮರಿಯ ಬೆಳವಣಿಗೆಯಲ್ಲಿ ಅಂದರೆ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಕೀಲಾರು ಜೊತೆಗಿನ ಬಾಂಧವ್ಯ ಸ್ಮರಣೀಯ. ಅದರಲ್ಲೂ ವೈಯಕ್ತಿಕವಾಗಿ ಹೇಳುವುದಿದ್ದರೆ ನನ್ನ ಮತ್ತು ಕೀಲಾರಿನ ನಡುವಿನ ನಂಟು ಯಕ್ಷೋತ್ಸವದಿಂದಲೇ ಪ್ರಾರಂಭ. ಆಗ ನಾನಿನ್ನೂ ೬-೭ ವರ್ಷದವಳಿರಬಹುದು. ಯಕ್ಷೋತ್ಸವದ ಆರಂಭಿಕ ವರುಷಗಳಲ್ಲಿ ಸಭಾಕಾರ್ಯಕ್ರಮಕ್ಕೆ ಪ್ರಾರ್ಥನಾಗೀತೆ ಹಾಡುತ್ತಿದ್ದೆ. ಬಹುಷಃ ಭವಿಷ್ಯದಲ್ಲಿ ಯಕ್ಷಗಾನ ಕಲಾವಿದೆಯಾಗಿ-ಸಂಶೋಧಕಿಯಾಗಿ ಬೆಳೆಯುವಲ್ಲಿ, ಯಕ್ಷಗಾನ ಕಲಾವಿದರ ಸೌಹಾರ್ದ ನಂಟು ಹೊಂದುವಲ್ಲಿ ಯಕ್ಷೋತ್ಸವದ ಗಾಢಪ್ರಭಾವವೂ ಇದೆ ಎಂದರೆ ತಪ್ಪಾಗಲಾರದು. ಅಷ್ಟೇ ಏಕೆ, ನೂಪುರ ಭ್ರಮರಿಯ ವಾರ್ಷಿಕ ಸಂಚಿಕೆಗೆ ಅಗತ್ಯವಿದ್ದ ಸಾಂಸ್ಕೃತಿಕ ಪತ್ರಿಕಾ ಇತಿಹಾಸದಲ್ಲೇ ಪ್ರಪ್ರಥಮವೆಂದು ಗುರುತಿಸಲ್ಪಟ್ಟ ಸ್ತ್ರೀಪಾತ್ರಧಾರಿಗಳ ಸಂದರ್ಶನ ಮತು ತೌಲನಿಕ ಅಧ್ಯಯನದ ಆಯಾಮವುಳ್ಳ ಲೇಖನಕ್ಕೆ ಅವಕಾಶ, ಆಕರ ಸಿಕ್ಕಿದ್ದು ಯಕ್ಷೋತ್ಸವದಲ್ಲೇ ! ಸ್ವತಃ ವಿಮರ್ಶಕಿಯಾಗಿದ್ದರೂ; ಯಕ್ಷೋತ್ಸವವನ್ನು ವಿಶ್ಲೇಷಿಸುವ ನನ್ನ ಬಗೆ ಉಳಿದ ವಿಮರ್ಶಕರಂತಲ್ಲದೆ ವಿಭಿನ್ನವಾಗಲು ಕಾರಣ- ಬಹುಷಃ ಆರಂಭಿಕ ದಿನಗಳಿಂದಲೂ ಅದು ನನಗಿತ್ತ ಅನುಭವ, ಬೇಕು-ಬೇಡಗಳ ಅರಿವು ಮತ್ತು ಚಿಂತನೆಯ ಫಲಶ್ರುತಿಯಿಂದಿರಬೇಕು. ಸಾಂಸ್ಕೃತಿಕವಾಗಿ, ಸಾಮುದಾಯಿಕವಾಗಿ, ಕಲೆ ಮತ್ತು ಕಲಾವಿದರ ಪೋಷಕವಾಗಿ ಪ್ರತಿಷ್ಠಾನವು ಹಮ್ಮಿಕೊಂಡು ಆಚರಿಸುತ್ತಿರುವ ಉದ್ದೇಶಗಳು ಯಕ್ಷರಂಗದ ದೀರ್ಘ ಪಯಣದಲ್ಲಿ ದಾಖಲರ್ಹವಾದ ಹೆಜ್ಜೆಗಳನ್ನು ಇಟ್ಟಿದೆ ಮತ್ತು ವೃತ್ತಿ-ಹವ್ಯಾಸಿಯೆಂದಷ್ಟೇ ಅಲ್ಲದೆ ಯಕ್ಷ ಮನಸ್ಸುಗಳಿಗೂ ಹೊಸ ದಿಕ್ಕನ್ನು ನಿರತವೂ ನೀಡುತ್ತಲೇ ಬರುತ್ತವೆ ಎಂಬುದು ಯಕ್ಷೋತ್ಸವದ ನೋಡುಗ ವಿದ್ಯಾರ್ಥಿನಿಯಾಗಿ ನನ್ನ ಅನಿಸಿಕೆ. ಆ ಮಟ್ಟಿಗೆ ಪುಸ್ತಕಪ್ರಕಟಣೆ- ಸಮ್ಮಾನ- ಸತ್ಕಾರಗಳಂತಹ ಮಹತ್ತರ ವೇದಿಕೆಗಳಿಂದಾಚೆಗೆ ಯಕ್ಷೋತ್ಸವವನ್ನು ನೋಡುವುದಿದ್ದರೂ ಯಕ್ಷಮನಸ್ಸುಗಳ ಕೂಡುವಿಕೆಯ ಭರ್ಜರಿ ತಾಣವಾಗಿ ಮೈಲಿಗಲ್ಲೆನ್ನುವುದರಲ್ಲಿ ಸಂಶಯವಿಲ್ಲ. ಹಾಗಾಗಿಯೇ ಇಂದಿಗೂ ಪ್ರತಿವರುಷ ಎಲ್ಲೇ ಇದ್ದರೂ ಯಕ್ಷೋತ್ಸವಕ್ಕೆ ತಪ್ಪದೇ ಕುಟುಂಬದೊಂದಿಗೆ ಹಾಜರಾತಿ ಹಾಕಿ ಆ ವೈಭವವನ್ನು ಕಣ್ತುಂಬಿಕೊಂಡು, ಚೆಂಡೆ-ಮದ್ದಳೆಯ ರಿಂಗಣವನ್ನು ಕಿವಿಯಲ್ಲಿ ಧ್ವನಿಸಿಕೊಂಡು ಅದೆಷ್ಟೋ ದಿನ ಮೆಲುಕು ಹಾಕುವ ನನ್ನಂಥ ಹಲವು ಅಭಿಮಾನಿಗಳಿದ್ದಾರೆ.

ಬಾಲ್ಯದಿಂದ ಮುಂದುವರೆದ ಈ ನಂಟು ಮುಂದೆ ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದಿಂದ ಪ್ರಕಟಗೊಂಡ ಹಸ್ತಮುದ್ರೆಗಳ ಕುರಿತ ನನ್ನ ಮೊದಲ ವಿಶ್ಲೇಷಣಾತ್ಮಕ ಸಂಶೋಧನಾ ಗ್ರಂಥ ‘ಮುದ್ರಾರ್ಣವ’ಕ್ಕೂ ಬೆನ್ನೆಲುಬಾಗಿ ನಿಂತಿದೆ. ಪುಸ್ತಕಕ್ಕೆ ‘ಶ್ರೀ’ರಕ್ಷಕರಲ್ಲೊಬ್ಬರಾಗಿ ನಿಂತದ್ದು ಕೀಲಾರು ಪ್ರತಿಷ್ಠಾನ ಮತ್ತು ಅದರ ಪೋಷಕರು. ಈ ಹಂತದಲ್ಲಿ ಶ್ರೀಯುತ ಶಾಮ ಭಟ್ ಮತ್ತು ಸುಮನಾ ಶಾಮಭಟ್ಟರ ಕೊಡುಗೈದಾನವನ್ನು ಮರೆಯುವಂತಿಲ್ಲ. ಜೊತೆಗೆ ಸ್ವತಃ ಶ್ರೀಯುತ ಶಾಮಭಟ್ಟರೇ ಮುದ್ರಾರ್ಣವ ಅನಾವರಣ ಸಮಾರಂಭದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡು ಖುದ್ದು ಹಾಜರಿದ್ದು; ಕೀಲಾರು ಪ್ರತಿಷ್ಠಾನದ ಜೊತೆಗಿನ ನಮ್ಮ ಬಾಂಧವ್ಯವನ್ನು ಸ್ಮರಿಸಿ ಹರಸಿದ್ದು ಸದಾ ನನ್ನ ನೆನಪಿನಂಗಳದ ಹಸಿರು. ಜೊತೆಗೆ ಕೀಲಾರು ಪ್ರತಿಷ್ಠಾನದ ಅನನ್ಯ ಸಂಬಂಧ ಹೊಂದಿರುವ ಹೊಸನಗರ ಮೇಳದ ಯಕ್ಷಗಾನ ಪ್ರದರ್ಶನವೂ ಅಂದು ಜರುಗಿದ್ದು ಮರೆಯುವಂತಿಲ್ಲ.

ಅಂತೆಯೇ ನೂಪುರ ಭ್ರಮರಿ ಪ್ರತಿಷ್ಠಾನದ ವತಿಯಿಂದ ೨೦೧೨ ಫೆಬ್ರವರಿಯ ಮಹಾಶಿವರಾತ್ರಿಯಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಜರುಗಿದ ಕರ್ನಾಟಕದ ಮೊತ್ತ ಮೊದಲ ನೃತ್ಯ ಸಂಶೋಧನಾ ವಿಚಾರಸಂಕಿರಣಕ್ಕೂ ಕೀಲಾರ ಪ್ರತಿಷ್ಠಾನದ ಸಹಪ್ರಾಯೋಜಕತ್ವ ನೀಡುವ ಭರವಸೆ ಒದಗಿದ್ದು ಉಲ್ಲೇಖನೀಯ. ಈ ಪ್ರಪ್ರಥಮವೆನಿಸುವ ವಿಚಾರಸಂಕಿರಣ ಇಂದಿಗೆ ಸರ್ಕಾರದ ಅಂಗಸಂಸ್ಥೆಗಳಿಗೆ, ಹಲವು ಖಾಸಗಿಸಂಸ್ಥೆಗಳ ಚಿಂತನಶೀಲರಿಗೆ ದೀವಟಿಗೆಯಾಗಿ, ಆದರ್ಶಪ್ರಾಯವಾಗಿ, ಅತ್ಯುತ್ತಮ ನಿದರ್ಶನವಾಗಿ ನಿಂತಿರುವುದು ನಮ್ಮ ಸೌಭಾಗ್ಯ.

ಒಟ್ಟಿನಲ್ಲಿ ನೃತ್ಯ ಸಂಶೋಧನೆಗೆ ಸಂಬಂಧಿಸಿದಂತೆ ಅಧ್ಯಯನ, ಪತ್ರಿಕೆ, ನಿಯತಕಾಲಿಕೆ, ವಿಚಾರಸಂಕಿರಣ, ಕಾರ್ಯಾಗಾರ, ಗ್ರಂಥಾಲಯ, ಒಕ್ಕೂಟವೆಂಬ ಹತ್ತು ಹಲವು ಹೊಣೆ ಹೊತ್ತು ಮುನ್ನಡೆಯುತ್ತಿರುವ ನೂಪುರ ಭ್ರಮರಿಯ ಹಿಂದೆ ಕೀಲಾರು ಪ್ರತಿಷ್ಠಾನದ ಕಾರ್ಯಗಳ ಪ್ರಭಾವ, ಸಹಕಾರ ಗಾಢವಾಗಿಯೇ ಇದೆ. ಕೀಲಾರು ಪ್ರತಿಷ್ಠಾನದಷ್ಟು ದೊಡ್ಡ ಮಟ್ಟಿಗಲ್ಲದಿದ್ದರೂ ಇಂತಹ ಕೈಂಕರ್ಯಗಳ ಪರಂಪರೆಯನ್ನು ಅಗತ್ಯದ ನೆಲೆಗಳಿರುವಲ್ಲೆಲ್ಲಾ ಮುಂದುವರೆಸುವಂತೆ ನನ್ನಂಥ ವ್ಯಕ್ತಿತ್ವಗಳ ಮೇಲೆ ಪ್ರಭಾವ, ಪರಿಣಾಮಗಳನ್ನು ಬೀರುವುದಿದೆಯಲ್ಲ; ಇದು ನಿಜಕ್ಕೂ ಇಂದಿನ ಸಾಂಸ್ಕೃತಿಕ ಪಲ್ಲಟದ ಸಂಧಿಕಾಲಕ್ಕೆ ಅತ್ಯಗತ್ಯ. ಹೀಗೆ.., ಬಂಧುತ್ವ-ಸ್ನೇಹಾಚಾರ-ಶೈಕ್ಷಣಿಕ ನೆರವನ್ನು ಒಂದೆಡೆಯಿಟ್ಟು ನೋಡಿದರೂ ಅದರಾಚೆಗೂ ಯೋಚನೆಗಳನ್ನು, ಯೋಜನೆಗಳನ್ನು ಪ್ರಭಾವಿಸುವ ಕೀಲಾರು ಪ್ರತಿಷ್ಠಾನದ ಕೊಡುಗೆ ಅಪಾರವೇ ಸರಿ.

ಕಲೆ, ಸಮಾಜ, ಸಂಸ್ಕೃತಿ, ಸಮುದಾಯದ ಅಭಿವೃದ್ಧಿಗೆ ದುಡಿಯುತ್ತಾ ಬಹುಮುಖೀ ದೃಷ್ಟಿಕೋನ ಮತ್ತು ಆಯಾಮವನ್ನು ಹೊತ್ತ್ತು ಸಂದರ್ಭಾನುಸಾರವಾಗಿ, ಸಮಯೋಚಿತವಾಗಿ ಕಾರ್ಯಗಳನ್ನು ಮಾಡುವ ಪ್ರತಿಷ್ಠಾನಗಳು ನಿಜಕ್ಕೂ ಹೋಲಿಕೆಗೆ ಮೀರಿದ ವರದಾನ. ಒಂದರ್ಥದಲ್ಲಿ ಕೀಲಾರು ಪ್ರತಿಷ್ಠಾನವು ಸಂಪಾಜೆಯೆಂಬ ಪುಟ್ಟ ಊರಿನೊಳಗಿದ್ದರೂ ಅದು ಮಾಡುವ ಕೆಲಸವನ್ನು ಗಮನಿಸಿದರೆ; ಸುತ್ತಮುತ್ತಲ ವ್ಯಾಪ್ತಿಯ ಸಾಂಸ್ಕೃತಿಕ, ಸಾಮುದಾಯಿಕ ಸಹಕಾರ ನೀಡುವ ಸಹಬಾಳ್ವೆಯ ಸರ್ಕಾರವೆಂದರೆ ಅದು ತಪ್ಪಲ್ಲ. ಕಾರಣ-ವ್ಯಕ್ತಿಯೊಬ್ಬನನ್ನು ಇಂದಿನ ಶೈಕ್ಷಣಿಕ ನಿಯಮಗಳಿಗೆ ತಕ್ಕಂತೆ ವಿದ್ಯಾರ್ಥಿವೇತನ- ಸಮ್ಮಾನದ ಮೂಲಕ ವಿದ್ಯೆಗೆ ಪೋಷಕವಾಗಿ ನಿಲ್ಲುವ ಗುರಿಯುಳ್ಳ ಕಾರ್ಯಕ್ರಮಗಳು ಸಮಾಜದ ಒಂದಿಲ್ಲೊಂದು ಮೂಲೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾಣಸಿಗುತ್ತವೆ. ಅಂತೆಯೇ ಯಕ್ಷಗಾನ ಪ್ರದರ್ಶನಗಳನ್ನು ನಡೆಸಿಕೊಂಡು ಪ್ರಶಸ್ತಿ-ಪುರಸ್ಕಾರಗಳನ್ನು ಕೊಡುವ, ವೈದಿಕವಿದ್ವಾಂಸಸಮ್ಮಾನ ನೀಡುವ ಸಂಸ್ಥೆಗಳು ಅಲ್ಲಲ್ಲಿ ಹುಟ್ಟಿಕೊಂಡಿವೆ. ಅಶಕ್ತರಿಗೆ, ಆಶ್ರಿತರಿಗೆ, ಅನಾರೋಗ್ಯಪೀಡಿತರಿಗೆ ಸಹಾಯ ವಿಸ್ತರಿಸುವ ಯೋಜನೆಗಳೂ ಇವೆ. ಆದರೆ ಇವೆಲ್ಲವನ್ನೂ ಒಂದೇ ಸೂರಿನಡಿಯಲ್ಲಿ ಯಾವುದೇ ಲಾಭೋದ್ದೇಶ-ಆಗ್ರಹಗಳಿಲ್ಲದೆ, ಜಾತಿ-ಬೇಧ-ಮರ್ಜಿಗಳಿಲ್ಲದೆ, ಸರ್ಕಾರದ ಅನುದಾನಗಳ ಬಾಗಿಲು ಬಡಿಯದೆ ನಿರ್ವಂಚನೆಯಿಂದ ನೀಡುವ ಕೀಲಾರು ಪ್ರತಿಷ್ಠಾನದಂತಹ ಸಂಸ್ಥೆಗಳು ನಿಜಕ್ಕೂ ಅಪರೂಪ. ಜೊತೆಗೆ ಸಮಾಜದ ಮನಸ್ಸುಗಳನ್ನು ಇರುವ ಪ್ರಾದೇಶಿಕ ಮಿತಿಯೊಳಗೇ ವಿದ್ಯಾವಂತರನಾಗಿ, ಸಂಸ್ಕೃತಿಶೀಲರನ್ನಾಗಿ ಮಾಡುವ ದಿಸೆಯಲ್ಲಿ ಹೊಣೆ ಹೊತ್ತು ; ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ, ವೈಚಾರಿಕವಾಗಿ, ಸಾಮುದಾಯಿಕವಾಗಿ ಚಿಂತನೆಗಳನ್ನು ರೂಪಿಸುವ, ಬಲಪಡಿಸುವ ಮತ್ತು ತನ್ನ ಪರಂಪರೆಯನ್ನು ಉಳಿದೆಡೆಗೂ ಪಸರಿಸುವ ಪ್ರಬುದ್ಧತೆಯ ಹಂತಕ್ಕೂ ಕೊಡುಗೆ ನೀಡುವ ಸಂಸ್ಥೆಗಳು ಬಹಳ ವಿರಳ. ಈ ಹಿನ್ನೆಲೆಯಲ್ಲಿ ದೀಪದಿಂದ ದೀಪ ಹಚ್ಚುವುದಕ್ಕೆ ಪ್ರೇರಕವಾಗಿ, ಪೋಷಕವಾಗಿ ನಿಂತು ಬೆಳಕು ಮೂಡಿಸುವ ಕೀಲಾರು ಪ್ರತಿಷ್ಠಾನಕ್ಕೆ ಕೀಲಾರು ಪ್ರತಿಷ್ಠಾನವೇ ಸರಿಸಾಟಿಯೆಂದರೆ ನಿಜಕ್ಕೂ ಅತಿಶಯವಲ್ಲ. ಇದೀಗ ರಜಸಂಭ್ಹ್ರಮದ ಹೊಸಿಲಲ್ಲಿ ಅದ್ಭುತ ಯಕ್ಷಕಾರ್ಯಕ್ರಮಗಳನ್ನು ಇತ್ತೀಚೆಗಷ್ಟೇ ನಡೆಸಿಕೊಟ್ಟ ಕೀಲಾರು ಪ್ರತಿಷ್ಠಾನದ ಸಮಸ್ತರಿಗೂ ಹಾರ್ದಿಕ ಅಭಿನಂದನೆ ಮತ್ತು ಅಭಿವಂದನೆಗಳನ್ನು ಸಲ್ಲಿಸುತ್ತೇವೆ.

 

 

Leave a Reply

*

code