Author: ಮನೋರಮಾ. ಬಿ.ಎನ್
ಸಂಶೋಧನಾ ಸತ್ರದಲ್ಲಿ ಕಲೆ
ಪ್ರಸ್ತುತ ಕಾಲಕ್ಕೆ ಉನ್ನತಶಿಕ್ಷಣವೆಂಬುದನ್ನೇ ಅನುಮಾನದಿಂದ ನೋಡುವಂತಹ ಪರಿಸ್ಥಿತಿಯಿದೆ. ಅದರಲ್ಲೂ ಪಿಎಎಚ್‌ಡಿ ಅಧ್ಯಯನವೆಂದರೆ ಕಾಟಾಚಾರದ ಅಧ್ಯಯನ, ಪದವಿ-ಪ್ರತಿಷ್ಠೆ- ಉದ್ಯೋಗಗಳ ಆಂಶಿಕ ಒತ್ತಾಸೆಗಾಗಿ ‘ಅರ್ಹತೆ’ ಗಿಟ್ಟಿಸಿಕೊಳ್ಳುವ ಅನಿವಾರ್ಯ ತಲೆನೋವು, ದುಡ್ಡು ಮಾಡಿಕೊಳ್ಳುವ ದಂಧೆ ಎಂಬ ಅಭಿಪ್ರಾಯಕ್ಕೆ ಪುಷ್ಠಿ ಕೊಡುವ ಘಟನೆಗಳು ಸರಾಸರಿಯಾಗಿ ಕಾಣಸಿಗುತ್ತವೆ. ಇನ್ನು ಕೆಲವಂತೂ ಗೈಡ್‌ಗಳ ಪೀಡನೆ ಮತ್ತು ವಿದ್ಯಾರ್ಥಿಗಳ ವೇದನೆಗೆ ‘ಒಮ್ಮೆ ಮುಗಿದರೆ ಸಾಕು’ ಎಂಬ ಸಂಕಟಜನ್ಯವಾಗುವುದೂ ಇದೆ.
ಬಿಜಿಎಲ್ ಸ್ವಾಮಿಯವರು ‘ತಮಿಳು ತಲೆಗಳ ನಡುವೆ’ ಕೃತಿಯಲ್ಲಿ ವ್ಯಂಗ್ಯವಾಡಿದ ಪಿಎಚ್‌ಡಿಗಳ ಅತಾರ್ಕಿಕತೆಗಳನ್ನು ಮೀರಿ ಬೆಳೆಯುತ್ತದೆ ಇಂದಿನ ಅದೆಷ್ಟೋ ಪಿಎಚ್‌ಡಿಗಳ ಅಸಂಬದ್ಧ, ಅಪಸವ್ಯಗಳ ಪಟ್ಟಿ. ಏನೇನೋ ವಿತಂಡವಾದ, ಕೆಲಸಕ್ಕೆ ಬಾರದ ವಿಶ್ಲೇಷಣೆ, ಯಾವುದೇ ಕೊಡುಗೆ ನೀಡದ ವಿಷಯ ಆಯ್ಕೆಯಲ್ಲಿ ಕೊಳೆಯುತ್ತಿರುವ ಇಂದಿನ ಭಾರತೀಯ ಮಾನವಿಕ ಸಂಶೋಧನಾ ಕ್ಷೇತ್ರದಿಂದಾಗಿ ಪ್ರಾಚೀನ ವಾಗ್ಮಿ-ವಿದ್ವಾಂಸರನ್ನೂ ಅನುಮಾನದ ಕಣ್ಣುಗಳಿಂದ ನೋಡುವಂತಾಗಿದೆ. ಅದರಲ್ಲೂ ಸಂಶೋಧನೆಯನ್ನೇ ಗುತ್ತಿಗೆಗೆ ತೆಗೆದುಕೊಂಡವರಂತೆ ಮಾತಾಡುವ ಇಂದಿನ ಬುದ್ಧಿಜೀವಿಗಳ ವಾದಗಳು ಪಾಶ್ಚಾತ್ಯರ ಶೋಧಗಳ ಮುಂದೆ ನಮ್ಮನ್ನು ಮತ್ತಷ್ಟು ಕಿರಿದುಗೊಳಿಸುತ್ತಿದೆ. ಫಲವಾಗಿ ಒಂದಷ್ಟು ಪುಸ್ತಕಗಳಿಂದ ವಿಷಯ ಹೆಕ್ಕಿ ತೆಗೆದು ಒಟ್ಟು ಮಾಡಿ ಮಂಡಿಸಿದರೆ ಅದೇ ಪಿಎಚ್‌ಡಿ ಸಂಶೋಧನೆ ಎನ್ನುವ ಜೋಕು ಹಳೆಯದಾಗಲೇ ಇಲ್ಲ. ಆದರೆ ಇದರ ಪರಿಣಾಮ ತಟ್ಟುವುದು ಸ್ವತಃ ಸ್ವಂತ ಆಸಕ್ತಿಯಿಂದ ಸಂಶೋಧನಾ ಕ್ಷೇತ್ರಕ್ಕಿಳಿದ ಹಲವು ಯುವ ಉತ್ಸಾಹಿಗಳಿಗೆ. ಆಗೆಲ್ಲ ಅದು ಗಂಟಲಲ್ಲಿಳಿಯದ ಬಿಸಿತುಪ್ಪವೇ ಹೌದು!
ಗುರುಕುಲಪರಂಪರೆಯ ಆವರಣದಲ್ಲಿ ಬೆಳೆದ ಭಾರತೀಯ ಕಲೆಗಳಿಗೆ ಶೋಧ ಎಂಬುದು ನಿತ್ಯಬದುಕು. ಅಭಿಜಾತ ಸಂಗೀತದ ಮನೋಧರ್ಮಗಳಲ್ಲಿ, ಶಿಲ್ಪ-ಚಿತ್ರದ ಕೈಕುಸುರಿಗಳಲ್ಲಿ, ನಾಟ್ಯದ ಹೆಜ್ಜೆಗಾರಿಕೆ-ಭಾವಸ್ಪಂದದಲ್ಲಿ ಹೊಸತನ್ನು ಕೊಡುತ್ತಲೇ ಹೋಗಬೇಕಾದ ಕಲಾವಿದನ ಜರೂರತ್ತು ಒಂದರ್ಥದಲ್ಲಿ ಸಂಶೋಧನೆಯೇ ಸರಿ, ಮಾತ್ರವಲ್ಲ ಅದು ಆತನ ಅಂತರಂಗ ಪರಿಪಕ್ವತೆಯ, ಆತ್ಮೋದ್ಧಾರದ ಹಾದಿಯ, ಪ್ರತಿಭೆಯ ಶೋಧನೆಯೂ ಹೌದು. ಹೀಗಿರುವಾಗ ಹೊಸ ತಲೆಮಾರಿನ ಅಕಾಡೆಮಿಕ್ ಕ್ಷೇತ್ರದ ಪ್ರಮುಖ ಅರ್ಹತೆಯಾದ ಪಿಎಚ್‌ಡಿ/ಎಂಫಿಲ್/ಡಿಲಿಟ್ ಸಂಶೋಧನೆಯೆಂಬ ಪ್ರಮಾಣಪತ್ರಕ್ಕೊದಗುವ ಅಧ್ಯಯನವು ಎಷ್ಟರಮಟ್ಟಿಗೆ ಅವಶ್ಯಕ ಎಂಬ ಪ್ರಶ್ನೆ ತಲೆಯೆತ್ತಿ ವರುಷಗಳೇ ಸಂದವು. ಅದೇನೆ ಇರಲಿ, ಪ್ರಸ್ತುತ ಕಾಲಕ್ಕೆ ಕಲೆಯೂ ಸಂಶೋಧನಾವಿಷಯವಾಗಿರುವುದು ಆಸಕ್ತ ಕಲಾಮನಸ್ಸುಗಳ ಬೆಳೆವಳಿಗೆಗೆ, ಕಲಾಪ್ರಗತಿಯ ಓಟಕ್ಕೆ ಇತ್ತ ಗುಣಾತ್ಮಕ ಕಾಣ್ಕೆಯೇ ಸರಿ.
ಆದರೆ ನಮ್ಮ ದೇಶದ ಇತ್ತೀಚಿನ ಕಲಾಸಂಶೋಧನೆಗಳು ಜಾಗತಿಕವಾದ ಒಂದು ನೆಲೆಯನ್ನು ಕಂಡುಕೊಳ್ಳುವಲ್ಲಿ ಸೋಲುತ್ತಿವೆ. ಕಾರಣ ನಮ್ಮ ಪರಂಪರೆಗೆ ಒಗ್ಗುವಂತಹ ಸೂಕ್ತ ನಡಾವಳಿಗಳ ಕೊರತೆ. ಹಾಗಾಗಿ ಭಾರತೀಯ ಕಲಾಸಂಶೋಧನೆಗಳ ತತ್‌ಕ್ಷಣದ ಮತ್ತು ಸಾರ್ವಕಾಲಿಕ ಅಗತ್ಯವೆಂದರೆ- ಸೈದ್ಧಾಂತಿಕಪ್ರಮೇಯಗಳಿಗಿಂತಲೂ ಮುಖ್ಯವಾಗಿ ಕಲೆಯ ಪ್ರಾಯೋಗಿಕ ಗುಣಮಟ್ಟಕ್ಕೆ ಕೊಡುಗೆ ನೀಡಬೇಕಾಗಿರುವ ಅಧ್ಯಯನಗಳು ಮತ್ತು ಭಾರತೀಯ ಆತ್ಮಕ್ಕನುಗುಣವಾದ ಸಂಶೋಧನಾ ಸಂಸ್ಪರ್ಶ.
ಅದರಲ್ಲೂ ಪಿಎಚ್‌ಡಿಯಂತಹ ಪದವಿಗಳನ್ನು ಪಡೆದು ಪುಸ್ತಕ ಪ್ರಕಟಿಸಿದಲ್ಲಿಗೆ ಸಂಶೋಧನೆಯ ಜವಾಬ್ದಾರಿಗಳು ಮುಗಿಯುವುದಿಲ್ಲ ಅಥವಾ ಅಂತವರು ನಿಜವಾದ ಸಂಶೋಧಕರೂ ಆಗುವುದಿಲ್ಲವಷ್ಟೇ. ಸಂಶೋಧನೆಯೆಂಬುದು ನಿರಂತರ ಶ್ರದ್ಧೆಯ ಅನಂತ ಸಾಧ್ಯತೆಗಳ ಹರಿವು. ಅದರಲ್ಲಿ ಈಜಲು ಒಂದಷ್ಟು ಸ್ವಯಂಬದ್ಧತೆಗಳೇ ಬೇಕು. ಪದವಿಗಳಿಂದಾಚೆಯೂ ಸಂಶೋಧನೆಯನ್ನು ಶಿಸ್ತಾಗಿ ಬೆಳೆಸಿಕೊಳ್ಳುವ ಅಧ್ಯಯನಶೀಲತೆ ಬೆಳೆದುಬರಬೇಕು. ಪ್ರತಿಷ್ಠೆ-ಗೌರವಗಳ ಮೂಟೆಯನ್ನು ಪಕ್ಕಕ್ಕಿಟ್ಟು, ಪೂರ್ವಾಗ್ರಹಗಳನ್ನು ಬದಿಗಿಟ್ಟು ಶಿಸ್ತು-ಸಂವಿಧಾನಗಳನ್ನು ಜೊತೆಗಿರಿಸಿ ಸಹೃದಯತೆಯಿಂದ ತೆರೆದುಕೊಳ್ಳಬೇಕು. ಇಲ್ಲಿ ಸಂಶೋಧಕನದ್ದು ಏನಿದ್ದರೂ ಚಿರಂತನ ಸತ್ಯವನ್ನು ಹುಡುಕುವಲ್ಲಿ, ಗೋಚರವಾದ ಅರಿವನ್ನು ಭವಿಷ್ಯಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಒಂದು ಮೆಟ್ಟಿಲಿನ ಪಾತ್ರ. ವೈಯಕ್ತಿಕ ಸ್ಪರ್ಧೆಗಿಂತಲೂ ಅದು ಹೆಚ್ಚಾಗಿ ಬೇಡುವುದು ಸಮಷ್ಠಿಯ ಕ್ಷೇಮವನ್ನು. ಹಾಗಾಗಿ ಮತ್ತೊಂದು ಮಗದೊಂದು ಮಜಲುಗಳನ್ನು ಕಟ್ಟಿ, ಹಸನುಗೊಳಿಸುವ ವೈಶಾಲ್ಯತೆಯಿದ್ದರೆ ಮಾತ್ರ ಆತ್ಮತೃಪ್ತಿಯ ಗಮ್ಯವೂ, ಶೋಧದ ನಿಜವಾದ ಸಾಫಲ್ಯವೂ ಒದಗುತ್ತದೆ.
—–
ಕಲೆಯ ಸಾಮಾಜಿಕ ಜಾಗೃತಿಯ ಸಂಶೋಧನಾ ಅವಶ್ಯಕತೆ
ಇತ್ತೀಚಿಗಿನ ದಶಕಗಳಲ್ಲಿ ಕಲೆಯೊಂದರ ಪ್ರಯೋಜನದ ಮಾತು ಮತ್ತು ಸಾಮಾಜಿಕ ವ್ಯವಸ್ಥೆಗೆ, ಆಗುಹೋಗುಗಳಿಗೆ ಕಲಾವಿದನು ಎಷ್ಟು ಸ್ಪಂದಿಸುತ್ತಾನೆ ಎನ್ನುವ ವಿಚಾರವೇ ಕೊಡುಗೆಯನ್ನು ನಿರ್ಧರಿಸುವ ಅಳತೆಗೋಲು. ಸಾರ್ವಜನಿಕ, ಶೈಕ್ಷಣಿಕ ವಲಯದಲ್ಲಂತೂ ಕಲೆಯ ಪ್ರಯೋಜನ ಮೌಲ್ಯವೇ ಮೊದಲಸಾಲಿನ ಆಸಕ್ತಿ. ಅದಕ್ಕೆ ಮುಖ್ಯಹೇತು ಸಾಮಾಜಿಕ ಜಾಗೃತಿಯ ಪ್ರಯೋಗ ಮತ್ತು ಸಿದ್ಧಾಂತಗಳು ಮೇಲ್ನೋಟಕ್ಕೆ ಹೆಚ್ಚಾಗಿ ಕಂಡುಬರುವುದು ವಾಸ್ತವವಾದ, ಸಮಾಜವಾದದ ಆವರಣದಲ್ಲಿ ಬೆಳೆದುಬಂದ ಪಾಶ್ಚಾತ್ಯ ರಾಷ್ಟ್ರಗಳಲ್ಲೇ ! ಹೀಗಿರುವಾಗ ಭಿನ್ನ ಬಗೆಯ ಆವರಣ, ಕಲಾಸಂಸ್ಕಾರಗಳ ಫಲವಾಗಿ ಪಾಶ್ಚಾತ್ಯ ಮತ್ತು ಭಾರತೀಯ ಅಭಿಜಾತ ನೃತ್ಯಶೈಲಿಗಳಿಗೆ ಒಂದೇ ಬಗೆಯ ಪ್ರದರ್ಶನ ಆಯಾಮ, ಸಿದ್ಧಾಂತ ಅನ್ವಯವಾಗುವುದಿಲ್ಲ. ಒಂದು ವೇಳೆ ಯಥಾವತ್ತು ಅಳವಡಿಸಿಕೊಂಡರೂ ನಮ್ಮ ಶಾಸ್ತ್ರೀಯನೃತ್ಯಪರಂಪರೆಗಳ ಪರಿಸರ-ಅಭಿವ್ಯಕ್ತಿ ಎಂದಿನಂತೆ ಸಹಜವಾಗಿ ಇರಲು ಸಾಧ್ಯವಾಗಲಾರದು. ಹೀಗಿರುವಾಗ ಕಲಾವಿದರು ಏಕಾಏಕಿ ಪ್ರಯೋಗಕ್ಕೇ ಮನಮಾಡಿ; ಕಲೆಗೆ ಸಾಮಾಜಿಕ ಪ್ರಯೋಜನವೇ ಗುರಿಯಾದರೆ ಆಗ ಅಂತಹ ಕಲೆಯ ನೆಲೆಬೆಲೆಯೇನು? ಕರ್ತವ್ಯಗಳೇನು, ಜವಾಬ್ದಾರಿಗಳೇನು? ಅಂತಹ ಪ್ರಯೋಜನ ಹೊಂದುವಲ್ಲಿ ಕಲೆಗೆ ಬದಲಾವಣೆಗಳ ಅಗತ್ಯವಿದೆಯೇ? ಯಾವ ಕಲಾಂಶಗಳಲ್ಲಿ ಸಂವಹನದ ಮೌಲ್ಯ ಹೆಚ್ಚು ಪರಿಣಾಮಕಾರಿ? ಹೆಚ್ಚಿನ ಶಕ್ತಿಸಂಚಯ ಒತ್ತಟ್ಟಿಗಿರಲಿ, ಕನಿಷ್ಟಪಕ್ಷ ಕಲಾಭಿವ್ಯಕ್ತಿ ಮಸುಕಾಗದೇ ಇರಲು ಸಾಧ್ಯವಾದೀತೇ? ಕಲೆಯ ಅಸ್ಮಿತೆ ಹೇಗೆ? ಏನು? ಎತ್ತ? ಅದರಲ್ಲೂ ಲೋಕಧರ್ಮೀ ನಡವಳಿಕೆಗಳಿಂದ ಸಾಕಷ್ಟು ಹೊರಗುಳಿದು ತನ್ನದೇ ಆದ ನಾಟ್ಯಧರ್ಮೀ ಮಾರ್ಗವನ್ನು ಹೊಂದಿ ಶಾಸ್ತ್ರೀಯವೆನಿಸಿಕೊಂಡ ಭರತನಾಟ್ಯ, ಕೂಚಿಪುಡಿ, ಮೋಹಿನಿಯಾಟ್ಟಂ, ಕಥಕ್, ಒಡಿಸ್ಸಿ, ಮಣಿಪುರಿ, ಸತ್ರಿಯಾ ನೃತ್ಯಗಳು ಎಷ್ಟರಮಟ್ಟಿಗೆ ಸಮಕಾಲೀನ ಅಗತ್ಯ ಪ್ರತಿಪಾದಿಸುವ ದೃಷ್ಟಿಕೋನಗಳಿಗೆ ಸ್ಪಂದಿಸಬಹುದು?- ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೇ ಹೋದರೆ ಅದು ಕಲೆಗೆ ಮಾಡುವ ದೊಡ್ಡ ಅಪಚಾರವೇ ಆಗುತ್ತದೆ. ಅದೂ ಆಧಾರಸಹಿತವಾಗಿ, ಯಶಸ್ಸು, ವೈಫಲ್ಯ ಮತ್ತು ಸಾಧ್ಯತೆಗಳ ವಸ್ತುನಿಷ್ಠ ಚರ್ಚೆಗಳು ನಡೆಯದೇ, ಪ್ರೇಕ್ಷಕರ ಮತ್ತು ಕಲಾವಿದರ ಬೇಕು-ಬೇಡಗಳು, ಅಭಿಪ್ರಾಯ/ಆಲೋಚನೆಗಳು ಸಮಗ್ರವಾಗಿ ತೆರೆದುಕೊಳ್ಳದೇ ಹೋದರೆ ಕಲಾಪ್ರಯತ್ನಗಳು ಕ್ರಮೇಣ ಕೊಳೆತು ನಾರಲಾರಂಭಿಸುತ್ತವೆ. – ಆ ನಿಟ್ಟಿನಲ್ಲಿ ಮಂಥನಕ್ಕೆ ಆಪ್ತವಾದದ್ದೇ ಈ ಸಂಶೋಧನೆ.
ಭರತನಾಟ್ಯವೇ ಏಕೆ ಆಪ್ತ?
ಎಲ್ಲ ನೃತ್ಯಗಳನ್ನು ಏಕಕಾಲಕ್ಕೆ ಇಂತಹ ಸಂಶೋಧನೆಯ ಆಯಾಮದೊಳಗೆ ಸೇರಿಸುವುದು ಅಶಕ್ಯ ಮಾತ್ರವಲ್ಲ ದುಸ್ಸಾಹಸವೂ ಕೂಡಾ ! ಹಾಗಾಗಿಯೇ ನೃತ್ಯಗಳ ಪೈಕಿ ಪ್ರಭಾವಶಾಲಿಯೂ, ಜನಪ್ರಿಯವೂ ಆಗಿರುವ ಭರತನಾಟ್ಯವನ್ನು ಅಧ್ಯಯನವಿಷಯವಾಗಿ ಕಂಡುಕೊಳ್ಳುವುದು ಯುಕ್ತವೆಂದು ತೋರಿದ್ದು ! ಕೇಂದ್ರಸರ್ಕಾರವು ಶಾಸ್ತ್ರೀಯನೃತ್ಯಕಲೆಯೆಂದು ಮನ್ನಣೆ ನೀಡಿದ ನೃತ್ಯಗಳ ಸಾಲಿನಲ್ಲಿ ಭರತನಾಟ್ಯಕ್ಕೆ ಪ್ರಥಮಸ್ಥಾನ. ಅದರಲ್ಲೂ ‘ಭರತನಾಟ್ಯ’ವು ಬ್ರಿಟೀಷರು ರೂಪಿಸಿದ ನೃತ್ಯನಿಷೇಧ ಕಾಯ್ದೆಗೆ ವಿರುದ್ಧವಾಗಿ ಮೂಡಿದ ಪ್ರಪ್ರಥಮ ನೃತ್ಯಕ್ರಾಂತಿ. ಫಲವಾಗಿ ಭರತನಾಟ್ಯದ ಉಪಕ್ರಮದಲ್ಲಿ ಅನೇಕ ಭಾರತೀಯ ನೃತ್ಯಗಳು ಜಾಗೃತಿಯ ಚೋದನೆ ಪಡೆದಿವೆ. ಹೀಗೆ ಪುನರುದ್ಧಾರದ ಶಕೆಗೆ ಮೊದಲ ಮೆಟ್ಟಿಲಾದ ಭರತನಾಟ್ಯವನ್ನೇ ಸಾಮಾಜಿಕ ಸಂವಹನದ ಸಾಧ್ಯತೆಗಳ ಅಧ್ಯಯನಕೆ ಆರಿಸಲು ಅನುವು ಸಿಕ್ಕಿತು. ಇದು ಭವಿಷ್ಯದಲ್ಲಿ ಕಲಾಸಂಬಂಧಿತವಾದ ಸಾಮಾಜಿಕ ಪ್ರಶ್ನೆಗಳಿಗೆ ಹೆಚ್ಚಿನ ಉತ್ತರವನ್ನು ಕೊಡಬಹುದೆಂಬುದು ಆಶಯ ಮತ್ತು ನನ್ನ ಅರಿವಿನ ಕ್ಷೇತ್ರವೂ ಆಗಿರುವ ಅನುಕೂಲ ಅಧ್ಯಯನಕ್ಕೆ ಪೂರಕ ವಾತಾವರಣ ಕೊಟ್ಟಿತ್ತು.
ಹಾಗೆಂದು ಭರತನಾಟ್ಯ ಸಮಕಾಲೀನ ಕಲೆಗಳಂತೆ ಮುಕ್ತವಾದ ಹರಹಿನದ್ದಲ್ಲ. ಅದರದ್ದೇ ಆದ ಇತಿಮಿತಿ, ಚೌಕಟ್ಟುಗಳಿವೆ. ನಾಟಕ, ರಂಗಭೂಮಿಗಳಂತೆ ವಿಶಾಲ, ಮುಕ್ತ ಅಭಿವ್ಯಕ್ತಿಯ ಆಯಾಮವನ್ನು ಸಹಜವಾಗಿ ಒಪ್ಪುವುದಿಲ್ಲ. ಅದರಲ್ಲೂ ಬೀದಿನಾಟಕ, ಯಕ್ಷಗಾನ ಕಲೆಗಳಿಗೆ ಸುಲಭವಾಗಿ ಒದಗುವ ಸಾಮಾಜಿಕ ಜಾಗೃತಿಗೆ ದುಡಿಯುವ ಕಾರ್ಯ ಭರತನಾಟ್ಯದಂತಹ ಸಂಕೀರ್ಣಕಲೆಗಳಿಗೆ ಕೊಂಚ ದುಸ್ತರವೇ ಸರಿ. ಹೀಗಿರುವಾಗ ಸಮಾಜಮುಖಿಯಾಗುವ ನಿಟ್ಟಿನಲ್ಲಿ ಅಭಿಜಾತ ಕಲಾಸಾಧ್ಯತೆಯೊಂದರ ಈ ಸಂಶೋಧನೆ ಅಷ್ಟು ಸುಲಭವಾಯಿತೇ?
ಸಾಧ್ಯತೆಗಿಂತಲೂ ಸವಾಲು ಸಾಕಷ್ಟು…
ನನ್ನ ಬದುಕಿನ ಪಿಎಚ್‌ಡಿ ಸಂಶೋಧನೆಗೆ ಆಸಕ್ತಿ ಮೊದಲು ತಳವೂರಿದ್ದು- ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಸಮೂಹಸಂವಹನ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ಕಾಲಕ್ಕೆ ಪದವಿಯ ಆಂಶಿಕ ಪೂರ್ಣತೆಗೆ ಬೇಕಾಗಿದ್ದ ಪ್ರೌಢ ಪ್ರಬಂಧದ (ಡಸರ್ಟೇಶನ್) ರಚನೆಯ ಹೊತ್ತಿನಲ್ಲೇ ! ಓದಿದ್ದು ಪತ್ರಿಕೋದ್ಯಮ ಮತು ಸಮೂಹಸಂವಹನದ ಆಶ್ರಯದಲ್ಲೇ ಆದರೂ ಸಹಜವಾಗಿ ಬಲಿತಿದ್ದ ಕಲಾಭಿಮಾನದಿಂದ ಸಂಶೋಧನೆ ಮಾಡುವುದಿದ್ದರೆ ಅದನ್ನೂ ಕಲಾಸಹಿತವಾಗಿ ಮಾಡಬೇಕೆಂಬ ಹಟ. ಬಹುಷಃ ಸಮೂಹಸಂವಹನವೆಂಬ ಆ ಕ್ಷೇತ್ರದ ವ್ಯಾಪ್ತಿ ಅಷ್ಟು ದೊಡ್ಡದಿರುವ ಕಾರಣಕ್ಕೋ ಏನೋ ಕಲಾವಿಭಾಗದ ಸಾಧ್ಯತೆಗಳನ್ನು ಜೊತೆಯಾಗಿಸಿಕೊಳ್ಳುವಲ್ಲಿ ಯಾವುದೇ ಸಮಸ್ಯೆಗಳೂ ಕಾಣಲಿಲ್ಲ.
ಭರತನಾಟ್ಯದ ಹಸ್ತಗಳ ಸಂವಹನ ಸಾಧ್ಯತೆಗಳು- ಎಂಬ ಶೀರ್ಷಿಕೆಯಲ್ಲಿ ಶುರುವಾದ ಶೋಧದ ರುಚಿ ೩ ವರುಷದ ತರುವಾಯ ಮತ್ತಷ್ಟು ಅಧ್ಯಯನದ ಬೆಳಕಿನಲ್ಲಿ ‘ಮುದ್ರಾರ್ಣವ’ ಎಂಬ ಅಭಿದಾನದಿಂದ ಹಸ್ತ ಮುದ್ರೆಗಳ ಬಹುಮುಖೀ ಆಯಾಮಗಳನ್ನು, ಶೈಲಿ-ಪರಂಪರೆಗಳನ್ನು ವಿವೇಚಿಸುವ ಬೃಹತ್‌ಕೃತಿಯಾಗಿ ಹೊರಬಂದಿತ್ತು. ಆ ಪ್ರೌಢಪ್ರಬಂಧದ ಯಶಸ್ಸಿಗೆ ಮಾರ್ಗದರ್ಶಕರಾಗಿದ್ದ ಪ್ರೊ.ಡಿ.ಎಸ್.ಪೂರ್ಣಾನಂದರೇ ನನ್ನ ಪಿಎಚ್‌ಡಿ ಅಧ್ಯಯನಕ್ಕೂ ಮಾರ್ಗದರ್ಶಕರಾಗಿ ಒದಗಿದ್ದು ನನ್ನ ಸಂಶೋಧನಾಭವಿಷ್ಯದ ಸುಕೃತವೇ ಸರಿ.
ಎಂ.ಎ ತರುವಾಯ ವರುಷದ ಅಂತರದಲ್ಲೇ ಪಿಎಚ್‌ಡಿ ಅಧ್ಯಯನಕ್ಕೆಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೋಂದಾಯಿಸಿಕೊಂಡೆ. ಆದರೆ ವಿಶ್ವವಿದ್ಯಾನಿಲಯದ ನೇರಆಡಳಿತಕ್ಕೆ ಒಳಪಡುವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದೂ ವಿಶ್ವವಿದ್ಯಾನಿಲಯದಿಂದ ನಾನ್ ಅಬ್ಜೆಕ್ಷನ್ ಸರ್ಟಿಫಿಕೇಟ್ ದೊರಕದೇ ಹೋದದ್ದು ನಿಜಕ್ಕೂ ವ್ಯವಸ್ಥೆಯ ವ್ಯಂಗ್ಯಕ್ಕೆ ಹಿಡಿದ ಕನ್ನಡಿ ! ಹಾಗಾಗಿ ನಂತರದ ವರುಷಕ್ಕೆ ಪಿಎಚ್‌ಡಿಯ ಸಲುವಾಗಿಯೇ ಬೇರೆ ಖಾಸಗಿ ಕಾಲೇಜಿಗೆ ಉಪನ್ಯಾಸಕಿಯಾಗಿ ಹೋಗಲೇಬೇಕಾದ ಅನಿವಾರ್ಯತೆ. ಆದರೆ ವಿಪರ್ಯಾಸ, ಆ ವರುಷ ನೋಂದಾವಣೆಗೆ ಅನುಕೂಲವಾದರೂ ನನ್ನ ಮಾರ್ಗದರ್ಶಕರೇ ಬೇರೆ ವಿಶ್ವವಿದ್ಯಾನಿಲಯಕ್ಕೆ ವರ್ಗಾವಣೆ ಪಡೆದುಕೊಂಡ ಕಾರಣ, ನುಂಗಲಾರದ ತುತ್ತು ! ಮತ್ತೊಬ್ಬ ಗೈಡ್‌ನ ಮಾರ್ಗದರ್ಶನದಲ್ಲಿ ಅಧ್ಯಯನವನ್ನು ನೋಂದಾಯಿಸುವ ಅನುಕೂಲಗಳಿತ್ತಾದರೂ, ಆವರೆಗೆ ದೊರಕಿದ್ದ ಕ್ರಮಬದ್ಧ ಮಾರ್ಗದರ್ಶನ, ಮುಕ್ತ ವಾತಾವರಣ, ಶಿಸ್ತಿನ ಅಧ್ಯಯನ ಹಿನ್ನೆಲೆಯಿಂದಾಗಿ ಸಂಶೋಧನೆ ಮಾಡುವುದಿದ್ದರೆ ಅದು ಡಾ.ಡಿ.ಎಸ್.ಪೂರ್ಣಾನಂದ ಅವರಡಿಯಲ್ಲೇ ಎಂಬ ನಿರ್ಧಾರ ಬಲಗೊಂಡಿತ್ತು. ಗುರಿಯಿದ್ದರಷ್ಟೇ ಸಾಕೇ, ಅದನ್ನು ಸಾಕಾರಗೊಳಿಸಲು ಪ್ರಬುದ್ಧ ಗುರುವೂ ಬೇಕಲ್ಲಾ !? ಹಾಗಾಗಿ ಮಾರ್ಗದರ್ಶಕರು ತೆರಳಿದ್ದ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸಾಗಿತ್ತು ನನ್ನ ಪಯಣ.
‘ಭರತನಾಟ್ಯದ ಸಾಮಾಜಿಕ ಸಂವಹನ ಸಾಧ್ಯತೆಗಳು’ – ವಿಷಯವನ್ನು ಪಿಎಚ್‌ಡಿ ಅಧ್ಯಯನಕ್ಕೆ ಆರಿಸಿಕೊಳ್ಳಲು ಸೂಚನೆ ಕೊಟ್ಟವರೂ ನನ್ನ ಗೈಡ್. ಕಲಿತ ಪದವಿಯನ್ನಿಟ್ಟುಕೊಂಡೇ ಕಲಾಭಿಮುಖವಾಗಿ ಅಧ್ಯಯನದ ಯೋಗ ದೊರೆಯಿತಲ್ಲ ಎಂಬುದು ಮೊದಲ ತೃಪ್ತಿ. ಹಾಗಾಗಿ ಕಣ್ಣುಮುಚ್ಚಿ ಒಪ್ಪಿಕೊಂಡದ್ದೊಂದೇ ಗೊತ್ತು. ಆದರೆ ಅದರ ಗಹನತೆ ಅರಿವಾದದ್ದು ಪಿಎಚ್‌ಡಿ ನೋಂದಣಿಯಾದ ಕೆಲವು ತಿಂಗಳುಗಳ ಬಳಿಕವೇ! ಅದಾಗಲೇ ದೊರೆತಿದ್ದ ಸಂಶೋಧನಾವಿಧಾನಗಳ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಅಧ್ಯಯನಕ್ಕೊಂದು ಚೌಕಟ್ಟೂ, ಉದ್ದೇಶಗಳೇನೋ ಸಿದ್ಧವಾದವು; ಆದರೆ ಎಲ್ಲೇ ಎಷ್ಟೇ ಹುಡುಕಿದರೂ ಅಧ್ಯಯನ ಶುರು ಹಚ್ಚಿಕೊಳ್ಳಲು ಬೇಕಾದ ಪ್ರಾಥಮಿಕ ಮಾಹಿತಿಗಳೂ ಭರತನಾಟ್ಯ ಕ್ಷೇತ್ರದಲ್ಲ್ಲಾಗಲೀ, ಸಂವಹನ ಕ್ಷೇತ್ರದಲ್ಲಾಗಲೀ ದೊರಕುತ್ತಿಲ್ಲ! ಕಾರಣ, ಆವರೆಗೆ ಸಾಮಾಜಿಕ ಸಂವಹನವನ್ನಾಧರಿಸಿದ ಯಾವುದೇ ಕಲೆಯ ಅಧ್ಯಯನಗಳೂ ಭಾರತದಲ್ಲೆಲ್ಲೂ ನಡೆದಿಲ್ಲ ! ಅಷ್ಟೇಕೆ, ನನ್ನ ಅಧ್ಯಯನವಿಷಯಕ್ಕೆ ನೇರ ಸಂಬಂಧವಿರುವ ಬೇರಾವುದೇ ಸಾಹಿತ್ಯ ಪರಾಮರ್ಶೆಯಾಗಲೀ, ಪುಸ್ತಕಗಳಾಗಲೀ ಇಲ್ಲವೇ ಇಲ್ಲ ! ಯಾವುದೇ ಕಲಾವಿದರಲ್ಲೂ ವಿಚಾರಿಸಿದರೂ ಸರಿಯಾದ ಉತ್ತರ ದೊರಕುತ್ತಿರಲಿಲ್ಲ. ಒಟ್ಟಿನಲ್ಲಿ ಎಡಬಿಡಂಗಿ ಸ್ಥಿತಿಯೇ ಸರಿ.
ಹುಡುಕಾಟ ಸತತ ೨ ವರುಷದ ತನಕವೂ ಸಾಗಿತು. ಆ ಹೊತ್ತಿಗೆ ನನಗೊದಗಿದ ಏಕೈಕ ಬೆಳಕಿಂಡಿ ಶತಾವಧಾನಿಗಳೂ, ಬಹುಶ್ರುತ ವಿದ್ವಾಂಸರಾದ ಡಾ.ಆರ್.ಗಣೇಶ್. ಎಂ.ಎ ಪ್ರೌಢಪ್ರಬಂಧದ ವೇಳೆಗೆ ಅವರ ಸಂದರ್ಶನದಿಂದಾಗಿ ಅಧ್ಯಯನದ ಮಹತ್ತ್ವ ಘಟ್ಟ ಕಂಡ ನನಗೆ ಅವರೊಂದಿಗಿನ ಸ್ನೇಹ, ವಿಶ್ವಾಸಗಳು ಬಲವತ್ತರವಾದದ್ದು ‘ಮುದ್ರಾರ್ಣವ’ದ ಸಾಫಲ್ಯದಲ್ಲಿ. ‘ಅವರೊಬ್ಬರೇ ದಾರಿ’ ಎಂದು ಯಾವ ಕ್ಷಣದಲ್ಲಿ ತೋಚಿತೋ ನೇರ ಅವರ ಮನೆ ಬಾಗಿಲ ಬುಡದಲ್ಲಿದ್ದೆ.
ಆದರೆ ಮತ್ತಷ್ಟು ನಾನು ಬಿಳಿಚಿಕೊಂಡದ್ದು- ಗಣೇಶರು, ‘ಈ ವಿಷಯ ಭಾರತೀಯ ಅಭಿಜಾತ ಕಲೆಗಳ ಪರಂಪರೆಯ ಸಹಜ ಹಾದಿಯಲ ’ದ್ದವೆಂದು ಹೇಳಿದ ಮೇಲೆಯೇ ! ಆದರೆ ಆ ದುಗುಡ ಕಳೆದದ್ದು ಆಗಷ್ಟೇ ಡಾಕ್ಟರೇಟ್ ಪಡೆದಿದ್ದ ಡಾ.ಶೋಭಾ ಶಶಿಕುಮಾರ್ ಅವರ ಪಿಎಚ್‌ಡಿಯ ಸಾಕಲ್ಯದೃಷ್ಟಿಯನ್ನು ಕೊಂಡಾಡಿ ಥೀಸಿಸ್ – ಏಸ್ತೆಟಿಕ್ಸ್ ಆಫ್ ಆಂಗಿಕ ಅಂಡ್ ಸಾತ್ತ್ವಿಕ ಅಭಿನಯ ಇನ್ ಭರತನಾಟ್ಯ- ವನ್ನು ಕೈಗಿತ್ತಾಗ. ದಾರಿ ಕಂಡೀತೆಂಬ ಆಶಯದಲ್ಲಿ ಓದಲು ಹೊರಟವಳಿಗೆ ನಿರಾಶೆ ಕವಿಯಲೇ ಇಲ್ಲ. ಕಾರಣ, ಅವರ ಅಧ್ಯಯನ ಮಾರ್ಗ ನನ್ನಿಂದ ಭಿನ್ನವಾದರೂ ನಮ್ಮಿಬ್ಬರ ಗುರಿ ಒಂದೇ ಎಂಬುದು ! ಭಾರತೀಯ ಅಲಂಕಾರಶಾಸ್ತ್ರದ ವಿಶಾಲ ಆವರಣಕ್ಕೆ ನಾನು ಅರಿವಿಲ್ಲದೆಯೇ ನತಮಸ್ತಕಳಾಗಿದ್ದೆ. ನಂತರದ ದಿನಗಳಲ್ಲಿ ಶತಾವಧಾನಿ ಗಣೇಶರ ಚಿಂತನಶೀಲ ಉಪನ್ಯಾಸಗಳ ನೆರವಿನಲ್ಲಿ ಅಧ್ಯಯನದ ದಿಕ್ಕು ದಿಸೆಗಳ ನೋಟ ಸ್ಪಷ್ಟವಾಗುತ್ತಲೇ ಸಾಗಿತು.
ಧ್ವನಿ-ರಸ ಸಿದ್ಧಾಂತಗಳು, ಭಾರತದ ಯಾವುದೇ ವಿಶ್ವವಿದ್ಯಾನಿಲಯಗಳ ಸಮೂಹಸಂವಹನ ತರಗತಿಗಳಲ್ಲೂ ಅಷ್ಟಾಗಿ ಇಣುಕದ ಸಾಧಾರಣೀಕರಣವೆಂಬ ಮಾತೃಸ್ವರೂಪದ ಸಂವಹನಸಿದ್ಧಾಂತದ ವ್ಯಾಪ್ತಿಯೊಂದೇ ಸಾಕಾಗಿತ್ತು ನನ್ನ ಇಡಿಯ ಅಧ್ಯಯನದ ಪ್ರಮೇಯಗಳನ್ನು ಸಿದ್ಧಪಡಿಸಲು. ಪಾಶ್ಚಾತ್ಯ ಪ್ರಮೇಯದಂತೆ ಭಾಸವಾದರೂ ಸಾಮಾಜಿಕ ಸಂವಹನದ ಬೇರುಗಳು ನಾಟ್ಯಶಾಸ್ತ್ರದಲ್ಲೇ ಇವೆ ಎಂಬುದನ್ನು ಅರ್ಥೈಸಿಕೊಂಡಲ್ಲಿಗೆ ಅದೇನೋ ನಿರಾಳ. ಮೇಲ್ನೋಟಕ್ಕೆ ಕುರಿತಾಗಿ ಕಾಣದಿದ್ದರೂ ಅಲಂಕಾರಶಾಸ್ತ್ರದ ಗರ್ಭ ಬಗೆದಂತೆಲ್ಲಾ ಉತ್ತರಗಳು ತನ್ನಿಂತಾನೇ ನಿಲ್ಲಲಾರಂಭಿಸಿದವು. ನಮ್ಮೆಲ್ಲಾ ಅಹಮಿಕೆಯ ಪರಿಶೋಧಗಳಿಂದಾಚೆಗೆ ನೋಡಿದರೂ ಸಾಕು, ನಮ್ಮ ಪೂರ್ವಜರು ನಾವು ಇನ್ನೇನು ಮಾಡಬೇಕಾದ ಅವಶ್ಯಕತೆಯೇ ಇಲ್ಲದಂತೆ ಅದೆಷ್ಟು ಕಾಣ್ಕೆಗಳನ್ನು ಕೊಟ್ಟಿದ್ದಾರಲ್ಲಾ; ಅದನ್ನು ಅರ್ಥ ಮಾಡಿಕೊಂಡು ಜೀವನ ಸಾರ್ಥಕ ಮಾಡಿಕೊಂಡರೆ ಅದಷ್ಟೇ ಸಾಕು ಎಂದು ಅರಿವಾದಾಗಲೆಲ್ಲಾ ಧನ್ಯಮನಸ್ವಿನಿಯಾಗುತ್ತಿದ್ದೆ. ಆದಾಗ್ಯೂ ಕೈಗೊಂಡ ಸಂಶೋಧನೆಗೆ ನ್ಯಾಯ ಒದಗಿಸಬೇಕಲ್ಲವೇ? – ಸಿದ್ಧಾಂತಗಳನ್ನು ತೌಲನಿಕವಾಗಿ ವಿಮರ್ಶಿಸಿ, ಅವುಗಳನ್ನು ಪುನರ್ ವ್ಯಾಖ್ಯಾನಿಸಿ ವಿವೇಚಿಸಬೇಕಾದ ಗುರುತರ ಜವಾಬ್ದಾರಿ ಹೆಗಲನ್ನೇರಿತು.
ಕ್ರಮೇಣ ಮನಃಶಾಸ್ತ್ರ, ಆಂತ್ರೋಪಾಲಜಿ, ಬೇರೆ ಬೇರೆ ದೇಶದ ನೃತ್ಯ ಚಿಂತನೆ-ಪ್ರಯೋಗಗಳು, ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯಿಕ ಮೂಲಾಂಶಗಳು, ವಿಜ್ಞಾನ ಅನ್ವೇಷಣೆಗಳು.., ಹೀಗೆ ಸಂವಹನವೆಂಬ ಅಗಾಧ ಮೂಸೆಯೊಳಗೆ ತಮ್ಮನ್ನು ತಾವು ತೋರಿಕೊಳ್ಳುತ್ತಾ ಸಾಗಿದವು. ಸಂವಹನ ಮತ್ತು ಕಲಾಕ್ಷೇತ್ರಕ್ಕೇ ಇದು ಮೊದಲ ಅಧ್ಯಯನವಾಗಿದ್ದಕ್ಕೋ ಏನೋ, ಬರಿಯ ಭರತನಾಟ್ಯವಷ್ಟೇ ಅಲ; ಯಕ್ಷಗಾನ, ಓಡಿಸ್ಸಿ, ಕೂಚಿಪುಡಿ, ಕಥಕಳಿ, ಮಣಿಪುರಿ, ಛಾವ್ ಇತ್ಯಾದಿಯಾಗಿ ಭಾರತೀಯ ಅಭಿಜಾತ ಪ್ರದರ್ಶಕ ಕಲಾಪರಂಪರೆಯಲ್ಲಿ ಅದುವರೆಗೂ ತೋರಿಕೊಂಡ ಸಾಮಾಜಿಕ ಜಾಗೃತಿಯ ಪ್ರಯೋಗಗಳೂ ದಾಖಲಾದವು. ಭರತನಾಟ್ಯ ಬೆಳೆದುಬಂದ ಸದ್ಯದ ೧೦೦ ವರುಷಗಳಲ್ಲಿ ಸಾಮಾಜಿಕ ಜಾಗೃತಿಗೆಂದು ದುಡಿದ ಪ್ರಯೋಗಗಳನ್ನು ಶೋಧಿಸಲಾಯಿತು. ಜೊತೆಗೆ ಈ ಹೊತ್ತಿನ ಹಲವು ನೃತ್ಯಪ್ರಯೋಗಗಳ ಅವಲೋಕನ, ಡಾ. ಪದ್ಮಾ ಸುಬ್ರಹ್ಮಣ್ಯಂ, ಡಾ. ಮಾಯಾರಾವ್, ಮೃಣಾಲಿನಿ ಸಾರಾಭಾಯ್, ಡಾ. ಮಲ್ಲಿಕಾ ಸಾರಾಭಾಯ್‌ರಂತಹ ನೃತ್ಯಕ್ಷೇತ್ರದ ಅದೆಷ್ಟೋ ಅತಿರಥ ಮಹಾರಥರ ಆಳಸಂದರ್ಶನವೂ ಜರುಗುತ್ತಾ ಸಾಗಿತು. ಇವುಗಳೊಂದಿಗೆ ಫೋಕಸ್ ಗ್ರೂಪ್ ಎಂಬ ತಜ್ಞಪರಿಣತರ ಸಮೂಹಚರ್ಚೆ, ೧೦೦ ಪ್ರೇಕ್ಷಕರ ವೈಯಕ್ತಿಕ ಸಂದರ್ಶನ, ತಜ್ಞರು-ಪ್ರೇಕ್ಷಕರ ನಡುವಿನಲ್ಲಿ ಸಂವಾದ, ಸಾಮಾನ್ಯ ಅವಲೋಕನ, ಪ್ರಯೋಗಾತ್ಮಕ ವಿಧಾನದಲ್ಲಿ ಭಿನ್ನ ಬಗೆಯ ಮೂರು ನೃತ್ಯಪ್ರದರ್ಶನಗಳ ವಿನ್ಯಾಸ, ಸುಮಾರು ೩೦೦ ಪ್ರೇಕ್ಷಕರ ಸಮೀಕ್ಷೆ ಎಂಬೆಲ್ಲಾ ಒಟ್ಟು ಏಳು ಸಂಶೋಧನಾ ವಿಧಾನಗಳು ಅಧ್ಯಯನದ ಅನಿವಾರ್ಯ ಅವಶ್ಯಕತೆಗಳಾಗಿ ಪ್ರವೇಶವಾಗಿ ಸಾರ್ಥಕ್ಯ ಬೇಡತೊಡಗಿದವು !
ಅದರಲ್ಲೂ ಪ್ರಯೋಗಾತ್ಮಕ ವಿಧಾನಕ್ಕೆ ಭರತನಾಟ್ಯ ಪರಂಪರೆಯಲ್ಲೇ ಹೆಚ್ಚಿನ ಸಾಂಪ್ರ್ರದಾಯಿಕ ನೆಲೆಯನ್ನು ಹೊಂದಿರುವ ವರ್ಣವನ್ನು ಈ ಪ್ರಯೋಗಕ್ಕೆ ಬಳಸಿಕೊಂಡಿದ್ದು ಬಹುಷಃ ನೃತ್ಯದ ಇತಿಹಾಸದಲ್ಲೇ ಪ್ರಪ್ರಥಮ. ‘ಬಾಲಾಲಾಪ’ ವೆಂಬ ಈ ವರ್ಣದ ವಿನ್ಯಾಸ ಮಕ್ಕಳ ಶಿಕ್ಷಣ, ಶಿಕ್ಷೆ ಮತ್ತು ಬಾಲ್ಯದ ಒತ್ತಡದ ವಸ್ತುವನ್ನು ಹೊಂದಿತ್ತು. ಏಕವ್ಯಕ್ತಿಯಾಗಿ ಪ್ರದರ್ಶಿತಗೊಳ್ಳುವ ವರ್ಣವನ್ನು ಸಮೂಹನೃತ್ಯವಾಗಿ ಒಗ್ಗಿಸಲಾಗಿತ್ತು. ಹೀಗೆ, ವರ್ಣದಂತಹ ಸಂಕೀರ್ಣ ನೃತ್ಯಬಂಧದ ಮೂಲಕವೂ ಸಾಮಾಜಿಕ ಜಾಗೃತಿ ಹಬ್ಬಿಸಬಹುದೆಂದು ಹಿಮ್ಮೇಳ ಸಹಿತವಾಗಿ ಸಾಧಿಸಿ ತೋರಿದವರು ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ಬಳಗ.
ನಂತರದಲ್ಲಿ ಸ್ತ್ರೀ ನಿಜಜೀವನದಲ್ಲಿ ಅಂದುಕೊಳ್ಳುವ ಶಕ್ತಿ ಮತ್ತು ದೌರ್ಬಲ್ಯಗಳ ಸಂಕೇತವಾಗಿ ‘ಸ್ತ್ರೀಶಕ್ತಿ’ ಎಂಬ ಏಕವ್ಯಕ್ತಿ ನೃತ್ಯರೂಪಕವನ್ನು ಪ್ರದರ್ಶಿಸಿದವರು ಸ್ವತಃ ಡಾ. ಶೋಭಾ ಶಶಿಕುಮಾರ್. ಸ್ತ್ರೀ ಹಾಗೂ ಸ್ತ್ರೀತ್ವದ ಅಂತರಗಳನ್ನು ಗ್ರಹಿಸಿ ಅದನ್ನು ಸ್ತ್ರೀ ಸಬಲೀಕರಣದ ದಾರಿಯನ್ನಾಗಿಸುವುದರೊಂದಿಗೆ, ಆವರೆಗೂ ಇದ್ದ ಕಪೋಲಕಲ್ಪಿತ ನೃತ್ಯವಿನ್ಯಾಸದ ಭ್ರಮೆಗಳಿಗೆ ಅಂತ್ಯ ಬರೆದಂತೆ ನೃತ್ಯವನ್ನು ಸಂಯೋಜಿಸಿದ್ದರು. ಸಮೂಹಪ್ರದರ್ಶನಕ್ಕೊಪ್ಪುವ ನೃತ್ಯರೂಪಕದ ಅಭಿವ್ಯಕ್ತಿಯನ್ನೂ ಭಾಣಿಕಾ ಎಂಬ ನಾಟ್ಯಶಾಸ್ತ್ರಪ್ರೋಕ್ತವಾದ ಏಕವ್ಯಕ್ತಿ ಪ್ರಯೋಗವನ್ನಾಗಿ ಮಾಡಿಕೊಂಡ ಜಾಣ್ಮೆ, ಭರತನ ಮಾರ್ಗಪರಂಪರೆಗೆನಿಷ್ಠವಾದ ಕರಣಾದಿ ಆಂಗಿಕ ವಿನ್ಯಾಸವು ಕಲಾವಿದೆ ಡಾ.ಶೋಭಾ ಅವರಲ್ಲರಳಿದ್ದವು. ಇದರ ತರುವಾಯ ವಿವಿಧ ವಾದ್ಯಸಂಗೀತವನ್ನು ಆಯ್ದುಕೊಂಡು ಪ್ರದರ್ಶಿಸಿದ ಗೀತನೃತ್ಯನಾಟಕ ‘ಪಾವನಗಂಗಾ ಪತಿತ ತರಂಗ ’- ನೀರಿನ ಮಾಲಿನ್ಯ, ಪಾವಿತ್ರ್ಯದ ಕುರಿತಾಗಿತ್ತು. ನೀರಿನ ಸಾರ್ವತ್ರಿಕ ಸಮಸ್ಯೆಗೆ ಪ್ರಾತಿನಿಧಿಕವಾಗಿ ಗಂಗಾಪ್ರವಾಹದ ದುರಂತವಾಸ್ತವವನ್ನು ಚಿತ್ರಿಸಿದ ಈ ಪ್ರಯೋಗ ದೀಪಕ್ ಕುಮಾರ್ ಅವರ ಬಳಗದಲ್ಲಿ ಮೂಡಿಬಂದಿತ್ತು. ಜೊತೆಗೆ ಭಾಷಣ, ಸನ್ಮಾನ ಆಡಂಬರಗಳ ಛಾಯೆಯೇ ಇಣುಕದಂತೆ ಪ್ರೇಕ್ಷಕರ ಆಯ್ಕೆ, ಒತ್ತಾಸೆಗಳೇನು ಎಂಬುದನ್ನೂ ಅರಿಯುವ ಪ್ರಯತ್ನವೂ ನಡೆದು ಪ್ರೇಕ್ಷಕಪ್ರಭುವಿಗೆ ಮಾನ್ಯತೆಗಳು ಸಂದವು.
ಪಿಎಚ್‌ಡಿ ನೋಂದಣಿ ಮಾಡಿಕೊಂದಾಗಿನಿಂದ ಡಾಕ್ಟರೇಟ್ ಪಡೆವ ಪಯಣ ೬ ವರುಷದ್ದಾದರೂ ಅದರೊಂದಿಗಿನ ಮಾನಸಿಕ ಪಯಣಕ್ಕೆ ೯ ವರುಷಗಳೇ ತುಂಬಿವೆ. ಈ ಹಂತದೊಳಗೆ ‘ಮಹಾಮುನಿ ಭರತ’ನ ಕೃತಿ, ಭರತನಾಟ್ಯದ ಚಾರಿತ್ರಿಕ ದಾಖಲೆಯೊಂದಿಗೆ ಎಲ್ಲಾ ವಯೋಮಾನದ ನೃತ್ಯ ಅಧ್ಯಯನಕಾರರಿಗೆ ಉಪಯುಕ್ತವಾಗುವ ನೃತ್ಯಬಂಧಗಳ ಕುರಿತ ‘ನೃತ್ಯ ಮಾರ್ಗಮುಕುರ’ ಕೃತಿ, ಪಿಎಚ್‌ಡಿ ವಿಷಯದ ಹೊರತಾಗಿ ನೃತ್ಯವನ್ನು ಸಹವಿಷಯವಾಗಿ ಆರಿಸಿದ ಕರ್ನಾಟಕದ ನಟುವಾಂಗ ಪರಂಪರೆ, ಕನ್ನಡ ಕಾದಂಬರಿ ಸಾಹಿತ್ಯ, ಸಿನಿಮಾ ಅಭಿವ್ಯಕ್ತಿ, ಕರಾವಳಿ ನೃತ್ಯಶಿಲ್ಪ ಇತಿಹಾಸ, ಆಲಯ ನೃತ್ಯಪರಂಪರೆ, ಕೌತ್ವ ಮತ್ತು ನೃತ್ಯಬಲಿಗಳು, ಕೊರವಂಜಿ ನೃತ್ಯಸಾಹಿತ್ಯ, ಯಕ್ಷಗಾನ ಆಂಗಿಕವಿಶ್ಲೇಷಣೆ, ಪುರಾಣದ ನೃತ್ಯಕಲ್ಪನೆ, ನಂದಿಕೇಶ್ವರನ ಇತಿಹಾಸ,..ಹೀಗೆ ಹಲವು ಬೇರೆ ಸಂಶೋಧನಾ ಪ್ರಾಜೆಕ್ಟ್-ಫೆಲೋಶಿಪ್‌ಗಳು, ಅನೇಕಾನೇಕ ಲೇಖನಗಳು ನನ್ನ ಅಧ್ಯಯನದ ಬುತ್ತಿಯೊಳಗೆ ಸೇರಿಕೊಂಡಿವೆ. ಇದರ ಮಧ್ಯೆ ಸನ್ಮ್ಮಿತ್ರರ ಸಹಕಾರದೊಂದಿಗೆ ಸಂಘಟಿಸಿದ ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಥಮ ನೃತ್ಯಸಂಶೋಧನಾ ವಿಚಾರಸಂಕಿರಣ-ಕಮ್ಮಟಗಳು, ನೀಡುತ್ತಿರುವ ಉಪನ್ಯಾಸಗಳು, ಪರಂಪರೆಯ ನೃತ್ಯಬಂಧಗಳ ರಸೌಚಿತ್ಯ ವಿನ್ಯಾಸ/ನಾಟ್ಯಶಾಸ್ತ್ರ ಮತ್ತು ಲಕ್ಷಣಗ್ರಂಥಗಳು/ಸಾಂಸ್ಕೃತಿಕ ಪತ್ರಿಕೋದ್ಯಮ/ಪುರಾಣಪ್ರಪಂಚದ ತರಗತಿಗಳು ಸಂಶೋಧನಾಸತ್ರದ ವೈಶಾಲ್ಯತೆಯನ್ನು ದಿನೇದಿನೇ ದರ್ಶನ ಮಾಡಿಕೊಡುತ್ತಿವೆ. ‘ನೂಪುರ ಭ್ರಮರಿ’ ಎಂಬ ನನ್ನ ಸಂಪಾದಕತ್ವದ ನಿಯತಕಾಲಿಕೆ ಸಂಶೋಧನಾ ನಿಯತಕಾಲಿಕೆಯಾಗಿ ಬೆಳೆದು ಅದಕ್ಕೆಂದೇ ಇರುವ ನಿಶ್ಚಿತ ಮಾನದಂಡಗಳನ್ನು ಪಡೆದುಕೊಂಡು ಉತ್ಸಾಹಿ ಸಂಶೋಧಕರ ಲೇಖನಗಳಿಗೆ ಅವಕಾಶವಾಗಿ ನಾಡಿನೆಲ್ಲೆಡೆ ಮನೆಮಾತಾಗಿದೆ. ನೃತ್ಯಸಂಶೋಧನಾಸಕ್ತರಿಗೆ ಯಾವುದೇ ಬಗೆಯ ಕಲಾಸಂಶೋಧನೆಯ ಮಜಲುಗಳನ್ನು ಹೇಳಿಕೊಡುವ ಮಟ್ಟಿಗಿನ ಮಾರ್ಗದರ್ಶಕತ್ವವನ್ನು, ವಿವಿಧಬಗೆಯ ನೃತ್ಯವಿನ್ಯಾಸಗಳಿಗೆ ಬೇಕಾದ ಪೂರಕ ಕವಿತ್ವರಚನೆಯ ಕೌಶಲ್ಯಗಳನ್ನು, ರಸದೃಷ್ಟಿಯ ಪ್ರಯೋಗಗಳ ಸಂಘಟನೆಯನ್ನೂ ಬೆಳೆಸಿದೆ. ಈ ಹಂತಕ್ಕೆ ಪೂರಕವೆಂಬಂತೆ ನೃತ್ಯಸಂಶೋಧನ ವಿಭಾಗವೂ ನೂಪುರ ಭ್ರಮರಿ ಪ್ರತಿಷ್ಠಾನದಡಿಯಲ್ಲಿ ಆರಂಭಗೊಂಡು ವರುಷವೆರಡರಿಂದ ಆಸಕ್ತರಿಗೆ ಬೋಧನೆ-ನಿರ್ದೇಶನ-ಸಂಯೋಜನಾಸಾಮಥ್ಯವನ್ನು ತಿಳಿಯಪಡಿಸುತ್ತಿದೆ. ವಿಶೇಷವೆಂಬಂತೆ ಭವಿಷ್ಯದಲ್ಲಿ ಸಂಶೋಧನಾವಿಷಯಗಳ ಪುನರಾವರ್ತನೆಯಾಗುವುದನ್ನು ತಪ್ಪಿಸಲು ಮತ್ತು ಆಸಕ್ತರಿಗೆ ಪೂರ್ಣ ಮಾಹಿತಿ ನೀಡಲು ಇಡಿಯ ಕರ್ನಾಟಕದಲ್ಲಿ ಈವರೆಗೆ ಆದ ಪ್ರದರ್ಶಕ ಕಲಾಸಂಶೋಧನೆಗಳನ್ನು ಪ್ರಪ್ರಥಮವಾಗಿ ಗುರುತಿಸಿ ದಾಖಲೀಕರಣವನ್ನೂ ಬದ್ಧತೆಯೆಂಬಂತೆ ಮಾಡಲಾಗಿದೆ. ಅರಿವಿನ ಬುತ್ತಿಯನ್ನು ಹಂಚುವ ಕಾಯಕ ವೆಬ್‌ಸೈಟ್, ಫೇಸ್‌ಬುಕ್, ವಾಟ್ಸಾಪ್, ಸ್ಕೈಪ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕವೂ ಅವ್ಯಾಹತವಾಗಿ ಜರುಗುತ್ತಿದೆ.
ಒಟ್ಟಿನಲ್ಲಿ ಕಲಾಪ್ರಪಂಚದಲ್ಲಿ ವಿರಳವೇ ಆಗಿರುವ ಸಂಶೋಧನೆಯೆಂಬ ಸಂಗತಿಯಲ್ಲಿ ಬಹುದೊಡ್ಡ ಮಟ್ಟಿಗೆ ಪಾಲುದಾರಳಾಗಬೇಕೆಂಬ ಅದಮ್ಯ ಹುಡುಕಾಟದ ಪ್ರೀತಿಗೆ ಮೂಲ ಕಾರಣ ಪಿಎಚ್‌ಡಿ ಎಂಬ ಅಧ್ಯಯನ. ಕೇವಲ ದಾಖಲೆ/ಆಕರದ ದೃಷ್ಟಿಯಿಂದಷ್ಟೇ ಅಲ್ಲದೆ, ಮಹತ್ತರವೆನಿಸುವ ಪ್ರಮೇಯಗಳ ಜನನಿಯಾಗಿ, ಪ್ರಯೋಗ-ಆವಿಷ್ಕಾರರೂಪವಾಗಿ ತೋರಿಕೊಂಡಿದ್ದಕ್ಕೆ ಧನ್ಯಳಾಗಿದ್ದೇನೆ. ಭವಿಷ್ಯದ ಅಧ್ಯಯನಗಳಿಗೆ ಆಕರಗ್ರಂಥವಾಗುವಷ್ಟರ ಮಟ್ಟಿಗೆ ವಿಷಯಗಳು ಮೇಳೈಸಿದ್ದಕ್ಕೆ ಸಾಕ್ಷಿ ಅಧ್ಯಯನದ ಕರಡುಪ್ರತಿಯೇ ೧೦೦೦ ಪುಟದವರೆಗೆ ಹಬ್ಬಿದ್ದದ್ದು !
ಕಲಾವಿದೆಯಾಗಿರುವ ಜೊತೆಜೊತೆಗೇ ಸಂಶೋಧಕಿಯಾಗಿರುವುದು ನಮ್ಮ ಆತ್ಮತೃಪ್ತಿಯನ್ನು ದಿನೇದಿನೇ ಹೆಚ್ಚಿಸುವ ಗುಣಾಂಶ. ಹಾಗಾಗಿ ಭರತನಾಟ್ಯದ ಸಾಮಾಜಿಕ ಸಂವಹನ ಸಾಧ್ಯತೆಗಳೆಂಬ ಪಿಎಚ್‌ಡಿ ಅಧ್ಯಯನವು ನನ್ನ ಪಾಲಿಗೆ ಕೇವಲ ಸಂಶೋಧನೆಯ ಮೊದಲ ಮೆಟ್ಟಿಲೆಂಬುದಕ್ಕಿಂತಲೂ ಹೆಚ್ಚಾಗಿ ಜೀವನಶೋಧನೆಯ ಮಹತ್ತರ ಅನುಭವವಾಗಿ, ಅನುಭಾವವಾಗಿ, ಆದರ್ಶಗಳ ರೆಕ್ಕೆಯಾಗಿ ತನ್ನ ಸಾಧ್ಯತೆಗಳನ್ನು ಹರಡಿಸಿದೆ. ಹಾಗಾಗಿ ಡಾಕ್ಟರೇಟ್ ಪಡೆದ ಖುಷಿಗಿಂತ ಹೆಚ್ಚಾಗಿ ಇರುವುದು ಒಂದು ಸಂತೃಪ್ತಿಯ ಭಾವ. ಇಂತಹುದೇ ಚೈತನ್ಯವೂ ಎಲ್ಲ ಅಧ್ಯಯನಾರ್ಥಿಗಳಿಗೆ ಒದಗಿದರೆ ಕಲಾಪ್ರಸಕ್ತಿ, ಸಂಶೋಧನಾಜಗತ್ತು ಖಂಡಿತ ಆರೋಗ್ಯಪೂರ್ಣವಾದೀತು.